ಸಿನೆಮಾ ‘ಕಿಚನ್’

ನಮ್ಮ ಭಾರತೀಯ ಚಿತ್ರಗಳಿಗೂ ಮತ್ತು The great Indian Kitchenಗೂ ಅವಿನಾವ ಸಂಭಂದ…

ಸಂಗೀತಾ ಚಚಾಡಿ

“ROCKETRY The Nambi effect“ ನಲ್ಲಿ ನಂಬಿಗೆ ಆಮ್ಲೆಟ್ ಮಾಡುವಾಗ ಅದೇನೋ ವೈಜ್ಞಾನಿಕ ತಂತ್ರ ಹೊಳೆಯುತ್ತದೆ. “Mangalayan“ ಚಿತ್ರದಲ್ಲಿ ಪೂರಿ ಕರೆಯುವಾಗ ಇಸ್ರೋ ವಿಜ್ಞಾನಿ ತಾರಾ ಶಿಂಧೆಯವರಿಗೆ ಒಂದು ಯೋಚನೆ ಹೊಳೆಯುತ್ತದೆ. ಅಡಿಗೆ ಮನೆಯೆಂದರೆ ಅದೊಂದು ಅಂತಹ ಅದ್ಭುತ ಪ್ರಯೋಗಶಾಲೆಯೇ.

ಸಾಹಿತ್ಯದ ಗುಂಪುಗಳು, ಕಥಾ ಕೂಟಗಳು ಇರುವಂತೆಯೇ ನಮ್ಮ ವೃತ್ತಿಗೆ ಸಂಭಂದಿಸಿದ ಗುಂಪುಗಳೂ ಇವೆ.
ನಾನು ಬರೆಯುವ ಅಲ್ಪ ಸ್ವಲ್ಪ ಬರಹಗಳನ್ನು ನೋಡಿದ ನಮ್ಮ ಗುಂಪಿನ ಹಿರಿಯ ಇಂಜಿನಿಯರ್ ಒಬ್ಬರು ನಮ್ಮ ಸಿವಿಲ್ ಇಂಜಿನಿಯರಿಂಗ್ ಬಗ್ಗೆ ಕನ್ನಡದಲ್ಲಿ ಬರೆಯಿರಿ ಎಂದು ಸಲಹೆ ಕೊಟ್ಟರು. ನಿಜಕ್ಕೂ ಬಹಳ ಖುಷಿಯಾಯಿತು.ಅಮೂಲ್ಯವಾದ ಸಲಹೆಯದು.

ಹೇಗೆ ಶುರುಮಾಡೋಣ? ಎಂದು ಯೋಚಿಸುತ್ತಿದ್ದೆ. ಅಷ್ಟರಲ್ಲಿ ಪಂಚಮಿ ಬಂತು. ತಂಬಿಟ್ಟಿನ ಕೆಲಸ ಶುರುವಾಯಿತು. ಈ ತಂಬಿಟ್ಟು ಮಾಡುವದು ಸ್ವಲ್ಪ ಟ್ರಿಕ್ಕಿ. ಬೆಲ್ಲವನ್ನು ತುಪ್ಪದಲ್ಲಿ ಕರಗಿಸಿ, ಹಿಡಿಯುವಷ್ಟು ಹಿಟ್ಟು ಹಾಕುತ್ತಾ ಬಿಸಿ ಬಿಸಿ ಇದ್ದಾಗಲೇ ಕಟ್ಟಬೇಕು. ಕೈಯೆಲ್ಲ ಕೆಂಪಗೆ ಮಾಡಿಕೊಂಡು. ತುಪ್ಪ ಕಡಿಮೆಯಾದರೆ ಕಟ್ಟಲು ಬರುವದಿಲ್ಲ. ಕೈಬಿಟ್ಟು ಜಾಸ್ತಿ ಹಾಕಿದರೆ ತಂಬಿಟ್ಟು ಬೇಕಾದ ಆಕೃತಿಯಲ್ಲಿ ಕೂಡಲ್ಲ.

ರವೆ ಲಾಡು ಮಾಡುವದು ಸ್ವಲ್ಪ ಕಷ್ಟ. ಸಕ್ಕರೆ ಪಾಕ ಸರಿಯಾಗಿ ಬರಬೇಕು. ಹೆಬ್ಬೆರಳು ಮತ್ತು ತೋರು ಬೆರಳಿನ ಮಧ್ಯೆ ಪಾಕವಿಟ್ಟು ತೋರುಬೆರಳು ಮೇಲೆತ್ತಿದಾಗ ಪಾಕ ಬೆರಳಿಗಂಟಿಕೊಂಡು ಎಳೆಯಂತೆ ಮೇಲೇಳಬೇಕು. ಆಗ ಅದು ಸರಿಯಾದ ಪಾಕವಾದಂತೆ. ಪಾಕಕ್ಕೆ ರವೆ ಸುರಿದು ಆರಿದ ನಂತರ ಉಂಡೆ ಕಟ್ಟಬಹುದು .

ಬೇಸನ್ ಲಾಡು ಮಾಡುವದು ಸ್ವಲ್ಪ ಸರಳ. ಕಡಲೇ ಹಿಟ್ಟನ್ನು ತುಪ್ಪದಲ್ಲಿ ಕೆಂಪು ಬಣ್ಣ ಬರುವವರೆಗೆ ಹುರಿದು ಆರಿದ ಮೇಲೆ ಎಷ್ಟು ಸಕ್ಕರೆಯ ಪುಡಿ ಹಿಡಿಯುತ್ತದೋ ಅಷ್ಟನ್ನು ಹಾಕಿ ಉಂಡೆ ಕಟ್ಟಬಹುದು.

ಹೀಗೆ ಬೇರೆ ಬೇರೆ ಉಂಡೆಗಳಿಗೆ ಬೇರೆ ಬೇರೆ ಹದ. ಕಟ್ಟಲು ಸರಳ ಎಂದು ಕೊಂಚ ಅಳ್ಳಕೆ ಮಾಡಿಕೊಂಡರೆ ಆಕಾರ ತಪ್ಪುತ್ತವೆ. ಕೊಂಚ ಗಟ್ಟಿಯಾದರೆ ತಿನ್ನುವಾಗ ಹಾರೆಯೇ ಬೇಕು. ರೆಸಿಪಿ ಪುಸ್ತಕದಲ್ಲಿ ಪರಿಮಾಣಗಳಿದ್ದರೂ ಕೌಶಲ್ಯ ಸಿದ್ಧಿಸಬೇಕು ಎಂದರೆ ಹಲವಾರು ಪ್ರಯತ್ನಗಳಾಗಬೇಕು. ಬಳಸುವ ಸಾಮಾನುಗಳ ಗುಣಮಟ್ಟ ಕೂಡ ಮುಖ್ಯ.
ಒಂದೇ ಗುಣಮಟ್ಟದ ಸಾಮಾನುಗಳು, ಹೆಚ್ಚು ಕಮ್ಮಿ ಒಂದೇ ಪರಿಮಾಣ ಹಾಗೂ ಅವುಗಳನ್ನು ಬೆರೆಸುವ ಕೌಶಲ್ಯ ಇವೆಲ್ಲವೂ ಸೇರಿದಾಗ, ನಿರಂತರವಾಗಿ ಒಂದೇ ರೀತಿಯ ಸ್ವಾದ ಹಾಗು ಆಕಾರ ಸಾಧ್ಯ.

ಕಟ್ಟಡಕ್ಕೆ ಬೇಕಾಗುವ ಕಾಂಕ್ರೀಟ್ ಕೂಡ ಹೀಗೆಯೇ. ವಿಶಾಲವಾದ ಅಡಿಪಾಯಕ್ಕೆ ಹಾಕುವಾಗ ಬೇಕಾಗುವ ಸಾಂದ್ರತೆ ಬೇರೆ, ಕಂಭಗಳಿಗೆ ಬೇಕಾಗುವ ಸಾಂದ್ರತೆ ಬೇರೆ. ಪಂಪ್ ಮಾಡಿ ಹಾಕಬೇಕಾದ ಕಾಂಕ್ರೀಟ್ ನ ಸಾಂದ್ರತೆ ಬೇರೆ. ಸಿಮೆಂಟು, ಉಸುಕು, ಕಲ್ಲು ಹಾಗೂ ನೀರಿನ ಮಿಶ್ರಣವಾದರೂ ಅವುಗಳ ಬೇರೆ ಬೇರೆ ಪರಿಮಾಣ ಹಾಗೂ ಬೆರೆಸುವ ವಿಧಾನ ಅದರ ಅಂತಿಮ ಶಕ್ತಿಗೆ ಕಾರಣವಾಗುತ್ತವೆ.

ತಂಬಿಟ್ಟು ಮಾಡುವಾಗ ಹಾಕುವ ಒಣ ಕೊಬ್ಬರಿಯ ಹೆರಕಲು, ಬೆಲ್ಲ ಹಾಗೂ ಹಿಟ್ಟಿನ ಮಿಶ್ರಣವನ್ನು ಸೇರಿಕೊಂಡು ಅದರ ಗಟ್ಟಿತನವನ್ನು ಹೆಚ್ಚಿಸುವಂತೆ, ಬೇಸನ್ ಲಾಡುವಿನಲ್ಲಿ ಹಾಕುವ ಗೋಡಂಬಿ ದ್ರಾಕ್ಷಿಗಳು ಅದರ ರುಚಿಯನ್ನು ಹೆಚ್ಚಿಸುವಂತೆ, ರವೆ ಲಾಡುವಿನಲ್ಲಿ ಹಾಕುವ ಕೇಸರಿ ಬಣ್ಣ ಅದಕ್ಕೊಂದು ಮೆರಗು ನೀಡುವಂತೆ, ಕಾಂಕ್ರೀಟನಲ್ಲೂ ಕೂಡ ಬೇರೆ ಬೇರೆ ಸೇರ್ಪಡೆಗಳಿವೆ.

ಕಾಂಕ್ರೀಟ್ ಮಿಕ್ಸ್ ಗಳಿಗಾಗಿಯೇ ದೊಡ್ಡ ದೊಡ್ಡ ಪ್ರಯೋಗಶಾಲೆಗಳಿವೆ. ಟ್ರಯಲ್ ಮಿಕ್ಸ್ ಎನ್ನುವ ಶೀರ್ಷಿಕೆಯಡಿಯಲ್ಲಿ ವಿಧ ವಿಧವಾದ ಮಿಶ್ರಣಗಳನ್ನು ತಯಾರಿಸಿ ಅವುಗಳು ತಡೆದುಕೊಳ್ಳಬಹುದಾದ ಒತ್ತಡಗಳನ್ನು ಬರೆದಿಟ್ಟಿರುತ್ತಾರೆ. ಇಂಜಿನಿಯರ್ ತನ್ನ ನಕ್ಷೆಗಳಲ್ಲಿ ಉಲ್ಲೇಖಿಸಿದ ಒತ್ತಡಗಳಿಗನುಸಾರವಾಗಿ ಪ್ಲಾಂಟಗಳಿಂದ ಕಾಂಕ್ರೀಟ್ ಮಿಕ್ಸ್ ವಿತರಣೆಯಾಗುತ್ತದೆ.

ಕೊನೆಯಲ್ಲಿ ಎಲ್ಲ ಸರಿಯಿದ್ದೂ ಮಾಡುವ ಕೆಲಸದಲ್ಲಿ ಶ್ರದ್ಧೆಯಿರದಿದ್ದರೆ ಎಲ್ಲ ಕೆಲಸವೂ ವ್ಯರ್ಥ. ಎಲ್ಲವೂ ಮೇಳೈಸಿದಾಗ ಒಂದು ಗಟ್ಟಿಯಾದ ಕಟ್ಟಡ ಮೇಲೇಳುತ್ತದೆ ಅಥವಾ ರುಚಿಕಟ್ಟಾದ ಲಾಡು ತಯಾರಾಗುತ್ತದೆ.

‍ಲೇಖಕರು Admin

August 1, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: