ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನಾನು ಪೆನ್ನನ್ನು ಎತ್ತಿಕೊಂಡಾಗ..

ಮೂಲ: ಸರ್ವೇಶ್ವರ್‌ ದಯಾಲ್ ಸಕ್ಸೇನಾ 

ಆಧುನಿಕ ಹಿಂದಿ ಭಾಷಾ ಕವಿ ಸರ್ವೇಶ್ವರ್ ದಯಾಲ್ ಸಕ್ಸೇನಾ ಅವರು ಸೆಪ್ಟೆಂಬರ್ 15, 1927 ರಂದು ಉತ್ತರ ಪ್ರದೇಶದ ಬಸ್ತಿ-ಯಲ್ಲಿ ಜನಿಸಿದರು.  ಅವರು ಕಾಶಿ ಮತ್ತು ಅಲಹಾಬಾದ್‌-ನಲ್ಲಿ ತಮ್ಮ ಉನ್ನತ ಶಿಕ್ಷಣವನ್ನು ಪೂರ್ಣಗೊಳಿಸಿದರು.  ಶಿಕ್ಷರಾಗಿ ಹಾಗೂ ಸರ್ಕಾರಿ ಕಚೇರಿಯಲ್ಲಿ ನೌಕರಿಯ ನಂತರ, ಅವರು ಆಲ್ ಇಂಡಿಯಾ ರೇಡಿಯೋದಲ್ಲಿ ಕೆಲಸ ಮಾಡಿದರು.  ನಂತರ, ಆಧುನಿಕ ಹಿಂದಿ ಸಾಹಿತ್ಯದಲ್ಲಿ ‘ಪ್ರಯೋಗವಾದ್’ ಚಳುವಳಿಯ ಪ್ರವರ್ತಕರಾದ ‘ಅಜ್ಞೇಯ’ (ಸಚ್ಚಿದಾನಂದ್ ಹೀರಾನಂದ್ ವಾತ್ಸ್ಯಾಯನ್) ಅವರ ಆಹ್ವಾನದ ಮೇರೆಗೆ, ಸಕ್ಸೇನಾ ಅವರು ದಿನ್‌ಮಾನ್ ಪತ್ರಿಕೆಗೆ ಸೇರಿದರು.  ಸ್ವಲ್ಪ ಸಮಯದವರೆಗೆ ಅವರು ಮಕ್ಕಳ ಪತ್ರಿಕೆ ಪರಾಗ್ -ನ ಸಂಪಾದಕರಾಗಿಯೂ ಸೇವೆ ಸಲ್ಲಿಸಿದರು.  

ಅವರ ಕಾವ್ಯ ಬರವಣಿಗೆಯ ಪಯಣ 1951-ರಲ್ಲಿ ಪ್ರಾರಂಭವಾಯಿತು.  ಪರಿಮಲ್ ಎಂಬ ಅಲಾಹಾಬಾದಿನ ಸಾಹಿತ್ಯ ಸಂಸ್ಥೆ ಏರ್ಪಡಿಸುತ್ತಿದ್ದ ಸಾಹಿತ್ಯ ಘೋಷ್ಠಿಗಳಲ್ಲಿ ಅವರು ಭಾಗವಹಿಸುತ್ತಿದ್ದರು ಹಾಗೂ ಅವರ ಕಾವ್ಯ ಈ ಘೋಷ್ಠಿಗಳಲ್ಲಿ ವ್ಯಾಪಕವಾಗಿ ಚರ್ಚಿಸಲಾಯಿತು.  ನಯೀ ಕವಿತಾ-ದ ವಿಕಾಸದ ದಿಕ್ಕಿನಲ್ಲಿ ಇವರ ಕಾವ್ಯದಲ್ಲಿ ಗಣನೀಯವಾದ ಸಾಮರ್ಥ್ಯವಿದೆಯೆಂದು ಕಂಡುಬಂತು.  ಅವರ ಮೊದಲ ಕವನ ಸಂಕಲನ ಕಾಠ್ ಕಿ ಘಂಟಿಯಾನ್  (ಮರದ ಗಂಟೆಗಳು) 1959-ರಲ್ಲಿ ಪ್ರಕಟವಾಯಿತು.  ಅದೇ ವರ್ಷ, ‘ಅಜ್ಞೇಯ’ ಅವರ ಸಂಪಾದಕತ್ವದಲ್ಲಿ ಪ್ರಕಟಗೊಂಡ, ಹಿಂದಿ ಸಾಹಿತ್ಯದ ‘ಪ್ರಯೋಗವಾದ್’ ಯುಗಕ್ಕೆ ನಾಂದಿ ಹಾಡಿದ ತಾರ್ ಸಪ್ತಕ್ ಸಂಗ್ರಹಗಳಲ್ಲಿ ಒಂದಾದ ತೀಸ್ರಾ ಸಪ್ತಕ್-ನಲ್ಲಿ ಸಕ್ಸೇನಾ ಅವರ ಕವನಗಳು ಪ್ರಕಟವಾಯಿತು.  ‘ಪ್ರಯೋಗವಾದ್’ ಕಾಲಾನಂತರದಲ್ಲಿ ‘ನಯೀ ಕವಿತಾ’ (ಹೊಸ ಕಾವ್ಯ) ಚಳುವಳಿಯಾಗಿ ವಿಕಸನಗೊಂಡಿತು.

