ನಾನೂ ‘ಲಂಕೇಶ್ ಪತ್ರಿಕೆ’ ಓದಿದೆ..

ಅನುಪಮಾ ಪ್ರಸಾದ್

ನಾನಾಗ ಹತ್ತನೇ ತರಗತಿಯಲ್ಲಿದ್ದಿರಬೇಕು. ಮನೆಯಿಂದ ಶಾಲೆಗೆ ಬರುವ ಕಾಲುದಾರಿಯ ಒಂದು ತಿರುವಿನಲ್ಲಿ ನನಗಿಂತ ಎರಡು ಮೂರು ವರ್ಷಕ್ಕೆ ಹಿರಿಯಳಾದ ಗೆಳತಿ ಜೊತೆಯಾಗುತ್ತಿದ್ದಳು. ಅವಳ ತಂದೆ ಆಧುನಿಕ ಚಿಂತನೆಯ ಹೆಸರಾಂತ ಕನ್ನಡದ ಬರಹಗಾರ. ನಾನೋ ತೀರಾ ಮಧ್ಯಮ ವರ್ಗದ ಸಂಪ್ರದಾಯಸ್ಥ ರೈತ ಕುಟುಂಬದವಳು. ಆಕೆ ಮಾತಾಡುತ್ತಿದ್ದರೆ ಬೇರೆಯೆ ಜಗತ್ತಿನ ಕಥೆ ಕೇಳುತ್ತಿದ್ದೇನೆಂಬ ವಿಸ್ಮಯದಿಂದ ಕಿವಿಯಾಗುತ್ತಿದ್ದೆ. ಅವಳ ಮಾತಿನಲ್ಲಿ ಹೆಚ್ಚಾಗಿ ನುಸುಳುತ್ತಿದ್ದುದು ಲಂಕೇಶ್ ಹಾಗೂ ಲಂಕೇಶ್ ಪತ್ರಿಕೆಯಲ್ಲಿ ಬರುತ್ತಿದ್ದ ಸಂಗತಿಗಳು.

ಒಂದು ದಿನವಂತು ಅವಳು ಆ ಕಾಲದ ರಾಜಕಾರಣದ ಸೂಪರ್ ಸ್ಟಾರ್ ರಾಮಕೃಷ್ಣ ಹೆಗಡೆಯವರ ಬಗ್ಗೆ ಲಂಕೇಶ್ ಪತ್ರಿಕೆಯಲ್ಲಿ ಬಂದ ಸಂಗತಿಗಳನ್ನು ರಂಗು ರಂಗಾಗಿ ಹೇಳುತ್ತಿದ್ದರೆ ನನಗೆ ಅದನ್ನು ಓದಿಯೇ ತೀರಬೇಕೆಂಬ ಆಸೆ ತಡೆಯಲಾಗಲಿಲ್ಲ. ಆದರೆ, ವ್ಯವಸ್ಥೆಯ ಚೌಕಟ್ಟಿಗೆ ಸದಾ ಅಂಜುವ ನಮ್ಮನೆಯಲ್ಲಂತು ಲಂಕೇಶ್ ಪತ್ರಿಕೆ ಹೆಸರೂ ನಮ್ಮಂತವರಿಗಲ್ಲ ಎಂಬ ವಾತಾವರಣವಿತ್ತು.

ಸಾಧಾರಣ ಮಧ್ಯಮ ವರ್ಗದ ರೈತನಾಗಿದ್ದ ಅಪ್ಪಯ್ಯನಿಗೆ ದಿನದ ದುಡಿಮೆಯ ಜೊತೆ ರಾಜಕೀಯದ ಆಸಕ್ತಿ ಬಹಳ. ತಪ್ಪದೆ ವಾರ್ತೆ ಕೇಳುತ್ತಿದ್ದ ಅಪ್ಪಯ್ಯ ರಾಮಕೃಷ್ಣ ಹೆಗಡೆಯ ವಿಚಾರ ಬಂದರಂತು ಇವತ್ತಿಗೂ ಆ ದಿನಗಳಿಗೆ ಹೋಗಿ ನೆನಪಿನ ಉಮೇದಿನಲ್ಲಿ ಮಾತಿಗೆ ತೊಡಗಿಕೊಳ್ಳುತ್ತಾರೆ. ಅದಕ್ಕೆ ಕಾರಣ ಅವರು ತನ್ನ ಹರೆಯದ ದಿನದಲ್ಲಿ ಶಿರಸಿಯಲ್ಲಿ ರಾಮಕೃಷ್ಣ ಹೆಗಡೆ ಓಟಿಗೆ ನಿಂತಾಗ ಹಳ್ಳಿ ಹಳ್ಳಿಗೆ ಪ್ರಚಾರಕ್ಕೆ ಹೋಗಿದ್ದರಂತೆ.

ಇಂದಿರಾ ಗಾಂಧಿಯೊಂದಿಗಿನ ಭಿನ್ನಾಭಿಪ್ರಾಯದಿಂದಾಗಿ ಆಗಿನ ರಾಷ್ಟ್ರೀಯ ಕಾಂಗ್ರೆಸ್ ಇಂಡಿಕೇಟ್ ಸಿಂಡಿಕೇಟ್ ಎಂದು ವಿಭಾಗವಾಗಿ ಕಡವೆ ಹೆಗ್ಡೆ ಯವರು ಇಂದಿರಾರ ವಿರುದ್ಧ ತನ್ನ ಹೆಗಲು ಶಾಲು ತೆಗೆದು ಪ್ರತಿಜ್ಞೆ ಮಾಡಿದಾಗ ಅಲ್ಲೇ ಇದ್ದ ಅನುಭವ ಅಪ್ಪಯ್ಯನದು. ಹಾಗೆಯೇ ಸಿಂಡಿಕೇಟ್ ಕಾಂಗ್ರೆಸ್ ವತಿಯಿಂದ ರಾಮಕೃಷ್ಣ ಹೆಗಡೆಯ ಪರವಾಗಿ ಶಿರಸಿಯ ಹಳ್ಳಿಗಳಲ್ಲಿ ಚುನಾವಣೆ ಪ್ರಚಾರ ಮಾಡಿದ ಅಪ್ಪಯ್ಯನ ಅನುಭವ. ಇದನ್ನೆಲ್ಲ ಮತ್ತೆ ಮತ್ತೆ ಕೆದಕಿ ಕೇಳುತ್ತಿದ್ದ ನನಗೆ ಸಹಜವಾಗಿಯೇ ರಾಜಕೀಯ ಸಂಗತಿಗಳಲ್ಲಿ ಆಸಕ್ತಿ ಹೆಚ್ಚು.

ಬಾನುಲಿಯಲ್ಲಿ ಹೆಗಡೆಯವರ ಭಾಷಣ ಪ್ರಸಾರವಾಗುತ್ತದೆಂದರೆ ಆ ಹೊತ್ತಿಗೆ ಎಲ್ಲ ಕೆಲಸ ಮುಗಿಸಿ ಅಥವಾ ಇದ್ದ ಕೆಲಸ ಮುಂದಕ್ಕೆ ಹಾಕಿ ಒಂದಕ್ಷರ ಬಿಡದೆ ಅಪ್ಪಯ್ಯ ಹೆಗಡೆ ಭಾಷಣ ಆಲಿಸುತ್ತಿದ್ದರು. ರಾಮಕೃಷ್ಣ ಹೆಗಡೆ ರಾಜಿನಾಮೆ ಕೊಡುತ್ತಾರೆಂದರೆ ಅದರ ಹಿಂದೆ ಮೌಲ್ಯಾಧಾರಿತ ರಾಜಕಾರಣದ ಪ್ರೇರಣೆ ಇದೆ ಎನ್ನುತ್ತ ಒಂದಾನೊಂದು ಕಾಲದ ನೆನಪುಗಳೊಂದಿಗೆ ಅಪ್ಪಯ್ಯ ಬೀಗುತ್ತಿದ್ದರು. ಇಂತಹ ಹೆಗಡೆ ಬಗ್ಗೆ ಟೆಲಿಫೋನ್ ಕದ್ದಾಲಿಕೆ ಆಪಾದನೆ ಬಂದಾಗ ಅಪ್ಪಯ್ಯ ರಾಜಕೀಯದತ್ತ ಆಸಕ್ತಿ ಕಳೆದುಕೊಳ್ಳಲಾರಂಭಿಸಿದರು.

