ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನಾನು ಮಂಥರೆ..

ಜಮುನಾ ರಾಣಿ ಹೆಚ್.ಎಸ್. 

ನಾನು ಮಂಥರೆ…
ಜಗತ್ತು ಹೀಯಾಳಿಸಿದ
ಎಲ್ಲರಿಂದಲೂ ತಿರಸ್ಕರಿಸಲ್ಪಟ್ಟ
ಕುಬ್ಜ ದೇಹ, ಗೂನು ಬೆನ್ನಿನ
ರಾಮನ ವನವಾಸಕ್ಕೆ ಕಾರಣಳಾದ
ಕಟು ಹೃದಯಿ… ಮಂಥರೆ

ಆದರೆ ನಿಮಗೇನು ಗೊತ್ತು
ಮಥಿಸಿ ನೋಡಿದ್ದಿರೇನು
ನೀವು ನನ್ನೊಡಲನು ?

ಜಗವೆಲ್ಲ ಛೀ., ಥೂ ಎಂದು ನಿಂದಿಸುವಾಗ
ನೀವೆಲ್ಲಾ ಜೊತೆಗಿದ್ದಿರೇನು ?
ದಿನಮಣಿಯಂತೆ ಶೋಭಿಸುವ ರಾಮನ
ಎತ್ತಿ ಮುದ್ದಾಡ ಬಯಸಿದಾಗ
ತ್ಯುಚ್ಚವಾಗಿ ಕಂಡು
ಹೊರಗಟ್ಟುತಿದ್ದರಲ್ಲಾ
ಆಗ ನೊಂದ ತಾಯ್ತನವ
ನೀವು ಬಲ್ಲಿರೇನು ?

ನನಗೇನು ರಾಮನಲ್ಲಿ ಮತ್ಸರವಿಲ್ಲ
ನನ್ನೊಡೆಯನೊಡಲ ಕುಡಿಯೆಂದು
ಭರತನೆಡೆಗೆ ವಿಶೇಷ ಪ್ರೀತಿಯಷ್ಟೆ,
ಅದಿರಲಿ,
ರಾಮಾಯಣ ಲೋಕಪ್ರಸಿದ್ಧವಾಗಲು
ಅದರಲ್ಲಿ ನನ್ನದೂ ಒಂದು ಕೈಯಿದೆ
ಅದಾದರೂ ನಿಮಗೆ ಗೊತ್ತೆ ?
ಎಂದೂ ಅದಕ್ಕಾಗಿ ಗರ್ವ ಪಟ್ಟಿಲ್ಲ
ತಿಳಿದಿರಲಿ ನಿಮಗೆ
ನನ್ನನು ನಾನು ಹೊಗಳಿಕೊಳ್ಳುವ
ಪ್ರಮೇಯ ನನಗಿಲ್ಲ

ಹೆತ್ತವರಿಗೆ ಬೇಡವಾದ ಅನಾಥೆ ನಾನು
ಅಸಹ್ಯ ಹುಟ್ಟಿಸುವ ಅಂಗವಿನ್ಯಾಸವ
ಲೆಕ್ಕಿಸದೆ ಕರೆತಂದು ಸಾಕಿದ
ಒಡೆಯನ ಕುಡಿಯ ಬದುಕು
ಬಂಗಾರವಾಗಬೇಕೆನ್ನುವ ಬಿನ್ನಹ
ನನ್ನ ಮೂಗಿನಳತೆಗೆ ಸರಿಯೇ ಸರಿ,
ನಾನು ಏನೆಂಬುದು ನನಗೆ ಗೊತ್ತಿದ್ದರೆ ಸಾಕು
ನಿಮ್ಮನ್ನು ಮೆಚ್ಚಿಸುವ ದರ್ದು ನನಗಿಲ್ಲ

ನಾಯಿ ಎಂದು ಜರಿದ ಕೈಕೆ,
ಕಲ್ಲಿನಿಂದ ಹೊಡೆದು ಕಾಲಿನಿಂದ ತುಳಿದ
ಅಯೋಧ್ಯೆಯ ಜನ
ರಾಮನಿಲ್ಲದೆ ನೊಂದ ಭರತನ ಹೃದಯ
ಅಬ್ಬಾ, ಸಾಕು ಸಾಕು
ಸಾಕೇತಪುರ ಮತ್ತೆ ಮೊದಲಿನಂತಾಗಲು
ಆ ರಾಮನೇ ಬರಬೇಕು
ಅಗೋ ಈ ಅರಣ್ಯದ ಮಗ್ಗುಲಲಿ
ರಾಮನ ದರುಶನ ಸಿಕ್ಕೀತು ಎಂದು
ಕಾಳ್ಗಿಚ್ಚಿನೆಡೆಗೆ ಸಾಗಿದೆನಲ್ಲಾ
ಆಗಲೂ ಕೂಡ ನನ್ನಲಿದ್ದುದ್ದು
ಒಡೆಯನ ಒಡಲ ಕುಡಿಯ
ಮೊಗದಲಿ ಸಂತಸವ ಮೂಡಿಸುವ ತವಕ ಮಾತ್ರ

ಹೌದು ನಾನೇ ಮಂಥರೆ
ಅಯೋಧ್ಯೆ ಕಂಡ ಕಠೋರ
ಹೃದಯಿ… ಮಂಥರೆ

‍ಲೇಖಕರು Avadhi

23 October, 2018

4 Comments

  1. Chandrakanth

    Thanks madam mantareya odalina dani kaviteyallide

    • Jamuna Rani

      Thank u 🙂

  2. Chandrakanth

    ಮಂಥರೆಯ ಮನದ ಆಂತರ್ಯದ ನೋವು ಮಾರ್ಮಿಕವಾಗಿ ಕವಿತೆಯಲ್ಲಿ ಸ್ಪಷ್ಟಗೊಂಡಿದೆ. ನೊಂದ ತಾಯ್ತನದ ದ್ವನಿಯಿದೆ. ಉತ್ತಮ ಕವಿತೆ ಮೂಡಿ ಬಂದಿದ್ದಕ್ಕೆ ಅಭಿನಂದನೆಗಳು.

  3. Jamuna Rani

    Thank u 🙂

Trackbacks/Pingbacks

  1. ಗೊತ್ತು ಬಿಡು ಮಂಥರೆ! – Avadhi/ಅವಧಿ - […] ‘ಅವಧಿ’ಯಲ್ಲಿ ಜಮುನಾರಾಣಿ ಹೆಚ್ ಎಸ್ ಬರೆದ ‘ನಾನು ಮಂಥರೆ’ ಕವಿತೆ ಪ್ರಕಟವಾಗಿತ್ತು. ಅದು ಇಲ್ಲಿದೆ. […]

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading