ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನಾಗೇಶ್ ಹೆಗಡೆ ಬರೆಯುತ್ತಾರೆ: ವಾರ್ತೆಗಳ ಶೀಲಭಂಗ

-ನಾಗೇಶ ಹೆಗಡೆ

 

ಕೃತಿಗಾಗಿ ಸಂಪರ್ಕಿಸಿ

ಉದಯಭಾನು ಕಲಾಸಂಘ 08026609343

udayabhanu_1965@yahoo.co.in

 

ಮಾಧ್ಯಮ ಕರ್ನಾಟಕ

ಪತ್ರಕರ್ತರ ಇಂದು-ನಾಳಿನ ಸವಾಲುಗಳು

ಪುಟಗಳು 380; ಬೆಲೆ ರೂ. 250.


ಸಂಪಾದಕನ ಮುನ್ನುಡಿ

ಹಿಂದೆಂದೂ ಕಾಣದಷ್ಟು ಚಲನಶೀಲತೆ ಪತ್ರಿಕಾರಂಗದಲ್ಲಿ ಇಂದು ಕಾಣತೊಡಗಿದೆ. ಎಂಭತ್ತರ ದಶಕದಲ್ಲಿ ನಮ್ಮ ದೇಶಕ್ಕೆ ಟಿವಿ, ತೊಂಭತ್ತರ ದಶಕದಲ್ಲಿ ಕಂಪ್ಯೂಟರ್, ನಂತರದ ದಶಕಗಳಲ್ಲಿ ಇಂಟರ್ನೆಟ್, ಮೊಬೈಲ್ ಮುಂತಾದ ಸಂವಹನ ಸಾಧನಗಳು ಬಂದಮೇಲೆ ‘ಪತ್ರಕರ್ತ’ ಎಂಬ ಪದದಲ್ಲಿರುವ ‘ಪತ್ರ’ಕ್ಕೆ ನಾನಾ ರೂಪಗಳು ಬಂದಿವೆ.

ಇದೇ ವೇಳೆಗೆ ಮಾಧ್ಯಮರಂಗವೂ ಬೃಹದಾಕಾರವಾಗಿ ವಿಸ್ತರಿಸಿದೆ. ಟಿವಿ ಚಾನೆಲ್ಗಳು ಹಾಗೂ ಇಂಟರ್ನೆಟ್ ಜಾಲತಾಣಗಳು ಗಂಟೆಗಂಟೆಗೆ, ಅಷ್ಟೇಕೆ ಕ್ಷಣಕ್ಷಣಕ್ಕೂ ಸುದ್ದಿ ನೀಡುತ್ತಲೇ ದಿನದ ವಿದ್ಯಮಾನಗಳನ್ನು ಕುರಿತು ವಿಶ್ಲೇಷಣೆ, ಚರ್ಚೆ, ವಾಗ್ವಾದ, ಜನಾಭಿಪ್ರಾಯ ಸಂಗ್ರಹಣೆ ಮುಂತಾದ ಎಲ್ಲ ಕೆಲಸಗಳನ್ನೂ ಮಾಡುತ್ತ ಮುದ್ರಣ ಮಾಧ್ಯಮಗಳಿಗೂ ಇನ್ನಿಲ್ಲದ ಪೈಪೋಟಿ ಕೊಡತೊಡಗಿವೆ. ಈ ಕಾರಣದಿಂದಾಗಿ ದಿನಪತ್ರಿಕೆಗಳಲ್ಲಿ ಕೆಲಸ ಮಾಡುವವರ ಪಾತ್ರಗಳೂ ಬದಲಾಗಿವೆ. ಒಂದು ಕಡೆ ತಂಗಳು ಸುದ್ದಿಗೇ ಹೊಸರೂಪ ಕೊಟ್ಟು ಬಿಸಿ ಮಾಡಿ ಬಡಿಸಬೇಕು. ಇನ್ನೊಂದು ಕಡೆ ಸುದ್ದಿಗೆ ಸಂಬಂಧಿಸಿದ ಚರ್ಚೆ ವಿಚರ್ಚೆಗಳನ್ನೂ ಕ್ರೋಡೀಕರಿಸಿ ಕೊಡಬೇಕು. ಮಗದೊಂದು ದಿಕ್ಕಿನಲ್ಲಿ ಮ್ಯಾಗಝಿನ್ಗಳ ಪಾತ್ರವನ್ನೂ ನಿಭಾಯಿಸಬೇಕು. ಪತ್ರಿಕಾ ರಂಗದ ಇದುವರೆಗಿನ ರೂಢಿಗತ ಮೌಲ್ಯಗಳನ್ನೂ ಚಾರಿತ್ರ್ಯವನ್ನೂ ಉಳಿಸಿಕೊಂಡೇ ಹೊಸ ಸವಾಲುಗಳಿಗೆ ಒಗ್ಗಿಕೊಂಡು ಮುನ್ನುಗ್ಗಬೇಕು.

ಇವೆಲ್ಲವುಗಳ ನಡುವೆ ಮಾಧ್ಯಮರಂಗ ಎಂಬುದು ವ್ಯಾಪಾರ ಕ್ಷೇತ್ರವಾಗಿ ಬದಲಾಗಿದೆ. ‘ಪತ್ರಿಕೆಯ ಶೇ. 90ರಷ್ಟು ಆದಾಯ ಜಾಹೀರಾತಿನಿಂದಲೇ ಬರುತ್ತಿರುವಾಗ, ನಾವು ನಡೆಸುತ್ತಿರುವುದು ನ್ಯೂಸ್ಪೇಪರ್ ಬಿಸಿನೆಸ್ ಅಲ್ಲ, ಜಾಹೀರಾತು ಬಿಸಿನೆಸ್’ ಎಂದು ‘ಟೈಮ್ಸ್ ಆಫ್ ಇಂಡಿಯಾ’ದ ಮಾಲಿಕ ಸಮೀರ್ ಜೈನ್ ಹೇಳಿದ್ದು ‘ದಿ ನ್ಯೂಯಾರ್ಕರ್’ (8, ಅಕ್ಟೊಬರ್ 2012) ಪತ್ರಿಕೆಯಲ್ಲಿ ವರದಿಯಾಗಿದೆ. ಆದಾಯ ಹೆಚ್ಚಿಸಿಕೊಳ್ಳುವ ಪ್ರವೃತ್ತಿ ಹೆಚ್ಚಿದ ಹಾಗೆಲ್ಲ ಸುದ್ದಿರೂಪದ ಜಾಹೀರಾತುಗಳೂ ಬರತೊಡಗಿದವು. ಹಣಕ್ಕಾಗಿ ಸುದ್ದಿಯನ್ನು ‘ಉತ್ಪಾದಿಸುವ’ ಹಂತವೂ ಬಂತು. ವಾರ್ತೆಗಳ ಶೀಲಭಂಗವಾಗತೊಡಗಿತು. ಸಂಪಾದಕೀಯ ವಿಭಾಗದ ಪಾವಿತ್ರ್ಯವನ್ನು ಕಾಪಾಡಬೇಕಿದ್ದ ಸಂಪಾದಕರು ಮಾಲಿಕರ ಕೈಕೆಳಗಿನ ಹೌದಪ್ಪಗಳಾಗಿ ಫ್ಯಾಕ್ಟರಿ ಮ್ಯಾನೇಜರ್ಗಳಂತೆ ಕೈಕಟ್ಟಿ ನಿಲ್ಲುವ ಪರಿಸ್ಥಿತಿ ಬಂತು. ಫ್ಯಾಕ್ಟರಿಗಳನ್ನು ಕೊಳ್ಳುವಷ್ಟು ಸಲೀಸಾಗಿ ಬಿಸಿನೆಸ್ ಕಂಪನಿಗಳು ಪ್ರಕಾಶನ ಸಂಸ್ಥೆಗಳನ್ನೂ ಚಾನೆಲ್ಗಳನ್ನೂ ಕೊಳ್ಳತೊಡಗಿದವು. ಫ್ಯಾಕ್ಟರಿಯಲ್ಲಿ ತಯಾರಾಗುವ ಗೊಂಬೆಗಳಂತೆ ಸಾಲುಸಾಲಾಗಿ ಶಿಕ್ಷಣ ಸಂಸ್ಥೆಗಳಿಂದ ಹೊರಬರುವ ಯುವ ಪತ್ರಕರ್ತರನ್ನು ಅಷ್ಟೇ ತ್ವರಿತವಾಗಿ ನೇಮಕ ಮಾಡಿಕೊಳ್ಳತೊಡಗಿದವು.

ಸಂಭ್ರಮವೊ, ಸಂಕಟವೊ, ಅಂತೂ ಮಾಧ್ಯಮರಂಗ ಇಂದು ಸಂಧಿಕಾಲದಲ್ಲಿದೆ. ಒಂದು ಸಮಾಜದ ಸಾಕ್ಷಿಪ್ರಜ್ಞೆಯಾಗಿ, ರಾಷ್ಟ್ರದ ಭವಿಷ್ಯವನ್ನು ಉಜ್ವಲಗೊಳಿಸುವ ನಿಟ್ಟಿನಲ್ಲಿ ಜನಾಭಿಪ್ರಾಯವನ್ನು ರೂಪಿಸ ಬೇಕಿದ್ದ ಮಾಧ್ಯಮಗಳು ಕ್ರಮೇಣ ದಿಕ್ಕು ಬದಲಿಸಿಕೊಂಡು ದುಡ್ಡಿದ್ದವರ ಕೈಗೊಂಬೆಯಾಗತೊಡಗಿದಂತೆ ಪತ್ರಿಕೆಗಳು ಭೋಗವಸ್ತುಗಳಾಗತೊಡಗಿವೆ; ಚಾನೆಲ್ಗಳಿಗೆ ರಂಜನೆಯೇ ಪರಮೋದ್ದೇಶವಾಗತೊಡಗಿದೆ. ಸಂವಹನ ತಂತ್ರಜ್ಞಾನ ಎಲ್ಲರ ಕೈಗೆಟಕುವಂತಾಗಿರುವಾಗ ವೈಯಕ್ತಿಕ ನೆಲೆಗಳಲ್ಲಿ ಬದಲೀ ಮಾಧ್ಯಮಗಳೂ ಚಿಗುರತೊಡಗಿವೆ.

ಪತ್ರಕರ್ತರ ಪಾತ್ರ ಪಾವಿತ್ರ್ಯವನ್ನು ನೆನಪಿಸಲು ಇದು ಪ್ರಶಸ್ತ ಸಮಯ ವೆಂದರಿತ ‘ಉದಯಭಾನು ಕಲಾಸಂಘ’ ಬೇರೆ ಬೇರೆ ಮಾಧ್ಯಮಗಳಲ್ಲಿ ಕೆಲಸ ಮಾಡುತ್ತಿರುವ ಅನುಭವಿ ಪತ್ರಕರ್ತರ ನೆರವಿನಿಂದ ಈ ಗ್ರಂಥವನ್ನು ರೂಪಿಸುವ ಕೆಲಸವನ್ನು ನನಗೆ ಒಪ್ಪಿಸಿದೆ. ಪತ್ರಿಕೋದ್ಯೋಗದಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕೆಂಬ ತುಡಿತವಿರುವ ಎಳೆಯರಿಗೆ, ಜರ್ನಲಿಸಂ ಶಿಕ್ಷಕರಿಗೆ ಹಾಗೂ ಫ್ರೀಲಾನ್ಸ್ ಉತ್ಸಾಹಿಗಳಿಗೆ, ಅಷ್ಟೇಕೆ ಮಾಧ್ಯಮಗಳಲ್ಲಿ ಕೆಲಸ ಮಾಡುತ್ತಿರುವವರಿಗೂ ಇದೊಂದು ಉತ್ತಮ ಆಕರಗ್ರಂಥವಾದೀತೆಂಬ ಆಶಯ ಇಲ್ಲಿನದಾಗಿದೆ. ಇದು ಸಮಗ್ರವೆಂದೇನೂ ಹೇಳುವಂತಿಲ್ಲವಾದರೂ ಪ್ರಚಲಿತ ಎಲ್ಲ ಮಾಧ್ಯಮಗಳ ಸ್ಥೂಲ ಪರಿಚಯ ಇಲ್ಲಿದೆ. ಇಂದಿನ ಪತ್ರಿಕೋದ್ಯಮದ ಸಬಲೀಕರಣಕ್ಕೆ ಅಗತ್ಯವೆನಿಸಿದ ಮಾಹಿತಿ ಹಕ್ಕು, ಕೃಷಿ, ಹವ್ಯಾಸಿ ವರದಿಗಾರಿಕೆ, ಪರಿಸರ ಮುಂತಾದ ವಿಷಯಗಳನ್ನು ಸಾಕಷ್ಟು ವಿಸ್ತೃತವಾಗಿ ಚರ್ಚಿಸಲಾಗಿದೆ.

ತಮ್ಮ ಬಿಡುವಿಲ್ಲದ ಡೆಡ್ಲೈನ್ಗಳ ನಡುವೆಯೂ ಲೇಖನಗಳನ್ನು ನೀಡಿ ಸಹಕರಿಸಿದ ಎಲ್ಲ ಪತ್ರಕರ್ತಮಿತ್ರರಿಗೆ, ರಕ್ಷಾಪುಟಗಳನ್ನು ರೂಪಿಸಿದ ಕಲಾವಿದ ಪ.ಸ. ಕುಮಾರ್ ಅವರಿಗೆ ಹಾಗೂ ನನ್ನ ಕೆಲಸದಲ್ಲಿ ನೆರವಿಗೆ ನಿಂತ ಯುವ ಪತ್ರಕರ್ತ ಮುರಳೀಕೃಷ್ಣ ಬೆಳಾಲು ಮತ್ತು ಅನಿತಾರಿಗೆ ನನ್ನ ಧನ್ಯವಾದಗಳು. ಈ ಸಂಕಲನದ ವಿಷಯವ್ಯಾಪ್ತಿ ಕುರಿತು ಚರ್ಚಿಸಿ ಸಲಹೆ ನೀಡಿದ ಹಿರಿಯ ಪತ್ರಕರ್ತ ಎಸ್.ವಿ. ಜಯಶೀಲ ರಾಯರಿಗೆ ವಿಶೇಷ ವಂದನೆಗಳು. ಲೇಖನಗಳ ಎಡಿಟಿಂಗ್ ಹಾಗೂ ಮುದ್ರಣಪೂರ್ವ ತಯಾರಿಯ ಹಂತದಲ್ಲಿ ನನಗೆದುರಾದ ಸಾಫ್ಟ್ವೇರ್ ಸಮಸ್ಯೆಗಳನ್ನು ಪರಿಹರಿಸಿ ಅಂದವಾಗಿ ಮುದ್ರಿಸಿಕೊಟ್ಟ ‘ಇಳಾ ಮುದ್ರಣ’ದ ಗುರು ಮತ್ತು ಮಳಲಿಗೌಡರಿಗೂ ಸಂಘದ ಪರವಾಗಿ ಕೃತಜ್ಞತೆಗಳು.

ಎಲ್ಲಕ್ಕಿಂತ ಮುಖ್ಯವಾಗಿ ನೆನೆಯಬೇಕಿದ್ದುದು ‘ಉದಯಭಾನು ಕಲಾಸಂಘ’ವನ್ನು. ಶಿಕ್ಷಣ ಮತ್ತು ಸಾಮಾಜಿಕ ಕೆಲಸಗಳಲ್ಲಿ ನಿಸ್ವಾರ್ಥ ಮನೋಭಾವದಿಂದ ತೊಡಗಿಕೊಂಡ ಸಹೃದಯಿಗಳ ಸಂಘ ಇದು. ಸ್ವತಃ ಪತ್ರಕರ್ತರಲ್ಲದಿದ್ದರೂ ಈ ವೃತ್ತಿಯ ಬಗ್ಗೆ ವಿಶೇಷ ಆಸಕ್ತಿ ತಳೆದು ಪುಸ್ತಕವನ್ನು ರೂಪಿಸುವ ಕೆಲಸವನ್ನು ನನಗೊಪ್ಪಿಸಿದ್ದೂ ಅಲ್ಲದೆ, ಈ ಕೆಲಸದ ಬಗ್ಗೆ ನನಗಿಂತ ಹೆಚ್ಚಿನ ಉತ್ಸಾಹ ಮತ್ತು ಮುತುವಜರ್ಿ ವಹಿಸಿ ಕಾಲಕಾಲಕ್ಕೆ ಪ್ರಗತಿಯನ್ನು ವಿಚಾರಿಸುತ್ತ ಬಂದ ಎಮ್. ನರಸಿಂಹ ಹಾಗೂ ಉದಯಭಾನು ಉನ್ನತ ಶಿಕ್ಷಣ ವಿಭಾಗದ ಮುಖ್ಯಸ್ಥರಾಗಿರುವ ಭೌತವಿಜ್ಞಾನಿ ಪ್ರೊ. ಎಚ್.ಆರ್.ರಾಮಕೃಷ್ಣರಾವ್ ಇಬ್ಬರಿಗೂ ನಾನು ಋಣಿಯಾಗಿದ್ದೇನೆ.

 

ಬೆಂಗಳೂರು

15 ಅಕ್ಟೋಬರ್, 2012

 

 

 

‍ಲೇಖಕರು G

16 December, 2012

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading