ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನಾನು ನಗುತ್ತಿದ್ದೇನೆಂದರೆ.. 

ಮಮತಾ ಅರಸೀಕೆರೆ 

ನಾನು ಭರಪೂರ ನಗುತ್ತಿದ್ದೇನೆಂದರೆ
ಅಳು ನನ್ನನಾಳುತ್ತಿದೆಯಂದರ್ಥ

 

ಅಳು ನಗುವಿನ ಮೇಲೆ ಸವಾರಿ ಮಾಡುತ್ತಿದೆ
ಇಂಧನ ತೀರಲು ಕಾಯುತ್ತಿದ್ದೇನೆ

ಅಳುವಿಗೂ ನಗುವಿಗೂ ನಡುವೆ ಗೋಡೆ ಕಟ್ಟಿದೆ
ಸಂಪೂರ್ಣ ನಿರ್ಲಿಪ್ತಳಾಗಬೇಕೆಂದಿದ್ದೇನೆ

ಅದೆಷ್ಟೋ ದಿನಗಳಿಂದ ನಗು ಮರೆತೇಹೋಗಿದೆ
ಅಳುವೆಂಬುದು ವಂಶಪಾರಂಪರ್ಯವೇ?

ಮನಸು ಒಂದೇ ಸಮನೆ ನರಳುತ್ತಿದೆ
ನಗುವ ತೊಟ್ಟಿಲ ತೂಗುವ ಕೈಗಳು ಅಳುವಿನದ್ದೇ

ನಾನೆಂದೂ ನಗುವಿಗೆ ಜಿಪುಣಳಾಗಿಲ್ಲ
ಅಳುವೇಕೋ ಮಿತಿಮೀರಿ ವಸೂಲಾತಿಗಿಳಿದಿದೆ

ನಾನೇನೂ ಅಳುವಿಗೆ ಸಾಲ ಕೊಡಬೇಕಿಲ್ಲ
ನಗುವನ್ನು ಖಾತ್ರಿಗಾಗಿ ಅಡವಿಟ್ಟುಕೊಂಡಿದೆ

ನಗಲು ಅನುಮತಿ ಪಡೆಯಬೇಕಿದೆಯೇ ?
ಅಳುವಿನ ಮೊದಲ ಸಾಲಿನಲ್ಲೇ ಉಲ್ಲೇಖವಿದೆಯಂತೆ

ನಗು ಜಾರಿ ಬಿದ್ದು ಅಂಗವಿಕಲವಾಗಿದೆ
ಅಳುವಿಗೆ ನಿರ್ಬಂಧ ವಿಧಿಸಿದ ಸಂತೋಷ

ನಕ್ಕೂ ಸಾಯುತ್ತೇನೆಂದು ಇನ್ನೂ ಹೇಳಿಯೇ ಇಲ್ಲ
ಅಳುವಾಗಲೇ ಚಿರಂಜೀವಿಯಾಗಿಬಿಟ್ಟಿದೆ

ನಗುವಿನ್ನೂ ಅಂಬೆಗಾಲಿಡಲು ಹೆದರುತ್ತಿದೆ
ಅಳು ಆಗಲೇ ಶರಧಿ ದಾಟಿಯಾಯಿತು ನೋಡು

ನಗುವಿನ್ನೂ ಮೊದಲ ತೊದಲ್ನುಡಿ ಕಲಿಯಲೇ ಕಷ್ಟ
ಅಳುವಾಗಲೇ ಹುಸಿಭಾಷಣವಾರಂಭಿಸಿದೆ

ನಗುವೆಂಬ ಕವಿತೆ ಆರಂಭಿಸಲು ಹೆಣಗುತ್ತಿದ್ದೇನೆ
ಅಳುವೆಂಬುದು ಗದ್ಯ ಗ್ರಂಥವನ್ನೇ ಬರೆಸಿಕೊಂಡಿದೆ

ಕಿರುನಗಲೂ ಮುಜುಗರ ಹಿಂಜರಿಕೆ ಸಂಕೋಚ
ಅಳುವಿಗೆ ಬಿಡುಬೀಸುತನ ಅಭ್ಯಾಸವಾಗಿಹೋಗಿದೆ

ಅಳುವಿಗೆ ಅದೆಷ್ಟೊಂದು ಗೆಳೆಯರ ಬಳಗ
ನಗು ಅಸಹಾಯಕತೆಯಿಂದ ಒಂಟಿಯಾಗಿದೆ

ಅತ್ತು ಅತ್ತು ಹೈರಾಣಾಗಿದ್ದೇನೆ ಕುಸಿದಿದ್ದೇನೆ
ನಗು ಹೆಗಲಾಗುತ್ತದೆಯೆಂದರೆ ಅದಕೂ ಕಾಡುವ
ಅನಾಥತೆ

ಬಿಡು ಬಿಡು ನಗು ಬಹಳ ನಿರ್ದಯಿ
ಅಳುವಿನ ವಾತ್ಸಲ್ಯಕ್ಕೆ ಮನಸಾಗಲೇ ಹೊಂದಿಕೆಯಾಗಿದೆ

ನಗು ಅಷ್ಟೇನೂ ರಸಿಕನಲ್ಲ ಒಲವಿನ ಪರಿಯೂ ತಿಳಿದಿಲ್ಲ
ಅಳು ಅಪ್ಪಿಕೊಳ್ಳುವ ರಭಸಕ್ಕೆ ಮೈಥುನದ ಸುಸ್ತು

ನಾನು ನಗುತ್ತಿದ್ದರೆ ಅಳುವಿಗೇನೋ ಬೇಸರ
ಅಳುವುದು ಅಶಕ್ತತೆಯೂ ದೌರ್ಬಲ್ಯವೂ ಅಲ್ಲ ಬಿಡು

ಅಳುವಿನ ಅಮಲು ಎದೆಗೇರಿದೆ
ನಗುವಿನ ಮಾದಕತೆ ಒಳಗಿಳಿಯುತ್ತಿಲ್ಲ

ಅಳುವಿನ ಎದುರು ನಗುವಿನ ಮೌಲ್ಯ ಬಿದ್ದುಹೋಗಿದೆ
ಹರಾಜಿನಲ್ಲಾರೋ ಜೋರಾಗಿ ಆರ್ಭಟಿಸುತ್ತಿದ್ದಾರೆ

‍ಲೇಖಕರು avadhi

21 May, 2018

3 Comments

  1. ಮಮತ

    ಧನ್ಯವಾದ ಅವಧಿ

  2. Deepthi bhadravathi

    ಒಳ್ಳೆಯ ಪದ್ಯ ಮಮತಾ…ಮೊದಲನೇ ಸಾಲೇ ಹಿಡಿದಿಟ್ಟಿತು

  3. ಕೊಟ್ರೇಶ್ ತಂಬ್ರಳ್ಳಿ ಅಮರಗೋಳ ಮಠ

    ಚೆನ್ನಾಗಿದೆ ಮಮತಾ…ಒಳ್ಳೆಯ ಪದ್ಯ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading