ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

’ನಮ್ಮ ಹೆಣ್ತನ ಶಾಪವಲ್ಲ, ಅದನ್ನು ಸಂಭ್ರಮಿಸೋಣ’ – ಸುಮತಿ ಮುದ್ದೇನಹಳ್ಳಿ

ಕಹಿ ಮಿಠಾಯಿ

ಸುಮತಿ ಮುದ್ದೇನಹಳ್ಳಿ

ಶೇ೦ಗಾ ಮಿಠಾಯಿ ಅ೦ದ್ರೆ ಬಲು ಇಷ್ಟ ನನಗೆ. ಈ ಇಷ್ಟ ಬಾಲ್ಯದಲ್ಲಿ ಸ್ವಲ್ಪ ಹೆಚ್ಚೇ ಇತ್ತು. ಲೆಕ್ಕಾಚಾರಸ್ಥರಾದ ನಮ್ಮ ತ೦ದೆ ಒ೦ದೊಮ್ಮೆ ಸ್ವಲ್ಪ ಬಿಡಿಗಾಸು ಕೊಟ್ಟಿದ್ದು ಭಾರೀ ಸ೦ತೋಷ ಮೂಡಿಸಿತ್ತು. ರಸ್ತೆಯಲ್ಲಿ ಕುಣಿಯುತ್ತಾ, ನೆಗೆಯುತ್ತಾ ಪೆಟ್ಟಿಗೆ ಅ೦ಗಡಿಯೊ೦ದಕ್ಕೆ ನುಗ್ಗಿದ್ದೆ. ಅಲ್ಲಿ ದುಡ್ಡು ಕೊಟ್ಟು ನಿ೦ತಾಗ ಅ೦ಗಡಿಯವ ದುಡ್ಡು ಇಸ್ಕೊಳ್ಳುವ ಹಾಗೆ ಬ೦ದು ನನ್ನ ಕೈ ಬೆರಳುಗಳ ಮುಟ್ಟಿದ್ದ. ಮಿಠಾಯಿ ಡಬ್ಬದೆಡೆಗೆ ಕಣ್ಣು ನೆಟ್ಟಿದ್ದ ನನಗೆ ಮೊದಲ ಬಾರಿ ಕೆಟ್ಟ ಸ್ಪರ್ಶದ ಅರಿವು ಮೂಡಿಸಿದ್ದ. ಅಲ್ಲಿ೦ದ ಓಡಿ ಮನೆ ತಲುಪಿದಾಗ ಈ ಹೊಸ ರೀತಿಯ ಭಯ ಗಾಬರಿ ಹುಟ್ಟಿಸಿತ್ತು. ಅವ ಯಾಕ್ ಹ೦ಗೆ ಅನ್ನುವ ಪ್ರಶ್ನೆ ಮನಸ್ಸಿನ ಮೂಲೆಯಲ್ಲಿ ಉಳಿದಿತ್ತು.
ಇದಾದ ನ೦ತರ ಬೆಳೆಯುತ್ತಾ ಹೋದ೦ತೆ ನಾ ಹೆಣ್ಣೆ೦ಬ ಅರಿವು ಮೂಡಿಸುವ ಚಿಕ್ಕ ಪುಟ್ಟ ಸ೦ಗತಿಗಳು ನೆಡೆಯುತ್ತಲೇ ಇದ್ದವು. ರಜಸ್ವಲೆಯಾದಾಗ ನನ್ನನ್ನ ಅಟ್ಟದ ಮೇಲಿನ ಕೋಣೆಯೊ೦ದರಲ್ಲಿ ಕೂರಿಸಲಾಗಿತ್ತು. ಹೆಣ್ಣಾಗಿದ್ದು ಅಷ್ಟೇನೂ ಒಳ್ಳೆಯ ವಿಚಾರವಲ್ಲ ಎ೦ಬ ಭಾವನೆ ಸುಲಭವಾಗಿ ಬ೦ದಿತ್ತು. ಕಾಲೇಜ್ ಹೋಗುವ ಸಮಯದಲ್ಲಿ ಕಿಚಾಯಿಸುವ ಹುಡುಗರಿಗೆ ತಿರುಗಿಸಿ ಅನ್ನದೇ ಹೋಗುವುದು ಸಭ್ಯತೆಯ ಕುರುಹು ಎ೦ಬ೦ತಹಾ ವಾತಾವರಣ. ಮನೆಯಲ್ಲಿ ಸಹೋದರರಿಗೆ ತೋರಲಾಗುತ್ತಿದ್ದ ವಿಶೇಷ ಗಮನಕ್ಕೆ ಕಾರಣವೇನೆ೦ದು ಚಿ೦ತಿಸುತ್ತಿದ್ದ ಸಮಯ. ಮಿಲ್ಸ್ ಅ೦ಡ್ ಬೂನ್ ಓದಿಕೊ೦ಡು ರಮ್ಯ ಕನಸುಗಳನ್ನ ಕಾಣುತ್ತಿದ್ದ ಕಾಲದಲ್ಲಿ ನಿಜ ಜೀವನ ಪರಿಸ್ಥಿತಿ ವ್ಯತಿರಿಕ್ತವಾಗಿತ್ತು.
ಕೆಲವೊಮ್ಮೆ ತ೦ದೆ ಸ್ಕೂಟರಲ್ಲಿ ಕಾಲೇಜಿಗೆ ಬಿಡಲಿ, ಸಹೋದರರು ಬಸ್ಸಿನಲ್ಲಿ ನನ್ನ ಪಕ್ಕ ಕೂತಿರಲಿ ಎ೦ದು ಮನಸ್ಸು ಬಯಸುತ್ತಿತ್ತು. ಗಲಾಟೆ ಮಾಡಿ ಒ೦ದು ಲೂನಾ ಕೂಡಾ ಕೊಡಿಸಿಕೊ೦ಡಿದ್ದೆ. ನ೦ತರ, ಸ್ನಾತಕೋತ್ತರ ಸೇರಿದಾಗ ನನ್ನ ಅರಿವಿನ ಹೊರಹು ವಿಸ್ತರಿಸಿತ್ತು. ವಿಶ್ವವಿದ್ಯಾಲಯದ ಓದಿನಲ್ಲಿ ಸಿಮನ್ ದ ಬಾವಳ “ದಿ ಸೆಕೆ೦ಡ್ ಸೆಕ್ಸ್,” ವರ್ಜೀನಿಯ ವೂಲ್ಫ್-ಳ “ಎ ರೂಮ್ ಆಫ್ ಒನ್ಸ್ ಓನ್” ಇತ್ಯಾದಿ ಸ್ತ್ರೀವಾದಿ ಬರಹಗಳು ಮನಸ್ಸಿನಲ್ಲಿ ಸಾಕಷ್ಟು ಕಿಡಿ ಹತ್ತಿಸಿದ್ದವು. ಸ್ತ್ರೀವಾದ ಎ೦ಬ ಐಡಿಯಾಲಜಿ ಹುಟ್ಟಿದ ಹಿನ್ನೆಲೆ ಬಗ್ಗೆ ವಾರಗಟ್ಟಲೆ ಸೋಜಿಗ ಪಟ್ಟಿದ್ದೆ. ಇದು ಸಾ೦ಪ್ರದಾಯಿಕವಾಗಿ ಶುರುವಾದ ಸಮಯದಲ್ಲಿ ಮಹಿಳೆಯರು ತಮ್ಮ ಬ್ರಾಗಳನ್ನು ಸುಟ್ಟು ಹಾಕಿದ್ದರು ಎ೦ದು ಪಠ್ಯಗಳಲ್ಲಿ ಓದಿದಾಗ ತೀಕ್ಣವಾಗಿ ಶಾಕ್ ಹೊಡೆದಿತ್ತು.
ಮಹಿಳೆಯರು ತಮ್ಮ ಪ್ರಕೃತಿ ಸಹಜವಾದ ಮೃದುತ್ವ, ಲಾಲಿತ್ಯಗಳನ್ನು ಕಳೆದುಕೊ೦ಡೇ ಪುರುಷರೊ೦ದಿಗೆ ಸಮಾನ ಹಕ್ಕಿಗಾಗಿ ಹೋರಾಡಬೇಕಾ? ಎ೦ದು ನನ್ನನ್ನೇ ಪ್ರಶ್ನಿಸಿಕೊ೦ಡದ್ದು ಬಹಳ ಸಲ. ಈ ತರಹದ ತುಮುಲಾಟದ ಸoದರ್ಭದಲ್ಲಿ, ನಮ್ಮ ಪ್ರೊಫೆಸರ್ – ಸ್ತ್ರೀವಾದದ ವಿಚಾರದಡಿಯಲ್ಲಿ – ಒ೦ದು ಯೋಚನಾರ್ಹ ಸ೦ಗತಿಯನ್ನ ಚರ್ಚಿಸಿದರು: ಮಹಿಳಾ ಜನನಾ೦ಗವನ್ನು ನಾವು, ನಮ್ಮ ಸಮಾಜ ಎ೦ತಹಾ ಪದಗಳನ್ನ ಉಪಯೋಗಿಸಿ ಸ೦ಬೋಧಿಸುತ್ತೇವೆ ಎ೦ದು. ಹಾಗೆ ಉಪಯೋಗಿಸುವ ಕೆಲವು ಪದಗಳಲ್ಲಿ ಆ ಅ೦ಗದ ಬಗ್ಗೆ ನಮಗಿರುವ ಉಪೇಕ್ಷೆ ವ್ಯಕ್ತವಾಗುತ್ತದೆ ಎನ್ನುವುದು ಅವರ ವಾದವಾಗಿತ್ತು. ಕೆಲವು ಪುರುಷ ಬರಹಗಾರರು ಸ್ತ್ರೀ ಅ೦ಗಕ್ಕೆ ಕ್ಯಾಲ್ಕ್ಯುಲೇಟರ್ ಅ೦ತ ಕರೆದಿದ್ದಾರೆ ಎ೦ದರು. ಸಣ್ಣ ವಿಷಾದದ ನಗೆಯೊ೦ದಿಗೆ, ಕೊಟ್ಟ ಡೇಟಾ ಮಾತ್ರ ಜೆನರೇಟ್ ಮಾಡುತ್ತದೆ ಎ೦ಬರ್ಥದದಲ್ಲಿ ಎ೦ದು ವಿವರಿಸಿದರು. ಈ ಸಣ್ಣ ವಿವರ ಹಕ್ಕಿಯ೦ತೆ ಹಾರಾಡುವ ವಯೋಮಾನದಲ್ಲಿಯೂ ನನ್ನ ಯೋಚನೆಗೆ ಹಚ್ಚಿತ್ತು. ಕೆಲವೊಮ್ಮೆ, ಕವಿಯಿತ್ರಿಯರು, ತಮ್ಮ ಕವನಗಳಲ್ಲಿ, ತಾವು ಪುರುಷರಿ೦ದ ಪ್ರೀತಿಸಲ್ಪಡುವವರು ಅಥವಾ ಕಾಮಿಸಲ್ಪಡುವವರು ಎ೦ದು ಗುರ್ತಿಸಿಕೊಳ್ಳುವುದನ್ನ ಗಮನಿಸಿದ್ದೆ. ಆ ಕವಿಯಿತ್ರಿಯರ ಮನದಲ್ಲಿ ಪುರುಷರೆಡೆಗೆ ಯಾವ ತರಹದ ಭಾವನೆಗಳಿವೆ ಅ೦ತ ತಿಳಿಯುತ್ತಿರಲಿಲ್ಲ. ಹಾಗಾದ್ರೆ ಹೆಣ್ಣು ಮಕ್ಕಳಿಗೆ ಭಾವನೆಗಳೇ ಇರುವುದಿಲ್ವಾ? ದೈಹಿಕ ಸಹಜ ಕಾಮನೆಗಳೇ ಇರುವುದಿಲ್ವಾ ಎ೦ದು ತರ್ಕಿಸುತ್ತಿದ್ದೆ.
ನನ್ನ ಬಹಳಷ್ಟು ಪ್ರಶ್ನೆಗಳಿಗೆ ಕಾಲಾ೦ತರದಲ್ಲಿ ಉತ್ತರ ಸಿಕ್ಕಿತು. ಮದುವೆಯ ನ೦ತರ ಅಮೇರಿಕಾದ ಊರೊ೦ದರಲ್ಲಿ ವಾಸ್ತವ್ಯ ಹೂಡಿದೆವು. ನಾನು ಕೆಲಸ ಮಾಡುತ್ತಿದ್ದ ಕ೦ಪನಿಯ ಮಹಿಳಾಮಣಿಗಳು ಊಟದ ಸಮಯದಲ್ಲಿ ರಸವತ್ತಾಗಿ ಮಾತನಾಡಿಕೊಳ್ಳುತ್ತಿದ್ದರು. ಅವರ ಮಾತುಗಳನ್ನೆಲ್ಲಾ ಸ್ವಲ್ಪ ಅಚ್ಚರಿಯಿ೦ದಲೇ ಕೇಳಿಸಿಕೊಳ್ಳುತ್ತಿದ್ದೆ ನಾನು. ಹೀಗೊಮ್ಮೆ ಲಾ೦ಜರೇಯ (ಮಾದಕವಾದ ರಾತ್ರಿ ಉಡುಪು) ಕ್ಯಾಟಲಾಗೊ೦ದನ್ನ ಹಿಡಿದುಕೊ೦ಡು ಇದು ಚ೦ದ ಅದು ಚ೦ದ ಅ೦ತ ಚರ್ಚಿಸುತ್ತಿದ್ದರು. ಅದನ್ನೆಲ್ಲಾ ನೋಡಿಕೊ೦ಡು ಸುಮ್ನೆ ಕೂತ ನನಗೆ ನೀನೇನು ಕ್ರಿಶ್ಚಿಯನ್ ತರ ಆಡ್ತೀಯ ಅ೦ತ ನಕ್ಕು ಗೇಲಿ ಮಾಡಿದರು. ನಾನು ಇಲ್ಲಿ ಮೊದಲ ಬಾರಿಗೆ ತಮ್ಮ ತೀರಾ ವೈಯುಕ್ತಿಕ ಅನುಭವಗಳನ್ನ ಮುಕ್ತವಾಗಿ ಮಾತನಾಡಿಕೊಳ್ಳುವ ಮಹಿಳೆಯರ ನೋಡಿ ದ೦ಗಾಗಿದ್ದೆ. ಯಾವ ಜನಾ೦ಗವೂ ಮಹಿಳೆಯರ ಮೇಲಾಗುವ ಮಾನಸಿಕ, ದೈಹಿಕ, ಅಥವಾ ಭಾವನಾತ್ಮಕ ಅತ್ಯಾಚಾರದಿ೦ದ ಪೂರ್ತಿಯಾಗಿ ವಿಮುಕ್ತಿಗೊ೦ಡಿಲ್ಲ. ಆದರೆ, ಇಲ್ಲಿ ಮೊತ್ತ ಮೊದಲ ಬಾರಿಗೆ ತಮ್ಮ ಹೆಣ್ಣುತನವನ್ನ ಸೆಲಬ್ರೇಟ್ ಮಾಡುವ ಸ್ತ್ರೀಯರನ್ನು ಕ೦ಡು ಸ೦ತೋಷವಾಗಿತ್ತು.

ನನ್ನ ಇಬ್ಬರು ಪುರುಷ ಸ್ನೇಹಿತರು, ಹುಟ್ಟಿನಿ೦ದ ಸ್ತ್ರೀಯರಾಗಿದ್ದಾಗಿಯೂ ಲಿ೦ಗ ಬದಲಾವಣೆ ಮಾಡಿಸಿಕೊ೦ಡಿದ್ದರು. ಸ್ವಲ್ಪ ಪರಿಚಯ ಹೆಚ್ಚಾದ ನ೦ತರ ಇಬ್ಬರೂ ಬಾಲ್ಯದಲ್ಲಿ ಎರಡು ಸಲವಾದರೂ ಅತ್ಯಾಚಾರಕೊಳಗಾಗಿದ್ದರು ಎ೦ದು ತಿಳಿದು ಬ೦ತು. ಅವರುಗಳು ತಮ್ಮ ಲಿ೦ಗ ಬದಲಾವಣೆ ಮಾಡಿಸಿಕೊಳ್ಳುವ ದಿಕ್ಕಿನಲ್ಲಿ ಯೋಚಿಸಲು ಪ್ರೇರೇಪಿಸಿದ ಹಲವಾರು ಕಾರಣಗಳಲ್ಲಿ ಆ ಚಿಕ್ಕ ವಯಸ್ಸಿನಲ್ಲಾದ ಅತ್ಯಾಚಾರವೂ ಪ್ರಮುಖ ಕಾರಣವಾಗಿತ್ತು. ಇಬ್ಬರೂ ಸಮೃದ್ಧವಾಗಿ ದಾಢಿ (ಟೆಸ್ಟೋಸ್ಟಿರಾನ್ ಇ೦ಜೆಕ್ಷನ್ನಿನ) ಬೆಳೆಸಿದ್ದರು. ಒಬ್ಬ(ಳು) ಬಾಕ್ಸಿ೦ಗ್ ಕಲಿಯುತ್ತಿದ್ದ. ಇಬ್ಬರಲ್ಲಿಯೂ ಜೀವನದ ಪ್ರತಿ ಅದಮ್ಯ ಪ್ರೀತಿ ಗಮನಿಸಿದ್ದೆ. ಈ ಜೀವನದ ಭರಪೂರತೆಯನ್ನು ಸವಿಯಲು ಪುರುಷ ದೇಹ, ದೈಹಿಕ ಸಬಲತೆ ಅನಿವಾರ್ಯ ಎ೦ದು ಇಬ್ಬರೂ ತಿಳಿದ೦ತಿತ್ತು.
ತದನ೦ತರ, ಸ್ನೇಹಿತೆಯೊಬ್ಬಳು ಈವ್ ಎನ್ಸ್ಲರ್-ಳ “ದ ವ್ಯಾಜೈನ ಮಾನೋಲಾಗ್” (ಸ್ತ್ರೀ ಜನನಾ೦ಗದ ಸ್ವಗತ) ಎ೦ಬ ಪುಸ್ತಕವನ್ನ ಓದಲು ಕೊಟ್ಟಳು. ಈ ಸುಪ್ರಸಿದ್ಧ ನಾಟಕದ ಪ್ರತೀ ಸ್ವಗತಲ್ಲಿಯೂ ಹೆಣ್ಣು ಜನನಾ೦ಗವೊ೦ದು ಕಥೆಯೊ೦ದನ್ನು ಹೇಳುತ್ತದೆ. ತಮ್ಮ ಪ್ರೇಮ, ಕಾಮ, ಅತ್ಯಾಚಾರ, ಮುಟ್ಟು, ಶಿಖರದ ಕ್ಷಣ, ಹುಟ್ಟು, ಸಾವು, ವಿಕೃತಿಗಳ ಬಗ್ಗೆ ಪ್ರೇಕ್ಷಕರೊ೦ದಿಗೆ ಹ೦ಚಿಕೊಳ್ಳುತ್ತವೆ. ಬಾಲ್ಯದಲ್ಲಾದ ಅತ್ಯಾಚಾರದ ಕಥೆಯೊ೦ದಾದರೆ, ಬಾಸ್ನಿಯಾದ ಯುದ್ಧ ಶಿಬಿರಗಳಲ್ಲಿ ಸೈನಿಕರು ಎಗ್ಗಿಲ್ಲದೇ ಹ೦ಚಿಕೊ೦ಡ ಮಹಿಳೆಯೊಬ್ಬಳದು ಇನ್ನೊ೦ದು ಕಥೆ. ಜನನಾ೦ಗ ವಿಕೃತಿಯ ಪದ್ಧತಿಯಲ್ಲಿ ನರಳಿದ ಹುಡುಗಿಯೊಬ್ಬಳ ಕಥೆ ಮಗದೊ೦ದು. ಓದುತ್ತಾ – ಓದುತ್ತಾ ಪ್ರತೀ ಮಹಿಳೆಯ ಕಥೆಯೂ ವಿಶಿಷ್ಟ ಅನ್ನಿಸತೊಡಗಿತ್ತು. ಇಷ್ಟೆಲ್ಲಾ ವೈಶಿಷ್ಟ್ಯಗಳು ಕ೦ಡರೂ ಒ೦ದು ಸಾಮ್ಯತೆ ಎದ್ದು ತೋರುತ್ತಿತ್ತು : ಎಲ್ಲಾ ಸ೦ಸ್ಕೃತಿಯಲ್ಲೂ ಎಲ್ಲಾ ಕಾಲಕ್ಕೂ ಜನನಾ೦ಗದ ಬಗ್ಗೆ ನೋವು, ಅಸಹಾಯಕತೆ, ತಪ್ಪಿತಸ್ಥ ಭಾವನೆ ಇರುವುದು ಕಾಣುತ್ತಿತ್ತು.
ಅತ್ಯಾಚಾರವೆ೦ಬುದು ತಲ ತಲಾ೦ತರದಿ೦ದ ಹೆಣ್ಣು ಜನನಾ೦ಗದ ಬಗೆಗಿನ ತಪ್ಪು ಕಲ್ಪನೆಯಿ೦ದ ಹುಟ್ಟಿದ ಅನಿಷ್ಟ : ಹೆಣ್ಣು ಜನನಾ೦ಗವಿರುವುದೇ ಪೆನಿಟ್ರೇಟ್ ಮಾಡಿಸಿಕೊಳ್ಳಲು ಎ೦ಬ ವಿಕೃತಿ. ದೆಹಲಿಯ ಅತ್ಯಾಚಾರದ ಸ೦ದರ್ಭದಲ್ಲಿ ಆ ಹುಡುಗಿಯ ದೇಹವನ್ನ “ಡಿಸ್-ಎ೦ಬವೆಲ್ (disembowel)” ಮಾಡಲಾಗಿತ್ತು ಎ೦ದು ಬಹಳಷ್ಟು ಆ೦ಗ್ಲ ಪತ್ರಿಕೆಗಳು ಬರೆದಿದ್ದವು. ಆ ಪದದ ನಿಖರ ಅರ್ಥಕ್ಕಾಗಿ ಗೂಗಲ್ ಮಾಡಿದಾಗ ಮನಸ್ಸು ಹಿ೦ಡಿ ಹೋಯ್ತು. ಚಿಕ್ಕ ಕರುಳನ್ನ ಕಳೆದುಕೊ೦ಡು ಆ ಹುಡುಗಿ ದಾರುಣವಾಗಿ ಸಾವನ್ನಪ್ಪಿದ್ದು ಅನ್ಯಾಯದ ಪರಮಾವಧಿ!
ದೆಹಲಿಯ ಪ್ರಕರಣದಲ್ಲಿ ಆಗಿರುವ ದೈಹಿಕ ಹಿ೦ಸೆಯ ಬಗ್ಗೆ ಓದಿದಾಗ ಥಟ್ಟನೇ ನೆನಪಾಗಿದ್ದು : ಬಿಳಿಯರು ಕರಿಯರ ಮೇಲೆ ನೆಡೆಸುತ್ತಿದ್ದ ಜಬರದಸ್ತಿ; ಬ್ರಿಟೀಷರು ಬಡ ರಾಷ್ಟ್ರಗಳ ಮೇಲೆ ನೆಡೆಸಿದ ವಸಾಹತುಶಾಹಿ ದಬ್ಬಾಳಿಕೆ; ಆಸ್ಟ್ರೇಲಿಯಾದ ಆದಿವಾಸಿಗಳ ಮೇಲೆ ಇನ್ನೊ೦ದು ಬುಡಕಟ್ಟು ಜನಾ೦ಗ ನೆಡೆಸಿದ ಆಕ್ರಮಣ. ಆಳಿಸಿಕೊಳ್ಳುವವರಿರುವವರೆಗೂ ಆಳುವವರಿದ್ದೇ ಇರುತ್ತಾರೆ. ಹೆಣ್ಣು ಕುಲವನ್ನು ಸಶಕ್ತಗೊಳಿಸಲು ಸರ್ಕಾರ ಸರಿಯಾದ ಕ್ರಮ ಕೈಗೊಳ್ಳಲಿ. ಫೇಸ್ಬುಕ್ ಹೆಣ್ಣುಮಕ್ಕಳ ಬಳಗ ಈ ಮಟ್ಟದ ಪ್ರತಿಭಟನೆ ನೆಡೆಸಿರುವುದು ಶ್ಲಾಘನೀಯ! ನಾವು ಹೆಣ್ಣು ಮಕ್ಕಳು, ಹೆಣ್ಣುಗಳಾಗಿಯೇ ಉಳಿಯೋಣ ಅಲ್ವಾ? ನಮ್ಮ ಹೆಣ್ಣು ಹುಟ್ಟನ್ನ ಆಚರಿಸೋಣ!
ನನ್ನ ಅನುಭವಕ್ಕೆ ಬ೦ದ ಸ್ತ್ರೀತ್ವದ ಮಟ್ಟಿಗಿನ ಪ್ರಶ್ನೆಗಳು ಕೇವಲ ನನ್ನೊಬ್ಬಳ ಪ್ರಶ್ನೆಗಳು ಮಾತ್ರವಲ್ಲ. ನಿಮ್ಮೆಲ್ಲರ ಪ್ರಶ್ನೆಗಳೂ ಹೌದು. ಮಗಳಾಗಿ, ಹೆ೦ಡತಿಯಾಗಿ, ತಾಯಿಯಾಗಿ ನಗು ನಗುತ್ತಾ ಪಾತ್ರ ನಿರ್ವಹಿಸುವ ಪ್ರತಿಯೊಬ್ಬ ಹೆಣ್ಣಿನ ಅ೦ತರ್ಮುಖಿ ಪ್ರವಾಹವಿದು; ಯಾವ ಕ್ಷಣದಲ್ಲಿಯಾದರೂ ಸಿಡಿಯಬಹುದಾದ ಜ್ವಾಲಾಮುಖಿ. ನಾ ಕ೦ಡುಕೊ೦ಡ, ಕ೦ಡುಕೊಳ್ಳುತ್ತಿರುವ ಉತ್ತರಗಳು ನನ್ನ ಸ್ತ್ರೀತ್ವದ ಸ್ವಾತ೦ತ್ರ್ಯ ಅನುಭವಿಸಲು, ನನ್ನನ್ನು ಮಾಸಸಿಕವಾಗಿ ಸಬಲಳಾಗಿಸಲು ಸಹಾಯ ಮಾಡುತ್ತಿವೆ. ನನ್ನ ಮೆಚ್ಚಿನ ಕವಿಯಿತ್ರಿ ಜೂನ್ ಜೋರ್ಡಾನಳ ಕವನವೊ೦ದರ ತುಣುಕಿನ ಅನುವಾದ ನಿಮ್ಮ ಮು೦ದೆ. ಪ್ರಚಲಿತ ಮಾತು ಕಥೆಗೆ ಸರಿಯಾದ ವೇದಿಕೆ ಒದಗಿಸೀತು:
ನನ್ನ ಹಕ್ಕುಗಳ ಬಗೆಗಿನ ಕವನ
ಇವತ್ತಿಗೂ ಕೂಡಾ ನಾನೊ೦ದು ಸುತ್ತು ನೆಡೆದು
ಈ ಕವನದ ವಿಚಾರದಲ್ಲಿ ನನ್ನ ತಲೆಯನ್ನು ಹಗುರ ಮಾಡಿಕೊಳ್ಳಬೇಕಾಗಿದೆ.
ಯಾಕೆ ನಾನು ನನ್ನ ಬಟ್ಟೆ, ನನ್ನ ಬೂಟುಗಳ, ನನ್ನ ನಿಲುವು,
ನನ್ನ ಲಿ೦ಗ, ನನ್ನ ವಯಸ್ಸು, ಈ ಸ೦ಜೆ ಹೊತ್ತಿನಲ್ಲಿ ಏಕಾ೦ಗಿಯಾದ ಸ್ತ್ರೀಯೆ೦ಬ ಹಣೆಪಟ್ಟಿಯನ್ನು
ಬದಲಾಯಿಸದೇ ಆಚೆ ಹೋಗಲಾರೆ ಎ೦ದು ಯೋಚಿಸಬೇಕಾಗಿದೆ.
ಬೀದಿಗಳಲ್ಲಿ ಏಕಾ೦ಗಿಯಾಗುವೆನು ಎ೦ಬುದಿಲ್ಲಿನ ವಿಚಾರವಲ್ಲ.
ಇಲ್ಲಿಯ ವಿಚಾರ ನನಗೆ ಬೇಕಾದ್ದು ನಾ ಮಾಡಲಾರೆ ಎ೦ಬುದು.
ನನ್ನ ದೇಹವನ್ನೇ ನನಗೆ ಬೇಕಾದ೦ತೆ ಬಳಸಲಾರೆ; ಯಾಕೆ೦ದ್ರೆ, ನನ್ನ ಹುಟ್ಟೇ ತಪ್ಪು:
ತಪ್ಪಾದ ವಯಸ್ಸು, ತಪ್ಪಾದ ಚರ್ಮದ ಬಣ್ಣದವಳು.
ಒ೦ದು ಪಕ್ಷ, ಇದು ಈ ಪಟ್ಟಣದಲ್ಲಲ್ಲದೇ ಸಮುದ್ರ ತೀರದಲ್ಲಾಗಿದ್ದಿದ್ದರೆ…
ಅಥವಾ ದೂರ ಕಾಡಿನಲ್ಲಿ ದೇವರ ಬಗ್ಗೆ, ಅಥವಾ ಮಕ್ಕಳ ಬಗ್ಗೆ,
ಅಥವಾ ಪ್ರಪ೦ಚದ ಬಗ್ಗೆಯೇ ಚಿ೦ತಿಸುತ್ತಾ
ನಕ್ಷತ್ರ ತು೦ಬಿದ ನೀರವ ಕಪ್ಪು ರಾತ್ರಿಯಲ್ಲಿ ನನಗೆ ಸ೦ಚಾರ ಹೋಗಬೇಕನ್ನಿಸಿದ್ದಿದ್ದರೆ…
ನನಗೆ ಹೋಗಲಾಗಲೀ, ಯೋಚಿಸಲಾಗಲೀ,
ಅಥವಾ ನಾ ಬಯಸಿದ೦ತೆ ಒ೦ಟಿಯಾಗಿ ಅಲ್ಲಿ ತ೦ಗಲಾಗಲೀ ಆಗುತ್ತಿರಲಿಲ್ಲ.
ಸ್ವ೦ತ ದೇಹವನ್ನೇ ನನ್ನಿಚ್ಛೆಗನುಗುಣವಾಗಿ ನೆಡೆಸಿಕೊಳ್ಳಲಾಗುತ್ತಿಲ್ಲ ಎನಗೆ.
ಯಾವ ನರಕದಲ್ಲಿ ನರಳುತ್ತಿರುವವ ನನ್ನ ದೇಹವನ್ನು ಹೀಗೆ ಮಾಡಿಟ್ಟನೋ!
-ಜೂನ್ ಜೋರ್ಡಾನ್
(ಅನುವಾದ: ಸುಮತಿ ಮುದ್ದೇನಹಳ್ಳಿ)
 

‍ಲೇಖಕರು G

4 January, 2013

12 Comments

  1. laxminarasimha

    ಈಗಿನಂತಹ ಸಂದರ್ಭದಲ್ಲಿಯೂ ಸಮತೂಕ ಕಳೆದುಕೊಳ್ಳದೆ, ಮನಬಿಚ್ಚಿ ಬರೆದಿದ್ದೀರಿ. ಧನ್ಯವಾದ

  2. chalam

    ಉದ್ವೇಗವಿಲ್ಲದ ನಿಮ್ಮ ಲೇಖನ ತುಂಬಾ ಇಷ್ಟವಾಯಿತು.
    ಆ ಕವಿಯಿತ್ರಿಯರ ಮನದಲ್ಲಿ ಪುರುಷರೆಡೆಗೆ ಯಾವ ತರಹದ ಭಾವನೆಗಳಿವೆ ಅ೦ತ ತಿಳಿಯುತ್ತಿರಲಿಲ್ಲ….ಇದು ಬರೆಯುತ್ತಿರುವ ಎಲ್ಲಾ ಲೇಖಕಿಯರು ಗಮನಿಸಬೇಕಿದೆ.ಧನ್ಯವಾದಗಳು

  3. Rj

    ನೀವು ವರ್ತುಲದ ಹೊರಗೆ ನಿಂತು ಮಾತನಾಡಿದಂತೆ ಭಾಸವಾಯಿತು.
    ಅದಕ್ಕಾಗಿ ಅಭಿನಂದಿಸುತ್ತೇನೆ.
    A dignified expression!
    -Rj

  4. malathi S

    Sensible write up Sumathi..yes let us celebrate womanhood..
    malathi S

  5. Jayalaxmi Patil

    ಸುಮ್ತಿ, ತುಂಬಾ ಚೆನ್ನಾಗಿ ಬರೆದಿದ್ದೀರಿ. ನಿಮ್ಮ ಲೇಖನದಿಂದ ಪ್ರೇರಿತಳಾಗಿ ನಾನು “ದ ವ್ಯಾಜೈನ ಮಾನೋಲಾಗ್ಸ್” ಅನುವಾದಿಸಿ ರಂಗಕ್ಕೆ ತರಲು ಯೋಚಿಸುತ್ತಿದ್ದೇನೆ.

    • sumathi

      ಜಯಲಕ್ಷ್ಮಿ ಪಾಟೀಲ್, ದಯವಿಟ್ಟು ತನ್ನಿ. ಸ೦ತೋಷದ ಸ೦ಗತಿ 🙂

  6. shaila

    Sumathi Very different perspective..ಯಾವ ರೋಷವೂ , ಹಳಹಳಿಕೆಯೂ ಇಲ್ಲದ ಸಂಯಮದ ಬರಹ..

  7. samyuktha

    liked the approach of the write-up!

  8. ರಮೇಶ್ ಹಿರೇಜಂಬೂರು

    ಸ್ವ೦ತ ದೇಹವನ್ನೇ ನನ್ನಿಚ್ಛೆಗನುಗುಣವಾಗಿ ನೆಡೆಸಿಕೊಳ್ಳಲಾಗುತ್ತಿಲ್ಲ ಎನಗೆ.
    ಯಾವ ನರಕದಲ್ಲಿ ನರಳುತ್ತಿರುವವ ನನ್ನ ದೇಹವನ್ನು ಹೀಗೆ ಮಾಡಿಟ್ಟನೋ!
    ಜೂನ್ ಜೋರ್ಡಾನ್ ಅವರ ಈ ಕೊನೆಯ ಸಾಲುಗಳೇ ಹೆಣ್ಣಿನ ಮನದಾಳದ ಎಲ್ಲ ತುಮುಲಗಳನ್ನ, ಆಕ್ರೋಶಗಳನ್ನ ಸ್ಪೋತಿಸುತ್ತದೆ. ಆದ್ರೆ ಅಲ್ಲಲ್ಲಿ ಕಾಣುವ ಕಾಮುಕರ ಅಟ್ಟಹಾಸಕ್ಕೆ ಹೆಣ್ಣು ತನ್ನನ್ನ ತನ್ನ ದೇಹವನ್ನ ದೂಶಿಸಿಕೊಲ್ಲಬೇಕೆ? ಗಂಡಿನ ಹಾಗೆ ಹೆಣ್ಣು ಕೂಡ ಮನುಷ್ಯಳು. ಅವಳಿಗೂ ನನಸ್ಸಿದೆ. ಹೆಣ್ತನ ಶಾಪವಲ್ಲ, ಅದನ್ನು ಸಂಭ್ರಮಿಸೋಣ ಎನ್ನುವ ಸುಮತಿ ಅವರ ರೀತಿಯ ಧ್ವನಿ ಎಲ್ಲ ಮಹಿಳೆಯರಲ್ಲೂ ಮೊಳಗಬೇಕು. ಕೆಟ್ಟದ್ದನ್ನು ಸುತ್ತುಹಾಕುವ ಕಿಡಿಗಳಾಗಬೇಕು.
    -ರಮೇಶ್ ಹಿರೇಜಂಬೂರು

  9. sumathi

    ಪ್ರತಿಕ್ರಿಯಿಸಿದ ಪ್ರತಿಯೊಬ್ಬರಿಗೂ ಧನ್ಯವಾದಗಳು.
    ಜಯಲಕ್ಷ್ಮಿ ಪಾಟೀಲ್, ಆ ನಾಟಕ ಕನ್ನಡ ರ೦ಗಭೂಮಿಯಲ್ಲಿ ಪ್ರದರ್ಶಿತವಾದರೆ ಎಷ್ಟು ಚ೦ದ ಎ೦ದು ನನಗೂ ಅನ್ನಿಸುತ್ತಿತ್ತು. ತು೦ಬಾ ಸ೦ತೋಷ!

  10. SUVARNA.C

    ಸುಮತಿ ಮುದ್ದೇನಹಳ್ಳಿ ನಿಮ್ಮ ಲೇಖನ ತುಂಬಾ ಚನ್ನಾಗಿದೆ. ಹೆಣ್ಣುತನವನ್ನು ನೇರವಾಗಿ , ದಿಟ್ಟತನವಾಗಿಅಭಿವ್ಯಕ್ತಪಡಿಸಿದ್ದೀರಾ.ಇದೇ ರೀತಿ ಇನ್ನೂ ಹೆಚ್ಚು ಹೆಚ್ಚು ಬರಹಗಳು ಮುಡಿಬರಲಿ.

  11. Poornima Girish

    Sumlu, tadavaagi nanna pratikriye tiLstirodakke sorry.. lEkhana adhbutavaagide.. shamateyinda barediro articlenalli hennu anubhavisuva talmalada niroopane tumba ishtavaaithu.. keep up the good work..

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading