ನಂಜನಗೂಡು ಅನ್ನಪೂರ್ಣ
ನೋಡಮ್ಮ ಒಮ್ಮೆ ನನ್ನತ್ತ
ನನಗೆ ತಿಳಿದಿದೆ ನಿನ್ನ ಚಿತ್ತ
ನಿದ್ದೆಯೆಲ್ಲಿದೆ ನಿನಗೆ
ಸೆರಗಿನ ಕೆಂಡ
ಒಲೆ ಸೇರುವವರೆಗೆ
ಕೂರಲಾರೆ ನಾನೊಳಗೆ
ನಾನಿನ್ನು ಹೋಗಿಬರಲೇ
ಅಪ್ಪ ಮುದ್ದಿಸುವಲ್ಲಿ
ಮಮತೆ ಮರೆಯಾದಾಗ
ಅಣ್ಣನಕ್ಕರೆ ಅಪ್ಪುಗೆಯಲ್ಲಿ
ಮತ್ತೇನೋ ಅವಿತಂತಿರುವಾಗ.,
ನಿದ್ದೆಯೆಲ್ಲಿದೆ ನಿನಗೆ.

ರಚ್ಚೆ ಹಿಡಿದು, ಕಣ್ಣು ಮುಚ್ಚಿ
ಕೊಚ್ಚಿ ತಿನ್ನುವ ಕಾಮುಕ ಪಡೆಯ
ಹಾರಾಟ ನಿತ್ಯ ನಡೆದಿರುವಾಗ
ನಿದ್ದೆಯೆಲ್ಲಿದೆ ನಿನಗೆ
ಸ್ನೇಹ ಸಂಬಂಧಗಳ ಹುತ್ತದೊಳಗೆ
ಅಡಗಿರಬಹುದೇ ಹಾವೊಂದು ಬೆಚ್ಚಗೆ
ನಿನ್ನಂತೆ ಗೊಂದಲ ನನಗೂ
ಒಳ-ಹೊರಗೆ.
ತೇಪೆ ಹಾಕಿದ ತೆಪ್ಪ
ತೂತು ಬಿದ್ದಿದೆ ಮತ್ತೆ
ಮಳೆಗೆ ಹೊಳೆ ತುಂಬಿದರೆ
ಅದು ನನ್ನ ತಪ್ಪೇ?
**
ರಕ್ಷಣೆಗೆ ಕೃಷ್ಣ ಬರುವುದಿಲ್ಲ
ನಿಷ್ಟೆಯ ರಾವಣನೂ ಇಂದಿಲ್ಲ
ಕೀಚಕ ದುಶ್ಯಾಸನರ ಸಿಗಿವ
ಭೀಮನೂ ಬದುಕಿಲ್ಲ
ಅವರ ಮತ್ತೆ ಮತ್ತೆ
ನೆನೆಯಲೇಕೆ ನನ್ನಮ್ಮ
ಹರಿವ ಮುಳ್ಳನು
ಮತ್ತೆ ಅಂಟಲೇಕೆ

ನಮ್ಮ ಬದುಕಿಗೆ ನಾವೆ
ನಾವೇ ಹೋರಾಡಬೇಕು
ಅಮ್ಮ ಹೆದರದಿರು
ಹೊಸ ತೀರವನ್ನು
ಮುಟ್ಟಬೇಕು.,
ಹುತ್ತದೊಳಗಿನ ಹಾವ
ಎತ್ತಿ ಹೊರಹಾಕಬೇಕು
ಕಂಡಲ್ಲಿ ಕಲ್ಲಿಟ್ಟುಸ
ಕೊಲಬೇಕು ತಿಳಿಯಮ್ಮ
ಚಿತ್ತವೆಲ್ಲವ ಮತ್ತೆ
ಹಸನು ಮಾಡಬೇಕು
ಅಲ್ಲಿ ಮತ್ತೆ ಹೊಸ
ಚಿಗುರ ಕಾಣಬೇಕು.,
ನಾನಿನ್ನು ಹೋಗಿಬರಲೇ..






0 Comments