¸ಸ್ಮೃತಿ ಗಣತಂತ್ರ
ರವಿಶಂಕರ ಪಾಟೀಲ್
ಒಂದು ಕೈಯಲ್ಲಿ ಕೆಂಡ
ಇನ್ನೊಂದು ಕೈಯಲ್ಲಿ ತುಪ್ಪವನ್ನು
ಹಿಡಿದುಕೊಂಡು ಹೂವಿನ ಹಾಡು
ಹಾಡಹೊರಟವನಿಗೆ ದೊರಕಿದ್ದು ಬೆನ್ನಮೇಲೆ
ಕೆಂಡದುಂಡೆಯಂತಹ ಬಾಸುಂಡೆಗಳು
ಇರಿವ ಅಲಗು ಹಾಗೂ ಚುಚ್ಚುವ ಹೃದಯ
ಎದುರುಗೊಳ್ಳುವ ಆಕೆ ಕೋಮಲ ನಗೆಯಾಡುತ್ತಾಳೆ
ಬಿಸಿ ಚಹಾ ಗ್ಲಾಸಿನಲಿ ಇಲಿಯ ಶಿವತಾಂಡವ
ಅವಮಾನಿತ ಆರ್ದ್ರಕಣ್ಣುಗಳು ಆತನವು
ಅವೂ ಹೆಪ್ಪುಗಟ್ಟಿದ ನೀರಿನಿಂದ ಕೂಡಿದವು
ಮತ್ತು
ಅವುಗಳು
ಸಮಾನತೆಯ ಕಥೆ ಸಾರುತ್ತವೆ
ನ್ಯಾಯದ ಹಾದಿ ತುಳಿಯುತ್ತವೆ
ನಿದ್ರೆಗೆಟ್ಟ ಕಣ್ಣುಗಳವು
ರಾತ್ರಿಯೆಲ್ಲಾ ನಿದ್ದೆಬಾರದೆ ಒದ್ದಾಡಿ ಒದ್ದಾಡಿ
ಹಾಸಿಗೆಯೆಲ್ಲಾ ಗುದ್ದಾಡಿ
ಉರಿಮೂತ್ರ ರೋಗದಲಿ ನರಳಾಡಿ
ರಚ್ಚೆ ರಾತ್ರಿಯೆಲ್ಲಾ ಉಚ್ಚೆಗಾಗಿ ಅಲೆದಾಡಿ
ಗೋಡೆಗುದ್ದಿ
ಮಾಳಿಗೆ ಜಾರಿ ಆಕಾಶಕ್ಕೆ ಹಾರಿ
ಮೋಡಗಳೊಡನೆ ಜಗಳಮಾಡಿ
ನೀಲಿನಭಕ್ಕೆ ಕಥೆಹೇಳಿ
ಅಲ್ಲಾರೋ ಕತ್ತುಹಿಸುಕಿ ದಬ್ಬಿದಂತಾಗಿ
ಮತ್ತೆ ಮಾರ್ಗಮಧ್ಯದಲ್ಲಿ ಸಿಕ್ಕ ಕಾಗೆ
ಗೂಗೆಗಳ ಸಂಗಮಾಡಿ ಅವುಗಳೊಡನೆ
ಜಗಳಮಾಡಿ ಕಣ್ಣು ಕೆಪ್ಪುಮಾಡಿಕೊಂಡು
ಗೋಮುಖಾಸನವೇರಿ
ಅದೇ ಮಾಳಿಗೆ ಗುಂಟ ಜಾರಿ
ಹಾಸಿಗೆಯ ಸೇರಿ
ಉರಿಮೂತ್ರ ರೋಗದ ನೆನಪಾಗಿ
ಬಾಗಿಲುತಳ್ಳಿ ರಸ್ತೆಗಿಳಿದು
ಮೂತ್ರವಿಸರ್ಜನೆಗೆ ನಿಂತುಕೊಂಡ
ವೇಗದ ಲಾರಿ ಗುದ್ದಿ
ಮಧ್ಯದಲೊಂದು ಪದ್ಯ ಹೊಳೆಯಿತವನಿಗೆ
ಪಕ್ಕೆಲುಬು ಮುರಿದಂತಾಗಿ
ಬೆಕ್ಕಸ ಬೆರಗಾಗಿ
ಬಿದ್ದವನೇ
ಎದ್ದವನೇ
ಒದ್ದಾಡಿದವನೇ
ಲಾರಿ ಅವನ ಮೇಲೆ ಹಾರಿಹೋಗುವುದನೇ
ಈಕ್ಷಿಸುವವನೇ
ಅವನೇ
ಅವನವನೇ

ಮರುಕ್ಷಣ ಹಸಿವೆಂಬುದೇನೋ ಅವನನಾವರಿಸಿ
ಬಾಯಾರಿಕೆಯಾದಂತೆನಿಸಿ
ಚಿಮ್ಮಿದ ರಕ್ತವನೇ
ತಾ ನೆಕ್ಕಿ
ಅತ್ತೆಮಾವಂದಿರು ಕೊಟ್ಟ ಟೈಟಾನು ವಾಚು
ಲಾರಿಗೆ ಸಿಕ್ಕಿ
ಪ್ರಸವ ದಿನಕ್ಕುಟ್ಟ ಪದುಮಳ ದಡಿಸೀರೆ ನೆನಪಾಗಿ
ಕೆಂಪನೆಯ ಗಲ್ಲ ಚಂದ್ರಬಣ್ಣ ಕೆಂದುಟಿ
ಪಿಳಿಪಿಳಿ ಕಣ್ಣು ಮೊಲದ ನಯವಂತಿಕೆ
ಪಾಂವ್ ಪಾಂವ್ ಸದ್ದು
ಸಾವಿರಾರು ಜನ ನೆರೆದು
ಅವರೆಲ್ಲಾ ಗೋಳಾಡಿ
ಅತ್ತೂ ಕರೆದು
ಈತ ಹೊರಳಾಡಿ
ಹೊರಳಾಡಿ
ಗಲ್ಲಗಲ್ಲ
ಬಡಿದಾಡಿ
ಕೊಂಡಾಡಿ
ರಕ್ತರಂಜಿತ ಕಣ್ಣಿನಲಿ
ಕಥೆ ಬರೆಯಲು ಪೆನ್ನುಹುಡುಕಲಾರಂಭಿಸಿದ
ಯಾರೋ ಎತ್ತಿ ಆಸ್ಪತ್ರೆಗೆ ತಂದು ಹಾಕಲು
ಈತನಿಗೆ ಘನತೃಪ್ತಿ
ಘನಸುಸ್ತು
ಘನದರ್ಶನ
ಮನೋವ್ಯಾಧಿಯೆನ್ನಿ
ಲೋಕಬಾಧೆಯೆನ್ನಿ
ವಿರಹವೇದನೆಯೆನ್ನಿ ವಿರಹವರ್ಣನೆಯೆನ್ನಿ
ದಾರಿಯೆನ್ನಿ
ದಿಕ್ಕೆನ್ನಿ
ಹೂಂ ಅನ್ನಿ
ಊಹೂಂ ಅನ್ನಿ
ಅನ್ನದಿರಿ
ಯಾರದೋ ಬೆನ್ನಿಗೆ ಅಂಟಿಕೊಂಡಿದೆ ಒಂದು ಕೆಂಪನೆಯ ಇರುವೆ
ಮರಮರ ಮರುಗಿದನೆನ್ನಿ
ಹಾಳುಮೂಳು ಗರಿಗರಿ ಪ್ರಶಸ್ತಿ
ಪರಿಪರಿ
ದೆಹಲಿಯಿಂದೆತ್ತಿ ಎಸೆದುದು
ಪಕಪಕನೇ ಮಕಕೆ
ಇವನ ಮನೆಬಾಗಿಲ ಗಂಟೆಬಾರಿಸಿ
ರಸ್ತೆಯ ಮೇಲದು ಬಿಕರಿಗೆ
ಇವ ಆಸ್ಪತ್ರೆಯಲಿ

ಆಕೆ
ಪಾವನಗಂಗೆಯಲಿ ಮೀನಿನಂದದಿ ಮಿಂದು
ನಡುರಾತ್ರಿಯ ಕಾಮಕೇಳಿಗೆ ರೆಡಿಯಾಗಿ
ಗಂಡನ ಎದೆಯೇರಿ ಮರಿ ಮೊಮ್ಮಗನ
ಹೆಸರನಿಟ್ಟು ದೀರ್ಘ ನಿಟ್ಟುಸಿರಬಿಟ್ಟು
ಬೂದುಗುಂಬಳ ಮೊಲೆಗಳನು ಅವನ ಎದೆಯ ಮೇಲಿಟ್ಟು
ತುಟಿಗೆ ತುಟಿ ಸ್ಪರ್ಶಿಸಿ
ಬಿಸಿಯುಸಿರು ಇಂವ ಅವಳ ಮೇಲಿಟ್ಟಿದ್ದೇ?
ಎದೆಯುರಿಬಂದುದೇ ನೆವವಾಗಿ
ಸೆಟೆದು
ಸೆಟಸೆಟನೆ ಸೆಟೆದು
ಹೊರಳಾಡಿ ಈಜಾಡಿ
ದಡಸೇರಿ
ಬಿಕ್ಕಿ
ಕಕ್ಕಿ
ಮುಕುಳೀ ತೊಳೆವ ಬಾನಲಿಯಲಿ ಬಿದ್ದವನೇ
ಸತ್ತು ಸ್ವರ್ಗಸೇರಿದನು
ಅವನೋ ಮದುವೆಗೆ ಮೊದಲೇ
ಹೊಟ್ಟೆಹುಣ್ಣಂಟಿಸಿಕೊಂಡವನು
ಅವ ಎದ್ದನು
ಆಸ್ಪತ್ರೆಯಿಂದೆದ್ದು ಬಂದನು
ಬಂದು ಸೇರಿದುದೇ
ಹಾರಿದನು
ಅದೇಮಂಚವ ಏರಿ
ಸುಸ್ತಾಗಿ
ಇದೆಲ್ಲ ಕನಸಾಗಿ ಭ್ರಮೆಯಾಗಿ
ಮಾಯೆಯಂತೆ ಏನೋ ಅನ್ನಿಸಿ
ತಲೆದಿಂಬಿಗೆ ಗುದ್ದಿ ಹಾಸಿಗೆ ಒದ್ದು
ಬೆಳಗಾಗುವುದನೇ ನೆನೆಸಿಕೊಂಡು
ವೇಗದಲಿ ರೆಡಿಯಾಗಿ ಕ್ಯಾಬಿನಲಿ ಕೂತು
ಆಫೀಸು ಟೇಬಲ್ಲಿಗೆ ಬಂದವನೇ
ನನ್ನ ಟಿಫಿನ್ನೂ ಎಂದು ಅರಚಿದ.






0 Comments