
ರಘುನಾಥ್ ಕೃಷ್ಣಮಾಚಾರ್
ಕಾರಾಯಣ: ಎರಡು ಸಲ ವಿಮಾನ ಪ್ರಯಾಣ ಬಿಟ್ಟರೆ ಉಳಿದೆಲ್ಲ ಪಯಣ ಕಾರಿನ ಮೂಲಕ ಕೈಗೊಂಡ ಪ್ರಯುಕ್ತ ಇದಕ್ಕೆ ಕಾರಾಯಣ ಎಂದು ಕರೆಯಲಾಗಿದೆ. ನೈಸರ್ಗಿಕ ಮಹಾಕಣಿವೆ: ಮಗ ಒಂದು ವಾರ ಕಛೇರಿ ಕೆಲಸಕ್ಕೆ ರಜೆ ಹಾಕಿ ಅಮೆರಿಕದ ಕೆಲವು ನಗರಗಳನ್ನು, ಪ್ರಾಕೃತಿಕ ವಿಸ್ಮಯವಾದ ಗ್ರ್ಯಾಂಡ್ ಕ್ಯಾನ್ಯನ್. ತೋರಿಸುವ ಸಲುವಾಗಿ ಹೊರಟ. ಸಿಯಾಟಲ್ ನಿಂದ ಫೀನಿಕ್ಸ್ ಗೆ ಮೂರು ಗಂಟೆಗಳ ಕಾಲ ವಿಮಾನದಲ್ಲಿ ಪ್ರಯಾಣಿಸಿ ರಾತ್ರಿ ಒಂಬತ್ತುವರೆಗೆ ತಲುಪಿದೆವು. ಅಲ್ಲಿ ನನ್ನ ಮಗ ಬಾಡಿಗೆ ಕಾರನ್ನು ಪಡೆದ.
ಅರಿಜೋನಾ ರಾಜ್ಯದ ಫೀನಿಕ್ಸ್ ನಿಂದ ನಾಲ್ಕು ಗಂಟೆಯ ದೂರದಲ್ಲಿ ಇರುವ ವಿಲಿಯಮ್ಸ್ ಎನ್ನುವ ಜಾಗ ತಲುಪಲು ಹೊರಟೆವು. ನಡುವೆ ಇಂಡಿಯನ್ ಶಾಲೆಯ ದಾರಿ. (ಇಂಡಿಯನ್ ಎಂದರೆ ನಾವಲ್ಲ. ಇಲ್ಲಿನ ಮೂಲ ನಿವಾಸಿಗಳಾದ ಇಂಡಿಯನ್ಸ್) ಅದನ್ನು ದಾಟಿ, ದಾರಿಯಲ್ಲಿ ಒಂದು ಹೋಟೆಲ್- ಕಂಫರ್ಟ್ ಇನ್ ನಲ್ಲಿ ತಂಗಿ,ಅಲ್ಲಿ ಬೆಳಗಿನ ಉಪಹಾರ ಮುಗಿಸಿಕೊಂಡು, ಹೊರಟಾಗ ಬೆಳಿಗ್ಗೆ ಒಂಬತ್ತು ಗಂಟೆ. ದಾರಿಯಲ್ಲಿ ಕಾರಂಜಿ ಕಣಿವೆ, ಅದನ್ನು ದಾಟಿದರೆ ಪಕ್ಷಿಕಾಶಿ. ನಡುವೆ ಗ್ರ್ಯಾಂಡ್ ಕ್ಯಾನ್ಯನ್ ನ್ ಹಳ್ಳಿ. ಅದನ್ನು ದಾಟಿದ ಅರ್ಧತಾಸಿನಲ್ಲಿ ಗ್ರ್ಯಾಂಡ್ ಕ್ಯಾನ್ಯನ್ ನ್ ರಾಷ್ಟ್ರೀಯ ಉದ್ಯಾನದ ಪ್ರವೇಶ ದ್ವಾರ. ದ್ವಾರ ತಲುಪಿ ಮಗನ ಕಾರ್ಡ್ ತೋರಿಸಿದ ಕೂಡಲೆ, ಪರವಾನಗಿಯೊಂದಿಗೆ ಕ್ಯಾನ್ಯನ್ ಉದ್ಯಾನದ ಪರಿಚಯದ ಕರಪತ್ರ.
ಮೇಥರ್ ಕಣಿವೆಯ ದೃಶ್ಯ ವೈಭವ. ಸಾವಿರಾರು ಅಡಿಗಳ ಕಣಿವೆ ಕಣ್ಣಿಗೆ ಹಬ್ಬ. ೨೭೭ಮೈಲಿ ಉದ್ದದ ಇದು ಪ್ರಕೃತಿಯ ವಿಸ್ಮಯ. ಅತ್ತಿಂದಿತ್ತ ಹಾರಾಡುತ್ತ ಮಾರ್ಗ ಕ್ರಮಣಕ್ಕೆ ಅಡ್ಡ ಬರುತ್ತಿದ್ದ ಪರ್ವತಗಳ ಮೇಲೆ ಇಂದ್ರ ಕೋಪಗೊಂಡು ತನ್ನ ವಜ್ರಾಯುಧವನ್ನು ಬೀಸಿದಾಗ ಅದರ ಮಹಾಘಾತಕ್ಕೆ ಸಿಕ್ಕಿ ಚೂರು ಚೂರಾಗಿ ಬಿದ್ದಾಗ ಉಂಟಾದ ಮಹಾಕಂದರದಂತಿದೆ ಈ ಮಹಾಕಣಿವೆ. ಅದಕ್ಕೆ, ಇದಕ್ಕೆ ಜಾಗತಿಕ ಪರಂಪರೆಯಲ್ಲಿ ವಿಶಿಷ್ಟವಾದ ಸ್ಥಾನವನ್ನು ನೀಡಲಾಗಿದೆ.

ಎರಡೂವರೆ ಸಾವಿರ ಅಡಿಗಳ ಕೆಳಗೆ ಲಾಸ್ಟ್ ಚಾನ್ಸ್ ತಾಮ್ರದ ಗಣಿಯನ್ನು ಪತ್ತೆ ಹಚ್ಚಲಾಗಿದೆ. ಬಾತುಕೋಳಿಯಂತಿರುವ ಕೋಡುಗಲ್ಲು, ಅಜಂತ ನೆನಪಿಗೆ ತರುವ ಪ್ರಾಕೃತಿಕ ಗೋಪುರ, ಮೇಲೆ ಹಾರಾಡುವ ಹದ್ದುಗಳು. ಕೆಳಗೆ ಓಡುವ ಅಳಿಲುಗಳು. ಇದರ ನಡುವೆ ಬೆಳೆದು ನಿಂತಿರುವ ವೃಕ್ಷ ರಾಜಿ. ಈ ಎಲ್ಲದರ ಜೀವಾಳವಾಗಿರುವ ಜೀವ ಜಲ( ಶುದ್ಧ, ಸ್ಪಟಿಕ). “ಯಾವುದೇ ಭಾಷೆಯಲ್ಲಾಗಲಿ,, ಯಾವುದೇ ಶಿಲ್ಪಿಯಾಗಲಿ ,ಕಲಾವಿದರಾಗಲಿ ತನ್ನ ಕಲೆಯ ಮೂಲಕ ಇದರ ದೃಶ್ಯ ವೈಭವವನ್ನು ಸೆರೆಹಿಡಿಯಲು ಅಸಮರ್ಥ” ಎಂದು ಒಂದೂಕಾಲು ಶತಮಾನದ ಹಿಂದೆಯೆ ಇದರ ಮಹತ್ವವನ್ನು ಬಣ್ಣಿಸಿದ್ದಾರೆ.
ಮರುಭೂಮಿಯ ದೃಶ್ಯ: ಅದನ್ನು ನೋಡುವ ಸಲುವಾಗಿ ವೀಕ್ಷಕ ಗೋಪುರ ನಿರ್ಮಿಸಿದ್ದಾರೆ. ಅಲ್ಲಿ ಮಹಾಕಣಿವೆಯನ್ನು ಅಮರಗೊಳಿಸಲೆಂದು ಕವಿಗಳಿಗೆ” what’s the difference between the night and darkness ” ಒಂದು ಸಾಲಿನಲ್ಲಿ ಬರೆಯುವ ಸವಾಲನ್ನು ಒಡ್ಡಿದ್ದರು.ಅದನ್ನು ಸ್ವೀಕರಿಸಿದ ನನ್ನ ಕವಿ ಸಂಗಾತಿ ಅಲ್ಲಿ ಅದಕ್ಕಾಗಿ ಇಟ್ಟಿದ್ದ ಚೀಟಿಯಲ್ಲಿ ” though the night comes early here the darknes envelopes slowly ” ಎಂದು ಬರೆದು ಸಹಿ ಹಾಕಿ ಅದಕ್ಕಾಗಿ ಇಟ್ಟಿದ್ದ ಪೆಟ್ಟಿಗೆಯಲ್ಲಿ ಅದನ್ನು ಹಾಕಿ ಬಂದರು. ಅಲ್ಲಿಂದ ಇಳಿದು ಬಂದು ಪಕ್ಕದ ಅಂಗಡಿಗೆ ಮಹಾಕಣಿವೆಯ ದರ್ಶನದ ನೆನಪಿಗೆ ನನ್ನ ಸಂಗಾತಿ ತನಗೆ ಚಿಕ್ಕ ಟೋಪಿ ಕೊಂಡು, ನನಗೆ ಮಾತ್ರ ದೊಡ್ಡ ಟೋಪಿಹಾಕಿದಳು. ನನ್ನ ಮಗ ಮಹಾಕಣಿವೆಯನ್ನು ಮುಂದಿನ ಜನಾಂಗಕ್ಕೆ ರಕ್ಷಿಸುವ ಸಲುವಾಗಿ ಇದ್ದ ಯೋಜನೆಗೆ ಸದಸ್ಯನಾಗಿ ತನ್ನ ಕಿರು ಕಾಣಿಕೆಯನ್ನು ಸಲ್ಲಿಸಿದ.
ನಂತರ ಅಲ್ಲಿನ ಹೋಟೆಲ್ ಒಂದರಲ್ಲಿ ಸ್ಯಾಂಡ್ವಿಚ್ ತಿಂದು ಹೊರಟೆವು- ಐದು ಗಂಟೆಗಳ ಪ್ರಯಾಣದ ಮಹಾಕಣಿವೆಯ ಪಶ್ಚಿಮದ ನೋಟಕ್ಕೆ ಸಿದ್ದರಾಗಿ. ದಾರಿಯಲ್ಲಿ ಯಥಾಪ್ರಕಾರ ವಿದ್ಯುತ್ ಸಂಪರ್ಕಕ್ಕೆ ಕಡಿದ ಬೆಟ್ಟಗಳ ಸಾಲು, ಬೆಟ್ಟಗಳ ಮೇಲೆ ನೆಟ್ಟ ವಿದ್ಯುತ್ ಕಂಬಗಳ ಸಾಲು.. ಮಹಾಕಾಣಿವೆಯ ದರ್ಶನಕ್ಕೆ ಗುಡ್ಡಗಳ ಹತ್ತಿಯೇ ಹೋಗಬೇಕು. ಜತೆಗೆ ಡೋಲಾನ್ ಕಾರಂಜಿಗಳ ದಾರಿ. ನಡುವೆ ಅಲ್ಲಿ ಸಿಗುವ ತರಹಾವರಿ ಕಲ್ಲುಗಳಿಂದ ಮಾಡಿದ ಒಡವೆಗಳ ಅಂಗಡಿ. ಅದರ ಪಕ್ಕದಲ್ಲೇ ಗ್ರಂಥಾಲಯ ಬೇರೆ!!!! ಪಕ್ಕದಲ್ಲೇ ಮೌಂಟ್ ಟಿಪನ್ ಶಾಲೆ.

ಇಗೋ ನಾವೀಗ ಪಶ್ಚಿಮದ ಮಹಾಕಣಿವೆಯ ಎದುರಿಗೆ. ವರ್ಣರಂಜಿತ ಬಸ್ ನಲ್ಲಿ ಶ್ವೇತ ಸುಂದರಿ ಚಾಲಕಿಯ ಜತೆಗೆ ಪಶ್ಚಿಮದ ಮಹಾಕಣಿವೆಯ ಆಕಾಶಗಮನದೆಡೆಗೆ.ಅದಕ್ಕೆ ಹೋಗುವ ದಾರಿಯಲ್ಲಿ ಅಲ್ಲಿನ ಮೂಲನಿವಾಸಿಗಳದ ಹುಲಪಾಯ್ ಅವರ ಜೀವನ ವಿನ್ಯಾಸದ ಹಲವಾರು ಮಾದರಿಗಳ ಪ್ರದರ್ಶನ ಕಂಡಿತು. ಹೊರಗೆ ಅವರು ವಾಸಿಸುತ್ತಿದ್ದ ಮನೆಗಳ ಮಾದರಿ- ಮರ ಮತ್ತು ಮಣ್ಣುಗಳಿಂದ ಮಾಡಿದ- ನಮ್ಮ ಇಂದಿನ ಹಿಂದುಳಿದ ಜನರ ಜೋಪಡಿ – ಹೊರಗೆ ರಣ ರಣ ಬಿಸಿಲು. ಅವುಗಳ ಒಳಗೆ ತಂಪಾದ ವಾತಾವರಣ. ಅವುಗಳ ಎದುರು ನಿಂತು ನಾವು ಫೋಟೋ ತೆಗೆದು ಕೊಂಡರೆ ,ನಮ್ಮ ಮಗ ಒಳಗೆ ನಿಂತು ಫೋಟೋ ತೆಗೆಸಿಕೊಂಡ.
ಆಕಾಶ ಗಮನಕ್ಕೆ ಅಲ್ಲಿ ಗಾಜಿನ ಮನೆ. ನಡೆಯಲು ಕಾಲುಚೀಲ. ಖಾಸಗಿ ವಸ್ತುಗಳ ಒಯ್ಯಲು ನಿಷೇಧ. ಅದಕ್ಕಾಗಿ ಒದಗಿಸಿದ ಲಾಕರ್ ನಲ್ಲಿ ನಮ್ಮ ಮೊಬೈಲ್ ಪರ್ಸ ಇತ್ಯಾದಿ ಇರಿಸಿ ,ಒಳಗೆ ಸಾಲು ಸಾಲಾಗಿ ಪ್ರವೇಶ. ಒಳಗೆ ಹೋಗಿ ಕೆಳಗೆ ಕಣ್ಣು ಹಾಯಿಸಿದರೆ ಆಳವಾದ ಕಂದರ. ಅದರ ಆಳದಲ್ಲಿ ಕೊಲೆರ‌್ಯಾಡೊ ನದಿ. ಎಲ್ಲರ ಎದೆಯ ಆಳದಲ್ಲಿ ಹರಿವ ಕರುಣಾಗಂಗೆಯಂತೆ. ಅಲ್ಲಿ ಕೂಡ ತರಾವರಿ ಪೋಸ್ ಕೊಟ್ಟು ಖಾಸಗಿ ಛಾಯಾಚಿತ್ರ ಗ್ರಾಹಕರಿಂದ ಫೋಟೋ ತೆಗೆಸಿಕೊಳ್ಳುವ ಸಂಭ್ರಮ. ಅದರಿಂದ ಹೊರಗೆ ಬಂದು ಮತ್ತೆ ಬಸ್ ಹತ್ತುವ ಬಳಿ ನನ್ನ ಸಂಗಾತಿ , ಕೈಯಲ್ಲಿ ಮಾಡಿದ ಮಣಿಸರಗಳನ್ನು ತನಗೆ ( ಹುಟ್ಟಿದ ದಿನದ ಪ್ರಯುಕ್ತ) ಸೊಸೆಗೆ ಕೊಂಡು ಕೊಂಡರು. ಅಲ್ಲಿ ಊಟ ಮಾಡಿ ನಿಂಬೆ ಹಣ್ಣಿನ ರಸ ಕುಡಿದು ಹೊರಟೆವು. ಮರೆಯಲಾಗದ ಮಹಾಕಣಿವೆಯ ಕಂಡು ಧನ್ಯತಾ ಭಾವ ಆವರಿಸಿತು.






0 Comments