ಭಾರತೀಯ ಗ್ರಾಮೀಣ ಜೀವನದ ಸಂವೇದನೆ ಮತ್ತು ಸಮಾಜವಾದಿ ಸಿದ್ಧಾಂತ ಅವರ ಕಾವ್ಯ ಬೆಳವಣಿಗೆಯ ಎರಡು ಪ್ರಮುಖ ಅಂಶಗಳಾಗಿವೆ.  ಸಕ್ಸೇನಾ ಅವರ ಕವಿತೆಗಳ ತಾಣಗಳನ್ನು ವಿವರಿಸುತ್ತಾ, ಪ್ರಯಾಗ್ ಶುಕ್ಲಾ ಬರೆಯುತ್ತಾರೆ, “ಒಂದು ತಾಣ ಅವರು ಹುಟ್ಟಿ ಬೆಳೆದ ಹಳ್ಳಿ, ಎರಡನೆಯದು ಅವರ ಕುಟುಂಬ, ಮೂರನೆಯದು ಅವರ ಸ್ನೇಹಿತರು ಮತ್ತು ನಾಲ್ಕನೆಯದು ತನ್ನದೇ ಆದ ಯಾವುದೇ ತಾಣವಿಲ್ಲದಂತೆ ತೋರುವ ವಿಶಾಲವಾದ ಸಮುದಾಯ, ಅಂದರೆ ದಮನಿತ ಜನರು.  ಐದನೆಯದು – ಅವರು ಜೀವನದ ಸಾರವನ್ನು ಹುಡುಕಲು ತೀವ್ರವಾಗಿ ಪ್ರಯತ್ನಿಸಿದ ಪ್ರಕೃತಿಯ ವಿಶಾಲ ಜಗತ್ತು, ಮತ್ತು ಎಲ್ಲರೂ ಕೈಬಿಟ್ಟಾಗ, ಯಾವುದೋ ಒಂದು ಪಕ್ಷಿ, ಒಂದು ಕೊಂಬೆ, ಒಂದು ಮಳೆಹನಿ, ಅಥವಾ ಒಂದು ಹುಲ್ಲಿನ ದಳ ಅವರ ದುಃಖದ ಕಥೆಯನ್ನು ಕೇಳಲು ನಿರಾಕರಿಸುವುದಿಲ್ಲ, ಕರುಣಾಳು ಜೀವಗಳಂತೆ ಅವರೊಂದಿಗೆ ಉಳಿಯುತ್ತದೆ ಎಂಬ ಆಳವಾದ ನಂಬಿಕೆ.”

ಕಾವ್ಯದ ಜೊತೆಗೆ, ಅವರು ನಾಟಕಗಳು, ಕಾದಂಬರಿಗಳು, ಪ್ರವಾಸ ಕಥನ ಮತ್ತು ಮಕ್ಕಳ ಸಾಹಿತ್ಯಕ್ಕೂ ಕೊಡುಗೆ ನೀಡಿದ್ದಾರೆ.  ಪತ್ರಕರ್ತರಾಗಿ, ದಿನ್‌ಮಾನ್‌ ಪತ್ತಿಕೆಯಲ್ಲಿ ಪ್ರಕಟವಾಗುತ್ತಿದ್ದ ಅವರ “ಚರ್ಚೆ ಔರ್ ಚರ್ಖೇಂ” ಅಂಕಣಕ್ಕೆ ವಿಶೇಷವಾಗಿ ಹೆಸರುವಾಸಿಯಾಗಿದ್ದಾರೆ, ಅಲ್ಲಿ ಅವರು ಸಮಕಾಲೀನ ವಿಷಯಗಳ ಬಗ್ಗೆ ಸೂಕ್ಷ್ಮ ವ್ಯಾಖ್ಯಾನವನ್ನು ಸಹ ಒದಗಿಸಿದ್ದಾರೆ.  ಅವರು ರಂಗಭೂಮಿ, ನೃತ್ಯ ಮತ್ತು ಸಂಸ್ಕೃತಿಯ ಕುರಿತು ವಿಮರ್ಶಾತ್ಮಕ ಲೇಖನಗಳನ್ನು ಬರೆದಿದ್ದಾರೆ.

ಕಾಠ್ ಕಿ ಘಂಟಿಯಾಂ (ಮರದ ಗಂಟೆಗಳು), ಬಾಂಸ್ ಕಾ ಪುಲ್ (ಬಿದಿರಿನ ಸೇತುವೆ), ಏಕ್ ಸೂನಿ ನಾಂವ್ (ಖಾಲಿ ದೋಣಿ), ಗರ್ಮ್ ಹವಾಯೇಂ (ಬಿಸಿ ಗಾಳಿ), ಕುವಾನೋ ನದಿ, ಜಂಗಲ್ ಕಾ ದರ್ದ್ (ಕಾಡಿನ ನೋವು), ಖೂಟಿಯೋಂ ಪರ್ ಟಂಗೇ ಲೋಗ್ (ಗೂಟಗಳ ಮೇಲೆ ನೇತಾಡುವ ಜನರು), ಕ್ಯಾ ಕಹ್ ಕರ್ ಪುಕಾರೂಂ (ಏನೆಂದು ಕರೆಯಲಿ), ಕೋಯಿ ಮೆರೆ ಸಾಥ್ ಚಲೆ (ಯಾರಾದರೂ ನನ್ನೊಂದಿಗೆ ನಡೆಯಿರಿ) – ಇವರ ಕವನ ಸಂಕಲನಗಳು.  ಅವರ ಖೂಟಿಯೋಂ ಪರ್ ಟಂಗೇ ಲೋಗ್ ಕವನ ಸಂಕಲನಕ್ಕಾಗಿ 1983-ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಅವರಿಗೆ ನೀಡಲಾಯಿತು.

—-

ಕನ್ನಡಕ್ಕೆ : ಎಸ್. ಜಯಶ್ರೀನಿವಾಸ ರಾವ್

ಎಸ್. ಜಯಶ್ರೀನಿವಾಸ ರಾವ್ ಅವರು ಕನ್ನಡ, ಹಿಂದಿ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಗದ್ಯ ಪದ್ಯಗಳನ್ನು ಅನುವಾದ ಮಾಡುತ್ತಾರೆ. ಕನ್ನಡದ ಮೊದಲ ಸಾಮಾಜಿಕ ಕಾದಂಬರಿಗಳಲ್ಲಿ ಒಂದಾದ ರೊದ್ದ ವ್ಯಾಸರಾವ್ ವೆಂಕಟರಾವ್ ವಿರಚಿತ ‘ಚಂದ್ರಮುಖಿಯ ಘಾತವು’ (1900) ಕಾದಂಬರಿಯನ್ನು ಹಾಗೂ ‘ಸ್ಟೀಲ್ ನಿಬ್ಸ್ ಆರ್ ಸ್ಪ್ರೌಟಿಂಗ್: ನ್ಯೂ ದಲಿತ್ ರೈಟಿಂಗ್ ಫ಼್ರಮ್ ಸೌತ್ ಇಂಡಿಯ’ ಸಂಕಲನಕ್ಕಾಗಿ ಕವನಗಳು, ಕತೆಗಳು, ಹಾಗೂ ಪ್ರಬಂಧಗಳನ್ನು ಇಂಗ್ಲಿಷಿಗೆ ಅನುವಾದ ಮಾಡಿದ್ದಾರೆ. 

ಕೇರೂರ ವಾಸುದೇವಾಚಾರ್ಯರ ‘ವಿಸ್ಮಯಜನಕವಾದ ಹಿಂಸೆಯ ಕ್ರಮವು’ ಎಂಬ ಸ್ವರಚಿತ ಶರ್ಲಾಕ್ ಹೋಮ್ಸ್ ಕತೆಯನ್ನು ಹಾಗೂ ದೀಪಾ ಹಿರೇಗುತ್ತಿಯವರ ತಪ್ತ  ಎಂಬ ಕತೆಯನ್ನು ಸಹ ಇಂಗ್ಲಿಷಿಗೆ ಅನುವಾದ ಮಾಡಿದ್ದಾರೆ.  ಇವರು ಇಂಗ್ಲಿಷಿಗೆ ಅನುವಾದ ಮಾಡಿದ ಕನ್ನಡದ ಮೇರು ಕವಿ ಶ್ರೀ ಕೆ. ವಿ. ತಿರುಮಲೇಶರ ಕವನಗಳು ಇಂಗ್ಲಿಷ್ ಸಾಹಿತ್ಯ ಪತ್ರಿಕೆಗಳಾದ ‘ಸೆಷುರೆ,’ ‘ಮ್ಯೂಜ಼್ ಇಂಡಿಯ,’ ಹಾಗೂ ‘ಮೈದಾನಂ’-ನಲ್ಲಿ ಪ್ರಕಟವಾಗಿವೆ. 

ಜಯಶ್ರೀನಿವಾಸರು ಕನ್ನಡಕ್ಕೆ ಅನುವಾದ ಮಾಡಿದ ಖ್ಯಾತ ವಿದೇಶಿ ಕವಿಗಳ ಕವನಗಳು ಕನ್ನಡ ಸಾಹಿತ್ಯ ಪತ್ರಿಕೆಗಳಾದ ಭಾಷಾ ಭಾರತಿಅವಧಿ, ಕೆಂಡಸಂಪಿಗೆಋತುಮಾನ, ಅಕ್ಷರ ಸಂಗಾತ, ಹಾಗೂ ಮಿಂಚುಳ್ಳಿ-ಯಲ್ಲಿ ಪ್ರಕಟವಾಗಿವೆ.  

ಜಯಶ್ರೀನಿವಾಸರು ಕನ್ನಡಕ್ಕೆ ಅನುವಾದಿಸಿದ ಪೋಲಂಡ್ ದೇಶದ ಕವನಗಳ ಸಂಕಲನ, “ಸುರಿದಾವೋ ತಾರೆಗಳು: ಅನುವಾದಿತ ಪೋಲಿಷ್ ಕವನಗಳು’,” ಕುವೆಂಪು ವಿಶ್ವವಿದ್ಯಾಲಯದ ಪ್ರಸಾರಾಂಗವು ಏಪ್ರಿಲ್ 2022-ರಲ್ಲಿ ಪ್ರಕಟಿಸಿತು. “ಬಾಲ್ಟಿಕ್ ಕಡಲ ಗಾಳಿ” ಎಂಬ ಹೆಸರಿನಲ್ಲಿ ಇವರು ಕನ್ನಡಕ್ಕೆ ಅನುವಾದ ಮಾಡಿದ ಎಸ್ಟೋನಿಯಾ, ಲ್ಯಾಟ್ವಿಯಾ, ಹಾಗೂ ಲಿಥುವೇನಿಯಾ ದೇಶದ ಕವನಗಳ ಸಂಕಲನವನ್ನು ಮಸ್ಕಿಯ ಬಂಡಾರ ಪ್ರಕಾಶನವು ಡಿಸೆಂಬರ್ 2024-ರಲ್ಲಿ ಪ್ರಕಟಿಸಿತು. 

ದ ಹಿಂದು’ ದಿನಪತ್ರಿಕೆಯು ಇವರು ಇಂಗ್ಲಿಷಿನಲ್ಲಿ ಬರೆದ ಕನ್ನಡ ಅರುಣೋದಯ ಸಾಹಿತ್ಯದ ಮೇಲಿನ 15 ಲೇಖನಗಳ ಸರಣಿಯನ್ನು ಜನವರಿ-ಡಿಸೆಂಬರ್ 2020-ರ ಅವಧಿಯಲ್ಲಿ ಪ್ರಕಟಿಸಿತ್ತು.  ಜಯಶ್ರೀನಿವಾಸ ರಾವ್ ಅವರು ಕನ್ನಡ ಅರುಣೋದಯ ಸಾಹಿತ್ಯ ಹಾಗೂ ಅನುವಾದ ವಿಷಯಗಳ ಬಗ್ಗೆ ಬರೆದ ಪ್ರಬಂಧಗಳು ದೇಶದ ಹೆಸರಾಂತ ಸಂಶೋಧನಾ ಪತ್ರಿಕೆಗಳಲ್ಲಿ ಪ್ರಕಟವಾಗಿವೆ.        

ಹೈದರಾಬಾದಿನ CIEFL-ನಲ್ಲಿ (ಈಗ The EFL University) PGDES ಹಾಗೂ M.Phil. ಪದವಿಗಳನ್ನು ಪಡೆದು, ಅದೇ ವಿಶ್ವವಿದ್ಯಾಲಯದಲ್ಲಿ ‘Translation and Transformation: The Early Days of the Novel in Kannada’ ಶೀರ್ಷಿಕೆಯಡಿಯಲ್ಲಿ ನಡೆಸಿದ ಸಂಶೋಧನೆಗಾಗಿ 2003-ರಲ್ಲಿ PhD ಪದವಿ ಪಡೆದವರು.

1.ಸಂತವಾಣಿ (ಮೂಲ: ಸಂತವಾಣಿ)

ಜೋರಾಗಿ ಬೀಸುತ್ತಿರುವ ಬಿರುಗಾಳಿಯಲ್ಲಿ
ಅವನು ಲಾಂದ್ರವನ್ನು ಹಿಡಿದುಕೊಂಡು
ನಡೆದು ಹೋಗುತ್ತಿದ್ದ
ಪ್ರಯಾಣ ಅರಾಮಾವಾಗಿ ಕಳೆಯುವುದೆಂದು ಖುಷಿಯಲ್ಲಿದ್ದ.

ಸ್ವಲ್ಪ ಹೊತ್ತಿನಲ್ಲಿ
ಚಿಮಣಿಯ ಒಂದು ಕಡೆ
ಕಪ್ಪಾಗುತ್ತಾ ಬಂತು.
ಬತ್ತಿಯನ್ನು ಕೋರೆಯಾಗಿ ಕತ್ತರಿಸಲಾಗಿದೆಯೆಂದು
ಅವನಿಗೆ ಅನಿಸತೊಡಗಿತು.
ಮೆಲ್ಲಮೆಲ್ಲನೆ ಕಪ್ಪು ಹರಡುತ್ತಾ ಹೋಯ್ತು
ಬೆಳಕು ಮಂದವಾಗುತ್ತಾ ಹೋಯ್ತು.

ಅವನು ಬತ್ತಿಯನ್ನು ಏರಿಸಿದ
ಆದರೆ ಬೆಳಕಿನ ಸ್ಥಿತಿ
ಹಾಗೇ ಇತ್ತು!

ಹಾಕಿಯೇ ಇಲ್ಲ ಅನ್ನುವಷ್ಟು
ಕಡಿಮೆ ಎಣ್ಣೆ ಇದರಲ್ಲಿ ಹಾಕಿದ್ದಾರೆ
ಅಂತ ಅನಿಸಿತು ಅವನಿಗೆ.

ಸ್ವಲ್ಪ ಹೊತ್ತು ಆ ಕಾಣಿಸದ ಬೆಳಕಿನ
ಸಹಾಯದಿಂದಲೇ ನಡೆದ ಅವನು,
ಎಣ್ಣೆಯಿಲ್ಲದ ಬತ್ತಿಯನ್ನು ಏರಿಸುತ್ತಾ.

ಆದರೆ ಕೊನೆಗೆ ಆ ಅಂತಿಮ ಆಸರೆ
ಸಹ ಕೈ ಕೊಡುವುದೆಂದು ಖಚಿತವಾಯಿತು.

ಜೋರಾಗಿ ಬಿಸುತ್ತಿರುವ ಬಿರುಗಾಳಿಯಲ್ಲಿ
ಅವನು ಆರಿದ ಲಾಂದ್ರವನ್ನು ಹಿಡಕೊಂಡು
ನಿಂತಿರುವನು
ಎಷ್ಟು ಹೊತ್ತಿನಿಂದ ಎಂದು ಗೊತ್ತಿಲ್ಲ,
ಇನ್ನು ಎಷ್ಟು ಹೊತ್ತಿನವರೆಗೆ ಎಂದು ಗೊತ್ತಿಲ್ಲ.

ಕ್ಷಮಿಸಿ ನನ್ನನ್ನು!
ಈಗ ನಾನು ಯಾವ ಕತ್ತಲೆಯನ್ನು ವರ್ಣಿಸಲಿ,
ಅವನ ಹೊರಗಿರುವ ಕತ್ತಲೆಯನ್ನಾ
ಅಥವಾ ಅವನ ಒಳಗಿನ ಕತ್ತಲೆಯನ್ನಾ?
ಯಾವ ರಸ್ತೆಯನ್ನು ವರ್ಣಿಸಲಿ,
ಅವನು ಮುಂದಕ್ಕೆ ಹೋಗಬೇಕಾಗಿರುವ ರಸ್ತಯನ್ನಾ
ಅಥವಾ ಅವನು ಈಗ ತಿರುಗಿ ಹೋಗಲಾಗದ ರಸ್ತೆಯನ್ನಾ?

2.ನಾನು ಪೆನ್ನನ್ನು ಎತ್ತಿಕೊಂಡಾಗ (ಮೂಲ: ಜಬ್ ಕಲಮ್ ಉಠಾತಾ ಹೂಂ)

ನಾನು ಪೆನ್ನನ್ನು ಎತ್ತಿಕೊಂಡಾಗ,
ಬಿಳಿ ಕಾಗದದ ಮೇಲೆ
ಉದ್ದ ಕೊಕ್ಕಿನ ಹಕ್ಕಿಯೊಂದು
ಕೂತಿರುವುದ ಕಾಣುವೆನು.

ಅದು ಕೊಕ್ಕು ತೆರೆಯಲ್ಲ,
ಕುಪ್ಪಳಿಸಲ್ಲ, ಮಾತಾಡಲ್ಲ,
ಅಲ್ಲಾಡಲ್ಲ, ಚಲಿಸುವುದೂ ಇಲ್ಲ,
ಸದ್ದಿಲ್ಲದೆ ಕರಗಿಹೋಗುತ್ತೆ ಅದು.
ಹೆಸರೂ ಹೇಳಲ್ಲ,
ಯಾವ ಕೆಲಸವೂ ಮಾಡಲ್ಲ,
ಆದರೂ ಮುಂಜಾವನ್ನು
ಸಂಜೆಯಾಗಿಸುತ್ತೆ ಅದು.

ಸುಮ್ಮನೆ ಹೀಗೆ – ಹೌದು ಸುಮ್ಮನೆ ಹೀಗೆ –
ದಿನ ಮುಳುಗಿ ಹೋಗುತ್ತೆ
ಮನ ಬೇಸರಗೊಳ್ಳುತ್ತೆ
ಕತ್ತಲು ಮುತ್ತಿಕೊಳ್ಳುತ್ತೆ
ಮಾತು ತಿರುಗಿ ಹೋಗುತ್ತೆ.
ನನ್ನಿ
ಓ ಬೆಳಕೇ!
ನನ್ನಿ
ಓ ಪೆನ್ನು ಹಿಡಿದ ಕೈಯ ನೆರಳೇ.
ನನ್ನಿ
ಓ ಮುದ್ದು
ಕೊಲೆಗಾರ್ತಿ
ಹಕ್ಕಿಯೇ,
ನನ್ನಿ! ನನ್ನಿ!
ನಿಮ್ಮೆಲ್ಲರಿಗೂ
ನನ್ನ ನಮಸ್ಕಾರಗಳು.

3. ಕೆಂಪಾದ ಅಂಗೈಗಳು (ಮೂಲ: ಸುರ್ಖ್ ಹಥೇಲಿಯಾಂ)

ದುಂಬಿಗಳು ಕಮಲದಹೂವಾಗಿ
ಬದಲಾಗುವುದನ್ನು
ಮೊದಲ ಬಾರಿ
ಕಂಡೆ ನಾನು,
ಆಮೇಲೆ, ಕಮಲದಹೂವು
ನೀಲಿವರ್ಣದ ನೀರಾಗಿ
ಬದಲಾಗುವುದನ್ನು ಕಂಡೆ,
ಆಮೇಲೆ ನೀಲಿವರ್ಣದ ನೀರು
ಅಸಂಖ್ಯಾತ ಬಿಳಿಹಕ್ಕಿಗಳಾಗಿ,
ಆಮೇಲೆ ಬಿಳಿಹಕ್ಕಿಗಳು ಕೆಂಪು ಆಕಾಶವಾಗಿ
ಬದಲಾಗುವುದನ್ನು,
ಆಮೇಲೆ ಆಕಾಶ ನಿನ್ನ ಅಂಗೈಗಳಾಗಿ
ಬದಲಾಗುವುದನ್ನು,
ಮತ್ತೆ ನನ್ನ ಕಣ್ಣುಗಳ ಮುಚ್ಚುವುದನ್ನು.
ಹೀಗೆ ಕಣ್ಣೀರು
ಕನಸಾಗುವುದನ್ನು –
ಮೊದಲ ಬಾರಿ
ಕಂಡೆ ನಾನು.

4. ರಾತ್ರಿಯ ಮಳೆ (ಮೂಲ: ರಾತ್ ಮೆಂ ವರ್ಷಾ)

ನನ್ನ ಉಸಿರುಗಳ ಮೇಲೆ ಮೊಡಗಳು ಇಳಿಯತೊಡಗಿವೆ,
ಕಣ್ರೆಪ್ಪೆಗಳ ಮೇಲೆ ಆಕಾಶ ಬಾಗಿದೆ,
ದಿಗಂತವು ನನ್ನ ಭುಜಗಳ ಜತೆ ಢಿಕ್ಕಿಹೊಡೆಯುತ್ತದೆ,
ಇವತ್ತು ರಾತ್ರಿ ಮಳೆ ಬರುವುದು.
ಎಲ್ಲಿರುವೆ ನೀನು?

ಗಾಜಿನ ಒಂದು ದೊಡ್ಡ ಅಕ್ವೇರಿಯಮ್-ನ್ನು
ಆಕಾಶದಲ್ಲಿ ಮೋಡಗಳ ಮೇಲೆ ಕಟ್ಟಿರುವೆ,
ಅದರಲ್ಲಿ ಅಸಂಖ್ಯಾತ ಬಣ್ಣಬಣ್ಣದ ಮೀನುಗಳನ್ನು ಹಾಕಿರುವೆ,
ಇಡೀ ಸಮುದ್ರವನ್ನು ಅದರಲ್ಲಿ ತುಂಬಿಸಿರುವೆ.
ಇವತ್ತು ರಾತ್ರಿ ಆ ಅಕ್ವೇರಿಯಮ್ ಒಡೆಯುತ್ತದೆ –
ಸುರಿಮಳೆಯ ಒಂದೊಂದು ಹನಿಯ ಜತೆಗೆ
ಬಣ್ಣಬಣ್ಣದ ಮೀನುಗಳು ಬೀಳುತ್ತವೆ.
ಎಲ್ಲಿರುವೆ ನೀನು?

ಹನಿಗಳ ಮೇಲೆ ಹಾರಾಡುವ
ಹೊನಲುಗಳ ಮೇಲೆ ಏರುವ-ಇಳಿಯುವ
ಗಾಳಿಯ ಬೀಸುಗಳಲ್ಲಿ ಓಡಾಡುವ, ಏದುಸಿರು ಬಿಡುವ
ನನ್ನ ರೋಮಗಳ ಪ್ರತಿಯೊಂದು ಪುಳಕದಿಂದ ರೂಪಿಸಿರುವ
ಆ ಅಸಂಖ್ಯಾತ ಮೀನುಗಳನ್ನು ನಿನಗೆ ತೋರಿಸಲು ಬಯಸುವೆ.

5. ಕೆಂಪು ಸಾಯ್ಕಲ್ (ಮೂಲ: ಲಾಲ್ ಸಾಯ್ಕಿಲ್)

ರಾತ್ರಿಯಿಡೀ
ಒಂದು ಕೆಂಪು ಸೈಕಲ್
ಮುಳ್ಳಿನ ಬೇಲಿಗೆ ಆತುಕೊಂಡು
ಒಂಟಿಯಾಗಿ ನಿಂತಿತ್ತು.
ಪೋಲಿಸರ ಸೀಟಿಗಳು ಮೊಳಗುತ್ತಿದ್ದವು
ಅವರ ಭಾರಿ ಬೂಟುಗಳ ಸದ್ದು ಕೇಳಿಸುತ್ತಿತ್ತು.

ಬೆಳಗಾಗುತ್ತಲೇ ಎಲ್ಲಿಂದಲೋ ಬಂದ ಒಬ್ಬ ಹುಡುಗ
ಇಬ್ಬನಿಯಲಿ ಒದ್ದೆಯಾದ ತಣ್ಣನೆಯ
ಸೈಕಲಿನ ಗಂಟೆಯನ್ನು ಬಾರಿಸ ತೊಡಗಿದ.

ಒಂದು ಭಾರಿ ಕಪ್ಪು ವಾಹನ ಗುಡುಗಾಡುತ್ತಾ
ಸೈರನ್ ಮೊಳಗಿಸುತ್ತಾ ಬಂದು ನಿಂತಿತ್ತು.
ಆ ಹುಡುಗ ಗಂಟೆ ಬಾರಿಸುವುದನ್ನು ಮರೆತು
ಗಾಡಿಯ ಮಾಡಿನ ಮೇಲೆ ಹೊಳೆಯುತ್ತಿದ್ದ
ನೀಲಿ ಬಣ್ಣದ ದೀಪವನ್ನು ನೋಡತೊಡಗಿದ …
ಆಮೇಲೆ, ಆ ವಾಹನ ಅವನನ್ನು ಎತ್ತಿಕೊಂಡು ಹೊರಟುಹೋಯಿತು.

ಮೊದಲ ಬಾರಿಗೆ, ನನ್ನ ಕೋಣೆಯ ನೆಲದ ಮೇಲೆ
ಕಿಟಕಿಯ ಸರಳುಗಳ ನೆರಳು
ಬೀಳುವುದನ್ನು ನೋಡಿ
ಗಾಭರಿಯಾದೆ.

6. ಪದಗಳ ತಳ್ಳುಬಂಡಿ (ಮೂಲ: ಶಬ್ದೋಂ ಕಾ ಠೇಲಾ)

ನನ್ನ ತಂದೆಯವರು ನನಗೆ
ಒಂದು ನೊಟ್‌ಬುಕ್ ಕೊಟ್ಟರು
ಅದರ ಎಲ್ಲಾ ಐವತ್ತು ಪುಟಗಳನ್ನು
ನಾನು ಭರ್ತಿ ಮಾಡಿರುವೆ.

ಎಷ್ಟು ಬರೆದೆನೋ
ಅದಕ್ಕಿಂತ ಹೆಚ್ಚು ಹೊಡೆದುಹಾಕಿರುವೆನು
ಕೆಲವು ಪುಟಗಳು ಅರ್ಧ ಖಾಲಿಯಾಗಿ ಉಳಿದಿವೆ
ಕೆಲವು ಪುಟಗಳಲ್ಲಿ ಕೊಂಚ ಶಾಯಿ ಬಿದ್ದಿದೆ
ಅಲ್ಲೆಲ್ಲೋ ಅಂಚುಗಳಲ್ಲಿ
ಮುಖಗಳು ಚಿತ್ರಿತವಾಗಿವೆ
ಮನುಜರದ್ದು ಮತ್ತು ಮೃಗಗಳದ್ದು ಜತೆಯಾಗಿ

ಕೆಲವೆಡೆ ಕೊಳಕು ಕೈಗಳ ಕಲೆಗಳಿವೆ
ಕೆಲವೆಡೆ ಯಾವುದೋ ಒಂದು ಪದದ ಮೇಲೆ
ಎಷ್ಟೊಂದು ಸಲ ಶಾಯಿ ಸುತ್ತಿದೆಯೆಂದರೆ
ಅದು ಒಂದು ನೇಣಿನ ಕುಣಿಕೆಯಂತೆ ಕಾಣಿಸುತ್ತದೆ

ಹೀಗೆ
ನಾನು ಐವತ್ತು ಪುಟಗಳನ್ನು ಭರ್ತಿ ಮಾಡಿರುವೆ.

ಇದರಲ್ಲಿ ನನ್ನದೇನೂ ತಪ್ಪಿಲ್ಲ
ನಾನು ಯಾವಾಗಲೂ ಪ್ರಯತ್ನಿಸಿರುವೆ
ಕೈಗಳು ನಡುಗಬಾರದೆಂದು
ಬರಹ ಅಚ್ಚುಕಟ್ಟಾಗಿ ಸ್ಪಷ್ಟವಾಗಿರಬೇಕೆಂದು
ಬರೆದ ನಂತರ ಹೊಡೆದುಹಾಕುವಂತಿರಬಾರದೆಂದು

ಆದರೆ ಮನೋಬಲ ಕುಸಿದ ಅನಾರೋಗ್ಯದ ಕ್ಷಣಗಳಲ್ಲಿ
ಬಿಳಿಯ ಪುಟ ಕಪ್ಪಾಗಿ ಕಾಣಿಸತೊಡಗಿದೆ
ಪದಗಳು ವಾಕ್ಯಗಳಿಂದ ಉರುಳಿ ಬಿಟ್ಟಿವೆ
ಕೆಲಹೊತ್ತಿನ ಮಟ್ಟಿಗೆ,
ಯಾತ್ರೆಯೊಂದು ನಿಂತುಬಿಟ್ಟಂತೆ.

ಮುಂದಕ್ಕೆ ಇನ್ನೂ ಇವೆ ಖಾಲಿ ಪುಟಗಳು
ನಿರ್ಜನ ಬಯಲಿನಂತೆ
ಯಾ ಕತ್ತಲು ಕಾಡಿನಂತೆ.
ಹಿಮ ಬೀಳುತ್ತಲಿದೆ.

ವಾಕ್ಯಗಳಿಂದ ತೆಗೆದುಹಾಕಿದ ಪದಗಳ
ಈ ತಳ್ಳುಬಂಡಿಯನ್ನು ಎಳೆಯಬೇಕು,
ನಿಮ್ಮಲ್ಲಿ ಪ್ರತಿಯೊಬ್ಬರಿಗೂ
ಕೊಡಬೇಕೆಂದಿರುವ
ಅವೆಲ್ಲವೂ ಇದೆ ಅದರಲ್ಲಿ,
ಆದರೆ ಮೊದಲು ನಿಮ್ಮ ಬಸ್ತಿಯವರೆಗೆ ತಲುಪಿದರೆ ತಾನೆ.

ಮಜಬೂತಾಗಿದೆ ಈ ನೋಟ್‌ಬುಕ್ಕಿನ ಹೊಲಿಗೆ
ಬೆವರಿನಿಂದ ಯಾ ಕಣ್ಣೀರಿನಿಂದ
ಯಾವುದೇ ಹಾನಿಯಾಗಲಿಲ್ಲ ಇದಕ್ಕೆ!

ಒಂದುವೇಳೆ ಪದಗಳ ಹಾಗೆ ಎಂದಾದರೂ
ಈ ಕೈಯಿ ಸಹ ಉದುರಿಬಿದ್ದರೆ,
ಈ ನಿರ್ಜನ ಪ್ರದೇಶದಲ್ಲಿ
ಇದರ ಚರ್ಮದ ಮಿನುಗುವ
ಬೆಳಕನ್ನು ತಡಕಾಡಿಕೊಂಡು
ಬಂಡಿಯ ತನಕ ಬಾ,
ಬಂದು, ನನ್ನ ತಂದೆಯವರು ನನಗೆ ಕೊಟ್ಟ
ಈ ನೋಟ್‌ಬುಕ್ಕನ್ನು ತಗೊಂಡು ಹೋಗು,
ಅದರ ಎಲ್ಲಾ ಐವತ್ತು ಪುಟಗಳನ್ನು ನಾನು
ಭರ್ತಿಮಾಡಿರುವ ನೋಟ್‌ಬುಕ್ಕನ್ನು

ಆದರೆ ದಯವಿಟ್ಟು
ನಿನ್ನ ಪೊದೆಗೂದಲಿನ ಕಾಡುನಾಯಿಗಳನ್ನು
ಕರಕೊಂಡು ಬರಬೇಡ,
ಅವುಗಳಿಗೆ ಏನು ಕಲಿಸಲಾಗಿದೆಯೋ
ಅವು ಅದನ್ನೇ ಮೂಸುತ್ತವೆ,
ಯಾವುದು ಇರುವುದೋ
ಅದನ್ನಲ್ಲ.

‍ಲೇಖಕರು Admin

10 October, 2025

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading