ವೈಶಾಲಿ ಹೆಗಡೆ
ದೇವರು, ಆತನ ಅಸ್ತಿತ್ವ, ಅದರ ಬಗೆಗಿನ ಜಿಜ್ಞಾಸೆ ಇವೆಲ್ಲವುಗಳ ವಿಷಯದಲ್ಲಿ ಬಹುತೇಕರಂತೆ ನಾನೂ ಎಡಬಿಡಂಗಿಯೇ.
ಈ ವಿಶ್ವದ ಹುಟ್ಟೇ ಇನ್ನೂ ಬಗೆಹರಿಯದ ಸತ್ಯವಾಗಿರುವಾಗ ಕಾಲನ ಹುಟ್ಟಿನ ಬಗ್ಗೆ ಖಚಿತತೆ ಎಲ್ಲಿಂದ ಬಂದೀತು? ವೈಜ್ಞಾನಿಕ ವಾಗಿಯೂ ವೈಚಾರಿಕವಾಗಿಯೂ ನನ್ನ ಅರಿವಿಗೆ ದಕ್ಕಿದ ನನ್ನ ಪರಿಕಲ್ಪನೆಯ ದೇವರನ್ನು ಹೇಳಿಕೊಂಡರೆ ವಿಚಿತ್ರವೆನಿಸೀತು ಹಲವರಿಗೆ. ದೇವರು ಎಂದರೆ ಅದು ಧರ್ಮರ್ಮದೊಂದಿಗೆ ತಳಕು ಹಾಕಿಕೊಂಡೆ ಇರಬೇಕು ಎಂದೇನೂ ಇಲ್ಲ. ಆದರೆ ನನ್ನ ದೇವರನ್ನು ನಾನು ಯಾರ ಮೇಲೂ ಹೇರಲಾರೆ. ಯಾರನ್ನೂ ನನ್ನಿಂದ ನಾ ಕಂಡ್ಕೊಂಡ, ಕಾಣದ ನಂಬಿಕೆಯನ್ನು ಕಿತ್ತುಕೊಳ್ಳಲೂ ಬಿಡಲಾರೆ.
ಈಗ ಒಂದು ಇರುವೆಯನ್ನೇ ತೆಗೆದುಕೊಳ್ಳಿ ಅದು ತನ್ನ ಪಾಡಿಗೆ ತಾನು ಹರೆಯುತ್ತ ಇರುವಾಗ ಅದರೆದುರಿಗೆ ಕಾಣುವ ನೋಟದ ವಿಶ್ವ ಎಷ್ಟಿದ್ದೀತು? ಇರುವೆಯ ಎದುರಿಗೆ ನಾವು ನಿಂತರೂ ಅದರ ಕಲ್ಪನೆಗೆ ನೋಟಕ್ಕೆ ಕಾಣುವುದು ನಮ್ಮ ಹೆಬ್ಬೆರಳಷ್ಟೇಯೇನೋ, ಪಾಪದ ಇರುವೆಯನ್ನು ಪಸಕ್ಕೆಂದು ಹೊಸಕಿಬಿಟ್ಟರೆ? ಅಥವಾ ಅದನ್ನು ನಿಧಾನಕ್ಕೆತ್ತಿ ಸಕ್ಕರೆ ತುಂಡಿನ ಬಳಿ ಬಿಟ್ಟರೆ? ಆ ಇರುವೆಗೆ ಅರೆಕ್ಷಣದಲ್ಲಿ ನಡೆದುಹೋದ ಘಟನೆಯ ಒಟ್ಟೂ ಅನುಭವ ವೇದ್ಯವಾಗಬಲ್ಲುದೆ? ಆ ಇರುವೆಯ ಪಾಲಿಗೆ ಅಷ್ಟಷ್ಟು ದಿವಸಕ್ಕೆ ಕಾಣಿಸುವ ಇಂಥ ಅತೀಂದ್ರೀಯ ಘಟನೆಗಳಿಗೆಲ್ಲ ಇರುವೆಯ ಪಾಲಿನ “ದೇವರು” ಕಾರಣವೇನೋ. ಇನ್ನು ನಾವು ಆ ಇರುವೆಗಿಂತ ಭಿನ್ನ ಹೇಗೆ? ನಮ್ಮ ವಿಶ್ವಕ್ಕೆ ಹೋಲಿಸಿದರೆ ನಾವು ಆಇರುವೆಗಿನ್ತಲೋ ಸಣ್ಣ. ಹಾಗಿದ್ದರೆ ಸಮಸ್ತ ವಿಶ್ವದಲ್ಲಿ ನಮಗೆ ದಕ್ಕುವ ಅನುಭವವಷ್ಟೇ ಅನುಭವವೇ? ನೋಟವಷ್ಟೇ ನೋಟವೇ? ಆ ಇರುವೆಗೆ ನಾವು ದೇವರಿದ್ದಂತೆ, ನಮಗೂ ಇನ್ಯಾವುದೋ ಜೀವಸಂಕುಲ ಅದೆಲ್ಲಿಯೋ ಇರುವ ಅನೂಹ್ಯ ಅನುಭವಕ್ಕೆ ಮಾತ್ರ ದಕ್ಕಿಸಿಕೊಂಡರೆ ದಕ್ಕುವ ಜೀವಿ ದೇವರಾಗಿರಬಹುದೇ!!?? ನನ್ನ ಬುದ್ಧಿಗೆ ನಿಲುಕಿದ್ದೆ ಸತ್ಯ. ಮನುಷ್ಯರಾಗಿ ನಾವು ನೋಡುವ, ಬಗೆಹರಿಸುವ ಪರಿಯಷ್ಟೇ ಅಂತಿಮ ವಿಜ್ಞಾನ ಎಂದುಕೊಂಡರೆ ನಮ್ಮಷ್ಟು ಮೂರ್ಖ ಜೀವಸಂಕುಲ ಇನ್ನೊಂದಿರಲಿಕ್ಕಿಲ್ಲ. ಜೀನಿಗೂ ಜೀನುತುಪ್ಪ ತಯಾರಿಸುವ ವಿಜ್ಞಾನ ಗೊತ್ತು. ಇರುವೆಗೂ ವ್ಯವಷ್ಟಿತ ಕಾಲೋನೆ ಕಟ್ಟುವ ವಿಜ್ಞಾನ ಗೊತ್ತು. ಹಕ್ಕಿಗೂ ಭೂಗೋಳ ಸುತ್ತಿ ಸುಲಿದ ದಾರಿತಪ್ಪದೆ ಬರುವ ವಿಜ್ಞಾನ ಗೊತ್ತು. ನಮಗೂ ನಾವೆಲ್ಲಾ ಇಲ್ಲಿನವರೆಗೆ ಕಂಡುಹಿಡಿದ ವಿಜ್ಞಾನ ಗೊತ್ತು. ಅಂತೆಯೇ ನಮಗೆ ದಕ್ಕದ ನಮಗಿಂತ ಮುಂದುವರೆದ ವಿಜ್ಞಾನದ “ದೇವರು” ಇರಬಹುದಲ್ಲವೇ?

ಇನ್ನು ಈ ನೆಲೆಯಲ್ಲಿ ಗಮನಿಸಿದರೆ ನಮ್ಮ ಪಾಲಿನ “ದೇವರು” ನಮಗೆ ಒಬ್ಬನೇ ಇರಬಹುದೇ? ಇಲ್ಲ ನಮ್ಮ ನಡುವಿನ ಘಟನೆಗಳೆಲ್ಲ ಇನ್ಯಾರದೋ ಇರುವೆ ಹೊಸಕಿದಷ್ಟೇ ಸುಲಭದ ನಗಣ್ಯ ಕ್ಷುಲ್ಲಕ ಕಾರ್ಯವಿರಬಹುದೇ? ಗೊತ್ತಿಲ್ಲ. ಇದ್ದರೂ ಇಲ್ಲದಿದದ್ದೂ ಅದೇ ನನ್ನ ಪಾಲಿನ ದೇವರು ತಾನೇ? ಇನ್ಯಾರದೋ ಆಟದಲ್ಲಿ ನಾವೊಂದು ಭಾಗವೆಂಬುದನ್ನು ಬೇಡವೆಂದರೂ ಒಪ್ಪಿಕೊಂಡರೆ ಮಾತ್ರ ದೇವರಿಗೊಂದು ವೈಜ್ಞಾನಿಕ ನೆಲೆಗಟ್ತಾದರೂ ಸಿಗುತ್ತದೆ ನನ್ನ ಮನದಲ್ಲಿ. ಹಾಗೆ ಸಿಕ್ಕ ದೇವರಿಗೊಂದು ನಾನು ಹೆಬ್ಬರೆಳಷ್ಟೇ ಕಂಡಿರುವ ಅಮೂರ್ತ ಕಲ್ಪನೆಗೊಂದು ಆಕಾರ ಕೊಟ್ಟುಕೊಂಡರೆ ಏನು ತಪ್ಪು? ಆ ಇರುವೆಗೂ ನಾವೆಲ್ಲಾ ಅದು ಹೇಗೆಲ್ಲ ಕಾಣಿಸುತ್ತೇವೋ ಬಲ್ಲವರಾರು? ನನ್ನೆಲ್ಲ ಕೃತ್ಯಗಳಿಗೆ ನಾನೆ ಹೊಣೆಯೆಂದು ಅರಿವಿರದ ಮೊದ್ದುಮಣಿಯೇನಲ್ಲ ನಾನು, ಆದರೆ ನಮ್ಮೆಲ್ಲರ ವಿದ್ಯಮಾನಗಳು ಕೇವಲ ನಮ್ಮಿಂದಾಗಿ ಮಾತ್ರವೇ ಸಾಧ್ಯ ಎನ್ನುವುದು ಕೂಡ ಹುಂಬತನವೇ.
ಹಾಗಾಗಿಯೇ ನನ್ನ ಮುದ್ದು ಗಣಪ ಎಂದರೆ ನನಗೊಬ್ಬ ಪರ್ಸನಲ್ ಅಸಿಸ್ಟಂಟ್. ಮನೆಗೆಲಸದ ಹೆಲ್ಪರ್. ಕೀ ಕಳೆದು ಹೋದರು ಹುಡುಕುವವ ಅವ; ಪೋಲೀಸಪ್ಪ ತನ್ನ ಕಾರು ಪಳಪಳ ಝಳಪಿಸುತ್ತ ಬಂದು, “ಮ್ಯಾಡಂ, ವರ್ ಯು ಸ್ಪೀಡಿಂಗ್?” ಎಂದರೆ ಪಕ್ಕದ ಸೀಟಿನಲ್ಲಿ ಬಂದು ಕೂರುವವನೂ ಅವ. ನನ್ನ ಹತ್ತಿರ ಬೈಸಿಕೊಂಡು ಬೆದರಿಕೆ ಹಾಕಿಸ್ಕೊಂಡರೂ ಮರುದಿನ ನನ್ನ ಅಳುವಿಗೆ ನಗುವಾಗುವವನೂ ಸಹ. ನನ್ನ ಹೊಣೆಗಾರಿಕೆಯ ನಾನು ತಪ್ಪಿದೆ ಎಂದು ಅನಿಸಿದಾಗೆಲ್ಲ ತಪ್ಪಾಯ್ತು ಕಣಪ್ಪ ಎಂದರೆ ಹೋಗ್ಲಿ ಬಿಡು ಎನ್ನುವವನೂ ಅವಾ. ತಟ್ಟಿ ಮಲಗಿಸುವ ಅಪ್ಪನೂ, ಮಡಿಲಲ್ಲಿ ಮಲಗುವ ಮುದ್ದು ಪಾಪಚ್ಚಿಯೂ ಎರಡೂ ಅವನು ನನಗೆ. ಇಂದು ಮನೆಗೆ ಬಂದು ತಂಗುವವನಿಗೆ ಎಂದಿನಂತೆಯೇ ಉಪಚರಿಸಿ ಕಳಿಸುವುದಂತೂ ಖಂಡಿತ.
ಆದರೆ ಆ ಆಚರಣೆಗೆ ಇಂತದ್ದೆ ರೀತಿಯೆಂಬ ವ್ಯಾಖ್ಯೆಯಿಲ್ಲ ನನಗೆ. ನನಗೆ ಆಚಾರ ವಿಚಾರಗಳ, ಪದ್ಧತಿ ಸಂಪ್ರದಾಯಗಳಲ್ಲಿ ಅದಮ್ಯ ನಂಬಿಕೆ ಎಂದಿಗೂ ಬರಲಿಲ್ಲ. ಹಾಗೆಂದು ಅವನ್ನೆಲ್ಲ ಅಲ್ಲಗಳೆಯುವ ಗೋಜಿಗೂ ಹೋಗುವುದಿಲ್ಲ. ಅವರವರ ನಿರಾಕಾರ ನಂಬಿಕೆಗೆ ಯಾವ ಯಾವ ಆಕಾರದಲ್ಲಿ, ಆಚಾರದಲ್ಲಿ ಸಮಾಧಾನ ಸಿಗುವುದೋ ಅದು ಅವರಿಗೆ ಬಿಟ್ಟದ್ದು. ಆದರೆ ಅದು ಎಂದೂ ಹೇರಿಕೆಯಾಗಬಾರದು. ನನ್ನ ಮಕ್ಕಳಿಗೆ ಕೂಡ ನಾ ಅದನ್ನು ಹೇರಲಾರೆ. ಅವರ ದೇವರ ಆಚರಣೆ ಅವರಿಗೆ ಬಿಟ್ಟಿದ್ದು. ನನ್ನ ದೇವರ ಆಚರಣೆಯ ಕಲ್ಪನೆ ಮಾತ್ರವೇ ಕೊಡಬಲ್ಲೆ.
ನಾನು “ಆ ದೇವರ” ಬೇಡುವುದು ಮಾತ್ರ ಇಷ್ಟೇ, ನಮ್ಮೆಲ್ಲರ ಇರುವೆ ಜನ್ಮಕ್ಕೂ “ಗಣಪ” ನು ಸಕ್ಕರೆಗುಡ್ದವ ಒದಗಿಸಲಿ.






nimma “devara”kalpane ishtavaayitu
Chennagidhe antaraladha mathu
vaishali, nanna devara kalpane,vicharagaloo hechchookadime neenu baredanteye ive…khadithavagiyoo namma sakkaregudde namage yavaga kodabeko aaga ava kotte koduttane…olleyadagali..v nalini