ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನಮ್ಮ ನಡುವೆ ಮಗಳು..

-ಸಂತೆಬೆನ್ನೂರು ಫೈಜ್ನಟ್ರಾಜ್

ಮಗಳ ಎದುರು ಕೈ ಕಟ್ಟಿ ಕೊಂಡಿದ್ದೇನೆ…

ಅಪ್ಪ ನಾನು
ಅಮ್ಮ ಇವಳು
ನಾವಿಬ್ಬರೂ ಒಂದೇ ಮನೆಯಲ್ಲಿದ್ದೇವೆ ಜಾತಿ
ಅಂಗಳದಲ್ಲಿ ನಿಂತಿದೆ

ನಮ್ಮ ನಡುವೆ ಮಗಳು
ಹೆಣ್ಣು ಅಷ್ಟೇ
ಆಚೆ ಏನೂ ಇಲ್ಲ ಓದು ಬರಹ ಬೆಳಕು
ನಮ್ಮ ನಡುವೆ ಮರ್ಯಾದೆ ಎಂದರೆ
ಇಷ್ಟೇ ಅನ್ನಿಸುತ್ತದೆ

ಅಕ್ಕಿಯ ಅನ್ನ
ಅಕ್ಷರದ ಅನ್ನ
ಕೂಡಿ ಉಣ್ಣುವ ಭಾಗ್ಯ
ಎದೆಯ ಕನಸು ನನಸಿಗೆ ಜಗತ್ತು ರಹದಾರಿ
ಜಾತಿ ಎಲ್ಲೋ, ಯಾವುದೋ ತಿರುವಲ್ಲಿದೆ ;
ಅಲ್ಲೇ ಇರಲಿ

ಮಗಳು ಓದುತ್ತಿದ್ದಾಳೆ
ಅವಳ ಆಕಾಶದಿ ನಾವು ಮೋಡ ಅಷ್ಟೇ
ಮರ್ಯಾದೆ ಎಂಬುದು
ಅವಳ ತಟ್ಟೆಯ ತುತ್ತು ;ನಮ್ಮ ಹಕ್ಕು ಅದರಲ್ಲಿಲ್ಲ
ಮಗಳ ಎದುರು ಕೈ ಕಟ್ಟಿ ಕೊಂಡಿದ್ದೇನೆ…

ಜಾತಿಯ ಜಾಲಿಮುಳ್ಳು…ನಮ್ಮ
ಅಂಗಳದಲ್ಲೂ ಇಲ್ಲ, ಹಿತ್ತಲಲ್ಲೂ ಇಲ್ಲ
ಹೂವಿಗಷ್ಟೇ ಗೊತ್ತು ಮುಡಿ ಮತ್ತು ದೇವರ ಪಾದ
ಆ ಮಗಳು ಜಗ ನೋಡದ ಕಂದನ ಜೊತೆಗೆ ಸತ್ತಳು
ಮನೆಮಗಳೂ ಕಣ್ಣೀರಿಟ್ಟಳು ; ಅಕ್ಷರದ ಮುಂದೆ ಮರ್ಯಾದೆ
ಮುಖ ಮುಚ್ಚಿಕೊಂಡಿದ್ದು ಕೊಂದ ಕಣ್ಣಿಗೆ ಕಾಣಲಿಲ್ಲ

ಬದುಕಿನ ಎದುರು
ಜಾತಿ ಎಲ್ಲೋ ದೇಶಾಂತರ ಹೋಗಬೇಕಿತ್ತು;
ಅಕ್ಷರ ಮರ ಬೆಳೆ ಬೆಳೆದಂತೆ
ಅಂಗಳದ ಆಲವಾಗುತ್ತಿರುವುದು
ಅನ್ನಕೂ, ಅಕ್ಷರಕೂ ಕೊನೆಗೆ ಮಾನವೀತೆಗೂ ಅವಮಾನ

ಮಗಳು ಅಕ್ಷರ ರಾಶಿ ಹಾಕಿ ಕುಳಿತಿದ್ದಾಳೆ
ಅವಳ ಬದುಕು
ಅವಳ ದಾರಿ
ಅವಳ ಹಾಡು ಹಾಡಿಕೊಂಡಿರಲಿ ; ಅಪ್ಪನ ಮರ್ಯಾದೆ ಅವಳ ಬದುಕಿನ
ಮೈಲಿಗಲ್ಲು ಅಲ್ಲ
ಪ್ರೀತಿ ಪರಾಗ ಅಷ್ಟೇ..

ಅನ್ನ ಉಂಡ ನಾವು
ಮನುಷ್ಯರೆನಿಸಿದರೆ ಸಾಕು
ಸಾವಿರ ಹೆಣ್ಣುಮಕ್ಕಳು ಅಕ್ಷರ ಬೆಳಕಲ್ಲಿ ಬಾಳುತ್ತಾರೆ
ಮತ್ತು
ಬೆಳಕಾಗುತ್ತಾರೆ…ಅದು ಮರ್ಯಾದೆಯೂ…..

‍ಲೇಖಕರು Admin

25 December, 2025

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading