ಧಾರವಾಡದ ಕೃಷಿ ಮಾಧ್ಯಮ ಕೇಂದ್ರ ಹಾಗೂ ಬೆಂಗಳೂರಿನ ಕೃಷಿ ತಂತ್ರಜ್ಞರ ಸಂಸ್ಥೆ ಬೆಂಗಳೂರಿನಲ್ಲಿ ಆಯೋಜಿಸಿದ್ದ ‘ಕೃಷಿ ಪತ್ರಿಕೋದ್ಯಮ ಮತ್ತು ಸವಾಲುಗಳು’ ಕಾರ್ಯಾಗಾರದಲ್ಲಿ ನಾಗೇಶ ಹೆಗಡೆ ಅವರು ಮಾತನಾಡಿದ್ದರ ಸಾರಾಂಶ ಇಲ್ಲಿದೆ-

ಇಂದು ಮಾಹಿತಿಯ ಸುಂಟರಗಾಳಿ ಎದ್ದಿದೆ; ಆದರೆ ಇದರ ಕೇಂದ್ರಬಿಂದುವಾಗಿರುವ ರೈತ ಮಾಹಿತಿಯ ಕೊರತೆ ಅನುಭವಿಸುತ್ತಿದ್ದಾನೆ. ನಾವಿಂದು ಸುದ್ದಿಯ ಸಂತೆಯಲ್ಲಿದ್ದೇವೆ. ಅಭಿವೃದ್ಧಿಹೊಂದಿದ ದೇಶಗಳ ಕಾರ್ಪೋರೆಟ್ ವಲಯದಿಂದ ಮಾಹಿತಿ ಮಹಾಪೂರವೇ ಹರಿದುಬರುತ್ತಿದೆ; ಆದರೆ ನಮ್ಮ ಕೃಷಿ-ಗ್ರಾಮೀಣ ವಲಯದಿಂದ ಮಾಹಿತಿ ಲಭ್ಯವಾಗುತ್ತಿಲ್ಲ; ರೈತ ಸಮುದಾಯಕ್ಕೂ ಅಗತ್ಯಾಧಾರಿತ ಮಾಹಿತಿ ದೊರಕುತ್ತಿಲ್ಲ.
ಕನ್ನಡದ ಯಾವ ಪತ್ರಿಕೆಯಲ್ಲೂ ಕೃಷಿ ವಲಯಕ್ಕೆ ಸಂಬಂಧಿಸಿ ಪೂರ್ಣಾವಧಿ ವರದಿಗಾರರಿಲ್ಲ; ಹೀಗಾಗಿ ಈ ಕುರಿತು ಆಳ ಅಧ್ಯಯನದ ವಿಶ್ಲೇಷಣಾತ್ಮಕ ವರದಿಗಳು ಪ್ರಕಟಗೊಳ್ಳುತ್ತಿಲ್ಲ; ಬದಲಾಗಿ ವಾಣಿಜ್ಯ ಹಿತಾಸಕ್ತಿಯ ಮಾಹಿತಿಗಳೇ ಮೇಲುಗೈ ಸಾಧಿಸುತ್ತಿವೆ.
ಇತ್ತೀಚಿನ ದಿನಗಳಲ್ಲಿ ಇಂಧನ ಅಗತ್ಯ ಪೂರೈಸುವ ಬೆಳೆಗಳಿಗೆ ಆದ್ಯತೆ ನೀಡಲಾಗುತ್ತಿದ್ದು, ಆಹಾರಬೆಳೆ ಕಡಿಮೆಯಾಗುತ್ತಿರುವುದು ಕಳವಳಕಾರಿ ಸಂಗತಿ ಎಂದ ಅವರು, ಕೃಷಿ ಅರಣ್ಯ ಕೂಡ ಉದ್ದಿಮೆಗಳ ಅಗತ್ಯವನ್ನು ಪೂರೈಸಬೇಕಾದ ಸ್ಥಿತಿ ನಿರ್ಮಾಣವಾಗಿದೆ ; ಇನ್ನೊಂದೆಡೆ, ವಿವಿಧ ಕಾರಣಗಳಿಂದ ಕೃಷಿಭೂಮಿಗೂ ಸಂಚಕಾರ ಬಂದೊದಗಿದೆ.
ಒಂದೆಡೆ, ನಗರಗಳತ್ತ ಗ್ರಾಮೀಣ ಜನತೆಯ ವಲಸೆ ತೀವ್ರಗತಿಯಲ್ಲಿ ನಡೆಯುತ್ತಿದ್ದು, ಇನ್ನೊಂದೆಡೆ ಕಾರ್ಪೋರೆಟ್ ವಲಯ ಕೃಷಿರಂಗದ ಮೇಲೆ ನಿಯಂತ್ರಣ ಸಾಧಿಸಲು ಪ್ರಯತ್ನಿಸುತ್ತಿದೆ ; ಈ ಮಧ್ಯೆ ರೈತರ ಆತ್ಮಹತ್ಯೆ ಮುಂದುವರಿದಿದೆ. ಕೃಷಿ ವಲಯದ ಸಂಕಟವನ್ನು ಇಡೀ ಪ್ರಜಾತಂತ್ರದ ಸಂಕಟವೆಂದೇ ಪರಿಗಣಿಸಿ, ಇದರ ಉಳಿವು ಹಾಗೂ ಸುಸ್ಥಿರ ಪ್ರಗತಿಗಾಗಿ ಕಾರ್ಯೋನ್ಮುಖವಾಗುವುದು ಇಂದಿನ ತುರ್ತು ಅಗತ್ಯ.
ವ್ಯಾಪಕ ರೈತ ಸಮುದಾಯವನ್ನು ತಲುಪುವಲ್ಲಿ ಟಿವಿಯಂತಹ ದೃಶ್ಯಮಾಧ್ಯಮ ಹೊಸ ಸಾಧ್ಯತೆಗಳನ್ನು ತೆರೆದಿಟ್ಟಿದ್ದು, ಅವನ್ನು ಸಮರ್ಥವಾಗಿ ಬಳಸಿಕೊಳ್ಳಲು ಅಭಿವೃದ್ಧಿ ಪತ್ರಕರ್ತರು ಮುಂದಾಗಬೇಕು.





0 Comments