ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

"ನಾನು ಕದ್ದಿಲ್ಲ ಸರ್ ನನ್ನ ಬಿಟ್ಟು ಬಿಡಿ"

 
manjunath netkal

ಮಂಜುನಾಥ್ ಸಿ ನೆಟ್ಕಲ್ 

ನಾನಾಗ ಮೂರನೆಯ ತರಗತಿ ಇರಬಹುದು. ಮನೆಪಕ್ಕದಲ್ಲಿ ಟ್ಯೂಷನ್ ಇತ್ತು. ಆ ಟ್ಯೂಷನ್ ನಲ್ಲಿ ನಾನು ಗ್ರೂಪ್ ಲೀಡರ್. ಬೇರೆಯವರಿಗಿಂತ ಸ್ವಲ್ಪ ಚೆನ್ನಾಗಿ ಓದ್ತಾ ಇದ್ದೆ ಅಂತ ನನಗೆ ನಾಲ್ಕು ದಡ್ಡ ಹುಡುಗರ ಮೇಲುಸ್ತುವಾರಿ ವಹಿಸಿದ್ದರು. ಅವರು ಬರೆದ ಹೋಂ ವರ್ಕ್ ಚೆಕ್ ಮಾಡೋ ಕೆಲಸ. ದಡ್ಡ ವಿದ್ಯಾರ್ಥಿಗಳಲ್ಲಿ ಕೆಲವರಿಗೆ ನನ್ನ ಮೇಲೆ ಏನು ಸಿಟ್ಟಿತ್ತು ಗೊತ್ತಿಲ್ಲ ಒಂದು ದಿನ ಮನೆಪಾಠಕ್ಕೆ ಬರುವ ಒಬ್ಬನ ಕ್ರಿಕೆಟ್ ಬಾಲ್ ನಾಪತ್ತೆಯಾಯಿತು.
ಮೇಷ್ಟ್ರು ಎಲ್ಲ ಹುಡುಗರ ಬ್ಯಾಗ್ ಚೆಕ್ ಮಾಡಿದರು. ನನ್ನ ಬ್ಯಾಗ್ ಚೆಕ್ ಮಾಡಿದರು ಏನೂ ಇರಲಿಲ್ಲ ಮುಂದೆ ಹೋದರು. ಕದ್ದವನು ಬ್ಯಾಗ್ ಚೆಕ್ ಮಾಡಲು ಸರದಿ ಬಂದಿರಲಿಲ್ಲ. ಅಷ್ಟರಲ್ಲಿ ಅವನು ತಾನು ಕದ್ದ ಚೆಂಡನ್ನು ನನ್ನ ಬ್ಯಾಗನತ್ತ ಎಸೆದು ಬಿಟ್ಟ. ಅದು ನನ್ನತ್ತ ಬಿತ್ತು. ಮೇಷ್ಟ್ರು ತಕ್ಷಣ ತಿರುಗಿದರು. ನಾನೇ ಕದ್ದವನು ಎಂದು ನಿಂತಲ್ಲೇ ನಿರ್ಧರಿಸಿ ನನಗೆ ಶಿಕ್ಷೆ ವಿಧಿಸಿದರು.
ಕಾಲಿನ ಸಂಧಿಯಲ್ಲಿ ಕೈ ತೂರಿಸಿ ಕುಕ್ಕರಗಾಲಿನಲ್ಲಿ ಕೂತು ಕಿವಿ ಹಿಡಿದುಕೊಳ್ಳಬೇಕು. ಮಧ್ಯಾಹ್ನ ಮೂರು ಗಂಟೆಗೆ ಕೂರಿಸಿದ್ದು ಸಂಜೆ ಐದು ಗಂಟೆವರೆಗೆ ಹಾಗೆಯೇ ಇದ್ದೆ. ಅತ್ತು ಅತ್ತು ಕಣ್ಣು ಕೆಂಪಾಗಿತ್ತು. ಕೈ ಕಾಲುಗಳು ನೋಯುತ್ತಿದ್ದವು. ಜೋಮು ಹಿಡಿದಂತಾಗಿ ನರಳುತ್ತಿದ್ದೆ. “ನಾನು ಕದ್ದಿಲ್ಲ ಸರ್ ನನ್ನ ಬಿಟ್ಟು ಬಿಡಿ” ಎಂದು ಎಷ್ಷು ಬೇಡಿಕೊಂಡರೂ ಬಿಡಲಿಲ್ಲ. ನಾನು ತಪ್ಪಿತಸ್ಥನೆಂದು ಏಕ ಪಕ್ಷೀಯವಾಗಿ ತೀರ್ಮಾನಕ್ಕೆ ಬಂದಾಗಿತ್ತು. ಚೆಂಡು ನನ್ನ ಹತ್ತಿರ ಇದ್ದುದಷ್ಟೇ ಅವರಿಗೆ ಪ್ರಬಲ ಸಾಕ್ಷಿಯಾಗಿತ್ತು.
ಮಾಸ್ತಿಯವರ “ಜೋಗ್ಯೋರ ಅಂಜಪ್ಪನ ಕೋಳಿ ಕತೆ” ಅಂಜಪ್ಪನ ಸ್ಥಿತಿಯಲ್ಲಿದ್ದೆ. ಆ ವಯಸ್ಸಿನಲ್ಲಿ ನನಗೆ ನನ್ನನ್ನು ನಿರಪರಾಧಿ ಎಂದು ಸಾಬೀತು ಪಡಿಸಿಕೊಳ್ಳುವ ಯಾವ ಚಾಣಾಕ್ಷತೆ ಇರಲಿಲ್ಲ. ಕೊಟ್ಟ ಶಿಕ್ಷೆಯನ್ನು ಹಲ್ಲು ಮುಡಿ ಕಚ್ಚಿ ಸಹಿಸಿದೆ. ಸಂಜೆ ಕೆಲಸದಿಂದ ಬಂದ ನನ್ನ ಅಮ್ಮ ನನ್ನನ್ನು ಶಿಕ್ಷೆಯಿಂದ ಬಿಡಿಸಿದರು. ಅವರಿಗೆ ನನ್ನ ಮೇಲೆ ನಂಬಿಕೆ ಇತ್ತು. ಅವರು ನನ್ನ ಮಗ ಹಾಗೆಲ್ಲಾ ಕದಿಯಲ್ಲ ಎಂದು ವಾದಿಸಿದರು. ಆದರೆ ಅದನ್ನು ಮೇಷ್ಟ್ರು ನಂಬಿದರೋ ಬಿಟ್ಟರೋ ನೆನಪಿಲ್ಲ. ನಾನಂತೂ ಮಾಡದ ತಪ್ಪಿಗೆ ಮೂರು ಗಂಟೆಗಳ ಕಠಿಣ ಶಿಕ್ಷೆ ಅನುಭವಿಸಿಯಾಗಿತ್ತು. ಈ ಸಮಾಜದ ಕುರುಡು ನ್ಯಾಯ ವ್ಯವಸ್ಥೆ ಬಗ್ಗೆ ಸಿಟ್ಟು ಬೇಸರ ಬಂದಿತ್ತು.
ಕೆಲವು ಸಲ ಪೋಲೀಸರು ಅನುಮಾನದ ಮೇಲೆ ಕೆಲವರನ್ನು ಬಂಧಿಸುವ ವಿಚಾರ ಕೇಳಿದಾಗ ನನಗೆ ಇದೆಲ್ಲಾ ನೆನಪಾಯಿತು. ಅಸಹಾಯಕರಾಗಿರುವುದೇ ಅಪರಾಧವೇ ? ಹೂಸಿದವರು ಯಾರು ಅಂದರೆ ಮಾಸಿದ ಬಟ್ಟೆಯವರು ಎನ್ನುವ ಈ ಮನೋಧರ್ಮ ಬದಲಾಗುವುದು ಯಾವಾಗ.?

‍ಲೇಖಕರು Avadhi

31 January, 2016

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading