ನನ್ನ ಮನೆ ಬಾಗಿಲಿಗೆ ತೋರಣವ ಬಿಗಿದಿಲ್ಲ..

rajashekhara bande

ರಾಜಶೇಖರ ಬಂಡೆ 

ನನ್ನ ಮನೆ ಬಾಗಿಲಿಗೆ ತೋರಣವ ಬಿಗಿದಿಲ್ಲ
ಅಸಲು ಹಿತ್ತಲಿನಲ್ಲಿ ಗಿಡವೆ ಇಲ್ಲ
treesಹೊಸಲಿನೊಳಗಡೆ ಕಾಲ ಇಡುವವನ ಎದೆಗೊರಗಿ
ಕಥೆ ಕೇಳುವಂಥ ದಿನ ಬರಲೆ ಇಲ್ಲ
ಸೀರೆಗೆಲ್ಲಿಯ ಕೊಂಡಿ ಸೆರಗಿಗೆಲ್ಲಿದೆ ತುಡಿತ
ಜೋಪಾನ ಮಾಡುವುದ ಕಲಿತೆ ಇಲ್ಲ
ಹರಿದ ರವಿಕೆಯ ತೂತು ಮೈತೋರಿದಾಗೆಲ್ಲ
ನಾಚಿ ನಿಗುರವ ಮೊಲೆಗೆ ಮನಸೆ ಇಲ್ಲ

ಎಷ್ಟು ಜಡ ದೇಹಗಳು ರಕ್ಕಸರ ಬೀಜಗಳು
ಯಾವ ಎದೆಗೂಡಿನಲು ಹೃದಯವಿಲ್ಲ
ಉಣ್ಣುವುದ ಬಲ್ಲವರು ಉಳಿಸಿ ಹೋದುದದೆಲ್ಲ
ಮಾತನೆತ್ತದ ನನಗೆ ಮುಟ್ಟೆ ಇಲ್ಲ

ರೋಮದೆದೆಗಳ ಶಾಖ ಸುಡುತಲಿದೆ ಪ್ರತಿದಿನವು
ಹೇಳಿಕೊಳ್ಳುವ ತೆವಲು ನನ್ನದಲ್ಲ
ಕುದಿವ ಕೋಪಗಳನ್ನ ಮಂಚದಡಿ ಮುಚ್ಚಿಟ್ಟು
ತರೆದು ನೋಡಿದರದಕೆ ಗೆಲುವೆ ಇಲ್ಲ

ಬದುಕ ಬಲ್ಲೆನೊ ಏನೊ ನಿಮ್ಮಗಳ ಹೊರತಾಗಿ
ಬಿಸಿಲ ತೋಟದ ಬಳ್ಳಿ ಬಳಗದಲ್ಲಿ
ಹಿಂಡಿದೆದೆಗಳು ಉಸಿರ ಎಳೆದೆಳೆದು ಬಿಡುವಾಗ
ಸತ್ತ ಹೂವಿನ ಗೋರಿ ಮಗ್ಗುಲಲ್ಲಿ.

‍ಲೇಖಕರು admin

April 8, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

5 ಪ್ರತಿಕ್ರಿಯೆಗಳು

  1. Bidaloti Ranganath

    ಕಡಿಮೆಯಾಗುತ್ತಿರುವ ಹಸಿರ ನೆತ್ತರು ,ಬಡವನ ಸಾವಿನ ಸೂತಕ ಇನ್ನೆಲ್ಲಿ ತಳಿರು ತೋರಣ.ಇವತ್ತು ಮರಗಳ ಕಡಿದು ಗೋರಿಗಳು ಕಟ್ಟುತ್ತಿರುವ ಕಟುಕರ ಪೀಳಿಯ ಮನಸುಗಳು.
    ಸೃಜನಶೀಲ ಕವಿತೆ

    ಪ್ರತಿಕ್ರಿಯೆ
  2. ಲಕ್ಷ್ಮೀಕಾಂತ ಇಟ್ನಾಳ

    ಭಾವತುಂಬಿದ ಕವನ ,ಓದಿದ ಮನಸು ತುಂಬ ಭಾರ. ಜಗಕೆ ಕನ್ನಡಿ ಹಿಡಿದ ಸಾರ್ಥ್ ಕ್ಯ ಕವನಕ್ಕೆ ಲಭಿಸಿದೆ.

    ಪ್ರತಿಕ್ರಿಯೆ
  3. ಮಹೇಶ್ವರಿ.ಯು

    ಕನ್ನಡ ಕಾವ್ಯ ಪರಂಪರೆಯ ಕೆ.ಎಸ್.ನ, ಸು.ರಂ ಎಕ್ಕುಂಡಿ ನೆನಪಾದರು.ಭಾವ ಮತ್ತು ಲಯದ ಬೆಸುಗೆ ಚೆನ್ನಾಗಿದೆ.ಅಭಿನಂದನೆಗಳು

    ಪ್ರತಿಕ್ರಿಯೆ
  4. ಸುಬ್ರಾಯ ಮತ್ತೀಹಳ್ಳಿ.

    ಕಾವ್ಯದ ಸೌಂದರ್ಯ ಜೊತೆಗೆ ಕ್ರೂರ ವಾಸ್ತವದ ಕ್ರೌರ್ಯ ಬೆಲ್ಲ ಬೇವಿನ ಹಾಗೆ ಜೊತೆಯಾಗಿವೆ.

    ಪ್ರತಿಕ್ರಿಯೆ
  5. Sangeeta Kalmane

    ಯುಗಾದಿಯ ಬೆಳಗು ಕಣ್ಣು ಬಿಟ್ಟಾಗ ಓದಿದ್ದು ಈ ಕವನ. ರಾತ್ರಿ ಮಲಗುವಾಗ ಇದುವರೆಗೂ ನಡೆದು ಬಂದ ಯುಗಾದಿಯ ಚಿತ್ರಣ, ಪೃಕೃತಿಯ ಬದಲಾವಣೆ ಹಬ್ಬ ಆಚರಿಸುವ ಉತ್ಸಾಹ ಇರಲಿಲ್ಲ. ಯಾವ ಪೂವ೯ ತಯಾರಿ ಮಾಡಲಿಲ್ಲ, ತೋರಣ ಕಟ್ಟಿರಲಿಲ್ಲ, ಕವನ ಇದಕ್ಕೆ ಸಾಟಿಯಾಯಿತು. ಮಂಜಾದ ಕಣ್ಣು ಹೃದಯ ಭಾರ. ಕವನ ಮನ ಮುಟ್ಟುವಂತಿದೆ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: