ನಾನು ತುಂಬ ನೋವಿನಿಂದ ವ್ಯಕ್ತಪಡಿಸುತ್ತಿರುವ ಈ ಪ್ರತಿಕ್ರಿಯೆಗೆ ಕಾರಣವಿಷ್ಟೆ..

ಒಂದು ಪ್ರತಿಕ್ರಿಯೆ

ಎಸ್ ದಿವಾಕರ್ 

ನಾನು ತುಂಬ ನೋವಿನಿಂದ ವ್ಯಕ್ತಪಡಿಸುತ್ತಿರುವ ಈ ಪ್ರತಿಕ್ರಿಯೆಗೆ ಕಾರಣವಿಷ್ಟೆ: ರಾ.ಜೊ. ಎಂಬುವರು ನನ್ನದಲ್ಲದ ಒಂದು ಅನುವಾದವನ್ನು ಉಲ್ಲೇಖಿಸುತ್ತ, ತಾವೇನಾದರೂ ಅಂಥದನ್ನು ಅನುವಾದಿಸಬೇಕಾದರೆ ಎಷ್ಟೆಲ್ಲ ಯೋಚಿಸುವಂತಾಗುವುದೆಂದು ವಿವರಿಸುತ್ತ ನನ್ನ ಅನುವಾದವಲ್ಲದ ಅನುವಾದದ ಬಗೆಗೆ ತೀರ್ಪು ಕೊಡುವಂತಾದದ್ದು.

ರಾ.ಜೊ. ಅವರು ಪ್ರತಿಭಾವಂತರೂ ಹಾಗೂ ಸಾಹಿತ್ಯ ಕೃತಿಯೊಂದನ್ನು ಅತ್ಯಂತ ಸೂಕ್ಷ್ಮವಾಗಿ, ಸಮಗ್ರವಾಗಿ ಗ್ರಹಿಸಬಲ್ಲ ಸಂವೇದನಾಶೀಲರೂ ಅಗಿರುವರೆಂದು ನಾನು ಭಾವಿಸಿರುವುದರಿಂದ ಅವರಿಗೆ ಈ ನನ್ನ ನೋವು ಅರ್ಥವಾಗಬಹುದೆಂದು ಭಾವಿಸಿದ್ದೇನೆ.

ಅವರು ತಮ್ಮ ಬರಹದಲ್ಲಿ, ತಮ್ಮ ಸಂವೇದನಾಶೀಲ ನಿಲುವನ್ನು ಸಮರ್ಥಿಸಿಕೊಳ್ಳುವುದಕ್ಕಾಗಿ ನನ್ನ ಹೆಸರನ್ನು ಎಳೆದು ತರುವ ಅಗತ್ಯವಿರಲಿಲ್ಲ.

ಅವರ ಬರಹದ ಈ ಕೆಲವು ವಾಕ್ಯಗಳನ್ನು ನೋಡಿ: “ಪ್ರಿಯ ಮಿತ್ರರಾದ ನವೀನ್ ಮಧುಗಿರಿ ಅವರು ಅತಿಸಣ್ಣಕತೆಗಳ ಬಗ್ಗೆ ‘ಅವಧಿ’ ಅಂತರಜಾಲ ತಾಣದಲ್ಲಿ ಒಂದು ಲೇಖನ ಬರೆದಿದ್ದಾರೆ. ಆಸಕ್ತಿಕರ ಅಂತನಿಸಿತು. ಹಾಗೆಯೇ ಅವರು ಅರ್ನೆಸ್ಟ್ ಹೆಮ್ಮಿಂಗ್ವೆ ಬರೆದ ಅತಿಸಣ್ಣಕತೆಯಾದ “For Sale: baby shoes, never worn”ಬಗ್ಗೆ ರೆಫರೆನ್ಸ್ ಕೊಡುತ್ತ ಕನ್ನಡದಲ್ಲಿ ಇದನ್ನು ಶ್ರೀಯುತ ದಿವಾಕರ್ ಅವರು ‘ಮಾರಾಟಕ್ಕಿದೆ: ಬಳಸಿಯೇ ಇಲ್ಲದ ಮಗುವಿನ ಪಾದರಕ್ಷೆ’ ಎಂಬಂತೆ ತರ್ಜುಮೆ ಮಾಡಿದ್ದರ ಬಗ್ಗೆ ಸೂಚಿಸಿದ್ದು ನನ್ನ ಗಮನ ಸೆಳೆಯಿತು…. ಹಿಂದೊಮ್ಮೆ ನನ್ನ ‘ಮಾಯಾಲಾಂದ್ರ’ದಲ್ಲಿ ಸಣ್ಣಕತೆಗಳ ಬಗ್ಗೆ ಬರೆಯುವಾಗ ನಾನೂ ಈ ಕತೆಯನ್ನು ರೆಫರ್ ಮಾಡಿದ್ದುಂಟು. ಅವತ್ತು ನನಗೆ ಇದನ್ನು ತರ್ಜುಮೆ ಮಾಡಲು ಭಯವಾಗಿದ್ದು ನಿಜ…. ಭಯ ಯಾಕೆಂದರೆ, ತರ್ಜುಮೆ ಮಾಡಿದರೆ ಅದು ಒಂದೇ ಅರ್ಥಕ್ಕೆ ಸೀಮಿತ. ಹೇಳಿಕೇಳಿ ಅದು ಕೇವಲ ಆರು ಪದಗಳ ಕತೆ. ಅದರಲ್ಲೇ ಆರಂಭ, ಮಧ್ಯಂತರ ಮತ್ತು ಉಪಸಂಹಾರ ಬಂದು ಹೋಗುತ್ತವೆ. ಹುಡುಕಿದಷ್ಟೂ ನಾನಾ ಅರ್ಥಗಳನ್ನು ಬಿಟ್ಟುಕೊಡುತ್ತ ಓದುಗನನ್ನು ನಿತ್ರಾಣಮಾಡುತ್ತ ಹೋಗುವ ಈ ಕತೆಯಲ್ಲಿ ಹಲವಾರು ಪ್ರಶ್ನೆಗಳಿವೆ…. ಬಹುಶಃ ನನ್ನನ್ನು ಅಧೀರನನ್ನಾಗಿಸಿದ್ದು ಭಯವಲ್ಲ, ಧೈರ್ಯ.”

ಈ ವಾಕ್ಯಗಳ ಅಂತರಾರ್ಥವೇನೆಂದು ಬಗೆಯುವುದಕ್ಕೆ ವಿಶೇಷ ಜಾಣ್ಮೆಯಾಗಲೀ ವಿಶ್ಲೇಷಣಾ ಸಾಮಥ್ರ್ಯವಾಗಲೀ ಬೇಕಿಲ್ಲವೆಂದು ತಿಳಿದಿದ್ದೇನೆ.

‘ಮಾರಾಟಕ್ಕಿದೆ: ಬಳಸಿಯೇ ಇಲ್ಲದ ಮಗುವಿನ ಪಾದರಕ್ಷೆ’ ಎಂದು ಓದಿದ್ದೇ ಅವರಿಗೆ ‘ನಾನಾಗಿದ್ದರೆ ಇದನ್ನು ಹೀಗೆ ಅನುವಾದಿಸುತ್ತಿರಲಿಲ್ಲ; ನಾನು ಗ್ರಹಿಸಿರುವಂತೆ ಇಷ್ಟೆಲ್ಲ ಅರ್ಥಗಳಿರುವ ಈ ಕತೆ ಅನುವಾದಕ್ಕೆ ಒಳಪಡದಷ್ಟು ಧ್ವನಿಪೂರ್ಣವಾಗಿದೆ. ಆದರೂ ಎಸ್.ದಿವಾಕರ್ ಒಂದಿಷ್ಟೂ ‘ಅಧೀರರಾಗದೆ’, ‘ಭಯಪಡದೆ’ ಮಕ್ಕೀ ಕಾ ಮಕ್ಕಿ ಅನುವಾದಿಸಿಬಿಟ್ಟರು’ ಎಂಬ ಅಭಿಪ್ರಾಯವನ್ನು ಮೂಡಿಸುವುದರಿಂದ ನಾನು ಆ ಅಭಿಪ್ರಾಯವನ್ನು ಪ್ರಶ್ನಿಸಬೇಕಾಗಿದೆ.

ಶ್ರೀಯುತರು ಈ ಕತೆ ತಮ್ಮಲ್ಲಿ ಮೂಡಿಸಿದ ಪ್ರಶ್ನೆಗಳನ್ನು ನಿರೂಪಿಸಿರುವ ಧಾಟಿಯಲ್ಲೇ ದಿವಾಕರ್ ಅಷ್ಟೇನೂ ಸೂಕ್ಷ್ಮಗ್ರಾಹಿಯಾದ ಅನುವಾದಕರಲ್ಲ ಎಂಬ ಧ್ವನಿ ಪರೋಕ್ಷವಾಗಿದ್ದಂತೆ ನನಗೆ ಅನ್ನಿಸಿದ್ದು ನಿಜ. ಹಲವು ದಶಕಗಳಿಂದ ಯಾವುದೇ ಫಲಾಪೇಕ್ಷೆಯಿಲ್ಲದೆ ಅನುವಾದದಲ್ಲಿ ತೊಡಗಿರುವ ನನಗೆ ಮೂಲ ಪಠ್ಯಕ್ಕಿರಬಹುದಾದ ಅರ್ಥದ ಪದರಗಳನ್ನು ಬಿಡಿಸಿ ಬಿಡಿಸಿ ಓದುವ ಸಾಮರ್ಥ್ಯ ಸ್ವಲ್ಪವಾದರೂ ಇದೆಯೆಂದುಕೊಂಡಿದ್ದೇನೆ. ಜೊತೆಗೆ ಅನುವಾದ ಕಲೆಯ ಬಗ್ಗೆ ಇರುವ ಅನೇಕ ಸಿದ್ಧಾಂತಗಳ ಪರಿಚಯವೂ ತುಸುಮಟ್ಟಿಗಿದೆ.

ಹೀಗಿರುವಾಗ ರಾ.ಜೊ. ಅವರು ನನ್ನದೇ ಅನುವಾದವೊಂದನ್ನು ಇಟ್ಟುಕೊಂಡು, ಅದನ್ನು ಮೂಲ ಪಠ್ಯದೊಡನೆ ಹೋಲಿಸಿ, ಅದರಲ್ಲಿ ಏನೇನು ದೋಷಗಳಿವೆಯೆಂದು ತೋರಿಸಿದ್ದಿದ್ದರೆ ನನಗೆ ನಿಜಕ್ಕೂ ತುಂಬ ಸಂತೋಷವಾಗುತ್ತಿತ್ತು. ಹಾಗೆ ಮಾಡದೆ, ನನ್ನದಲ್ಲದ್ದನ್ನು ನನ್ನ ತಲೆಗೆ ಕಟ್ಟಿ ನನ್ನ ಅನುವಾದ ಶಕ್ತಿಯ ಬಗ್ಗೆ ತೀರ್ಪು ಕೊಡುವುದಿದೆಯಲ್ಲ, ಅದು ನಿಜಕ್ಕೂ ಅಕ್ಷಮ್ಯ.

ಇನ್ನು ನವೀನ್ ಮಧುಗಿರಿಯವರು ‘ಅವಧಿ’ಯಲ್ಲಿ ಬರೆದಿರುವ ಲೇಖನದಲ್ಲಿರುವ ಈ ಸಾಲುಗಳನ್ನು ಗಮನಿಸಬೇಕು: “ಅಮೇರಿಕಾದ ಪ್ರಖ್ಯಾತ ಕತೆಗಾರ, ಪತ್ರಕರ್ತ ಅರ್ನೆಸ್ಟ್ ಹೆಮಿಂಗ್ವೇ ಕೇವಲ ಆರು ಪದಗಳಲ್ಲಿ ಕತೆಯನ್ನು ಬರೆಯುವುದಾಗಿ ಗೆಳೆಯರಿಂದ ಸವಾಲನ್ನು ಸ್ವೀಕರಿಸಿ ಬರೆದ ಜಗತ್ತಿನ ಮತ್ತೊಂದು ಅತಿ ಸಣ್ಣಕತೆ ಹೀಗಿದೆ: “For Sale: baby shoes, never worn” ಎಸ್. ದಿವಾಕರ್ ಈ ಕತೆಯನ್ನು ಸಹ ಕನ್ನಡಕ್ಕೆ ಅನುವಾದಿಸಿದ್ದಾರೆ: ಮಾರಾಟಕ್ಕಿದೆ: ಬಳಸಿಯೇ ಇಲ್ಲದ ಮಗುವಿನ ಪಾದರಕ್ಷೆ.”

ಪ್ರಮಾಣ ಮಾಡಿ ಹೇಳುತ್ತೇನೆ: ನಾನೆಂದೂ ಎಲ್ಲೂ ಈ ಕತೆಯನ್ನು ಅನುವಾದಿಸಿಲ್ಲ. ‘ಹಾರಿಕೊಂಡು ಹೋದವನು’ ಎಂಬ ನನ್ನ ಸಂಕಲನದ ಅನುಬಂಧದಲ್ಲಿ ನಾನು ಬರೆದ ‘ಡೈನೊಸಾರ್: ಒಂದು ಅತಿ ಸಣ್ಣಕತೆಯ ಪತ್ತೇದಾರಿ’ ಎಂಬ ದೀರ್ಘ ಪ್ರಬಂಧವಿದೆ. (ನವೀನ್ ಮಧುಗಿರಿಯವರ ಲೇಖನದ ಮುಕ್ಕಾಲು ಭಾಗದಷ್ಟನ್ನು ಆ ಪ್ರಬಂಧವೇ ಆಕ್ರಮಿಸಿದೆಯೆನ್ನುವುದು ಬೇರೆ ಮಾತು.)

ಆ ಪ್ರಬಂಧದಲ್ಲಿ ಒಂದು ಕಡೆ “1920ರಲ್ಲಿ ಅಮೆರಿಕದ ಪ್ರಖ್ಯಾತ ಲೇಖಕ ಅರ್ನೆಸ್ಟ್ ಹೆಮಿಂಗ್ವೇಯ ಗೆಳೆಯರು ಕೆಲವರು ಕೇವಲ ಆರೇ ಶಬ್ದಗಳಲ್ಲಿ ಒಂದು ಸಂಪೂರ್ಣ ಕತೆ ಬರೆಯಬಲ್ಲೆಯ ಎಂದು ಅವನಿಗೆ ಸವಾಲೆಸೆದರಂತೆ. ಅದಕ್ಕೆ ಉತ್ತರವಾಗಿ ಅವನು ಬರೆದದ್ದು “ಫಾರ್ ಸೇಲ್: ಬೇಬಿ ಶೂಸ್, ನೆವರ್ ಯೂಸ್ಡ್” ಎಂದು ಹೇಳಿದ್ದೇನೆಯೇ ಹೊರತು ಅದನ್ನು ಅನುವಾದಿಸುವ ಗೋಜಿಗೆ ಹೋಗಿಲ್ಲ.

ಅಷ್ಟೇಕೆ, ಶೂಗಳಿಗೆ ಪಾದರಕ್ಷೆಗಳೆಂದು ಅರ್ಥ ಹಚ್ಚುವಷ್ಟು ದಡ್ಡನೂ ನಾನಲ್ಲ. ಹೀಗಿದ್ದೂ ನವೀನ್ ಮಧುಗಿರಿ ಆ ಅನುವಾದಕ್ಕೆ ನನ್ನ ಹೆಸರು ಹಾಕಿದರೂ ಕೂಡ, ರಾ.ಜೊ. ಅವರಂತೆ, ನನ್ನ ಅನುವಾದವನ್ನು ಕುರಿತು ತೀರ್ಪು ಕೊಡಲಿಲ್ಲವೆನ್ನುವುದು ಸಮಾಧಾನದ ಸಂಗತಿ.

‍ಲೇಖಕರು sakshi

July 23, 2017

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: