ನಮ್ಮ ಪ್ರತಿಹೆಜ್ಜೆಯ ಅಡಿಯಲ್ಲೂ ‘ಅವಳ’ ರಕ್ತದ ಗುರುತಿದೆ..

ನಂಗೇಲಿಯ ಬಲಿದಾನ ಕಾಡುತಿದೆ
ನಮ್ಮ ಪ್ರತಿಹೆಜ್ಜೆಯ ಅಡಿಯಲ್ಲೂ ‘ಅವಳ’ ರಕ್ತದ ಗುರುತಿದೆ

ಮನೆಯೆಂದರೆ ಮನೆ, ಬಯಲೆಂದರೆ ಬಯಲು ಎಂಬಂತಿದ್ದ ಆ ಮುಳಿಹುಲ್ಲಿನ ಮನೆಯೊಳಗೆ ಅಂದು ಯಾರಿಗೂ ಪ್ರವೇಶವಿರಲಿಲ್ಲ. ಐದು ಮಕ್ಕಳನ್ನು ಹೆತ್ತ ತಾಯಿ ಆರನೆಯ ಮಗುವಿಗೆ ಅಮ್ಮನಾಗುವ ಕ್ಷಣವದು. ಬೇಡವೆಂದರೆ ಬಸಿರು ನಿಲ್ಲುವುದೇನು? ಋತುಮಾನ ಬದಲಾದಂತೆ ಪ್ರಕೃತಿ ಚಿಗುರೊಡೆಯುವಂತೆ ಮತ್ತೆ, ಮತ್ತೆ ಆ ತಾಯಿಯ ಗರ್ಭದಲ್ಲಿ ಬಸಿರು ಮೊಳಕೆಯೊಡೆಯುತ್ತಲೇ ಇತ್ತು. ನೋವಿನಿಂದ ಮುಲುಗುತ್ತಿರುವ ಅಮ್ಮನ ಕೂಗು ಕಿವಿಗೆ ಬೀಳುತ್ತಿರಲಾಗಿ ಹಸಿವೆಯನ್ನು ಮರೆತ ಐದೂ ಗಂಡುಮಕ್ಕಳು ಒಂದು ಬಗೆಯ ದಿಗಿಲಿನಿಂದ ಗುಡಿಸಲಿನ ಹೊರಗೆ ಕುಳಿತಿದ್ದರು. ಜೀವವ ಸೀಳುವಂತಹ ಕೊನೆಯ ಕೂಗಿನೊಂದಿಗೆ ಮಗುವಿನ ಅಳುವಿನ ಶಬ್ದವೂ ಕೇಳಿಬಂದಿತ್ತು. ಹೆರಿಗೆ ಮಾಡಿಸಲು ಬಂದಿದ್ದ ಬೈದತಿ ಮುಗುಳ್ನಗುತ್ತಾ ಹೊರಬಂದು “ಅಮ್ಮುಣ್ಣಾ, ಹೆಣ್ಣು ಹುಟ್ಟಿದೆ” ಎಂದಳು. ಈ ಮಾತು ಕೇಳಿದ್ದೇ ಅಮ್ಮಣ್ಣು, “ಅಂದರೆ ನಂಗೆ ಮಗಳು ಹುಟ್ಟಿದಳು. ಏ ಮಕ್ಕಳ್ರಾ, ಇಲ್ಲೇ ಕುಳಿತಿರಿ. ಈ ಖುಶಿಗೆ ಇವತ್ತಂತೂ ಕಡ ಬರೆಸಿಯಾದರೂ ಕುಡಿಯಲೇಬೇಕು” ಎನ್ನುತ್ತಾ ಗಡಂಗಿನ ಕಡೆಗೆ ನಡೆದ. ಬೈದತಿ ನಗುತ್ತಾ ನುಡಿದಳು, “ನಿಮ್ಮಪ್ಪ ಇನ್ನೊಂದು ಗಂಡು ಹುಟ್ಟಿದ್ರೆ ಬೇಸರವಾಗಿದೆ ಅಂತ ಗಡಂಗಿನ ಹಾದಿ ಹಿಡಿಯುತ್ತಿದ್ದ. ಅಂತೂ ಕುಡೀಲಿಕ್ಕೊಂದು ನೆವ ಬೇಕು ಅಷ್ಟೆ. ಅಮ್ಮ ತುಂಬಾ ಸುಸ್ತಾಗಿದ್ದಾಳೆ. ವರ್ಷಕ್ಕೊಂದು ಹೆರ್ತಾ ಇದ್ರೆ ಮತ್ತೆಂತ ಆಗ್ತದೆ? ನೀವು ಹಸಿವೆ ಅಂತ ಅವಳಿಗೆ ಕಾಟ ಕೊಡಬೇಡಿ. ಒಲೆ ಉರಿಸಿ ಗಂಜಿಗಿಟ್ಟು ಹೋಗ್ತೇನೆ. ಬೆಂಕಿ ಮಾಡ್ತಾ ಇರಿ. ಗಂಜಿ ಬೆಂದಮೇಲೆ ಅಮ್ಮನಿಗೂ ಬಿಸಿ, ಬಿಸಿಯಾಗಿ ಒಂದು ಬಟ್ಟಲು ಕೊಟ್ಟುಬಿಡಿ.” ಒಲೆಯ ಹೊತ್ತಿಸಿ ಗಂಜಿಗಿಟ್ಟು ಬೈದತಿ ಮನೆಯ ದಾರಿ ಹಿಡಿದಳು.

ಬಿಸಿಯಾದ ಗಂಜಿಬಟ್ಟಲನ್ನು ಅಮ್ಮನೆದುರಿಗಿಟ್ಟಾಗ ಅಮ್ಮನಿಗೆ ಅದೇ ತಾನೇ ಎಚ್ಚರವಾಗಿತ್ತು. ಜೀವನದ ಅತಿಕಷ್ಟದ ಪ್ರಯಾಣವನ್ನು ಮುಗಿಸಿದ್ದ ಹಸುಗೂಸು ನಿದ್ದೆಯಲ್ಲಿತ್ತು. ಅಮ್ಮ ತುತ್ತು ಬಾಯಿಗಿಡುವ ಮುನ್ನ, “ನೀವೆಲ್ಲ ಉಂಡಿರೇನು? ಅಪ್ಪ ಎಲ್ಲಿ?” ಎಂದು ಕೇಳಿದಳು. ಮಕ್ಕಳು ತಂಗಿ ಹುಟ್ಟಿದ್ದಕ್ಕಾಗಿ ಅಪ್ಪನಿಗಾದ ಖುಶಿಯನ್ನು ಬಣ್ಣಿಸುತ್ತಾ, ಗಡಂಗಿಗೆ ಹೋದ ಸುದ್ದಿಯನ್ನು ಹೇಳಿದರು. ಅಮ್ಮ ಏನನ್ನೋ ನೆನೆದು ವಿಷಣ್ಣಳಾದಳು. ಗಂಡಿಗಾದರೆ ಎಷ್ಟು ಸುಲಭ? ಬೇಸರವಾಗಲೀ, ಸಂತೋಷವಾಗಲೀ ಗಡಂಗಿನ ದಾರಿಯಾದರೂ ಇದೆ. ಆದರೆ ಹೆಣ್ಣಿಗೆ? ಎಲ್ಲವನ್ನೂ ಒಡಲಲ್ಲಿಟ್ಟು ಸಾಕಲೇಬೇಕು. ಸಾಲದ್ದಕ್ಕೆ ದೇವರು ಸಾಲು, ಸಾಲು ಮಕ್ಕಳನ್ನು ಬೇರೆ ಕೊಡುತ್ತಾನೆ. ಇಷ್ಟರವರೆಗೆ ಎಲ್ಲ ಗಂಡುಮಕ್ಕಳೇ ಆದ್ದರಿಂದ ಚಿಂತೆಯಿರಲಿಲ್ಲ. ಈಗ ಹೆಣ್ಣು ಮಗುವೊಂದು ಹುಟ್ಟಿದೆ. ಮತ್ತದಕ್ಕೆ ತನ್ನದೇ ಸ್ಥಿತಿ. ಎಲ್ಲರೆದುರಿಗೆ ಎದೆ ತೆರೆದುಕೊಂಡು ಓಡಾಡಬೇಕು. ಇನ್ನು ನಾಲ್ಕಾರು ದಿನಗಳಾದರೂ ತನಗೆ ವಿಶ್ರಾಂತಿ ಬೇಕು. ಮನೆಯಲ್ಲಿ ಎರಡು ದಿನಗಳಿಗಾಗುವಷ್ಟು ಮಾತ್ರವೇ ಅಕ್ಕಿಯಿದೆ. ಮಕ್ಕಳಿನ್ನೂ ದುಡಿಯಲು ಹೊರಡುವಷ್ಟು ಬೆಳೆದಿಲ್ಲ. ಮೊನ್ನೆ ತಾನೇ ಮೊದಲ ಮಗನನ್ನು ಕಂಡ ದಣಿಗಳು ಕೆಲಸಕ್ಕೆ ಕಳಿಸೆಂದು ವರಾತ ಹಚ್ಚುತ್ತಿದ್ದಾರೆ. ದಣಿಯರ ಕೆಲಸವೆಂದರೇನು ಸಾಮಾನ್ಯವೆ? ಎಷ್ಟೊಂದು ರೀತಿ ನೀತಿಗಳಿವೆ? ಏನೂ ತಿಳಿಯದು ಅವನಿಗೆ. ಕೆಲವನ್ನಾದರೂ ಕಲಿಸಿ ಕಳಿಸದಿದ್ದರೆ ಬಾರುಕೋಲಿನಿಂದ ಪೆಟ್ಟುತಿಂದೇ ಸಾಯುತ್ತಾನೆ. ಯೋಚಿಸುತ್ತಿದ್ದ ಅಮ್ಮನಿಗೆ ಮಗುವಿನ ಅಳುವೂ ಕೇಳಿಸುತ್ತಿರಲಿಲ್ಲ.

ಗಡಂಗಿನಿಂದ ಬಂದ ಗಂಡ ದನಿಯೇರಿಸಿ ಎಚ್ಚರಿಸಿದಾಗಲೇ ಈಚೆಯ ಲೋಕಕ್ಕೆ ಬಂದಳು. “ಏಯ್, ಮಗು ಕೂಗ್ತಾ ಇದೆ ಕೇಳೋದಿಲ್ವೇನು? ಮೊದಲು ಅವಳಿಗೆ ಹಾಲುಣಿಸು. ನನ್ನ ಜೀವ ಅವಳು. ನೋಡು ಎಷ್ಟು ಮುದ್ದಾಗಿದ್ದಾಳೆ. ನಾನವಳಿಗೆ ನಂಗೇಲಿ (ಸುಂದರಿ) ಅಂತಾನೇ ಹೆಸರಿಡ್ತೇನೆ.” ಎಂದು ತೊದಲುತ್ತಾ ನಾಮಕರಣ ಶಾಸ್ತ್ರವನ್ನೂ ಮುಗಿಸಿಬಿಟ್ಟ. ಅಮ್ಮ ಮಗುವನ್ನು ತನ್ನ ಎದೆಗಿಟ್ಟು ಹಾಲುಣಿಸತೊಡಗಿದಳು. ಜರಜರನೆ ಸೋರುವ ತನ್ನ ಇನ್ನೊಂದು ಎದೆಯನ್ನು ಉಜ್ಜಿಕೊಳ್ಳುತ್ತಾ ಅವಳು ಯೋಚಿಸುತ್ತಿದ್ದಳು, “ದೇವರೇ, ನಾಯರ್‍ಗಳ ಹೆಂಡಿರಂತೆ ಎದೆಯ ಮೇಲೊಂದು ವಸ್ತ್ರ ಧರಿಸುವಂತಿದ್ದರೆ ಎಷ್ಟು ಚೆನ್ನಾಗಿತ್ತು. ಆದರೆ ಅದಕ್ಕೂ ಇಲ್ಲಿ ಕರ ಕೊಡಬೇಕು. ಅದೂ ತಮ್ಮ, ತಮ್ಮ ಎದೆಯ ಗಾತ್ರಕ್ಕೆ ಅನುಸಾರವಾಗಿ. ತಕ್ಕಮಟ್ಟಿಗೆ ಅನುಕೂಲಸ್ತರಾದ ತನ್ನ ತಂದೆ ತನ್ನ ಎದೆ ಮುಚ್ಚಲೆಂದು ಸರಕಾರಕ್ಕೆ ಕರ ನೀಡುತ್ತಿದ್ದರು. ಆಗೆಲ್ಲ ಹೊರಗೆ ಓಡಾಡಲು ಮುಜುಗರವೆನಿಸುತ್ತಿರಲಿಲ್ಲ. ಆದರೆ ಮದುವೆಯಾದ ಮೇಲೆ ಅಮ್ಮಣ್ಣು ಮಾತ್ರ ಒಂದು ಪೈಸೆಯನ್ನೂ ಕರವೆಣದು ನೀಡಲಿಲ್ಲ. ಆಸೆಯಿಂದ ಕೇಳುವಾಗಲೆಲ್ಲ, “ನಿನ್ನ ಮೊಲೆಯ ಗಾತ್ರಕ್ಕೆ ಕರ ಕಟ್ಟಬೇಕೆಂದರೆ ಅವನು ದೊರೆಯೇ ಆಗಿರಬೇಕು” ಎಂದು ಉಡಾಫೆಯ ಮಾತನ್ನಾಡುತ್ತಾನೆ. ಬೇರೆ ದಿನಗಳನ್ನು ಹೇಗೋ ಕಳೆಯಬಹುದು. ಆದರೆ ಈ ಬಾಣಂತನದ ದಿನಗಳು ಮಾತ್ರ ಯಮಹಿಂಸೆ. ದಣಿಯರ ಮನೆಯಲ್ಲಿ ಬಗ್ಗಿ ಕೆಲಸ ಮಾಡುವಾಗಲೆಲ್ಲ ಹಾಲು ಉಕ್ಕೇರಿ ಹರಿಯುತ್ತದೆ. ಆಚೀಚೆ ಗಂಡಸರಿದ್ದರೆ ಜೀವ ಹೋದಂತಾಗುತ್ತದೆ. ದಣಿಯರ ಮನೆಯ ಹೆಂಗಸರೂ ಕಡಿಮೆಯೇನಿಲ್ಲ. “ಏನೇ ಅಮ್ಮಣ್ಣಿ, ಒಳ್ಳೆ ಜವಾರಿ ಎಮ್ಮೆ ಥರಾ ಸುರೀತದಲ್ಲೇ” ಎಂದು ನಗುತ್ತಾರೆ. ಹಾಗೆಂದು ಮನೆಯಲ್ಲಿ ಕುಳಿತರೆ ಬದುಕು ಸಾಗಬೇಕಲ್ಲ. ಈ ನಂಗೇಲಿ ಬೆಳೆಯುವ ಹೊತ್ತಿಗಾದರೂ (ಮುಲಕರಂ) ಮೊಲೆಯ ಮೇಲಿನ ತೆರಿಗೆ ಕಟ್ಟುವಷ್ಟು ಸ್ಥಿತಿವಂತರಾಗಬೇಕು. ಹೀಗೆಲ್ಲ ಯೋಚಿಸುತ್ತಲೇ ನಿದ್ದೆಹೋದಳು.

ನಂಗೇಲಿ ಹುಟ್ಟಿದ್ದು ಕೇರಳದ ಚೇರ್ತಲಾ ಗ್ರಾಮದಲ್ಲಿ. ಬಡ ಈಳವ ಕುಟುಂಬ ಅವರದ್ದು. ಬಡತನವನ್ನು ಹೇಗಾದರೂ ಸಹಿಸಬಹುದು, ಆದರೆ ಜಮೀನ್ದಾರರ ಶೋಷಣೆಯ ಜಾಲ ಮಾತ್ರ ಉಸಿರುಗಟ್ಟಿಸುತ್ತಿತ್ತು. ಐದು ಗಂಡುಗಳ ಮೇಲೆ ಜನಿಸಿದ ನಂಗೇಲಿಗೆ ಪ್ರೀತಿಗೇನೂ ಕೊರತೆಯಿರಲಿಲ್ಲ. ಅಣ್ಣಂದಿರ ಜೊತೆ ಆಡುತ್ತಾ, ಹಾಡುತ್ತಾ ಮುದ್ದಾಗಿ ಬೆಳೆಯುತ್ತಿದ್ದಳು. ಕಪ್ಪು ಬಣ್ಣದ ನಂಗೇಲಿಗೆ ಹೊಳೆಯುವ ಬಟ್ಟಲುಗಂಗಳಿದ್ದವು. ಅವುಗಳ ಮೇಲೆ ಹಬ್ಬಿದ್ದ ದಟ್ಟವಾದ ಹುಬ್ಬು ಅವಳ ಬಟ್ಟಲುಗಂಗಳಿಗೆ ಅಲಂಕಾರದಂತಿತ್ತು. ಮಿರುಗುವ ಮೈಬಣ್ಣದ ನಂಗೇಲಿ ಅಲ್ಲಾಡದೇ ನಿಂತರೆ ಕಡೆದಿಟ್ಟ ಶಿಲಾಬಾಲಿಕೆಯಂತಿದ್ದಳು. ಅಮ್ಮ ಅವರಿವರ ಹೊಲದಲ್ಲಿ ಕೆಲಸ ಮಾಡುವಾಗ ನಂಗೇಲಿ ಅಲ್ಲಿಯೇ ಬದುವಿನ ಮೇಲೆ ಕುಳಿತು ಮಣ್ಣಾಟವಾಡುತ್ತಿದ್ದಳು. ಅಲ್ಲಿಗೇನಾದರೂ ದಣಿಯರು ಬಂದರೆಂದರೆ ಸಾಕು, ಅಷ್ಟು ದುರದಲ್ಲಿರುವಾಗಲೇ ಅಮ್ಮ ಓಡೋಡಿ ಬಂದು ಇವಳನ್ನು ಬದಿಗೆ ಎಳೆದೊಯ್ಯೊತ್ತಿದ್ದಳು. ಒಮ್ಮೆ ಆಟದ ಭರದಲ್ಲಿ ಮೈಮರೆತಿದ್ದ ಇವಳ ಅಣ್ಣಂದಿರು ದಣಿಗಳು ಬರುವಾಗ ದಾರಿಗಡ್ಡವಾಗಿ ನಿಂತಿದ್ದಕ್ಕೆ ಅವರ ಜೊತೆಗಿರುವ ಆಳು ಅವರನ್ನು ಅಲ್ಲಿಯೇ ನಿಲ್ಲಿಸಿ, ಬಾರುಕೋಲಿನಿಂದ ಥಳಿಸಿದ್ದ. ಅಮ್ಮ ಮನೆಗೆ ಬಂದು ಉಪ್ಪಿನಶಾಖ ನೀಡಿದ್ದು ಅವಳ ನೆನಪಿನಿಂದ ಮಾಸಿಲ್ಲ.

ನಂಗೇಲಿ ಇತ್ತೀಚೆಗೆ ಮನೆಯೊಳಗೇ ಇರಲು ಇಷ್ಟಪಡುತ್ತಿದ್ದಳು. ಹೊರಗೆ ದಿನವಿಡೀ ದುಡಿಯುವ ಮನೆಯವರಿಗೆಲ್ಲ ಅಡುಗೆ ಮಾಡುವುದೆಂದರೆ ಅವಳಿಗೆ ಇಷ್ಟ. ಒಂದುದಿನ ಅಡುಗೆ ಕೆಲಸವೆಲ್ಲ ಮುಗಿದ ಮೇಲೆ ಅವಳಿಗನಿಸಿತು, ತನಗೂ ದಣಿಯರ ಮಕ್ಕಳು ಧರಿಸುವಂತಹ ದಾವಣಿಯಿದ್ದರೆ ಎಷ್ಟು ಚೆನ್ನ! ಗಾಳಿ ಬೀಸಿದಾಗ ಬುರಬುರನೆ ಉಬ್ಬಿ ನಿಲ್ಲುವ ದಾವಣಿಯ ಚೆಂದಕ್ಕೆ ಅವಳು ಮಾರುಹೋಗಿದ್ದಳು. ಅಪ್ಪ, ಅಮ್ಮಂದಿರಂತೂ ಅದನ್ನು ಕೊಡಿಸುವುದು ದೂರದ ಮಾತು. ಹಾಗಾಗಿ ಅವಳು ದಾವಣಿಯೊಂದನ್ನು ಹೊಲಿದುಕೊಳ್ಳಲು ವಿಶೇಷ ಉಪಾಯವೊಂದನ್ನು ಕಂಡುಕೊಂಡಿದ್ದಳು. ಹೇಗೂ ಅಣ್ಣಂದಿರಿಬ್ಬರು ಸೊಂಟಕ್ಕೆ ಸುತ್ತಿಕೊಳ್ಳುವ ತುಂಡುಬಟ್ಟೆಯಿದೆ. ಅದನ್ನೇ ಕೂಡಿಸಿ ಹೊಲಿದರೆ ತನ್ನ ಅಂಗಾಲಿನವರೆಗೂ ಹರಡಿಕೊಳ್ಳುತ್ತದೆ. ಜಡೆಗೆ ಬಿಗಿದುಕೊಳ್ಳುವ ರಿಬ್ಬನ್‍ನ ಸುತ್ತಲೂ ಅದನ್ನಿಟ್ಟು ಹೊಲಿದರೆ ಚೆಂದದ ದಾವಣಿ ಸಿದ್ದವಾಗುತ್ತದೆ. ಅದಕ್ಕೆಂದೇ ಅವಳೊಂದು ಸೂಜಿ ಮತ್ತು ದಾರವನ್ನು ಬೇರೆಯವರಿಂದ ಸಾಲವಾಗಿ ತಂದಿದ್ದಳು. ಬೇಗ ಬೇಗನೆ ಕೆಲಸ ಮುಗಿಸಿ ದಾವಣಿ ಹೊಲಿಯತೊಡಗಿದಳು. ಸಂಜೆ ಅಮ್ಮ ಮನೆಗೆ ಬರುವ ಮುನ್ನ ಅದನ್ನು ಹಾಕಿಕೊಂಡು ಸುತ್ತ ತಿರುಗುತ್ತಾ, ಅದು ತನ್ನ ಕಾಲಿನ ಸುತ್ತಲೂ ಬಲೂನಿನಂತೆ ಉಬ್ಬಿಕೊಳ್ಳುವುದನ್ನು ನೋಡುತ್ತಾ, ನಿಜಕ್ಕೂ ಸ್ವರ್ಗದಲ್ಲಿಯೇ ತೇಲುತ್ತಿದ್ದಳು. ಅಮ್ಮ ತನ್ನ ಜಾಣತನಕ್ಕೆ ಖಂಡಿತ ಮೆಚ್ಚುವಳೆಂದು ಕನಸು ಕಾಣುತ್ತಿದ್ದಳು.

ಆದರೆ ನಡೆದ ಸಂಗತಿ ಮಾತ್ರ ಅದಕ್ಕೆ ವ್ಯತಿರಿಕ್ತವಾಗಿತ್ತು. ಇವಳು ಅಂಗಾಲಿನವರೆಗೆ ಬಟ್ಟೆ ಧರಿಸಿದದ್ದನ್ನು ಕಂಡವಳೇ ಅಮ್ಮ ಕೆಂಡದಂತಹ ಕೋಪ ತಾಳಿ ಇವಳ ಜುಟ್ಟು ಹಿಡಿದು ಬಡಿದಿದ್ದಳು. “ನಿನಗೆ ಒಂಚೂರಾದರೂ ಬಿದ್ದಿ ಬೇಡವೇನೆ? ನಾವೇನು, ನಮ್ಮ ಯೋಗ್ಯತೆಯೇನು? ಒಳ್ಳೆ ದಣಿಗಳ ಮನೆಯ ಹೆಣ್ಣುಗಳಂತೆ ಬಟ್ಟೆ ಧರಿಸಿರುವೆಯಲ್ಲ. ದಣಿಯರ ಕಣ್ಣಿಗೇನಾದರೂ ಬಿದ್ದರೆ ನಿನ್ನ ಜೊತೆಗೆ ನನ್ನನ್ನೂ ಸೇರಿಸಿ ಊರ ತುಂಬಾ ಬೆತ್ತಲೆ ಮೆರವಣಿಗೆ ಮಾಡುತ್ತಾರೆ. ಮೊದಲು ನಿನ್ನ ವೇಷವನ್ನು ಕಳಚಿಡು. ಇನ್ನೆಲ್ಲಿಯಾದರೂ ಮುಂಗಾಲಿನ ಕೆಲಗೆ ಬಟ್ಟೆ ಹಾಕಿದೆಯೋ ಬರೆ ಇಡುತ್ತೇನೆ, ನೋಡು” ಎಂದು ಹೆದರಿಸಿದಳು. ಸುಮಾರು ಹೊತ್ತು ಅಳುತ್ತಿದ್ದ ನಂಗೇಲಿ, ರಾತ್ರಿ ಅಮ್ಮನ ಮಡಿಲಲ್ಲಿ ಮಲಗಿ ಕೇಳಿದಳು, “ಯಾಕಮ್ಮಾ, ನಾವು ಅಂಗಾಲವರೆಗೆ ಬಟ್ಟೆ ಹಾಕಬಾರದು? ಮತ್ತೆ ದಣಿಯರ ಮಕ್ಕಳೆಲ್ಲ ಮೈತುಂಬ ಬಟ್ಟೆ ಹಾಕುತ್ತಾರೆ?” ಅಮ್ಮನ ಸಿಟ್ಟು ಶಮನಗೊಂಡಿತ್ತು. ಮಗಳ ಬೆನ್ನು ನೇವರಿಸುತ್ತಾ ಅಮ್ಮ ಹೇಳಿದಳು, “ನೋಡು ಮಗಳೇ, ನಾವು ಕೀಳು ಜಾತಿಯವರು. ಹಾಗಾಗಿ ಮೇಲು ಜಾತಿಯವರಂತೆ ಮೊಣಕಾಲ ಕೆಳಗೆ, ಸೊಂಟಕ್ಕಿಂತ ಮೇಲೆ ಬಟ್ಟೆ ಧರಿಸಬಾರದು. ಹಾಗೆ ಧರಿಸಿ ದಣಿಯರ ಮುಂದೆ ಹೋಗುವುದೆಂದರೆ ಅದು ಅವರಿಗೆ ಮಾಡುವ ಅವಮಾನ.”

ನಂಗೇಲಿ ಅಮ್ಮನ ಮಾತನ್ನು ನಡುವಲ್ಲೇ ತುಂಡರಿಸುತ್ತಾ ನುಡಿದಳು, “ಮತ್ತೆ ಅವರು?” ಅಮ್ಮ ಹೇಳಿದಳು, “ಅವರು ದೇವರ ಮಕ್ಕಳು. ದೇವರಿಗೆ ಪೂಜೆ ಮಾಡುವವರು. ಅವರು ಮಾಡಿದ್ದನ್ನೆಲ್ಲ ನಾವು ಮಾಡಬೇಕೆಂದು ಬಯಸಿದರೆ ದೇವರು ನಮ್ಮ ಮೇಲೆ ಕೋಪಗೊಳ್ಳುತ್ತಾನೆ.” ನಂಗೇಲಿ ಒಂದು ಕ್ಷಣ ಯೋಚಿಸಿ ನುಡಿದಳು, “ಮತ್ತೆ? ನಮ್ಮ ನೆರೆಮನೆಯ ಗೊರಬ್ಬು ಎದೆಯ ಮೇಲೆ ಬಟ್ಟೆ ಹಾಕುತ್ತಾಳೆ, ಹಾಗೆ ದಾವಣಿಯನ್ನೂ ಕೂಡ. ಅವಳು ನಮ್ಮ ಜಾತಿಯವಳೆ ತಾನೆ?” ಅಮ್ಮ ನಿಟ್ಟುಸಿರಿಟ್ಟು ನುಡಿದಳು, “ಅವರು ನಮ್ಮಂತೆ ಬಡವರಲ್ಲ ಮಗಳೆ. ಎದೆಯ ಮೇಲೆ ಬಟ್ಟೆ ಹಾಕಲು ಅವರು ಸರಕಾರಕ್ಕೆ ಕರ ಕಟ್ಟಿ ಪರವಾನಗಿ ಪಡೆದಿದ್ದಾರೆ.” ನಂಗೇಲಿ ಯಾಚನೆಯ ದನಿಯಲ್ಲಿ ಅಮ್ಮನನ್ನು ಕೇಳಿದಳು, “ಅಮ್ಮಾ, ನೀನು ಎಂದಾದರೊಂದು ದಿನ ಹಾಗೆಯೇ ಕರ ಕಟ್ಟಿ, ನನಗೂ ಬಟ್ಟೆ ತೊಡುವಂತೆ ಮಾಡುತ್ತೀಯಾ? “ ಅಮ್ಮ ಮಗಳನ್ನು ತಬ್ಬಿ ಹೇಳಿದಳು, “ಹಾಗೆಯೇ ಆಗಲಿ”

ಅಮ್ಮನಿಗೆ ಒಂದೇ ಆಸೆ. ನಂಗೇಲಿಗೆ ಮೊಲೆ ಮೂಡುವ ಮೊದಲು ಮೊಲೆಕರ ನಿಡುವಷ್ಟು ಹಣ ಸಂಪಾದಿಸಲೇಬೇಕು. ಅದಕ್ಕಾಗಿ ಅವಳು ಹಗಲಿರುಳು ದುಡಿಯುತ್ತಿದ್ದಳು. ದಿನದ ದಿನಸಿಯಲ್ಲಿ ಪುಡಿಗಾಸು ಉಳಿಸಿ, ವಾರಕ್ಕೊಮ್ಮೆ ಎಣಿಸುತ್ತಿದ್ದಳು. ತನ್ನ ಮಗಳೂ ತನ್ನಂತೆಯೇ ದಷ್ಟಪುಷ್ಟ. ಹಾಗಾಗಿ ಇವಳ ಮೊಲೆಯೂ ದೊಡ್ಡದೇ ಇದ್ದೀತು. ಅದಕ್ಕೆ ಬೇಕಾದಷ್ಟು ಹಣ ಸೇರಿಸಬೇಕೆಂದು ಯೋಚಿಸುತ್ತಿದ್ದಳು. ನಂಗೇಲಿಯೋ ದಿನದಿಂದ ದಿನಕ್ಕೆ ಎಳೆಬಾಳೆಯಂತೆಯೇ ಬೆಳೆಯುತ್ತ ದೊಡ್ಡವಳಾದಳು. ಅಮ್ಮ ಒಂದು ದಿನ ಸರಕಾರದವರಿಗೆ ಹೇಳಿ ಕಳಿಸಿದಳು. ಅವರು ಬಂದು ನಂಗೇಲಿಯ ಮೊಲೆಯನ್ನು ಅಳತೆ ಮಾಡಿದರು. ಅಪರಿಚಿತ ಗಂಡಸರು ತನ್ನ ಎದೆಯ ಮೇಲೆ ಕೈಯ್ಯಾಡಿಸಿದಾಗ ನಂಗೇಲಿಗೆ ಮೈಮೇಲೆಲ್ಲಾ ಚೇಳು ಹರಿದಂತಾಯಿತು. ಅಲ್ಲಿಯೇ ನಿಂತ ನೋಡುತ್ತಿದ್ದ ಅಮ್ಮನಿಗೂ ಅವರು ಬೇಕಂತೆಯೇ ಅವಳ ಎದೆಯನ್ನು ಮತ್ತೆ, ಮತ್ತೆ ಮುಟ್ಟಿದಂತೆ ಅನಿಸಿದರೂ ಏನೂ ಮಾಡುವಂತಿರಲಿಲ್ಲ. ಕೊನೆಗೊಮ್ಮೆ ಅಳತೆ ಮುಗಿಸಿದ ಸರಕಾರದ ಏಜೆಂಟರು ಅವಳು ಕಟ್ಟಬೇಕಾದ ಹಣದ ವಿವರವನ್ನು ನೀಡಿ ಹೋದರು. ಅವರು ಹೇಳಿದಷ್ಟು ಹಣ ತನ್ನಲ್ಲಿದೆಯೆಂದು ಅಮ್ಮ ಖುಶಿಗೊಂಡಳು. ಮಗಳಿಗೆಂದು ಅಪ್ಪ ಚೆಂದದ ಎದೆವಸ್ತ್ರವನ್ನೂ ತಂದಿದ್ದ.

ಆದರೆ ಮಾರನೇ ದಿನ ಅವಘಡವೊಂದು ಸಂಭವಿಸಿಯೇಬಿಟ್ಟಿತು. ತಾನು ಕೆಲಸ ಮಾಡುತ್ತಿದ್ದ ದಣಿಯರ ಮನೆಯಲ್ಲಿಯೇ ಕೆಲಸ ಮಾಡುತ್ತಿದ್ದ ಹುಡುಗಿಯೊಬ್ಬಳನ್ನು ನಂಗೇಲಿಯ ದೊಡ್ಡ ಅಣ್ಣ ಕೂಡಿಕೆ ಮಾಡಿಕೊಂಡು ಮನೆಗೆ ಕರೆದು ತಂದಿದ್ದ. ಅಣ್ಣ ಮದುವೆಯಾಗಿರುವನೆಂಬ ಸುದ್ದಿ ಊರಿಡೀ ಹರಡಿಬಿಟ್ಟಿತು. ಹಾಗಾಗಿ ಮದುವೆಯ ಕರವನ್ನು ವಸೂಲಿ ಮಾಡಲು ಸರಕಾರದ ಏಜೆಂಟರು ಮನೆಯವರೆಗೂ ಹುಡುಕಿಕೊಂಡು ಬಂದರು. ನಂಗೇಲಿಯ ಮೊಲೆಕರಕ್ಕೆಂದು ಕೂಡಿಟ್ಟ ಹಣ ಅಣ್ಣನ ಮದುವೆಯ ಕರಕ್ಕೆ ಜಮೆಯಾಗಿತ್ತು. ನಂಗೇಲಿ ತಂದೆ ತಂದಿದ್ದ ಎದೆವಸ್ತ್ರವನ್ನು ಮನೆಯೊಳಗೇ ಧರಿಸಿ, ಕಣ್ಣೀರು ಸುರಿಸಿದಳು.

ಸಾಲಾಗಿ ಅಣ್ಣಮದಿರು ಮದುವೆಯಾಗುತ್ತಲೇ ಹೊದದ್ದರಿಂದ ನಂಗೇಲಿಯ ಎದೆಮುಚ್ಚುವ ವಿಷಯ ಯಾರ ತಲೆಯಲ್ಲೂ ಇರಲಿಲ್ಲ. ಏರುತ್ತಿರುವ ಜನರ ಸಂಖ್ಯೆಗೆ ಊಟ ಸಿಗುವುದೇ ದುಸ್ತರವಾದಾಗ ಎದೆಮುಚ್ಚುವ ಬಗೆಗೆಲ್ಲಾ ಯಾರು ತಲೆ ಕೆಡಿಸಕೊಳ್ಳುತ್ತಾರೆ? ಅಮ್ಮನಿಗೆ ಇತ್ತೀಚೆಗೆ ಒಂದೇ ಯೋಚನೆ. ನಮಗೇಲಿಗೊಂದು ಮದುವೆ ಮಾಡಿಬಿಡಬೇಕು. ಹೆಣ್ಣುಬಾಕ ದಣಿಯರ ಕಣ್ಣಿಗೆ ಅವಳು ಬೀಳುವ ಮುನ್ನ ಕೊರಳಿಗೊಂದು ತಾಳಿ ಬಿಗಿಸಬೇಕು. ಅವಳ ಮೊರೆ ದೇವರಿಗೆ ಕೇಳಿಸಿರಬೇಕು. ಚಿರುಕಂಡನ್ ಎಂಬ ಸುಂದರ ಯುವಕ ನಂಗೇಲಿಯನ್ನು ಮದುವೆಯಾಗಲು ಮುಂದೆ ಬಂದ. ನಂಗೇಲಿಯ ಅಣ್ಣಂದಿರು ಮದುವೆಯ ಕರವನ್ನು ತುಂಬಿ ತಂಗಿಯನ್ನು ಚಿರುಕುಂಡನ್ ಕೈಯ್ಯಲ್ಲಿ ಇಟ್ಟರು. ಮದುವೆಯ ದಿನ ನಂಗೇಲಿ ಹಠಮಾಡು ಅಪ್ಪ ತನಗೆಂದು ಎಂದೋ ತಂದಿದ್ದ ಎದೆವಸ್ತ್ರವನ್ನು ಧರಿಸಿದಳು.

ಗಂಡನ ಮನೆಗೆ ಬಂದ ನಂಗೇಲಿ ಚಿರುಕುಂಡನ್ ನಿಗೆ ತನ್ನ ಮನಸಿನ ಆಸೆಯನ್ನು ಹೇಳಿದಳು. ಎದೆವಸ್ತ್ರವನ್ನು ಸದಾ ಧರಿಸಬೇಕೆಂಬ ಬಯಕೆಯನ್ನು ಅವನ ಮುಂದಿಟ್ಟಳು. ಚಿರುಕುಂಡನ್ ತಂದೆ ತಾಯಿಯರಿಲ್ಲದ ಅನಾಥ. ಪ್ರೀತಿಯ ಹೆಂಡತಿ ಕೇಳುವಾಗ ಇಲ್ಲವೆನ್ನಲಾಗಲಿಲ್ಲ. ಆದರೆ ಮುಲಕರಂ ಕಟ್ಟಲು ಅವನಲ್ಲಿ ಹಣವಿಲ್ಲ. ನಂಗೇಲಿ ಅವನಿಗೆ ಧೈರ್ಯ ಹೇಳಿದಳು, ನಮ್ಮ ಮೈಮುಚ್ಚಲು ನಾವ್ಯಾಕೆ ಇನ್ನೊಬ್ಬರಿಗೆ ಹಣ ಕಟ್ಟಬೇಕು. ಕರಕೊಡದೇ ಬಟ್ಟೆ ಧರಿಸುವ ತೀರ್ಮಾನ ಮಾಡಿದಳು. ಆದರೆ ಚಿರುಕುಂಡನ್‍ಗೆ ಸರಕಾರವನ್ನು, ದಣಿಯರನ್ನು ಎದುರಿಸುವ ಧೈರ್ಯವಿರಲಿಲ್ಲ. ಹಾಗಾಗಿ ತಾನು ದೂರದೂರಿಗೆ ಕೆಲಸ ಮಾಡಲು ಹೋಗುವುದಾಗಿಯೂ, ಅಲ್ಲಿಂದ ಬಂದಮೇಲೆ ಮುಲಕರಂ ನ್ನು ನೀಡುವೆನೆಂದು ಅಧಿಕಾರಿಗಳಿಗೆ ಹೇಳುವುದೆಂದು ತೀರ್ಮಾನಿಸಿದ. ಹಾಗೆಯೇ ಅವಳಿಗೆಂದು ಹೊಸದಾದ ಎದೆವಸ್ತ್ರವನ್ನು ತನ್ನ ನೆನಪಿಗೆಂದು ನೀಡಿ, ಮದುವೆಯಾದ ಹೊಸ ಹೆಂಡತಿಯನ್ನು ಬಿಟ್ಟಿರಲು ಮನಸ್ಸಿಲ್ಲವಾದರೂ ದೂರದೂರಿಗೆ ಹೊರಟ. ತನಗಾಗಿ ದೂರ ಹೊರಟಿರುವ ಗಂಡನನ್ನು ಕಣ್ಣೀರಿನೊಂದಿಗೆ ನಂಗೇಲಿ ಬೀಳ್ಕೊಟ್ಟಳು.

ನಂಗೇಲಿ ಎದೆವಸ್ತ್ರ ಧರಿಸುವ ಸುದ್ಧಿ ಅದು ಹೇಗೋ ಸರಕಾರದ ಕಿವಿಗೆ ಬಿದ್ದಿತ್ತು. ಏಜೆಂಟರಿಬ್ಬರು ಅವಳ ಮನೆಯೆದುರು ಬಂದು ಕರ ನೀಡುವಂತೆ ಆಗ್ರಹಿಸಿದರು. ನಂಗೇಲಿ ತನ್ನ ಗಂಡ ಹೇಳಿದ ವಿಷಯವನ್ನು ಅವರಿಗೆ ಹೇಳಿದಳು. ಅವರು ಎಷ್ಟೇ ಒತ್ತಾಯಿಸದರೂ ಅವಳು ತನ್ನ ಎದೆವಸ್ತ್ರವನ್ನು ತೆಗೆಯಲಿಲ್ಲ ಮತ್ತು ಕರವನ್ನೂ ನೀಡಲಿಲ್ಲ. ಮರುದಿನ ಅನಾಹುತವೊಂದು ನಡೆದುಹೋಯ್ತು. ನಂಗೇಲಿ ದಿನದಂತೆಯೇ ಮನೆಯೊಡೆಯನ ಹೊಲದಲ್ಲಿ ಕೆಲಸ ಮಾಡುತ್ತಿದ್ದಳು. ಯಜಮಾನ ಬಂದುದು ಭತ್ತದ ಸಸಿಯನ್ನು ನೆಡುವುದರಲ್ಲಿ ಮಗ್ನಳಾದ ಅವಳಿಗೆ ಕಾಣಿಸಲಿಲ್ಲ. ತಾನು ಬಂದರೂ ಲೆಕ್ಕಿಸದೇ ತನ್ನೆದುರಿಗೇ ಎದೆವಸ್ತ್ರವನ್ನು ಧರಿಸಿ ಕೆಲಸ ಮಾಡುತ್ತಿರುವ ನಂಗೇಲಿಯ ಉದ್ಧಟತನವನ್ನು ಅವನು ಕಡೆಗಣಿಸಲು ಸಿದ್ಧನಿರಲಿಲ್ಲ. ಹಾಗಾಗಿ ತನ್ನ ಸೇವಕರಿಬ್ಬರಿಗೆ ಅವಳ ಎದೆವಸ್ತ್ರವನ್ನು ತೆಗೆದೆಸೆಯುವಂತೆ ಹೇಳಿದ. ಅವರು ಹತ್ತಿರ ಬಂದದ್ದೇ ನಂಗೇಲಿಗೆ ಸಿಟ್ಟು ನೆತ್ತಿಗೇರಿತ್ತು. ಅಲ್ಲಿಯೇ ಬದುವಿನಲ್ಲಿದ್ದ ಕುಡುಗೋಲನ್ನು ಝಳಪಿಸುತ್ತಾ ನುಡಿದಳೂ, “ಕಳ್ಳಬಡ್ಡಿ ಮಕ್ಕಳೇ, ನನ್ನ ಎದೆಯನ್ನು ಮುಟ್ಟೋ ಅಧಿಕಾರ ನನ್ನ ಗಂಡ ಚಿರುಕುಂಡನನ್ನು ಬಿಟ್ರೆ ಬೇರೆ ಯಾರಿಗೂ ಇಲ್ಲ. ಮೈಮುಟ್ಟಿದ್ರೆ ರುಂಡ ಅರಿದುಬಿಡ್ತೇನೆ.” ಚಾಮುಂಡಿಯಂತೆ ಕುಡುಗೋಲು ಹಿಡಿದುನಿಂತ ನಂಗೇಲಿಯನ್ನು ಕಂಡು ಸ್ವತಃ ದಣಿಯರೇ ಬೆವರಿಬಿಟ್ಟರು. “ಬಿಡ್ರೋ ಅವಳನ್ನ. ಏನು ಮಾಡಬೇಕೆಂದು ನನಗೆ ಗೊತ್ತು.” ಎಂದು ತೋಳೇರಿಸುತ್ತಾ ಮರಳಿದರು.

ಮನೆಗೆ ಬಂದ ನಂಗೇಲಿಗೆ ಜೀವಸಂಕಟವಾಗಿತ್ತು. ಕಷ್ಟ ಹೇಳಿಕೊಳ್ಳಲು ಮನೆಯಲ್ಲಿ ಗಂಡನೂ ಇರಲಿಲ್ಲ. ನಾಳೆ ದಣಿಯರು ಏನಾದರೂ ಮಾಡೇ ಮಾಡುತ್ತಾರೆಂಬುದು ಅವಳಿಗೆ ಖಚಿತವಿತ್ತು. ಏನಾದರೂ ಆಗಲಿ, ತಾನು ಚಿರುಕುಂಡ ಬರುವವರೆಗೆ ಈ ಎದೆವಸ್ತ್ರವನ್ನು ಮಾತ್ರ ಬಿಚ್ಚುವುದಿಲ್ಲª್ರಂದು ತೀರ್ಮಾನಿಸಿ ಮಲಗಿದಳು.

ಮಾರನೇ ದಿನ ಸರಕಾರದ ದಂಡೇ ಅವಳ ಗುಡಿಸಲ ಮುಂದೆ ಬಂದಿತ್ತು. ಊರಿಗೆ ಊರೇ ನಂಗೇಲಿಯ ಮಲಕರಂ ವಸೂಲಾತಿಯನ್ನು ನೋಡಲು ಅಂಗಳದಲ್ಲಿ ನೆರೆದಿತ್ತು. ನಂಗೇಲಿಯ ಗುಡಿಸಲಿನ ತಟ್ಟಿಬಾಗಿಲು ಮುಚ್ಚಿತ್ತು. ಸರಕಾರದ ಕರವಸೂಲಿ ಅಧಿಕಾರಿಯಾದ ಪರ್ವತಿಯಾರ್ ತಾನೇ ಮುಂದಾಗಿ ಕರವಸೂಲಿಗೆ ಬಂದಿದ್ದ. ಎಲ್ಲರ ಕಣ್ಣೂ ಅವನ ಕೈಯ್ಯಲ್ಲಿರುವ ಉದ್ದನೆಯ ಬಂದೂಕಿನ ಕಡೆಗೇ ಇತ್ತು. ಮಲಕರಂ ನ್ನು ತಕ್ಷಣ ಕೊಡುವಂತೆ, ಇಲ್ಲವಾದಲ್ಲಿ ಎದೆವಸ್ತ್ರವನ್ನು ಬಿಚ್ಚುವಂತೆ ಅವನು ನಂಗೇಲಿಗೆ ಹೊರಗಿನಿಂದಲೇ ಆದೇಶಿಸಿದ. ಒಳಗಿನಿಂದ ಯಾವ ಪ್ರತಿಕ್ರಿಯೆಯೂ ಬರಲಿಲ್ಲ. ಜನರೆದುರಿಗೆ ಅವನ ಮರ್ಯಾದೆ ಹರಾಜಾಗುತ್ತಿತ್ತು. ಅವನು ತನ್ನ ಬಂದೂಕನ್ನು ಆಕಾಶದೆಡೆಗೆ ತಿರುಗಿಸಿ ಗುಡೊಂದನ್ನು ಹಾರಿಸಿದ. ಎಲ್ಲರ ಗುಂಡಿಗೆಯೂ ಧಡಧಡನೆ ಬಡಿದುಕೊಳ್ಳುತ್ತಿತ್ತು. ಒಂದೆರಡು ಗಳಿಗೆಯಲ್ಲಿ ಗುಡಿಸಲ ಬಾಗಿಲು ತೆರೆದುಕೊಂಡಿತು. ನಂಗೇಲಿ ಕೈಯ್ಯಲ್ಲಿ ಬಾಳೆಎಲೆಯಲ್ಲಿ ಏನನ್ನೋ ಹಿಡಿದು ಹೊರಬಂದಳು. ಪರ್ವತಿಯಾರನ ಎದುರಲ್ಲಿ ಅದನ್ನು ಇಟ್ಟಳು. ಅದರಲ್ಲಿ ಕತ್ತರಿಸಿದ ಅವಳ ಎರಡು ಮೊಲೆಗಳಿದ್ದವು! ಎದೆವಸ್ತ್ರವನ್ನವಳು ಬಿಚ್ಚಿರಲಿಲ್ಲ. ವಸ್ತ್ರದೊಳಗಿಂದ ಕೆಂಪನೆಯ ರಕ್ತ ಕೋಡಿಯಾಗಿ ಹರಿಯುತ್ತಿತ್ತು. ಪರ್ವತಿಯಾರನ ಬಂದೂಕು ಕೈಯ್ಯಿಂದ ಸರ್ರನೆ ಜಾರಿತು. ನಂಗೇಲಿ ತಿರುಗಿ ಒಳಗೆ ಹೊರಟವಳು ಬಾಗಿಲಲ್ಲಿಯೇ ಕುಸಿದು ಬಿದ್ದಳು. ಅವಳ ಪ್ರಾಣಪಕ್ಷಿ ಹಾರಿಹೋಗಿತ್ತು. ಹಾಗೆ ಬಿದ್ದಾಗಲೂ ಅವಳ ಎರಡೂ ಕೈಗಳು ಎದೆವಸ್ತ್ರವನ್ನು ಗಟ್ಟಿಯಾಗಿ ಎದೆಗೆ ಒತ್ತಿಹಿಡಿದಿದ್ದವು!

ಸೇರಿದ ಜನರು ಹೋ…. ಎಂದು ಕಿರುಚಿದರು. ನಂಗೇಲಿಯ ದಾರುಣ ಸಾವು ಅವರನ್ನು ರೊಚ್ಚಿಗೆಬ್ಬಿಸಿತ್ತು. ಕೈಗೆ ಸಿಕ್ಕ ವಸ್ತುಗಳನ್ನು ಅಧಿಕಾರಿಗಳ ಮೇಲೆ ಎಸೆಯತೊಡಗಿದದರು. ಆನರ ಅನಿರೀಕ್ಷಿತ ಪ್ರತಿಕ್ರಿಯೆಯಿಂದ ಆಘಾತಗೊಂಡ ಅಧಿಕಾರಿಗಳು ಹೇಗುಹೇಗೋ ತಪ್ಪಿಸಿಕೊಂಡು ಕಣ್ಮರೆಯಾದರು. ಆನರು ನಂಗೇಲಿಯ ಸುತ್ತಲೂ ನೆರೆದು ಕಣ್ಣೀರು ಹಾಕಿದರು. ಊರಿನವರೆಲ್ಲ ಮೆರವಣಿಗೆಯಲ್ಲಿ ಅವಳನ್ನು ಸ್ಮಶಾನಕ್ಕೆ ಸಾಗಿಸಿದರು. ಯಾರೋ ಒಂದಿಬ್ಬರು ಅವಳ ಗಂಡನಿಗೆ ಸುದ್ಧಿ ಮುಟ್ಟಿಸಲು ಹೋದರು. ಚಿರುಕುಂಡನ್ ಬರುವಾಗ ಅವಳ ಚಿತೆ ತಯಾರಾಗಿತ್ತು. ಅವನು ಕೊಡಿದ ಎದೆವಸ್ತ್ರವಿನ್ನೂ ಅವಳ ಎದೆಯ ಮೇಲೆಯೇ ಇತ್ತು. ಕುಡುಗೋಲಿನಿಂದ ಕೊರೆದಿಟ್ಟ ಅವಲ ಎರಡೂ ಮೊಲೆಗಳು ಬಾಳೆಲೆಯ ಮೇಲೆ ಮಲಗಿದ್ದವು. ಅವಳ ಶವಕ್ಕೆ ಬೆಂಕಿಯಿಟ್ಟ ಚಿರುಕುಂಡನ್ ಬಾಳೆಲೆಯ ಮೇಲಿದ್ದ ಮೊಲೆಗಳನ್ನು ಕೈಯ್ಯಲ್ಲಿ ಹಿಡಿದು ಉರಿಯುವ ಚಿತೆಯೊಳಗೆ ನುಗ್ಗಿದ. ನೋಡುತ್ತಿದ್ದ ಜನರು ಏನಾಗುತ್ತಿದೆಯೆಂದು ತಿಳಿಯುವುದರೊಳಗೆ ಅವನು ಚಿತೆಯೊಳಗೆ ಉರಿದುಹೋದ!

ಹೌದು, ಹೆಂಡತಿಯ ಚಿತೆಯೇರಿದ ಮೊದಲ ಗಂಡನೆಂದು ಚಿರುಕುಂಡನ್ ಚರಿತ್ರೆಯಲ್ಲಿ ದಾಖಲಾಗಿದ್ದಾನೆ. ಹೆಂಡತಿ ಕೆರೆಗೆ ಹಾರವಾದಳೆಂದು ತಾನೂ ಕೆರೆಯೊಳಗೆ ಮುಳುಗಿಹೋದ ಗಂಡ ಮಾದೇವ ನೆನಪಾಗಿ ಕಾಡುತ್ತಾನೆ. ಅಪರೂಪಕ್ಕೊಮ್ಮೆ ಇತಿಹಾಸದಲ್ಲಿ ಇಂಥವುಗಳೂ ಘಟಿಸುತ್ತವೆ. ಮತ್ತು ಜಗವ ಪೊರೆಯುವ ಹೆಣ್ಣಿನ ಬದ್ಧತೆಯನ್ನು ಇನ್ನಷ್ಟು ಹೆಚ್ಚಿಸುತ್ತವೆ. ನಂಗೇಲಿ ಬಲಿಯಾದ ಜಾಗವಿಂದೂ ಕೂಡ ‘ಮುಲಚಿಪರಂಬು’ ಅಂದರೆ ‘ಮೊಲೆಯ ಕೊರೆದಿಟ್ಟವಳ ನಾಡು’ ಎಂದು ಪ್ರಸಿದ್ಧಿಯಾಗಿದೆ.

ಹೆಣ್ಣಿನ ಪ್ರತಿಬಂಧನದ ಬಿಡುಗಡೆಯ ಹಿಂದೆಯೂ ಬೆಲೆಕಟ್ಟಲಾಗದ ಅವಳ ಬಲಿದಾನವಿದೆ. ಜಗತ್ತು ಅವಳ ಬಲಿಯನ್ನು ಮತ್ತೆ ಮತ್ತೆ ಕೇಳುತ್ತಲೇ ಇರುತ್ತದೆ. ಈ ಪ್ರಕರಣ ಘಟಿಸಿದ ಎಂಟು ವರ್ಷಗಳ ನಂತರ ‘ಮುಲಕರಂ’ ರದ್ಧತಿಗೊಂಡಿತು. ನಂಗೇಲಿಯ ಬಲಿದಾನ ಅಂದು ಸಾರ್ಥಕಗೊಂಡಿತು.

ನಮ್ಮ ಪ್ರತಿಹೆಜ್ಜೆಯ ಅಡಿಯಲ್ಲೂ ‘ಅವಳ’ ರಕ್ತದ ಗುರುತಿದೆ.
ಮುಂದೇನೂ ಹೇಳಲಾರೆ, ಮನಸ್ಸು ಭಾರವಾಗಿದೆ.

‍ಲೇಖಕರು avadhi

October 5, 2018

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

7 ಪ್ರತಿಕ್ರಿಯೆಗಳು

  1. Prabhakar Nimbargi

    ಬಲಿಷ್ಠರು ಸಮಾಜವನ್ನು ಹೇಗೆ ತಮ್ಮ ಕಪಿಮುಷ್ಠಿಯಲ್ಲಿಟ್ಟುಕೊಳ್ಳಬಲ್ಲರು ಎಂಬುದನ್ನು ನಂಗೇಲಿಯ ಕಥೆ, ಕೇರಳದಲ್ಲಿ ಗತಕಾಲದಲ್ಲಿದ್ದ ಕಟ್ಟಳೆಗಳು ತಿಳಿಸಿ ಕೊಡುತ್ತವೆ. ತುಂಬ ಮಾರ್ಮಿಕವಾಗಿ ಮನ ತಟ್ಟುವಂತೆ ಬರೆದಿದ್ದೀರಿ. ಧನ್ಯವಾದಗಳು.

    ಪ್ರತಿಕ್ರಿಯೆ
  2. Asha Latha

    ತುಂಬಾ ಮನ ಕಲಕುವಂತಿದೆ. ಹಿಂದೆ ದೇವರನಾಡು ಎಂದು ಕರೆಯುತ್ತಿರುವ ಕೇರಳ ರಾಜ್ಯದಲ್ಲಿದ್ದಷ್ಟು ಅನಿಷ್ಠ ಪದ್ಧತಿಗಳು ಬೇರೆಲ್ಲೂ ಇರಲಿಲ್ಲ ಎಂದೆನಿಸುತ್ತದೆ. ಸಮಾಜ ಸುಧಾರಕ ನಾರಾಯಣ ಗುರುಗಳು ಹಿಂದುಳಿದ ವರ್ಗಗಳ ಜನರ ಪಾಲಿಗೆ ದೇವರಂತೆ ಬಂದು ಬದಲಾವಣೆಯನ್ನು ತಂದಿದ್ದರು.

    ಪ್ರತಿಕ್ರಿಯೆ
    • Sudha Hegde

      ಹೌದು. ದೇವರ ನಾಡಿನಲ್ಲಿ ತಾರತಮ್ಯ ಹೆಚ್ಚು.

      ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: