ನೀವಿಲ್ಲ, ಆದರೂ ಇದ್ದೀರಿ..
ಟಿ.ಗುರುರಾಜ್,ಮೈಸೂರು
ಒಂದಿಂಚೂ ಜಾಗ ಬಿಡದ ಹಾಗೆ
ಆಗಸದ ತುಂಬೆಲ್ಲಾ ತುಂಬಿಕೊಂಡು
ಕಣ್ಣಾ-ಮುಚ್ಚಾಲೆ ಆಡುತ್ತಿದ್ದ ನಕ್ಷತ್ರಗಳನ್ನು
ತೋರಿಸುತ್ತಲೇ ಬೆಳೆಸಿದ ನನ್ನಪ್ಪ
ಮುಚ್ಚಿದ ಕಣ್ಣು ಬಿಚ್ಚಲೇ ಇಲ್ಲ.
ಕೇಳಿದ್ದಕ್ಕೆ ಅಮ್ಮ ಹೇಳಿದಳು –
‘ಮೇಲಿದ್ದಾರೆ ಬಿಡು,ನೋಡುತ್ತಲೇ ಇರು’
ಹುಡುಕುತ್ತಲೇ ಇದ್ದೇನೆ;ಇನ್ನೂ ಸಿಕ್ಕಿಲ್ಲ.
ರಾತ್ರಿ ಪ್ರೀತಿಯಿಂದ ಇಟ್ಟ ರಂಗೋಲಿ
ಸುಳಿವೇ ಕೊಡದೆ ಸುಳಿದ ಮಳೆಗೆ
ಚುಕ್ಕಿ ಉಳಿಯದ ಹಾಗೆ ತೊಳೆದುಹೋಗಿತ್ತು.
ಮಲಗಿದ್ದ ನನ್ನಮ್ಮನಿಗೆ ಮತ್ತೆ
ಎಚ್ಚರವೇ ಆಗಲಿಲ್ಲ.
ಕತ್ತಲೆ ಕಣ್ಣು ತೆರೆಯುವ ಹೊತ್ತಿಗೆ
ಮನೆಯೊಳಗೆ ಬೆಳಕಿರಲಿಲ್ಲ.
ಎಲ್ಲಿ ಹೋದಿರೆಂದು ಕೇಳಲಿಕ್ಕೆ ಇಬ್ಬರೂ ಇಲ್ಲ.
ಹಗಲಿನಲ್ಲೀಗ ಮೊದಲಿನ ತಂಪಿಲ್ಲ
ಅಂಗಳಕ್ಕೂ ರಂಗವಲ್ಲಿಯ ಹಂಗಿಲ್ಲ
ನಾನೀಗ ರಾತ್ರಿಗಳಲ್ಲಿ ತಾರೆಗಳನ್ನು ಹುಡುಕುವುದಿಲ್ಲ
ಕನಸುಗಳ ಬೋಗುಣಿ ಖಾಲಿಯಾಗಿದೆ
ಯಾರಿದ್ದರೂ ನಿಮ್ಮಿಬ್ಬರಂತಾಗುವುದಿಲ್ಲ-
ಸುತ್ತ ಇದ್ದವರೆಲ್ಲ ಮೆತ್ತಗೆ ಮಾಯವಾದರೂ,
ಈ ಇಬ್ಬರನ್ನು ಇನ್ನೂ ಜೀವಂತವಾಗಿರಿಸಿದ್ದೀಯಲ್ಲ…
ಓ ನೆನಪೇ ನಿನಗೆ ಅನಂತಾನಂತ ನಮಸ್ಕಾರ !







ಯಾರಿದ್ದರೂ ನಿಮ್ಮಿಬ್ಬರಂತಾಗುವುದಿಲ್ಲ-
ಸುತ್ತ ಇದ್ದವರೆಲ್ಲ ಮೆತ್ತಗೆ ಮಾಯವಾದರೂ,
ಈ ಇಬ್ಬರನ್ನು ಇನ್ನೂ ಜೀವಂತವಾಗಿರಿಸಿದ್ದೀಯಲ್ಲ…
ಓ ನೆನಪೇ ನಿನಗೆ ಅನಂತಾನಂತ ನಮಸ್ಕಾರ !…ultimate..manamuttuva kaaduva saalugalu….
adbhutavaagide …
Ishtavaayitu. Bannisalu padagalilla.
ತಂದೆ ತಾಯಿಯರನ್ನ ದೈಹಿಕವಾಗಿ ಕಳೆದುಕೊಂಡ ನೋವಿದ್ದರೂ, ಮಾನಸಿಕವಾಗಿ ಅವರು ಎಂದೂ ನಮ್ಮೊಂದಿಗೆ ಇರುತ್ತಾರೆ ಅಲ್ವ? ಓ ನೆನಪೇ ನಿನಗೆ ಅನಂತಾನಂತ ನಮಸ್ಕಾರ !