ಅಧಿಕಾರದಲ್ಲಿ ಮೇಲೆ ಮೇಲೆ ಹೋದ ಹಾಗೆ ಯಾರು ಹೇಗೆ ಬದಲಾಗುತ್ತಾರೊ ಯಾರಿಗೆ ಗೊತ್ತು ಅನ್ನುತ್ತ ತಲೆಗೆ ಮುಂಡಾಸು ಬಿಗಿದು ನೇಗಿಲು ಕಟ್ಟಲು ಗದ್ದೆಯತ್ತ ಹೊರಡುತ್ತಿದ್ದರು. ಅಂತಹ ದಿನದಲ್ಲೇ ಲಂಕೇಶ್ ಪತ್ರಿಕೆ ವಿಚಾರ ಗೆಳತಿ ಹೇಳಿದ್ದು. ಹಾಗೊಂದು ಪತ್ರಿಕೆ ಇದೆ ಎಂದೇ ಗೊತ್ತಿಲ್ಲದಿದ್ದ ನನಗೆ ಆ ಪತ್ರಿಕೆ ಓದುವ ಆಸೆಯಾಗಿದ್ದು. ಅವಳೇನೊ ಸುಲಭವಾಗಿ ಸಾಮಾನ್ಯ ಸಂಗತಿಯೆಂಬಂತೆ, “ನೀನು ಶಾಲೆಯಿಂದ ಹೋಗುವಾಗ ಪೇಟೆಗೆ ಹೋಗಿ ಕೊಂಡುಕೊ” ಅಂದುಬಿಟ್ಟಿದ್ದಳು. ಆದರೆ ಅವಳೀಗೇನು ಗೊತ್ತು ನಮ್ಮನೆಯ ಕಟ್ಟುನಿಟ್ಟಿನ ವಿಚಾರ. ಅದೂ ಅಲ್ಲದೆ ಶಾಲೆಗೆ ಹೋಗುವಾಗ ನಮ್ಮ ಕೈಯಲ್ಲಿ ಕಾಸೂ ಇರುತ್ತಿರಲಿಲ್ಲ. ಇದನ್ನೆಲ್ಲ ಹೇಳಲು ನಾಮೂಸು ಬಿಡಬೇಕಲ್ಲ. ಹೇಳಿದ್ದರೆ ಅವಳ ಮನೆಯಿಂದ ಅವಳೇ ತಂದುಕೊಡುತ್ತಿದ್ದಳೇನೊ.

ಹೇಗಾದರೂ ಪತ್ರಿಕೆ ಕೊಳ್ಳಬೇಕು. ಅಪ್ಪಯ್ಯನಿಗೆ ತೋರಿಸಬೇಕೆಂಬ ಆಸೆಯಂತು ಬಲವಾಗಿತ್ತು. ದುಡ್ಡು ಬೇಕಲ್ಲ. ಎಲ್ಲಿಂದ ಹೊಂದಿಸುವುದು.. ಬೇಸಿಗೆ ರಜಾದಿನಗಳಲ್ಲಿ ನಮ್ಮ ಗದ್ದೆಯಲ್ಲಿ ಕೊಯಿಲು ಮುಗಿದ ಮೇಲೆ ಉದ್ದು, ಹೆಸರು, ರಾಗಿ, ಎಳ್ಳು ಎಂದು ಧಾನ್ಯಗಳ ಬಿತ್ತನೆ ಮಾಡುತ್ತಿದ್ದರು ಅಪ್ಪಯ್ಯ. ಅದು ಬೆಳೆದು ನಿಂತ ಮೇಲೆ ಕೊಯ್ಯುವ ಕೆಲಸ ಮಕ್ಕಳದು. ಬೆಳಗ್ಗೆ ಬಿಸಿಲೇರುವ ಮೊದಲೇ ಕೀಳಬೇಕಿತ್ತು. ಬೇಗ ಎದ್ದು ಹೊಲಕ್ಕೆ ಹೋಗುವ ಆಸೆ ಹುಟ್ಟಿಸಲು ಒಂದು ಬುಟ್ಟಿಗೆ ನಾಲ್ಕಾಣೆಯೊ ಹದಿನೈದು ಪೈಸೆಯೊ ಲೆಕ್ಕದಂತೆ ಆಯಿ ಅವಳ ಹಾಲಿನ ಚಿಲ್ಲರೆ ಡಬ್ಬಿಯಿಂದ ಕಾಸು ಕೊಡುತ್ತಿದ್ದಳು.

ಕಾಸು ಸಿಗುತ್ತದೆಯಾದರೆ ನಮ್ಮ ನಡುವೆ ಯಾರು ಹೆಚ್ಚು ಕಿತ್ತೆವೆಂಬ ಪೈಪೋಟಿಯೂ ಇರತ್ತಿತ್ತು. ಇದನ್ನ ನಮ್ಮ ವರ್ಷದ ಜಾತ್ರೆ ಕರ್ಚಿಗೆ ಕೂಡಿಟ್ಟುಕೊಳ್ಳುತ್ತಿದ್ದೆವು. ಕೊನೆಗೂ ಆ ದಿನ ನನ್ನ ಅದೇ ಕಾಸಿನ ಡಬ್ಬಿಯಿಂದ ನಾಲ್ಕಾಣೆ..ಹತ್ತು ಪೈಸೆ..ಐದು ಪೈಸೆ ಎಂದು ಒಟ್ಟು ಮಾಡಿಕೊಂಡು ಕಂಪಾಸಲ್ಲಿಟ್ಟುಕೊಂಡು ಶಾಲೆಗೆ ಹೊರಟಿದ್ದೆ. ಸಂಜೆ ಶಾಲೆ ಬಿಟ್ಟೊಡನೆ ಎಂದಿನ ಒಳದಾರಿ ಬಿಟ್ಟು ಪೇಟೆ ಹಾಸಿ ಪತ್ರಿಕೆ ಕೊಂಡು ಮನೆಗೆ ಹೋಗುವುದೆಂದು ಹೊರಟಿದ್ದಾಗಿತ್ತು. ಅದು ಹಳ್ಳಿ ಮೇಲಿನ ಮೂರ್ನಾಲ್ಕು ಅಂಗಡಿಗಳಿದ್ದ ಪೇಟೆಯಾಗಿತ್ತು ಆ ದಿನಗಳಲ್ಲಿ.

ದಿನಸಿ ಸಾಮಾನಿಗೊಂದು ಶೈಣೈ ಅಂಗಡಿ. ಪುಸ್ತಕ, ಕಟ್ಲೇರಿಗಳ ಒಂದು ಕಾಮತ್ತರ ಅಂಗಡಿ, ಒಂದು ಪೈ ಹೊಟೆಲು. ಹೀಗೆ ಎಲ್ಲದಕ್ಕು ಒಂದೊಂದೇ. ಮಕ್ಕಳು ಅದರಲ್ಲೂ ಹೆಣ್ಮಕ್ಕಳು ಅಂಗಡಿಗೆ ಬಂದರೆ ಅವರ ಯೋಗಕ್ಷೇಮ, ಜವಾಬ್ದಾರಿ ಆಯಾಯ ಅಂಗಡಿಯವರಿಗು ಸೇರಿದ್ದು ಎಂಬಂತೆ, ಎಲ್ಲಿ ಮನೆ? ಇವತ್ಯಾಕೆ ನೀನು ಬಂದೆ ಇತ್ಯಾದಿ ವಿಚಾರಣೆ ಇರುತ್ತಿತ್ತು. ನಾನು ಹೋಗಿ ಪೇಪರ್ ಅಂಗಡಿ ಬಾಗಿಲಲ್ಲಿ ಅಳುಕುತ್ತ ನಿಂತೊಡನೆ ಅಂಗಡಿಯಾತ ಏನಮ್ಮ ಚಂದಮಾಮ ಬೇಕಾ? ಕೇಳಿದ.

ಲಂಕೇಶ್ ಪತ್ರಿಕೆ ಉಂಟಾ? ಕೇಳಿದೆ. ಅವನಿಗೆ ಬಾಂಬ್ ಬಿದ್ದಂತಾಗಿರಬೇಕು. “ಎಂತ? ಲಂಕೇಶ್ ಪತ್ರಿಕೆಯಾ? ಯಾರಿಗಮ್ಮ? ನಿಮ್ಮನೆಗೆ ದಿನಾ ಕೊಂಡು ಹೋಗುವುದು ಕನ್ನಡ ಪ್ರಭ ಅಲ್ವ. ನಿನ್ನ ಅಣ್ಣ ಕೊಂಡು ಹೋಗಿದಾನೆ. ಅವನೇನು ಲಂಕೇಶ್ ಪತ್ರಿಕೆ ಕೇಳ್ಲಿಲ್ಲ. ಅದೆಲ್ಲ ನಿಮ್ಮಂತವರು ಓದುವಂತದ್ದಲ್ಲ. ನಡಿ ನಡಿ ಮನೆಗೆ.” ಅನ್ನಬೇಕೆ. ಆ ದಿನಗಳಲ್ಲಿ ಖಾದ್ರಿ ಶಾಮಣ್ಣ ಸಂಪಾದಕರಾಗಿದ್ದ ಕನ್ನಡಪ್ರಭ ಅಪ್ಪಯ್ಯನಿಗೆ ತುಂಬ ಇಷ್ಟದ್ದಾಗಿತ್ತು. ಅಂತು ನನ್ನ ಲಂಕೇಶ್ ಪತ್ರಿಕೆ ಓದುವ ಬಯಕೆ ಹಾಗೆಯೇ ಮುಂದಕ್ಕೆ ಹೋಯಿತು.

ವರ್ಷಗಳುರುಳಿ ಮುಂದೆ ಮದುವೆ ನಂತರ ಕಾಸರಗೋಡು ಸಮೀಪದ ಊರಿಗೆ ಹೋದ ಮೇಲೆ ಮತ್ತೆ ಲಂಕೇಶ್ ಪತ್ರಿಕೆ ಓದಬೇಕೆಂಬ ಉಳಿದು ಹೋಗಿದ್ದ ಆಸೆ ಗರಿಗೆದರಿ ಪ್ರಸಾದ್ ಹತ್ತಿರ ಆ ಪೇಪರ್ ಸಿಗುತ್ತಾ ಕೇಳಿದೆ. ಕನ್ನಡ ಪತ್ರಿಕೆ ಓದುವವರೇ ಲೆಕ್ಕದ ಮಂದಿ. ಇನ್ನು ಲಂಕೇಶ್ ಪತ್ರಿಕೆ ಕೊಂಡು ಓದುವಂತವರನ್ನು ಹುಡುಕಿ ತೆಗೆಯಬೇಕು. ಕಾಸರಗೋಡು ಪೇಟೆಯಲ್ಲಿ ಖಾಯಂ ಖರೀದಿಸುವವರಿಗಾಗಿ ಒಂದೆರಡು ತರಿಸ್ತಾರೆ. ಬೇಕೆಂದರೆ ಮಂಗಳೂರಿನ ಕೆ.ಎಸ್.ಆರ್.ಟಿ.ಸಿ. ನಿಲ್ದಾಣದೊಳಗೆ ಒಂದು ಪೇಪರ್ ಅಂಗಡಿ ಇದೆ.

ಮಂಗಳೂರಿಗೆ ಹೋದಾಗ ಅಲ್ಲಿಂದ ತರಬೇಕಷ್ಟೆ ಅಂದ. ಅಂತು ಎಂಭತ್ತೆಂಟು ಎಂಭತ್ತೊಂಭತ್ತರ ಅವಧಿಯಲ್ಲಿ ಹುಟ್ಟಿಕೊಂಡ ಲಂಕೇಶ್ ಪತ್ರಿಕೆ ನೋಡುವ ಹಪಾಹಪಿ ತೊಂಭಾತ್ತಾರರ ಒಂದು ದಿನ ಕೈಗೂಡಿತು. ಮುಂದೆಲ್ಲ ನಾನು ತವರಿಗೆ ಹೋಗುವಾಗ ಮಂಗಳೂರಿನ ಆ ಅಂಗಡಿಯಿಂದ ಲಂಕೇಶ್ ಪತ್ರಿಕೆ ಕೊಂಡೊಯ್ಯುತ್ತಿದ್ದೆ. ನಾನು ಆ ಅಂಗಡಿ ಎದುರು ಹೋಗುತ್ತಿದ್ದಂತೆ ಅಂಗಡಿಯಾತ ಹಳೆಯ ಪತ್ರಿಕೆಯನ್ನೂ ಸೇರಿಸಿಯೇ ಕೊಡುತ್ತಿದ್ದ. ಜೊತೆಗೆ ಹಾಯ್ ಬೆಂಗಳೂರು ಇದೆ ಕೊಡಲೆ ಎಂದೂ ಕೇಳುತ್ತಿದ್ದ.

ಅಕ್ಕಪಕ್ಕ ಇದ್ದ ಜನ ವಿಚಿತ್ರವೆಂಬಂತೆ ಕಣ್ಣಂಚಲ್ಲೆ ನೋಡುತ್ತಿದ್ದರು. ಒಂದುವರೆ ಘಂಟೆ ಬಸ್ ಪ್ರಯಾಣದಲ್ಲಿ ಪತ್ರಿಕೆ ಓದಿ ಮುಗಿದಿರುತ್ತಿತ್ತು. ಮನೆ ಹೊಕ್ಕೊಡನೆ ಬೇಕೆಂದೇ ವ್ಯಾನಿಟಿಯೊಳಗಿಂದ ಪತ್ರಿಕೆಗಳನ್ನೆಲ್ಲ ತೆಗೆದು ಟೀಫಾಯಿ ಮೇಲಿಡುತ್ತಿದ್ದೆ. ನಾನು ಕೈಕಾಲು ತೊಳೆದು ಹೊಟ್ಟೆಗೆ ಹಾಕಿ ಬರುವಷ್ಟರಲ್ಲಿ ಅಪ್ಪಯ್ಯನ ಒಂದು ಸುತ್ತಿನ ಓದು ಮುಗಿದಿರುತ್ತಿತ್ತು..

‍ಲೇಖಕರು Avadhi

September 14, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

  1. anupama prasad

    ಓದಿ ಅಭಿಪ್ರಾಯ ಹಂಚಿಕೊಂಡಿದ್ದಕ್ಕೆ ತುಂಬಾ ಧನ್ಯವಾದಗಳು ಸುಮತಿ

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: