ನಾನು 'ಗುಂಡಮ್ಮಾ..'

‘ಹಾಲು ಹಳ್ಳ ಹರಿಯಲಿ, ಬೆಣ್ಣೆ ಬೆಟ್ಟವಾಗಲಿ…’

‘ಇಲ್ಕೊಡೆ… ಇಲ್ಕೊಡೆ… ಎಂದು ನಾನು ಮುದ್ದಾಗಿ ಗೋಗರೆಯುತ್ತಿದ್ದರೆ ಅಕ್ಕ, ‘ತಥ್, ಹಾಲು ಕುಡ್ಸೋ ವಯಸ್ಸಿನಲ್ಲಿ ನಿನ್ನದು ಕುಡಿವ ಚಟ!’ ಎನ್ನುತ್ತ ಲೋಟವನ್ನು ಮುಂದಿದ್ದ ಅಡ್ಡಣಿಗೆ ಮೇಲೆ ಕುಕ್ಕುವುದು ನಾವಿಬ್ಬರೂ ಮನೆಯಲ್ಲಿದ್ದಾಗ ಸಾಮಾನ್ಯವಾಗಿ ನಡೆಯುತ್ತಿರುತ್ತದೆ.
ಊಟದ ಬಗ್ಗೆ ನನಗೆ ಯಾವತ್ತೂ ಇಂಥದ್ದೇ ಬೇಕು ಎನ್ನುವ ಬೇಡಿಕೆಯಿಲ್ಲ. ಆದರೆ ಹಾಲು/ಹಾಲಿನ ಪದಾರ್ಥಗಳ ಬಗ್ಗೆ ನನ್ನದು ತೀರದ ಮೋಹ. ಹಾಲಿಗೆ ನಾನ್ಯಾಕೆ ಇಷ್ಟು ಒಲಿದೆ ಎನ್ನುವುದು ನನಗೆ ಸ್ಪಷ್ಟವಾಗಿ ನೆನಪಿಲ್ಲ. ನಿನಗೇನಾದರೂ ಗೊತ್ತಾ ಎಂದು ಅವ್ವನನ್ನು ಕೇಳಿದರೆ, ‘‘ತಂಗೀ, ನೀ ಐದ ವರ್ಷ ತುಂಬೋವರೆಗೆ ಎದಿ ಹಾಲ ಕುಡ್ದೀ, ಆಮೇಲೂ ಬಾಯಿ ತೊಡವಿಗೆ ಆಕಳ ಕೆಚ್ಚಲಿಗೇ ಬಾಯಿ ಹಚ್ಚತಿದ್ದಿ. ಅದು ಪುಣ್ಯಕೋಟಿಯಂಥಾ ಆಕ್ಳು ಬಿಡು,’’ ಎಂದಿದ್ದಳು.
ಹೀಗೆ ಇದ್ದ ಅಲ್ಪಸ್ವಲ್ಪ ಮಾನವನ್ನು ಎಲ್ಲರ ಎದುರು ಹರಾಜು ಹಾಕಿದ್ದೇ ಕೊನೆ ಮತ್ತೆ ಆ ಬಗ್ಗೆ ಕೇಳಿಲ್ಲ. ಕೊಟ್ಟಿಗೆಯಿಂದ ಮುಖ ಊದಿಸಿಕೊಂಡು ಒಳಗೆ ಬಂದರೆ, ಆಕಳುಗಳು ನನಗೆ ಹಾಲು ಕುಡಿಸಿಲ್ಲ ಎನ್ನವುದು ಎಲ್ಲರಿಗೂ ಗೊತ್ತಾಗಿ ಬಿಡುವಷ್ಟು ನಾನು ಪ್ರಾಣಿಗಳಿಗೂ ಕಾಟ ಕೊಟ್ಟಿದ್ದರೆ ಅದು ಹಾಲಿನ ಮೇಲಿನ ಪ್ರೀತಿಯಿಂದಲೇ.
ಇದು ತಿಳಿವಳಿಕೆ ಬಂದ ಮೇಲಿನ ಕಥೆಯಾದರೆ ಅದಕ್ಕಿಂತ ಮುಂಚಿನದು, ನನಗೆ ಎಂಟು ತಿಂಗಳು ತುಂಬಿತು ಎನ್ನುವ ಖುಷಿಗೆ ಕಾಕಾ ತಿನಿಸಿದರೆ ಒಂದು ಇಡೀ ರಸಗುಲ್ಲಾ ತಿಂದಿದ್ದನಂತೆ. ಆವತ್ತಿನಿಂದ ಹೆಚ್ಚು ಕಡಿಮೆ ಹೈಸ್ಕೂಲು ಮುಗಿವವರೆಗೆ ದೊಡ್ಡಕಾಕಾ ನನ್ನನ್ನ, ‘ದಾದಾಮೋನಿ’ ಅಂತಲೇ ಕರೆಯುತ್ತಿದ್ದರು. (ಸ್ವತಃ ಲೇಖಕ ಸಾದತ್ ಹಸನ್ ಮಂಟೋ ಅವರೇ, ನಟ ಅಶೋಕ್ ಕುಮಾರ್ ರನ್ನು ‘ದಾದಾಮೋನಿ’ ಎಂದು ಕರೆಯುವುದು ನನಗೆ ಇಷ್ಟ. ಏಕೆಂದರೆ ಈ ಪದಕ್ಕೆ ಸಿಹಿತಿಂಡಿ ರಸಗುಲ್ಲಾಕ್ಕೆ ಇರುವ ದುಂಡುತನ ಮತ್ತು ಸಿಹಿ ಇದೆ ಎಂದು ಬರೆದುಕೊಂಡಿದ್ದಾರೆ. ಕಾಕಾ ಇವರಿಬ್ಬರ ಬಹುದೊಡ್ಡ ಅಭಿಮಾನಿ.)
ಒಮ್ಮೆ ತಿಂಗಳ ಕಾಲ ಮನೆಯಿಂದ ದೂರ ಇರುವುದು ಬಂದಿತ್ತು. ಮೂರನೆಯ ಬೆಳಗಿಗೆ, ಮನೆ ಭಣಗುಡುತ್ತಿದ್ದೆ. ಖೋವಾ ಮಾಡಿದ್ದೇವೆ. ನಿನ್ನ ಬಿಟ್ಟು ಗಂಟಲಲ್ಲಿ ಇಳಿಯುತ್ತಿಲ್ಲ. ಈ ಕೋರ್ಸೂ ಬೇಡ ಏನೂ ಬೇಡ ಬಾ ಮನೆಗೆ ಎಂದು ಕರೆದ ಸಣ್ಣಕಾಕಾನನ್ನು ಸಾಧುಹಸುವಿನಂತೆ ಹಿಂಬಾಲಿಸಿದ್ದೆ.
ಇಬ್ಬರು ಕಾಕಂದಿರ ಆರು, ನಾವು ನಾಲ್ಕು -ಮನೆಯ ಒಟ್ಟು ಹತ್ತು ಮಕ್ಕಳಲ್ಲಿ ನಾನೇ ಕೊನೆಯ ಘಟ. ಕೂಡು ಕುಟುಂಬದ ಕೆಲಸದಲ್ಲಿ ಮಕ್ಕಳಿಗೆ ಸಮಯಕ್ಕೆ ಸರಿಯಾಗಿ ತಿನ್ನಲು ಕೊಡಲು ಸಾಧ್ಯವಾಗುವುದಿಲ್ಲ, ಬೇಕು ಎಂದಾಗ ಮಕ್ಕಳೇ ತೆಗೆದು ತಿನ್ನಲಿ ಎಂದು ಪುಟಾಣಿ ಕೈಗಳಿಗೆ ಎಟಕುವಂತೆ ನೆಲುವು ತೂಗಿಸಿ, ಅದರಲ್ಲಿ ತಿಂಡಿಗಳನ್ನು ಇಡುವ ವ್ಯವಸ್ಥೆ ಮಾಡಿಸಿದ್ದರು ಅಪ್ಪ.

ಅದರಲ್ಲಿಡುವ ಪದಾರ್ಥಗಳಾದರೂ ಏನು? ಮನೆಯಲ್ಲಿ ಭರಪೂರ ಇರುವ ಹಾಲಿನಲ್ಲಿ ಮಾಡಿದವುಗಳೇ. ಮಿಕ್ಕ ಮಕ್ಕಳಿಗಿಂತ ಹಾಲಿನ ತಿನಿಸುಗಳನ್ನು ತಿನ್ನುವುದರಲ್ಲಿ ನನ್ನದೇ ಸಿಂಹಪಾಲು. ನಮ್ಮ ಕಡೆ ಆಟಕ್ಕುಂಟು ಲೆಕ್ಕಲಿಲ್ಲ ಎನ್ನುವ ಲೆಕ್ಕದಲ್ಲಿ ಮನೆಯ ಕೊನೆಯ ಮಗುವನ್ನು ಹಾಲುಂಡಿ ಎಂದು ಕರೆಯುವುದು ರೂಢಿ. ನಾನು ಹೆಸರಿಗೆ ತಕ್ಕಂತೆ ಹಾಲು ಉಂಡೇ ಬೆಳೆದಿದ್ದು.
ಮಹಾನ್ ಜಗಳಗಂಟಿಯಾದ ನಾನು ತುಂಬಾ ಹೊತ್ತು ಯಾರ ಜೊತೆಯೂ ಗುದಮುರಿಗೆ ಹಿಡಿಯದೆ ಮನೆಯ ಪಡಸಾಲೆ ತಣ್ಣಗಿದ್ದರೆ ಎಲ್ಲರೂ ಒಂದು ಕ್ಷಣ ಅರೇ, ಹಾಲುಂಡಿ ಎಲ್ಲಿ ಅಂತ ಕಣ್ಣಾಹಿಸುತ್ತಿದ್ದರು. ಯಾವುದೊ ನೆಲುವಿನ ಬಟ್ಟಲಲ್ಲಿದ್ದ ಸಿಹಿ ಖಾಲಿಯಾಗುತ್ತಿದೆ ಎಂದು ಸರಿಯಾಗಿ ಊಹೆ ಮಾಡಿ ಎಳೆದು ತರುತ್ತಿದ್ದರಂತೆ ಸಣ್ಣತ್ತೆ.
ನಾನೂ ಇದ್ದಿದ್ದೂ ಹಾಗೆ ಎತ್ತಿಕೊಂಡು ಬರಲಾರದೆ ಎಳೆದುಕೊಂಡು ಬರುವಷ್ಟು ಗುಂಡಗೆ. ಕೂತು ಆಡುತ್ತಿದ್ದ ಮಗುವನ್ನು ಗುಂಡಮ್ಮಾ… ಎಂದು ಕರೆದರೆ ಕತ್ತು ತಿರುಗಿಸಲೂ ಬರದಷ್ಟು ದುಂಡಗಿದ್ದ ನಾನು ಇಡೀ ದೇಹವನ್ನೇ ಧ್ವನಿ ಬಂದ ಕಡೆಗೆ ಟರ್ನ್ ಮಾಡುತ್ತಿದ್ದನಂತೆ ಎಂದು ಅಣ್ಣ ಈಗಲೂ ನೆನಪಿಸಿಕೊಳ್ಳುತ್ತಿರುತ್ತಾನೆ,
ನನ್ನ ದುಂಡುತನ ನನಗೇ ಸಾಕೆನಿಸಿದ ದಿನ ತುಪ್ಪವನ್ನು ಚಮಚದಲ್ಲಿ ತಿನ್ನುವುದನ್ನು ಬಿಟ್ಟಿದ್ದು ಬಿಟ್ಟರೆ, ನರ್ಸರಿ, ಪ್ರೈಮರಿ, ಹೈಸ್ಕೂಲಿನ ದಿನಗಳಲ್ಲಿ ಅಲ್ಲ ಡಿಗ್ರಿ, ಪಿಜಿ ಮಾಡುವ ಕಾಲದಲ್ಲೂ ನನ್ನ ಬೆಳಗುಗಳು ಶುರುವಾಗುತ್ತಿದುದೇ ದೂದ್ ಪೇಡಾ, ಕುಂದಾ, ಬಾಸುಂದಿಗಳಿಂದ.
ನನ್ನ ಆಪ್ತರಿಗೆಲ್ಲ ಈ ವಿಷಯ ಗೊತ್ತಿರುವುದರಿಂದ ಯಾರ ಮನೆಗೆ, ಎಷ್ಟೊತ್ತಿಗೇ ಹೋದರೂ ವಿಶೇಷ ಆತಿಥ್ಯ. ಇವರೆಲ್ಲ ಅಕಸ್ಮಾತ್ ಸಿಕ್ಕಿದರೂ ಹಾಲಿನ ಸವಿ ಉಣಿಸಿದ್ದಾರೆ. ಹೀಗೆ ಎದುರು ನೋಡದಿದ್ದರೂ ದಕ್ಕಿದ ಅಕ್ಕರೆಯಿಂದಾಗಿ ತೆಗೆದುಕೊಳ್ಳುವುದರಲ್ಲಿ ನಾನೆಷ್ಟು ಪಳಗಿದ್ದೇನೆ ಎಂದರೆ ಒಮ್ಮೆಮ್ಮೊ ಉಪಚಾರಗಳನ್ನೂ ಹಕ್ಕಿನಂತೆ ಸ್ವೀಕರಿಸಿದ್ದೇನೆ.
ಎಷ್ಟೋ ಸಲ ಬಾಯಾರಿಕೆಗೆ ಹಾಲು ಕುಡಿದು, ನಾಷ್ಟಾಗೂ ಕೆನೆಹಾಲು-ಅನ್ನ ಬಯಸಿ ಬಯಸಿ ತಿನ್ನುತ್ತಿದ್ದ ನನ್ನ ಮೇಲೆ ಹಿಂದೊಮ್ಮೆ ಯಾರ ಕಣ್ಣು ಬಿತ್ತೋ ಗೊತ್ತಿಲ್ಲ. ಸಿಕ್ಕಾಪಟ್ಟೆ ಕೂದಲು ಉದುರುತ್ತಿದೆ ಎಂದು ಡಾಕ್ಟರ್ ಹತ್ತಿರ ಹೋಗಿದ್ದಾಗ ಔಷಧಿ ಜೊತೆಗೆ ಏನೇನು ತಿನ್ನಬಾರದು ಎಂದು ಹೇಳುವಾಗ ಮೊದಲಲ್ಲಿದ್ದ ಹೆಸರು ಹಾಲು/ಹಾಲಿನ ಪದಾರ್ಥಗಳು. (ಯಾಕೆ ಕೂದಲು ಉದುರುತ್ತದೆ ಎಂದು ಕೇಳಿದರೆ ಡಾಕ್ಟರ್ ಗಳು ಹೇಳುವುದು -ಚಳಿಗೆ ತಲೆಬರುಡೆ ಒಣಗುತ್ತದೆ ಅದಕ್ಕೆ ಕೂದಲು ಉದುರುತ್ತದೆ. ಮಳೆಯಲ್ಲಿ ನೆನೆದ ಕೂದಲು ಸರಿಯಾಗಿ ಒಣಗದೆ ಕೂದಲು ಉದುರುತ್ತದೆ. ಬೇಸಿಗೆಯ ಧೂಳು, ಬೆವರಿಗೆ ಕೂದಲು ಉದುರುತ್ತದೆ ಎಂದು. ಕಳೆದ ಹತ್ತು ವರ್ಷಗಳಿಂದ ಈ ಕೂದಲಿಗೆ ಸೂಕ್ತ ಕಾಲ ಯಾವುದು ಎಂದು ನಾನು ಹುಡುಕುತ್ತಲೇ ಇದ್ದೇನೆ.)
ಹಾಲಿಗಾಗಿ ನಾಲಗೆಯನ್ನು ಉದ್ದವಾಗಿ ಬೆಳೆಸಿಕೊಂಡಿದ್ದ ಈ ‘ಕೂಸಿ’ಗೆ ಹಾಲಿಲ್ಲದ ಊಟ ಎಂದರೆ ಮುಂದೆ ಸಾಗಲಾರದ ಗೋಡೆಯೊಂದರ ಎದುರು ನಿಂತ ಅನುಭವ. ಈ ಟ್ರೀಟ್‌ಮೆಂಟೇ ಬೇಡ ಎಂದು ಎದ್ದು ಓಡಿ ಬರುತ್ತಿದ್ದವಳನ್ನು ತಡೆದಿದ್ದು ಬಾಚಿಕೊಂಡರೆ ಬಳಬಳ ಉದುರುತ್ತಿದ್ದ ಕೂದಲು.
ಕೂದಲ ಆರೈಕೆ ಒಂದು ಹಂತಕ್ಕೆ ಬಂದ ಮೇಲೆ ಡಾಕ್ಟರ್ ಔಷಧ ನಿಲ್ಲಿಸಲು ಹೇಳಿ, ಸ್ವಲ್ಪ ಮಟ್ಟಿಗೆ ಹಾಲಿನ ಪದಾರ್ಥಗಳನ್ನು ತಿನ್ನಬಹುದು ಎಂದಿದ್ದರು. ಅಷ್ಟೇ, ಒಲವಿನ ಹುಡುಗ ರಸ್ ಮಲಾಯ್ ತಂದು ಬಾಯಿಗಿಡುತ್ತ ಗದ್ದ, ಗಲ್ಲಕ್ಕೂ ತಿನ್ನಿಸಿದ್ದು ಹಾಲಿನ ಉಪವಾಸಿಯ ಪಾಲಿನ ಅತ್ಯಂತ ರೋಮ್ಯಾಂಟಿಕ್ ಗಳಿಗೆ.

ಮೊದಮೊದಲ ಕಾಫಿ ಡೇ ವಿಸಿಟ್, ಫಸ್ಟ್ ಕ್ರಶ್ ನ ತೋಳಿಗಾತು ಕೂತ ಕ್ಷಣ ನಾ ಕರಗಿದ್ದು ಕಾಫಿ ಡೇ ಕ್ಯಾಪುಚಿನೊದ ಮೇಲಿನ ನೊರೆಗೇ ಹೊರತು ಅವನ ಪಕ್ಕೆಯ ಬಿಸಿಗಲ್ಲ ಎನ್ನುವುದು ನನ್ನೊಬ್ಬಳಿಗೆ ಮಾತ್ರ ಗೊತ್ತಿರುವ ಸತ್ಯ.
ಕಳೆದ ತಿಂಗಳು ಬಾಲ್ಯ ಸ್ನೇಹಿತರೆಲ್ಲ ಸೇರಿ ಒಂದು ಟ್ರಿಪ್ ಏರ್ಪಡಿಸಿದ್ದರು. ಕೆಲಸ ಮಾಡುವ ಸ್ಥಳದಿಂದ ನೇರ ಪ್ರವಾಸ ಪ್ರದೇಶಕ್ಕೆ ಹೋದವಳು ವಸತಿ ಮನೆಯಲ್ಲಿದ್ದ ತರೆಹವಾರಿ ಕಾಂಪ್ಲಿಮೆಂಟರಿ ತಿಂಡಿಗಳನ್ನು ಬಿಟ್ಟು ಊಟದಷ್ಟೇ ಉಪಹಾರ ತಿಂದಿದ್ದು ಊರಿಂದ ಗೆಳೆಯರು ತಂದ ಕೆಂಪುಖೋವಾವನ್ನು!
ಒಳಬರುವ ಕರೆಗಳಿಗೆಲ್ಲ ನನ್ನ ಫೋನು, ‘ಹಾಲು ಹಳ್ಳ ಹರಿಯಲಿ/ಬೆಣ್ಣೆ ಬೆಟ್ಟವಾಗಲಿ/ತೊಟ್ಟಿಲೊಲಿದು ತೂಗಲಿ…’ ಎಂದು ಉಲಿಯುತ್ತಿದ್ದರೆ; ಅದೇನು ಇವಳಿಗೆ ಮಾತ್ರ ಇಷ್ಟು ಮುದ್ದು ಮಾಡುವುದು ನೀವು ಎನ್ನುವ ಹೆಂಡತಿಯರ ಕೊಂಕಿನ ಮಧ್ಯೆಯೂ ನನ್ನೆಡೆಗೆ ಅದೇ ಮಮತೆ ಉಳಿಸಿಕೊಂಡಿರುವ ಕಾಕಂದಿರು ನೆನಪಾಗಿ ಅಂತಃಕರಣದ ಜೇನು ತೊಟ್ಟಿಕ್ಕುತ್ತದೆ ನನ್ನೊಳಗೆ.
ಇದೆಲ್ಲ ನೆನಪಾಗಿದ್ದು ಕೂಡ, ಇವತ್ತಿಗೂ ಹಾಲು, ಹಾಲಿನ ಪದಾರ್ಥಗಳು ಸಂಪೂರ್ಣ ಆಹಾರ ಎನ್ನುವ ನಾನು ಊರಿಗೆ ಬಂದಿದ್ದೇನೆ ಎಂದು ಗೊತ್ತಾಗಿ ಬಿಸಿಬಿಸಿ ಖೀರು ತಂದು ತಿನ್ನು ತಿನ್ನು ಅಂತ ಕಾಕ ಒತ್ತಾಯ ಮಾಡಿದ್ದಕ್ಕೆ!
 

‍ಲೇಖಕರು avadhi

February 2, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

4 ಪ್ರತಿಕ್ರಿಯೆಗಳು

  1. Vasundhara k m

    ಆಹ್ಲಾದಕರವಾಗಿತ್ತು.. ನಾನೂ ಹಾಲು ಪ್ರಿಯೆ

    ಪ್ರತಿಕ್ರಿಯೆ
  2. Priyadarshini Shettar

    Good write-up. I am also milkoholic! That’s why I felt it scrumptious…

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: