ಒಂದಷ್ಟು ವಿಪರ್ಯಾಸಗಳು…
ಮೋಹನ್ ವಿ ಕೊಳ್ಳೇಗಾಲ
1.
ಅವನು ಲಂಚ ತೆಗೆದುಕೊಳ್ಳುವಾಗ
ಸಿಕ್ಕಿಕೊಂಡ
ಲಂಚ ಕೊಟ್ಟು ಮೊಕದ್ದಮೆಯಿಂದ
ಹೊರಬಂದ!
2.
‘ಅಣ್ಣಾವ್ರು’ ಎಂದರೆ ಡಾ. ರಾಜ್ ರ ನೆನಪು
‘ಸಿಂಹ’ನೆಂದರೆ ವಿಷ್ಣುವಿನ ನೆನಪು
ಆ ಹೆಸರಿಟ್ಟವರು ಬರಿ ನೆನಪು!
3.
ಭತ್ತವಾಗಿ ಗಾಳಿಗದುರಿ ಬೀಳದನ್ನದಗಳು
ನೆಲ್ಲು ಬಡಿವಾಗ ನೆಲಕ್ಕೆ ಹರಡದೆ
ತೊಳೆವಾಗ ನೀರಿನೊಂದಿಗೆ ಹರಿಯದೆ
ಕುದಿವಾಗ ಹಾರದೆ, ಹಳಸದೆ
ಭಿಕ್ಷುಕರಿಗೂ ಸಿಗದೆ ಬಿದ್ದಿದೆ ಕಸದೊಂದಿಗೆ
4.
ವ್ಯತ್ಯಾಸಗಳರಿವು ಗೊತ್ತಾಗುವವರೆವಿಗೂ
ದೇವರ ಮೇಲೆ ನಂಬಿಕೆಯಿರುತ್ತದೆ
ವ್ಯತ್ಯಾಸಗಳ ಅರಿವಾದೊಡನೆ
ನಂಬಿಕೆ ಅಪನಂಬಿಕೆ ನಡುವೆ ಯುದ್ಧವಾಗುತ್ತದೆ
5.
ನಾಗರಿಕತೆಯೆಂದರೆ ಉತ್ತುಂಗಕ್ಕೇರಿ
ಪಾತಾಳಕ್ಕೆ ಬೀಳುವುದು
ಭಾರತದಂತೆ ಮಹಾಭಾರತದಂತೆ
6.
ಒಳ್ಳೆಯ ತಂದೆ ತಾಯಿಯಂದಿರ ಸ್ತುತಿಯಬ್ಬರದಲ್ಲಿ
ಹಾಳೆಯ ಮೇಲಿನ ಹೊಗಳಿಕೆಯಕ್ಷರಗಳಲ್ಲಿ
ಬೆರೆತು ಹೋದರು ಮಕ್ಕಳ ಸುಖ ಕಿತ್ತುಕೊಂಡ
ಕೆಟ್ಟ ತಂದೆ ತಾಯಂದಿರು!
7.
ಬೆಳವಣಿಗೆಯೇ ಜೀವನದ ಗುರಿಯಾಗಿದ್ದರೆ
ಹೇಳದೆ ಕೇಳದೆ ಗಡ್ಡ ಬೆಳೆಯುತ್ತಿರಲಿಲ್ಲ
ಸಾಯುವುದೇ ಕೊನೆಯಾಗಿದ್ದರೆ ಹುಟ್ಟಬೇಕಾಗಿರಲಿಲ್ಲ!






ಎಲ್ಲವೂ ಚೆನ್ನಾಗಿವೆ. ೫ ,೬, ೭ ಬಹಳ ಇಷ್ಟವಾದವು 🙂
Chennaagidhe. Chinthanege hacchuva kavithe.