ಜೋಗಿ ಬರೆಯುತ್ತಾರೆ:ಸಂತಾಪ-2





-ನಿರ್ಮಲಾ ಜೋಷಿಗೂ ತನಗೂ ಸ್ನೇಹ ಬೆಳೆಯುತ್ತಾ ಹೋದದ್ದು ಸಂಧ್ಯಾಳ ಅನುಮಾನದ ಮುಖಾಂತರವೇ ಅನ್ನುವುದನ್ನು ನಾಗರಾಜ ನೆನಪು ಮಾಡಿಕೊಂಡ. ವಯ್ಯಾರಿ ಏನಂತಾಳೆ ಎಂದು ಮತ್ತೊಂದು ದಿನ ನಾಗರಾಜನ ಹತ್ತಿರ ಕೇಳಿದ್ದಳು ಸಂಧ್ಯಾ. ಆಗ ನಾಗರಾಜನ ಕಣ್ಮುಂದೆ ಮಾಸಲು ಚೂಡಿದಾರ ಹಾಕಿಕೊಂಡು, ಗುಂಗುರು ಕೂದಲನ್ನು ಚೆಲ್ಲಾಡಲು ಬಿಟ್ಟು ಯಾವ ಎಗ್ಗೂ ಇಲ್ಲದೆ ಕೆಲಸ ಮಾಡುವ ನಿರ್ಮಲಾ ಕಣ್ಮುಂದೆ ಬಂದಿದ್ದಳು. ಅವಳಲ್ಲಿ ಯಾವ ವೈಯಾರವೂ ಅವನಿಗೆ ಕಾಣಿಸಿರಲಿಲ್ಲ.  ಮಾರನೆಯ ದಿನ ಬ್ಯಾಂಕಿಗೆ ಹೋಗುವ ಹೊತ್ತಿಗೆ ಅವನಿಗೊಂದು ಆಶ್ಚರ್ಯ ಕಾದಿತ್ತು. ನಿರ್ಮಲಾ ತೆಳುನೀಲಿ ಸೀರೆಯುಟ್ಟು, ಅದೇ ಬಣ್ಣದ ಬ್ಲೌಸು ತೊಟ್ಟು ರಮ್ಯವಾಗಿ ಕಾಣಿಸಿಕೊಂಡಳು. ಹೆಂಡತಿ ಹೇಳಿದ್ದು ನೂರಕ್ಕೆ ನೂರು ನಿಜ ಅನ್ನಿಸುವಷ್ಟರ ಮಟ್ಟಿಗೆ ನಿರ್ಮಲಾ ವೈಯಾರ ಮಾಡಿದಳು. ಇವತ್ತು ನನ್ನ ಬರ್ತ್ ಡೇ ಎಂದು ನಾಗರಾಜನ ಛೇಂಬರಿಗೆ ಬಂದು ಸ್ವೀಟ್ ಕೊಟ್ಟಳು. ಯಾವತ್ತೂ ಇಲ್ಲದ ಪರಿಮಳವೊಂದು ಅವಳ ಮೈಯಿಂದ ಹೊಮ್ಮುತ್ತಿತ್ತು. 

ಅದಾದ ನಂತರ ಸಂಧ್ಯಾನ ಮಾತಲ್ಲಿ ಅವಳು ಬಿತ್ರಿಯಾಗಿ, ಮೋಹಿನಿಯಾಗಿ, ಸುರಸುಂದರಿಯಾಗಿ, ಇನ್ನೊಬ್ಬರ ಮನೆ ಹಾಳುಮಾಡುವ ಸುಂದರಿಯಾಗಿ ಬದಲಾಗುತ್ತಾ ಹೋದಳು. ನಾಗರಾಜನಿಗೇ ಆಶ್ಚರ್ಯವಾಗುವಂತೆ ಸಂಧ್ಯಾ ಹೇಳಿದ್ದೆಲ್ಲ ನಿಜವಾಗುತ್ತಾ ಹೋಗುತ್ತಿತ್ತು. ಒಂದು ದಿನ ಬ್ಯಾಂಕಿಗೆ ಹೋಗುವ ಮುನ್ನ ನಾಗರಾಜ ಇವತ್ತು ಲಂಚ್ ಬೇಡ. ಸೀನಿಯರ್ ಆಫೀಸರ್ ಬರುತ್ತಾರೆ ಅಂದ. ಆಫೀಸರ್ ಬರುತ್ತಾರಾ ಅಥವಾ ಆ ಚಿನಾಲಿ ಊಟಕ್ಕೆ ಕರಕೊಂಡು ಹೋಗ್ತೀನಿ ಅಂದಿದ್ದಾಳೋ ಎಂದು ಸಂಧ್ಯಾ ಕುಟುಕಿದಳು.


ಆವತ್ತು ಆಫೀಸಲ್ಲಿ ಮೇಲಧಿಕಾರಿಗೆ ಕಾಯುತ್ತಾ ಕೂತ ನಾಗರಾಜನಿಗೆ ಫೋನ್ ಬಂತು. ಮೇಲಧಿಕಾರಿ ಭೇಟಿ ರದ್ದು ಮಾಡಿದ್ದ. ಸದ್ಯ, ಬೈಸಿಕೊಳ್ಳುವುದು ತಪ್ಪಿತು ಎಂದು ನಿರುಮ್ಮಳವಾಗಿ ಕೂತಿದ್ದ ನಾಗರಾಜನನ್ನು ನಿರ್ಮಲಾ ಊಟಕ್ಕೆ ಕರೆದಳು. ಬನ್ನೀ ಸಾರ್, ಹಾಗೇ ಹೋಗಿ ಊಟ ಮಾಡ್ಕೊಂಡು ಬರೋಣ. ನನ್ನ ಬರ್ತ್ ಡೇಗಂತೂ ನಿಮಗೆ ಊಟ ಕೊಡಿಸಲಿಲ್ಲ. ಇವತ್ತಾದರೂ ಕೊಡಿಸ್ತೀನಿ ಅಂದಳು. ದಾವಣಗೆರೆ ತನಕ ನಾಗರಾಜ ಅವಳನ್ನು ತನ್ನ ಸ್ಕೂಟರಿನಲ್ಲೇ ಕರಕೊಂಡು ಬಂದ. ಊಟ ಮಾಡುತ್ತಾ ನಾಗರಾಜನ ಹತ್ತಿರ ನನ್ನ ಬರ್ತ್ ಡೇಗೆ ಏನು ಗಿಫ್ಟ್ ಕೊಡ್ತೀರಿ ಅಂತ ನಿರ್ಮಲಾ ಕೇಳಿದಳು. ಏನು ಕೊಡ್ಲಿ ಅಂತ ಅವಳನ್ನೇ ಕೇಳಿದ್ದ ನಾಗರಾಜ. ಮುಂದಿನ ಸಲ ಬೆಂಗಳೂರಿಗೆ ಹೋದಾಗ ತೇಜಸ್ವಿಯವರ ಯಾವುದಾದರೂ ಕಾದಂಬರಿ ತಂದುಕೊಡಿ ಅಂದಿದ್ದಳು. ನಾಗರಾಜನಿಗೆ ತೇಜಸ್ವಿ ಯಾರು ಅನ್ನುವುದೂ ಗೊತ್ತಿರಲಿಲ್ಲ.

ಅದಾಗಿ ಮೂರು ವಾರಗಳ ನಂತರ ಝೋನಲ್ ಆಫೀಸಿಗೆ ಯಾವುದೋ ಕೆಲಸದ ಮೇಲೆ ಬಂದಿದ್ದ ನಾಗರಾಜ, ಪುಸ್ತಕದ ಅಂಗಡಿಗೆ ಮೊದಲ ಸಲ ಕಾಲಿಟ್ಟ. ಅಲ್ಲಿ ಅಷ್ಟೊಂದು ಮಂದಿ ಪುಸ್ತಕ ಕೊಳ್ಳುವುದು ನೋಡಿ ಅವನಿಗೆ ಆಶ್ಚರ್ಯವಾಯ್ತು. ನಾಗರಾಜ ತೇಜಸ್ವಿಯವರ ಕಾದಂಬರಿ ಇದೆಯಾ ಎಂದು ಕೇಳಿದ್ದೇ ತಡ, ಪುಸ್ತಕದ ಅಂಗಡಿಯವನು ಒಂದು ದೊಡ್ಡ ಕಪಾಟನ್ನೇ ತೋರಿಸಿದ್ದ. ಅಲ್ಲಿ ಪೂರ್ಣಚಂದ್ರ ತೇಜಸ್ವಿ ಬರೆದ ಹತ್ತಾರು ಪುಸ್ತಕಗಳಿದ್ದವು. ಅವುಗಳಲ್ಲಿ ಮೂರನ್ನು ಆರಿಸಿಕೊಂಡು ವಾಪಸ್ಸು ಹೋಗುವ ದಾರಿಯಲ್ಲಿ ಅದನ್ನು ಓದಿಯೂ ಬಿಟ್ಟ.

ಅದುವರೆಗೆ ನಾಗರಾಜ ಕತೆಯನ್ನಾಗಲೀ, ಕಾದಂಬರಿಯನ್ನಾಗಲೀ ಓದಿರಲೇ ಇಲ್ಲ. ಸಿನಿಮಾ ಹಾಡುಗಳು ಆಗಾಗ ಕಿವಿಗೆ ಬೀಳುತ್ತಿತ್ತಾದರೂ ಅದು ಮನಸ್ಸಿಗೆ ತಾಕುತ್ತಿರಲಿಲ್ಲ. ಕಾದಂಬರಿ ಓದಿದ್ದೇ ತಡ ಅವನಿಗೆ ಇಂಥದ್ದೊಂದು ಜಗತ್ತಿದೆ ಅನ್ನುವುದೂ ಹೊಳೆದು ಆಶ್ಚರ್ಯವಾಯಿತು. ಕರ್ವಾಲೋ ಕಾದಂಬರಿಯಲ್ಲಿ ಬರುವ ಮಂದಣ್ಣ, ಕರ್ವಾಲೋ ಮುಂತಾದವರೆಲ್ಲ ನಿಜವಾಗಿಯೂ ಇದ್ದಾರಾ, ಕತೆಯನ್ನು ಹೇಗೆ ಬರೀತಾರೆ. ಅದು ನಿಜವೋ ಸುಳ್ಳೋ. ಸುಳ್ಳೇ ಆದರೆ ಅಂಥದ್ದೊಂದು ಪಾತ್ರವನ್ನು ಕತೆ ಬರೆಯುವವನು ಹೇಗೆ ಸೃಷ್ಟಿ ಮಾಡುತ್ತಾನೆ ಎಂಬಿತ್ಯಾದಿ ಯೋಚನೆಗಳು ಬರತೊಡಗಿದವು.

ಒಂದು ರಾತ್ರಿ ಕ್ಯಾಶ್ ಟ್ಯಾಲಿ ಆಗದೇ, ಒದ್ದಾಡಿ ಒದ್ದಾಡಿ ಕೊನೆಗೂ ತಪ್ಪಿಹೋದ ಅಂಕಿಯನ್ನು ಹುಡುಕಿ ಬ್ಯಾಂಕಿಂದ ಹೊರಗೆ ಬರುವ ಹೊತ್ತಿಗೆ ಸಂಧ್ಯಾ ಬ್ಯಾಂಕಿನ ಮುಂದೆ ನಿಂತಿದ್ದಳು.  ಬಸ್ಸು ಸಿಗೋಲ್ಲ ಎಂದು ಗೊಣಗಾಡುತ್ತಿದ್ದ ನಿರ್ಮಲಾಳನ್ನು ತಾನೇ ಮನೆಗೆ ಬಿಡುತ್ತೇನೆ ಎಂದು ಭರವಸೆ ಕೊಟ್ಟು ಉಳಿಸಿಕೊಂಡಿದ್ದ ನಾಗರಾಜನಿಗೆ ಅಲ್ಲಿ ಸಂಧ್ಯಾಳನ್ನು ನೋಡಿ ಗಾಬರಿಯಾಯಿತು. ನೀನ್ಯಾಕೆ ಬಂದೇ ಇಲ್ಲಿಗೆ ಎಂದು ಕೇಳಿದ್ದಕ್ಕೆ ಸಂಧ್ಯಾ, ಯಾಕೆ ನಿಮ್ಮ ಚಕ್ಕಂದಕ್ಕೆ ಅಡ್ಡಿಯಾಯ್ತೇನು. ನೀವಿಬ್ಬರೇ ಇಷ್ಟು ಹೊತ್ತು ಏನು ಮಾಡ್ತಿದ್ರಿ ಎಂದು ರೇಗಿದಳು. ನಾಗರಾಜ ಉತ್ತರಿಸುವ ಮೊದಲೇ ಜವಾನ ಟಿಪ್ಪು ಮತ್ತು ನಿರ್ಮಲಾ ಹೊರಗೆ ಬಂದರು.  ನಾಗರಾಜನಿಗೆ ವಿವರಿಸುವ ಆಸಕ್ತಿ ಕೂಡ ಉಳಿದಿರಲಿಲ್ಲ. ನಿರ್ಮಲಾ ಬಂದವಳೇ ಸಂಧ್ಯಾ ಜೊತೆ ಮಾತಾಡುತ್ತಾ ನಿಂತಳು. ನಿಮ್ಮೆಜಮಾನ್ರು ನೋಡಿದ ಹಾಗಲ್ಲ. ಕತ್ತೆ ಥರ ಕೆಲಸ ಮಾಡಿಸ್ತಾರೆ. ಹೆಣ್ಮಕ್ಕಳು ಅನ್ನೋ ಕರುಣೇ ಆದ್ರೂ ಬೇಡ್ವಾ.. ಇಷ್ಟೊತ್ತು ಉಳಿಸಿಕೊಳ್ಳೋದಾ ಅಂತ ತಮಾಷೆಯಾಗಿ ರೇಗಿದಳು. ಪಾಪು ಹೇಗಿದೆ ಅಂತ ಕೇಳಿ, ಬ್ಯಾಗಿನಿಂದ ಪಾಪೂಗೆ ಕೊಡಿ ಅಂತ ಚಾಕ್ಲೇಟು ಕೊಟ್ಟಳು. ನನ್ನನ್ನು ಮನೆಗೆ ಬಿಡಬೇಕಾಗುತ್ತೆ ಅಂತ ಹೆಂಡ್ತೀನ ಕರೆಸಿದ್ದೀರಾ ಅಂತ ಕಾಲೆಳೆದಳು. ನೀವೇನೂ ಬಿಡೋದು ಬೇಡ, ನಾನು ಟಿಪ್ಪು ಜೊತೆ ಸೈಕಲ್ಲಲ್ಲಿ ಹೋಗ್ತೀನಿ ಅಂದಳು.

 

ಮೊದಲ ಬಾರಿಗೆ ನಾಗರಾಜನ ಕಣ್ಣಿಗೆ ಸಂಧ್ಯಾ ಜೀವನೋತ್ಸಾಹ ಇಲ್ಲದ, ಅಕ್ಕರೆಯಿಲ್ಲದ, ಪ್ರೀತಿಯಿಲ್ಲದ ಕೊರಡಿನಂತೆ ಕಾಣಿಸಿದಳು. ನಿರ್ಮಲಾ ಅದ್ಯಾವುದೋ ಜಗತ್ತಿನಿಂದ ಇಳಿದ ದೇವಕನ್ನಿಕೆಯಂತೆ ಭಾಸವಾದಳು. ಅವಳನ್ನು ಒಲ್ಲದ ಮನಸ್ಸಿನಿಂದ ಟಿಪ್ಪು ಜೊತೆ ಕಳಿಸಿಕೊಟ್ಟು ಸಂಧ್ಯಾಳ ಜೊತೆ ನಾಗರಾಜ ಹೊರಟ. ದಾರಿಯುದ್ದಕ್ಕೂ ಸಂಧ್ಯಾ ಮಾತಾಡಲಿಲ್ಲ. ಏನೋ ಗೊಣಗಿದಂತೆ ಕೇಳಿದರೂ ಹೆಲ್ಮೆಟ್ ಹಾಕಿಕೊಂಡ ನಾಗರಾಜನಿಗೆ ಅದೇನೆಂದು ಸ್ಪಷ್ಟವಾಗಲಿಲ್ಲ. ಇನ್ನೇನು ದಾವಣಗೆರೆ ಪ್ರವೇಶಿಸಬೇಕು ಅನ್ನುವಷ್ಟರಲ್ಲಿ ನಾಗರಾಜನ ಸ್ಕೂಟರು ಪಂಚರ್ ಆಯ್ತು. ಆಯತಪ್ಪಿ ನಾಗರಾಜ ಸ್ಕೂಟರಿನಿಂದ ಬಿದ್ದ. ಸಂಧ್ಯಾಳ ಕಾಲು ಮುರಿಯಿತು.

ಎದ್ದು ಓಡಾಡದ ಸ್ಥಿತಿಯಲ್ಲಿದ್ದ ಸಂಧ್ಯಾಳನ್ನು ನೋಡಿಕೊಳ್ಳಲು ಅವಳ ಅಮ್ಮ ಬಂದಿದ್ದರು. ನಾಗರಾಜ ಬೇಕಂತಲೇ ತನ್ನನ್ನು ಬೀಳಿಸಿದ ಅಂತ ಸಂಧ್ಯಾ ಅನೇಕ ಸಾರಿ ಮಾತಲ್ಲೇ ಆತನನ್ನು ತಿವಿದದ್ದೂ ಆಯ್ತು. ಅವಳ ಜೊತೆ ಚಕ್ಕಂದ ಆಡೋದಕ್ಕೆ ಚೆನ್ನಾಯ್ತಲ್ಲ ಅಂತ ಸಂಧ್ಯಾ ದಿನಾ ರಾತ್ರಿ ನಾಗರಾಜನನ್ನು ಗೋಳು ಕರೆಯುತ್ತಿದ್ದಳು. ನಾಗರಾಜ ಅದ್ಯಾವುದಕ್ಕೂ ಪ್ರತಿಕ್ರಿಯಿಸದೇ ಇದ್ದುಬಿಟ್ಟ.

ಈ ಮಧ್ಯೆ ನಾಗರಾಜನಲ್ಲಿ ಎಂದೂ ಕಾಣದ ಸಂತೋಷವೊಂದು ಮನೆ ಮಾಡಿದ್ದು ಸಂಧ್ಯಾಳ ಗಮನಕ್ಕೂ ಬಂತು. ಮನೆಗೆ ಬಂದವನೇ ಯಾವುದೋ ಪುಸ್ತಕ ಹಿಡಕೊಂಡು ಓದುತ್ತಾ ಕೂರುತ್ತಿದ್ದ. ಒಂದು ದಿನ ಮೈಸೂರು ಮಲ್ಲಿಗೆ ಹಾಡು ತಂದು ಹಾಕಿ ಕೇಳುತ್ತಾ ಕೂತ. ಮರೆತಾಗ ತುಟಿಗೆ ಬಾರದೇ ಮೋಡ ಮರೆಯೊಳಗೆ ಬೆಳ್ದಿಂಗಳೋ ಅವಳ ಹೆಸರು ಎಂಬ ಸಾಲು ಕೇಳುತ್ತಿದ್ದಂತೆ ಅವನಿಗೆ ರೋಮಾಂಚನವಾಯಿತು. ಜೋಯಿಸರ ಹೊಲದೊಳಗೆ ಎಂದು ಅಶ್ವತ್ಥ್ ಹಾಡುತ್ತಿದ್ದರೆ, ತನ್ನೂರು, ಹೊಲ, ಅಮ್ಮ ಎಲ್ಲರೂ ನೆನಪಾದರು. ಕವಿತೆ ಅಷ್ಟೊಂದು ಸಂತೋಷ ಕೊಡಬಹುದು ಎಂಬುದು ಅವನಿಗೆ ಗೊತ್ತಾಗುತ್ತಾ ಹೋಯ್ತು.

ಸಂಧ್ಯಾಳಿಗೆ ಅದು ಬಿಡಿಸದ ಒಗಟಾಗಿತ್ತು. ಅವನ ಸಂತೋಷಕ್ಕೆ ಕವಿತೆ ಕಾರಣವೋ ನಿರ್ಮಲಾ ಕಾರಣವೋ ಅನ್ನುವ ಪ್ರಶ್ನೆಗೆ ಅವಳಿಗೆ ಉತ್ತರ ಸಿಗುತ್ತಿರಲಿಲ್ಲ. ಈ ಮಧ್ಯೆ ನಿರ್ಮಲಾ ಜೋಷಿಗೆ ಬೆಂಗಳೂರಿಗೆ ವರ್ಗವಾಯಿತು. ಆಮೇಲೂ ನಾಗರಾಜ ಸಂತೋಷವಾಗಿಯೇ ಇರುತ್ತಿದ್ದ. ಅವಳಿಗೆ ಅವನು ಫೋನ್ ಮಾಡುತ್ತಿರಬಹುದು ಎಂದು ಆಸೆಯಿಂದ ಸಂಧ್ಯಾ ಅವನ ಮೊಬೈಲನ್ನು ಆಗಾಗ ಪರೀಕ್ಷಿಸುತ್ತಿದ್ದಳು. ಅವಳು ಫೋನ್ ಕೂಡ ಮಾಡುತ್ತಿರಲಿಲ್ಲ ಎಂದು ಗೊತ್ತಾದ ಮೇಲೆ ಮತ್ತಷ್ಟು ಕಂಗಾಲಾದಳು. ಬ್ಯಾಂಕಿನಲ್ಲಿದ್ದಾಗ ಫೋನ್ ಮಾಡುತ್ತಿರಬಹುದು ಅಂದುಕೊಂಡಳು. ಗುಟ್ಟಾಗಿ ಟಿಪ್ಪುವಿನ ಹತ್ತಿರ ಕೇಳಿ ನೋಡಿದಳು. ಈ ಮಧ್ಯೆ ನಿರ್ಮಲಾ ಒಂದು ಸಾರಿ ಸಂಧ್ಯಾ ಮನೆಗೂ ಬಂದಿದ್ದಳು. ಬ್ಯಾಂಕಿಗೆ ಹೋಗಿದ್ರಾ ಎಂದು ಕೇಳಿದ್ದಕ್ಕೆ, ಇಲ್ಲಾರೀ, ಅಲ್ಲಿಗೆ ಹೋಗೋವಷ್ಟು ಪುರುಸೊತ್ತಿಲ್ಲ. ಈ ಪುಸ್ತಕ ಅವರಿಗೆ ಕೊಟ್ಟು ಬಿಡಿ. ನಾನು  ಇವತ್ತೇ ವಾಪಸ್ ಹೋಗಬೇಕು ಅಂದಳು. ಹೋಗೋ ಮುಂಚೆ ಗುಟ್ಟಾಗಿ ನಂಗೆ ಗರ್ಭಕೋಶದ ಕ್ಯಾನ್ಸರ್, ಅವರಿಗೆ ಹೇಳಬೇಡಿ. ನಾನು ತುಂಬ ದಿನ ಬದುಕೋ ಹಾಗೆ ಕಾಣಲ್ಲ ಅಂತ ಕಣ್ತುಂಬಿಕೊಂಡು ಹೇಳಿದ್ದಳು.

 

ನಾಗರಾಜ ಮನೆಗೆ ಬಂದ ತಕ್ಷಣ ಸಂಧ್ಯಾ ಅದೊಂದು ಸುದ್ದಿಯೆಂಬಂತೆ ನಾಗರಾಜನಿಗೆ ಹೇಳಿಬಿಟ್ಟಿದ್ದಳು. ನಾಗರಾಜ, ನಂಗೊತ್ತಿದೆ ಅಂದಿದ್ದ. ಅವಳು ಹೇಳಿಲ್ಲ, ಅವಳ ಬ್ರಾಂಚ್ ಮ್ಯಾನೇಜರ್ ಹೇಳಿದ್ರು. ಅವರೇ ಕರಕೊಂಡು ಹೋಗಿ ಟೆಸ್ಟ್ ಮಾಡಿಸಿ ಚಿಕಿತ್ಸೆ ಕೊಡಿಸ್ತಿದ್ದಾರೆ. ಅವರ ಮನೇಲೇ ಇರಿಸಿಕೊಂಡಿದ್ದಾಳೆ. ಅವರ ಹೆಂಡ್ತಿಯೇ ಅವಳ ಸೇವೆ ಮಾಡ್ತಿದ್ದಾಳೆ ಎಂದಿದ್ದ. ಅವನು ಹೇಳಿದ ಧಾಟಿಯಲ್ಲಿ, ಅವರ ಹೆಂಡ್ತಿ ನಿನ್ನ ಥರ ಅನುಮಾನದ ಪ್ರಾಣಿ ಅಲ್ಲ ಅನ್ನುವ ಧ್ವನಿ ಕೇಳಿಸಿದಂತಾಗಿ ಸಂಧ್ಯಾ ಮುನಿಸಿಕೊಂಡಿದ್ದಳು.

ಇದೆಲ್ಲವನ್ನೂ ನೆನಪಿಸಿಕೊಳ್ಳುತ್ತಾ ನಾಗರಾಜ ಕಾರಲ್ಲೇ ಕೂತಿದ್ದ. ಹುಡುಗರು ಬಂದು ಕರೆದಾಗ ಮೌನವಾಗಿ ಎದ್ದು ಹೋದ. ನಿರ್ಮಲಾ ಜೋಷಿಯ ಫೋಟೋಗಳನ್ನೆಲ್ಲ ಅಲಂಕರಿಸಿ, ಅವಳ ಕವನ ಸಂಕಲನಗಳನ್ನೆಲ್ಲ ಚೆಂದಗೆ ಜೋಡಿಸಿ ಹುಡುಗರು ಅಚ್ಚುಕಟ್ಟು ಕಾರ್ಯಕ್ರಮ ಆಯೋಜಿಸಿದ್ದರು. ವೇದಿಕೆಯೂ ಸುಂದರವಾಗಿತ್ತು. ನಿರ್ಮಲಾ ಜೋಷಿ ಸ್ಮಾರಕ ಕವಿಗೋಷ್ಠಿ ನಡೆಯುತ್ತಿತ್ತು.

ನಾಗರಾಜನನ್ನು ಹುಡುಗರು ಮುಂದಿನ ಸಾಲಲ್ಲೇ ಕೂರಿಸಿದರು.

(ಮುಂದುವರಿಯುತ್ತದೆ)

 

‍ಲೇಖಕರು avadhi

August 20, 2011

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

7 ಪ್ರತಿಕ್ರಿಯೆಗಳು

  1. suvarna

    karvalo kadambri oodi nanu thejasviyavarige phone madi kelidde e kadambari neevu oohisi baredidda athva nimma anubava baredidda anth avaru helidaru adu ooheyalla anubava endu

    ಪ್ರತಿಕ್ರಿಯೆ
  2. ರಂ. ಗೌಡ

    ತುಂಬಾ ಚೆನ್ನಾಗಿದೆ, ಮುಂದುವರಿಯಲಿ. Thanx

    ಪ್ರತಿಕ್ರಿಯೆ
  3. D.RAVIVARMA

    TUMBA CHENNAGIDE ITTICHEGASTE NIMMA JOGIMANE PUSTIKE ODIDE,WONDERFUL NEEVU OBBA BARAHAGARARALLA.NIMMALOBBA,CHINTAKA,SANTA,ALEMARI HAGEYE OBBA MUGDAMANASINA YUVAKANIDDANE BAHUSHAHA NIMMOLAGOBBA PSYCHOLOGIST NIMMANNU HEEGE BARESUTTIDDANENO ANISUTTIDE NANANTU MUNDINA BAGAKKE JATAKA PAKSHIYANTE KAYUTTIRUVE .D,RAVI VARMA HOSPET

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: