ಮರುಭೂಮಿಯ ಹೂ..

 

 

 

 

 

 

 

 

ಜಗದೀಶ ಕೊಪ್ಪ

ಗೆಳೆಯರೇ, ಇಂದು ಬೆಳಗಿವ ಜಾವ ನಾಲ್ಕು ಗಂಟೆಯಿಂದ ಏಳು ಗಂಟೆ ಇಪ್ಪತ್ತು ನಿಮಿಷದವರೆಗೆ ವಾರಿಸ್ ಡೆರಿಸ್ ಳ ಆತ್ಮಕಥನ ” ಮರುಭೂಮಿಯ ಹೂ” ಬರೆದು ಮುಗಿಸಿದಾಗ ಮನಸ್ಸು ನಿರಾಳವಾಯಿತು. ಆದರೆ ಎದೆಯ ಭಾರ ಮಾತ್ರ ಇಳಿಯಲಿಲ್ಲ. ಏಳು ವರ್ಷದ ಹಿಂದೆ ಧಾರವಾಡದ ಬೇಂದ್ರ ಟ್ರಸ್ಟ್ ನೀಡಿದ್ದ ಫೇಲೊಶಿಪ್ ಯೋಜನೆಯಡಿ ” ಕುವೆಂಪು-ಬೇಂದ್ರೆ ಕವಿತೆಗಳ ತೌಲನಿಕ ಅಧ್ಯಯನ ಕೈಗೊಂಡಿದ್ದ ಸಮಯದಲ್ಲಿ ಬೇಂದ್ರೆಯವರ ಶ್ರಾವಣದ ಮಳೆಕುರಿತು ಬರೆಯುವಾಗ ನಾನು ಇಂತಹದ್ದೇ ಸಂಕಟವನ್ನು ಅನುಭವಿಸಿದ್ದೆ.

ಬೇಂದ್ರೆಯವರಿಗೆ ಶ್ರಾವಣದ ಮಳೆ ಕುರಿತು ಎಂತಹ ವ್ಯಾಮೋಹ ಇತ್ತೆಂದೆರೇ, ತಮ್ಮ ಪತ್ನಿ ಲಕ್ಷ್ಮಿಬಾಯಿ ತೀರಿ ಹೋದಾಗ ಅವರು ಹೀಗೆ ದಾಖಲಿಸುತ್ತಾರೆ.

ತವರು ಮನಿಗೆ ಹೊಂಡೊ

ಸಡಗರವೇ ಸಡಗರ

ಮಲ್ಲಿಗಿ ಮಾಲಿ ತುರುಬಿಗೆ

ಅರಿಶಿಣಾ ಕುಂಕುಮ ಗಲ್ಲಾ, ಹಣೀ

ಹೊಸಾ ಸೀರಿ, ತುಂಬಿದ ಉಡಿ

ಉರಿಯ ಹಸಿಮಣೀಗೆ ಹೊರಟಿತ್ತು ಸವಾರಿ

ಶ್ರಾವಣಕ್ಕೆ ಹೊಸ ಹರೆಯ.

ಅಗ್ನಿ ಚಿತೆಗೆ ಅವರು ಉರಿಯೊ ಹಸಿಮಣಿ ಎಂದು ಬರೆದದ್ದು, ಸಂಗಾತಿಯ ಸಾವಿನ ಸಂದರ್ಭದಲ್ಲಿ ಅವರ ಎದೆಯೊಳಗೆ ಕವಿತೆ ಹುಟ್ಟಿದ್ದನ್ನು ಕಂಡು ನಾನು ಈ ಸಾಲುಗಳನ್ನು ದಾಖಲಿಸುವಾಗ ಮನಸಾರೆ ಅತ್ತಿದ್ದೆ. ಅಂತಹದ್ದೇ ಸನ್ನಿವೇಶ ವಾರೀಸ್ ಳ ಆತ್ಮ ಕಥನ ದಾಖಲಿಸುವಾಗ ಎದುರಾಯಿತು.

ಅಕ್ಷರದಲ್ಲಿ ಹಿಡಿದಿಡಲಾಗದ, ಮುಜುಗರದ ಸಂಗತಿಗಳನ್ನು ಅವಳು ದಾಖಲಿಸಿರುವ ಪರಿ ಆಶ್ಚರ್ಯವಾಗುತ್ತದೆ. ನಾಲ್ಕು ವರ್ಷದ ಬಾಲಕಿಯಾಗಿದ್ದಾಗ ಅವಳ ಮೇಲೆ ನಡೆದ ಅತ್ಯಾಚಾರವನ್ನು ವಾರೀಸ್ ಹೀಗೆ ದಾಖಲಿಸುತ್ತಾಳೆ.

‘ ಅದೊಂದು ದಿನ ಸಂಜೆ ಅಪ್ಪನ ಗೆಳಯ ಗುಬಾನ್ ಎಂಬಾತ ಮನೆಗೆ ಬಂದಿದ್ದ. ಸಂಜೆಯಾಗಿ ಆಕಾಶದಲ್ಲಿ ನಕ್ಷತ್ರಗಳು ಮಿನುಗಲು ಶುರುವಾಗುತಿದ್ದಂತೆ ಅಮ್ಮ , ಕುರಿ,ಮೇಕೆಗಳನ್ನು ಕೊಟ್ಟಿಗೆಗೆ ಕೂಡಿ ಹಾಕಲು ತಿಳಿಸಿದಳು. ಬಯಲಿನಲ್ಲಿ ಇದ್ದ ಅವುಗಳನ್ನು ಮನೆಯತ್ತ ಕರೆತರಲು ನಾನು ಹೋದಾಗ, ಹೊರಗೆ ಕುಳಿತಿದ್ದ ಅಪ್ಪನ ಗೆಳೆಯ ನನ್ನ ಹಿಂದೆಯೇ ಬಯಲಿಗೆ ನನಗೆ ನೆರವಾಗುವನಂತೆ ಬಂದ.`

ತನ್ನ ಅಂಗಿಯ ಮೇಲಿದ್ದ ಕೋಟನ್ನು ಬಿಚ್ಚಿ ಮರಳಿನ ಮೇಲೆ ಹರಡಿ ಅದರ ಮೇಲೆ ಕುಳಿತ. ನನಗೆ ಕಥೆ ಹೇಳುತ್ತೇನೆ ಬಾ ಎಂದು ಕರೆದು ಪಕ್ಕದಲ್ಲಿ ಕೂರಿಸಿಕೊಂಡ. ಕತೆ ಕೇಳುವ ಆಸೆಯಿಂದ ಅವನ ಪಕ್ಕ ಹೋಗಿ ಕುಳಿತಾಗ ಆತ ನನ್ನನ್ನು ಬಲವಾಗಿ ಹಿಡಿದು ಅಪ್ಪಿಕೊಂಡಾಗ ನಾನು ಭಯ ಭೀತಳಾಗಿ ಎದ್ದು ಹೊರಡಲು ಅನುವಾದೆ. ನಕ್ಷತ್ರಗಳ ಕುರಿತು ಚೆಂದದ ಕತೆ ಹೇಳುತ್ತೀನಿ ಎಂದು ನಟಿಸುತ್ತಾ ನನ್ನನ್ನು ಅಂಗಾತ ಮಲಗಿಸಿದ. ಕತೆ ಹೆಳವವನಂತೆ ನಟಿಸುತ್ತಾ ಅವನು ಮುಖವನ್ನು ಹತ್ತಿರ ತಂದಾಗ, ತೊಡೆಗಳ ನಡುವೆ ಯೋನಿಗೆ ಏನೋ ಬಲವಾಗಿ ಒತ್ತಿದಂತಾಗಿ ನಂತರ ಕೆಟ್ಟ ವಾಸನೆಯುಳ್ಳ ಬಿಸಿ ದ್ರವ ಸ್ಖಲಿಸಿದಂತಾಯಿತು. ನಾನು ಗಾಬರಿಯಿಂದ ಕಿರಿಚಿಗೊಂಡು ತೊಡೆಗಳ ನಡುವಿನ ತೇವವನ್ನು ಲಂಗದಲ್ಲಿ ಒರೆಸಿಕೊಳ್ಳುತ್ತಾ ಮನೆಯ ಮುಂದೆ ಬೆಂಕಿ ಹಾಕಿಕೊಂಡು ಕುಳಿತಿದ್ದ ಅಮ್ಮನ ಬಳಿಗೆ ಓಡಿ ಹೋದೆ.ಏನೂ ಆಗದವನಂತೆ ನನ್ನ ಹಿಂದೆಯೇ ಬಂದ ಆತ ಅಮ್ಮನಿಗೆ” ವಾರೀಸ್ ನನ್ನ ಕತೆ ಕೇಳಿ ಗಾಬರಿಯಾದಳು ಎಂದು ಸಮಜಾಯಿಸಿನೀಡಿದ. ಆದರೇ, ನನಗಾಗಿದ್ದ ಆ ಆಘಾತವನ್ನು ಅಮ್ಮನಿಗೆ ಶಬ್ದಗಳಲ್ಲಿ ಹಿಡಿದಿಟ್ಟು ಹೇಳಲಾಗದ ವಯಸ್ಸು ಮತ್ತು ಅಸಹಾಯಕತೆ ಎರಡೂ ನನ್ನದಾಗಿತ್ತು.”

ಗಳೆಯರೇ ಈ ಕಥನವನ್ನು ಮುಂದಿನ ತಿಂಗಳಿನಿಂದ ಪ್ರಸಿದ್ದ ಪತ್ರಿಕೆಯೊಂದರಲ್ಲಿ ಧಾರವಾಹಿಯಾಗಿನೀವು ಓದಬಹುದು.

 

‍ಲೇಖಕರು G

December 16, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

9 ಪ್ರತಿಕ್ರಿಯೆಗಳು

  1. Vinaya

    ಇದು ಕನ್ನದದಲ್ಲಿ ಹಿಂದೆಯೇ ಬಂದಿದೆ. ಶಾಂತರಸ ಅವರ ಮಗಳು ಆ ಅನುವಾದವನ್ನು ಮಾದಿದ್ದರು. ಹೆಸರು ” ಮರಳುಗಾಡಿನ ಕುಸುಮ” . ತುಂಬ ಚೆನ್ನಾಗಿ ಮಾಡಿದ್ದಾರೆ.

    ಪ್ರತಿಕ್ರಿಯೆ
  2. jagadishkoppa

    ನವೀನ್ ದಯವಿಟ್ಟ ಕೃತಿಯ ಬಗ್ಗೆ ಮಾಹಿತಿ ಕೊಡುತ್ತೀರಾ? ಏಕೆಂದರೇ ಕಳೆದ ತಿಂಗಳು ಎಲ್.ಸಿ. ಸುಮಿತ್ರಾ ಅವರು ಇದನ್ನು ಪಾರ್ವತಿ ಎಂಬುವರು ಮಾಡಿದ್ದಾರೆ. ಎಂದಿದ್ದರು. ನೀವು ಮುಕ್ತಾಯಕ್ಕನ ಹೆಸರು ಹೇಳುತಿದ್ದೀರಿ. ಪ್ರಕಾಶಕರ ಹೆಸರು ತಿಳಿಸಿ ಸಾಕು.ನಾನೇ ಪತ್ತೆ ಹಚ್ಚುತ್ತೇನೆ. ನವೀನ್ ಅವರೇ, ಯಾವುದೆ ಒಂದು ಕೃತಿ ಕನ್ನಡಕ್ಕೆ ಬಂದಮೇಲೆ ಮತ್ತೇ ಬರಬಾರದು ಎಂಬ ನಿಯಮವಿಲ್ಲ. ಉಮರ ಖಯ್ಯಾಮನ ಕವಿತೆಗಳನ್ನು ಆರು ಮಂದಿ ಅನುವಾದ ಮಾಡಿದ್ದರೂ ಸಹ ನಾನು ಏಳನೇಯವನಾಗಿ ಅನುವಾದ ಮಾಡಿದೆ. ಅದು ನನಗೆ ಹೆಸರು ತಂದುಕೊಟ್ಟ ಕೃತಿ ಕೂಡ ಹೌದು.
    ಜಗದೀಶ್ ಕೊಪ್ಪ

    ಪ್ರತಿಕ್ರಿಯೆ
  3. D.Ravivarma

    ಸರ್, ನಮಸ್ಕಾರ…
    ನಿಮ್ಮ ಅನುವಾದದ ಕತೆ ಓದಿ ಮೈ ಜುಮ್ಮೆಂದಿತು ..
    ಪುರುಶರಲ್ಲಿಯ ರಾಕ್ಷಸತನ ದ ಬಗ್ಗೆ ತಿಳಿಯುತ್ತ ಹೋದಂತೆ ಮೈ ಬೆವರಿಳಿಯಿತು…
    ಯಾರೇ ಅನುವಾದ ಮಾಡಿರಲಿ…. ನಿಮ್ಮ ಅನುವಾದ ಒಂದು ಆರ್ದ್ರತೆ ಯಿಂದ ಕುದಿರುತ್ತೆ…
    ಹಾಗೆ ನೋಡಿದ್ರೆ ನಮ್ಮಲ್ಲಿ ಮಹಾಭಾರತ,ರಾಮಾಯಣ ಅದೆಸ್ತು ಬರಹಗಾರರು ಬರೆದಿಲ್ಲ…
    ಒಬ್ಬೊಬ್ಬ ಬರಹಗಾರರ ದ್ರುಸ್ತಿಕೋನ ,ಗ್ರಹಿಕೆ, ಮತ್ತು ಅದನ್ನು ಬರೆಯುವ ಬಾಷೆ ,ಹೇಳುವ ರೀತಿ ಬೇರೆ ಬೇರೆ ಯಾಗಿರುತ್ತೆ…
    ನಿಮ್ಮ ಮುಂದಿನ ಬರಹದ ನಿರೀಕ್ಷೆಯಲ್ಲಿ…..

    ರವಿವರ್ಮ ಹೊಸಪೇಟೆ

    ಪ್ರತಿಕ್ರಿಯೆ
  4. ಆನಂದತೀರ್ಥ ಪ್ಯಾಟಿ

    ‘ಮರಳುಗಾಡಿನ ಕುಸುಮ’ ಕೃತಿಯ ಆಯ್ದ ಭಾಗಗಳನ್ನು ಹಿರಿಯರಾದ ಅರುಣ ನಾರಾಯಣ ಅವರು ‘ಕಸ್ತೂರಿ’ಯಲ್ಲಿ ‘ಪುಸ್ತಕ ವಿಭಾಗ’ದಲ್ಲಿ ಪ್ರಕಟಿಸಲು ನಿರ್ಧರಿಸಿದರು. ಡಿಟಿಪಿ ಮಾಡಿದ ಬಳಿಕ ಪ್ರೂಫ್ ನೋಡಲು ಅವರು ಅದನ್ನು ನನಗೆ ಕೊಟ್ಟಿದ್ದರು. ಓದುತ್ತಿದ್ದಂತೆಯೇ ಅಘಾತ, ತಲ್ಲಣ, ಕಸಿವಿಸಿ ಎಲ್ಲ ಅನುಭವಿಸಿದ್ದೆ.

    ಪ್ರತಿಕ್ರಿಯೆ
  5. CHANDRASHEKHAR VASTRAD

    ಭಾರತಿ ಅವರು ರೀಡರ್ಸ ಡೈಜೆಸ್ಟ್ ನಲ್ಲಿ ಬಂದ ಲೇಖನದ ಅನುವಾದ ಮಾಡಿರುವರೆ ವಿನಹ ಸಂಪೂರ್ಣ ಆತ್ಮ ಕಥೆಯಲ್ಲ.ಕೊಪ್ಪ ಅವರ ಅನುವಾದ ನೋಡಲು ಕಾದಿರುವೆ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: