
ರಾಜೇಂದ್ರ ಪ್ರಸಾದ್
ನಾನು ಹುಟ್ಟಾ ಮುನಿಸಿನ ಸಗಟು ವ್ಯಾಪಾರಿ.
ಗಲ್ಲಾ ಪೆಟ್ಟಿಗೆಯ ಲೆಕ್ಕ ಮಾಡುವಾಗ
ಸದ್ದಾದರೆ ಸಾಕು, ಸಿಕ್ಕಿದ್ದು ಚೂರು ಚೂರು!
ಚೌಕಾಸಿಗೆ ಬಂದರೆ ಮಾತೇ ಇಲ್ಲ
ಬಾಗಿಲ ದಾರಿ ಕೈದೋರಿ ಚಿತ್ತದ ಲೆಕ್ಕ
ಹರಿವುದು ಮತ್ತೊಂದು ಲೆಕ್ಕದ ಸುತ್ತ.
ಈಗ ಲೆಕ್ಕದ ಪುಸ್ತಕ ಖಾಲಿ ಖಾಲಿ
ಕೋಪದ ಬಾಬ್ತು ಮಾತ್ರ ದುಪ್ಪಟ್ಟು
ಪುಣ್ಯದ ಮೊತ್ತಕೆ ಕಿಲುಬಿನ ಕಿಮ್ಮತ್ತಿಲ್ಲ ;
ಬಜಾರಿನ ಅಕ್ರಮ ಹರಾಜುಗಳು ನಿರಾಂತಕ!
* * *
ಸಂಬಂಧಗಳು ಚಿಮಟದ ಹಾಗೆ
ಕಚ್ಚಿ ಎಳೆದು ಬಿಡುತ್ತವೆ ಹಸಿಚರ್ಮ.
ಒಮ್ಮೆಯಾದರೇ ಸಹಿಸಬಹುದು ಆದರೆ
ನಿತ್ಯ ನೀರು ಕುಡಿದ ಹಾಗೆ ಈ ಕರ್ಮ!
ಈಗ ಮನದಷ್ಟೇ ತನುವೂ ಕಲ್ಲಾಗಿದೆ
ಏಟುಗಳು ಬಿದ್ದಾಗ ಕಚಗುಳಿಯೆನಿಸುತ್ತದೆ
ಕೆಲವೊಮ್ಮೆ ಅಹಿತದ ರತಿಸುಖ!
– – – – –
ವ್ಯಾಪಾರಗಳು, ಸಂಬಂಧಗಳು
ನಾವೇ ಮಡಚಿಬಿಟ್ಟ ಕಾಗದದ ದೋಣಿಗಳು
ಹರಿದಾಗ ಚಪ್ಪಾಳೆ, ಮಗುಚಿದಾಗ ನಿಟ್ಟುಸಿರು
ನಡುವೆ ಮರೆತುಹೋದ ಮಳೆ ನಮ್ಮ ನಮ್ಮ ಬದುಕು. ~






ತುಂಬಾ ಇಷ್ಟವಾಯಿತು ರಾಜೇಂದ್ರ ಸರ್…