ನಾಗರೇಖಾ ಗಾಂವಕರ ಓದಿದ ‘ವಿಧಾನಸಭೆಯಲ್ಲೊಂದು ಹಕ್ಕಿ’

ನಾಗರೇಖಾ ಗಾಂವಕರ

ವಿಶಿಷ್ಟ ಕವಿಯೂ, ಕಥೆಗಾರರು, ಶ್ರೇಷ್ಠ ಅನುವಾದಕರೂ, ವಿಮರ್ಶಕರೂ ಆಗಿರುವ ಎಸ್. ದಿವಾಕರ್ ಅವರದು ಅಸಾಧಾರಣ ಪ್ರತಿಭೆ. ಜಾಗತಿಕ ಸಾಹಿತ್ಯದ ಆಳವಾದ ಅಧ್ಯಯನದ ಫಲವಾಗಿ ಸಾಂಸ್ಕೃತಿಕ ಬಹು ಹಿನ್ನೆಲೆಗಳ ಅರಿವಿರುವ ಎಸ್. ದಿವಾಕರ ಅವರ ಕಾವ್ಯದಲ್ಲಿ ನಿತ್ಯ ಭಾಷೆಗೆ ಕೊಂಚ ಭಿನ್ನವಾದ ಹೊಸತನ ಕಾಣುತ್ತದೆ, ಅವರು ತಮ್ಮ ಕಥೆ, ಕಾವ್ಯ, ಲೇಖನಗಳಲ್ಲಿ ತಮ್ಮ ಅಪರಿಮಿತವಾದ ವಿದ್ವತ್ತು ಮತ್ತು ಅನುಭವ ನಿಷ್ಢತೆಯನ್ನು ಪಾಕದಂತೆ ಬಳಸಿಕೊಂಡವರು.

ಅವರ ಹೊಸ ಕವನ ಸಂಕಲನ ‘ವಿಧಾನಸಭೆಯಲ್ಲೊಂದು ಹಕ್ಕಿ’ ಓದುಗನಿಗೆ ಅಪರಿಚಿತ ಸಂಗತಿಗಳ ಹಾಗೂ ರೂಪಕಗಳ ಮೂಲಕ ಪರಿಚೀತಾ ವಿದ್ಯಮಾನಗಳಲ್ಲಿಯ ಲೋಪಗಳನ್ನು, ದುರಂತಗಳನ್ನು ತೆರೆದು ತೋರುತ್ತಾರೆ.

‘ಮದರಾಸಿನಲ್ಲೊಂದು ಮುಂಜಾವು ಎದುಸಿರುಬಿಟ್ಟಾಗ
ಬಿಲದಿಂದ ಗಾಳಿಯನರಸಿ ಹೊರಬಂದ ಇಲಿಯೊಂದು
ಅತ್ತಿತ್ತ ತಲೆಯಾಡಿಸುತ್ತ ದಶದಿಕ್ಕುಗಳ ಮೂಸುತ್ತ
ಹತ್ತು ಹೆಜ್ಜೆಗೊಮ್ಮೆ ನಿಂತು ತಡವರಿಸುತ್ತ
ಕಡೆಗೂ ಸೇರಿತೊಂದು ರಾಜಮಾರ್ಗ’

ಇವು ‘ಏನರ್ಥವಿದಕ್ಕೆಲ್ಲ?’ ಕವಿತೆಯ ಸಾಲುಗಳು. ರಸ್ತೆಗೆ ಆಕಸ್ಮಿಕವಾಗಿ ಬಂದಿಳಿದ ಇಲಿಯ ಪಾಡನ್ನು ಕವಿ ವರ್ಣಿಸಿರುವ ವ್ಯಂಗ್ಯೋಕ್ತಿಯಲ್ಲೇ ಗಮನಿಸಿ. ಅಷ್ಟೇ ಆಗದೆ ಒಣಗಿ ಸುರುಳಿಯಂತಾದ ಈ ಇಲಿ ರೇಶಿಮೆ ಸೀರೆ ಉಟ್ಟು, ಬೆಳ್ಳಿಗೆಜ್ಜೆ ಧರಿಸಿದ ಧಡೂತಿ ಕಾಲಿಗೆ ಸಿಕ್ಕು ಉರುಳುರುಳಿ ಗಟಾರಕ್ಕೆ ಬಿತ್ತೆಂದು ಇದಕ್ಕೆಲ್ಲ ಅರ್ಥವೇನೆಂದು? ಕವಿ ಪ್ರಶ್ನಿಸುತ್ತಲೇ, ವಿವೇಕವುಳ್ಳ ಮನುಷ್ಯ ಲೋಕದಲ್ಲಿ ಹಿಂಸೆ ಮತ್ತು ಆದಿಮ ಪ್ರಾಣಿಗಳೆಡೆ ಆತನ ನಿರ್ಲಕ್ಷ್ಯತನವನ್ನು ಪ್ರಶ್ನಿಸುತ್ತಾರೆ.

‘ಚೀನಾದಲ್ಲಿ ಒಬ್ಬ ರಾಜ ಇದ್ದನಂತಲ್ಲ
ಅವನಿಗೆ ಪಾರಿವಾಳಗಳೆಂದರೆ ಪಂಚಪ್ರಾಣ
ಹೊಸವರ್ಷ ಪ್ರಾರಂಭವಾದ ದಿನ ಅವನು
ಅರಮನೆಯ ಉಪ್ಪರಿಗೆಯಿಂದ ಹಾರಿಸಿಬಿಡುತ್ತಿದ್ದ
ಸಹಸ್ರ ಸಹಸ್ರ ಪಾರಿವಾಳಗಳನ್ನು

ಅವನ ಸಂಭ್ರಮಕ್ಕೆಂದೆ ಆ ದೇಶದ ಜನರು
ವರ್ಷವಿಡೀ ಊರು ಕೇರಿ ಕಾಡು ಮೇಡು ಅಲೆದು ಬಲೆಬೀಸಿ
ಒಂದೂ ಪಾರಿವಾಳವನ್ನೂ ಬಿಡದೆ ಹಿಡಿದು ಪಂಜರಗಳಿಗೆ
ತಂದೊಪ್ಪಿಸುತ್ತಿದ್ದರು.
ರಾಜನ ಕೈಯಿಂದ ಹಾರಿಹೋಗುತ್ತಿದ್ದ ಪಾರಿವಾಳಗಳಿಗೆ
ಹೋಲಿಸಿದರೆ ಸೆರೆಸಿಕ್ಕಾಗ ಕುತ್ತಿಗೆಯೋ ಕಾಲೋ ರೆಕ್ಕೆಯೋ
ಮುರಿದು ಸಾಯುತ್ತಿದ್ದ ಪಾರಿವಾಳಗಳ ಸಂಖ್ಯೆ?’

‘ಬಿಡುಗಡೆ’ಕವಿತೆಯ ಸಾಲುಗಳಿವು. ಸಹಬಾಳ್ವೆಯ ತತ್ವವನ್ನು ಮರೆತು ವಿಧ್ವಂಸಕ ಆಧುನಿಕ ಬದುಕನ್ನು ಕಟ್ಟಿಕೊಳ್ಳುತ್ತಿರುವ ಮನುಷ್ಯನ ಶ್ರೇಷ್ಠತೆಯ ವ್ಯಸನವನ್ನು, ಅದರ ಕೇಡನ್ನು ಅನುಭವಿಸುತ್ತಿರುವ ಪ್ರಕೃತಿಯ ಇತರ ಜೀವಿಗಳ ಪಾಡನ್ನು ಕವಿ ಹೇಳುವ ರೀತಿಯಿಂದ ಮನಃ ಕಲಕುತ್ತದೆ. ಸೂಕ್ಷ್ಮ ಮನಸ್ಸುಗಳನ್ನು ತಲ್ಲಣಿಸುವಂತಹ ಇಂತಹ ಪದ್ಯಗಳು ಈ ಸಂಕಲನದ ವಿಶೇಷವೆಂದೇ ಹೇಳಬೇಕು.

ಕವಿತೆ ಇಲ್ಲಿಗೇ ಮುಗಿಯದೇ ‘ಹಯ್ಯೋ, ಅದೇನು ಬಿಡಿ ಜುಜುಬಿ’ ಎನ್ನುವಲ್ಲಿ ಚರಿತ್ರೆಯ ಪಾತ್ರವೊಂದರ ಮುಖಾಂತರ ಮನುಷ್ಯನ ವಿಲಾಸಕ್ಕೆ, ನಿಸರ್ಗದ ಇತರ ಜೀವಿಗಳ ಬದುಕು ಸಂಕಟಮಯ, ಜೀವಘಾತಕ್ಕೆ ಬಲಿಯಾಗುತ್ತಿದೆ ಎಂಬ ಕಳಕಳಿಯನ್ನು ಬಿಂಬಿಸುತ್ತಾ, ಮನುಕುಲದ ಕೌರ್ಯವನ್ನು, ಭೋಪರಾಕ್ ಸಂಸ್ಕೃತಿಯ ಹೀನ ವ್ಯಸನವನ್ನು ದಾಖಲಿಸುತ್ತಾರೆ.

ನಿರ್ಲಿಪ್ತತೆಯಲ್ಲಿ ಸಾರ್ವತ್ರಿಕವಾದ ಸಂಗತಿಗಳೆಡೆಗೆ ಯೋಚಿಸುವಂತೆ ಮಾಡುವುದು ಕಾವ್ಯದಲ್ಲಿ ಬಹುಮುಖ್ಯವಾದದ್ದು. ಅದು ಇಲ್ಲಿಯ ಕವಿತೆಗಳಲ್ಲಿ ಲಭಿಸುತ್ತದೆ.
‘ಪ್ರೊಕ್ರೊಸ್ಟೆಸ್ ಮಂಚ, ಎಂಥ ಸತ್ಪರಿಮಾಣ
ಮನುಷ್ಯನಾಗುವುದಕ್ಕೆ ಪರಿಪೂರ್ಣ
ಇದ್ದರೆಷ್ಟು ಚೆನ್ನ ಎಲ್ಲರೂ ಒಂದೇ ರೀತಿ
ಅದಕ್ಕೆ ಬೇಕೇಬೇಕು ಹಲವರ ಆಹುತಿ’.

‘ಪ್ರೊಕ್ರೊಸ್ಟೆಸ್ ಮಂಚ’ ಕವಿತೆಯಲ್ಲಿ ಗ್ರೀಕ ದಂತಕತೆಯಲ್ಲಿ ಬರುವ ಪ್ರೊಕ್ರೊಸ್ಟೆಸ್ ಎಂಬ ದರೋಡೆಕೋರ ತಾನು ಸೆರೆಹಿಡಿದವರನ್ನು ತನ್ನಲ್ಲಿದ್ದ ಮಂಚದ ಅಳತೆಗೆ ಸರಿತೂಗಿಸಲು ಪ್ರಯತ್ನಿಸುತ್ತಿದ್ದನಂತೆ. ಹಿಂದೆ ಮುಂದೆ ಎಳೆದು ಇಲ್ಲವೇ ಕತ್ತರಿಸಿ, ಆ ಕ್ರಿಯೆಯಲ್ಲಿ ಯಾರೊಬ್ಬರೂ ಬದುಕಿರದೆ ಸತ್ತು ಹೋಗುತ್ತಿದ್ದರಂತೆ. ಪಾಶ್ಚಾತ್ಯ ದಂತಕತೆಯ ಪಾತ್ರದ ಮೂಲಕ ಸಮಕಾಲೀನ ವ್ಯವಸ್ಥೆ ಎಷ್ಟು ಸಂಘರ್ಷಮಯವಾಗಿದೆ, ಹಿಂಸೆಯನ್ನು ಪ್ರಚೋದಿಸುತ್ತಿದೆ ಎಂಬುದನ್ನು ಕಟ್ಟಿಕೊಡುತ್ತಾರೆ.

‘ದೇವಾಲಯ- ವಧಾವಲಯ’ ಕವಿತೆ ಕಾಂಬೋಡಿಯಾದ ಜಗದ್ವಿಖ್ಯಾತ ವಿಷ್ಣು ದೇವಾಲಯದ ಸ್ವರ್ಗ ಸಮಾನಸೊಬಗು, ಅನತಿ ದೂರದಲ್ಲಿ ಇರುವ ಬಾಯೋನ್‌ನಲ್ಲಿ ಕಾಣುವ ನಗುಹೊತ್ತ ಬೃಹತ್ ಶಿಲಾಮುಖಗಳು ಒಂದೆಡೆಯಾದರೆ, ಪೋಲ್ಪೋಟ್ ಎಂಬ ಸರ್ವಾಧಿಕಾರಿಯು ನಡೆಸಿದ ನರಮೇಧದಲ್ಲಿ ಮಡಿದವರ ತಲೆಬುರುಡೆಗಳ ರಾಶಿಗಳ ಸಂಗ್ರಹಿಸಿದ ಕಾಂಬೋಡಿಯಾದ ವಧಾಸ್ಥಾನವೆಂದೇ ಪ್ರಸಿದ್ಧವಾದ ಚೋಯುಂಗ್ ಬುದ್ಧ ಸ್ತೂಪ. ಎರಡನ್ನೂ ನೋಡಿದ ಪ್ರವಾಸಿಗನಲ್ಲಿ ಉಂಟಾಗಬಹುದಾದ ದ್ವಂದ್ವ. ಮನುಷ್ಯನ ರಜೋಗುಣ ಮತ್ತು ತಮೋಗುಣ ಇವೆರಡನ್ನೂ ಒಂದೇ ಕವಿತೆಯಲ್ಲಿ ಪರಿಚಯಿಸುವುದು ಕಷ್ಟ. ಅಂತಹ ಪ್ರಯತ್ನ ‘ದೇವಾಲಯ- ವಧಾವಲಯ’ಕವಿತೆಯಲ್ಲಿದೆ.

‘ಚಿತ್ರಹಿಂಸೆ’, ‘ಕರ್ಮಣಿ ಪ್ರಯೋಗ’, ‘ಕೊಲ್ಲುವ ದಿನ’, ‘ಯಾರೋ ಬಡಿತಿದ್ದಾರೆ ಹುಡುಗಿಯನ್ನು’ ಮುಂತಾದ ಕವಿತೆಗಳು ಈ ಲೋಕದಲ್ಲಿಯ ಭಿನ್ನ ನೆಲೆಗಳಲ್ಲಿಯ ಹಿಂಸೆಯನ್ನು ಪ್ರತಿಮಿಸುವ ಆಕೃತಿಗಳಾಗಿವೆ.
ಕವಿಯಲ್ಲಿಯ ಭಾವುಕತೆಗೆ ರೂಪಕವಾಗಿ ‘ಒಂದು ಪುಟ್ಟ ನಗು’, ‘ತೆರೆದು ಬಿಡು ಪುಸ್ತಕವ’, ‘ಕೊಳಲು’ ಕವಿತೆಗಳು ವಿಶೇಷವೆನಿಸುತ್ತವೆ.

‘ಅಸಹಜವಾದ ಅನುಭವಗಳನ್ನು ಅಪಾರ ಸಹಜತೆಯ ಕಾವ್ಯ ಭಾಷೆಯನ್ನು ಶೋಧಿಸಿಕೊಂಡು ಬರೆಯಬೇಕು. ಇದನ್ನು ಎಸ್ ದಿವಾಕರ ಅವರ ಕಾವ್ಯ ಸಾಧಿಸಿದೆ’ ಮುನ್ನುಡಿಯಲ್ಲಿ ರಾಜೇಂದ್ರ ಚೆನ್ನಿ ಹೇಳಿರುವ ಮಾತು ಗಮನಾರ್ಹ. ರಾಜಕೀಯ ಜಗತ್ತು ಮತ್ತು ಅಲ್ಲಿಯ ವಿದ್ಯಮಾನಗಳು, ಸಾಮಾಜಿಕ ಬದುಕು ಮತ್ತು ನಿಲುವುಗಳು ಬದ್ಧತೆಗಳಿಂದ ಹೊರತಾಗುತ್ತಾ, ವಿನಾಶಕಾರಿ, ಅಸಹನೀಯ ವ್ಯವಸ್ಥೆಯನ್ನು ನಿರ್ಮಿಸುತ್ತಿರುವುದನ್ನು ಕಂಡ ಕವಿ ಮನಸ್ಸು ತಲ್ಲಣಿಸಿದೆ. ವಿಡಂಬನಾತ್ಮಕ ಧ್ವನಿಯಲ್ಲಿಯೇ ಪ್ರಗತಿಪರ ನಿಲುವು ಮತ್ತು ಮಾನವೀಯತೆಯ ತೀವ್ರ ತುಡಿತ ಎಸ್. ದಿವಾಕರ ಅವರ ಕಾವ್ಯದಲ್ಲಿ ಕಂಡುಬರುತ್ತದೆ. ವಿಶಿಷ್ಟ ಕವನ ಸಂಕನಕ್ಕಾಗಿ ಓದುಗಳಾಗಿ ಕವಿಗೆ ಆಭಾರಿಯಾಗಿದ್ದೇನೆ.

‍ಲೇಖಕರು Admin

June 22, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: