ನಮ್ಮಿಬ್ಬರ ಮೌನ, ಮಧ್ಯೆ ಈ ಸ್ವರಗಳು ಇಷ್ಟೇ..

K P Lakshman

ಲಕ್ಷ್ಮಣ್ ಕೆ ಪಿ 

ಚಂದ್ರ ಕೌನ್ಸ ರಾಗದ ಆ ಕೋಮಲ “ನೀ”ಸ್ವರವಿದೆಯಲ್ಲ ಅದು ಲೋಕದ ಎಲ್ಲರ ನೋವು, ಚಡಪಡಿಕೆಗಳ, ವಿರಹಗಳ,ದಾಹ ಮತ್ತು ಧನ್ಯತೆಗಳನ್ನು ವ್ಯಕ್ತಪಡಿಸುವ ಹೊಣೆಯನ್ನು ತಾನೇ ಹೊತ್ತುಕೊಂಡಿರಬೇಕು.

ತಣ್ಣಗೆ ಜೀವ ತೆರೆದುಕೊಂಡು ಕೇಳುತ್ತಾ ಕೂತರೆ ಸಾಕು ಆ ಸ್ವರವೇ ತಾನು ನಡೆದು ಬಂದು ಮೆತ್ತಗೆ ಮೈ ಸವರಿ ತನ್ನ ಆಳದ ಪಸೆಯನ್ನೆಲ್ಲ ನಮ್ಮ ಮಡಿಲೊಳಕ್ಕೆ ಸುರಿದು ಎದೆಯ ಯಾವುದೋ ಮಗ್ಗುಲಿಗೆ ತಾಕಿ, ಕೆಲಸ ಮುಗಿಸಿ ಆರಾಮದ ನಿಷ್ಠ ಕೂಲಿಗಾರನಂತೆ ಸುಮ್ಮನಾಗಿಬಿಡುತ್ತದೆ.. ಕಂಪಿಸುವುದು, ಮೆತುವಾಗುವುದು ನಮ್ಮದೇ ಹೊಣೆ.

sheನನಗೆ ನುಡಿಸಲು, ಹಾಡಲು ಬರುತ್ತಿದ್ದುದು ಅದೊಂದೇ ರಾಗ. ರಾಗವೊಂದು ಬರುತ್ತದೆ, ಗೊತ್ತು ಅನ್ನುವುದೇ ಸೊಕ್ಕಿನ ಮಾತು. ಈ ಮಾತನ್ನು ಯಾವ ಸಂಗೀತಗಾರನೂ ಆಡಲಾರರೇನೋ ಆದರೆ ಅಭಿನಯಿಸುವ ನನ್ನಂತವರಿಗೆ ಒಂದು ರಾಗವೇಕೆ ಒಂದು ರಾಗದ ಮೂರೇ ಮೂರು ಸ್ವರಗಳು, ನಾಲ್ಕೇ ನಾಲ್ಕು ಫಲುಕು ವಿನ್ಯಾಸಗಳು ಗೊತ್ತಿದ್ದರೂ ಸಾಕು ಮಹಾಸಂಗೀತಗಾರನಂತೆ ಪೋಸು ಕೊಡುವುದು ಸುಲಭ. ಅದೂ ಎದುರುಗಡೆ ಹೆಣ್ಣೊಂದು ಬಂದು ನಿಂತುಬಿಟ್ಟರೆ ಮುಗಿದೇ ಹೋಯಿತು ಜಗತ್ತಿನ ಎಲ್ಲ ಗಾಯಕರು, ವಾದಕರು ನಮ್ಮ ತಲ್ಲೀನತೆ ಮುಂದೆ ತರಗುಟ್ಟಿಯೋ, ಮುಲಗುಟ್ಟಿಯೋ, ಪತರುಗುಟ್ಟಿಯೋ ಅಥವಾ ಇನ್ನೇನೋ ಗುಟ್ಟಿಯೋ ಹೋಗಬೇಕು, ಎಂದೂ ಸರಿಯಾಗಿ ಸೇರದ ಹಾಳಾದ ಶ್ರುತಿ ಅಂದು ಸೇರಿ ಬಿಡುತ್ತದೆ, ಎಲ್ಲ ಸ್ವರಗಳು ತಾಕಬೇಕಾದ ಜಾಗಕ್ಕೆ ತಾಕಿ ಬರುತ್ತಿರುತ್ತವೆ.

ಅಂದು ಆಗಿದ್ದು ಅದೇ, ದಕ್ಷಿಣ ಕನ್ನಡದ ಸಣ್ಣ ಪಟ್ಟಣವದು. ಪಟ್ಟಣದಿಂದ ಸ್ವಲ್ಪ ಹೊರಗೆ ಇಳಿಜಾರಿನ ಕಾಡಿನಲ್ಲಿ ಇರುವ ಹುಡುಗಿಯರ ಪೀಜಿ. ಆ ಪೀಜಿಯ ಆವರಣದಲ್ಲೇ ನಮ್ಮ ನಾಟಕ ಪ್ರದರ್ಶನ. ಎರಡು ದಿನ ಅಲ್ಲೇ ಇರಬೇಕು. ತಗ್ಗಿನ ಜಾಗ. ಸುತ್ತಲು ಮೆಣಸು, ವೀಳ್ಯ, ಅಡಿಕೆ, ತೆಂಗು, ತೇಗದ ತೋಟ, ಒಂದಷ್ಟು ಹೂವುಗಳು ಮತ್ತು ಬಳ್ಳಿಗಳು, ಮಧ್ಯದಲ್ಲಿ ಎರಡು ಅಂತಸ್ತಿನ ಕಟ್ಟಡ. ಕೆಳ ಅಂತಸ್ತಿಗೆ ಹೊಂದಿಕೊಂಡಂತೆ ಒಂದು ಕಾರಿಡಾರು. ಅಲ್ಲಿನಿಂದ ನೇರ ನಡೆದು ಹೋದರೆ ಪೀಜಿ ಕ್ಯಾಂಟೀನ್, ಎಲ್ಲ ಕೊಠಡಿಯ ಮಗ್ಗುಲಿಗು ಕಿಟಕಿಗಳಿವೆ.

ಅಲ್ಲಿಂದ ಇಣುಕಿದರೆ ಒಂದು ಮೂರು ಅಡಿಯ ತಗ್ಗಿಗೆ ಕೊಂಚವೇ ದೂರ ಒಂದು ಕೋಕಂ ಮರ. ಅದರ ನೆರಳಿಗೆ ಎಂಬಂತೆ ಒಂದು ಬೆಂಚು. ಬಿಡುವಿದ್ದರೆ ನಾಲ್ಕಾರು ಹುಡುಗಿಯರಾದರು ಕುಳಿತು ಹರಟಬಹುದು ಅಲ್ಲಿ. ಇನ್ನೂ ಒಂದಷ್ಟು ತಗ್ಗಿಗಿಳಿದರೆ ಚಾವಣಿ ಇರುವ ಸಣ್ಣ ಬಯಲ ರಂಗಮಂದಿರ. ಅದರ ಮುಂದಿನ ಪ್ರೇಕ್ಷಾಂಗಣವನ್ನು ದಾಟಿ ದೂರಕ್ಕೆ ಎಂಬಂತೆ ಉದ್ದಕ್ಕೆ ಚಾಚಿ ಕೊಂಡಿರುವ ನೇರಳೆ ಕೆಂಪು ಮಿಶ್ರಿತ ಬಣ್ಣದ ಹೂ ಬಿಡುವ ಪೇಪರ್ ಹೂವಿನ ಗಿಡ. ಅದಕ್ಕೊಂದು ಬಾಗಿದ ದೊಡ್ಡ ಕೊನರಿತ್ತು. ಹೆಚ್ಚು ಹೂವಿರುವ ಭಾಗವದು. ಆದ್ದರಿಂದಲೋ ಏನೋ ಸದಾ ತುಂಬಿಕೊಂಡಂತೆ ಕಾಣುತ್ತದೆ ಆ ಗಿಡ. ಈ ಹೂವುಗಳ, ಹಕ್ಕಿಗಳ ಬಣ್ಣ ಸಂಯೋಜನೆಯ ಬಗ್ಗೆ ಸಂಶೋಧನೆ ಮಾಡಬೇಕೆಂದು ಸಣ್ಣದರಲ್ಲಿ ಅನಿಸುತಿತ್ತು. ಆದರೆ ಅದ್ಯಾಕೋ ಆಗದ ಕೆಲಸ ನೋಡಿಯೇ ಖುಷಿ ಪಡೋಣ ಅಷ್ಟೇ ಸಾಕು ಎಂದು ಸುಮ್ಮಾಗಿಬಿಟ್ಟೆ.

ಒಂದು ದಿನ ಮುಂಚೆಯೇ ಅಲ್ಲಿಗೆ ಹೋಗಿದ್ದೆವು. ಮಧ್ಯಾಹ್ನದ ಹೊತ್ತು, ಸೆಕೆಯ ಊರು, ಅದೆಷ್ಟೇ ಒದ್ದಾಡಿದರು ನಿದ್ದೆ ಹತ್ತುವುದಿಲ್ಲ. ಹೆಣ್ಣು ಮಕ್ಕಳು ಓಡಾಡುವ ಜಾಗ ಸುಮ್ಮನೆ ಮಲಗಿದರೆ ಏನನ್ನೋ ಕಳೆದು ಕೊಂಡಂತೆ ಎಂಬ ಭಾವವು ಒಳಗೆ ಇತ್ತೇನೋ ಯಾರಿಗೆ ಗೊತ್ತು. ಎದ್ದು ಹಾರ್ಮೋನಿಯಂ ಹಿಡಿದು ರಂಗಮಂದಿರದ ಚಾವಣಿಯ ಕೆಳಗೆ ಕೂತೆ. ದೂರಕ್ಕೆ ಸಣ್ಣ ಕೊಕ್ಕಿನ, ಸಣ್ಣ ಕುತ್ತಿಗೆಯ ಮೇಲೆ ಅಚ್ಚೆಯಂತೆ ಚುಕ್ಕಿಯಿರುವ ಒಂಟಿ ಚೋರೆ ಹಕ್ಕಿಯೊಂದು ಒಂದೇ ಒಂದು ಎಸಳು ಗರಿಕೆಯನ್ನು ಕೊಕ್ಕಿಗೆ ಸಿಕ್ಕಿಸಿಕೊಂಡು ನಡೆಯುತ್ತಿತ್ತು. ಪಾಪ ಅದರದ್ದೂ ಎಲ್ಲ ಅವ್ವಂದಿರ ಪಾಡೇ ಮಧ್ಯಾಹ್ನವಾದರು ಮುಗಿಯದ ಕೆಲಸ. ಹಕ್ಕಿಯೂ ದಣಿದಿತ್ತಿರಬೇಕು ಅದಕ್ಕಾಗಿಯೇ ಹಾರುತ್ತಿರಲಿಲ್ಲ ಮೆಲ್ಲಗೆ ಹೆಜ್ಜೆ ಹಾಕುತ್ತ ನಡೆಯುತ್ತಿತ್ತು. ಗಂಡನನ್ನು ಕುರಿತು ಗೊಣಗಿಕೊಳ್ಳುತ್ತಾ ನಡೆಯುತ್ತಿತ್ತೇನೋ ಆದರು ಗೂಡು ಕಟ್ಟಲೇಬೇಕಲ್ಲ,? ಹಾಗೆ ನಡೆದು ಆ ಸಿದುಗಿನಲ್ಲಿ ಮಾಯವಾಯಿತು.

ನಾನು ನುಡಿಸಲು ಶುರು ಮಾಡಿದೆ. ಅದೇ ರಾಗ, ಚಂದ್ರಕೌನ್ಸ.. ಸ ಗ ಮ ದ ನಿ ಸ.. ಸಾ ನಿ ದ ಮ ಗಾ ಸಾ.. ಅಲ್ಲಿನ ಸುತ್ತಲಿನ ಮೌನ ಪ್ರಭೆಯಲ್ಲಿ ಈ ಸ್ವರಗಳದ್ದೆ ಕಾರುಬಾರು. ಕೊಂಚ ಹೊತ್ತು ಅಷ್ಟೇ ಆದದ್ದು, ಅವಳು ಬಂದು ನಿಂತಿದ್ದಳು. ನೀಳ ಕಾಲಿನ, ನೀಳ ತೋಳಿನ, ಕೊಂಚ ಎತ್ತರದ, ಬಳುಕಿನ ನಿಲುವಿನ, ಕೊಂಚ ಗಾಢ ಹುಬ್ಬು ಮತ್ತು ರೆಪ್ಪೆಯ, ಪಾರದರ್ಶಕ ಕಂಗಳ ನಗುವಿನ ಚೆಲುವದು. ಸೆಕೆಯಾದ್ದರಿಂದ ಇರಬೇಕು. ಮೊಣಕಾಲಿವರೆಗೆ ಚಡ್ಡಿ ಮತ್ತು ಶರ್ಟ್ ತೊಟ್ಟಿದ್ದಳು. ಅದು ಆ ಪೇಪರ್ ಹೂವಿನ ಬಣ್ಣಕ್ಕೆ ಹೋಲುತಿತ್ತು. ಒಂದು ಕಾಲಿನ ಮಣಿಕಟ್ಟಿಗೆ ಗೆಜ್ಜೆಯ ಹಾಗೆ ಕಪ್ಪು ಬಿಳಿ ಬಣ್ಣದ ಕರಿಮಣಿ ಸರ ಕಟ್ಟಿದ್ದಳು. ಬಯಲು ಸೀಮೆಯಲ್ಲಿ ಎಳೆಯ ಮಕ್ಕಳಿಗೆ ಕಟ್ಟುತ್ತಾರೆ ಅದನ್ನ ದೃಷ್ಟಿಯಾಗದಿರಲಿ ಎಂದು. ಅವಳ್ಯಾಕೆ ಕಟ್ಟಿದ್ದಳೋ ಗೊತ್ತಿಲ್ಲ, ಆದರದು ಚಂದ ಕಾಣುತಿತ್ತು.

ನುಡಿಸುತ್ತಿದ್ದವನು ಕಣ್ಣನೆತ್ತಿ ನೋಡಿದೆ. ಕಣ್ಣು ಸೇರಿತು, ಮಾತಾಡಿಸಲಿಲ್ಲ. ಸುಮ್ಮನೆ ನುಡಿಸಲು, ಹಾಡಲು ತೊಡಗಿದೆ, ತಲ್ಲೀನತೆಯನ್ನು ನಟಿಸಿದೆ, ಹಾಳಾದವು ಎಲ್ಲ ಸ್ವರಗಳು ಸರಿಯಾಗಿ ಶೃತಿ ಸೇರಲು ತೊಡಗಿಬಿಟ್ಟವು, ತಮ್ಮ ತಮ್ಮೊಳಗೆ ಅದೇನು ಮಾತಾಡಿಕೊಂಡವೋ ಚಂದ್ರಕೌನ್ಸ ಅದರ ಸರಿ  ದಾರಿಯನ್ನೇ ಹಿಡಿದಿತ್ತು. ಅವಳು ಸುಮ್ಮನೆ ನಿಂತಿದ್ದಳು, ನಮ್ಮಿಬ್ಬರ ಮೌನ ಮಧ್ಯೆ ಈ ಸ್ವರಗಳು ಇಷ್ಟೇ.

ಇದು ಬಹಳ ಹೊತ್ತೇ ನಡೆಯಿತು, ನನ್ನೊಳಗೆ ವಿಚಿತ್ರ ಮುಜುಗರ ಮತ್ತು ಲವಲವಿಕೆ ಎರಡನ್ನು ಅವಳ ಇರುವಿಕೆ ಸೃಷ್ಟಿಸುತ್ತಿತ್ತು. ಇದ್ದಕ್ಕಿದ್ದಂತೆ ವಾಪಾಸ್ಸು ಹೋದಳು. ಮಾತಾಡಿಸಬಹುದಿತ್ತು ಅವಳು ಅನಿಸಿತ್ತು. ಈ ಘನಕಾರ್ಯಕ್ಕೆ ಇಷ್ಟೊತ್ತು ಯಾಕೆ ನಿಂತಿದ್ದಳೋ ಅನ್ನಿಸದೇ ಇರಲಿಲ್ಲ. ದಕ್ಷಿಣ ಕನ್ನಡದಲ್ಲಿ ಹೀಗೆ ಏಕಾಏಕಿ ಅಪರಿಚಿತ ಹುಡುಗನೊಂದಿಗೆ ಮಾತಾಡುವುದು ಸುಲಭವಿಲ್ಲವಂತೆ ಮತ್ತು ನಾನು ಹಿಂದಿನ ದಿನ ಪಾತ್ರಕ್ಕಾಗಿ ಕಣ್ಣಿಗೆ ಹಚ್ಚಿದ್ದ ಕಾಡಿಗೆ ಕೆಳರೆಪ್ಪೆಯಲ್ಲಿ ಹಾಗೆ ಉಳಿದಿದ್ದರಿಂದ ಅವಳಿಗೆ ಮುಸ್ಲಿಂ ಹುಡುಗನಂತೆ ಕಂಡೆನೆಂದು ಮಾತಾಡದೆ ಸುಮ್ಮನಾಗಿದ್ದಳಂತೆ. ಈ ಬಗ್ಗೆ ಅವಳ ಕಾಲೇಜಿನಲ್ಲಿ ಯಾರೋ ಬಂದು ಪಾಠ ಮಾಡುತ್ತಾರಂತೆ..

ಅಯ್ಯೋ ಹಾಗಾದರೆ ಅವರ್ಯಾರು ಅಲ್ಲಿನ ಕಡಲಿನ ಅಗಾಧತೆ, ಅನಂತತೆಯಿಂದ ಏನು ಕಲಿಯಲೇ ಇಲ್ಲವೇ? ಮರಳಿನಿಂದ, ಅಲೆಗಳಿಂದ? ಅಷ್ಟೊಂದು ಥರಾವರಿ ಮೀನುಗಳಿವೆಯಲ್ಲ, ಅವೆಲ್ಲ ಬೇರೆ ಬೇರೆ ಬಣ್ಣ ,ಆಕಾರ, ರುಚಿಯವು ಅವುಗಳಿಂದ ? ಅಲ್ಲಿ ಅಷ್ಟೊಂದು ಹೂವುಗಳು ಹಕ್ಕಿಗಳಿವೆಯಲ್ಲ ಅವೂ ಏನು ಕಲಿಸಲಿಲ್ಲವೇ?

she2ನಾನು ಹಾರ್ಮೋನಿಯಂ ಎತ್ತಿಟ್ಟು ಅಲ್ಲೇ ಸುತ್ತತೊಡಗಿದೆ. ಅವಳು ಹೋಗಿ ಮಲಗಿರಬೇಕು ಅಥವಾ ನೆನೆಸುತ್ತಿರಬೇಕು ನನ್ನನ್ನೋ ಇಲ್ಲ ಚಂದ್ರ ಕೌನ್ಸವನ್ನೋ !!! ಪಕ್ಕದ ಅಡಿಕೆ ತೋಟದಿಂದ ಹೊಂಬಾಳೆ ಘಮಲು ಜೋರಾಗಿ ಬರುತ್ತಿತ್ತು. ಆ ಪೇಪರು ಹೂವಿನ ಗಿಡದ ಮೇಲೆ ಎರಡು ಪಿಕಳಾರಗಳು ಬಂದು ಕೂತಿದ್ದವು. ಎರಡೂ ಕೆಂಪು ಜುಟ್ಟಿನ ಪಿಕಳಾರಗಳು. ಬಹುಶ ಒಂದು ಹೆಣ್ಣು ಮತ್ತು ಒಂದು ಗಂಡಿರಬೇಕು. ಹತ್ತಿರದಿಂದ ನೋಡೋಣವೆಂದು ಹೋದೆ. ಇದ್ದಕ್ಕಿದ್ದ ಹಾಗೆ ಮೋಡಗಟ್ಟಿ ವಾತಾವರಣ ತಣ್ಣಗಾಗಿತ್ತು. ಗಾಳಿ ಬೀಸಲು ತೊಡಗಿತ್ತು. ಇದೆಲ್ಲ ಅಲ್ಲಿ ಸಮುದ್ರ ಮಾಡುವ ಜಾದೂ.. ಬರಿ ಸಮುದ್ರವೇಕೆ ಇಡೀ ಪ್ರಕೃತಿಯೇ ಒಂದು ಮಹಾಜಾದುಗಾರ.

ಯಾವ ಪ್ರೇಕ್ಷಕನನ್ನು ನಿರೀಕ್ಷಿಸದ ಜಾದುಗಾರ. ನಾವು ಗಮನಿಸಿದರು ಗಮನಿಸದೇ ಇದ್ದರೂ ಅವನ ಜಾದೂ ನಡೆದೇ ನಡೆಯುತ್ತದೆ. ಒಂದಷ್ಟು ಕೋಶಗಳು ಸೇರಿಕೊಂಡು ಸಣ್ಣ ಹುಳುವಿನಿಂದ ಹಿಡಿದು ದೈತ್ಯ ಜೀವಿಗಳಾಗುವುದು ಕಣ್ಣಿಗೆ ಕಾಣದ ಕಣಗಳ ಮೊತ್ತವೇ ಪರ್ವತ ಕಣಿವೆಗಳಾಗುವುದು ಜಾದುವಲ್ಲದೇ ಮತ್ತೇನು? ಇದನ್ನು ವಿಕಾಸವೆಂದು ಸುಮ್ಮನಾಗಿಬಿಡಬಹುದು. ವಿಕಾಸವೇ ಒಂದು ದೊಡ್ಡ ಜಾದು ಅಲ್ಲವೇ?

ಹತ್ತಿರ ಹೋಗುತ್ತಿದ್ದಂತೆ ಪಿಕಳಾರಗಳು ಹಾರಿ ಹೋದವು. ಏಕಾಂತಕ್ಕೆ ಭಂಗ ತರುವಲ್ಲಿ ಹಕ್ಕಿಗಳು ನಿಲ್ಲುವುದಿಲ್ಲ. ಈ ಪಿಕಳಾರಗಳು ಜೋಡಿ ಹಕ್ಕಿಗಳು ಬೇರೆ, ನಿಲ್ಲುತ್ತವೆಯೇ? ಗಾಳಿ, ಮಳೆ, ಬಿಸಿಲಿನ ಅಡಚಣೆಯನ್ನು ಅವು ಸಹಿಸಬಲ್ಲವು. ಕೆಲವು ಬಾರಿ ಸಂಭ್ರಮಿಸಬಲ್ಲವು ಕೂಡ. ಆದರೆ ಮನುಷ್ಯನ ಇರುವಿಕೆಯನ್ನಲ್ಲ. ಮನುಷ್ಯ ಕುಲ ತನ್ನ ಎದುರಿಗಿನ ಪ್ರೇಮವನ್ನು ಸಹಿಕೊಳ್ಳುವುದಿಲ್ಲ ಎಂದು ಅವಕ್ಕೂ ಗೊತ್ತಾಗಿರಬೇಕು. ನಿಲ್ಲದೆ ಹಾರಿ ಹೋದವು. ಅಲ್ಲಿಂದ ಚೂರು ಕೆಳಕ್ಕೆ ಒಂದು ಸಣ್ಣ ಪೊದೆ. ಅದು ದಾಸವಾಳ ಹೂವಿನದು. ಕೆಲವಷ್ಟೇ ಹೂವುಗಳಿದ್ದ ಚಿಗುರೆಲೆ ಹಸಿರೇ ಹೆಚ್ಚಿರುವ ದಾಸವಾಳದ ಪೊದೆ. ಗಾಳಿಗೆ ಕೆಲವು ಎಲೆಗಳು ಹೊರಳಿ ಅಲ್ಲೊಂದು ಗೂಡು ಕಂಡಿತು. ಹೌದು,ಅದು ಆ ಪಿಕಳಾರಳಗಳದ್ದೆ ಗೂಡು. ಅದರಲ್ಲಿ ಮೂರು ಮೊಟ್ಟೆಗಳೂ ಇದ್ದವು.

ಎಷ್ಟು ಖುಷಿಯಾಯಿತು ಅಂದರೆ ಯಾರಿಗಾದರು ಕರೆದು ತೋರಿಸಿ ಸಂಭ್ರಮಿಸಬೇಕು ಅನ್ನಿಸಿತಿತ್ತು. ಅಲ್ಲಿ ಯಾರು ಇರಲಿಲ್ಲ ಎಂದು ಹೇಳುವುದು ನಿಜವಲ್ಲ. ಇದ್ದೆವು. ನಾನು, ಗಾಳಿ, ಮೋಡಗಟ್ಟಿದ ಆ ಮಂದ ಬೆಳಕು, ಹಾರಿ ಹೋದ ಆ ಪಿಕಳಾರಗಳ ನೆನಕೆ, ಅಡಿಕೆ ತೋಟದ ಹೊಂಬಾಳೆ ಘಾಟು ಮತ್ತು ವಟಗುಟ್ಟುತ್ತಿದ್ದ ಸುತ್ತಲಿನ ಚರಾಚರಗಳು.

ಇದು ನಾಳೆಯ ಬೆಳಗಿನ ಟೀನೆಜಿನ ಕಾಲ ಅಂದರೆ ಬೆಳಗು ಮತ್ತು ತೀವ್ರ ಮಧ್ಯಾನದ ಮಧ್ಯೆಯ ಹೊತ್ತು. ನಾಟಕದ ವಿಂಗು ಪರದೆ ಎಲ್ಲ ಕಟ್ಟಿ ರಂಗ ಮಂಚ ತಯಾರು ಮಾಡಿ ಮುಗಿದಿತ್ತು. ಉಳಿದವರೆಲ್ಲ ಹೀಗೆ ಸುತ್ತಾಡಲು ಹೊರಟರು. ನಾನು ಆಗ ಪುಸ್ತಕದ ಮಾರಾಟ ಮಾಡುತ್ತಿದ್ದರಿಂದ ಅದರ ಲೆಕ್ಕಾಚಾರ ಬರೆದಿಡಲು ಕೋಕಂ ಮರದ ಕೆಳಗಿನ ಬೆಂಚಿನ ಮೇಲೆ ಕೂತಿದ್ದೆ. ನಾನದನ್ನು ಒಳಗೆ ರೂಮಿನಲ್ಲೇ ಮಾಡಬಹುದಿತ್ತು ಅನ್ನುವುದಾದರೆ ನನ್ನಲ್ಲಿ ಉತ್ತರವಿದೆ. ಸೆಕೆಯಲ್ಲವೇ? ಲೆಕ್ಕಾಚಾರ ನಡೆಯುತ್ತಿತ್ತು. ಯಾರೋ ಕೂಗಿದಂತಾಯಿತು. ನನ್ನ ಬಲಕ್ಕೆ ಕಣ್ಣು ಹೊರಳಿಸಿದರೆ ಆ ಕೂಗಿನ ದಾರಿಯದು ಕಿಟಕಿ ಹಿಂದೆ ಅವಳು ನಿಂತಲ್ಲಿಗೆ ಮುಟ್ಟುತಿತ್ತು. ಈ ಕಿಟಕಿಗಳಿಗೂ, ಕಿಂಡಿಗಳಿಗು, ಗೋಡೆಗಳಿಗೂ ಪ್ರೇಮ ಪ್ರಸಂಗಗಳಿಗೂ ದೊಡ್ದ ಪರಂಪರೆಯೇ ಇದೆ.

ಆ ಪರಂಪರೆಯನ್ನು ಮುಂದುವರೆಸುವ ಇರಾದೆ ನನ್ನದೀಗ. ಸದ್ಯಕ್ಕೆ ಅದನ್ನು ಮುರಿಯುವುದು ಬೇಡ. ಇಬ್ಬರ ಮಾತುಕತೆಗೆ ವಿನ್ಯಾಸ ಹಿತವಾಗಿದೆ ಇರಲಿಬಿಡಿ. “ಯಾರ್ಗೋ ಲವ್ ಲೆಟರ್ ಬರಿತಿರೋ ಹಾಗಿದೆ” ಅವಳ ಮೊದಲ ಮಾತೆ ಇದಾಗಿ ಬಿಡಬೇಕೇ! ನಾನು ನೋಡಿದೆ ಅಷ್ಟೇ ಮಾತಾಡಲು ಆಗಲಿಲ್ಲ “ಏನ್ ಅವರ ಹೆಸರು” ಮುಂದಿನ ಈ ಮಾತು ಅವಳದೇ. ಹುಡುಗನಾಗಿ, ನನಗೆ ನಾನೇ ಚೂರೋ ಪಾರೋ ರಸಿಕ ಎಂದು ಅಂದುಕೊಂಡಿರುವುದಕ್ಕಾಗಿಯಾದರೂ ನಾನೀಗ ಮಾತಾಡಲೇಬೇಕು.

“ಯಾರ ಹೆಸರು”?

“ಅದೇ ನೀವು ಲೆಟರ್ ಬರಿತಿದ್ದೀರಲ್ಲ ಅವರ ಹೆಸರು”

ನಿಜಕ್ಕೂ ನಾನು ಬರೆಯುತ್ತಿದ್ದುದು ಲೆಕ್ಕ, ಸತ್ಯ ಹೇಳುವುದು ಸಂದರ್ಭಕ್ಕೆ ಹೊಂದುತ್ತಿರಲ್ಲ ಇಡಿ ಸನ್ನಿವೇಶ ರಸಹೀನ ಆಗಿಬಿಡುತ್ತಿತ್ತು. ಹಾಗಾಗಿ ..

“ನಿಮ್ಮ ಹೆಸರೇನು”?

“ನನಗೆ ಹೆಸರೇ ಇಲ್ಲಾ ….”

“ಹಾಗಾದರೆ ನಾನು ಹೆಸರಿಡಲೇ…’?

ಅವಳು ಕ್ಷಣ ಸುಮ್ಮನಿದ್ದು “ಹ್ಮ್ಮ್ ….”ಅಂದುಬಿಡಬೇಕೇ

ನಾನು ತಬ್ಬಿಬ್ಬು ಏನು ಹೆಸರಿಡುವುದು? ತಿಳಿಯಲಿಲ್ಲ ಸುಮ್ಮನೆ “ಮಳೆ” ಅಂದೆ

ಅವಳು ಜೋರಾಗಿ ನಕ್ಕಳು “ಮಳೆ, ಮಿಂಚು, ಗುಡುಗು ಅಂತ ಯಾರಾದ್ರೂ ಹೆಸರಿಟ್ಟುಕೊಳ್ಳುತ್ತಾರಾ …?”

‘ಇಲ್ಲ…. ಆದರೆ… ನಿಮಗೆ ವಿಶೇಷವಾಗಿ ಇರಲಿ ಅಂತಾ ..”

ಅವಳು ನಗುತ್ತ ನಾನು ಕುಳಿತಿದ್ದ ಬೆಂಚಲ್ಲಿಗೆ ಬಂದೇ ಬಿಟ್ಟಳು.

ಅವಳು ಕೂರ್ಗ್ ನವಳು ಕನ್ನಡ ಮಾತಾಡಲು ಮಾತ್ರ ಬರುತ್ತಿತ್ತು. ಓದಲು ಮತ್ತು ಬರೆಯಲು ಬರುತ್ತಿರಲಿಲ್ಲ, ಹತ್ತಿರದ ಕಾಲೇಜ್ ನಲ್ಲಿ ಓದಲು ಬಂದಿದ್ದಳು. ನೆನ್ನೆಯ ಚಂದ್ರಕೌನ್ಸದ ಬಗ್ಗೆ ಖುಷಿಯಾಗಿ ಅದು ಚನ್ನಾಗಿತ್ತು ಅಂದಳು, ಇಲ್ಲಿನ ಕ್ಯಾಂಟೀನ್ ನ ಊಟ ಚನ್ನಾಗಿಲ್ಲ ಹಾಗು ಇಲ್ಲಿ ಲವ್ ಕೇಸುಗಳು ಹೆಚ್ಚು ಆದ್ದರಿಂದ ಆ ಪೀಜಿ ತುಂಬಾ ಸ್ಟ್ರಿಕ್ಟ್. ಹಾಗಾಗಿ ರಾತ್ರಿ ಹತ್ತರ ನಂತರ ಬಾಗಿಲಿಗೆ ಬೀಗ ಹಾಕುತ್ತಾರೆ ಅಂದಳು. ತನಗೆ ಬಿರ್ಯಾನಿ ಇಷ್ಟವೆಂದು, ಈ ಪೀಜಿಯಲ್ಲಿ ನಾನ್ವೆಜ್ ಮಾಡುವುದಿಲ್ಲವೆಂದು, ಅವಳ ಕಾಲ ಕರಿಮಣಿ ಅಪ್ಪ ಕಟ್ಟಿದ್ದೆಂದು, ತನಗೆ ಅಪ್ಪ ಎಂದರೆ ಇಷ್ಟವೆಂದು, ತಾನು ಕಾಲೇಜ್ಗೆ ಜೀನ್ಸ್ ಟಿ ಶರ್ಟ್ ಹಾಕಿಕೊಂಡು ಹೋಗುವುದಕ್ಕೆ ನಿರ್ಭಂದವಿದೆ ಎಂದು ಅದಕ್ಕೆ ತನಗೆ ಬೇಜಾರಾಗುತ್ತದೆ ಎಂದು …  ಎಂದೂ ಯಾರು ಅವಳನ್ನು ಮಾತಾಡಲು ಬಿಟ್ಟೆ ಇಲ್ಲ ಎನ್ನುವ ಹಾಗೆ ಈಗ ತಾನೇ ಮಾತು ಬಂದವಳ ಹಾಗೆ ಸಂಭ್ರಮದಲ್ಲಿದ್ದಳು.

she3ನಾನು ಆಗೊಂದು ಈಗೊಂದು ಮಾತಾಡುತ್ತ ಅವಳನ್ನೇ ನೋಡುತ್ತಾ ಅವಳನ್ನು ಕೇಳಿಸಿಕೊಳ್ಳುತ್ತಿದ್ದೆ ನನಗದರಲ್ಲಿ ಸುಖವಿತ್ತು. ಕೋಕಂ ಮರದ ಎಲೆಗಳಿಗೆ ಆಗಾಗ ನೆಗೆದು ನೆಗೆದು ಕೈ ತಾಗಿಸುತ್ತಿದ್ದಳು. ಹಾರುವಾಗ ಇನ್ನೂ ಸುಂದರವಾಗಿ ಕಾಣುತಿದ್ದಳು. ಇಷ್ಟವಾಗಬಹುದು ಎಂದೆನಿಸಿ, ಪಿಕಳಾರದ ಗೂಡಿನ ಹತ್ತಿರಕ್ಕೆ ಕರೆದುಕೊಂಡು ಹೋದೆ. ಇವೆಲ್ಲ ನನಗೆ ಗೊತ್ತಿಲ್ಲದೇ ಹಾಕುತ್ತಿದ್ದ ಗಾಳಗಳಿರಬೇಕು. ಆ ಗೂಡು, ಮೊಟ್ಟೆಗಳನ್ನು ನೋಡಿ ಅವಳೆಷ್ಟು ಉಲ್ಲಸಿತಳಾದಳು ಗೊತ್ತೇ? ಅದೇ ಹೊತ್ತಿಗೆ ಆ ಜೋಡಿ ಪಿಕಳಾರಗಳು ಅವಳ ಸಂಭ್ರಮದ ಜೊತೆಗೆ ಸೇರಿಕೊಂಡವು. ಆ ಹಕ್ಕಿಗಳನ್ನು ಕಂಡು ಅವಳು ಅಕ್ಷರಶಃ ಕುಣಿಯುತ್ತಿದ್ದಳು. ಅವಳ ಬೆರಗನ್ನ ಅವಳ ಕಣ್ಣು ಮತ್ತು ಮೊಗದಲ್ಲಿದ್ದ ಹೊಳಪನ್ನು ಯಾವ ಪದಗಳಿಂದ ವರ್ಣಿಸಿದರೂ ಪೊಳ್ಳಾಗಿಬಿಡುತ್ತದೆ. ಚೆಲುವನ್ನು ಕಂಡು ಹೆಣ್ಣು ಬೆರಗಾಗುವುದನ್ನು ನೋಡುವುದು ನನಗೆ ಯಾವಾಗಲೂ ಸೋಜಿಗ, ಉನ್ಮಾದ. ಅದು ಅವಳ ಜೀವದ ಭಾಗವೇ ಇರಬೇಕು

ಹೂವು, ಹೊಳೆ, ಜಲಪಾತ, ಹಕ್ಕಿ, ಸಮುದ್ರ, ಬಣ್ಣ, ವಸ್ತ್ರ, ವಡವೆ.. ಎಷ್ಟೆಂದು ಪಟ್ಟಿ ಮಾಡುವುದು ಎಲ್ಲದಕ್ಕೂ ಬೆರಗಾಗುತ್ತಾಳೆ. ಈ ಬಗ್ಗೆ ಅಂದು ಅವಳನ್ನು ಕಂಡು ನನಗಾದ ಹೊಟ್ಟೆ ಉರಿ ಅಷ್ಟಿಷ್ಟಲ್ಲ. ಅವಳು ಮಾತ್ರ ಹಾಗೆಯೋ ಅಥವ ಎಲ್ಲ ಹೆಣ್ಣುಗಳು ಹಾಗೆಯೋ? ಅವಳು ನೆಲದ ಮೇಲೆ ನಿಲ್ಲುವ ಸ್ಥಿತಿಯಲ್ಲೇ ಇರಲಿಲ್ಲ. ಹಕ್ಕಿಗಳು ಒಂದು ಜಾಗದಿಂದ ಮತ್ತೊಂದು ಜಾಗಕ್ಕೆ ಹೋಗುವುದಿದ್ದರೆ ನೇರವಾಗಿ ಅಲ್ಲಿಗೆ ಹೋಗುವುದಿಲ್ಲ. ಅದು ಎಷ್ಟೇ ಸಣ್ಣ ಅಂತರವಿರಲಿ ಸುತ್ತಿ ಬಳಸಿ ತಿರುಗಿ ಮೇಲೆ ಕೆಳಗೆ ಹಾರಿ ಆಮೇಲೆ ಕೊರಬೇಕಾದ ಜಾಗದಲ್ಲಿ ಕೂರುತ್ತವೆ ಗೊತ್ತೇ ಅಂದೆ. ಅದೃಷ್ಟವೆಂಬಂತೆ ಆ ಪಿಕಳಾರಗಳು ಅಲ್ಲೇ ನಾಲ್ಕು ಸುತ್ತಾಕಿ ಬಂದು ಕೂತವು. ಇದನ್ನು ಕಂಡಿದ್ದೇ ಇವಳನ್ನು ಹಿಡಿಯುವವರೇ ಇಲ್ಲ. ಈಗ ಸಿನಿಮಾ ಆಗಿದ್ದರೆ ಇಲ್ಲಿಗೊಂದು ಶ್ರೇಯಾ ಘೋಶಾಲ್ ಹಾಡು ಬೇಕೇ ಬೇಕಿತ್ತು. ಫ್ಹಾರಿನಲ್ಲಿ ಚಿತ್ರೀಕರಣ ಆಗಲೇ ಬೇಕಿತ್ತು.

ಅಂದು ಸಂಜೆ ಸಂಜೆ ನಾಟಕ ಮುಗಿದ ಮೇಲೆ ನಾನು ಮಾರುತ್ತಿದ್ದ ರೇವತಿಯವರ ಹಿಜ್ರಾ ಒಬ್ಬಳ ಆತ್ಮಕಥೆಯ ಪುಸ್ತಕವನ್ನು ಅವಳ ಗೆಳತಿಯರ ಜೊತೆ ಬಂದು ಕೊಂಡಳು. ಚಿಲ್ಲರೆ ಕೊಡುವ ನೆಪದಲ್ಲಿ ಮತ್ತೆ ಒಬ್ಬಳೇ ಬಂದಳು. ನಿನಗೆ ಕನ್ನಡ ಬರುವುದಿಲ್ಲವಲ್ಲ ಯಾಕೆ ಕೊಂಡೆ ಅಂದೆ. “ನಿಮ್ಮ ಮತ್ತು ಪಿಕಳ ಪಿಕಳಿಯ ನೆನಪಿಗೆ” ಅವಳ ಬಾಯಲ್ಲಿ ಕೆಂಪು ಜುಟ್ಟಿನ ಪಿಕಳಾರಗಳು “ಪಿಕಳ ಪಿಕಳಿ’ಗಳಾಗಿ ಬದಲಾಗಿದ್ದವು. ಅವಳು ಅದನ್ನು ಹೇಳುವಾಗ ಅದರಲ್ಲಿರುವ ಮಾಧುರ್ಯತೆ ಆತ್ಮೀಯತೆ ನನ್ನ ದನಿಗೆ ಇಲ್ಲವೇನೋ ಅನ್ನುವ ಕೀಳಿರಿಮೆ ಮತ್ತು ಅನುಮಾನ ನನಗಾಗ.

ನಾಟಕದಲ್ಲಿ ನಾನೊಂದು ಹೆಣ್ಣು ಪಾತ್ರ ಮಾಡಿದ್ದೆ. ಚೂಡಿದಾರ್ ಹಾಕಿಕೊಳ್ಳಬೇಕಿತ್ತು. ಸಣ್ಣ ಪಾತ್ರವದು. ತಕ್ಷಣಕ್ಕೆ ಉಡುಗೆ ಬದಲಿಸಬೇಕಿತ್ತು. ನಾನವತ್ತು ಅದನ್ನು ಉಲ್ಟಾ ಹಾಕಿದ್ದೆನಂತೆ ಅದನ್ನು ಹೇಳಿಕೊಂಡು ಅದೆಷ್ಟು ನಕ್ಕಳೆಂದರೆ ನನಗೆ ತೀರ ಮುಜುಗರವಾಯ್ತು. ನಿಜಕ್ಕೂ ಅದು ನನ್ನ ಗಮನಕ್ಕೆ ಬಂದೇ ಇರಲಿಲ್ಲ. ಮಾರನೇ ದಿನ ಅವಳಿಗೆ ಕಾಲೇಜಿತ್ತು. ನಾನು ರಂಗಮಂದಿರದಲ್ಲಿ ಪರದೆಯೊಂದನ್ನು ಕಟ್ಟುತ್ತಿದ್ದೆ. ಚೂಡಿದಾರ ತೊಟ್ಟ ಅವಳು ಕಿಟಕಿಯಿಂದಲೇ ಬಾಯ್ ಮಾಡಿದಳು. ಚೂಡಿದಾರ್ ಹಾಕಿ ಕೊಳ್ಳುವುದು ಹೀಗೆ ಎಂದು ನಕ್ಕಳು. ಪೇಪರ್ ಹೂವಿನ ಗಿಡದ ಕಡೆಗೂ ಬೆರಗು ಕಣ್ಣುಗಳಿಂದ ಕೈ ಮಾಡಿದಳು. ಅಲ್ಲಿ ಪಿಕಳಿ ಜೋಡಿಗಳು ಹೂವಿನ ಗುಚ್ಚದೊಂದಿಗೆ ಸರಸವಾಡುತ್ತಿದ್ದವು. ಅವಳು ಕಾಲೇಜಿನ ಚೂಡಿದಾರ್ ಸಮವಸ್ತ್ರದ ಉಡುಗೆಯಲ್ಲಿ ಮೊದಲಿಗಿಂತ ತುಂಬ ಸಣ್ಣ ಹುಡುಗಿಯ ಹಾಗೆ ಕಾಣುತ್ತಿದ್ದಳು. ಅದನ್ನವಳಿಗೆ ನಂತರ ಹೇಳಿದೆ. ಸಂಜೆ ಬಂದ ನಂತರವೂ ಆ ಗೂಡಿನ ಬಳಿಗೆ ಹೋಗಿ ನೋಡುತ್ತಿದ್ದಳು. ನಾನು ನಾಟಕದ ತಯಾರಿಯಲ್ಲಿದ್ದೆ.

ಮಾರನೇ ದಿನ ನಮ್ಮದು ಮುಂದಿನ ಊರು. ಹೊರಟೇ ಬಿಟ್ಟೆವು.. ಪಿಕಳ ಪಿಕಳಿ ಜೋಡಿ ಮತ್ತು ಗೂಡು, ನೇರಳೆ ಕೆಂಪು ಬಣ್ಣದ ಆ ಪೇಪರ್ ಹೂವಿನ ಮರ ಅವಳು ಎಲ್ಲವೂ ಅಲ್ಲೇ …?

ಒಂದೆರಡು ದಿನವಾದ ಮೇಲೆ ಆ ಪಿಕಳಿ ಗೂಡಿನ ಫೋಟೋ ಒಂದು ನನ್ನ whats aapಗೆ ಬಂದಿತ್ತು. ಅವಳೇ ಕಳಿಸಿದ್ದು. ನನ್ನ ಜೊತೆಯ ಹುಡುಗಿಯಿಂದ ನನ್ನ ನಂಬರ್ ಪಡೆದಿದ್ದಳು. ನಾನು “ಮಳೆ” ಎಂದು ಸೇವ್ ಮಾಡಿಕೊಂಡೆ. ಮೆಸೇಜ್ ಮಾಡುವುದು ದಿನ ನಿತ್ಯದ ಮಾತಾಯಿತು. ಅವಳು ಆ ಪಿಕಳಿಗಳ ಇಡೀ ಬದುಕನ್ನೇ ನನಗೆ ಕಳಿಸುತ್ತಿದ್ದಳು. ಪಿಕಳಿ ಕಾವಿಗೆ ಕೂರುವುದು, ಪಿಕಳ ದೂರ ಕೂತು ಕಾಯುವುದು. ಮರಿಮೊಟ್ಟೆ ಹೊಡೆದು ಹೊರ ಬಂದಿದ್ದು, ಅವುಗಳಿಗೆ ರೆಕ್ಕೆ ಬಂದಿದ್ದು, ಆ ಜೋಡಿ ಪಿಕಳಿಗಳು ಆ ಪೇಪರ್ ಮರದ ಮೇಲೆ ಕೂತು ಜಗಳಾಡುವುದು, ಪ್ರೇಮಿಸುವುದು, ಮರಿಗಳಿಗೆ ಹುಳ ಹಿಡಿದು ತಿನ್ನಿಸುವುದು ಎಲ್ಲವನ್ನು ಜೀವ ತುಂಬಿ ಕೊಂಡು ವರದಿ ಒಪ್ಪಿಸುತ್ತಿದ್ದಳು. ನಾನು ಅಂದುಕೊಂಡಿದ್ದಕ್ಕಿಂತ ಹೆಚ್ಚೇ ಆ ಹಕ್ಕಿಗಳನ್ನು  ಹಚ್ಚಿಕೊಂಡಿದ್ದಳು. ನನ್ನನ್ನೂ ಕೂಡ ನೆನಪಾದಾಗ ಹಾಡಲು ಕೇಳುತ್ತಿದ್ದಳು. ನಾನು ಅದೇ ಚಂದ್ರ ಕೌನ್ಸ ಹಾಡುತ್ತಿದ್ದೆ. ಮತ್ತೆ ಅದೇ ಸಾ ಗಾ ಮ ದ ನಿ ಸಾ… ಸಾ ನೀ ದ ಮ ಗ ಸಾ…..

birdಈ ನಡುವೆ ಅವಳ ಕಾಲೇಜಿನಲ್ಲಿ ಯಾರೋ ಪ್ರಸಿದ್ಧ ಭಾಷಣಕಾರರು ಹೋಗಿ ಭಾಷಣ ಮಾಡಿದ್ದರು. ಅಲ್ಲಿ ಮುಸ್ಲಿಮರಿಂದ ಆಗುತ್ತಿರುವ ಕೇಡಿನ ಬಗ್ಗೆ ಉದ್ರೇಕಕಾರಿಯಾಗಿ ಹೇಳಿದ್ದರು. ಇತ್ತೀಚೆಗೆ ಅಲ್ಲಿ ನಡೆದಿದ್ದ ಕೆಲವು ಪ್ರೇಮ ಪ್ರಕರಣಗಳಿಗೆ ಅದರಲ್ಲಿ ಕೆಲವು ಹೆಣ್ಣು ಮಕ್ಕಳು ಪಟ್ಟ ಪಾಡಿಗೆ ಸ್ಥಿತಿಗೆ ಅವರೇ ಕಾರಣ ಅಂದಿದ್ದರು. ಇದನ್ನು ವಿರೋಧಿಸದೆ ಹೋದರೆ ದೇಶ ಉಳಿಯುದಿಲ್ಲ ಎಂದಿದ್ದರು. ಇವಳದನ್ನು ನಂಬಿದ್ದಳು. ನನ್ನದು ಕೊಂಚ ಭಿನ್ನವಾದ ಅಭಿಪ್ರಾಯವಾಗಿತ್ತು ಎಷ್ಟೇ ಹೇಳಿದರೂ ಅವಳು ಕೇಳಲಿಲ್ಲ. ನಾನವರ ವಿರೋಧಿಸಿ ಮಾತಾಡಿದೆ ಎನ್ನುವುದು ಅವಳಿಗೆ ತಡೆಯಲಾಗಲಿಲ್ಲ. ಅವಳನ್ನದು ನೋವಿಸಿತ್ತು. ನಾನು ದೇಶಕ್ಕೆ ವಿರುದ್ಧವಾಗಿದ್ದೇನೆ, ಸೈನ್ಯದ ವಿರುದ್ದವಾಗಿದ್ದೇನೆ ಎಂದು ಬೈದಳು.. ನಾನವಳಿಗೆ ಅವಳ ಭಾಷಣಕಾರರು ಹಾಕಿದ್ದ ಪಟ್ಟುಗಳಿಗೆ ಸಬೂಬು ನೀಡಲು ಸೋತೆ.

ಏನು ಮಾಡಲಿ, ಚಂದ್ರ ಕೌನ್ಸ ಮಾತ್ರ ಗೊತ್ತಿತ್ತು ನನಗೆ. ಬೇರೆ ದಾರಿ ಇರಲಿಲ್ಲ. ಬಹಳ ದಿನದವರೆಗೂ ಅದನ್ನೇ ಹಾಡಿದೆ ಸ ಗ ಮ ದ ನಿ ಸ.. ಸಾನಿದಮಗಸ … ಗಮದಮಗ …. ಮಮಗ ಸಾನಿ ದನಿಸ ….ಮಮ ಮಮ ಗಗ ಮಮ ನಿದ ಮಮ ಗಮ ದಾದದ ನಿದಾ ನೀ ನೀ ನೀ … ಈ ಸ್ವರಗಳು ಆಲಾಪದವರೆಗೆ… ಹಾಡಿನವರೆಗೆ ಮುಂದಿವರೆಯಲಿಲ್ಲ. ಅವಳಿಗೆ ತಾಕಲಿಲ್ಲ. ನನಗೆ ತಿಳಿಯಿತು ಎಲ್ಲದಕ್ಕೂ ಚಂದ್ರ ಕೌನ್ಸ ಸಾಕಾಗುವುದಿಲ್ಲ ….

‍ಲೇಖಕರು Admin

May 3, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

3 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: