ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನಮ್ಮ ಮನೆಗೆ ಬಂದ ಸುಸ್ಸೂ ರಾಜ!

ಪಪ್ಪಾ, ಸುಸ್ಸೂ ರಾಜಾ ..!

ಡಾ ಎಸ್ ಬಿ ಜೋಗುರ

ಕಂದು ಬಣ್ಣದ ಆ ನಾಯಿ ಕರೆಯದೇ ಬಂದಿತ್ತು. ಚು..ಚು.. ಅಂತ ಲಲ್ಲೆಗರೆದದ್ದೇ ಬಾಲ ಅಲ್ಲಾಡಿಸುತ್ತಾ ಓಡಿ ಬಂದು ನನ್ನ ಮೇಲೆ ಅಂಟರಗಾಲು ಕೊಟ್ಟಿತ್ತು. ಪ್ಯಾಂಟ್ ಕೊಳೆಯಾಗಿತ್ತು. ಅದು ರೇಮಂಡ್ ಪ್ಯಾಂಟು ಎನ್ನುವ ಖಬರೂ ಅದಕ್ಕಿರಲಿಲ್ಲ. ನನ್ನ ಮಗ ಮತ್ತು ಹೆಂಡತಿ ಇಬ್ಬರೂ ಹೀಗೆ ಕರೆಯದೇ ಬಂದವನನ್ನು ಕಂಡು ಖುಷಿ ಪಟ್ಟರು. ನಮ್ಮೆಲ್ಲರಿಗೂ ನಾಯಿ ಅಂದರೆ ತುಂಬಾ ಇಷ್ಟ. ಅದರಲ್ಲೂ ತಂಗಳನ್ನವನ್ನೂ ಬಾಲ ಅಲ್ಲಾಡಿಸುತ್ತಾ ಕಟೆಯುವ ಕುನ್ನಿಗಳೆಂದರೆ ಮತ್ತೂ ಖುಷಿ. ಅದು ನಾನಿರುವ ಬಾಡಿಗೆ ಮನೆ. ಅದನ್ನು ತಾನೇ ಮುಂದೆ ನಿಂತು ಕಟ್ಟಿಸಿರುವೆ ಎನ್ನುವವನಂತೆ ಸೀದಾ ಅಡುಗೆ ಮನೆಗೆ ಪ್ರವೇಶ.
ನನ್ನಾಕೆ ಸೀ..ಸೀ.. ಇದೇನು ಸೀದಾ ಒಳಗೇ ಬಂತಲ್ಲ..! ಎಂದು ಹಚ್..ಹಚ್.. ಎನ್ನುತ್ತಿರುವಂತೆ ಮೆಲ್ಲಗೆ ಬಾಲ ಅಲ್ಲಾಡಿಸುತ್ತಾ ನನ್ನ ರೀಡಿಂಗ್ ರೂಮಲ್ಲಿ ಪ್ರವೇಶ. ಕಪಾಟಿನಲ್ಲಿರುವ ಪುಸ್ತಕಗಳನ್ನು ಅದು ಗಂಭೀರವಾಗಿ ಮೂಸುವದನ್ನು ನೋಡಿ ಅವನೀಗ ಕಾಲೆತ್ತುವ ತಯಾರಿಯಲ್ಲಿದ್ದಾನೆ ಎನ್ನುವದನ್ನು ಅರಿತು ನಾನೂ ಹಚ್.. ಎಂದೆ. ಮನೆಯ ಹೊರಗೆ ನಡೆದ. ಪಪ್ಪಾ ಅದಕ್ಕೆ ಏನಾದರೂ ತಿನ್ನಲಿಕ್ಕೆ ಹಾಕಲಾ..? ಎಂದು ಮಗ ಕೇಳಿದ. ಆಯ್ತು ಅಂದದ್ದೇ ಅವನು ಓಡಿ ಹೋಗಿ ಚಪಾತಿಯೊಂದನ್ನು ತಂದು ಅದರ ಮುಂದೆ ಇಟ್ಟ. ಅದು ಸಿ.ಬಿ.ಐನವರು ತಪಾಸಣೆ ಮಾಡುವಂತೆ ಮೂಸಿದ್ದೇ ಮೂಸಿದ್ದು. ಇದೊಂಥರಾ ಪತ್ತೇಧಾರಿ ಕುಲದ ನಾಯಿಯಿರಬೇಕು ಅಂದುಕೊಳ್ಳುವಾಗಲೇ ನನ್ನ ಕಾರ ಟೈರನ್ನು ಮೂಸುತ್ತಾ ಅದರ ಮೇಲೆ ಮೂತ್ರಿ ಮಾಡಿತ್ತು.

ನನ್ನ ಮಗ ಅದನ್ನು ನೋಡಿ ‘ಪಪ್ಪಾ.. ಇದು ಸುಸ್ಸೂ ರಾಜಾ’ ಎಲ್ಲೆಂದರಲ್ಲಿ ಅವನು ಕಾಲೆತ್ತುವ ಖಯಾಲಿಯನ್ನು ನೋಡಿ ನನಗೂ ಹಾಗೇ ಅನಿಸಿತ್ತು. ಅದು ಮನೆಯೊಳಗೆ ಬರುವಾಗಲೇ ಗೇಟ್ ಮೇಲೆ, ಗೋಡೆ ಮೇಲೆ, ಈಗ ಕಾರಿನ ಟೈರ ಮೇಲೆ ಸುಮಾರು ಐದೇ ನಿಮಿಷದಲ್ಲಿ ಮೂರ್ನಾಲ್ಕು ಬಾರಿ ಕಾಲು ಮೇಲೆತ್ತೆರುವದಿತ್ತು. ಮನದಲ್ಲೇ ನಗುತ್ತಾ ಅದನ್ನು ಸಾಕಿದವರ ಮನೆ ಬೇಸಿಗೆಯಲ್ಲಿ ತಣ್ಣಗಿರಲಿ ಎಂದುಕೊಂಡೆ.
ಅದಾದ ಸ್ವಲ್ಪ ಹೊತ್ತಲ್ಲಿ ಆ ಚಪಾತಿಯನ್ನು ಬಾಯಲ್ಲಿ ಹಿಡಿದು, ಮಣ್ಣುಗುಡ್ದೆಯ ಬಳಿ ಹೋಗಿ ಅದನ್ನು ಅಲ್ಲಿಟ್ಟು ಪರಪರ ಮಣ್ಣು ಕೆರೆದು ಅದರಲ್ಲಿ ಹೂತಿಟ್ಟು ಹಿಂತಿರುಗಿತು. ಅದನ್ನು ಕಂಡು ನನ್ನ ಪತ್ನಿ ‘ಓಹೋ.. ಈ ನಾಯಿಯಲ್ಲಿ ಸದ್ಗುಣಗಳೇ ಹೆಚ್ಚಿಗಿವೆ’ ಎಂದು ನಕ್ಕಳು. ಬಾಲ ಅಲ್ಲಾಡಿಸುತ್ತಾ ನನ್ನ ಸಮೀಪ ಬಂತು. ಅದರ ಬಗೆಗಿನ ಪ್ರೀತಿ ಅದಾಗಲೇ ಭಯದಲ್ಲಿ ಬದಲಾಗಿತ್ತು. ಹತ್ತಿರ ಬಂದು ಅದು ನನ್ನನ್ನು ಮೂಸುವದನ್ನು ಗಮನಿಸಿದ ನನ್ನ ಮಗ ಜೋರಾಗಿ ‘ಪಪ್ಪಾ, ಸುಸ್ಸೂ ರಾಜ ಹುಷಾರು..!’ ಅಂದ. ತಟ್ಟನೇ ಕೈಗೆ ಕಲ್ಲೆತ್ತಿಕೊಂಡೆ. ಸುಸ್ಸೂ ರಾಜಾ ಕಾಲು ಕೀಳಿದ್ದ. ಹಾಗೆಂದು ಮಾಯವಾಗಲಿಲ್ಲ. ಆಗಾಗ ಮನೆಯ ಬದಿ ಹಾಯುತ್ತಾನೆ.
ಈಗ ಅದನ್ನು ಒಳಗೆ ಕರೆಯುವದಿಲ್ಲ. ಯಾಕೆಂದರೆ ಅವನ ಕಾಲೆತ್ತುವ ಚಟವನ್ನು ಮರೆಯುವದಾದರೂ ಹೇಗೆ..?
 
 
 
 

‍ಲೇಖಕರು avadhi

7 October, 2013

1 Comment

  1. Anand Jakkannavar

    nayia kathe chennagiye helidira sir…………

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading