ಉಡುಪಿಯಲ್ಲಿ ನಾನು ಅವನಲ್ಲ ಅವಳು ಚಿತ್ರ ಪ್ರದರ್ಶನಕ್ಕೆ ಕಾರಣರಾದವರಲ್ಲಿ ಒಬ್ಬರು ಮಂಜುನಾಥ ಕಾಮತ್. ಮಂಜುನಾಥ್ ಹಾಗೂ ಗೆಳೆಯರು ಚಿತ್ರ ಪ್ರದರ್ಶನದ ಹುಮ್ಮಸ್ಸನ್ನೇ ಮುಂದುವರೆಸಿ ಮಂಗಳಮುಖಿಯರಿಗಾಗಿ ರಂಗ ರೆಪರ್ಟರಿ ಸ್ಥಾಪಿಸುವವರೆಗೆ ಬಂದು ನಿಂತಿದ್ದಾರೆ.
ಜೊತೆಗೆ ಬಿಳಿಕಲ್ಲು ಪ್ರಕಾಶನ ಸಹಾ. ಆರಂಭವಾಗಿದೆ. ಸೈಕಲ್ ಹತ್ತಿ ಊರೂರು ತಿರುಗುವ ಆಂದೋಲನ ಜೊತೆಗಿದೆ.
ಇಂತಹ ಮಂಜುನಾಥ ಕಾಮತ್ ಸನ್ಯಾಸಿಯಾಗಲು ಹೊರಟಿದ್ದು ಏಕೆ? ಇಲ್ಲಿದೆ..

ಮಂಜುನಾಥ ಕಾಮತ್
ನಾನೊಮ್ಮೆ ಸನ್ಯಾಸಿಯಾಗಲು ಹೊರಟಿದ್ದೆ….
ಬಿ.ಬಿ.ಎಂ ಕಲಿಯುತ್ತಿದ್ದೆ. ನಿಟ್ಟೆಯಲ್ಲಿ. ಅದ್ಯಾಕೋ ಪಾಠಗಳು ಇಷ್ಟವಾಗುತ್ತಿರಲಿಲ್ಲ. ಪರ್ಸಂಟೇಜು ಅರವತ್ತನ್ನು ಮೀರುತ್ತಿರಲಿಲ್ಲ. ಅಕೌಂಟೆನ್ಸಿ, ಮ್ಯಾನೇಜ್ ಮೆಂಟ್ ತಲೆಗೆ ಹತ್ತಲಿಲ್ಲ.
ಆಗ ಎಂ.ಬಿ.ಎ ಕ್ರೇಝು ತಾರಕಕ್ಕೇರಿತ್ತು. ಸ್ಟ್ಯಾಂಡರ್ಡ್ ಮೈಂಟೇನ್, ಇಂಗ್ಲೀಷ್ ಮಾತು, ಸೂಟು, ಬೂಟು, ಟೈ……
ಹಳ್ಳಿಯವನು ನಾನು. ಕಲಿಕೆಗೆ ಎಳ್ಳಷ್ಟು ಕಡಿಮೆ ಮಾಡಿಲ್ಲ ಮನೆಯೋರು. ಆದರೂ ಶೋಕಿಗೆ ಅವಕಾಶವಿರಲಿಲ್ಲ. ಮತ್ತು ಮನಸ್ಸೂ ಇರಲಿಲ್ಲ.
ಊಟ ಮಾಡೋದು ಹೇಗೆ? ಟೇಬಲ್ ಮ್ಯಾನರ್ಸ್…
ಕೈಕುಲುಕೋದು ಹೇಗೆ? ಶೇಕಿಂಗ್ ಮ್ಯಾನರ್ಸ್….
ಹೇಗೆ ನಿಲ್ಬೇಕು, ಹೇಗೆ ಮಾತಾಡಬೇಕು, ಎಂಥ ಬಟ್ಟೆ ಹಾಕ್ಬೇಕು, ಅದನ್ನ ಹೇಗೆ ತೊಟ್ಟುಕೊಳ್ಳಬೇಕು…? ಗೆಸ್ಚರ್, ಪೋಸ್ಚರ್, ಲಂಗ್ ಲುಸ್ಕ್…..
ಅಯ್ಯಪ್ಪ… ನನಗೆ ಸಾಕಾಗಿ ಹೋಯ್ತು.. ಮನಸ್ಸು ಹಿಂಡಿ ಹೋಯ್ತು. ಬದುಕು ಸಾಕಾಗಿ ಹೋಯ್ತು. ಭವಿಷ್ಯ ಕಾಣದಾಯ್ತು.
ಆಗ ಪುಸ್ತಕಗಳ್ನ ಓದ್ತಾ ಇರಲಿಲ್ಲ. ಓದಿದ್ದು ವಿವೇಕಾನಂದರ ಆಧ್ಯಾತ್ಮ ಪುಸ್ತಕಗಳನ್ನು ಮಾತ್ರಾ.
ನನಗೂ ಅನಿಸಲು ಶುರುವಾಯ್ತು. ನಾನು ವಿವೇಕನಂದರ ಹಾಗೆ ಆಗ್ಬೇಕು. ಸನ್ಯಾಸಿ ಆಗ್ಬೇಕು.
ಐದು ಗಂಟೆಗೆ ಏಳುವುದು ಅಭ್ಯಾಸವಾಯ್ತು.ಬಾವಿಯಿಂದ ಎಳೆದ ತಣ್ಣೀರಿನ ಸ್ನಾನ ಖಾಯಾಂ ಆಯ್ತು. ಬಾಬಾ ರಾಮ್ ದೇವರ ಯೋಗದ ಪರಿಚಯವಿತ್ತು. ಅನುಲೋಮ ವಿಲೋಮದ ಪ್ರ್ಯಾಕ್ಟೀಸ್ ಆಯ್ತು.
ಸನ್ಯಾಸಿಯಾಗಬೇಕು. ಒಂಟಿಯಾಗಿರಬೇಕು. ಸ್ನೇಹಿತರಿಂದ ದೂರವಾದೆ. ಗ್ರಂಥಾಲಯದಲ್ಲಿ ಹೆಚ್ಚು ಹೊತ್ತು ಕಳೆದೆ. ಗ್ರಂಥ ಪಾಲಕಿಯ ಹಠಕ್ಕೆ ಪುಸ್ತಕ ಓದಲು ಆರಂಭಿಸಿದೆ. ಕರ್ವಾಲೋ, ಬೆಟ್ಟದ ಜೀವ, ಇಡ್ಲಿ ಆರ್ಕಿಡ್ ಆತ್ಮಭಲ ಓದಿದೆ.
ಸನ್ಯಾಸಿಯಾಗೋದಂತೂ ಖಚಿತ. ಈ ಬದುಕು ಬೇಡಪ್ಪ. ನಾನು ಕಾಡು ಅಲಿಯಬೇಕು. ಆತ್ಮಸಾಕ್ಷತ್ಕಾರವಾಗಬೇಕು.. ಹಾಗೆ ಹೀಗೆ…
ಸೆಮಿಸ್ಟರ್ ರಜೆಯಲ್ಲಿ ವೈರಾಗ್ಯ ವಿಪರೀತ ಹತ್ತಿತ್ತು. ನನಗೀಗ ಗುರು ಬೇಕು. ಸಂನ್ಯಾಸ ಧೀಕ್ಷೆ ಕೊಡೋರು ಬೇಕು. ಲೌಕಿಕ ಮತ್ತು ಅಲೌಕಿಕದ ನಡುವಿನ ಗುದ್ದಾಟಕ್ಕೆ ಕೊನೆ ಕೊಡಲೇಬೇಕು(?)
ಗುರು ಎಲ್ಲಿದ್ದಾರೆ?
ನಮ್ಮದೇ ಕಾಲೇಜಿನಲ್ಲಿ ಇಂಜಿನಿಯರಿಂಗ್ ಕಲಿತವರೊಬ್ಬರು ಸನ್ಯಾಸಿಯಾಗಿರೋದು ಗೊತ್ತಾಯಿತು. ಮನೆಯಲ್ಲೇ ಮಠ ಕಟ್ಟಿಕೊಂಡದ್ದು ತಿಳಿಯಿತು. ಅವರೇ ಸರಿಯಾದ ವ್ಯಕ್ತಿ. ಅವ್ರಿಂದಲೇ ಧೀಕ್ಷೆ ಪಡೆಯೋದು ಅಂಥ. ನಿರ್ಧರಿಸಿದೆ. ಮನೆಯಲ್ಲಿ ಯಾರಿಗೂ ಹೇಳದೆ, ಅವರ ಮಠದತ್ತ ಬಸ್ಸು ಹತ್ತಿದೆ.





0 Comments