ನಾನು, ನನ್ನವ್ವ & ಅಣ್ಣಾವ್ರು

ಜಯರಾಮಾಚಾರಿ 

ನನ್ನವ್ವ ಅಣ್ಣಾವ್ರ ದೊಡ್ಡ ಫ್ಯಾನು. ಅಭಿಮಾನಿಗಳೇ ದೇವ್ರು ಅಂತ ಅಂದ್ರು ಅಣ್ಣಾವ್ರು, ಅಣ್ಣಾವ್ರನ್ನ ಸಾಕ್ಷಾತ್ ದೇವರಾಗಿ ನೋಡಿದ್ದು ನನ್ನವ್ವ. ಬರೀ ನನ್ನವ್ವ ಅಲ್ಲ ಇಡೀ ನಮ್ ಫ್ಯಾಮಿಲಿಯೇ ಡಾ. ರಾಜ್ಕುಮಾರರ ಫ್ಯಾನು. ನನ್ನ ಹಿರಿಯಣ್ಣ ರಾಜ್ಕುಮಾರ್ ಕೈ ಕುಲುಕುತ್ತ ಹೊಡಿಸಿಕೊಂಡ ಫೋಟೋ ನಮ್ಮ ಮನೇಲಿ ತುಂಬಾ ದಿನ ಇತ್ತು. ಅಣ್ಣಾವ್ರ ಒಡಹುಟ್ಟಿದವರು ಸಿನಿಮಾಕ್ಕೆ ಇಡೀ ಫ್ಯಾಮಿಲಿ ಅಂದ್ರೆ ಅಣ್ಣ ಅತ್ತಿಗೆ ಅಕ್ಕ ಅವ್ವ ಪಿಳ್ಳೆ ಪಿಸ್ಕುಗಳು ಎಲ್ಲ ಪ್ರಸನ್ನ ಥಿಯೋಟರಿಗೆ ಹೋಗಿ ನೋಡಿದ್ದು ಇನ್ನೂ ಹಾಗೆ ಇದೆ.

ನನ್ನವ್ವನಿಗೆ ಕಿವಿ ಚಿಕ್ಕಂದಿನಿಂದ ಅಷ್ಟಾಗಿ ಕೇಳದು, ತೀರ ಹತ್ತಿರ ಬಂದು ಮಾತಾನಾಡಿದರಷ್ಟೇ ಆಕೆಗೆ ಕೇಳಿಸುತ್ತಿದ್ದುದು, ಮಿಕ್ಕೆಲ್ಲ ಸಮಯದಲ್ಲಿ ನಮ್ಮ ಲಿಪ್ ಮೂವ್ಮೆಂಟ್ ನೋಡಿ ಅರ್ಥ ಮಾಡಿಕೊಳ್ಳುತ್ತ ಇದ್ಳು. ನನ್ನವ್ವನಿಗೆ ಅಣ್ಣಾವ್ರು ಅಂದ್ರೆ ಹೆವಿ ಅಭಿಮಾನ ಲವ್ವು. ಅಣ್ಣಾವ್ರ ಪೋಸ್ಟರ್ ಕಂಡ್ರೂ ರೋಡಲ್ಲೇ ನಿಂತ್ಕೊಂಡು ಕೈ ಎರಡರಿಂದ ಅಣ್ಣಾವ್ರು ಮುಖ ನೀವಾಳಿಸಿ ಲೊಟಕೆ ತೆಗೆದು ದೃಷ್ಟಿ ತೆಗೆಯುತ್ತಿದ್ದಳು. ಪ್ರತಿ ಬಾರಿ ಕಿವಿ ಕಚ್ಚುವಷ್ಟು ಲೊಟಕೆ ಸದ್ದು. ಅಣ್ಣಾವ್ರನ್ನ ನೋಡಿದರೆ ಏಕಾಏಕಿ ನಗುಮುಖ ಹೆೊತ್ತಿಕೊಂಡು ಖುಷಿಯಾಗುತ್ತಿದ್ದಳು. ದಿನಕ್ಕೊಂದು ಬಾರಿಯಾದರೂ ರಾಜ್ಕುಮಾರನ ಮಾತಿಗೆಳೆದು “ರಾಜ್ಕುಮಾರ್ ನೋಡಿ ಕಲಿತ್ಕೊ” ಅಂತ ಮುಖಕ್ಕೆ ಮಂಗಳಾರತಿ ಎತ್ತುತ್ತಿದ್ದಳು. ಇವತ್ತೇನಾದ್ರೂ ಒಸಿ ಒಳ್ಳೇ ಬುದ್ದಿ ಗಿದ್ದಿ ಇದ್ರೆ ಅದಕ್ಕೆ ಅವ್ವ ಮತ್ತು ಅಣ್ಣಾವ್ರೇ ಕಾರಣ.

ನನ್ನವ್ವನಿಗೆ ಕಿವಿ ಕೇಳಿಸದದಿದ್ದರೂ ಅಣ್ಣಾವ್ರ ಸಿನಿಮಾ ಟೀವಿಲೇನಾದ್ರೂ ಬಂದ್ರೆ ಇಡೀ ರೋಡಿಗೆ ಕೇಳುವಷ್ಟು ಸೌಂಡು ಎತ್ತರಿಸಿ, ಟಿವಿಗೆ ಎರಡಿ ಅಡಿ ಹತ್ತಿರದಲ್ಲಿ ಕೂತು ಅಣ್ಣಾವ್ರುಗೆ ದೃಷ್ಟಿ ತಕ್ಕೊಂಡು, ಅಣ್ಣಾವ್ರ ಡೈಲಾಗ ಎಂಜಾಯ್ ಮಾಡ್ಕೊಂಡು, ನೋಡೋ ಲೇ ಹೆಂಗೆ ಕುಣಿತಾನೇ , ಹೆಂಗೆ ಬಾರಿಸ್ತಾನೆ ಅಂತ ನಂಗೆ ಉಕ್ಕೊಂಡು, ಅವನಿಗೆ ವಿಲ್ಲನುಗಳು ಹೊಡೆದಾಗ ವಿಲ್ಲನುಗಳಿಗೆ ಇಡೀ ಶಾಪ ಹಾಕ್ಕೊಂಡು, ಕೈಮುರಿಕ್ಕೊಂಡು ಎಕ್ಕುಟ್ಟೊಗ ಅಂತ ಅನ್ಕೊಂಡು, ರಾಜ್ಕುಮಾರ್ ಅತ್ತಾಗ ಗಳ ಗಳ ಅಂತ ಅತ್ತುಬಿಡ್ತಾ ಇದ್ಳು. ಮಯೂರ ಹಾಲುಜೇನು ಕ್ಲೈಮಾಕ್ಷ್ ನಲ್ಲೀ ಅವಳು ಅಳೋದನ್ನ ಆ ಬ್ರಹ್ಮ ಬಂದರೂ ತಪ್ಪಿಸಕ್ಕೆ ಆಗ್ತಾ ಇರಲಿಲ್ಲ. ಇನ್ನೂ ಕೃಷ್ಣನಾಗಿಯೋ ರಾಮನಾಗಿಯೋ ಬಂದಾಗ ಸಾಕ್ಷಾತ್ ದೇವರೆ ಬಂದ ಅನ್ಕೊಂಡು ನಮಸ್ಕರಿಸುತ್ತಿದ್ದಳು.

ನಮಗೆ ಇವೆಲ್ಲ ಆ ಕ್ಷಣಗಳಲ್ಲೀ ಆದಿನಗಳಲ್ಲೀ ಕಾಮಿಡಿಯಾಗಿತ್ತು. ನಾನು ನನ್ನ ಕೊನೆ ಅಣ್ಣನಿಗೆ ರಾಜ್ಕುಮಾರು ಅಂದ್ರೆ ಅಷ್ಟಕ್ಕಷ್ಟೇ ಅವನು ಅಣ್ಣಾವ್ರನ್ನ ಬಾಂಡ್ಲೀ ಅಂತಿದ್ದ. ನಾನು ಕೂಡ ಅದೇ ರೂಢಿ ಮಾಡ್ಕೊಂಡಿದ್ದೆ. ನಾವು ಪ್ರತಿ ಬಾರಿ ಬಾಂಡ್ಲಿ ಅಂತ ಹೇಳೋದಕ್ಕೂ ನಮ್ಮವ್ವ ಸ್ವಂತ ಕೂಸುಗಳು ಅನ್ನೊದು ಮರ್ತು ನಮಗೆ ಹಿಡಿ ಶಾಪ ಹಾಕ್ತಾ ಇದ್ಳು. ಆಕೆಗೆ ಕಷ್ಟ ಬಂದಾಗಲೂ ಬದುಕಲು ಪ್ರೇರೇಪಿಸಿದ್ದೇ ಅದೇ ಅಣ್ಣಾವ್ರು. ಆಕೆ ತೀರ ಕಷ್ಟದಲ್ಲಿದ್ದಾಗ ಎಂದೂ ಕಳ್ಳ ಬೀಳಲಿಲ್ಲ, ಪರಿಸ್ಥಿತಿಗೆ ಎದುರಾಗಿ ಓಡಿ ಹೋಗಲಿಲ್ಲ, ಕಡೆವರೆಗೂ ಪ್ರತಿ ಕ್ಷಣವನ್ನೂ ಜೀವನನ ಪ್ರೀತಿಸುತ್ತಾ, ಎಲ್ಲರೂ ಬೇಕು ಎಂದು ಮನೆಯಿಂದ ಹೊರಗಟ್ಟಿದ ಮಕ್ಕಳನ್ನೂ ಕ್ಷಮಿಸಿ, ಬೈಯ್ದು ಹೊಡೆದು ಗೋಳಾಡಿಸಿದ ಸೊಸೆಯಂದಿರನ್ನು ಕೂಡ ಕ್ಷಮಿಸು ಮೊಮ್ಮಕ್ಕಳನ್ನೂ ಯಾವ ಭೇದವಿಲ್ಲದೇ ಪ್ರೀತಿಸಿ ಹೋದಳು. ಅವಳು ಹಾಗಿರಲೂ ಅದರಲ್ಲೀ ಅಣ್ಣಾವ್ರ ಪಾತ್ರ ತುಂಬ ಮುಖ್ಯವಾದುದು. ಆಕೆ ಓದಲಿಲ್ಲ ಬರೀಲಿಲ್ಲ ಎಲ್ಲೂ ಹೆೊರಗೆ ಓಡಾಡಲಿಲ್ಲ. ಆದರೂ ಆಕೆ ಅಷ್ಟು ಜೀವನ್ಮುಖಿಯಾಗಿ ಸ್ವಾಭಿಮಾನಿಯಾಗಿ ಬದುಕಿದ್ದು ಹೀಗೆ ಅಣ್ಣಾವ್ರ ಸಿನಿಮಾ ನೋಡುತ್ತಾ ಎಂದು ಅಲ್ಲಗಳೆಯಲಸಾಧ್ಯ. ಒಬ್ಬ ಸಿನಿಮಾ ನಟ ಒಂದು ಜೀವನವನ್ನೇ ರೂಪಿಸುತ್ತಾನೆಂಬುದಕ್ಕೆ ನನ್ನವ್ವನೇ ಸಾಕ್ಷಿ .

ಇದು ಬರೀ ನನ್ನವ್ವನ ಬಗ್ಗೆಯಷ್ಟೇ ಈ ತರ ಅಣ್ಣಾವ್ರಿಂದ ಪ್ರೇರಿತರಾದ ಬದುಕನ್ನು ತಿದ್ದಿಕೊಂಡ ಅದೆಷ್ಟು ಜೀವಗಳಿದೆಯೋ ಗೊತ್ತಿಲ್ಲ. ನನ್ನ ಸ್ನೇಹಿತರಾದ ಉಮೇಶಣ್ಣನ ಅಮ್ಮ ಕೂಡ ಅಣ್ಣಾವ್ರ ದೊಡ್ಡ ಫ್ಯಾನು ಅಣ್ಣಾವ್ರ ಬರ್ತಡೇ ಗೆ ಪಾಯಸ ಮಾಡಿ ಸಿಹಿ ಹಂಚುತಿದ್ರಂತೆ ಪ್ರತಿ ವರ್ಷ ಮಿಸ್ ಮಾಡ್ದೇ. ಈ ರೀತಿ ಬಹುಷಃ ಜಗತ್ತಿನ ಯಾವ ನಟನೂ ಕೂಡ ಒಬ್ಬ ಸಾಮಾನ್ಯರಲ್ಲೀ ಸಾಮಾನ್ಯನ ಮನೆ ಮನ ತಲುಪಿದ್ದ ಉದಾಹರಣೆ ದಕ್ಕಿಲ್ಲ ದಕ್ಕುವುದು ಇಲ್ಲ. ಜಯಂತ್ ಕಾಯ್ಕಿಣಿ ಪ್ರತಿ ಕಾರ್ಯಕ್ರಮದಲ್ಲೂ ಒಂದು ಮಾತು ಹೇಳ್ತ ಇರ್ತಾರೆ ಜಗತ್ತಿನ ಬೆಸ್ಟ್ ಆಕ್ಟರ್ ಅಂತ ಇದ್ರೆ ಅದು ಅಣ್ಣಾವ್ರು ಮಾತ್ರ ಅಂತ ಅದು ಅಕ್ಷರಶಃ ಸತ್ಯ.

ಅಣ್ಣಾವ್ರ ನಡೆ ನುಡಿ ಅವರ ಊಟದ ಮೇಲಿನ ಪ್ರೀತಿ ಯಾರೇ ಬಂದರೂ ಬಾಗಿ ನಮಸ್ಕರಿಸಿ ಸತ್ಕಿರಿಸಿ ಬೀಳ್ಕೊಡುವ ವಿನಯ, ಯಶಸ್ಸಿ ಬಾಚಿ ತಬ್ಬಿಕೊಂಡರೂ ಸ್ವಲ್ಪ ಸೈಡಿಗೆ ಬಾಪಾ ಎಂದು ಯೋಗ ಮಾಡ್ಕೆೊಂಡು ಒಂದು ಪೈಸೆ ಇಟ್ಟುಕೊಳ್ಳದ ಶುಭ್ರ ಬಿಳಿ ಶರ್ಟು ಪಂಚೆ ಹಾಕ್ಕೊಂಡು ಅತೀ ಸರಳವಾಗಿದ್ದು ಹೋದ ಜೀವ ಅಣ್ಣಾವ್ರುದು.ಗಾಂಧಿ ನಂತರದ ನಾ ಕಂಡ ಕೇಳಿದ ಸರಳಜೀವಿ ಅಣ್ಣಾವ್ರು.

ಹೆಚ್ಚು ಕಮ್ಮಿ ಅಣ್ಣಾವ್ರು ಸಾಯುವವರೆಗೂ ನನಗೆ ಅಣ್ಣಾವ್ರು ಅಂದ್ರೆ ಅಷ್ಟಕ್ಕಷ್ಟೇ. ಅಣ್ಣಾವ್ರು ಸತ್ತಾಗ ನಾನು ಸೆಕೆಂಡ್ ಇಯರ್ ಡಿಪ್ಲೊಮಾ ಓದ್ತಿದ್ದೆ. ಅವತ್ತು ಕಾಲೇಜಿಂದ ಬರಬೇಕಾದ್ರೆ ಅಣ್ಣಾವ್ರು ವಿಧಿವಶರಾಗಿದ್ದರೂ ಹೌಸಿಂಗ್ ಬೋರ್ಡಿಗೆ ಬಂದಾಗ ನಾನು ವಾಪಾಸ್ಸು ಮನೆಗೆ ಬರ್ತಾ ಇರೋ ಬಸ್ ನಿಲ್ಲಿಸಿಬಿಟ್ರು. ಅಲ್ಲಿಂದ ಮನೆಗೆ ನಡಕ್ಕೊಂಡು ಬಂದಿದಾಯ್ತು ಅಣ್ಣಾವ್ರನ್ನ ಸರಿಯಾಗಿ ಬಯ್ಕೊಂಡಿದ್ದೆ ಅವರು ಸತ್ತ ಒಂದು ವಾರ ಬರೀ ಅವರ ಕುರಿತಾದ ಮಾತು ಮತ್ತು ಅವರ ಸಿನಿಮಾಗಳು ಟೀವಿಲಿ ಆ ಸಮಯದಲ್ಲೀ ಅಣ್ಣಾವ್ರ ಜೀವನ ರೀತಿ ಕೇಳಿ ಅವರ ಸಿನಿಮಾ ನೋಡಿ ಒಂದು ವಾರಕ್ಕೆಲ್ಲ ಅಣ್ಣಾವ್ರು ಈ ನಾಸ್ತಿಕನ ದೇವರಾಗಿಬಿಟ್ರು. ಅಣ್ಣಾವ್ರುಗೆ ಇಂತ ಪಾತ್ರ ಇಂತ ಗೆಟಪ್ಪು ಒಪ್ಪೊಲ್ಲ ಅಂತ ಯಾವುದಾದರೂ ಇದ್ಯ!? ಸುದೀಪು ಸಿಗರೇಟು ಸೇದೋದು ಚೆಂದ ದರ್ಶನ್ ಫೈಟು ಚೆಂದ ಪುನೀತ್ ಡ್ಯಾನ್ಸು ಯಶ್ ಮಾಸ್ಸು ಶಿವಣ್ಣನ ಲಾಂಗು ಹಿಡಿಯೋ ರೀತಿ ಚೆಂದ ಅಂತ ಸಿಗ್ನೇಚರಿದೆ. ಆದರೆ ಅಣ್ಣಾವ್ರೇ ಚೆಂದ ಅಂತ ಇಡೀಯಾಗಿ ನಟನಾಗಿ ಮನೆಮಗನಾಗಿ ಒಪ್ಪಿಕೊಂಡಿದ್ದು ಅಣ್ಣಾವ್ರನ್ನ ಮಾತ್ರ. ಅಣ್ಣಾವ್ರ ಸ್ಥಾನ ಯಾವ ನಟನೂ ತುಂಬಲಿಕ್ಕಾಗದು ಕಾರಣ ಅಣ್ಣಾವ್ರು ಬರೀ ನಟನಲ್ಲ ಆತ ಯೋಗಿ. ಆ ನಗು ಆ ಧ್ವನಿ ಕೇಳಿದರೆ ಇಡೀ ದಿನ ಖುಷಿ. ಹಂಸಲೇಖರಿಗೆ ಅಣ್ಣಾವ್ರು ಅಂತೆ ಸಕತ್ ಲವ್ ಆಗಾಗಿ ಅಣ್ಣಾವ್ರ ಕೈಲಿ ಪದೇ ಪದೇ ಕೇಳೋ ಹಾಡುಗಳ ಸಂಯೋಜಿಸಿದ್ದರು. ಅಣ್ಣಾವ್ರ ಬಾಳುವಂತ ಹೂವೇ ಬಾಡುವ ಆಸೆ ಯಾಕೆ ಅನ್ನೊ ಹಾಡು ಕೇಳಿ ನಾವು ಯಾವುತ್ತೂ ಸೂಸೈಡ್ ಯೋಚನೆ ಕೂಡ ಮಾಡೊಲ್ಲ ಅಂತ ಹಂಸಲೇಖರಿಗೆ ಗುಡ್ಡೆಗಟ್ಟಲೇ ಪತ್ರಗಳು ಬಂದಿತ್ತಂತೆ ಅದು ಅಣ್ಣಾವ್ರ ಕಂಠಕ್ಕಿರೋ ಶಕ್ತಿ.

ನನಗೆ ಇವತ್ತಿಗೂ ಅಣ್ಣಾವ್ರನ್ನ ಕಾರಂತಜ್ಜನ್ನ ನೋಡಿಲ್ವಲ್ಲ ಅನ್ನೊ ಬೇಜಾರಿದೆ. ಅಣ್ಣಾವ್ರನ್ನ ನೋಡೋ ಚಾನ್ಸ್ ಒಂದು ಸಿಕ್ಕಿತ್ತು. ನಮ್ಮ ಸುಂಕದಕಟ್ಟೆಯ ಮೋಹನ್ ಥಿಯೇಟರು ಓಪನ್ ಆದಾಗ. ಆ ದಿನ ಅಣ್ಣಾವ್ರನ್ನ ಕರೆಸಿದ್ದರೂ ಅಣ್ಣಾವ್ರು ಬಂದಿದ್ರು ಕೂಡ. ಆದರೆ ಅಣ್ಣಾವ್ರು ಬಂದ್ರೆ ಅಲ್ಲಿ ಜನಜಾತ್ರೆ ಕೇಳ್ಬೇಕಾ ಆವತ್ತು ಅದೆಷ್ಟು ಸಾವಿರ ಜನ ಸೇರಿದ್ರೊ ಗೊತ್ತಿಲ್ಲ ಅವರ ನಿಯಂತ್ರಿಸಲಾಗದೇ ಗಲಾಟೆಯಾಗಿ ಲಾಟಿ ಚಾರ್ಜು ಕೂಡ ಆಗಿತ್ತು. ನಮ್ಮ ಮನೆಯಿಂದ ಥಿಯೇಟ್ರುಗೆ ಎರಡು ಕಿಮೀ ಅವತ್ತೂ ಆ ಎರಡು ಕಿಮೀವರೆಗೂ ದನ ಓಡುವಾಗ ಬಿಟ್ಟು ಹೋದ ಚಪ್ಪಲಿಗಳು ಎರಡು ಕಿಮೀವರೆಗೂ ಬಿದ್ದಿತ್ತು ಬಿದ್ದ ಚಪ್ಪಲಿಗಳೇ ಅಷ್ಟಿರಲೂ ಬಂದ ಜನರೆಷ್ಟಿರಬಹುದು?!ಈವತ್ತಿಗೂ ಆದಿನ ಅಣ್ಣಾವ್ರನ್ನ ನೋಡಲಾಗಲಿಲ್ವಲ್ಲ ಅನ್ನೊ ಕೊರಗಿದೆ.

ಇದಿಷ್ಟು ಯಾಕೆ ಬರೆಯಬೇಕಿನಿಸಿತು ಅಂದ್ರೆ ಬೆಳಗ್ಗೇನೆ ಡಾಲಿ ಧನಂಜಯ್ ಅನುಶ್ರೀ ಚಾನೆಲ್ ಗೆ ಕೊಟ್ಟಿರೋ ಸಂದರ್ಶನದಲ್ಲಿ “ನಮ್ಮಜ್ಜಿಗೆ ಅಣ್ಣಾವ್ರು ದೇವರಾಗ್ತಾನಲ್ಲ” ಅನ್ನೊ ಕಣ್ಣೀರು ತುಂಬಿಕೊಂಡು ಹೇಳಿದ ಮಾತು ಕೇಳಿ ನನಗೆ ಅಕ್ಷರಶಃ ಕಣ್ಣೀರು ಬಂತು. ಬರೀ ಡಾಲಿ ಅಜ್ಜಿಗಲ್ಲ ಅದೆಷ್ಟು ಜನರಿಗೆ ಅಣ್ಣಾವ್ರು ಆಗಿಲ್ಲ? ಹುಲು ಮಾನವನಾಗಿ ಹುಟ್ಟಿ ದೈವ ಸ್ಥಾನಕ್ಕೆ ಹೋಗೋದು ಅಷ್ಟು ಈಸಿನಾ?! ಅದರ ಹಿಂದೆ ಅದೆಷ್ಟು ಕಷ್ಟ ಶ್ರದ್ಧೇ ಪ್ರೀತಿಯಿರಬೇಕು. ಬರೋಬ್ಬರಿ ನಾಲ್ಕೈದು ತಲೆಮಾರುಗಳ ಇಷ್ಟದೈವವಾದ ಆರಾಧ್ಯದೈವಾಗೋದು ಕನ್ನಡ ಕನ್ನಡತನ ಹಿರಿಯರನ್ನೂ ಕಿರಿಯರನ್ನೂ ಪ್ರೀತಿಸು ಗೌರವಿಸಲು ಹೇಳಿಕೊಡೋದು ಅಂದ್ರೆ ಅದು ಅಣ್ಣಾವ್ರಿಂದ ಅಷ್ಟೇ ಸಾಧ್ಯ.

ಇವತ್ತಿಗೂ ಅಲ್ಲಲ್ಲಿ ನಿಂತ ಅಣ್ಣಾವ್ರ ಪ್ರತಿಮೆಗಳು, ಹೋಟೆಲಲ್ಲಿ especially ನಾನ್ ವೆಜ್ ಹೋಟೆಲಲ್ಲಿ ಬಿರಿಯಾನಿ ಬಾರಿಸುತ್ತ ಕೂತ ಅಣ್ಣಾವ್ರು ಫೋಟೋ, ಗೋಕಾಕ್ ಚಳುವಳೀಲಿ ಅಭಿಮಾನಗಳತ್ತ ಅವರು ಕೈಬೀಸಿದ ಪರಿ, ಸೋತಾಗ ದುಖಃವಾದಾಗ, ಅವ್ವನ ನೆನಪಾದಾಗ ಸಾಂತ್ವಾನ ಕೊಡೋ ಅವರ ಕಂಠ, “ಬಾಳ ಕದನದಲ್ಲೀ ಭರವಸೆಗಳು ಬೇಕು ನಾಳೆ ನನ್ನದೆನ್ನುವ ನಂಬಿಕೆಗಳು ಬೇಕು, ಇಲ್ಲೀ ಈಸಬೇಕು ಇದ್ದು ಜೈಸಬೇಕು” ಅನ್ನೊ ಸಾಲುಗಳಿಂದ ಬದುಕಿನ ಪ್ರೀತಿ ತಬ್ಬುತ್ತೆ.

ಅಣ್ಣಾವ್ರು ಸದಾ ಕಾಲ ನಮ್ಮೊಂದಿಗೆ. ಲವ್ ಯೂ ಮಿಸ್ ಯೂ ❤️

‍ಲೇಖಕರು avadhi

December 30, 2019

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

3 ಪ್ರತಿಕ್ರಿಯೆಗಳು

  1. Lalitha siddabasavayya

    ಬಹಳ ಇಷ್ಟವಾಯ್ತು ಲೇಖನ. ಕನ್ನಡ ಮತ್ತು ಕನ್ನಡ ಸಂಸ್ಕೃತಿಯ ಶಾಶ್ವತ ರಾಯಭಾರಿ ನಮ್ಮ ಅಣ್ಣಾವ್ರು

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: