ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನಮ್ಮ ಪ್ರೀತಿ ಬಾಡುತ್ತಿರುವುದನ್ನು ನೋಡುತ್ತೇನೆ….ಡಾ ಕೆಆರ್ ಸಂಧ್ಯಾರೆಡ್ಡಿ

ಪ್ರೀತಿಯ ಕೊನೆ

ಡಾ|| ಕೆ ಆರ್ ಸಂಧ್ಯಾ ರೆಡ್ಡಿ

ಬರಬೇಕಿತ್ತು
ಆದರೆ ಅರ್ಜೆಂಟಾಗಿ ಬೇರೆ ಕೆಲಸಕ್ಕೆ ಹೋಗಬೇಕಾಯ್ತು
ಎಂದು ಸಬೂಬುಗಳನ್ನು ಹೇಳುವಾಗ
ಸಿನಿಮಾ ನಾಟಕ ಪಾರ್ಟಿ ಓಡಾಟಗಳಿಗೆ
ಮರೆತು ಹೋದ ಗೆಳೆಯರೆಲ್ಲ
ನೆನಪಾಗ ತೊಡಗಿದಾಗ
ನಮ್ಮ ಪ್ರೀತಿ ಹಳಸುತ್ತಿರುವುದನ್ನು ನೋಡುತ್ತೇನೆ
ಥಿಯೇಟರಿನಲ್ಲಿ ಕೂರುವುದು ಸೆಖೆಎನ್ನಸಿ
ಹೊರಗಿನ ತಂಗಾಳಿ ಬೇಕು ಎನಿಸಿದಾಗ
ಜೊತೆಯ ಓಡಾಟದಲ್ಲೂ
ರಸ್ತೆಗಳು ಉದ್ದಾನು ಉದ್ದವಾಗತೊಡಗಿದಾಗ
ನಮ್ಮ ಪ್ರೀತಿ ಬಸವಳಿಯುವುದನ್ನು ನೋಡುತ್ತೇನೆ.
ನಮ್ಮ ಮಾಮೂಲು ಕೊಳು ಕೊಡುಗೆಗಳು
ಮರೆತು ಹೋಗತೊಡಗಿದಾಗ
ಮಾತಿಗೆ ವಿಷಯ ಸಿಕ್ಕದೆ
ಚಡಪಡಿಸುವಾಗ
ನಮ್ಮ ಪ್ರೀತಿ ಕಂಗೆಡುತ್ತಿರುವುದನ್ನು ಕಾಣುತ್ತೇನೆ

ಕೆಂಪು ಸಂಜೆಗಳಲ್ಲಿ
ಕನಸುಗಳು ಬಣ್ಣ ಕಳೆದುಕೊಳ್ಳುವಾಗ
ಖಾಲಿ ಮನೆಯಂತೆ ಮನಸು
ಭಣಗುಟ್ಟ ತೊಡಗಿದಾಗ
ನಮ್ಮ ಪ್ರೀತಿಗೆ ಕತ್ತಲಾವರಿಸುವುದನ್ನು ಕಾಣುತ್ತೇನೆ.
ಕಾವಿಲ್ಲದ ಮಾತು ಮಂಜಾದ ನಗು
ಮಿಂಚುಕಳೆದ ನೋಟಗಳಲ್ಲಿ
ನಮ್ಮ ಪ್ರೀತಿ ಬಾಡುತ್ತಿರುವುದನ್ನು ನೋಡುತ್ತೇನೆ.
ದಟ್ಟಹಸಿರಿನ ನಡುವೆ ಏಕಾಂತವೆನಿಸುವ ಬದಲು
ನೀರವ ಎನಿಸ ತೊಡಗಿದಾಗ
ಹೊತ್ತಾಗಿ ಬಿಟ್ಟಿತು ಹೊರಡೋಣ
ಎಂದು ನನಗಿಂತ ಮೊದಲು ನೀನೇ ಎದ್ದುನಿಂತಾಗ
ನಮ್ಮ ಪ್ರೀತಿ ಕೊನೆಯ ಉಸಿರೆಳೆಯುವ
ಸದ್ದನ್ನು ಆಲಿಸುತ್ತೇನೆ.

‍ಲೇಖಕರು avadhi

20 February, 2014

5 Comments

  1. Shwetha Hosabale

    ವಿಷಾದದ ನಿಟ್ಟುಸಿರು…
    ಇಷ್ಟ ಆಯ್ತು ಕವನ.

  2. Shreepad Hegde

    ಚನ್ನಾಗಿದೆ:ಹೆಣ್ಣಿನ ಭಾವನೆಗಳ ಸೂಕ್ಷ್ಮತೆ. ಈ ಕೆಳಗಿನ ಸಾಲುಗಳು ಇಷ್ಟವಾದವು.
    ದಟ್ಟಹಸಿರಿನ ನಡುವೆ ಏಕಾಂತವೆನಿಸುವ ಬದಲು
    ನೀರವ ಎನಿಸ ತೊಡಗಿದಾಗ
    ಹೊತ್ತಾಗಿ ಬಿಟ್ಟಿತು ಹೊರಡೋಣ
    ಎಂದು ನನಗಿಂತ ಮೊದಲು ನೀನೇ ಎದ್ದುನಿಂತಾಗ
    ನಮ್ಮ ಪ್ರೀತಿ ಕೊನೆಯ ಉಸಿರೆಳೆಯುವ
    ಸದ್ದನ್ನು ಆಲಿಸುತ್ತೇನೆ.

  3. y k sandhya sharma

    priya sandhya, raktha neeraaguttiruva ee vyaavahaarika jagattina durbala sambhandagala bagge vishaada vyaktapadisuva ellara antarangada novige kavite kannadi hididide. chennagide. abhinandanegalu.sanje kempalli banna kaledu,kanasu kaleduhoguva kaali manassu teevravaagi tattitu.

  4. gururaj katriguppe

    gice poem

  5. Prabhu Iynanda

    “…ನನಗಿಂತ ಮೊದಲು ನೀನೇ ಎದ್ದುನಿಂತಾಗ…”
    ಅಂದರೆ, ನಿನಗಿಂತ ಮೊದಲು ನಾನೆದ್ದು ನಿಲ್ಲಬೇಕಾಗಿತ್ತೇನು? ಇದಲ್ಲವೇ, ಸ್ವಾರ್ಥ?
    ಹಾಸ್ಯ ಒತ್ತಟ್ಟಿಗಿರಲಿ.
    ಮನುಷ್ಯನ ದೇಹ ನಶ್ವರ ಎಂದು ತಿಳಿದಿದ್ದರೂ, ಹೋಗುತ್ತಿರುವ ಪ್ರಾಣವನ್ನು ಉಳಿಸಿಕೊಳ್ಳುವ ಹಲವು ಪ್ರಯತ್ನಗಳನ್ನು ಮಾಡುತ್ತೇವೆ. ಹೋದ ಪ್ರಾಣವನ್ನೂ ಹಿಂದಕ್ಕೆ ತರಲು ಹರಸಾಹಸವನ್ನು ಮಾಡುತ್ತೇವೆ.
    ದೇಹದೊಳಗೆ ಪ್ರಾಣವಿದ್ದರೆ ಬದುಕಿರುತ್ತೇವೆ, ಸರಿ. ಆದರೆ ಆ ಬದುಕಿಗೆ ದಿವ್ಯಾರ್ಥವನ್ನು ಕೊಡುವ ಪ್ರೀತಿ ರೋಗಗ್ರಸ್ತವಾಗುತ್ತಿರುವಾಗ ಯಾವ ಆರೈಕೆಯನ್ನೂ ಮಾಡುವದಿಲ್ಲ. ಅದರ ನರಳುವಿಕೆಯನ್ನು ನೋಡಿಯೂ, ಪ್ರೀತಿಸುವವರನ್ನು ಬಂಧಿಸುವ ಸೂಕ್ಷ್ಮವಾದರೂ ಶಕ್ತಿಯುತವಾದ ಆ ಎಳೆಯನ್ನು ಸರಿಪಡಿಸಲು ಮುಂದಾಗುವದಿಲ್ಲ. ಅಲ್ಲಿ, “ನಾನಲ್ಲ, ನೀನೇ ಸರಿಪಡಿಸು” ಎನ್ನುವ ನಿಃಸ್ವಾರ್ಥತೆ!
    ಪ್ರೀತಿ ಬಾಡುತ್ತಿರುವದನ್ನು ಸುಮ್ಮನೇ ನೋಡುತ್ತಿದ್ದು, ಅದರ ಕೊನೆಯುಸಿರನ್ನು ಆಲಿವಲ್ಲಿ ಅದೆಂತಹ ನಿಷ್ಕಾರುಣ್ಯ!

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading