ನನ್ನ ಬುದ್ಧ
ನಳಿನಾ
ನಾನು ಬಾಲ್ಯದಲ್ಲಿ ಬುದ್ಧನೊಂದಿಗೆ
ಒಂಟಿಯಾದ ಯಶೋಧರೆಯ ಒಡಲ ವ್ಯಥೆಯ,
ಅಪ್ಪನಿಲ್ಲದೆ ಬೆಳೆದ ರಾಹುಲನ ಬೇಗುದಿಯನ್ನೂ ಅರಿತಾಗ,
ನೋವಾಯಿತು.
ಅದೇ ನೋವು ನನ್ನ ಬುದ್ಧನಿಗೂ
ಲೋಕಾಭಿರಾಮನಾಗಿ ಹೊರಟಾಗ ಕೊರೆದದ್ದಿದೆ,
ತಂದೆಯ ಮಮಕಾರ ಎದೆಯ ಬಗೆದದ್ದಿದೆ.
ಆದರೆ,
ನನ್ನ ಬುದ್ಧ ಬದುಕು ನೀಡಬಯಸಿದ್ದು,
ಜಗತ್ತಿನಲಿ ಹುಟ್ಟುವ ಪ್ರತಿಯೊಬ್ಬ ರಾಹುಲನಿಗೂ,
ದುಃಖದಿಂದ ಪರಿತಪಿಸುವ ಒಬ್ಬೊಬ್ಬ ಹೆಣ್ಣುಮಗಳಿಗೂ,
ನಾನು-ನನ್ನದು- ಎಂದು ಹುಂಬನಾಗಿ
ಹೆಣ್ಣು-ಹೊನ್ನು-ಮಣ್ಣಿನ ಹಿಂದೆ ಓಡುವ
ಜಗಜಟ್ಟಿಗಳಿಗೂ,
ತಾಮಸ ದೇಹದ ಸುತ್ತಾ
ಪ್ರೀತಿ-ಪ್ರೇಮವ ವ್ಯಾಪಿಸಿಕೊಳ್ಳುತ್ತಾ,
ಎದೆ ಶೋಲೆ ಕಟ್ಟಿಕೊಳ್ಳುವ ಜವ್ವನಿಗರಿಗೂ..
ಜಗತ್ತನ್ನು ಬಾಯಲ್ಲೇ ಇರಿಸಿಕೊಂಡ
ಶ್ರೀಕೃಷ್ಣನ ಭಗವಧ್ಗೀತೆ ಪಂಡಿತರ ಪಾಲಾದರೆ,
ಪಾಮರರಿಗಾಗಿ ಬುದ್ಧ ಬದುಕಿದ.
ನಿನ್ನೊಳವ ನೀನರಿಯದೆ,
ನಿನ್ನ ಪಂಚೇಂದ್ರಿಯಗಳ ನೀ ನಿಗ್ರಹಿಸದೆ,
ಇದ್ದೂ ಇರದಂತೆ ಬದುಕದೆ,
ಇದ್ದು ಇರುವಂತೆಯೇ ಬದುಕಲು,
ಆಸೆಯೇ ದು:ಖಕ್ಕೆ ಮೂಲವೆಂದು ಸಾರಿದ.
ಮನುಷ್ಯತ್ವದ ನಾಶದ ಅಸ್ತ್ರವೇ ಆಸೆ!.
ಮೌಲ್ಯಗಳ ಕತ್ತು ಹಿಸುಕಿ,
ಪರದೆ ಸರಿಸಿ ನಾಟಕ ನಡೆಸುವುದೇ ಆಸೆ,
ಬಡವರ ಬಲಿದಾನ ಮಾಡಿ,
ಹೆಣ್ಣಿನ ಮೌಲ್ಯ ಹರಣ ಮಾಡಿದುದೇ ಆಸೆ,
ನಿನ್ನೊಳಗಿದ್ದು, ನಿನ್ನನ್ನೇ ದ್ವಂಸ ಮಾಡುವ ಆಸೆ,
ಅರಿವಿಂಗೆ ದಾರಿತೋರದ ದುರಾಸೆ.
ಮನುಷ್ಯ ಜೀವನದ ಸಾರ್ಥಕತೆಗೆ
ಏಕೈಕ ಬೀಜಮಂತ್ರವ ಕಂಡುಕೊಂಡು
ಅರುಹಿದ ನನ್ನ ಬುದ್ಧ ಪ್ರಬುದ್ಧ.
ಅಂಗೂಲಿಮಾಲನಿಂದ-ಅಮ್ರಪಾಲಿಯವರೆಗೆ,
ಪ್ರೇಮಧಾರೆಎದೆದ ನನ್ನಬುದ್ಧ ಪ್ರೀತಿಸಿದ್ದು,
ಮನುಕುಲವನ್ನ, ಇನ್ನೂ ಕಣ್ತೆರೆಯದ ಮುಂದೊಮ್ಮೆ
ಹುಟ್ಟಿ ಬಾಳಿ ಬೆಳಗಲು ಬರುವ ಜನಾಂಗವನ್ನ,
ಕಷ್ಟಗಳ ಅಟ್ಟು ಅಸಹನೆಯಿಂದ ಬದುಕುವ
ಎಲ್ಲರನ್ನೂ ಪ್ರೀತಿಸಿದ ನನ್ನಬುದ್ಧ,
ನುಡಿದಂತೆ ನಡೆದ, ಬದ್ಧನಾದ.
ತನ್ನಂತೆಯೇ ಎಲ್ಲರೂ ಹಗುರಾಗಿ,
ಭವದಬಾರವ ಹೊರದೆ, ಸನ್ನದ್ಧರಾಗುವಂತೆ ಮಾಡಿದ
ಬುದ್ಧ ನೀನಿಲ್ಲೇ ಇರುವೆ ಎಂಬ ಅನಿಸಿಕೆ,
ಆಸೆ ಪಡುವಾಗಲೆಲ್ಲಾ,
ಎದುರಲ್ಲೇ ಕುಳಿತು ಮಂದಸ್ಮಿತನಾಗಿ
ಈಕ್ಷಿಸುವಂತೆ ಮನಕೆ ಎಚ್ಚರಿಕೆ!
(ಬುದ್ದಪೂರ್ಣಿಮೆಯ ಪ್ರಯುಕ್ತ ದಿನಾಂಕ ೨೫ ರಂದು ಬಿಜಾಪುರದ ಮಹಿಳಾ ವಿಶ್ವವಿಧ್ಯಾಲಯದಲ್ಲಿ ನಡೆದ ಮಹಿಳಾ ಕವಿಗೋಷ್ಠಿಯಲ್ಲಿ
ಭಾಗವಹಿಸಿದ್ದ ಕಿರಿಯ ಕವಯತ್ರಿಯಾದ ನಾನು ವಾಚಿಸಿದ ನನ್ನಕವನ)








chennaagide..naaLina avare..!!!
dhanyavadhagalu
ಕಿರಿಯ ಕವಯತ್ರಿಯಾದ ನಾನು ……..ಎಂಬುದು ತುಂಬಾ ಹಿಡಿಸಿತು.
Aseye ellade baduku hege?Nannase ennobbara nirasege/tondarege karanavagade iddalli/ nanage spoorti tumbuvadadalli,ase bedavaguvudu hege?……Nevertheless poem is very good for many reasons. I loveBudda And respect……
thanks