ನರೇಂದ್ರ ರೈ ದೇರ್ಲ ಕಂಡಂತೆ ‘ಮಂಗಳೂರಿನಿಂದ ಸುಬ್ರಹ್ಮಣ್ಯಕ್ಕೆ’

ನರೇಂದ್ರ ರೈ ದೇರ್ಲ

182 ವರ್ಷಗಳ ಹಿಂದೆ ಸುಳ್ಯದ ಕುಳುಕುಂದ ಎತ್ತಿನ ಜಾತ್ರೆಯಲ್ಲಿ ಕಾವ್ಯ ಬರೆಯುವ ಕವಿಗಳಿಗೆ ಬೇಕಾಗುವ ತಾಳೆಗರಿಯನ್ನು ಮಾರಾಟ ಮಾಡುತ್ತಿದ್ದ ವಿಷಯವೊಂದು ಬೆಳಕಿಗೆ ಬಂದಿದೆ. ಹಾಗಾದರೆ ಅಲ್ಲಿ ಅಷ್ಟೊಂದು ಕವಿಗಳು ಇದ್ದರೆ? ಅಥವಾ ಆ ಗರಿಗಳು ಜಾತಕಗೀತಗ ಬರೆಯಲಿಕ್ಕೆ ಬಳಕೆಯಾಗುತ್ತಿದ್ದವೇ? ಇಂಥದೊಂದು ಪ್ರಶ್ನೆ ನನ್ನನ್ನು ಕಾಡುತ್ತಿದೆ. ಕಾರಣ ಇಲ್ಲಿದೆ…

ನಾವು ಜೀವಿಸುವ ಈ ಭೂಮಿಯನ್ನು ಎಲ್ಲಿಂದ ಹೇಗೆ ನೋಡುತ್ತೇವೆ ಎಂಬುವುದು ಒಂದು ಅನುಭವ .ವಿಮಾನದಲ್ಲಿ, ಹಡಗಿನಲ್ಲಿ, ಬೆಟ್ಟದ ತುದಿಯಿಂದ ಕಡಲಿನ ದಂಡೆಯಿಂದ ಎಲ್ಲವೂ ಬೇರೆ ಬೇರೆ ಅನುಭವವವೇ. ಹೆರ್ಮನ್ ಮ್ಯೊಗ್ಲಿಂಗ್ ಮತ್ತು ಗಾಟ್ ಫ್ರೈಡ್ ವೈಗ್ಲೆ ಎಂಬ ಇಬ್ಬರು ಜರ್ಮನ್ ಮಿಷನರಿಗಳು 182 ವರ್ಷಗಳ ಹಿಂದೆ ಮಂಗಳೂರಿನಿಂದ ಸುಬ್ರಹ್ಮಣ್ಯಕ್ಕೆ ಕಾಲುನಡಿಗೆಯಲ್ಲಿ ಹೋದ ಕಥನ ಒಂದನ್ನು ಇತ್ತೀಚೆಗೆ ಪ್ರೊಫೆಸರ್ ಎ. ವಿ. ನಾವಡ ಮತ್ತು ನನ್ನ ಸಹೋದ್ಯೋಗಿ ನಂದಕಿಶೋರ್ ಎಸ್ ಇವರು ಕನ್ನಡಕ್ಕೆ ಅನುವಾದಿಸಿದ್ದಾರೆ. ಕುವೆಂಪು ಭಾಷಾ ಭಾರತಿ ಪ್ರಕಟಿಸಿದ ಈ ಪುಸ್ತಕ ಯಾಕೆ ಇನ್ನೂ ವಿಮರ್ಶಕರ ಓದುಗರ ಗಮನ ಸೆಳೆಯಲಿಲ್ಲ ಎಂಬುವುದೇ ನನ್ನ ಕುತೂಹಲ.

ಹೊಳೆ ನದಿಗಳಿಗೆ ಸೇತುವೆಗಳಿಲ್ಲದ ಕಾಲದಲ್ಲಿ ಕರಾವಳಿಯ ಕಡಲಬದಿಯಿಂದ ಪಶ್ಚಿಮ ಘಟ್ಟದ ದುರ್ಗಮ ಕುಕ್ಕೆ ಸುಬ್ರಹ್ಮಣ್ಯವನ್ನು ನೆಲ ಹಾದಿಯಲ್ಲಿ ತಲುಪುವ ಕಾಲ್ನಡಿಗೆಯ ಕಥನವಿದು. ಹೆಚ್ಚುಕಡಿಮೆ ಎರಡು ಶತಮಾನಗಳ ಹಿಂದಿನ ಈ ಹಾದಿಯುದ್ದದ ಬದುಕನ್ನ ಶೋಧಿಸುವ ಭಾವಿಸುವ ಇಬ್ಬರು ಮಿಷನರಿಗಳು ಬರೆದ ಪ್ರತ್ಯೇಕ ಪ್ರತ್ಯೇಕ ಡೈರಿಯ ಪುಟಗಳನ್ನು ಇಲ್ಲಿ ಅನುಕ್ರಮಣಿಕೆಯಲ್ಲಿ ಜೋಡಿಸಲಾಗಿದೆ. ಒಂದೇ ನೋಟವನ್ನು ಇಬ್ಬರು ವ್ಯಕ್ತಿಗಳು ದಾಖಲಿಸಿದ ಕ್ರಮಗಳೇ ವಿಶಿಷ್ಟ. ಇಲ್ಲಿ ಎರಡನೆಯ ಮಿಷನರಿ ಹೆಚ್ಚು ವೈಜ್ಞಾನಿಕವಾಗಿ ಮರ ಗಿಡ ಬೆಟ್ಟ ಬಂಡೆಗಳನ್ನು ಗಮನಿಸುತ್ತಾನೆ. ನನಗೆ ಹೆಚ್ಚು ಕುತೂಹಲ ಮೂಡಿಸಿದ ಕರಾವಳಿಯ ಆ ಕಾಲದ ಚೋದ್ಯಗಳು ಇವು.

ಧರ್ಮಸ್ಥಳದ ಶ್ರೀ ಮಂಜುನಾಥ ಸ್ವಾಮಿ ದೇವಾಲಯಕ್ಕೆ ಇವರಿಬ್ಬರಿಗೆ ಆ ಕಾಲದಲ್ಲಿ ಪ್ರವೇಶ ನಿರಾಕರಿಸಲಾಗುತ್ತದೆ. ಅಣ್ಣಪ್ಪ ಸ್ವಾಮಿಯ ಬೆಟ್ಟ ಹತ್ತಿದ ತಪ್ಪಿಗೆ 200 ರೂಪಾಯಿಯ ದಂಡ ವಿಧಿಸಲಾಗುತ್ತದೆ. (ಆ ಕಾಲದಲ್ಲಿ ರೂಪಾಯ ಇತ್ತೆ? ಇದ್ದರೂ ಈ ಮೊತ್ತ ಬಹಳ ದೊಡ್ಡದಲ್ಲವೇ) ಆ ಕಾಲದಲ್ಲಿ ಕರಾವಳಿಯಲ್ಲಿ ನೇಮಕೋಲಗಳಲ್ಲಿ ದೈವ ಕಟ್ಟುವ ನರ್ತಕರು ಸರಕಾರಕ್ಕೆ ಕಂದಾಯ ಕಟ್ಟುವ ಪದ್ಧತಿ ಇತ್ತು ಎಂಬ ವಿವರ ಈ ಕೃತಿಯಲ್ಲಿದೆ.

ನಡೆಯುವ ಹಾದಿಯಲ್ಲಿ ಚಂದ್ರರಾಜ ಅಜಿಲ ಎನ್ನುವ ಜೈನ ಧರ್ಮದವ್ರು ಮಿಷಿನರಿಗಳಿಗೆ ಮತ್ತು ಸಹಚರಿ ಗಳಿಗೆ ಮಾಂಸದ ಅಡುಗೆ ಮಾಡಿ ಬಡಿಸಿದ ವಿವರವಿದೆ(.!?) ನವೆಂಬರ್ ಕೊನೆಗೆ ಡಿಸೆಂಬರ್ ಆರಂಭದಲ್ಲಿ ಕುಕ್ಕೆಯಲ್ಲಿ ಸುರಿಯುವ ಭೀಕರ ಮಳೆಗೆ ತತ್ತರಿಸುವ ಇವರಿಬ್ಬರೂ ಕಾಡಿನ ಈ ಭಾಗದಲ್ಲಿ ಮನುಷ್ಯರು ಬದುಕುವುದಕ್ಕೆ ಸಾಧ್ಯವೇ ಇಲ್ಲ ಎಂದು ಆತಂಕ ಪಡುತ್ತಾರೆ.

ಕುಳಕುಂದದ ಎತ್ತುಗಳ ಜಾತ್ರೆಯಲ್ಲಿ ಕಾವ್ಯ ಬರೆಯಲು ಅನುಕೂಲವಾಗಿದ್ದ ತಾಳೆ ಓಲೆಗಳ ಕಟ್ಟುಗಳನ್ನು ಮಾರುತ್ತಿದ್ದ ವಿಷಯವನ್ನು ಈಗಾಗಲೇ ಹೇಳಿದೆ. ದಾರಿಯುವುದಕ್ಕೂ ಇವರಿಬ್ಬರು ಕರಾವಳಿಯ ಅನೇಕ ಮತ ಧರ್ಮಿಯರನ್ನು ಭೇಟಿಯಾಗುತ್ಇಲ್ಲ.. ಮುಸಲ್ಮಾನರು, ಜೈನರು, ಬ್ರಾಹ್ಮಣರು, ದಲಿತರು, ಗೌಡರು… ಆದರೆ ಎಲ್ಲೂ ಕೂಡ ಈ ಕೃತಿಯಲ್ಲಿ ಬಂಟರ ಉಲ್ಲೇಖ ಅಥವಾ ಭೇಟಿಯ ಪ್ರಸಂಗ ಬರುವುದೇ ಇಲ್ಲ ಕುಕ್ಕೆ ಪ್ರದೇಶದ ಆ ಕಾಲದ ಉಷ್ಣಾಂಶವನ್ನು ಅವರು ದಾಖಲಿಸುತ್ತಾರೆ. ಅಲ್ಲಿಂದ ಸುಳ್ಯದ ದಾರಿಯಲ್ಲಿ ನಡೆಯುವಾಗ ಕಾಟು ಕಾಯಿಯ ರಾಮೇಗೌಡರ ಎಷ್ಟೋ ವಿವರಗಳು ಈ ಕೃತಿಯಲ್ಲಿ ಉಲ್ಲೇಖಿಸಲ್ಪಟ್ಟಿದೆ.

ಇತ್ತೀಚಿಗೆ ಸುಳ್ಯದ ಅನೇಕ ಲೇಖಕರು ರಾಮೇಗೌಡರ ಬಗ್ಗೆ ಕೃತಿಗಳನ್ನು ಬರೆದದ್ದು ಗೊತ್ತೇ ಇದೆ. ಅವರು ಈ ಡೈರಿಯ ಪುಟಗಳನ್ನೊಮ್ಮೆ ಗಮನಿಸುವುದು ಸೂಕ್ತ. ಒಳ್ಳೆಯ ಪುಸ್ತಕ. ನಾವಡರು ಯಾವಾಗಲೂ ಹಾಗೆಯೇ. ಬರವಣಿಗೆಯಲ್ಲಿ, ಪುಸ್ತಕ ಸಂಪಾದನೆಯಲ್ಲಿ ಅತ್ಯುತ್ತಮ ಶಿಸ್ತು ಅಚ್ಚು ಕಟ್ಟುತನವನ್ನು ಪಾಲಿಸುವವರು. ಕನ್ನಡಕೊಂದು ಒಳ್ಳೆಯ ದಾಖಲೆಯನ್ನು ಒದಗಿಸಿದ್ದಾರೆ. ಲೇಖಕರಿಬ್ಬರಿಗೂ ಅಭಿನಂದನೆಗಳು.

‍ಲೇಖಕರು Admin

December 14, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: