ನಾನು ಶ್ರೀಕೃಷ್ಣನ ಪಾತ್ರ ವಹಿಸಿದ್ದರೂ ಕೂಡ ಚಹ ಕುಡಿದ ತಟ್ಟೆಯನ್ನು ತೊಳೆದಿಟ್ಟೇ ಹೋಗಬೇಕಿತ್ತು..

ಅಣ್ಣನ ನೆನಪು 27
ನಾನು ಶ್ರೀಕೃಷ್ಣನ ಪಾತ್ರ ವಹಿಸಿದ್ದರೂ ಕೂಡ ಚಹ ಕುಡಿದ ತಟ್ಟೆಯನ್ನು ತೊಳೆದಿಟ್ಟೇ ಹೋಗಬೇಕಿತ್ತು.

ಅಣ್ಣ ಕಾಲದ ಒಬ್ಬ ಮಹತ್ವದ ಯಕ್ಷಗಾನ ತಾಳಮದ್ದಲೆಯ ಅರ್ಥಧಾರಿಯಾಗಿದ್ದ. ಆತನ ಅರ್ಥವನ್ನು ಜನ ಇಷ್ಟಪಡುತ್ತಿದ್ದರು. ಆದರೆ ಯಕ್ಷಗಾನ ವಿಮರ್ಶಕರು ಇದನ್ನು ಗುರುತಿಸಿದಂತಿಲ್ಲ. ತುಂಬಾ ಜನ ವಿದ್ವಾಂಸರು ಮಾತನಾಡುವಾಗ ನಮ್ಮೊಂದಿಗೆ ಆತನ ಕುರಿತು ಹೊಗಳಿದ್ದಿದೆ. ಆದರೆ ಬರವಣಿಗೆ ಮಾಡುವಾಗ ಮರೆಯುತ್ತಾರೆ. ಇರಲಿ ಇದೇನು ದೊಡ್ಡ ಸಂಗತಿಯಲ್ಲ. ಆದರೆ ಆತ ನಮ್ಮ ಭಾಗದಲ್ಲಿ ಅರ್ಥಧಾರಿಕೆಯ ಸ್ವರೂಪವನ್ನೇ ಬದಲಾಯಿಸಿದ ಎನ್ನುವುದು ಮಾತ್ರ ಸತ್ಯ.

ಆತನ ತಾಳಮದ್ದಲೆಯ ಬಗ್ಗೆ ಒಂದೆರಡು ಕಂತನ್ನು ಮುಂದೆ ಬರೆಯುತ್ತೇನೆ.

ಒಮ್ಮೆ ನಾನು ಮತ್ತು ಗೆಳೆಯ ಶ್ರೀಪಾದ ಸೇರಿ ಆತನ ತಾಳಮದ್ದಲೆಯ ಕುರಿತು ಒಂದು ಸಂದರ್ಶನ ಮಾಡಿದ್ದೆವು.ಆತನ ಮಾತಿನಲ್ಲಿ ಅದನ್ನು ಕೇಳಿದರೆ ಚೆಂದ. ಅದರ ಆಯ್ದ ಭಾಗ ಇದು.

ನಾವು : ಯಕ್ಷಗಾನ ತಾಳಮದ್ದಳೆಗೆ ನಿಮ್ಮ ಪ್ರವೇಶದ ಕುರಿತು ಹೇಳುತ್ತೀರಾ.?
ಅಣ್ಣ : ಚಿಕ್ಕಂದಿನಿಂದಲೂ ನನಗೆ ಯಕ್ಷಗಾನದ ಬಗ್ಗೆ ವ್ಯಾಮೋಹ. ತಾಳಮದ್ದಲೆ ನನಗೆ ಯಕ್ಷಗಾನದ ಕುರಿತ ಮುನ್ನಾಸೆಯನ್ನು, ಬೌದ್ಧಿಕ ಹಸಿವನ್ನು ಈಡೇರಿಸಿಕೊಳ್ಳಲು ಅನುಕೂಲ ಒದಗಿಸಿತು. ಪ್ರಾರಂಭದಲ್ಲಿ ರಮಣಜ್ಜ ಎಂಬೊಬ್ಬ ಭಾಗವತರಿದ್ದರು. ಬಹುದೊಡ್ಡ ಭಾಗವತರೇನೂ ಆಗಿರಲಿಲ್ಲ. ಆದರೆ ಅವರ ಬಿಡುವಿನ ವೇಳೆಯಲ್ಲಿ ಬೇಜಾರು ಕಳೆಯಲು ಅವರು ಹಾಡಿಕೊಳ್ಳುವ ಹಾಡುಗಳೆಲ್ಲ ಯಕ್ಷಗಾನದ ಹಾಡುಗಳಾಗಿರುತ್ತಿದ್ದವು. ರಾತ್ರಿ ಹೊತ್ತು ಕೆಲವು ಪದ್ಯ ಹೇಳಿ ಮಲಗುವುದು ಅವರ ರೂಢಿ. ಅವರೇ ನನಗೆ ಪದ್ಯ-ಅರ್ಥದ ಅನೇಕ ಸಂಗತಿಗಳನ್ನು ತಿಳಿಸಿಕೊಟ್ಟರು.

ಕ್ರಮೇಣ ನಮ್ಮದೊಂದು ಕೂಟ ತಯಾರಾಯಿತು. ಅದರ ಸ್ಥಳ ಸಾಲ್ಕೋಡ ಶಾಲೆ, ಬಿ.ವಿ. ಭಂಡಾರಿ ಕೆರೆಕೋಣ ಅವರ ಮದ್ದಳೆ, ರಮಣಜ್ಜನ ಭಾಗವತಿಗೆ, ವೆಂಕಟರಮಣ ಭಟ್ಟರು, ಗುಮ್ಮೇಕೆರೆ ಜಿ.ವಿ. ಹೆಗಡೆ, ಕಾನಕ್ಕಿ ಮಾಬ್ಲ ನಾಯ್ಕ ಕೆಲವೊಮ್ಮೆ ಸಾಲ್ಕೋಡ ವಿಷ್ಣು ಭಟ್ಟರು ಇವರೆಲ್ಲ ಅರ್ಥಧಾರಿಗಳು. ಪ್ರಸಿದ್ಧ ಕಲಾವಿದ ಚಿಟ್ಟಾಣಿ ರಾಮಚಂದ್ರ ಹೆಗಡೆಯವರು ಕೂಡ ಭಾಗವತಿಕೆಗೆ ಬರುತ್ತಿದ್ದರು. ತುಂಬಾ ವರ್ಷ ನನ್ನ ಜೊತೆ ಇದ್ದವರು ಕೊಂತಪಾಲು ಗಪ್ಪು ಭಟ್ಟರು. ನಾವು ರಾತ್ರಿ ಮನೆಯಿಂದ ಊಟ ಮಾಡಿ ಬಂದು ಅರ್ಥ ಹೇಳಲು ಕೂರುತ್ತಿದ್ದೆವು. ಆಗ ಕರೆಂಟ್ ಇದ್ದಿರಲಿಲ್ಲ. ಲಾಟೀನಿನ ಬೆಳಕೆ ಆಧಾರ. ನನ್ನ ಯಕ್ಷಗಾನದ ಹುಚ್ಚನ್ನು ನೋಡಿ ಅಂಗಡಿ ಸತ್ಯ ನಾಯ್ಕರು ಲಾಟೀನಿಗೆ ಚಿಮಣಿ ಎಣ್ಣೆಯನ್ನು, ಕೆಲವು ಸಲ ಕಲಿಸಿದ ಅವಲಕ್ಕಿಯನ್ನು ಕೊಡುತ್ತಿದ್ದರು. ಈ ಕೂಟದಿಂದ ಕಲಿತ ನಾನು ಹೊರಗಡೆ ಅನೇಕ ಕಡೆ ಅರ್ಥ ಹೇಳಲು ಹೋಗುತ್ತಿದ್ದೆ.

ತಾಳಮದ್ದಲೆಯಲ್ಲಿ ನನ್ನನ್ನು ಪಳಗಿಸಿದ ಇಬ್ಬರು ಭಾಗವತರೆಂದರೆ ಒಬ್ಬರು ಕಪ್ಪೆಕೆರೆ ಭಾಗವತರು, ಇನ್ನೊಬ್ಬರು ಮೇಲಿನಗಂಟಿಗಿ ಸುಬ್ರಹ್ಮಣ್ಯ ಭಟ್ಟರು. ಇವರು ನಾನು ತಪ್ಪಿದಲ್ಲೆಲ್ಲ ನನ್ನನ್ನು ತಿದ್ದಿದರು. ನನ್ನ ಮೇಲೆ ಇವರಿಗೆಲ್ಲ ಅಪಾರ ಪ್ರೀತಿ ಇತ್ತು. ನಾನು ಅವರಿಗೆ ಋಣಿ.

ನಾವು : ತಾಳಮದ್ದಲೆಯ ಅರ್ಥಗಾರಿಕೆಯ ಸ್ವರೂಪದ ಕುರಿತು ಹೇಳುತ್ತಿರಾ?
ಅಣ್ಣ : ಯಕ್ಷಗಾನದಲ್ಲಿ ಹಾಡುಗಬ್ಬ ಒಂದು ರಂಗಕೃತಿಯಾಗಿ ಪ್ರದರ್ಶನಗೊಂಡಂತೆ ತಾಳಮದ್ದಲೆಯಲ್ಲಿ ಸಹ ‘ಪ್ರಸಂಗ’ವಾಗಿ ಆಡಲ್ಪಡುತ್ತದೆ. ವಾಚಿಕಾಭಿನಯ ಪ್ರಧಾನವಾದ ಈ ತಾಳಮದ್ದಲೆಯಲ್ಲಿ ಭಾಗವತ ಪದ್ಯಕ್ಕೆ ಪಾತ್ರಧಾರಿಗಳು ಅರ್ಥ ಹೇಳುತ್ತಾರೆ. ಈ ಅರ್ಥ ಹೇಳುವ ಕ್ರಿಯೆ ಮುಖ್ಯವಾಗಿ ಎರಡು ನೆಲೆಯಲ್ಲಿ ಕಂಡು ಬರುತ್ತದೆ. ಒಂದು ನಿರೂಪಣಾತ್ಮಕವಾದದ್ದು, ಇನ್ನೊಂದು ವ್ಯಾಖ್ಯಾನಾತ್ಮಕವಾದದ್ದು. ನಿರೂಪಣೆಯಲ್ಲಿ ಕತೆಯನ್ನು ಭಾವನಾತ್ಮಕವಾಗಿ ಮಂಡಿಸುತ್ತರಾದರೆ, ವ್ಯಾಖ್ಯಾನದಲ್ಲಿ ಸಮಕಾಲೀನ ಸಂಗತಿಗಳನ್ನು ವಿಶ್ಲೇಷಣಾತ್ಮಕವಾಗಿ ಬಳಸಿಕೊಳ್ಳಲಾಗುತ್ತದೆ. ತಾಳಮದ್ದಲೆಯಲ್ಲಿ ಇವೆರಡೂ ಮುಖ್ಯವಾದದ್ದು.

ತಾಳಮದ್ದಲೆ ಭಕ್ತಿ ಪಾರಮ್ಯವನ್ನು ಮೆರೆಯಲೆಂದೇ ಇದ್ದುದು. ಅದನ್ನು ಬಹಳ ಮಂದಿ ವರ್ಣಾಶ್ರಮ ಧರ್ಮವನ್ನು ಸಮರ್ಥನೆ ಮಾಡುವುದಕ್ಕಾಗಿ, ಬ್ರಾಹ್ಮಣ್ಯದ ಶ್ರೇಷ್ಠತೆಯನ್ನು ಸಾರುವುದಕ್ಕಾಗಿ ಶಕ್ತಿಯುತವಾಗಿ ಬಳಸಿಕೊಳ್ಳುತ್ತಾರೆ. ಆದರೆ ಅದು ಅತಿರೇಕವಾಗದ ಹಾಗೆ ಕರ್ಣನಂತಹ ಪಾತ್ರಗಳನ್ನು ಮುಂದಿಟ್ಟುಕೊಂಡು ವ್ಯಾಖ್ಯಾನ ಮಾಡಲೂ ಸಾಧ್ಯ.

ನಾವು : ತಾಳಮದ್ದಲೆಯ ಅರ್ಥಗಾರಿಕೆಯಲ್ಲಿ ನೀವು ಸಾಕಷ್ಟು ಪ್ರಸಿದ್ಧಿ ಪಡೆದಿದ್ದೀರಿ. ನಿಮ್ಮ ಅರ್ಥಗಾರಿಕೆಯ ವೈಶಿಷ್ಟ್ಯದ ಕುರಿತು ನೀವೆ ವ್ಯಾಖ್ಯಾನ ಮಾಡುವುದಾದರೆ?
ಅಣ್ಣ : ಆ ಕಾಲಕ್ಕೆ ನಾನು ಸಾಕಷ್ಟು ಪ್ರಸಿದ್ಧಿಯನ್ನು ಪಡೆದಿದ್ದೆ. ನನ್ನ ಧ್ವನಿ, ಏರು ಸ್ವರ, ಕಾವ್ಯದ ಪ್ರಭಾವದ ಮಾತುಗಾರಿಕೆ ಜನರನ್ನು ಆಕರ್ಷಿಸಿತು ಎನಿಸುತ್ತದೆ. ಭೌದ್ಧಿಕ ವ್ಯಾಖ್ಯಾನ ಏನೇ ಇದ್ದರೂ ನಾನು ಕತೆಯ ಔಚಿತ್ಯ ಮೀರುತ್ತಿರಲಿಲ್ಲ. ವಿರೋಧಿ ಪಾತ್ರಗಳೊಡನೆ ಜಗಳವಾಡುವುದು ನನಗೆ ಹಿಡಿಸುತ್ತಿರಲಿಲ್ಲ. ರಸಭಾವ ಸೃಷ್ಟಿ ನನ್ನ ಮೊದಲ ಆದ್ಯತೆ. ಅದರ ಜೊತೆ ಸಾಮಾಜಿಕ ನ್ಯಾಯದ ಪ್ರಶ್ನೆಯನ್ನು ಪ್ರಕಾಶಕ್ಕೆ ತರುತ್ತಿದ್ದೆ. ನನ್ನ ನಂಬಿಕೆ ಮೊದಲಿನಿಂದಲೂ ಹೀಗೆ ಇತ್ತು. ಸಾಹಿತ್ಯ ತನ್ನಷ್ಟಕ್ಕೆ ತಾನೆ ಶ್ರೇಷ್ಟವಲ್ಲ, ಅದಕ್ಕೊಂದು ಸಾಮಾಜಿಕ ಉದ್ದೇಶ ಇದೆ ಎಂದು ನಂಬಿದವನು ನಾನು. ಇವೆಲ್ಲವನ್ನೂ ಹೊಂದಿಸಿ ನಾನು ಅರ್ಥ ಹೇಳುತ್ತಿದ್ದೆ. ಪುರಾಣ ಓದಿದವರಿಗೂ, ಓದದವರಿಗೂ ನಾನು ಪ್ರಿಯನೇ ಆಗಿದ್ದೆ. ನನ್ನ ಕಾವ್ಯದ ಓದು ಅಭಿವ್ಯಕ್ತಿಗೊಂದು ಸೊಗಸು ತರುತ್ತಿತ್ತು ಎಂದೆನಿಸುತ್ತದೆ.
ಅರ್ಥಗಾರಿಕೆಯಲ್ಲಿ ಹಲವರಿಗೆ ಪ್ರಿಯನಾದರೂ ಕೆಲವರಿಗೆ ಅಪ್ರಿಯನೂ ಆಗಿದ್ದೆ. ‘ಕರ್ಣ ಪರ್ವದಲ್ಲಿಯ ಕರ್ಣನ ಪಾತ್ರದ ಮೂಲಕ ವರ್ಣಾಶ್ರಮ ಧರ್ಮ ವ್ಯವಸ್ಥೆಯನ್ನು ಮೊದಲಿಂದ ಕೊನೆಯವರೆಗೂ ವಿಡಂಬಿಸುತ್ತಿದ್ದೆ. ಭೀಷ್ಮ ಪರ್ವದಲ್ಲಿ ನಾನು ಭೀಷ್ಮನ ಪಾತ್ರ ಮಾಡಿದಾಗ್ಯೂ ಸ್ತ್ರೀಸ್ವಾತಂತ್ರ್ಯ ನನಗೆ ಕೇಂದ್ರ ಬಿಂದುವಾಗಿರುತ್ತಿತ್ತು. ಪುರುಷ ಯಾಜಮಾನ್ಯ ಹೇಗೆ ಹೆಂಗಸರ ಅಂತಃಶಕ್ತಿಯನ್ನು ದುರ್ಬಲಗೊಳಿಸುತ್ತದೆ ಎಂಬುದನ್ನು ನಾನು ಅಲ್ಲಿ ಎತ್ತಿ ಹೇಳುತ್ತಿದ್ದೆ. ಆದರೆ ಭೀಷ್ಮನ ಪಾತ್ರದ ಔಚಿತ್ಯವನ್ನು ಮಾತ್ರ ಕೆಡಿಸುತ್ತಿರಲಿಲ್ಲ. ‘ಸಂಧಾನದ ಕೃಷ್ಣ, ಕೌರವನ ಪಾತ್ರಮಾಡಿದಾಗ ಸಮಾಜದ ಬೆಳವಣಿಗೆ, ಪ್ರಭುತ್ವದ ಉಗಮ ಸ್ವರೂಪದ ಕುರಿತು ಹೇಳುತ್ತಿದ್ದೆ. ‘ವಾಲಿವಧೆ’ಯಲ್ಲಿ ಆರ್ಯ ದ್ರಾವಿಡರ ಸಂಘರ್ಷದ ಕುರಿತು ಹೇಳುತ್ತಿದ್ದೆ. ಇದೆಲ್ಲವು ಪ್ರೇಕ್ಷಕರಿಗೆ ಹೊಸರೀತಿಯಲ್ಲಿ ತಾಳಮಧ್ದಲೆ ನೋಡಲು ಕಲಿಸಿರಬೇಕು. ಹಾಗಾಗಿ ಜನ ನನ್ನನ್ನು ಮೆಚ್ಚಿಕೊಂಡಿರಲು ಬಹುದು.

ನಾವು : ಈ ರಂಗದಲ್ಲಿ ಶೂದ್ರ – ಬ್ರಾಹ್ಮಣ ಪ್ರಜ್ಞೆಯ ಕುರಿತೂ ನೀವು ಬೆಳಕು ಚೆಲ್ಲಬಲ್ಲಿರಿ. ಆ ಕುರಿತು …..
ಅಣ್ಣ : ನೋಡಿ ಯಕ್ಷಗಾನದಲ್ಲಿ ಎಲ್ಲಾ ಸಮುದಾಯದ ಕಲಾವಿದರಿದ್ದರು. ನಂತರದ ಕಾಲದಲ್ಲಿ ನಮ್ಮ ಜಿಲ್ಲೆಯಲ್ಲಿ ಯಕ್ಷಗಾನ ಬ್ರಾಹ್ಮಣರ ಸೊತ್ತು ಎನ್ನಲಾಗಿತ್ತು. ಶೂದ್ರರು ಅದರಲ್ಲಿ ವಿಶೇಷತಃ ಪ್ರವೇಶ ಪಡೆದಿರಲಿಲ್ಲ. ಪ್ರೇಕ್ಷಕ ವರ್ಗವೂ ಸಹ. ಅವರು ಯಕ್ಷಗಾನ ಪ್ರಸಂಗವನ್ನು ನೋಡಿದಷ್ಟು ಪ್ರೀತಿಯಿಂದ ತಾಳಮದ್ದಳೆಯನ್ನು ನೋಡುತ್ತಿರಲಿಲ್ಲ. ಒಂದು ಅವರಿಗೆ ಪುರಾಣದ ತಿಳುವಳಿಕೆ ಕಡಿಮೆ ಇರುವುದು, ಇನ್ನೊಂದು ಯಕ್ಷಗಾನದ ಪ್ರಸಂಗದಲ್ಲಿ ಅವರ ಕುರಿತಾದ ಕೀಳೆಂಬ ಭಾವನೆ. ಶೂದ್ರ ಪ್ರೇಕ್ಷಕರೇ ಕಡಿಮೆ ಎಂದಾದ ಮೇಲೆ ಅರ್ಥ ಹೇಳುವವರು ಇನ್ನೂ ಕಡಿಮೆಯೇ. ಯಾರಾದರೂ ಒಬ್ಬ ಶೂದ್ರ ಅರ್ಥ ಹೇಳಬೇಕೆಂದಿದ್ದರೆ ಆತ ಬ್ರಾಹ್ಮಣ ಅರ್ಥಧಾರಿಗಳಿಂದ ದೂರ ಕುಳಿತು, ಹಸೆ ಅಥವಾ ಕಂಬಳಿಯ ಮೇಲೆ ಪ್ರತ್ಯೇಕ ಕುಳಿತು ಅರ್ಥ ಹೇಳಬೇಕಿತ್ತು. ಶಿಕ್ಷಣದ ಪರಿಣಾಮವಾಗಿ ಈ ತಾರತಮ್ಯ ಭಾವ ಈಗ ಕಡಿಮೆಯಾಗುತ್ತಿದೆ ಬಿಡಿ. ನಾನು ಪಾತ್ರಧಾರಿಯಾಗಿ ಭಾಗವಹಿಸುವಾಗಲೂ ಪರಿಸ್ಥಿತಿ ಹೀಗೆಯೇ ಇತ್ತು. ಆ ದಿನದ ಪ್ರಸಂಗದಲ್ಲಿ ನಾನು ಶ್ರೀಕೃಷ್ಣನ ಪಾತ್ರ ವಹಿಸಿದ್ದರೂ ಕೂಡ ಅವಲಕ್ಕಿ ಚಹ ಕುಡಿದ ನಂತರ ಬಾಳೆಕೀಳೆಯನ್ನು ಒಗೆದು ಚಹ ಕುಡಿದ ತಟ್ಟೆಯನ್ನು ತೊಳೆದಿಟ್ಟೇ ಹೊಗಬೇಕಿತ್ತು. ಆ ಕ್ಷಣದ ಮನಸ್ಸಿನ ನೋವನ್ನು ವರ್ಣಿಸುವುದು ಕಷ್ಟ. ಅಷ್ಟಾಗಿ ನಾನು ರಂಗಕ್ಕೆ ಬಂದೆ ಎಂದರೆ ಕೃಷ್ಣನೋ, ಕೌರವನೋ ಅದರಲ್ಲಿ ತಲ್ಲೀನ. ಆಗ ನಾನು ಅಸಾಮಾನ್ಯ ಮನುಷ್ಯ.
ನಾನು ಅರ್ಥ ಹೇಳಲಾರಂಭಿಸಿದ ಮೇಲೆ ಪ್ರೇಕ್ಷಕರು ನನ್ನನ್ನು ಬಹು ಬೇಗ ಮೆಚ್ಚಿಕೊಂಡರು. ಶೂದ್ರ ಪ್ರೇಕ್ಷಕರ ಸಂಖ್ಯೆಯೂ ಜಾಸ್ತಿಯಾಯಿತು. ಅವರಿಗೆ ನನ್ನ ಕುರಿತು ಅಭಿಮಾನವಿರಬಹುದು. ಆದರೆ ನನ್ನ ಮಾತುಗಾರಿಕೆಗೆ ಹೆಚ್ಚಿನ ಪ್ರೋತ್ಸಾಹ ಪ್ರಶಂಸೆ ಬಂದಿದ್ದೇ ಬ್ರಾಹ್ಮಣರಿಂದ.

ಕರ್ಣನಂತಹ ಪಾತ್ರ ನನಗೆ ಬಲು ಇಷ್ಟ. ಆ ಪಾತ್ರವಹಿಸಿ ನಾನು ಬ್ರಾಹ್ಮಣ್ಯದ ಮೌಢ್ಯವನ್ನು ವಿಡಂಬಿಸುತ್ತಿದ್ದೆ. ಆ ಪಾತ್ರದ ರಸಭಾವ ಪೋಷಣೆಯೊಡನೆ ಬಾಳಿನ ನೀತಿಯ ಕುರಿತಾಗಿಯೂ ನನ್ನ ಚಿಂತನೆಯನ್ನು ಹರಡುತ್ತಿದ್ದೆ. ಅಭಿವ್ಯಕ್ತಿಯ ಸೊಗಸಿನಿಂದಾಗಿ ಅದು ಜನಪ್ರಿಯವೂ ಆಗಿತ್ತು. ಇದರಿಂದ ಸಹಜವಾಗಿ ಒಂದಿಷ್ಟು ಜನರ ವಿರೋಧವನ್ನು ಕಟ್ಟಿಕೊಳ್ಳಬೇಕಾಯಿತು. ಅನೇಕ ಬ್ರಾಹ್ಮಣರಿಗೆ ನನ್ನ ಮೇಲೆ ಕೋಪವೂ ಬಂದಿತು. ಬೇಕಾದಷ್ಟು ಟೀಕಾಸ್ತ್ರವೂ ಬಂತು.
ಆದರೆ ನಾನು ಬ್ರಾಹ್ಮಣ್ಯದ ವಿರೋಧಿಯೇ ಹೊರತು ಬ್ರಾಹ್ಮಣರ ವಿರೋಧಿಯಲ್ಲ. ತಾಳಮದ್ದಲೆಯಲ್ಲಂತೂ ನನ್ನ ಅನೇಕ ಆಪ್ತ ಬ್ರಾಹ್ಮಣ ಸ್ನೇಹಿತರಿದ್ದಾರೆ. ಕೊಂತಪಾಲಿನ ಶ್ರೀ ಗಪ್ಪು (ಗಣಪತಿ) ಭಟ್ಟರು ನನ್ನ ಆತ್ಮೀಯರೂ, ಮಾರ್ಗದರ್ಶಕರೂ ಆಗಿದ್ದರು. ನನಗಿಂತ ಮೊದಲೇ ಅವರು ಪ್ರಸಿದ್ಧ ಅರ್ಥಧಾರಿಗಳೆಂದು ಹೆಸರಾಗಿದ್ದರು. ಪುರಾಣದ ಸೂಕ್ಷ್ಮ ಮಾಹಿತಿಗಳು ಅವರಿಗಿತ್ತು. ನನಗೆ ಬೇಕಾದ ಎಷ್ಟೋ ಮಾಹಿತಿಗಳನ್ನು ನಾನು ಅವರಿಂದಲೇ ಪಡೆಯುತ್ತಿದ್ದೆ. ನನಗೆ ಅರ್ಥಹೇಳಲು ಪ್ರಸಿದ್ಧ ಭಾಗವತರೆ ಆಗಬೇಕೆಂದಿರಲ್ಲಿಲ್ಲ. ಯಾರಾದರು ನಾನು ಸುಧಾರಿಸಿಕೊಳ್ಳುತ್ತಿದ್ದೆ. ಈ ಮಧ್ಯೆ ಪ್ರಸಿದ್ಧ ಭಾಗವತರಾದ ಕಪ್ಪೆಕೆರೆ ಭಾಗವತರು, ಸುಬ್ರಹ್ಮಣ್ಯ ಭಟ್ಟರು ಇವರೆಲ್ಲ ನನ್ನನ್ನು ಬೆಳೆಸಿದ್ದಾರೆ.

ನಾವು : ಅರ್ಥಗಾರಿಕೆಯ ಕೆಲವು ಮರೆಯಲಾರದ ಘಟನೆಯನ್ನು ಹೇಳುತ್ತೀರಾ.
ಅಣ್ಣ :ಎರಡು-ಮೂರು ಘಟನೆಗಳನ್ನು ನಾನು ಮರೆಯಲಾರೆ. ಒಮ್ಮೆ ಕಡತೋಕ ಭಂಡಾರಿಯವರ ಮನೆಗೆ ಪ್ರಸಂಗಕ್ಕೆ ಹೋಗಿದ್ದೆ. ಅಂದು ನವಿಲುಗೋಣಿನ ಕಟ್ಟೆ ಭಟ್ಟರು ಅರ್ಥಧಾರಿಗಳಾಗಿ ಬಂದಿದ್ದರು. ತರ್ಕ-ವಿತರ್ಕದಲ್ಲಿ ಎದುರಿನ ಪಾತ್ರಧಾರಿಗಳನ್ನು ಸಿಕ್ಕಿಸುವಲ್ಲಿ ಅವರು ಹೆಸರುವಾಸಿ. ನಮ್ಮ ಪ್ರೇಕ್ಷಕರಿಗೆ ಒಂದು ಕುತೂಹಲ. ಭಟ್ಟರಿಗೂ-ಭಂಡಾರಿಗೂ ಒಂದು ಜೋಡಿ ಮಾಡುವ ಅಂತ. ಕೆಲವರಿಗೆ ಈ ನೆವದಲ್ಲಿ ಮಜಾ ನೋಡುವ ಉಮೇದಿಯೂ ಇತ್ತು. ಸರಿ ಪ್ರಸಂಗ ಮೊದಲಾಯಿತು. ನಾವು ಎದುರು-ಬದುರಾಗಿ ಕುಳಿತೆವು. ಅಷ್ಟರಲ್ಲಿ ಅವರು ವ್ಯವಸ್ಥಾಪಕರನ್ನು ಕರೆದು ಹೇಳಿದರು. “ನಾನು ಶೂದ್ರರೊಡನೆ ಅರ್ಥ ಹೇಳುವವನಲ್ಲ ಆದರೆ ಪ್ರಸಂಗ ನಿಲ್ಲಬಾರದೆಂದು ಒಬ್ಬ ಮಾಣಿಯನ್ನು ಮುಂದಿಟ್ಟುಕೊಂಡು ಅರ್ಥ ಹೇಳುತ್ತೇನೆ.” ನಾನು ಅವಮಾನದಿಂದ ಪಾತಾಳಕ್ಕೆ ಇಳಿದು ಹೋಗಿದ್ದೆ. ಅದರೂ ಅವರ ಮಾತನ್ನು ಮನ್ನಿಸಿ ಅರ್ಥಹೇಳಿದೆ.

ಇನ್ನೊಂದು ಪ್ರಸಂಗ ಹೀಗಿದೆ – ಕೆರೆಕೋಣ ಶಾಲೆಯಲ್ಲಿ ಒಂದು ತಾಳಮದ್ದಲೆ, ಭಾರಿ ಜನ ಸೇರಿದ್ದರು. ತಾಳಮದ್ದಲೆಯೆಂದರೆ ಕಡೆಗಣಿಸುವ ಶೂದ್ರ ಜನರಂತೂ ಸಾಕಷ್ಟು ಸೇರಿದ್ದರು. ಅಷ್ಟರಲ್ಲಿ ನನಗೆ ವಿಷಯ ತಿಳಿಯಿತು. ಪ್ರೇಕ್ಷಕರಲ್ಲಿ ಎರಡು ಬಣವಾಗಿತ್ತು. ಒಂದು ಬಣ ಆರ್.ವಿ. ಭಂಡಾರಿಯವರನ್ನು ಇನ್ನು ಅರ್ಥಹೇಳದಂತೆ ಮಾಡಬೇಕು ಎಂದು ನಿಂತಿದ್ದರೆ, ಇನ್ನೊಂದು ಬಣ ಭಂಡಾರಿಯವರಿಗೆ ಏನಾದರೂ ಆದರೆ ಒಂದು ಕೈ ತೋರಿಸಿಯೇ ಬಿಡಬೇಕು ಎಂದು ನಿಂತಿತು. ನಾನು ಬಹಳಷ್ಟು ವಿಚಾರ ಮಾಡಿದೆ. ಈ ಪ್ರಸಂಗ ಹೊಡೆದಾಟದಲ್ಲಿಯೇ ಮುಗಿಯುವಂತೆ ಕಾಣುತ್ತದೆ ಎಂದೆನಿಸಿತು ನನಗೆ. ವ್ಯವಸ್ಥಾಪಕರಿಗೆ ಹೇಳಿ ಕಳುಹಿಸಿದೆ. ನನ್ನ ಆರೋಗ್ಯ ಕೆಟ್ಟಿರುವುದರಿಂದ ನಾನು ಅರ್ಥ ಹೇಳಲಾರೆ ಎಂದು. ಅಂತೂ ನನ್ನ ಈ ನಿರ್ಣಯದಿಂದಾಗಿ ಒಂದು ಗಂಡಾಂತರ ತಪ್ಪಿತು. ಪ್ರಸಂಗ ಸುರಕ್ಷಿತವಾಗಿ ಮುಗಿಯಿತು.

ಹಾಗೆಯೇ ಅರೇಅಂಗಡಿಯ ಕಾಲೇಜಿನಲ್ಲಿ ಗಣೇಶ ಚತುರ್ಥಿ ಸಂದರ್ಭದಲ್ಲಿ ಇನ್ನೊಂದು ಘಟನೆ ನಡೆಯಿತು. ಸಂಸ್ಥೆಯ ದಶಮಾನೋತ್ಸವವೋ ಅಥವಾ ಬೆಳ್ಳಿಹಬ್ಬವೋ ಇರಬೇಕು. ಆಗ ‘ಕದಳಿ’ ಎಂಬ ಸ್ಮರಣ ಸಂಚಿಕೆಯಲ್ಲಿ ನನ್ನದೊಂದು ಲೇಖನ ಪ್ರಕಟವಾಗಿತ್ತು. ತೀರಾ ವಿವಾದಕ್ಕೆ ಒಳಗಾಗಿತ್ತು. ನಾನು ನನ್ನ ಬರವಣಿಗೆ ಬಗ್ಗೆ ಕ್ಷಮೆ ಕೇಳಬೇಕೆಂದು ಹಲವರು ಪಟ್ಟುಹಿಡಿದದ್ದೂ ಇದೆ. ನನ್ನ ಮೇಲಿರುವ ಇಂತಹ ಹಲವು ಸಿಟ್ಟುಗಳನ್ನು ತೀರಿಸಿಕೊಳ್ಳಲೆಂದೇ ಅಂದಿನ ‘ಕರ್ಣಪರ್ವ’ ತಾಳಮದ್ದಲೆಯನ್ನು ಉಪಯೋಗಿಸಿಕೊಂಡರು. ಕೆಲವು ಅರ್ಥಧಾರಿಗಳು ನನ್ನನ್ನು ಸೋಲಿಸಲೆಂದೆ ಹಲವು ದಿನಗಳಿಂದ ತಾಲೀಮು ನಡೆಸಿದ್ದನ್ನು ಆಮೇಲೆ ಕೆಲವು ಹೇಳಿದ್ದರು. ಆಗ ನನಗೆ ಗೊತ್ತಿರಲಿಲ್ಲ. ನನಗೆ ಗೊತ್ತಿಲ್ಲದಂತೆ ಎರಡು ಪಕ್ಷದ ಜನ ಸಿದ್ಧವಾಗಿಯೇ ನಿಂತಿದ್ದರು. ಪ್ರಸಂಗ ಬಿಸಿ ಯೇರುತ್ತಿದ್ದಂತೆ ನನ್ನ ಎದುರು ಪಾತ್ರಧಾರಿಗಳು ಬೇರೆ ಏನೂ ಹೇಳಲು ತೋಚದೆ ‘ನೀವು ಹೇಳಿದ್ದು ಪ್ರಸಂಗ ಪಟ್ಟಿಯಲ್ಲಿ ಎಲ್ಲಿದೆ ತೋರಿಸಿ. ಹೊರಗಿನದೆಲ್ಲ ಹೇಳುತ್ತಿದ್ದಿರಿ…..’ ಎಂದೆಲ್ಲಾ ಕೂಗಾಡ ತೊಡಗಿದರು. ಪ್ರಸಂಗ ಅರ್ಧದಲ್ಲಿ ನಿಂತು ಬಹುಶಃ ಪುನಃ ಪ್ರಾರಂಭವಾಗಿರಬೇಕು.
ನಿಲ್ಕೋಡು ವಿಷ್ಣು ಭಟ್ಟರು ನನ್ನೊಂದಿಗೆ ಅರ್ಥವನ್ನು ಹೇಳುವುದಿಲ್ಲವೆಂದು ತೀರ್ಮಾನ ತೆಗೆದುಕೊಂಡಿದ್ದು ಇದೆ. ಹಲವರು ನನ್ನ ಮಾತುಗಳನ್ನು ತಮಗೆ ಹೇಳಿದ ವೈಯಕ್ತಿಕ ಮಾತುಗಳೆಂದೆ ತಪ್ಪಾಗಿ ತಿಳಿಯುತ್ತಿದ್ದರು.
ಇಂಥ ಅನೇಕ ಘಟನೆಗಳಿವೆ. ಈಗ ಹೆಚ್ಚಿಗೇನೂ ನೆನಪಿಗೆ ಬರುತ್ತಿಲ್ಲ.

ನಾವು : ಸರ್, ನೀವು ಉತ್ತಮ ಶಿಕ್ಷಕರೆಂದು ಹೆಸರುಗಳಿಸಿದ್ದೀರಿ. ಸಾಹಿತ್ಯ ಅರ್ಥಗಾರಿಕೆ ಇವನ್ನೆಲ್ಲ ಹೇಗೆ ನಿಭಾಯಿಸಿದಿರಿ.
ಅಣ್ಣ :ಶಿಕ್ಷಕವೃತ್ತಿ, ಸಾಹಿತ್ಯ ಸೃಷ್ಟಿ, ಸಂಘಟನೆ, ತಾಳಮದ್ದಲೆ ಅರ್ಥಹೇಳುವುದು ಇವೆಲ್ಲವನ್ನು ನಾನು ಒಟ್ಟೊಟ್ಟಿಗೆ ಮಾಡುತ್ತಿದ್ದೆ. ರಾತ್ರಿ ನಿದ್ದೆಗೆಟ್ಟು ಮರುದಿನ ಶಾಲೆ ನಡೆಸುವುದು ಕಷ್ಟವೇ ಆಗಿತ್ತು. ಆದರೆ ನಾನು ವೃತ್ತಿ ಕಲಾವಿದನಲ್ಲ. ಅಪರೂಪಕ್ಕೆ ಅರ್ಥಹೇಳುವವನು. ಅದರಲ್ಲೂ ಮಾಸ್ತರಿಕೆ ನನ್ನ ಪ್ರೀತಿಯ ಆಯ್ಕೆ, ಅದಕ್ಕೆ ಊನಬರದಂತೆ ನಾನು ಇವನೆಲ್ಲ ನಿಭಾಯಿಸುತ್ತಿದ್ದೆ. ಮೊದಮೊದಲು ಬಹಳ ದಿನಗಳ ಕಾಲ ರಾತ್ರಿ ನಿದ್ದೆಗೆಟ್ಟು ಅರ್ಥ ಹೇಳುತ್ತಿದ್ದೆ. ಆದರೆ ನಂತರ ವಾರದ ಶನಿವಾರ ಹೇಗೊ ರಜೆ ಇರುತ್ತಿತ್ತಲ್ಲ. ಮುಂದೆ ನನ್ನ ಆರೋಗ್ಯದ ಕಾರಣದಿಂದಾಗಿ ನಾನು ಅರ್ಥಹೇಳುವುದು ಕಡಿಮೆಯಾಗುತ್ತ ಬಂತು. ಹಾಗೆಯೇ ಅರ್ಥಹೇಳುವ ಮೊದಲು ಆಕುರಿತು ಸಾಕಷ್ಟು ಚಿಂತನೆ ಮಾಡಬೇಕಾಗಿತ್ತು. ಹೀಗೆ ಹಗಲಲ್ಲಿ ರಾತ್ರಿಯ ಪ್ರಸಂಗದ ಚಿಂತೆ, ರಾತ್ರಿ ನಿದ್ದೆಗೆಡುವುದು ಮತ್ತು ಹಗಲಲ್ಲಿ ನಿದ್ದೆ….. ಇದರಿಂದ ನನ್ನ ಸಾಹಿತ್ಯ ಕೃಷಿಗೆ ತೊಂದರೆಯಾಗುತ್ತಿದೆ ಎಂದೆನಿಸಿರಬೇಕು.

ಇತ್ತೀಚೆಗೆ ನಿಮ್ಮಂಥ ಹೊಸಹುಡುಗರ ಒತ್ತಾಯಕ್ಕಾಗಿ ಒಂದೆರಡು ತಾಳಮದ್ದಲೆಯಲ್ಲಿ ಅರ್ಥ ಹೇಳಿದ್ದೇನೆ ಅಷ್ಟೇ.

ಬಹುಶಃ ಇದಕ್ಕೆ ವಿವರ ಬೇಡ ಅಂದುಕೊಂಡಿದ್ದೇನೆ.

‍ಲೇಖಕರು avadhi

October 6, 2018

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

೧ ಪ್ರತಿಕ್ರಿಯೆ

  1. Subbanna

    ಚಂದ ಬರ್ತಾಇದ್ದು.ಬಂಡಾರಿಯವರ ಅರ್ಥ.ಕ್ಯಾಸೆಟ್ ಆಗಿಲ್ಲವೇ??

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: