ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

‘ನಾತಿಚರಾಮಿ’ ಎಂಬ ಬಯಕೆ ತೋಟದ ಬೇಲಿಯೊಳಗೆ

ಬಯಕೆ ತೋಟದ ಬೇಲಿಯೊಳಗೆ : ‘ನಾತಿಚರಾಮಿ’ ಒಂದು ಅನಿಸಿಕೆ
ಗಿರಿಜಾಶಾಸ್ತ್ರಿ

ಮುಂಬಯಿ ಚಲನಚಿತ್ರೋತ್ಸವಕ್ಕೆ (ಮುಂಬಯಿ ಅಕಾಡೆಮಿ ಆಫ್ ದಿ ಮೂವಿಂಗ್ ಇಮೇಜ್) ಆಯ್ಕೆಯಾದ ಕನ್ನಡ ಚಲನ ಚಿತ್ರ “ನಾತಿಚರಾಮಿ”.

‘ನಾತಿಚರಾಮಿ’ ಮದುವೆಯ ಸಂದರ್ಭದಲ್ಲಿ ಧರ್ಮ ಅರ್ಥ ಕಾಮಗಳಲ್ಲಿ ನಿನ್ನನ್ನು ಅತಿಕ್ರಮಿಸಲಾರೆ ಎಂದು ಗಂಡನಿಗೆ ಹೆಂಡತಿಯಾದವಳು ವಚನ ಕೊಡುವ ಮಂತ್ರ. ಈ ಚಿತ್ರದಲ್ಲಿ ಹಾಗೆ ವಚನ ಕೊಟ್ಟು ಪ್ರೀತಿಸಿ ಮದುವೆಯಾದ ಗೌರಿ ಕೆಲ ವರ್ಷಗಳಲ್ಲೇ ಗಂಡನನ್ನು ಕಳೆದುಕೊಳ್ಳುತ್ತಾಳೆ. ಅವಳು ಮಾಹಿತಿ ತಂತ್ರಜ್ಞಾನ ಕಂಪನಿಯೊಂದರಲ್ಲಿ ಟೀಮ್ ಲೀಡರ್, ಆದುನಿಕ ಹೆಣ್ಣು. ಸುಮಾ ಕೂಡ ಹೀಗೆಯೇ ವಚನ ಬದ್ಧಳಾಗಿ ಮದುವೆಯ ವ್ಯವಸ್ಥೆಗೆ ಕಾಲಿಟ್ಟ ಇಂಜನಿಯರ್ ಒಬ್ಬನ ಹೆಂಡತಿ, ಗೃಹಿಣಿ. ಇವರಿಬ್ಬರ ಮನೆಯಲ್ಲಿ ಕೆಲಸಮಾಡುವ ಹೆಂಗಸು ಜಯಮ್ಮ ಚುರುಕಿನ ಹೆಂಗಸು.

ಈ ಮೂವರು ಏರು ಜವ್ವನೆಯರು. ಸತ್ತ ಗಂಡನನ್ನು ಮನಸ್ಸಿನಿಂದ ತೆಗೆದು ಹಾಕಲಾಗದ ಗೌರಿ ದೇಹದ ಬಾಧೆ, ಕಂಪನಿಯ ಕೆಲಸದ ಒತ್ತಡದಿಂದ ನಲುಗಿದ್ದಾಳೆ. ಮದುವೆ ಬಂಧನ ಒಲ್ಲದ ಅವಳಿಗೆ ಪುರುಷನ ದೇಹ ಸಾಂಗತ್ಯ ಬೇಕಾಗಿದೆ. ಹೀಗಾಗಿ ಅದನ್ನು ಹೊರಗೆ ಅರಸಲು ಪ್ರಯತ್ನಿಸುತ್ತಾಳೆ. ಸುಮಾಳಿಗೆ ಕೇವಲ ಗಂಡನ ದೈಹಿಕ ಸಾಂಗತ್ಯ ದೊರೆತಿದೆ, ಆದರೆ ಅವಳು ಗಂಡನ ಆತ್ಮ ಸಾಂಗತ್ಯಕ್ಕಾಗಿ ಹಾತೊರೆಯುತ್ತಾಳೆ. ಅದು ಸಿಗದ ಕಾರಣ ಅನೇಕ ಕಲಾತ್ಮಕ ಚಟುವಟಿಕೆಗಳಲ್ಲಿ ತನ್ನನ್ನು ತೊಡಗಿಸಿಕೊಳ್ಳುವುದರ ಮೂಲಕ ತನ್ನ ಬದುಕಿನ ಕೊರತೆಯನ್ನು ತುಂಬಿಕೊಳ್ಳಲು ಪ್ರಯತ್ನಿಸುತ್ತಾಳೆ. ಮಧ್ಯಮವರ್ಗಕ್ಕೆ ಸೇರಿದ ಇವರಿಬ್ಬರಿಗೆ ಮೈ ಮನಸ್ಸುಗಳ ಸಂಘರ್ಷವಿದೆ. ಆದರೆ ಕೆಳವರ್ಗಕ್ಕೆ ಸೇರಿದ ಜಯಮ್ಮ ಈ ಯಾವ ಸಂಘರ್ಷವೂ ಇಲ್ಲದ ನಿರ್ಭಿಡ ಹೆಣ್ಣಾಗಿದ್ದಾಳೆ. ಈ ಮೂವರನ್ನೂ ತಮ್ಮ ಸುಖಕ್ಕಾಗಿ ಬಳಸಿಕೊಳ್ಳುವ ಪುರುಷರೂ ಇಲ್ಲಿ ಇದ್ದಾರೆ. ಈ ಎಲ್ಲರ ಕೌಟುಂಬಿಕ ತುಮುಲಗಳನ್ನು ಸಾಮಾಜಿಕ ಹೊಣೆಗಾರಿಕೆಯೊಂದಿಗೆ ದಾಖಲಿಸುವ ಚಿತ್ರ ‘ನಾತಿಚರಾಮಿ’

ಚಲನ ಚಿತ್ರ ಪ್ರದರ್ಶನದ ನಂತರದ ನಡೆದ ಚರ್ಚೆಯಲ್ಲಿ, ‘ಇಂದಿನ ಅತ್ಯಂತ ಆಧುನಿಕ ಮಾಹಿತಿ ತಂತ್ರಜ್ಞಾನದ ಪ್ರಪಂಚದಲ್ಲಿ ತೊಡಗಿಕೊಂಡಿರುವ, ಸ್ವತಂತ್ರ ಅಸ್ತಿತ್ವ ಇರುವ 21 ನೆಯ ಶತಮಾನದ ಆಧುನಿಕ ಹುಡುಗಿಯರಿಗೆ ಲೈಂಗಿಕತೆ ಒಂದು ಸಮಸ್ಯೆಯಾಗಿ ಕಾಡಲು ಸಾಧ್ಯವೇ? ಆಗ ಗೌರಿಯ ತಲ್ಲಣಗಳಿಗೆ ಅರ್ಥವಿದೆಯೇ’ ಎಂಬ ಪ್ರಶ್ನೆಗೆ “ಹಸುವಿನ ಒಳಗೆ ಹೇಗೆ ಮೂವತ್ತುಮೂರು ಕೋಟಿ ದೇವತೆಗಳು ಇದ್ದಾರೆಯೋ ಹಾಗೆಯೇ ಹೆಣ್ಣಿನೊಳಗೂ ಅನೇಕ ದೇವತೆಗಳು ನಾನಾ ರೂಪಗಳಲ್ಲಿ ಸುಪ್ತವಾಗಿ ಅಡಗಿಕೊಂಡು ಬಿಟ್ಟಿದ್ದಾರೆ” ಎಂದು ಈ ಚಿತ್ರಕ್ಕೆ ಕಥೆ, ಸಂಭಾಷಣೆ ಬರೆದ ಸಂದ್ಯಾರಾಣಿಯವರು, ಅಭಿಪ್ರಾಯಪಟ್ಟರು. ಈ ಚಿತ್ರದ ನಿರ್ದೇಶಕರಾದ ಮಂಸೋರೆ ಹಾಗೂ ಕಥೆ ಬರೆದ ಸಂಧ್ಯಾರಾಣಿಯವರ ಜೊತೆಗೆ ಸ್ವಲ್ಪ ಹೊತ್ತು ನಡೆದ ಚರ್ಚೆ ಈ ಬರಹಕ್ಕೆ ಕಾರಣ.

ದೇವತೆಗಳೆಂದು ಸಂಧ್ಯಾರಾಣಿಯವರು ಹೇಳಿದಾಗ ನನಗೆ ಥಟ್ಟನೆ ನೆನಪಿಗೆ ಬಂದವರೆಂದರೆ ಅಹಲ್ಯಾ, ತಾರಾ, ಸೀತಾ, ಮಂಡೋದರಿ, ದ್ರೌಪದಿ, ಸುಮತಿ, ರೇಣುಕಾ, ಸುಕನ್ಯಾ, ದಮಯಂತಿ, ಚಂದ್ರಮತಿ ಇತ್ಯಾದಿ ದೇವಿಯರು. ಅಹಲ್ಯೆ ರೇಣುಕೆಯನ್ನು ಬಿಟ್ಟರೆ ಉಳಿದವರು ಧರ್ಮಾರ್ಥಕಾಮಗಳಲ್ಲಿ ಗಂಡನನ್ನು ಅತಿಕ್ರಮಿಸದವರು. ಮಾನಸಿಕವಾಗಿ ಅತಿಕ್ರಮಿಸಿದ ಕಾರಣಕ್ಕೇ ರೇಣುಕೆ ತಲೆದಂಡ ತೆತ್ತರೆ, ದೈಹಿಕವಾಗಿ ಅತಿಕ್ರಮಿಸಿ ಅಹಲ್ಯೆ ಕಲ್ಲಾಗುತ್ತಾಳೆ. ಸೀತೆ ಯಾವ ರೀತಿಯಲ್ಲಿ ಅತಿಕ್ರಮಿಸದಿದ್ದರೂ ಅಗ್ನಿದಿವ್ಯಕ್ಕೆ ಒಳಗಾಗುತ್ತಾಳೆ.

“ಇದು ನನಗೆ ಋತು ಸಮಯ, ನೀನು ಹೋಗ ಬೇಡ” ಎಂದು ನಿರ್ಭಿಡೆಯಿಂದ ಗಂಡನನ್ನು ಕೂಡುವ ಬಯಕೆಯನ್ನು ವ್ಯಕ್ತಪಡಿಸಿದ ಲೋಪಾಮುದ್ರಾ, ಪ್ರಭಾವತಿಯರೂ ಇದ್ದಾರೆ. ಪರಪರುಷನನ್ನು ಕೂಡಿ ಸುಖಿಸಿದ ಒಬ್ಬಳ ಉಲ್ಲೇಖ ‘ಅವಧೇಶ್ವರಿ’ ಕಾದಂಬರಿಯಲ್ಲಿ ಬರುತ್ತದೆ. ಅರ್ಜುನ ಭೇಟಿಕೊಡುವ ಪ್ರಮಿಳಾ ರಾಜ್ಯ ಕೂಡ ಇದೆ. ‘ಉಲೂಪಿ’ಯೂ ಇದ್ದಾಳೆ. ಆದರೆ ಇವರೆಲ್ಲರ ನೆನಪುಗಳನ್ನು ನಮ್ಮ ಸಾಂಸ್ಕೃತಿಕ ಚರಿತ್ರೆ ಮಾದರಿಯಾಗಿ ಉಳಿಸಿಕೊಂಡಿಲ್ಲ.

ಮೂವತ್ತುಮೂರು ಕೋಟಿ ದೇವತೆಗಳಿರುವ ಹಸುವಿಗೂ, ತೊಂಡು ಮೇಯದಿರಲೆಂದು, ಬೇಲಿ ಹಾರದಿರಲೆಂದು ಮೂಗುದಾರ ಹಾಕಲಾಗುತ್ತದೆ. ಮೇಲಿನ ದೇವಿಯರ ಸ್ಮೃತಿಗಳೂ ಕೂಡ ಹೆಣ್ಣಿಗೆ ಮೂಗುದಾರಗಳೇ. ಆದರೆ ಇವು ಬಹಿರಂಗವಾಗಿ ಹಿಡಿದು ಎಳೆಯುವುದಿಲ್ಲ. ಸುಪ್ತವಾಗಿ ಒಳಗೇ ಕುಳಿತು ಮನಸ್ಸನ್ನು ನಿಯಂತ್ರಿಸುತ್ತವೆ. ಭಾರತೀಯ ನಾರಿಯರ ಆತ್ಯಂತಿಕ ಮಾದರಿಗಳಾದ ಇವರು, ಗೌತಮನ ಕಾಲದಿಂದಲೂ ಅವ್ಯಾಹತವಾಗಿ ಪೀಳಿಗೆಯಿಂದ ಪೀಳಿಗೆಗೆ ವಂಶವಾಹಿಗಳಾಗಿ ಹರಿಯುತ್ತಲೇ ಬಂದಿದ್ದಾರೆ. ನಮ್ಮ ಸಮಾಜ ತನಗೆ ಗೊತ್ತಿಲ್ಲದಂತೆಯೇ ಅವರ ನಿಯಂತ್ರಣಕ್ಕೆ ಒಳಗಾಗಿದೆ. (genetically conditioned). ಅವರು ಕೇವಲ ಸಿದ್ಧ ಮಾದರಿಗಳಲ್ಲ. ನಮ್ಮ ಸಾಮುದಾಯಕ ನೆನಪುಗಳಲ್ಲಿ ಹೂತು ಹೋಗಿರುವ ವಾಸ್ತವಗಳು. ಈ ನೆನಪುಗಳಿಂದ ಹೆಣ್ಣು ಮಾತ್ರವಲ್ಲ ಗಂಡು ಕೂಡ ಬಿಡಿಸಿಕೊಳ್ಳಬೇಕಾದ ಅಗತ್ಯವಿದೆ.

ಪಾತಿವ್ರತ್ಯ ಪಾಲನೆಯನ್ನು ದೇಹ ಕೇಳುವುದಿಲ್ಲ, ದೇಹದ ಬಯಕೆಗಳನ್ನು ಒಳಗಿರುವ ದೇವತೆಗಳು ಪೋಷಿಸುವುದಿಲ್ಲ. ಇದರಿಂದ ಬಿಡುಗಡೆ ಪಡೆಯಬೇಕೆನ್ನುವ ಪ್ರಜ್ಞಾಪೂರ್ವಕ ಹಟ ಹಾಗೂ ಅಮೂರ್ತವಾಗಿ ನಿಯಂತ್ರಿಸುತ್ತಿರುವ ಈ ದೇವತೆಗಳ ಕಪಿಮುಷ್ಠಿಯಿಂದ ಬಿಡಿಸಿಕೊಳ್ಳಲಾರದ ಅಸಹಾಯಕತೆಯಿಂದ ಮೂಗುಬ್ಬಸ ಪಡುವ ಹೆಣ್ಣುಗಳಿಬ್ಬರ ಸುತ್ತ ಹೆಣೆದ ಕಥೆ “ನಾತಿಚರಾಮಿ”.

ಮೈಮನಗಳ ಸುಳಿಯಲ್ಲಿ ಹೆಣ್ಣು ಝರ್ಜರಿತವಾದ “ಉಯ್ಯಾಲೆ, ಎಡಕಲ್ಲುಗುಡ್ಡದ ಮೇಲೆ, ಸ್ಪಂದನ, ಪಲ್ಲವಿ ಅನುಪಲ್ಲವಿ, ಘಟಶ್ರಾದ್ಧ, ಫಣಿಯಮ್ಮ, ಗೆಜ್ಜೆ ಪೂಜೆ, ಹಿಂದಿಯ ಆಸ್ಥಾ ಮತ್ತು ಲಜ್ಜಾ” ಮುಂತಾದ ಸಿನಿಮಾಗಳ ಪರಂಪರೆಯೇ ನಮ್ಮಲ್ಲಿದೆ. ಮೈಮನಗಳ ಈ ಸಂಘರ್ಷದಲ್ಲಿ ಕೆಲವು ಬಲಿಪಶುಗಳಾದರೆ ಇನ್ನೂ ಕೆಲವು ಪಿತೃಪ್ರಧಾನ ಮೌಲ್ಯಗಳಿಗೇ ಆತುಕೊಳ್ಳುತ್ತವೆ.

ಪಾತಿವ್ರತ್ಯ ದೇಹದ ಸಮಸ್ಯೆಯೋ ಮನಸ್ಸಿನ ಸಮಸ್ಯೆಯೋ ಎನ್ನುವ ಪ್ರಶ್ನೆ. ಮಾನಸಿಕ ಪಾತಿವ್ರತ್ಯ ಸಾಧ್ಯವಿಲ್ಲ ಎಂಬುದಕ್ಕೆ ರೇಣುಕೆಯ ಕತೆಯೇ ಸಾಕ್ಷಿ. ಹೀಗಿದ್ದೂ ನಮ್ಮ ಸಮಾಜ ದೇಹವನ್ನೂ ಮೀರಿ ಮಾನಸಿಕ ಪಾತಿವ್ರತ್ಯದ ಪರೀಕ್ಷೆಯನ್ನು ಬೇಡುತ್ತಲೇ ಬಂದಿದೆ. ಆದುದರಿಂದಲೇ ಹೆಣ್ಣು ಲಾಗಾಯ್ತಿನಿಂದಲೂ ವಿವಾಹದ ಸಂದರ್ಭದಲ್ಲಿ ‘ನಾತಿಚರಾಮಿ’ ಎಂದು ಪ್ರಮಾಣ ಮಾಡುತ್ತಲೇ ಬರಬೇಕಾಗಿದೆ. ಗಂಡು ವಚನ ಬದ್ಧನಾಗಬೇಕಾಗಿಲ್ಲ ಏಕೆಂದರೆ ಅವನೊಳಗೆ ಪತ್ನೀವ್ರತವನ್ನು ಬೇಡುವ ಯಾವ ದೇವತೆಗಳೂ ಮನೆಮಾಡಿಕೊಂಡಿಲ್ಲ. ರಾಮ ಹೆಸರಿಗಷ್ಟೇ ದೇವರು.

ಇಲ್ಲಿ ಗೌರಿ ಮತ್ತು ಸುಮಾ ಇಬ್ಬರೂ ಆಲ್ಟರ್ ಇಗೋಗಳು. ಇಬ್ಬರ ಸಮಸ್ಯೆಗಳೂ ಒಂದೇ ಆದರೆ ಸ್ವರೂಪ ಮಾತ್ರ ಬೇರೆ. ಒಬ್ಬಳಿಗೆ ದೇಹ ಸಾಂಗತ್ಯದ ಸಮಸ್ಯೆಯಾದರೆ, ಇನ್ನೊಬ್ಬಳಿಗೆ ಆತ್ಮ ಸಾಂಗತ್ಯದ ಸಮಸ್ಯೆ. ಅಕ್ಕನೇನೋ ‘ಒಳಗಣ ಗಂಡ ಹೊರಗಣ ಮಿಂಡ’ ಎಂದು ಧೈರ್ಯವಾಗಿ ಹೇಳಿಬಿಟ್ಟಳು, ಅವಳ ಎಲ್ಲಾ ಹೋರಾಟಗಳಿಗೂ ಒಂದು ನೆಲೆ ಸಿಕ್ಕಿತು. ಯಾಕೆಂದರೆ ಅವಳಿಗೆ ಚೆನ್ನಮಲ್ಲಿಕಾರ್ಜುನನ ರಕ್ಷಣೆ ಇತ್ತು. ಆದರೆ ಆಧುನಿಕ ಹೆಣ್ಣುಗಳಿಗೆ ಅಂತಹ ಭಕ್ತಿಯ ಕವಚ ಇಲ್ಲದಿರುವುದರಿಂದ ಅವರು ಮಾತನಾಡುವುದೆಂದರೆ ಅದು ಭವಿಗಳ ಮಾತಾಗಿಬಿಡುತ್ತದೆ. (ನಮ್ಮ ಸಂಸ್ಕೃತಿಯಲ್ಲಿ ಇಹಕ್ಕಿಂತ ಪರಕ್ಕೆ ತಾನೇ ಹೆಚ್ಚು ಪ್ರಾಶಸ್ತ್ಯ?) ಆಗ ತಲೆದಂಡ, ಅಗ್ನಿದಿವ್ಯಗಳನ್ನು ಎದುರಿಸಬೇಕಾಗುತ್ತದೆ.
‘ನಾತಿಚರಾಮಿ’ ಯಲ್ಲಿ ಇಬ್ಬರು ಹೆಣ್ಣುಗಳು ಅನುಭವಿಸುವ ಸಂಘರ್ಷ, ಮಾನಸಿಕ ಹಿಂಸೆ, ಹೆಣ್ಣು ಸದಾ ತಲೆದಂಡ ಕೊಡಬೇಕಾದ, ಅಗ್ನಿ ಪರೀಕ್ಷೆಗೆ ಒಳಗಾಗಬೇಕಾದ ಸುಪ್ತ ಭಯದ ಪ್ರತೀಕವಾಗಿದೆ.

ಕೆಳವರ್ಗಕ್ಕೆ ಇಂತಹ ಸಮಸ್ಯೆಗಳು ಸಾಂಸ್ಕೃತಿಕ ಸವಾಲಾಗಿ ಕಾಡುವುದಿಲ್ಲ. ಏಕೆಂದರೆ ಮೇಲಿನ ದೇವಿಯರು ಅವರೊಳಗೆ ಮನೆಮಾಡಿಕೊಂಡಿಲ್ಲ. “ಹೆಣ್ಣಿಗೆ ಗಂಡಿಗೆ, ಗಂಡು ಹೆಣ್ಣು ಬೇಕು ಎನ್ನುವ ಆಸರೆ, ಅದು ನೀರು ಬೇಕು ಎನ್ನುವಂತಹ ಆಸರೆ” (ಮಾಸ್ತಿವೆಂಕಟೇಶ ಅಯ್ಯಂಗಾರ್) ಆದುದರಿಂದಲೇ ಆ ಹೆಣ್ಣುಗಳಿಗೆ ಲೈಂಗಿಕತೆಯ ಅಭಿವ್ಯಕ್ತಿ ಎನ್ನುವುದು ದೊಡ್ಡ ಸಂಗತಿಯಾಗುವುದಿಲ್ಲ. ಇದರ ಪ್ರತೀಕವಾಗಿ ಜಯಮ್ಮನ ಪಾತ್ರ ಇಲ್ಲಿ ಅನನ್ಯವಾಗಿ ಮೂಡಿಬಂದಿದೆ.

ಸುಮಾಳ ‘ಹೆಂಗಸರಿಗೇನು ದೇಹ ಇಲ್ಲವಾ ಆಸೆ ಇಲ್ಲವಾ?’ ಎನ್ನುವಂತಹ ಮಾತುಗಳು ಸ್ವಲ್ಪ ವಾಚ್ಯ ಎನಿಸುತ್ತದೆ. ಹಾಗೆಯೇ ಗೌರಿ ದೇಹ ಸಖ್ಯವನ್ನು ಹೊರಗೆ ಅರಸುವ ರೀತಿ, ಅವಳ ಸಂಘರ್ಷದಷ್ಟು ಸಹಜವಾಗಿ ಮೂಡಿ ಬಂದಿಲ್ಲವೆನಿಸುತ್ತದೆ. ಅದನ್ನು ರೂಪಕಾತ್ಮಕವಾಗಿ, ಸಾಂಕೇತಿಕವಾಗಿ ತೋರಿಸಬಹುದಿತ್ತು.

ಅದೇನೇ ಇರಲಿ, ಯಮುನಕ್ಕ, ಫಣಿಯಮ್ಮಂದಿರು ಮೂಗುಬ್ಬಸ ಪಟ್ಟು ಕತ್ತಲಲ್ಲೇ ಕರಗಿ ಹೋದ ದಿನಗಳನ್ನು ನೆನೆಸಿಕೊಂಡರೆ, ಗೌರಿ, ಸುಮನಂತಹವರು ತಮ್ಮ ದೇಹಮನಸ್ಸುಗಳ ಬಯಕೆಗಳನ್ನು ನಿರ್ಭಿಡೆಯಿಂದ ಹೇಳಿಕೊಳ್ಳುವುದು ಅದಕ್ಕಾಗಿ ಹಾತೊರೆಯುವುದು ಹೆಣ್ಣಿನ ಒಳಗೆ ನಾನಾ ರೂಪದಲ್ಲಿ ಅಡಗಿ ಕುಳಿತಿರುವ ದೇವತೆಗಳಿಂದ ಬಿಡಿಸಿಕೊಳ್ಳುವ ಪ್ರಯತ್ನದ ಪ್ರತೀಕವೇ ಆಗಿದೆ. ಗೌರಿ ಕೊನೆಗೆ ದೇಹದ ಕರೆಗೆ ಓಗೊಟ್ಟು ಸುರೇಶನನ್ನು ಕೂಡುವುದು, ಸುಮಾ ಹಾಸಿಗೆಯಲ್ಲಿ ‘ಬೇಡ’ ಎಂದು ನಿಷ್ಠುರವಾಗಿ ಗಂಡನ ಆಹ್ವಾನವನ್ನು ನಿರಾಕರಿಸುವುದು ಇದಕ್ಕೆ ಸಾಕ್ಷಿಯಾಗಿದೆ.

ಕನ್ನಡ ಚಲನಚಿತ್ರ ಪರಂಪರೆಯಲ್ಲಿ ಐತಿಹ್ಯಗಳಾಗಿ ಉಳಿದುಹೋಗಿರುವ ಎಲ್ಲಾ ಮಹಿಳೆಯರ ಅಸ್ಮಿತೆಯ ಮುಂದುವರೆದ ಭಾಗವಾಗಿ (Extended reality) ಇಲ್ಲಿ ಗೌರಿ ಸುಮಾ ಬಂದಿದ್ದಾರೆ.

ಪ್ರತಿ ರಾತ್ರಿ ನಾಯಕ ತನ್ನ ದೇಹದ ಹಸಿವಿಗಾಗಿ ಹೆಂಡತಿ ಸುಮಾಳನ್ನು ಬಳಸಿಕೊಳ್ಳುತ್ತಾನೆ. ಗೌರಿ ಕೂಡ ಅವಳ ದೇಹದ ಹಸಿವಿಗಾಗಿ ತನ್ನ ದೇಹವನ್ನು ಬಳಸಿಕೊಂಡಳು ಎಂದು ನಾಯಕನಿಗೆ ಎನಿಸಿದಾಗ ಅವನಿಗೆ ತನ್ನ ತಪ್ಪಿನ ಅರಿವಾಗುತ್ತದೆ. ಪಾಪಪ್ರಜ್ಞೆ ಕಾಡುತ್ತದೆ. ಪಿತೃಪ್ರಧಾನ ವ್ಯವಸ್ಥೆಗೆ ಪಾಪಪ್ರಜ್ಞೆಯನ್ನು ಮೂಡಿಸುವುದು ಈ ಚಿತ್ರದ ತುರೀಯ ಅಂಶ. ಆತ್ಮ ತಣಿಯುವ ಹಾಗೆ ದೇಹವೂ ತಣಿಯಬೇಕು ಇವೆರಡರ ನಡುವಿನ ಇಂತಹ ಸಂಘರ್ಷವೊಂದರ ಇರುವಿಕೆಯನ್ನು ಪರಿಣಾಮಕಾರಿಯಾಗಿ ಪಿತೃಪ್ರಧಾನ ವ್ಯವಸ್ಥೆಗೆ ತಿಳಿಸಿಕೊಡಬೇಕು. ಇದು ಕೇವಲ ಹೆಣ್ಣಿನ ಸಮಸ್ಯೆಗಳಲ್ಲ, ಅವು ನಮ್ಮ ಸಂಸ್ಕೃತಿಯ ಪ್ರಶ್ನೆಗಳು ಎಂಬುದನ್ನು ಮನದಟ್ಟುಮಾಡಿಸಬೇಕು. ಅಂತಹ ಕೆಲಸವನ್ನು ‘ನಾತಿಚರಾಮಿ’ ಯಶಸ್ವಿಯಾಗಿ ಮಾಡುತ್ತದೆ.

‍ಲೇಖಕರು avadhi

2 November, 2018

2 Comments

  1. ಭಾರತಿ ಬಿ ವಿ

    ಇದನ್ನೋದಿ ಸಿನೆಮಾ ನೋಡುವ ತಹತಹ ಉಳಟು ಮಾಡಿದಿರಿ ಗಿರಿಜಾ ಮೇಡಂ

  2. ರಾಜೀವ

    ಸೂಕ್ಷ್ಮ ಸಿನಿಮಾಗಳಿಗೆ ಇಂಥ ಒಳನೋಟದ ವಿಮರ್ಶೆಯ ಜರೂರತ್ತು ಇರುತ್ತದೆ. ಅದನ್ನು ಗಿರಿಜಾ ಶಾಸ್ತ್ರಿಯವರು ಅತ್ಯುತ್ತಮ ರೀತಿಯಲ್ಲಿ ನಿರ್ವಹಿಸಿದ್ದಾರೆ.
    ಹೆಣ್ಣಿನ ವರ್ತಮಾನದ ತುಮುಲಗಳ ಬೇರು ಪುರಾಣೇತಿಹಾಸದ ಸ್ಮ್ರತಿಗಳಲ್ಲಿರುವ ವಾಸ್ತವತೆಯನ್ನು ಸಿನಿಮಾ ಕಟ್ಟಿಕೊಡುವ ರೀತಿಯನ್ನು ತೋರಿಸಿದ್ದಾರೆ.

    ತಮ್ಮ ಬರವಣಿಗೆಯಲ್ಲಿ ಭಾವನಾತ್ಮಕ ಅಂಶಗಳನ್ನು ಸೂಕ್ಷ್ಮ ರೀತಿಯಲ್ಲಿ ನಿರೂಪಿಸುವ ಸಂಧ್ಯಾ ರಾಣಿಯವರ ಚಿತ್ರಕಥೆಯ ನಾತಿಚರಾಮಿ ಸಿನಿಮಾವನ್ನು ಗಿರಿಜಾ ಶಾಸ್ತ್ರಿಯವರು ವೈಚಾರಿಕ ನೆಲೆಯಲ್ಲಿ ವಿಶ್ಲೇಷಿಸಿದ್ದಾರೆ!!!

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading