ಕಾಂಡೋಮ್ ಕೊಡ್ತಿರೋವಾಗ್ಲೆ ಗ್ಯಾಂಗ್ ವಾರ್

P for…

img_8235

-ಲೀಲಾ ಸಂಪಿಗೆ

 

ಎರಡು ಗುಂಪುಗಳ ನಡುವೆ  ಏಕ್ದಂ ಮಾರಾಮಾರಿ!

ಯಾಕೆ? ಏನು? ಅಂತ ಯೋಚಿಸೋದ್ರೊಳಗೆ ಎರಡೂ ಗ್ಯಾಂಗ್ಗಳು ಪರಸ್ಪರ ಹೊಡೆದಾಡಿಕೊಳ್ತಿದ್ವು, ಗೌರಮ್ಮನ ಗುಂಪು, ಮಾದಯ್ಯನ ಗುಂಪುಗಳು ಕೈ ಕೈ ಮಿಲಾಯಿಸಿ ಬಿಟ್ಟಿದ್ದವು, ಗೌರಮ್ಮ ಮಾದಯ್ಯ, ತಮ್ಮ ಧ್ವನಿಯನ್ನು ತಾರಕಕ್ಕೇರಿಸಿ ಬೈಗುಳಗಳ ರಾಶಿರಾಶಿ ಹಾಕ್ತಿದ್ರು. ನನ್ನ ಸುತ್ತ ಕುಂತಿದ್ದ ಹುಡ್ಗೀರೆಲ್ಲಾ ಚೆಲ್ಲಾಪಿಲ್ಲಿಯಾದ್ರು, ಅವರಿಗೆಲ್ಲಾ ಇದೇನೂ ಹೊಸದಲ್ಲ. ಅಂಥದೊಂದು ಸಂದರ್ಭ ಬಂದಾಗಲೆಲ್ಲಾ ಅವರದ್ದೇ ಆದ ಜಾಗಗಳನ್ನು ಮಾಡ್ಕೊಂಡ್ಬಿಟ್ಟಿರುತ್ತಾರೆ. ಆದ್ರೆ ಇದಾವುದರ ಪರಿವೆಯೂ ಇಲ್ಲದೆ ಬಂಡೆಗೆ ತಲೆ ಕೊಡಲು ಸಿದ್ಧರಾಗೇ ಹೋಗಿದ್ದು, ನಾವು!

ನಾನು, ನನ್ನ ಸಹಾಯಕರಾದ ನಾರಾಯಣಸ್ವಾಮಿ, ಪಂಕಜ. ಅಲ್ಲಿ ಏನಾಗ್ತಿದೆ ಅನ್ನೋ ಆತಂಕ ಒಂದ್ಕಡೆಯಾದ್ರೆ, ಆ ಬೆಟ್ಟಗಳ, ಬಂಡೆಗಳ ಸಂದುಗಳಿಂದ ತಪ್ಪಿಸ್ಕೊಂಡು ಎಲ್ಲಿಗೆ ಓಡ್ಬೇಕು ಅನ್ನೋದು ಇನ್ನೊಂದ್ಕಡೆ.

orangutan-painting-2-towan

ತಿರುಪತಿಗೆ ಹೋಗುವ ಹೆದ್ದಾರಿಯದು, ರಸ್ತೆಯ ಎಡಕ್ಕೆ ಉದ್ದಕ್ಕೂ ಕಿರುಬೆಟ್ಟಗಳ ಸಾಲು, ರಸ್ತೆಯಿಂದ ಒಂದು-ಒಂದೊವರೆ ಕಿ.ಮೀನಷ್ಟು ಎರಡು ದೊಡ್ಡ ಬಂಡೆಗಳ ನಡುನಡುವೆ ಕಿರಿದಾಗಿ, ಮತ್ತೆ ಹರಿವಿಕೊಂಡಿದ್ದ ಸ್ಥಳಕ್ಕೆ ನಾವು ಹೋಗಿದ್ದು.

ಗೌರಮ್ಮ, ಮಾದಯ್ಯ ತಲಾ ಗುಂಪಿನ ನಾಯಕತ್ವ ವಹಿಸಿದ್ದವರು. ಅವರಿಬ್ಬರೂ ನಡೆಸುವ ವೇಶ್ಯಾವಾಟಿಕೆಗೆ ಅದೊಂದು ಎಗ್ಗಿಲ್ಲದ ಸ್ಥಳ. ಪ್ರತಿ ಗುಂಪಿನಲ್ಲೂ ಹತ್ತರಿಂದ ಹನ್ನೆರಡು ಹುಡುಗೀರು. ಗಿರಾಕಿಗಳೆಲ್ಲಾ ಪಕ್ಕಾ ಗುತ್ತಿದ್ದೋರೆ ಅಥವಾ ಅಲ್ಲಿಗೆ ಗಿರಾಕಿಗಳು ಕರಾರಾದ ರೇಟು ಕೊಟ್ಟು ಹುಡ್ಗೀರ್ನ ಕರ್ಕೊಂಡು ಅಲ್ಲವೇ ಕಿರುಜಾಗಗಳಿಗೋ, ಬೇರೆ ಬಂಡೆಗಳ ಸಂದುಗೊಂದಿಗಳಿಗೋ ಹೋಗ್ತಿದ್ರು.

ಗೌರಮ್ಮ ಮಾದಯ್ಯ ಇಬ್ಬರೂ ಸ್ಟ್ರಾಂಗೇ. ದೊಡ್ಡ ದೊಡ್ಡ ಮನುಷ್ಯರ ನಿಕಟವತರ್ಿಗಳು. ಅತಿಹೆಚ್ಚು ಮಾಮೂಲಿಯನ್ನು ತಿಂಗಳು ತಿಂಗಳಿಗೆ ಸಲ್ಲಿಸ್ತಿದ್ದೋರು. ಇಬ್ಬರ ಹತ್ರಾನೂ ಸಾಕಷ್ಟು ಧಾಂಡಿಗರು ಇದ್ರು. ಎಲ್ಲವನ್ನೂ ರಕ್ಷಣೆ ಮಾಡೋಕೆ ಅಲ್ಲೇ ಬೇಕಾದ್ದನ್ನ ಬೇಯಿಸ್ಕೊಳ್ಳೋ ವ್ಯವಸ್ಥೆನೂ ಇತ್ತು. ಗಾಂಜಾ ಸರಬರಾಜು, ಕಳ್ಳಭಟ್ಟಿ ಸರಬರಾಜು ಎಲ್ಲಾ ಹೋಲೆಸೇಲ್ ಅಲ್ಲಿ. ಅಲ್ಲಲ್ಲಿ ಇಸ್ಪೀಟ್ ಗಡಂಗೂ ಇತ್ತು.

ಅಬ್ಬಾ! ಆ ಇಡೀ ವಾತಾವರಣವೇ ಒಂದು ಅಂಡರ್ ಗ್ರೌಂಡ್.. ಥರಾ ಕಾಣ್ತು. ಆ ಸ್ಥಳಾನ ಪತ್ತೆ ಮಾಡಿದ್ದೇ ಒಂದು ಸಾಹಸ ಆಗಿತ್ತು. ಆ ಗೌರಮ್ಮನ ಗ್ಯಾಂಗಿನಲ್ಲಿದ್ದ ಪಂಕಜ ನಮಗೆ ತೆನಾಲಿಯಲ್ಲಿ ಸಿಕ್ಕಿದ್ಲು. ಹೀಗೇ ಮಾತಾಡೋವಾಗ ಇದನ್ನೆಲ್ಲಾ ಹೇಳಿದ್ಲು. ಅವಳ ಮೂಲಕ ಗೌರಮ್ಮನ ದೋಸ್ತಿ ಮಾಡ್ಕೊಂಡು ಒಂದು ಟ್ರಸ್ಟ್ ಬಿಲ್ಡ್ ಮಾಡಿ ನಂತರ ಅಲ್ಲಿಗೆ ಹೋದ್ವು, ಇಷ್ಟಾದ್ರೂ ಮಾದಯ್ಯನ ಗ್ಯಾಂಗಿನಲ್ಲಿದ್ದ ಹುಡ್ಗೀರನ್ನು ಟಚ್ ಮಾಡೋಕೆ ಆಗಿರ್ಲೇ ಇಲ್ಲ. ‘ನಾವು ಆರೋಗ್ಯದ ಕುರಿತು ಮಾತಾಡೋರು ಅಷ್ಟೇ. ನಿನ್ನ ಗಿರಾಕಿಗಳಿಗೆ ಕೊಡೋಕೆ ಫ್ರೀ ಕಾಂಡೋಮ್ಸ್ ಕೊಡ್ತೀವಿ. ಹುಡ್ಗೀರು ಆರೋಗ್ಯವಾಗಿದ್ರೆ ಏಡ್ಸ್ ಬಗ್ಗೆ ನೀನು ಎಚ್ಚರಿಕೆ ವಹಿಸಿದ್ದೀಯಾಂತ ಗೊತ್ತಾದ್ರೆ ನಿನ್ನ ವ್ಯಾಪಾರ ಚೆನ್ನಾಗಿ ನಡೆಯುತ್ತೆ’ ಅಂತೆಲ್ಲಾ ಹೇಳಿ ಅವಳ ಕೋಟೆಯೊಳಗೆ ಹೋಗೋವಷ್ಟು ವಿಶ್ವಾಸಗಳಿಸಿದ್ದು, ಸಾಮಾನ್ಯವಾಗಿ ಎಂಥೆಂಥಾ ಹೊಗಲಾರದ ಬ್ರಾಥೆಲ್ಗಳನ್ನು ಹೋಗುವಾಗೆಲ್ಲಾ ಇದೇ ಸ್ಟ್ರಾಟಜಿ ನಮ್ದು.

ಆ ದಿನವೂ ಗೌರಮ್ಮನನ್ನು ಮಾತಾಡಿಸಿ ಅಲ್ಲೊಂದಿಷ್ಟು ಕಾಂಡೋಮ್ಸ್ ಕೊಟ್ಟು ಹುಡ್ಗೀರ ಹತ್ರ ಸ್ವಲ್ಪ ಮಾತಾಡ್ತೀನಿ, ಅವರ ಆರೋಗ್ಯದ ಬಗ್ಗೆ ಅಂದೆ. ಆದ್ಯಾವ ಮೂಡಲ್ಲಿದ್ಲೋ ಪುಸಕ್ಕಂತ ‘ಪಂಕಜಾ ಅವರ್ನೆಲ್ಲಾ ಕರೆಯೇ, ಅಲ್ಲೆಲ್ಲಾದ್ರೂ ಕೂತ್ಕೊಳ್ಳಿ. ಹೆಚ್ಚು ಹೊತ್ತು ಇಲ್ಲಿರ್ಬೇಡಿ,’ ಅಂದ್ಲು. ಅವಳ ಮುಖದಲ್ಲೇ ಎಂಥದೋ ದುಗುಡವಿತ್ತು. ಆ ದಿನ ವಾತಾವರಣ ಸ್ವಲ್ಪ ಗರಂ ಆಗಿತ್ತು. ‘ಇದೆಲ್ಲಾ ಇಲ್ಲಿ ಮಾಮೂಲಿ ಬಾರಮ್ಮ ಅಂತ ಪಂಕಜ ಕರ್ಕೊಂಡ್ಹೋದ್ಲು. ಒಂದಷ್ಟು ದೂರ ಬಂದು ಬಂಡೆಯೊಂದರ ಮೇಲೆ ಕುಳಿತೆ. ಹಾಗೇ ಆ ಗೌರಮ್ಮನನ್ನು ನೋಡ್ತಾ ಇದ್ದೆ. ಅವಳ ಮನಸ್ಥಿತಿ ಸ್ಥಿಮಿತ ಕಳ್ಕೊಂಡಂಗಿತ್ತು.

ಅವರ ಮನಸ್ಥಿತಿಗಳೇ ಹಾಗೆ. ಸದಾ ಕತ್ತಿ ಮೇಲಿನ ನಡಿಗೆ, ಅದರಿಂದಾಗಿಯೇ ಈ ಚಾಂಚಲ್ಯ ಇಂಥದ್ದೊಂದು ಪ್ರದೇಶದಲ್ಲಿ ಇಷ್ಟೊಂದು ವ್ಯವಹಾರಗಳನ್ನು ನಡಸೋ ಮಾದಯ್ಯನಿಗೆ ಸಾಥ್ ನೀಡ್ತಾ ಏಗೋದು ಅಂದ್ರೆ ಸುಮ್ನೇನಾ? ಇಂಥಾ ಅದೆಷ್ಟು ಮೇಡಂಗಳನ್ನ, ಘರ್ವಾಲಿಗಳನ್ನ, ದೀದೀಗಳನ್ನ, ಅಕ್ಕಂದಿರನ್ನ, ಅವ್ವಂದಿರನ್ನ, ಸೋನಾಗಾಚಿಯ, ಕಾಮಾಟಿಪುರದ, ಜೆ.ಬಿ. ರಸ್ತೆಯ, ಖಾನಾರಸ್ತೆಯ…… ಅದೆಷ್ಟು ಘರ್ವಾಲಿಗಳನ್ನು ನೋಡ್ಬಿಟ್ಟೆ.

ಈ ಗೌರಮ್ಮ ಸ್ವಲ್ಪ ಡಿಫರೆಂಟ್, ಘರ್ವಾಲಿಗಳಲ್ಲಿ ಇವಳು ಚಂಬಲ್ರಾಣಿ! ಸದಾ ಕೆಂಪಾದ ತಾಂಬೂಲ ತುಂಬಿದ ಬಾಯಿ, ಒಮ್ಮೆ ಮಮತಾಮಯಿ, ಒಮ್ಮೆ ರೌದ್ರವ, ನಾಟಕೀಯತೆಯ ನಾಯಕಿಯಂತೆ ಕೆಲವೊಮ್ಮೆ ನಗು, ಸಿಟ್ಟು, ಕ್ರೌರ್ಯ, ಛಲ, ತಂತ್ರಗಾರಿಕೆ, ಉಪಾಯಗಳು…. ಹೀಗೇ ನವರಸಗಳನ್ನೇ ತನ್ನ ಬಂಡವಾಳವಾಗಿಸಿಕೊಂಡು ಕ್ಷಣಚಿತ್ತಂ ಎಂಬಂತೆ ಮಾನಸಿಕ ಪ್ರಕ್ಷೊಭೆ, ಪ್ರಲೋಭನೆಗಳಿಗೆ ಒಳಗಾಗಿ ಈ ದಂಧೆಯನ್ನು ನಡೆಸೋ ಅಂಬಿಗಳಾಗಿದ್ದಾಳೆ. ಅವಳ ಪರಿಸ್ಥಿತಿಗಳೇ ಹಾಗಿರ್ತಾವೆ. ಆತಂಕ, ದುಗುಡ, ಭಯಗಳೂ ಕೂಡ ಅವಳನ್ನು ಸದಾ ಕಾಡುತ್ತಲೇ ಇರ್ತಾವೆ. ಇಂತಹ ಪರಿಸ್ಥಿತಿಗಳಿಂದ ಪಾರಾಗಲು ಅವಳದ್ದೇ ಆದ ಒಂದು ವ್ಯೂಹ ರಚಿಸ್ಕೊಂಡಿರ್ತಾಳೆ. ಅವಳ ರಕ್ಷಣೆಗೆಂದು ಬರೋ ತಂಡ ಬರುಬರುತ್ತಾ ‘ಬ್ಲಾಕ್ಮೇಲ್’ ಮಾಡುವ ಅವಳೇ ಬೆಳೆಸಿದ ಒಂದು ಚಕ್ರವ್ಯೂವಾಗಿ ಬೆಳೆದುಬಿಡುತ್ತೆ.

ಕಾನೂನುಬಾಹಿರವಾದದ್ದನ್ನೆಲ್ಲಾ ಕಾನೂನುರೀತ್ಯವಾಗಿಸಲು ಎಲ್ಲಾ ಕಟ್ಟುಕಟ್ಟಳೆಗಳನ್ನು ನೋಟಿನಕಟ್ಟುಗಳಿಂದಲೇ ತಾಳೆ ಹಾಕುತ್ತಾ, ಅವಳನ್ನು ಪೀಡಿಸುವ ಇನ್ನೊಂದು ಮುಖವೇ ಪೊಲೀಸ್ ವ್ಯವಸ್ಥೆ, ಸ್ಥಳೀಯ ಪೋಲೀಸರಿಂದ ಉನ್ನತ ಅಧಿಕಾರಿಗಳವರೆಗೂ ಹಂಚಿಕೆಯಾಗೋ ಧನರಾಶಿ. ಕೆಲವೊಮ್ಮೆ ಅವರ ತೆವಲುಗಳು ಮೈದುಂಬಿದಾಗ ಹೆಂಗಳೆಯರ ದೇಹಗಳು, ಹುಳಿಹೆಂಡಗಳು, ಕುರಿಕೋಳಿಯೂಟಗಳನ್ನು ಪುಕ್ಕಟೆ ಬಳುವಳಿಗಳಾಗಿ ಇವಳು ಸರಬರಾಜು ಮಾಡ್ತಾನೇ ಇರ್ಬೇಕಾಗುತ್ತೇ!

ಮೇಲ್ನೋಟಕ್ಕೆ ಹೆಮ್ಮಾರಿಯಂತೆ ವತರ್ಿಸಿದರೂ ಒಳಗಿನ ವ್ಯಕ್ತಿತ್ವ ಸದಾ ಅತಂತ್ರದ, ಭಯದ ನೆರಳಲ್ಲೇ ಇರುತ್ತೆ. ಅಬ್ಬಾ! ಇಷ್ಟೆಲ್ಲಾ ಆದ್ರೂ ಇವಳದೊಂದು ಟಿಪಿಕಲ್ ದಂಧೆ, ಯಾವ ಸಾರ್ಥಕ್ಕಾಗಿ ಇದೆಲ್ಲಾ ಅಂತ ನನ್ನ ತಲೆ ಗಿರ್ ಅನ್ನೋಕೆೆ ಶುರುವಾಯ್ತು. ಅಷ್ಟರಲ್ಲಿ ಪಂಕಜ ಐದಾರು ಹುಡುಗೀರ್ನ ಕರ್ಕೊಂಡು ಬಂದ್ಲು. ಸುಮಾರು 20 ರಿಂದ 30 ವಯೋಮಾನದೋರು. ಕನ್ನಡ, ತೆಲಗು, ಮಾತಾಡ್ತಿದ್ರು, ಹೀಗೇ ಮಾತಾಡಿಸ್ತಾ ‘ಇಲ್ಲಿಗೆ ಬರೋ ಗಿರಾಕಿಗಳು ಕಾಂಡೋಮ್ ಬಳುಸ್ತಾರಾ? ಅಂದೆ. ಅದರಲ್ಲಿ ಒಬ್ಳು ‘ಕೆಲವರು ಬಳಸ್ತಾರೆ. ಇನ್ನೂ ಕೆಲವರು ಐವತ್ತು ರೂಪಾಯಿ ಕೊಡ್ತೀನಿ. ಅವೆಲ್ಲಾ ಬೇಡ ಬಾ’ ಅಂತಾರೆ ಅಂದ್ಲು.

ಅವರೊಟ್ಟಿಗೆ ಮಾತಾಡ್ತಾ ಇರೋವಾಗಲೇ….. ಆ ಕಡೆ ಎರಡೂ ಗ್ಯಾಂಗ್ಗಳಲ್ಲಿ ಫೈಟ್ ಶುರುವಾಯ್ತು. ಆ ಕಾಂಪೀಟೇಶನ್, ವೃತ್ತಿ ಅಸೂಯೆ. ದ್ವೇಷಗಳು ಭುಗಿಲೆದ್ದವು. ಗೌರಮ್ಮ, ಮಾದಯ್ಯ ಛೂ ಬಿಡ್ತಿದ್ರು. ನಾನು. ಪಂಕಜ, ನಾಯಾಯಣಸ್ವಾಮಿ ಅಲ್ಲಿಂದ ತಪ್ಪಿಸ್ಕೊಳ್ಳೋ ಪ್ರಯತ್ನದಲ್ಲಿ ಸೋಲ್ತಿದ್ದೀವೇನೋ ಅಂತ ಆತಂಕ ಆಯ್ತು. ಹೇಗೋ ಮಾಡಿ ಪಂಕಜಳ ಸಹಾಯದಿಂದ ಓಡಿಓಡಿ ಬಟಾಬಯಲಿಗೆ ಬಂದು ಅಲ್ಲಿಂದ ಸ್ವಲ್ಪದೂರ ಓಡಿದ್ರೆ ಗದ್ದೆಕಟ್ಟು, ಅದನ್ನು ದಾಟಿದ್ರೆ ರಸ್ತೆ, ಆ ಗದ್ದೆಕಟ್ಟೆಗೆ ಬರೋವತ್ಗೆ ಸುಸ್ತಾಗಿದ್ದು, ಆ ಕಿರಿದಾದ ಗದ್ದೆಕಟ್ಟೆನ ಹಾದೀಲಿ ದುಗುಡದಿಂದ ನಡೆಯುತ್ತಾ ಇನ್ನೂ ನಾಲ್ಕು ಹೆಜ್ಜೆ ಹಾಕಿರ್ಲಿಲ್ಲ. ಕಾಲು ಆಯ ತಪ್ತು. ಎಷ್ಟೇ ಬ್ಯಾಲೆನ್ಸ್ ಮಾಡಿದ್ರೂ ಮುಂಗಾಲು ಟ್ವಿಸ್ಟ್ ಆಗೇಬಿಡ್ತು. ಹೇಗೋ ಹಾದಿ ಸವೆಸಿ, ರಸ್ತೆ ಮುಟ್ಟಿದ್ದೆ. ನಾರಾಯಣಸ್ವಾಮಿ ಬೆಂಗಳೂರು ಮುಟ್ಟಿಸಿದ್ದ.

ತಿಂಗಳಾದ್ರೂ ತೆವಳ್ಕೊಂಡೇ ಇದ್ದೆ ಕಟ್ಟು ಹಾಕಿಸ್ಕೊಂಡು. ಹೇರ್ಲೈನ್ ಫ್ರಾಕ್ಚರ್ ಆಗಿತ್ತು. ಇವತ್ತಿಗೂ ಆ ಹಳೇನೋವು ಆಗಾಗ್ಗೆ ಕಳಕ್ ಅಂತಾನೇ ಇರುತ್ತೆ. ಹಾಗೆಲ್ಲಾ ಮತ್ತೆ ಆ ದಿನಕ್ಕೆ ಹೋಗ್ಬಿಡ್ತೀನಿ!.

‍ಲೇಖಕರು avadhi

February 28, 2009

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: