ಸಂತಾ ಎಂಬ ಪ್ರೀತಿ…

ಜಿ ಎನ್ ಮೋಹನ್

ಅದು ಹೀಗಾಯ್ತು..

ಕ್ರಿಸ್ಮಸ್ ಗೊತ್ತಿಲ್ಲದಂತೆ ನನ್ನನ್ನು ಸವರಿಕೊಂಡು ಹೋಗಿತ್ತು. ಯಾವಾಗಲೋ ಆರ್ಡರ್ ಮಾಡಿದ್ದ ಪ್ರೀತಿಯ ಪುಸ್ತಕವೊಂದು ಬೆಳ್ಳಂ ಬೆಳಗ್ಗೆ ಕೊರಿಯರ್ ನವ ಕೈಗಿತ್ತು ಹೊಗಿದ್ದ. ಯಾಕೋ ಸಂತಾ ನೆನಪಾದ. ನಂತರ ಮತ್ತದೇ ದಿನ . ಹಾಗಂದುಕೊಂಡಿದ್ದೆ. ಆದರೆ ಆ ಹುಡುಗರಿದ್ದಾರಲ್ಲಾ.. ಒಂದು ಕಾಲಕ್ಕೆ ಹುಡುಗರಾಗಿದ್ದವರು. ದೂರದ ಇಂಗ್ಲೆಂಡ್ ನಲ್ಲಿರುವ ಪರಾಗ್ ಸಿನ್ಹಾ , ನೋಯಿಡಾದಲ್ಲಿರುವ ಆರಾಧನಾ ಸಿಂಗ್, ಹೈದರಾಬಾದ್ ನಲ್ಲಿರುವ ರಾಜೇಶ್ ರೈನಾ , ಆಗ್ರಾದಲ್ಲಿರುವ ಸೌಮ್ಯ ಸಿಂಗ್ ನನ್ನಿಂದ ಆ ಸಂತಾ ಹೊರಗೆ ಹೋಗಲು ಬಿಡಲೇ ಇಲ್ಲ. ಒಂದೇ ಸಮ ಮೆಸೇಜ್ ಗಳ ಸುರಿಮಳೆ ಸುರಿಸಿದರು.

Aradhana Singh Merrrrry Christmas santa uncle i miss u n the gifts hanging on the door

Parag Sinha Happy Christmas to you uncle! I’m waiting for my presents

Soumya Singh Thanks a lot uncle we sure do miss ur gifts and chocolates thanks for being our secret santa n making this day special one

Rajesh Raina miss our santa

ಸಂತಾ ಕ್ಲಾಸ್ ನನ್ನೊಳಗೆ ಮತ್ತೆ ಹೊಕ್ಕ. ನಾನು ಸಂತಾ ಕ್ಲಾಸ್ ನೊಳಗೆ ಪರಕಾಯ ಪ್ರವೇಶ ಮಾಡಿದ್ದು.. ಅಲ್ಲ ಆತನೇ ನನ್ನೊಳಗೆ ಬಂದು ನನ್ನಂತಹ ನನ್ನನ್ನೂ ಸಂತನನ್ನಾಗಿ ಮಾಡಿದ್ದು ಬಿಚ್ಚಿಕೊಳ್ಳುತ್ತಾ ಹೋಯಿತು. ಇಲ್ಲಿದೆ ಆ ನೆನಪು..

ವಳು ಅತ್ತಿದ್ದು ಕಡಿಮೆ. ಆದರೆ ಮುಖ ಇಷ್ಟೇ ಇಷ್ಟು ಅಗಲ ಆಯಿತು ಎಂದರೆ ಸಾಕು, ಅವಳ ಹೃದಯದಲ್ಲಿ ಇನ್ನಿಲ್ಲದ ನೋವೊಂದು ಮನೆ ಮಾಡಿದೆ ಎಂದು ಅರ್ಥ ಮಾಡಿಕೊಳ್ಳಬೇಕು. ಅಂತಹ ಹುಡುಗಿ ಆ ದಿನ ಬೆಳ್ಳಂಬೆಳಗ್ಗೆಯೇ ಕಣ್ಣೀರಾಗಿ ಹೋಗಿದ್ದಳು. ಇನ್ನೂ ನಾನು ಹಾಸಿಗೆ ಬಿಟ್ಟೇಳುವ ಮುನ್ನವೇ ಬದಿಯಲ್ಲಿ ನಿಂತು ಬಿಕ್ಕಳಿಸುತ್ತಿದ್ದಳು. ನನಗೋ ಇನ್ನಿಲ್ಲದ ಗಾಬರಿ. “ಯಾಕಮ್ಮಾ” ಎಂದು ಕೇಳಿದೆ. “ಪಪ್ಪಾ, ಇವತ್ತು ಸಂತಾ ಬಂದಿಲ್ಲ” ಎಂದಳು. ನನಗೆ ಇಡೀ ಜಗತ್ತು ಒಂದು ಕ್ಷಣ ಸ್ತಬ್ಧವಾಗಿ ನಿಂತುಕೊಂಡು ಬಿಟ್ಟಿತೇನೋ ಅನ್ನಿಸಿತು.

ಪ್ರತಿ ವರ್ಷ ಆ ದಿನ ಬೆಳ್ಳಂಬೆಳಗ್ಗೆ ಎದ್ದು, ಯಾರು ಎದ್ದಿದ್ದಾರೋ, ಬಿಟ್ಟಿದ್ದಾರೋ ನೋಡದೆ ಬಾಗಿಲು ತೆರೆದು ಆಚೆಗೆ ಇಣುಕುವುದು ಈ ಪುಟಾಣಿಯ ರೂಢಿ.

ಹಾಗೆಯೇ ಇಂದೂ ಸಹಾ ಅದೇ ಡಿಸೆಂಬರ್ ೨೫ ಬಂದಿತ್ತು. ಹಿಮದ ಕಾಡುಮೇಡುಗಳನ್ನು ದಾಟಿ, ಬೆಟ್ಟ ಗುಡ್ಡ ಹತ್ತಿಳಿದು, ಕಣಿವೆ ಹಾದು ದೊಡ್ಡ ಚೀಲ ಹೊತ್ತು, ಬಿಳಿ ಗಡ್ಡ ಇಟ್ಟುಕೊಂಡು ಕೆಂಪು ಟೋಪಿ, ಕೆಂಪು ದಿರಿಸಿನ ಆ ಅಜ್ಜ ಬರುವುದು ಈ ದಿನವೇ ಅಲ್ಲವೇ…

santa bagಆ ಅಜ್ಜನ ಚೀಲದೊಳಗೆ ಅದೆಷ್ಟು ಸ್ವಾರಸ್ಯಗಳು! ಏನು ಬೇಕು, ಎಂತಹದು ಬೇಕೋ ಅದೆಲ್ಲವೂ ಅವನ ಜೋಳಿಗೆಯಲ್ಲಿರುತ್ತಿತ್ತು. ನನಗೆ ಈ ಬಾರಿ ಲಿಯೋಟಾಲ್ಸ್ ಟಾಯ್ ನವರ ದೊಡ್ಡ ಕಿವಿಯ ನಾಯಿಯೇ ಬೇಕು ಅನಿಸಿದ್ದು ಅವನಿಗೆ ಹೇಗೆ ಗೊತ್ತಾಗಿ ಹೋಯಿತು? ಅಮ್ಮ ಕಳೆದ ವಾರವಷ್ಟೇ ಕಿವಿ ಚುಚ್ಚಿಸಿದ್ದಾಳೆ, ಅದಕ್ಕೆ ಇಟ್ಟುಕೊಳ್ಳಲು ಕೆಳಗಿನ ಮನೆಯ ಫ್ರೆಂಡ್ ಹಾಕಿಕೊಳ್ಳುವಂತಹದ್ದೇ ಲೋಲಾಕು ಇದ್ದರೆ ಚೆನ್ನಾಗಿರುತ್ತದೆ ಎಂಬುದು ಅವನಿಗೆ ಹೇಗೆ ತಿಳಿಯಿತು? ಓಹ್! ಎಷ್ಟು ಡೈರಿ ಮಿಲ್ಕ್ ಚಾಕಲೇಟ್ ಗಳಪ್ಪಾ..!

ಸಂತಾ ಕ್ಲಾಸ್ ಎಂಬ ಮೆಲುನಗೆಯ ಬಿಳಿಗಡ್ಡದವ ಬಿಡಿಸಲಾಗದ ಒಗಟಾಗಿ ಹೋದದ್ದು ಹೀಗೆ… ಪ್ರತೀವರ್ಷ ನಾನು ಹುಟ್ಟಿದಂದಿನಿಂದ ಇಲ್ಲಿಯವರೆಗೂ ಡಿಸೆಂಬರ್ ೨೫ಕ್ಕೆ ಇಳಿಯುತ್ತಿದ್ದ, ಮುಖ ತೋರಿಸದೆಯೇ ಮಾಯವಾಗಿ ಹೋಗುತ್ತಿದ್ದ, ಮತ್ತೆ ಒಂದು ವರ್ಷ ಕಾಯಬೇಕಲ್ಲಪ್ಪಾ ಎನಿಸುವಂತೆ ಮಾಡುತ್ತಿದ್ದ ಸಂತಾ ತಾತ ಈ ವರ್ಷ ಬಾರದೆ ಇರುವುದಾದರೂ ಹೇಗೆ? ಏನೂ ತರದೆ ಇದ್ದದ್ದಾದರೂ ಯಾಕೆ? ನನಗೆ ಈ ವರ್ಷವೂ ಎಷ್ಟೊಂದು ಆಸೆಯಿತ್ತು. ಮನಸ್ಸಲ್ಲೇ ದೊಡ್ಡ ಪಟ್ಟಿ ಇತ್ತು. ಆದರೆ, ಹೀಗೆ ಮೋಸ ಮಾಡಬಹುದು? ಅದರಲ್ಲೂ ನನಗೊಬ್ಬಳಿಗೆ ಮಾತ್ರವಲ್ಲ, ಎದುರು ಮನೆಯ ಕ್ಯಾಲಿಡಾ, ಆ ಕಡೆ ಕಾಣುವ ಎಲ್ಲರ ಮನೆಗೂ ಬಂದು ಹೋಗಿದ್ದಾನೆ. ಆದರೆ ನನ್ನನ್ನು ಮಾತ್ರ ಮರೆತಿದ್ದಾನೆ…

ನಾವು ಎಡವಿದ್ದು ಎಲ್ಲಿ ಎಂದು ನನಗೆ ಗೊತ್ತಾಗಿ ಹೋಯಿತು. ಮಗಳಿಗೆ ೧೦ ವರ್ಷ ಆಗಿ ಹೋಯಿತು. ಇನ್ನೇನು ಎಲ್ಲಾ ಗೊತ್ತಾಗುವ ಸಮಯವಾಯ್ತು ಎಂದುಕೊಂಡಿದ್ದೇ ತಪ್ಪಾಗಿ ಹೋಗಿತ್ತು. ಅಷ್ಟು ವರ್ಷ ರಾತ್ರಿ ನಿದ್ದೆಗೆಟ್ಟು ೧೨ ಸರಿದ ನಂತರ, ಮಗಳನ್ನು ಮಲಗಿಸಿದ ನಂತರ ಕಳ್ಳಹೆಜ್ಜೆ ಹಾಕಿ ಬಾಗಿಲ ಬುಡದಲ್ಲಿ ಸುಂದರ ಗಿಫ್ಟ್ ಪ್ಯಾಕ್ ಗಳನ್ನು ಇಟ್ಟು ಮಲಗುತ್ತಿದ್ದ ನಾವು ನಮ್ಮ ಈ ಕಳ್ಳಾಟ ಅವಳಿಗೂ ಗೊತ್ತಿಲ್ವ, ೧೦ ವರ್ಷ ಆಯ್ತಲ್ಲಾ ಈ ಆಟಕ್ಕೆ ಅಂತ ಈ ಬಾರಿ ಸುಮ್ಮನಾದದ್ದೇ ಮಗಳ ದುಃಖ ಕಟ್ಟೆಯೊಡೆಯಲು ಕಾರಣವಾಗಿತ್ತು.

ನಾವು ಇದ್ದ ಊರಲ್ಲಿ ಎಲ್ಲೆಂದರಲ್ಲಿ ಚರ್ಚುಗಳು. ಬಣ್ಣಬಣ್ಣದ ಬೆಳಕು, ಊರವರ ಮನೆಗಳಲ್ಲೆಲ್ಲಾ ಕ್ರಿಸ್ ಮಸ್ ಟ್ರೀ, ಚಾಕಲೇಟ್, ಗಿಫ್ಟ್ ರಾಶಿ, ಆಕಾಶದಿಂದ ಇಳಿದ ಮಕ್ಕಳೇನೋ ಎನಿಸುವಂತೆ ಬಿಳಿಬಿಳಿ ಥಳಥಳ ಬಟ್ಟೆ, ಕೈಯ ಬುಟ್ಟಿಯಲ್ಲಿ ಥರಾವರಿ ಹೂವಿಟ್ಟುಕೊಂಡು ಚರ್ಚ್ ಬಾಗಿಲಲ್ಲಿ ಇಟ್ಟು, ಅಮೆನ್ ಕೇಳಿಸಿಕೊಂಡು ಬರುವುದು… ಓಹ್! ಎಷ್ಟು ಚೆನ್ನಾಗಿರುತ್ತದಲ್ಲಾ!

ಅಪ್ಪಾ ನಾವು ಸಾಬರಾ? ಅಂತ ಆ ಪುಟ್ಟ ಹುಡುಗಿ ಪ್ರಶ್ನೆ ಹಾಕಿತ್ತು. ಯಾಕಪ್ಪಾ ಹೀಗೆ ಅನಿಸಿದರೂ ತೋರಿಸದೆ “ಯಾಕಮ್ಮಾ?” ಎಂದೆ. “ನನ್ನ ಫ್ರೆಂಡ್ಸ್ ಕೇಳಿದರು, ನಿಮ್ಮಮ್ಮ ಹಣೆಗಿಡಲ್ಲ ಅಲ್ವಾ? ಹಂಗಾದ್ರೆ ನೀವು ಸಾಬರಾ?” ಅಂತ ಅಂದಾಗ ಹೌದು ಎಂದಷ್ಟೇ ಗೋಣು ಹಾಕಿದ್ದೆವು. ಕ್ರಿಸ್ ಮಸ್ ಗಾಗಿ ಎಲ್ಲಾ ಸಜ್ಜಾಗುತ್ತಿದ್ದಾಗ ಯಾಕೋ ಈ ಘಟನೆ ಮತ್ತೆ ಮತ್ತೆ ನೆನಪಿಗೆ ಬಂತು. ನಾವು ಯಾರು ಎಂಬುದು ಮಕ್ಕಳಿಗೇನು ಗೊತ್ತು? ಮಕ್ಕಳಿಗೆ ಹಬ್ಬವೂ ಆಟವೇ ಎನಿಸಿ ಎಲ್ಲಾ ಹಬ್ಬ, ಎಲ್ಲಾ ಅಂದರೆ ಎಲ್ಲಾ, ಕ್ರಿಸ್ ಮಸ್, ರಂಜಾನ್, ಗಣೇಶ ಎಲ್ಲಾ ಹಬ್ಬಕ್ಕೂ ಮುಂದಾದೆವು. ಹಾಗಾಗಿಯೇ ಈ ಕ್ರಿಸ್ ಮಸ್ ತಾತಾ ಹುಟ್ಟಿದ್ದು.

ಅವಳಿಗೇನು ಬೇಕು ಎಂಬುದು ಕ್ರಿಸ್ ಮಸ್ ತಾತನಿಗೆ ಗೊತ್ತಾಗುತ್ತೋ ಇಲ್ಲವೋ, ನಮಗೆ ಗೊತ್ತಿಲ್ಲದೆ ಇರಲು ಹೇಗೆ ಸಾಧ್ಯ? ಹಾಗಾಗಿಯೇ ಈ ಬಾರಿ ಬರುವ ಕ್ರಿಸ್ ಮಸ್ ತಾತನ ಚೀಲದಲ್ಲಿ ಏನಿರಬೇಕು ಎಂದು ವಾರದ ಮೊದಲೇ ಡಿಸೈಡ್ ಮಾಡುತ್ತಿದ್ದೆವು. ಮಗಳನ್ನು ಆ ಮನೆಯಲ್ಲೋ ಈ ಮನೆಯಲ್ಲೋ ಬಿಟ್ಟು ಗುಟ್ಟಾಗಿ ಕ್ರಿಸ್ ಮಸ್ ಶಾಪಿಂಗ್ ಮಾಡುತ್ತಿದ್ದೆವು. ಪ್ಯಾಕ್ ಮಾಡಿ ಕ್ರಿಸ್ ಮಸ್ ಮುನ್ನಾ ರಾತ್ರಿ ಬಾಗಿಲಲ್ಲಿಟ್ಟರೆ ಆಯಿತು, ಕ್ರಿಸ್ ಮಸ್ ಬಂತು ಎಂದೇ ಅರ್ಥ.

ಈಗಲೂ ನನಗೆ ನೆನಪಿದೆ. ಏನೂ ಎದುರು ನೋಡದೆ ಅವಳು ಬಾಗಿಲು ತೆರೆದ ದಿನ. ಆ ಗಿಫ್ಟ್. ಅದರಲ್ಲಿದ್ದ ಬಣ್ಣಬಣ್ಣದ ಆಟದ ಸಾಮಾನು. ಅವಳ ಕಣ್ಣು ಅರಳಿದ ರೀತಿ, ಹೊರಗೆ ಇಣುಕಿದ ಅಚ್ಚರಿ… ಮರೆಯಲು ಸಾಧ್ಯವೇ ಇಲ್ಲ. ಅವಳು ತಾನೇ ತಾನಾಗಿ ಹಬ್ಬವಾಗಿ ಹೋಗಿದ್ದಳು. ಈ ಕಣ್ಣಾಮುಚ್ಚಾಲೆ ಆಟ ಬೆಳೆಯುತ್ತಾ ಹೋಗಿದ್ದು ಹೀಗೆ…

ಮುಂದಿನ ವರ್ಷ ಈ ಆಟಕ್ಕೆ ಇನ್ನೊಂದಿಷ್ಟು ಥ್ರಿಲ್ ಟಚ್ ಕೊಟ್ಟಿದ್ದಾಯ್ತು. ಬಾಗಿಲು ತೆರೆದಾಗ ಗಿಫ್ಟ್ ಇರಲಿಲ್ಲ. ಬದಲಾಗಿ ಒಂದು ಪುಟ್ಟ ಪತ್ರ ಇತ್ತು. ಸಾಂತಾಕ್ಲಾಸ್ ಬರೆದದ್ದು: ಡಿಯರ್, ನಾನು ತಂದ ಗಿಫ್ಟ್ ಬೇಕಾ? ಹಾಗಾದರೆ ಹಾಲ್ ನಲ್ಲಿರುವ ಟೀವಿ ಮೇಲೆ ನೋಡು.

ಅವಳು ಓಡೋಡುತ್ತಾ ಟೀವಿ ಹತ್ತಿರ ಬಂದಳು. ಮತ್ತೆ ಇನ್ನೊಂದು ಲೆಟರ್. ಅಡಿಗೆ ಮನೆ ಸಕ್ಕರೆ ಡಬ್ಬ ನೋಡು. ಡಬ್ಬಿಯೊಳಗೆ ಇನ್ನೊಂದು ಚೀಟಿ. ಮಂಚದ ಕೆಳಗೆ ಬಗ್ಗಿ ನೋಡಿದ್ಯಾ, ಮಂಚದ ಕೆಳಗಿನಿಂದ ಮತ್ತೆ ಪುಸ್ತಕದ ಕೋಣೆಗೆ ಅಲ್ಲಿ…ಅಲ್ಲಿ….ಮುದ್ದಾಗಿ ಹರಡಿಕೊಂಡ ಗಿಫ್ಟ್!

ನಾವೋ ಸದಾ ಮಗಳಿಗೆ ಅಂಟಿಕೊಂಡಿದ್ದವರು. ಅವಳ ಜೊತೆ ಸಾಕಷ್ಟು ಟೈಮ್ ಕಳೆಯುತ್ತಿದ್ದವರು. ಹಾಗಾಗಿ ಅವಳ ಆಸೆ ಗೊತ್ತಾಗಿ ಹೋಗುತ್ತಿತ್ತು. ಆದರೆ ಅಷ್ಟು ವ್ಯವಧಾನ ಇಲ್ಲದ ಅಪ್ಪ ಅಮ್ಮಂದಿರು ಹೊಸಾ ಆಟ ಕಂಡುಕೊಂಡಿದ್ದರು. ಕ್ರಿಸ್ ಮಸ್ ತಾತನಿಗೆ “ವಿಶ್ ಲಿಸ್ಟ್” ಕೊಡುವುದು. “ಕ್ರಿಸ್ ಮಸ್ ತಾತಾ, ಈ ಬಾರಿ ನನಗೆ ಬಳೆ ಬೇಕು, ತಿನ್ನಲು ಐಸ್ ಕ್ರೀಂ ಬೇಕು, ನೀನು ಖಂಡಿತಾ ತರುತ್ತೀಯಾ?” ಅಂತ ಬರೆದು ಪೋಸ್ಟ್ ಗೆ ಹಾಕಲು ಅಪ್ಪನಿಗೆ ಕೊಟ್ಟು ಬಿಟ್ಟರೆ ಸಾಕು, ಆ ಪೋಸ್ಟ್ ಆ ಎಲ್ಲೋ ಇರುವ ತಾತನಿಗೆ ಮುಟ್ಟಿ ಆತ ಅವೆಲ್ಲವನ್ನೂ ಸೃಷ್ಟಿ ಮಾಡಿ ಹೆಗಲ ಚೀಲಕ್ಕೆ ಹಾಕಿಕೊಂಡು ಬಂದುಬಿಡುತ್ತಿದ್ದ.

ಆಗ ತಾನೇ ಹೊಸ ಜಾಗಕ್ಕೆ ವರ್ಗಾ ಆಗಿ ಹೋಗಿದ್ದೆ. ಇದ್ದ ಮನೆಯ ಅಂಗಳದಲ್ಲಿ ಸಾಕಷ್ಟು ಮಕ್ಕಳಿದ್ದರು. ಮಾತನಾಡಿಸಲು ಹೋದರೆ ಭಾಷೆ ಅಡ್ಡಿ. ಜೊತೆಗೆ ಎಷ್ಟೇ ಮಂಗನಾಟ ಆಡಿದರೂ ಬಲೆಗೆ ಬೀಳದ ಮಕ್ಕಳು. ನಿರಾಸೆಯಾಗಿ ಹೋಗಿತ್ತು, ಏನು ಮಾಡೋದಪ್ಪಾ ಅಂತ. ಆಗಲೇ ಕ್ರಿಸ್ ಮಸ್ ಬಂದದ್ದು. ಹತ್ತಾದರೂ ಮಕ್ಕಳಿದ್ದರೇನೋ. ಅಂಗಡಿಗೆ ಹೋಗಿ ಪೆನ್ಸಿಲ್, ರಬ್ಬರ್, ದಂಡಿಯಾಗಿ ಚಾಕಲೇಟ್ ಕಟ್ಟಿಸಿಕೊಂಡೆ. ಇಡೀ ರಾತ್ರಿ ಪ್ಯಾಕ್ ಮಾಡಿ, ಹೆಸರು ಬರೆದು, ಅವರವರ ಮನೆ ಬಾಗಿಲ ಚಿಲಕಕ್ಕೆ ಗಿಫ್ಟ್ ನೇತು ಹಾಕಿ ಬಂದೆ.

ವಾರೆ ವಾಹ್! ಮ್ಯಾಜಿಕ್ ಆಗೇ ಹೋಯ್ತಲ್ಲ. ಬೆಳಗ್ಗೆ ನಾನು ಏಳುವ ಮುನ್ನವೇ ಮಕ್ಕಳು ನನ್ನ ಮನೆ ಬಾಗಿಲು ಬಡಿಯತೊಡಗಿದ್ದರು. ನನ್ನ ಹೆಸರೂ ಗೊತ್ತಿರಲಿಲ್ಲ ಅವರಿಗೆ. ಅದು ಅವರಿಗೆ ಅಡ್ಡಿಯೂ ಆಗಿರಲಿಲ್ಲ. ಹೇಗೋ ಒಬ್ಬರಿಗೊಬ್ಬರು ಪಿಸಿಪಿಸಿ ಮಾತಾಡಿಕೊಂಡು ನಾನೇ ಆ ಕೆಲಸ ಮಾಡಿರುವುದು ಅಂತ ಪತ್ತೆ ಹಚ್ಚಿ ಬಿಟ್ಟಿದ್ದರು. ಸಂತಾಕ್ಲಾಸ್ ಅಂಕಲ್ ಬಾಗಿಲು ತೆಗೀರಿ ಅಂತ ಕೂಗ್ತಾ ನಿಂತಿದ್ದರು. …ಬಿಹಾರ, ಕಾಶ್ಮೀರ, ಡೆಲ್ಲಿ, ಒರಿಸ್ಸಾ ಅಂತ ಭಾಷೆ ಅನ್ನೋ ಭಾಷೆಯ ಗೋಡೆ ಮಾಯವಾಗಿ ಹೋಯ್ತು. ಯಾರೋ ಹೊಸಬರು ಅನ್ನೋ ಹಣೆಪಟ್ಟಿ ಕಳಚಿ ಬಿದ್ದೋಯ್ತು. ಎಲ್ಲಾರೂ ಫ್ರೆಂಡ್ಸ್. ಕ್ರಿಕೆಟ್ ಆಡ್ತೀವಿ, ರನ್ನಿಂಗ್ ರೇಸ್ ಮಾಡ್ತೀವಿ.. ರೇಗಿಸ್ತೀವಿ, ನಗ್ ನಗ್ತಾ ಐಸ್ ಕ್ರೀಮ್ ತಿಂತೀವಿ…

ಒರಿಸ್ಸಾದಲ್ಲಿ ಕ್ರಿಸ್ ಮಸ್ ಬರ್ತಿದ್ದ ಹಾಗೇ ಚರ್ಚ್ ಗಳಿಗೆ ಬೆಂಕಿ ಬಿತ್ತು. ಅಲ್ಲೆಲ್ಲೋ ಪಾಪ, ಕುಷ್ಠರೋಗಿಯ ಸೇವೆ ಮಾಡ್ತಿದ್ದವನನ್ನೇ ಕೊಂದುಬಿಟ್ರು. ನನಗೆ ಅನಿಸ್ತು-ಬೆಂಕಿ ಕೊಟ್ಟವರ ಮನೆಗೂ ಗೊತ್ತಿಲ್ಲದ ಹಾಗೆ ರಾತ್ರಿ ಹೋಗಿ ಬಾಗಿಲಲ್ಲಿ ಗಿಫ್ಟ್ ಇಟ್ಟು ಬಂದು ಬಿಡಲಾ ಅಂತಾ. ಆಗ ಗೊತ್ತಾಗುತ್ತೆ, ಎಲ್ಲರಿಗೂ ಕ್ರಿಸ್ ಮಸ್ ಬೇಕು, ಕ್ರಿಸ್ ಮಸ್ ತಾತಾನೂ ಬೇಕು ಅಂತ….

‍ಲೇಖಕರು admin

December 25, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

4 ಪ್ರತಿಕ್ರಿಯೆಗಳು

  1. ಶಮ, ನಂದಿಬೆಟ್ಟ

    ನನಗೆ ಅನಿಸ್ತು-ಬೆಂಕಿ ಕೊಟ್ಟವರ ಮನೆಗೂ ಗೊತ್ತಿಲ್ಲದ ಹಾಗೆ ರಾತ್ರಿ ಹೋಗಿ ಬಾಗಿಲಲ್ಲಿ ಗಿಫ್ಟ್ ಇಟ್ಟು ಬಂದು ಬಿಡಲಾ ಅಂತಾ. ಆಗ ಗೊತ್ತಾಗುತ್ತೆ, ಎಲ್ಲರಿಗೂ ಕ್ರಿಸ್ ಮಸ್ ಬೇಕು, ಕ್ರಿಸ್ ಮಸ್ ತಾತಾನೂ ಬೇಕು ಅಂತ….

    ವಾಹ್.. ಹೀಗೆ ಎಲ್ಲರಿಗೂ ಅನಿಸಿದರೆ ಜಗತ್ತಿನ ತುಂಬ ಸಂತಾಕ್ಲಾಸ್ ಗಳೇ… ಮತ್ತು ಎಲ್ಲರೊಳಗೂ ನಕ್ಷತ್ರವೇ

    ಪ್ರತಿಕ್ರಿಯೆ
  2. ಕಾವ್ಯಶ್ರೀ

    ನಿಮ್ಮೊಳಗೂ ಒಬ್ಬ ಸಂತಾಕ್ಲಾಸ್ ಇರುವುದು ತಿಳಿದಿರಲಿಲ್ಲ , ಹೀಗೆ ಖುಶಿಯ ಹಂಚುತಿರಿ

    ಪ್ರತಿಕ್ರಿಯೆ
  3. Nishi

    ಕ್ರಿಸ್ಮಸ್ ದಿನವನ್ನ quarantineನಲ್ಲಿ ಕಳಿಯುತ್ತಿರುವ ನನ್ನ ಮನಸ್ಸಿಗೆ ನಿಮ್ಮ ಕಥೆ ಮುದ ಕೊಟ್ಟಿತು. Thanks Mohan. ಕ್ರಿಸ್ಮಸ್ ಇರಲಿ ಬಿಡಲಿ ಪ್ರಪಂಚದಲ್ಲಿ ಸದಾ ಪ್ರೀತಿಯ ಸಂದೇಶ ಹರುಡುತ್ತಿರಲಿ. ಅದನ್ನು ನೆನಪಲ್ಲಿಡಲು ಕ್ರಿಸ್ಮಸ್ ಒಂದು ನೆಪವಷ್ಠೆ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: