ಎನ್. ರವಿಕುಮಾರ್ ಟೆಲೆಕ್ಸ್
ನೀನು ಸಾಮ್ರಾಟನೆ ಇರಬಹುದು
ನಾನು ಕಾಲಾಳು ಅಲ್ಲ
ಸಾಮ್ರಾಜ್ಯಗಳು ಅಳಿದು
ಸಾಮ್ರಾಟರು – ಸಾಮಂತರು
ಮಣ್ಣಾದದ್ದನ್ನು ಕಂಡಿದ್ದೇನೆ.
ನೀನು ಪಾಳೆಗಾರನೇ ಇರಬಹುದು
ನಾನು ಗುಲಾಮನಲ್ಲ
ಪಾಳೆಪಟ್ಟಗಳು ಕಾಲದ
ಗತಿಯೊಳಗೆ ನುಚ್ಚು ನೂರಾಗಿ
ಪಾತಾಳ ಸೇರಿದ್ದನ್ನು ಕಂಡಿದ್ದೇನೆ
ನೀನು ಭಗವಂತನೆ ಇರಬಹುದು
ನಾನು ಭಕ್ತನಲ್ಲ
ದೇವರೆಂಬ ದೇವರೇ ಬಿರುಗಾಳಿಗೆ
ಭೋರ್ಗರೆದ ಮಳೆಗೆ
ನಾಮಾವಶೇಷಗೊಂಡಿದ್ದನ್ನು
ಕಂಡಿದ್ದೇನೆ.

ನೀನು ಧನಿಕನೇ ಇರಬಹುದು
ನಾನು ದೀನನಲ್ಲ
ಸಂಪತ್ತು – ಐಶ್ವರ್ಯಗಳು
ಅನ್ನ- ನೀರುಗಳನ್ನು ಸೃಷ್ಟಿಸಲಾರದು
ಎಂಬ ಪ್ರಕೃತಿಯ ವೈಚಿತ್ರ್ಯವನ್ನು ಕಂಡಿದ್ದೇನೆ.
ನೀನು ಧರ್ಮವೇ ಇರಬಹುದು
ನಾನು ಅನುಪಾಲಕನಲ್ಲ
ಧರ್ಮ ಧರ್ಮದ ಹೆಸರಲ್ಲಿ
ಬಸುರಿ ,ಹಸುಗೂಸು ,
ಹಸಿಬಾಣಂತಿಯರನ್ನು
ಕೊಂದು ಮನುಷ್ಯರ ನಡುವೆ
ಗೋಡೆಗಳ ಕಟ್ಟುವುದಾ ಕಂಡಿದ್ದೇನೆ
ಎಲ್ಲವ ಕಳಚಿ ಬಯಲಾದ ದಿನ
ನಿನ್ನ ಜೊತೆ ಕೈ ಕೈ ಹಿಡಿದು
ನಡೆಯಬಲ್ಲೆ
ಮಾತಿಗೆ ಮಾತಾಗಿ
ಹೆಜ್ಜೆಗೆ ಹೆಜ್ಜೆಯಾಗಿ
ನೆಳಲು ಬೆಳಕಾಗಿ
ಗಾಳಿ ಗಂಧವಾಗಿ
ಹೂವ ಪಕಳೆ – ಮಳೆ ಹನಿಗಳಾಗಿ
ಮಣ್ಣ ಕಣವಾಗಿ
ಗಮ್ಯದೆಡೆಗೆ ……
ತಥಾಗತನ ಅನನ್ಯ ಪ್ರೇಮದೆಡೆಗೆ
ಮರುಹುಟ್ಟುವ ಸೃಷ್ಟಿಯೆಡೆಗೆ…






ಚೆಂದವಿದೆ. ಗಟ್ಟಿ ದನಿ..
ರವಿ ಸರ್ ನಿಮ್ಮ ಪದ್ಯದ ಒಳಸ್ಮರಣೆಯು ಮನುಷ್ಯನಾಗುವ ಧ್ಯಾನವನ್ನೇ ಧ್ಯಾನಿಸಿದೆ. ಕಾಲಕಾಲಕ್ಕೆ ಸಾಗಿಬರುತ್ತಿರುವ ಹಿಂಸೆಗಳ ವಿರುದ್ಧ ಚಾರಿತ್ರಿಕ ನಿದರ್ಶನಗಳ ಪುರಾವೆಗಳನ್ನು ಕಾಣಿಸಿ ದನಿ ಎತ್ತುವ ಇಂಥಾ ಅಗಣಿತ ಕವಿತೆಗಳು ಬಂದರೂ ಈ ಜಗತ್ತಿನಲ್ಲಿ ವಿಕಾರ ಆಕ್ರಮಣಗಳು ನಿಲ್ಲಲಾರವು. ಏನೇ ಆಗಲಿ ಇಂಥ ಕವಿತೆಗಳು ತಥಾಗತನ ಪ್ರೇಮದೆಡೆಗೆ ಚಲಿಸುವ ಜಂಗಮರ ಸಮುದಾಯವನ್ನು ವಿಸ್ತರಿಸುವಂತಾಗಲಿ…..
ಒಳ್ಳೆಯ ಕವಿತೆ
CHENDADA KAVITE
ಒಳ್ಳೆಯ ಸದಾಶಯದ ಕವಿತೆ.ಬಿಳಿ ಪಾರಿವಾಳವ ಹಾರಿಸುವ ಕನಸಿರುವ ಕವಿತೆ….