ಶೋಭಾ ದಿನೇಶ್
ಹೇಳಬೇಕೆಂದರೆ ನನ್ನ ಮತ್ತು ಅವನ ಸಾಂಗತ್ಯ ನೆನ್ನೆ ಮೊನ್ನೆಯದಲ್ಲ
ದೀರ್ಘ ಕಾಲದ್ದು,
ಲಹರಿಗೆ ಬಿದ್ದಂತೆ ಒಬ್ಬರೊನೊಬ್ಬರು ಪ್ರೀತಿಸಿಕೊಳ್ಳುತ್ತೇವೆ
ಅಗಲಿದ್ದ ದಿನವಂತೂ ನೆನಪೇ ಇಲ್ಲ
ತಮಾಷೆಯೆಂದರೆ, ನನ್ನ ಓರಗೆಯವರಿನ್ನೂ ಹಾಲು ಕುಡಿಯುತ್ತಿದ್ದರು
ನನ್ನ ಅವನ ಪ್ರೇಮಾಯಣ ಶುರು ಆದಾಗ
ಅಮ್ಮ ಮೊದ ಮೊದಲು ಸಣ್ಣಗೆ ಗದರಿದ್ದು ಉಂಟು
ಅಕ್ಕ ಪಕ್ಕದವರೂ ಹುಬ್ಬೇರಿಸಿದ್ದರು ಅದೇನು ‘ಇಷ್ಟು ಬೇಗ’
ಸಾಮಾನ್ಯವಾಗಿ ಮುಂಜಾನೆಯ ನಿಶ್ಯಬ್ಧಗಳಲ್ಲಿ
ಇಳಿಸಂಜೆಯ ಏಕಾಂತಗಳಲ್ಲೇ ನಾವಿಬ್ಬರೂ ಹೆಚ್ಚು ಮಾತುಗಿಳಿಯುತ್ತಿದ್ದೆವು
ಭೇಟಿಯಂತೂ ಕರಾರುವಾಕ್ಕೂ ಸಮಯಕ್ಕೆ, ಹೆಚ್ಚು ಕಡಿಮೆ ಇಲ್ಲ
ತಾಗಿದಷ್ಟೂ ಬೆಚ್ಚಗೆ, ಹಿಡಿದಷ್ಟೂ ಮುಚ್ಚಿಗೆ

ಅದೆಷ್ಟೇ ಬೆಟ್ಟದಂತ ಸವಾಲುಗಳು ಮುಂದೆ ಇದ್ದರೂ
ಎಲ್ಲವೂ ಹಗುರ ಹಗುರ ಇವನಿದ್ದರೆ ಪಕ್ಕ
ಬರೀವಾಸನೆಯೇ ಸಾಕು ಮೈ ಮನವೆಲ್ಲ ಪತಂಗ
ಎಂಥಾ ದೈವಿಕ ಘಮಲು
ಮನೆ, ಆಫೀಸ್, ಗಿಜಿಗುಡುವ ರಸ್ತೆಯ ಆಸು ಪಾಸು
ಎಲ್ಲೆಂದರಲ್ಲಿ, ನಾವಿಬ್ಬರೂ ಮಟ್ಟಸವಾಗಿ ಕುಳಿತು
ಒಬ್ಬರನೊಬ್ಬರು ಆಸ್ವಾದಿಸುತ್ತೇವೆ, ಅದೆಷ್ಟು ಜನರ ಈರ್ಷೆಗೆ
ಒಳಗಾಗಿಲ್ಲ ನಮ್ಮೀ ಬಂಧ
ಯಾಕೋ ಇತ್ತೀಚೆಗೆ ನನ್ನೊಳಗೆ ಸಣ್ಣ ಬದಲಾವಣೆ
ನಮ್ಮಿಬ್ಬರ ಈ ಅತಿರೇಕದ ಸಂಬಂಧದಿಂದಲೇ ಇಷ್ಟೆಲ್ಲ ಆಗಿದ್ದು
ವಾಕರಿಕೆ ಎಲ್ಲದಕ್ಕೂ ಪಿರಿಪಿರಿ ಬಿಟ್ಟು ಬಿಡದೇ ಕಾಡುವ ಸುಸ್ತು
ಎಲ್ಲರೂ ಬೊಟ್ಟು ಮಾಡಿದ್ದು ಅವನನ್ನೇ, ನನಗೋ ಅವನನ್ನ ಬಿಟ್ಟಿರಲಾರದ ಸಂಕಟ
ಸ್ವಲ್ಪ ಕಾಲವಾದರೂ ದೂರವಾಗಲೇಬೇಕೆಂದರು ಡಾಕ್ಟರೂ ಕೂಡಾ
ಹೊರಡಿಸಿಯೇ ಬಿಟ್ಟರು ಫರ್ಮಾನು, ಕುಸಿದಂತೆ ನಿಂತ ನೆಲ
ಬೇರೆ ದಾರಿಯಿಲ್ಲ, ಎಲ್ಲರಿಂದಲೂ ಬಿಟ್ಟಿ ಉಪದೇಶ
ಮನಸ್ಸು ಗಟ್ಟಿಗೊಳಿಸಿಕೊಳ್ಳುತ್ತಿದ್ದೇನೆ, ಕೊನೆಯ ಭೇಟಿ ಇಂದು,
ನಿಧಾನವಾಗಿ ಗುಟುಕರಿಸುತ್ತಿದ್ದೇನೆ ಅಗಲಿಕೆಯ ನೋವನ್ನು
ನಮ್ಮಿಬ್ಬರ ಭೇಟಿ ಇಂದು ಘನತೆಯಿಂದ ಕೊನೆಗೊಳ್ಳುತ್ತಿದೆ
ಹೌದು ಅಸಿಡಿಟಿ ಎಂಬ ಮಾಯಾಂಗನೆ ಹೇಗಲಿರಿದಮೇಲೆ
ಕಾಫಿ ಎಂಬ ಪ್ರಿಯತಮನಿಂದ ದೂರವಾಗಬೇಕಾಯಿತು ನೋಡಿ






ಹ ಹ ಹಾ… ಚೆನ್ನಾಗಿದೆ.
ಚೆನ್ನಾಗಿದೆ.ಮೂರ್ಖರ ದಿನದ ಉಡುಗೊರೆ
ನಿಜ…ಈ ಅಗಲಿಕೆ ತುಂಬಾ ಕಷ್ಟ….ನಿನ್ನಸ್ಟು ಗಟ್ಟಿ ಮನಸ್ಸು ನನಗಿಲ್ಲ……
ಚೆಂದ ಕವಿತೆ
ಕಾಫಿಗೂ ಹೀಗೊಂದು ಪ್ರೇಮಲಹರಿ ಮಸ್ತ್…..
ಮಸ್ತ್ ಕವಿತೆ
ಸಾಂಗತ್ಯ ಇಗೆ ಸಾಗುತಲಿರಲಿ,
ಚಂದ ಕವಿತೆ ಮೇಡಂ
VERY NICE!!!!