
ನಾಗರಾಜ್ ಹರಪನಹಳ್ಳಿ
೧ ಧ್ಯಾನ
ಧ್ಯಾನಿಸುವುದು ಎಂದರೆ
ಅದು ನಿನ್ನೆದುರು ಕುಳಿತಂತೆ
ಮುಗಿಲ ಕಡೆ ದಿಟ್ಟಿ ನೆಡುವುದೆಂದರೆ
ಅದು ನಿನ್ನೆದೆಯ ವಿಶಾಲತೆಗೆ
ಮೊಗವಿಟ್ಟಂತೆ
ಇಳೆಯ ಜೊತೆ ಸರಸವೆಂದರೆ
ನಿನ್ನ ದೇಹ ಮನದ ಜೊತೆ
ಮಿಲನ
ಸೆರಗ ಹಿಡಿದು ನಡೆಯುವುದೆಂದರೆ
ಅದು ನಮ್ಮಿಬ್ಬರ ಕನಸು
ಕಾಲ್ಗೆಜ್ಜೆ ತೊಡಿಸುವುದೆಂದರೆ
ಅದು ನನ್ನ ಕನಸು

ಬೆರಳುಗಳ ಜೊತೆ ಆಟವೆಂದರೆ
ಅದು
ನೀ ನನ್ನೆಡೆ ಕಣ್ಣಿಟ್ಟು ಧ್ಯಾನಿಸುವುದು
ತುಟಿಗೆ ನನ್ನ ತುಟಿ ಸೇರುವುದು
ನಿನ್ನ ಕನಸು
ಸಾವಿರ ಕನಸುಗಳ ಹೆಣೆಯುವುದೆಂದರೆ
ನಾಳೆಯ ಬದುಕಿಗೆ ಇಬ್ಬರೂ
ಹಂಬಲಿಸುವುದು
ಕನಸುಗಳ ಪೊಣಿಸುವುದೆಂದರೆ ಹೂಮಾಲೆಯ ಜೊತೆ ಮಾತಾಡುವ ಪ್ರೇಮ ಎಂದರ್ಥ
ಸಾಕು ಸಾಕು ಎನ್ನುವುದು
ಪ್ರೇಮಿಯ ಧ್ವನಿಯೆಂದರೆ
ಇನ್ನೂ ಸ್ವಲ್ಪ ಹೊತ್ತು ಮುದ್ದಿಸು
ಇನಿ ಎಂದರ್ಥ
೨ ಪ್ರೀತಿಯೆಂದರೆ ಬೆಳಕು
‘ಸಾಯಲ್ಲ ತಾನೇ ನಾನು’
ಅವಳ ಪ್ರಶ್ನೆಗೆ
ಅದ್ಹೇಗೆ ಸಾಧ್ಯ ?
ಹೃದಯಬಡಿತ ನಾನಾಗಿರುವಾಗ

ಎರಡನೇ ಪ್ರಶ್ನೆ
ಅದಕೆ ಇಷ್ಟು ಪ್ರೀತಿಸಿದೆವೇನೋ??
ಅದಕೆ ಹೀಗೆ ಉತ್ತರಿಸಿದೆ;
ಉಸಿರಾಟದಲ್ಲಿ ನನ್ನ ನಿನ್ನ ಹೆಸರಿತ್ತು..
ಅದು ಇಬ್ಬರಿಗೂ ಗೊತ್ತಿತ್ತು;
ಸೇರಲಾಗದ ಅನಿವಾರ್ಯತೆಗೆ
ಅನುಮಾನ ಕಾಡಿತ್ತು ಅಷ್ಟೇ
ಪ್ರೀತಿಯೆಂದರೆ ಬೆಳಕೆಂದು
ಈಗ ಸುಲಭವಾಗಿ ಅರ್ಥವಾಗಿದೆ
ಕಾರಣ ಇಬ್ಬರೂ
ಸಾವಿನ ಮನೆ ಕದ ತಟ್ಟಿ ಬಂದಿದ್ದೇವೆ
ಹಾಗಾಗಿ ಬದುಕು ಹೆಚ್ಚು ಅರ್ಥಪೂರ್ಣ, ಹೆಚ್ಚು ಸಹನೀಯ…
ಇನ್ನೇನು ಉಳಿದಿದೆ
ಇಬ್ಬರೂ ಪ್ರಶ್ನಿಸಿದೆವು
ಕಣ್ಣಲ್ಲಿ ಕಣ್ಣಿಟ್ಟು
ದೂರವಿದ್ದರೂ
ಹೆಚ್ಚು ಹತ್ತಿರವಾದೆವು
ಹಾಗೂ ಶಪಥ ಮಾಡಿದೆವು
ನಮಗಾಗಿ ಬದುಕೋಣ
ಒಂದಲ್ಲಾ ಒಂದು ದಿನ
ಭೇಟಿಯ ಅಪಾರ ಭರವಸೆ ಹಾಗೂ ವಿಶ್ವಾಸ ಆಶಾವಾದದೊಂದಿಗೆ






0 Comments