ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನಾದಾಲೀಲೆ:ಎಷ್ಟೊಂದು ಪೈನ್ ಬೆಂಚುಗಳು..


ಯುರೋಪಿನ ಅದೆಷ್ಟೋ ದೇಶಗಳಲ್ಲಿ ನೀವು ವಿಹಾರಕ್ಕೆ ಹೊರಡುವ ನಗರದ ಹೊರವಲಯದ ಮರದಡಿಗಳಲ್ಲಿ ಬೆಂಚುಗಳನ್ನು ಹಾಕಿರುವುದು ಕಾಣಿಸುತ್ತದೆ. ಅವುಗಳಲ್ಲಿ ಸಿಂಹಪಾಲೂ ಮರದ ಬೆಂಚುಗಳೆ. ಬೆಂಚಿಗೆ ಸಾಮಾನ್ಯವಾಗಿ ಪೈನ್ ಮರಗಳನ್ನು ಬಳಕೆ ಮಾಡುತ್ತಾರೆ. ಜರ್ಮನಿ, ಸ್ವಿಟ್ಸರ್ಲಾಂಡ್, ಆಷ್ಟ್ರಿಯಾದಂತಹ ದೇಶಗಳಲ್ಲಿ ಪೈನ್ ಮರಕ್ಕೇನುಕೊರತೆ? ಎಲ್ಲಿ ನೋಡಿದರಲ್ಲಿ ಪೈನ್ ಮರದ ಕಾಡುಗಳೇ ಬೆಳೆದಿರುತ್ತವೆ. ದೇಶದ ವಾತಾವರಣದ ಸಮತೋಲನವನ್ನು ಕಾಯ್ದುಕೊಳ್ಳುವಲ್ಲಿ ಪೈನ್ ಮರಗಳ ಕೊಡುಗೆ ಅಪಾರವಾದುದು.

ನಗರದ ಹೊರವಲಯದ ರಸ್ತೆಗಳ ಎರಡೂ ಬದಿಗಳಲ್ಲಿ ಸಾಲು ಸಾಲು ಸೊಂಪಾಗಿ ಬೆಳೆಸಿದ ಮರಗಳು. ಅವುಗಳಡಿಯಲ್ಲಿ ಅದೆಷ್ಟೋ ಮರದ ಬೆಂಚುಗಳು. ರಸ್ತೆಯ ಬದಿಯಲ್ಲಿ ಇಷ್ಟೊಂದು ಬೆಂಚುಗಳೇಕೆ ಸ್ಥಾಪನೆಗೊಂಡಿವೆ ಎಂದು ನೀವಾದರೂ ಆಶ್ಚರ್ಯ ಪಡಬಹುದು. ಸುಮಾರು ಇನ್ನೂರು ವರ್ಷ ಹಳೆಯದಾದ ಬೆಂಚುಗಳೂ ಅಲ್ಲಿ ಕಾಣಸಿಗುತ್ತವೆ. ಜರ್ಮನಿಯ ಹೈಡಲ್ ಬರ್ಗ್ ಅರಮನೆಯ ಸುತ್ತ ಇರುವ ಬೆಂಚುಗಳಿಗೆ ಅರಮನೆಯಷ್ಟೇ ವಯಸ್ಸಿರಬಹುದು. ಮಳೆಯನ್ನು ತಡೆದುಕೊಂಡು ಈಗಲೂ ಅವು ತಲೆಯೆತ್ತಿ ಮಲಗಿವೆಯಲ್ಲ ಎಂಬುದನ್ನು ನೆನೆದರೆ ನಿಜಕ್ಕೂ ಸೋಜಿಗವೆನಿಸುತ್ತದೆ. ಅವುಗಳಿಗೆ ಯಾರೂ ಕಾವಲು ನಿಂತಿಲ್ಲ. ಆದರೆ ಯಾರೂ ಅವುಗಳನ್ನು ಉರುವಲಿಗೆಂದು ಕೊಂಡೊಯ್ಯುವುದಿಲ್ಲ.

ನಗರದ ಹೊರವಲಯದ ಬೆಂಚುಗಳು ತೆಳ್ಳನೆಯ ಮರದ ರೀಪರ್ಗಳಿಂದ ಮಾಡಿದವುಗಳಲ್ಲ. ಮರದ ದಿಮ್ಮಿಗಳನ್ನೇ ಅದಕ್ಕಾಗಿ ಬಳಕೆ ಮಾಡಲಾಗುತ್ತದೆ. ಕೆಲವು ಬೆಂಚುಗಳ ಆಕೃತಿ ವಯೋವೃದ್ಧರಿಗೂ ಕುಳಿತುಕೊಳ್ಳಲು ಹಿತವೆನ್ನಿಸುವ ರೀತಿಯಲ್ಲಿರುತ್ತದೆ. ಕೆಲವನ್ನು ಸುಂದರವಾದ ಕೆತ್ತನೆಯೊಂದಿಗೆ ನಿರ್ಮಿಸಿರುತ್ತಾರೆ. ಅದರಲ್ಲಿ ಚೌಕಾಸಿಯ ಪ್ರಶ್ನೆ ಉದ್ಭವಿಸುವುದಿಲ್ಲ. ಉದ್ಯಾನವನ ಪ್ರದೇಶಗಳಲ್ಲಂತೂ ಚೌಕಾಕಾರದಲ್ಲಿ ನಾಲ್ಕು ಬೆಂಚುಗಳನ್ನಿರಿಸಿ ನಡುವೆ ಒಂದು ಟೀಪಾಯ್ಯನ್ನೂ ಸ್ಥಾಪನೆ ಮಾಡುತ್ತಾರೆ.

ಈ ಥರದ ನೋಟ ನಮ್ಮ ದೇಶದಲ್ಲಂತೂ ನನ್ನ ಕಣ್ಣಿಗೆ ಬಿದ್ದಿಲ್ಲ. ಇದ್ದರೂ ಪಾರ್ಕ್ಗಳಲ್ಲಿ ನಾಲ್ಕು ಗರಿಮುರಿದ ಸಿಮೆಂಟ್ ಬೆಂಚುಗಳು. ಒಂದುವೇಳೆ ಇಂಥ ಬೆಂಚುಗಳನ್ನು ಸ್ಥಾಪನೆ ಮಾಡಿದರೆ ಅವುಗಳು ಮರುಕ್ಷಣದಲ್ಲಿ ಯಾರ ಮನೆಯ ಕಿಟಿಕಿಗಳಾಗಿ, ಸೋಫಾಗಳಾಗಿ ನೆಲೆಕಾಣುವುದೋ ಹೇಳಬರುವುದಿಲ್ಲ.

ಪೈನ್ ಮರದ ಈ ಬೆಂಚುಗಳು ಮುಖ್ಯವಾಗಿ ಕಾಯ್ದುಕೊಳ್ಳುವುದು ಆಯಾ ದೇಶದ ಹಿರಿತಲೆಮಾರಿನವರ ಆರೋಗ್ಯವನ್ನು ಹಾಗೂ ಆಯಾ ಪ್ರದೇಶದ ಆರೋಗ್ಯವನ್ನು. ಮರದ ಬೆಂಚುಗಳಾಗಿರುವುದರಿಂದ ಅವಕ್ಕೆ ಕಿಲುಬು ಹಿಡಿಯುವ ಪ್ರಶ್ನೆಯಿಲ್ಲ. ಕಬ್ಬಿಣದ ಬೆಂಚುಗಳಾದರೆ ಚಳಿಗಾಲದಲ್ಲಿ ವಿಪರೀತ ಚಳಿಯನ್ನು ತನ್ನ ಬಸಿರಲ್ಲಿಟ್ಟು ಮಲಗಿರುವುದರಿಂದ ಅದರ ಮೇಲೆ ಕುಳಿತುಕೊಳ್ಳುವುದನ್ನು ಯಾರೂ ಇಷ್ಟ ಪಡುವುದಿಲ್ಲ. ಮರವಾದರೆ ಮಳೆಯ ಹೊಡೆತವನ್ನು ತಡೆದುಕೊಳ್ಳಬಲ್ಲುದು.

ಸಹಜತೆಯನ್ನು ಕಳೆದುಕೊಳ್ಳುವುದಿಲ್ಲ. ’ಮರದೊಳಗಣ ಕಿಚ್ಚು’ ಚಳಿಗೂ ಅದನ್ನು ಸುಸ್ಥಿತಿಯಲ್ಲಿರಿಸುತ್ತದೆ. ಹೊರವಲಯದಲ್ಲಿ ವಾಯುವಿಹಾರಕ್ಕೆ ಹೋಗುವ ವೃದ್ಧರಿಗೆ ಆ ವಿಶಾಲ ಬೆಂಚು ಅತ್ಯತ್ತಮ ತಂಗುದಾಣ ನಿರ್ಮಿಸಿಕೊಡುತ್ತದೆ. ಹೆಚ್ಚಾಗಿ ವೃದ್ಧರೇ ನಡೆದಾಡುವ ಹೊರವಲಯದಲ್ಲಿ ಅಲ್ಲಲ್ಲಿ ಬೆಂಚುಗಳಿರುವುದು ಅರ್ಥಪೂರ್ಣ. ಬೆಂಚುಗಳ ಪಕ್ಕದಲ್ಲೇ ಒಂದು ಕಸದ ತೊಟ್ಟಿಯೂ ಇರುತ್ತದೆ. ನಡೆದಾಡಿದ ಬಳಿಕ ತಮ್ಮ ಕಿಸೆಯಲ್ಲಿಟ್ಟು ತಂದಿದ್ದ ಚಾಕಲೇಟನ್ನೋ ಪಫ್ನ್ನೋ ಆ ಬೆಂಚಲ್ಲಿ ಕುಳಿತು ತಿಂದು ಕಸವನ್ನು ತೊಟ್ಟಿಯಲ್ಲಿ ಎಸೆದು ಮನೆಗೆ ಹೋಗುವುದು ವಾಡಿಕೆ.

‍ಲೇಖಕರು avadhi

19 August, 2011

2 Comments

  1. ಜಿ.ಎನ್.ಅಶೋಕ ವರ್ಧನ

    ಮರದ ಬೆಂಚುಗಳ ಮೇಲೆ ಬಿರುತಂತೆಂಬರ ಗಂಡರ ಪರಿಚಯ ಪತ್ರ,ಪ್ರೇಮ ಕಾವ್ಯಗಳ ಝಲಕು, ಜಕ್ಕಣಾಚಾರಿಯ ಉತ್ತರಾಧಿಕಾರಿಗಳ ಕುಸುರು ಕಾಣಸಿಕ್ಕಿತೇ? ಸೌತೆ ಮಿಡಿಗೆ ಮೆಣ್ಸುಪ್ಪು ಸವರಿದ ಸ್ವಾದಾ “ಆ ಗರಮಾಗರಂ ಕಳ್ಳೇಕಾಯಿ” ನಾದಾ ಬಿಟ್ಟು ಚಾಕ್ಲೇಟು, ಪಪ್ಫೂ ನೆನೆಸಿಕೊಂಡಿರಲ್ಲಾ ನಾದಾ 🙂 ಅಂದ ಹಾಗೇ ಮರದ ಬೆಂಚುಗಳಿಗೆ ಹಕ್ಕಿ ಹಿಕ್ಕೆಯ ಅಲಂಕಾರ, ಗೆದ್ದಲ ಕಾಲ್ಗೆಜ್ಜೆ ಅಲ್ಲಿಲ್ಲವೇ?
    ಅಶೋಕವರ್ಧನ

  2. c k mahendra

    oh! FINE

    CK MAHENDRA

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading