ನಾಗೇಶ ಹೆಗಡೆ ಎಂಬ ‘ಅ’ವಿಜ್ಞಾನ ‘ಅ’ವಿಸ್ಮಯ

ಸತೀಶ್ ಚಪ್ಪರಿಕೆ 

ಇದು ಎರಡೂವರೆ ದಶಕಗಳಷ್ಟು ದೀರ್ಘಕಾಲದ ಪ್ರೀತಿ-ವಿಶ್ವಾಸ, ಸ್ನೇಹ-ಸಂಬಂಧ.

ವೃತ್ತಿ ಬದುಕಿನಾಚೆ ಆರಂಭವಾಗಿದ್ದ ಈ ನಂಟು ವೃತ್ತಿಯಾಗಿ, ಮತ್ತೆ ವೃತ್ತಿಯಾಚೆ ಶಾಶ್ವತವಾಗಿ ನೆಲೆ ನಿಂತಿದ್ದು.

ಬೇರೆಯವರ ಪಾಲಿಗೆ ನಾಗೇಶ ಹೆಗಡೆಎನ್ನುವ ವ್ಯಕ್ತಿ-ಶಕ್ತಿ ಮಹಾನ್ ವಿಜ್ಞಾನ ಲೇಖಕ, ಗುರು, ಪರಿಸರವಾದಿ… ಏನೇನೋ ಆಗಿರಬಹುದು. ಆದರೆ ನನ್ನ ಮತ್ತು ನಮ್ಮ ಮನೆಯ ಪಾಲಿಗೆ, ಅವರು ಮತ್ತು ಅವರ ಮನೆಯವರು ಮನೆಯವರೇ! ನಾಗೇಶ್, ರೇಖಾ ಮತ್ತು ಹೇಮಂತ್ ಈಗಲೂ ನಮ್ಮವರೇ!

ವಿಜ್ಞಾನದಲ್ಲಿ ಪದವಿ ಮುಗಿಸಿ ‘ಕರ್ನಾಟಕ ಅಸೋಸಿಯೇಷನ್ ಫಾರ್‍ ಅಡ್ವಾನ್ಸ್‍ಮೆಂಟ್‍ ಆಫ್ ಸೈನ್ಸ್’ (ಕೆಎಎಏಸ್)ನಲ್ಲಿ ಸಂಶೋಧನಾ ಸಹಾಯಕನಾಗಿ ಕೆಲಸಕ್ಕೆ ಸೇರಿದ್ದೆ. ಅಷ್ಟರೊಳಗೆ ನಾನು ‘ಪ್ರಜಾವಾಣಿ’ ಸಾಪ್ತಾಹಿಕದಲ್ಲಿ ಲೇಖಕ-ಕಥೆಗಾರನ ಸ್ಥಾನ ಪಡೆದಾಗಿತ್ತು. ‘ಪ್ರಜಾವಾಣಿ’ ಒಳಗೆ ಕಾಲಿಟ್ಟವನು ನಿಧಾನವಾಗಿ ‘ಸುಧಾ’ಗೆ ಕೂಡ ಪ್ರವೇಶ ಪಡೆದೆ. ಆಗ ‘ಸುಧಾ’ ಹೊಣೆಗಾರಿಕೆ ನಾಗೇಶ ಹೆಗಡೆ ಹೆಗಲ ಮೇಲಿತ್ತು. ಬರವಣಿಗೆಯ ಮೂಲಕವೇ ಅವರ ಮನ ಗೆದ್ದಿದ್ದ ನಾನು ಬಹು ಬೇಗನೇ ಅವರ ಆತ್ಮೀಯನಾಗಿ ಬಿಟ್ಟಿದ್ದೆ.

ಆ ದಿನ ಈಗಲೂ ನೆನಪಿದೆ!

ನಾಗೇಶ ಹೆಗಡೆ ಒತ್ತಾಯದ ಪರಿಣಾಮವಾಗಿಯೇ ‘ಮತ್ತೊಂದು ಮೌನಕಣಿವೆ’ ಎನ್ನುವ ಲೇಖನವನ್ನು ಅ.ನ. ಯಲ್ಲಪ್ಪರೆಡ್ಡಿ ಜೊತೆಗೂಡಿ ‘ಸುಧಾ’ಕ್ಕೆ ಬರೆದುಕೊಟ್ಟು 600 ರೂಪಾಯಿ ಸಂಬಳದ ಸಂಶೋಧನಾ ಸಹಾಯಕನ ಹುದ್ದೆ ಕಳೆದುಕೊಂಡು ಬೀದಿಗೆ ಬಿದ್ದ ಮರುದಿನ!

ಮರುದಿನ ಮಹಾತ್ಮ ಗಾಂಧಿ ರಸ್ತೆಯ ನಂಬರ್ 75ರ ಮೂರನೇ ಮಹಡಿ ತಲುಪಿದೆ. ನಾಗೇಶ್‍ ಅವರ ಕಚೇರಿಯಿಂದ ಹೊರಬಂದು ನಿಂತು, ಹೊರಗೆ ಮೆಟ್ಟಿಲ ಬಳಿ ಬಂದು ನಿಂತು ಮಾತಿಗಿಳಿದರು. ಇದ್ದ ಕೆಲಸ ಕಳೆದುಕೊಂಡು ಅಧೀರನಾಗಿದ್ದವನ ಕಣ್ಣಲ್ಲಿ ನೀರು ಉಕ್ಕಿ ಬಂತು. ಪಕ್ಕದಲ್ಲಿದ್ದ ನಾಗೇಶ್‍ ಅವರು ನನ್ನ ಕೈ ಹಿಡಿದು, “ಇಷ್ಟಕ್ಕೆ ಜೀವನದಲ್ಲಿ ಹೆದರಿದರೇ ಹೇಗೆ? ಇದಲ್ಲಾ ಅಂದ್ರೆ ಇನ್ನೊಂದು ಕೆಲಸ ಸಿಗುತ್ತೆ” ಎಂಬ ಭರವಸೆಯ ಮಾತುಗಳನ್ನು ಆಡಿ, ಸಾಂಪ್ರದಾಯಿಕ ಬೀಜ ಸಂರಕ್ಷಣೆಯಲ್ಲಿ ತೊಡಗಿದ್ದ ಡಾ. ವನಜಾ ರಾಮಪ್ರಸಾದ್‍ ಅವರಿಗೆ ಫೋನ್ ಮಾಡಿ ನನಗೊಂದು ಕೆಲಸ ಕೊಡಲು ಹೇಳಿದರು. ಅಂದು ಕೃತಜ್ಞತೆ ಹೇಳಿ ಮಹಡಿಯ ಮೆಟ್ಟಿಲುಗಳನ್ನು ಇಳಿದು ಹೊರಬಂದಿದ್ದೆ.

ಆ ದಿನದಿಂದ ಸುಮಾರು ಮೂರು ವರ್ಷಗಳ ಕಾಲ ‘ಪ್ರಜಾವಾಣಿ’ ಮತ್ತು ‘ಸುಧಾ’ ನನ್ನ ಕೈಹಿಡಿದವು. ಒಂದು ದಿನ ಆ ಮಾಧ್ಯಮ ಸಂಸ್ಥೆಯ ಅಂಗವಾಗಿ ಮೂರನೇ ಮಹಡಿಯಲ್ಲಿ ನಾಗೇಶ್‍ ಜೊತೆಗೂಡುವ ಅವಕಾಶ ಸಿಕ್ಕಿತು. ಆನಂತರ ಬರೆದದ್ದು ಅದೆಷ್ಟು ಲೇಖನಗಳು? ಅದ್ಯಾವಾವ ಹೆಸರಿನಲ್ಲಿ? ಅದ್ಯಾವಾವ ಹೊತ್ತಿನಲ್ಲಿ? ಸಿ.ಸತೀಶ್ ಕುಮಾರ್, ಸತೀಶ್‍ಚಪ್ಪರಿಕೆ, ಸಿಎಸ್ಕೆ, ನಿಸರ್ಗ, ನಿಸರ್ಗ ಪ್ರಿಯ, ಸುಚಿತ್ರ, ಸುಪ್ರಿಯ… ‘ಪ್ರಜಾವಾಣಿ ಸಂಗ್ರಹ’, ‘ಸುಧಾ ಸಂಗ್ರಹ’ ಹೀಗೆ ಸುಮಾರು ಒಂದು ಡಜನ್ ಬೈಲೈನ್‍ಗಳು ನನಗಿದ್ದವು.

ಆ ಪೈಕಿ ಶಾಶ್ವತವಾಗಿದ್ದು ‘ಸುಧಾ’ದಲ್ಲಿ ನಾನು ಧಾರವಾಹಿಯಾಗಿ ನಿರೂಪಿಸಿದ ಅ.ನ.ಯಲ್ಲಪ್ಪರೆಡ್ಡಿ ಅವರ ಜೀವನಗಾಥೆ ‘ಹಸಿರು ಹಾದಿ.’ ಓದುಗರ ಪಾಲಿಗೆ ಅದು ‘ಹಸಿರು ಹಾದಿ’ಯಾಗಿದ್ದರೂ, ಕಚೇರಿಯೊಳಗೆ ನನ್ನ ಪಾಲಿಗೆ ಅದು ‘ಮುಳ್ಳಿನ ಹಾದಿ’ಯಾಗಿತ್ತು. ಏಕೆಂದರೆ ‘ಪ್ರಜಾವಾಣಿ’ ಮತ್ತು ‘ಸುಧಾ’ ಇತಿಹಾಸದಲ್ಲಿಯೇ ನನ್ನಂತಹ ಒಬ್ಬ ಕಿರಿಯ ಪತ್ರಕರ್ತನಿಗೆ ಸಂಸ್ಥೆಯೊಳಗಿದ್ದೇ, ಅಂತಹ ಅವಕಾಶ ಸಿಕ್ಕಿತ್ತು ಮೊದಲನೇಯದಾಗಿತ್ತು. ಎಷ್ಟೋ ಬಾರಿ ಬೆಳಿಗ್ಗೆ ಆರು ಗಂಟೆಗೆ ಕಚೇರಿಗೆ ಹೋಗಿ ಆಯಾ ಕಂತನ್ನು ಬರೆದುಕೊಡುತ್ತಿದ್ದೆ. ಅದೂ ಸುಮಾರು ಹದಿನಾರು ಗಂಟೆ ಕ್ರೀಡಾ ವಿಭಾಗಕ್ಕೆ ದುಡಿದ ಮೇಲೆ. ‘ಹಸಿರು ಹಾದಿ’ ನನ್ನ ಪಾಲಿಗೆ ‘ಮುಳ್ಳಿನ ಹಾದಿ’ಯಾಗಿ ಹಲವರ ಕಣ್ಣು ಕೆಂಪಾಗಿತ್ತು. ಆ ಎಲ್ಲ ಸಂದರ್ಭಗಳಲ್ಲಿ ಸದಾ ನಾಗೇಶ್‍ ಅವರು ನನ್ನ ಜೊತೆಗೆ ನಿಂತಿದ್ದರು.

ಸುಮಾರು 2000 ಇಸವಿ ಹೊತ್ತಿನಲ್ಲಿ ನಾಗೇಶ್‍ ಅವರು ‘ಸುಧಾ’ದಿಂದ ‘ಕರ್ನಾಟಕ ದರ್ಶನ’ಕ್ಕೆ ಬಂದರು. ನಾನು ಜನರಲ್‍ ಡೆಸ್ಕ್, ರಿಪೋರ್ಟಿಂಗ್, ವೆಬ್‍ಸೈಟ್ ವಿಭಾಗದಲ್ಲಿ ಕೆಲಸ ಮಾಡಿ ಕ್ರೀಡಾ ವಿಭಾಗಕ್ಕೆಕಾಲಿಟ್ಟೆ. ಕ್ರೀಡಾ ವಿಭಾಗದಲ್ಲಿ ನಾನು ಕೂತಿರುತ್ತಿದ್ದ ಕುರ್ಚಿಯ ಬಲ ಭಾಗದಲ್ಲಿ ನಾಗೇಶ್‍ ಕ್ಯಾಬಿನ್. ಬೆಳಿಗ್ಗೆ ಸುಮಾರು ಹತ್ತೂವರೆ ಗಂಟೆಗೆ ಕಚೇರಿಗೆ ಬರುತ್ತಿದ್ದ ಅವರು ರಾತ್ರಿ ಹಲವು ಬಾರಿ ಹತ್ತು-ಹನ್ನೊಂದು ಗಂಟೆಗೆ ಕ್ಯಾಬಿನ್ ಕಾಲಿ ಮಾಡಿದ್ದಿದೆ. ಆ ಮೂರು ವರ್ಷಗಳ ಅವಧಿಯಲ್ಲಿ ನಾಗೇಶ್ ಮತ್ತು ನಾನು ಆಡಿದ ಮಾತುಕತೆಗಳಿಗೆ, ವೃತ್ತಿಗೆ ಸಂಬಂಧಿಸಿದ ಜಗಳಗಳಿಗೆ ಲೆಕ್ಕವೇ ಇಲ್ಲ! ತಣ್ಣಗೆ ಕಲಿತ ಪಾಠಗಳು ಎಷ್ಟು!?

ಆ ಭೀಕರ ಕದನಗಳ ನಡುವೆಯೂ ನಮ್ಮಿಬ್ಬರ ನಡುವಿನ ಪ್ರೀತಿ-ವಿಶ್ವಾಸ; ನಮ್ಮೆರಡು ಕುಟುಂಬಗಳ ನಡುವಿನ ಸ್ನೇಹ-ಸಂಬಂಧ ಗಟ್ಟಿಯಾಗುತ್ತಲೇ ಹೋಯಿತು. ಸುಮಾರು ನಾಲ್ಕು ತಿಂಗಳ ಹಿಂದೆ ನಾಗೇಶ್‍ ಅವರ ಮನೆಗೆ ವೈಯಕ್ತಿಕ ಕಾರಣಗಳ ಹಿನ್ನೆಲೆಯಲ್ಲಿ ಭೇಟಿ ನೀಡಿದ್ದೆ. ರೇಖಾ ಬಿಸಿ-ಬಿಸಿ ಉಪ್ಪಿಟ್ಟು ಮಾಡಿಕೊಟ್ಟಿದ್ದರು. ಆ ಭೇಟಿಯ ಸಂದರ್ಭದಲ್ಲೂ ನಾಗೇಶ್‍ ಅವರು ನನ್ನನ್ನುಒಂದು ವಿಷಯಕ್ಕೆ ಸಂಬಂಧಿಸಿದಂತೆ ಕಟುವಾಗಿಯೇ ಟೀಕಿಸಿದ್ದರು. ನಾನು ನಗುತ್ತಲೇ ಆ ಟೀಕೆಯನ್ನು ಸ್ವೀಕರಿಸಿದ್ದೆ.

ಅದೇ ರೀತಿ ಹಲವಾರು ಸಂದರ್ಭಗಳಲ್ಲಿ ನಾನು ನಾಗೇಶ್‍ ಅವರನ್ನು ಕಟುವಾಗಿಯೇ ಟೀಕಿಸಿದ್ದೆ. ಸಾರ್ವಜನಿಕವಾಗಿ ಅಲ್ಲ. ನಮ್ಮಿಬ್ಬರ ನಡುವಿನ ಮಾತುಕತೆಯ ಸಂದರ್ಭದಲ್ಲಿ! ಆ ಪೈಕಿ ನನ್ನ ಬಹುದೊಡ್ಡ ಟೀಕೆಯೆಂದರೆ, “ನೀವು ನಿಮ್ಮ ಹಾಗೆಯೇ ವಿಜ್ಞಾನ ವಿಶೇಷ ಬರೆಯುವ ಮತ್ತೊಬ್ಬ ಲೇಖಕನನ್ನು ಪ್ರಜಾವಾಣಿಯಲ್ಲಿ ಪೋಷಿಸಿ-ಬೆಳಸಲಿಲ್ಲ” ಎನ್ನುವುದು. ಅವರು ಕೂಡ ನಗು-ನಗುತ್ತಲೇ ಟೀಕೆಗಳನ್ನು ಸ್ವೀಕರಿಸಿ, “ನನಗೆ ನೀವು ತುಂಬಾ ಇಷ್ಟವಾಗುವುದು ಈ ನೇರ ನಡೆ-ನುಡಿಯಿಂದ” ಎಂದು ಬೆನ್ನುತಟ್ಟಿ ಕಳುಹಿಸಿಕೊಡುತ್ತಿದ್ದರು.

ನಾಗೇಶ್‍ ಅವರು ಇಷ್ಟವಾಗುವುದು… ಬರೆದಂತೆ ಬದುಕಿದರು ಎಂಬ ಸರಳ ಕಾರಣಕ್ಕೆ.

ಅಂತಹ ಸರಳ ಬದುಕಿಗೆ, ಒಬ್ಬ ಪ್ರಾಮಾಣಿಕ ಪತ್ರಕರ್ತನಿಗೆ ಇಂದು ಟಿಎಸ್‍ಆರ್ ಪ್ರಶಸ್ತಿ ದೊರಕಿರುವುದು, ಈ ಹೊತ್ತಿನಲ್ಲಿ ಕದಡಿ ಹೋಗಿರುವ ಮಾಧ್ಯಮದ ಒಳಿತಿಗೆ ದಕ್ಕಿದ ಪುರಸ್ಕಾರವೇ ಸರಿ!

ಆ ನಡುವೆ ಒಂದು ಸ್ವಾರಸ್ಯಕರ ವಿಷಯ ಕೂಡ ನಡೆಯಿತು. ಆ ವಿಷಯವನ್ನು ಇದುವರೆಗೆ ನಾಗೇಶ್‍ ಅವರಿಗೆ ಕೂಡ ನಾನು ಹೇಳಿಲ್ಲ!

ಒಮ್ಮೆ ಅವರು ಯಾವುದೋ ಕಾರಣದಿಂದಾಗಿ ಮೂರ್ನಾಲ್ಕು ದಿನಗಳ ಕಾಲ ಕಚೇರಿಗೆ ಬಂದಿರಲಿಲ್ಲ. ಆ ವಾರದ ವಿಜ್ಞಾನ-ವಿಸ್ಮಯ ಕೂಡ ಅವರು ಬರೆದುಕೊಟ್ಟು ಹೋಗಿರಲಿಲ್ಲ. ಆ ವೇಳೆ ಸಂಪಾದಕೀಯ ಪುಟ ನೋಡಿಕೊಳ್ಳುತ್ತಿದ್ದ ಹಿರಿಯರೊಬ್ಬರು ಮಧ್ಯಾಹ್ನ ಮೂರು ಗಂಟೆಗೆ ನನ್ನನ್ನುಕರೆದು, “ಸಂಜೆ ಆರರೊಳಗೆ ಒಂದು ವಿಜ್ಞಾನ-ವಿಶೇಷ ಬರೆದುಕೊಡಿ” ಎಂದು ಆಜ್ಞೆ ಹೊರಡಿಸಿದರು.

“ಸರ್‍ಅದು ನಾಗೇಶ್ ಕಾಲಂ, ನಾನು ಹೇಗೆ ಬರೆಯೋದು?” ಎಂಬ ಪ್ರಶ್ನೆ ಹಾಕಿದೆ. ಸ್ವಲ್ಪ ಗರಂ ಆದ ಆ ಮಹನೀಯರು, “ನಿಮಗೇನ್ರಿ. ನಾನು ಹೇಳ್ತಾ ಇದೀನಿ. ಬರೆದುಕೊಡಿ” ಎಂದು ಫರ್ಮಾನು ಹೊರಡಿಸಿದರು. ಅನಿವಾರ್ಯವಾಗಿ ವಿಜ್ಞಾನಕ್ಕೆ ಸಂಬಂಧಿಸಿದ ಒಂದು ವಿಷಯ ಹುಡುಕಿ ಬರೆದುಕೊಟ್ಟೆ. ಯಾವ ಕಾರಣಕ್ಕೂ ನಾಗೇಶ್ ಕಾಲಂ ಬದಲು, ನನ್ನ ಲೇಖನ ಬರಕೂಡದು ಎಂಬ ನಿರ್ಧಾರಕ್ಕೆ ಬಂದೇ, ಅತ್ಯಂತ ಕೆಟ್ಟದಾಗಿ ನಾನು ಆ ‘ವಿಜ್ಞಾನ ವಿಶೇಷ’ ಬರೆದುಕೊಟ್ಟಿದ್ದೆ!

ನನ್ನ ಜೀವನದಲ್ಲಿಯೇ ಬರೆದ ಅತ್ಯಂತ ಕೆಟ್ಟ ಬರಹ ಅದಾಗಿತ್ತು. ಅದು ಎಷ್ಟು ಕೆಟ್ಟದಾಗಿತ್ತೆಂದರೆ, ಮರುದಿನ ನನ್ನ ಲೇಖನ ಪ್ರಕಟವಾಗಲಿಲ್ಲ! ಅದೆಷ್ಟುಋಷಿಯಾಯಿತೆಂದರೆ!

‍ಲೇಖಕರು avadhi

May 16, 2017

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

7 ಪ್ರತಿಕ್ರಿಯೆಗಳು

  1. Anonymous

    ಬರೀ ಐನೂರೂ ಚಿಲ್ಲರೆ ಪದಗಳಲ್ಲಿ ಒಂದು ವ್ಯಕ್ತಿಚಿತ್ರವನ್ನು, ಇದಕ್ಕಿಂತ ಆಪ್ತವಾಗಿ ಕಟ್ಟಿಕೊಡಲು ಸಾಧ್ಯವೆ? ಅದಕ್ಕೇ ನನಗೆ ಸತೀಶ್ ಬರಹಗಳ ಬಗ್ಗೆ ಹೊಟ್ಟೆಕಿಚ್ಚು! – Rajaram Tallur

    ಪ್ರತಿಕ್ರಿಯೆ
  2. ಕೊಳ್ಳೇಗಾಲ ಶರ್ಮ

    ಅವರಂತಹ ಮತ್ತೊಬ್ಬ ಲೇಖಕರನ್ನು ಹೆಗಡೆಯವರು ಸೃಷ್ಟಿಸಿಲ್ಲ. ಏಕೆಂದರೆ ಅವರು ಸೃಷ್ಟಿಸಿದ ಪ್ರತಿಯೊಬ್ಬ ಲೇಖಕನಿಗೂ ಮೊದಲ ಪಾಠವಾಗಿ ‘ನನ್ನ ತರಹ’ ಆಗಬೇಡಿ ಅಂತ ಸಲಹೆ ಕೊಡುತ್ತಿದ್ದರು. ನಾವು ಶಿರಸಾ ವಹಿಸಿದ್ದೇವೆ. ಬಹುಶಃ ಸಂಸ್ಥೆಯೊಂದು ಹುಟ್ಟು ಹಾಕದಿದ್ದಷ್ಟು ಲೇಖಕರನ್ನು ಹೆಗಡೆಯವರು ಹಾಗೂ ನವಕರ್ನಾಟಕದ ರಾಜಾರಾಮರು ಸೃಷ್ಟಿಸಿದ್ದಾರೆ. ನಾಗೇಶ ಹೆಗಡೆಯವರಂತೆ ಬರೆಯಲಿಲ್ಲ ಎನ್ನುವುದರಲ್ಲೂ ನಮಗೆ ಖುಷಿ ಇದೆ.

    ಪ್ರತಿಕ್ರಿಯೆ
  3. Anonymous

    ಹೊನ್ನ ಶೂಲ ಅಂದರೆ ಇದೇ ಇರಬೇಕು. ಇರಲಿ ಬಿಡಿ, ಹೊಟ್ಟೆಗೆ ಹಾಕಿಕೊಳ್ತೇನೆ. ಆದರೆ ನಾವೆಲ್ಲ ಸೇರಿ ಕನ್ನಡಕ್ಕೆ ಬರುತ್ತಿರುವ ಭೀಕರ ಭಾಷಾ ಬರಗಾಲವನ್ನು ಎದುರಿಸಲು ತುಸು ತುಸು ಶ್ರಮ ಹಾಕುತ್ತಿರೋಣ. ಸತೀಶ ಚಪ್ಪರಿಕೆ ಅಲ್ಲೆಲ್ಲೆಲ್ಲೋ ಇಂಗ್ಲಿಷ್ ಪತ್ರಕರ್ತರಾಗಲು ಹೋಗಿ ಮರಳಿ ಮನೆಗೆ ಬಂದು ಮತ್ತೆ ಕನ್ನಡದಲ್ಲಿ ಕೈಯಾಡಿಸತೊಡಗಿದ್ದಾರೆ. ಕೊಳ್ಳೇಗಾಲರೇ ನೀವು ನವಕರ್ನಾಟಕದ ರಾಜಾರಾಂ ಅವರನ್ನೂ ನನ್ನನ್ನೂ ಒಂದೇ ತಕ್ಕಡಿಗೆ ಕೂರಿಸಿಬಿಟ್ಟಿರಲ್ಲ.

    ಪ್ರತಿಕ್ರಿಯೆ
    • ಕೊಳ್ಳೇಗಾಲ ಶರ್ಮ

      ಒಂದೇ ತಕ್ಕಡಿಯಲ್ಲಿ ನಿಮ್ಮಿಬ್ಬರನ್ನೂ ತೂಗಲಾಗುವುದಿಲ್ಲ ಬಿಡಿ. ಆದರೆ ನಿಮ್ಮಿಬ್ಬರಿಂದಾಗಿ ಕನ್ನಡ ಸಾಹಿತ್ಯದಲ್ಲಿ ಹಲವು ಹೊಸಬರು ಸೇರ್ಪಡೆಯಾಗಿದ್ದಂತೂ ನಿಜ. ವಿಜ್ಞಾನಕ್ಕೆ ನೀವಿಬ್ಬರೂ ಕೊಟ್ಟ ಒತ್ತು ಬೇರೆಯವರು ಕೊಡಲಿಲ್ಲ. ಇದು ನನ್ನ ಅನುಭವ.

      ಪ್ರತಿಕ್ರಿಯೆ
    • Satish Chapparike

      ಇದು ಅನಾಮಧೇಯ ರೂಪದಲ್ಲಿ ನಾಗೇಶ ಹೆಗಡೆ ಅವರೇ ಬರೆದ ಪ್ರತಿಕ್ರಿಯೆಯೇ?!!?????
      ಖಂಡಿತ ಅಲ್ಲಾ ಎನಿಸುತ್ತಿದೆ.
      ಏಕೆಂದರೆ, ನಾಗೇಶ ಹೆಗಡೆ ಕನಸಿನಲ್ಲಿಯೂ ‘ಕನ್ನಡದಲ್ಲಿ ಕೈಯಾಡಿಸುತ್ತಿದ್ದಾರೆ’ ಎನ್ನುವ ಕೀಳುಮಟ್ಟದ ಪದ ಪ್ರಯೋಗ ಮಾಡುವ ಸಾಧ್ಯತೆಯೇ ಇಲ್ಲ.
      ಇದು ನಾಗೇಶ ಅವರ ಹೆಸರನ್ನು ಬಳಸಿಕೊಂಡು, ಯಾರೋ ಅತ್ಯಂತ ಕೀಳುಮಟ್ಟದ ವ್ಯಕ್ತಿ ಮಾಡಿದ ಪ್ರತಿಕ್ರಿಯೆ ಇರಬೇಕು.
      ಯಾರೇ ಆಗಿದ್ದರೂ ಅವರಿಗೊಂದು ಪ್ರಾಮಾಣಿಕ ಉತ್ತರ.
      “ಸತೀಶ್ ಚಪ್ಪರಿಕೆ ಅಲ್ಲೆಲ್ಲೆಲ್ಲೋ ಇಂಗ್ಲಿಷ್ ಪತ್ರಕರ್ತರಾಗಲು ಹೊಗಿ ಮರಳಿ ಮನೆಗೆ ಬಂದು ಮತ್ತೆ ಕನ್ನಡದಲ್ಲಿ ಕೈಯಾಡಿಸುತ್ತಿದ್ದಾರೆ”
      ಮಹಾಸ್ವಾಮಿಗಳೇ ರಾಷ್ಟ್ರಮಟ್ಟದಲ್ಲಿ ಹೋಗಿ ಕೆಲಸ ಮಾಡುವ ಪ್ರಾಮಾಣಿಕ ಯತ್ನ ಮಾಡಿದೆ. ಆ ಮೂಲಕ ಪತ್ರಕರ್ತನಾಗಿ ಬಹಳಷ್ಟು ಕಲಿತು ಬಂದೆ. ಅದರಲ್ಲಿ ಸಾಕಷ್ಟು ಯಶಸ್ವಿಯಾದ ಮೇಲೆಯೇ ನಾನು ಬೆಂಗಳೂರಿಗೆ ಮರಳಿದ್ದು. ಅದು ಅಂತಹ ಮಹಾನ್, ಘೋರ ಅಪರಾಧ ಅಲ್ಲ ಎಂದುಕೊಂಡಿದ್ದೇನೆ.
      ಇನ್ನು ಮತ್ತೆ ಕನ್ನಡದಲ್ಲಿ ಕೈಯಾಡಿಸುವ ಬಗ್ಗೆ. 23 ವರ್ಷಗಳಷ್ಟು ದೀರ್ಘ ಕಾಲ ಪತ್ರಿಕಾ ವ್ಯವಸಾಯದಲ್ಲಿ ತೊಡಗಿ, ಅತ್ಯಂತ ನೆಮ್ಮದಿಯಿಂದಲೇ ಆ ರಂಗದಿಂದ ಹೊರಬಂದವ ನಾನು. ನನ್ನ ಬರವಣಿಗೆಯ ಬಗ್ಗೆ ನನಗೆ ದುರಹಂಕಾರ ಇಲ್ಲ. ಆದರೆ ಆತ್ಮವಿಶ್ವಾಸವಿದೆ. ಪತ್ರಿಕಾರಂಗದಲ್ಲಿ ಇದ್ದಾಗ ಮತ್ತು ಹೊರಬಂದ ಮೇಲೆ ನನ್ನ ಸ್ಥಾನವನ್ನು ಬಳಸಿಕೊಂಡು ಒಂದು ಬಿಡಿಎ ಫ್ಲಾಟ್ ಅಥವಾ ಸೈಟು ಅಥವಾ ಜಿ-ಕೆಟಗರಿ ಸೈಟು ಅಥವಾ ಯಾವುದೇ ಲಾಭವನ್ನು ಯಾರಿಂದಲೂ ನಾನು ಪಡೆದವನಲ್ಲ. ನಾನು ಪತ್ರಿಕಾರಂಗ ಮತ್ತು ಮಾಧ್ಯಮ ಲೋಕದಿಂದ ದೂರ ಸರಿದು 3 ವರ್ಷಗಳಾಗಿದೆ. ಈ ನಡುವೆ ಒಂದು ವರ್ಷ ಪ್ರಜಾವಾಣಿಯಲ್ಲಿ ‘ಮುಸಾಫಿರ್’ ಅಂಕಣ ಬರೆದಿದ್ದೇನೆ. ಹೆಚ್ಚಿನ ಪಕ್ಷ ನೀವು ಆ ಅಂಕಣ ಬರಹಗಳನ್ನು ಓದಿಲ್ಲ ಎಂದೇ ನನ್ನ ಭಾವನೆ. ಓದಿದ್ದರೆ ಖಂಡಿತ ಈ ಕೀಳು ಮಟ್ಟದ ಪದ ಪ್ರಯೋಗ ಮಾಡುತ್ತಿರಲಿಲ್ಲ. ಕನ್ನಡದಲ್ಲಿ ಬರೆಯುವುದು ನಿಮ್ಮ ದೃಷ್ಟಿಯಲ್ಲಿ ಕೈ ಅಥವಾ ಕಾಲು ಆಡಿಸುವುದಿರಬಹುದು. ನನ್ನ ಪಾಲಿಗೆ ಅದು ಒಂದು ಕರ್ತವ್ಯ. ಹೊಟ್ಟೆಪಾಡಿಗಾಗಿ ಬೇರೊಂದು ಉದ್ಯೋಗದಲ್ಲಿ ತೊಡಗಿರುವ ನಾನು, ನನ್ನ ಆತ್ಮತೃಪ್ತಿಗಾಗಿ ಕನ್ನಡದಲ್ಲಿ ಬರೆಯುತ್ತೇನೆ. ಅಗತ್ಯ ಬಿದ್ದರೆ ಇಂಗ್ಲಿಷ್ನಲ್ಲಿಯೂ ಬರೆಯುತ್ತೇನೆ.
      ಇನ್ನು ನಾಗೇಶ ಹೆಗಡೆ ಅವರ ಬಗ್ಗೆ ನಾನು ಬರೆದ ಈ ವ್ಯಕ್ತಿಚಿತ್ರಕ್ಕೆ ಬಳಸಿದ ಹೆಡ್ಡಿಂಗ್!
      ಬೇರೆಯವರ ಪಾಲಿಗೆ ನಾಗೇಶ ಹೆಗಡೆ ಅವರು ‘ವಿಜ್ಞಾನ- ವಿಸ್ಮಯ’ವಾಗಿರಬಹುದು. ಆದರೆ, ನನ್ನ ಪಾಲಿಗೆ ಅವರು ಆತ್ಮೀಯರು. ಅದೆಲ್ಲವನ್ನೂ ಮೀರಿದವರು. ಆ ಹಿನ್ನಲೆಯಲ್ಲಿಯೇ ‘ಅ-ವಿಜ್ಞಾನ’ ‘ಅ-ವಿಸ್ಮಯ’ ಬಳಸಿದ್ದು.

      ಪ್ರತಿಕ್ರಿಯೆ
  4. ಸುಧಾ ಚಿದಾನಂದಗೌಡ

    ತುಂಬಾ ಆಪ್ತವಾದ ಬರಹ.
    ಇರುವುದೊಂದೇ ಭೂಮಿಯನ್ನು ಓದಿದ ಬಳಿಕ ಕನ್ನಡದಲ್ಲೂ ಸೈನ್ಸ್ ಓದಬಹುದೆಂದು ಅರಿವಾಗಿತ್ತು.
    ಅಭಿನಂದನೆಗಳು- ನಾಗೇಶ್ ಹೆಗಡೆ ಸರ್ ಅವರಿಗೆ.

    ಪ್ರತಿಕ್ರಿಯೆ
  5. D.M.NADAF.

    ನಾಗೇಶ ಹೆಗಡೆ ಕನ್ನಡದ ಸಾಕ್ಷಿಪ್ರಜ್ಞೆ.
    ಅವರು ಈ ನಾಡಿನ ಪರಿಸರ, ಸಂಸ್ಕೃತಿಗಳ ರಕ್ಷಾಕವಚದಂತೆ ನಿಂತವರು.
    ಅಭಿನಂದನೆಗಳು
    ಡಿ.ಎಮ್. ನದಾಫ್ ,ಅಫಜಲಪುರ

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: