ನನ್ನ ಕಟ್ಟೆಗೂ ಬಂತು ʼಕರಿಡಬ್ಬಿʼ

ನಾಗೇಶ್ ಹೆಗಡೆ

ಕರಿಡಬ್ಬಿ ಅಂದರೆ Black Box. ವಿಮಾನ ದುರಂತ ನಡೆದಾಗ ಈ ಡಬ್ಬಿಗಾಗಿ ಶೋಧ ನಡೆಯುತ್ತದೆ. ಅದು ಸಿಕ್ಕರೆ, ದುರಂತದ ಕ್ಷಣದಲ್ಲಿ ಏನೇನಾಯಿತು, ಹೇಗಾಯಿತು ಎಲ್ಲ ಮಾಹಿತಿ ಅದರಲ್ಲಿ ಸಿಗುತ್ತವೆ. ಪೈಲಟ್‌ ಹೇಗೆ ಕೂಗಿಕೊಂಡ, ಏನು ಮಾಡಿದ, ವಿಮಾನದ ವ್ಯವಸ್ಥೆಗಳು ಹೇಗೆ ಕೈಕೊಟ್ಟವು, ಯಾಕಾಯಿತು ದುರಂತ ಎಂಬ ದಾಖಲೆ ಅದರಲ್ಲಿರುತ್ತದೆ. ಹೆಸರಿಗೆ ಬ್ಲ್ಯಾಕ್‌ ಬಾಕ್ಸ್‌ ಎಂದು ಇದ್ದರೂ ಅದು ಕೆಂಪು ಬಣ್ಣದ ಡಬ್ಬಿಯಾಗಿರುತ್ತದೆ.

ಉಡುಪಿಯ ಮಿತ್ರ ರಾಜಾರಾಂ ತಲ್ಲೂರ್‌ ಈಗ ಇದೇ ಹೆಸರಿನ ಪುಸ್ತಕವೊಂದನ್ನು ಪ್ರಕಟಿಸಿದ್ದಾರೆ: ʼಕರಿಡಬ್ಬಿʼ. ಇದರಲ್ಲಿ ʼಕೋವಿಡ್‌-19ʼರ ಮಹಾ ದುರಂತದ ಕಥೆಗಳಿವೆ.

ಕಥೆ ಅಂದರೆ ಅವೇನೂ ಕಲ್ಪಿತ ಕತೆಗಳಲ್ಲ. ಊಹೆಗೂ ಮೀರಿದ ವಾಸ್ತವ ಸಂಗತಿಗಳಿವೆ. ಎಲ್ಲಕ್ಕೂ ಲೇಖಕರು ದಾಖಲೆಗಳನ್ನೂ ಕೊಟ್ಟಿದ್ದಾರೆ.
ಕನ್ನಡದ ಮಟ್ಟಿಗಷ್ಟೇ ಅಲ್ಲ, ಯಾವ ಭಾಷೆಯಲ್ಲೂ ಇಂಥದೊಂದು ಪುಸ್ತಕ ಅಪರೂಪವೇ ಸರಿ.

ಈ ಜಗನ್ಮಾರಿಯ ಕಥನವೂ ಅಷ್ಟೇ ಅಪರೂಪ ತಾನೆ? ಎಲ್ಲ ವೈರಿಗಳನ್ನೂ ಜೈಸಿದ್ದೇನೆಂದು ಬೀಗುತ್ತಿದ್ದ ಮನುಷ್ಯನ ಜಂಘಾಬಲ ಹೀಗೆ ಹಠಾತ್ತಾಗಿ, ಕಣ್ಣಿಗೂ ಕಾಣದ ಯಃಕಶ್ಚಿತ ವೈರಸ್‌ನಿಂದಾಗಿ ಉಡುಗಿ ಹೋಯಿತಲ್ಲ.

ಜೆಟ್‌ ವಿಮಾನಗಳನ್ನೇರಿ ವೈರಾಣು ಬಂತು. ಬೆಳಕಿನ ವೇಗದ ಸಂಪರ್ಕ ಸಾಧನಗಳನ್ನೇರಿ ಭಯದ ಮಾರಿ ಹಾರಿ ಬಂತು. ನಂಬಿದ ದೇವರುಗಳನ್ನೆಲ್ಲ ಬಂಧಿಸಿ ಕೂರಿಸಿ, ವಿಜ್ಞಾನಿಗಳು ಪಿಸಿಆರ್‌ ಯಂತ್ರಗಳೆದುರು ಕೂರುವಂತಾಯಿತು.

ಈ ಎರಡು ವರ್ಷಗಳಲ್ಲಿ ನಡೆದ ಡ್ರಾಮಾಗಳೇನು ಒಂದೆ, ಎರಡೆ? ಒಂದೆರಡು ಸಂಪುಟಗಳಲ್ಲಿ ಸಮಗ್ರವಾಗಿ ಹೇಳಿ ಮುಗಿಸಲು ಸಾಧ್ಯವೆ? ಸಾಧ್ಯವೆಂದು ರಾಜಾರಾಂ ಈ ಕರಿಡಬ್ಬಿಯಲ್ಲಿ ತೋರಿಸಿದ್ದಾರೆ.

2020ರ ಜನವರಿಯಿಂದ ಹಿಡಿದು 2021ರ ಡಿಸೆಂಬರ್‌ ನಡುವಣ ಎರಡು ವರ್ಷಗಳ ಕೊರೊನಾ ರುದ್ರತಾಂಡವದ ಕಥನ ಈ 500 ಪುಟಗಳ ಪುಸ್ತಕದಲ್ಲಿದೆ.

ಈ ಅವಧಿಯಲ್ಲಿ ಇಡೀ ಜಗತ್ತೇ ಮುಖವಾಡ ತೊಟ್ಟು ಕೂತಿದ್ದು ನಮಗೆಲ್ಲ ಗೊತ್ತಿದೆ. ಯಾರುಯಾರು ಯಾವ ಬಗೆಯ ಮುಖವಾಡ ತೊಟ್ಟು ಜನರ ಸಂಕಷ್ಟವನ್ನು ಹೆಚ್ಚಿಸಿದರು, ಯಾರು ಯಾರು ಹೇಗೆ ಹೇಗೆ ಇದರಿಂದ ಲಾಭ ಪಡೆದರು ಎಂಬುದನ್ನು ಲೇಖಕರು ಇಲ್ಲಿ ತೆರೆದಿಟ್ಟಿದ್ದಾರೆ.
ಆಕ್ರೋಶದ ಧ್ವನಿಯಲ್ಲಲ್ಲ. ಸಮಚಿತ್ತದ, ಅಂಕಿ ಸಂಖ್ಯೆಗಳ ದಾಖಲೆಗಳ ಮೂಲಕ ಮಹಾಮಾರಿಯ ಚಿತ್ರಣವನ್ನು ಇಲ್ಲಿ ಪೋಣಿಸಿದ್ದಾರೆ.
ಜೊತೆಗೆ, ಸಮಾಜದಲ್ಲಿ ಈ ಮೊದಲೇ ಹಾಸುಹೊಕ್ಕಾಗಿರುವ ನಾನಾ ಬಗೆಯ ʼಕಾಯಿಲೆʼಗಳು ಈ ಮಾರಿಯಿಂದಾಗಿ ಹೇಗೆ ಉಲ್ಬಣಗೊಂಡು ಧೀಂಕಿಟವೆಂದು ಎದ್ದು ಕುಣಿದವು ಎಂಬುದರ ಚಿತ್ರಣವೂ ಇಲ್ಲಿನ ಪುಟಗಳಲ್ಲಿವೆ. ಆ ಕಾಯಿಲೆಗಳೇನೇನು ಎಲ್ಲ ನಮಗೆ ಗೊತ್ತಿದೆ: ಸ್ವಾರ್ಥ, ಲಾಭಖೋರತನ, ವಂಚನೆ, ಅಂಧಶ್ರದ್ಧೆ, ಬಲಿಷ್ಠರ ಓಲೈಕೆ, ಮತಾಂಧತೆ…. ಒಂದೆ, ಎರಡೆ?

ರಾಜಾರಾಂ ತಮ್ಮ ಫೇಸ್‌ಬುಕ್‌ ಪುಟಗಳಲ್ಲಿ ಮತ್ತೆ ಮತ್ತೆ ಕೋವಿಡ್‌ ಬಗ್ಗೆ ಬರೆದಿದ್ದು ಇಲ್ಲಿ ಖಚಿತ ದಾಖಲೆಗಳೊಂದಿಗೆ ಸಮಗ್ರವಾಗಿ ಸಾಲುಗಟ್ಟಿವೆ.

ಹೆಸರಾಂತ ಇಂಗ್ಲಿಷ್‌ ಪತ್ರಕರ್ತ ಕೃಷ್ಣಪ್ರಸಾದ್‌ ಅವರ 21 ಪುಟಗಳ ಮುನ್ನುಡಿಯೇ ಕೋವಿಡ್‌ನ ದುರಂತ ಕಥನವನ್ನು ಸಂಕ್ಷಿಪ್ತವಾಗಿ ಹೇಳುತ್ತದೆ. ಯಾವ ತಜ್ಞರ ಸಲಹೆಯನ್ನೂ ಕೇಳದೆ ಪ್ರಧಾನಿಯವರು ಹಠಾತ್‌ ಲಾಕ್‌ಡೌನ್‌ ಘೋಷಿಸಿ ಶ್ರಮಿಕರನ್ನು ಸಂಕಷ್ಟಗಳಿಗೆ ನೂಕಿದ್ದು; ಗಂಟೆ, ಜಾಗಟೆಗಳ, ಭಜನೆಗಳಂಥ ಅವೈಜ್ಞಾನಿಕ ಕ್ರಮಗಳನ್ನು ಉಪದೇಶಿಸಿದ್ದು; ದೇಶದ ಹಣಕಾಸು ಸ್ಥಿತಿ ತಳ ಕಚ್ಚಿದಾಗಲೇ ಅಂಬಾನಿ, ಅದಾನಿಯವರು ದಾಖಲೆ ಮಟ್ಟದ ಲಾಭ ಗಳಿಸಿದ್ದು ಎಲ್ಲವೂ ಸಂಗ್ರಾಹ್ಯವಾಗಿ ಅಲ್ಲೇ ಬಂದುಬಿಡುತ್ತದೆ.

ಅದಕ್ಕೆ ಪೂರಕವಾದ ವಿವರಗಳು, ನಮ್ಮ ದೇಶದ ವಿಕಾರ ಚೆಹರೆಗಳು ಮುಂದೆ ರಾಜಾರಾಂ ಅವರ ಕರಾಳ ಪುಟಗಳಲ್ಲಿ ಬಿಚ್ಚಿಕೊಳ್ಳುತ್ತ ಹೋಗುತ್ತವೆ. ಪ್ರಧಾನಿ ಮೋದಿಯವರ ಎಲ್ಲ ಭಾಷಣಗಳೂ “ಮಿತ್ರೋಂ..” ಹೆಸರಿನ ಅಧ್ಯಾಯದಲ್ಲಿ ದಾಖಲಾಗಿವೆ. ಈ ದುರಂತದ ಎರಡು ವರ್ಷಗಳ ಕಪ್ಪು ಮೈಲುಗಲ್ಲುಗಳು ಕೊನೆಯ 14 ಪುಟಗಳಲ್ಲಿ ಸಂಗ್ರಹ ರೂಪದಲ್ಲಿವೆ.

ಕರಾಳ ಪುಟಗಳು ಎಂದೆ. ಇಡೀ ಪುಸ್ತಕದ ವಿನ್ಯಾಸವೂ ದಿಗಿಲು ಹುಟ್ಟಿಸುವಂತೆ ಇದೆ. ದೇಶವಿದೇಶಗಳಲ್ಲಿ ಹೆಸರು ಮಾಡಿದ ಕಲಾವಿದ ಎಲ್‌.ಎನ್‌. ತಲ್ಲೂರ್‌ (ರಾಜಾರಾಂ ಸಹೋದರ) ಈ ಕರಿಡಬ್ಬಿಯ ವಿನ್ಯಾಸ ಮಾಡಿದ್ದಾರೆ.

ಈ ಪುಸ್ತಕದ ಫೋಟೊ ಇಲ್ಲಿ ಸಾಧ್ಯವಾದಷ್ಟು ನೈಜವಾಗಿ ಬರಲೆಂದು ನಾನೂ ಸಾಕಷ್ಟು ತಿಣುಕಬೇಕಾಯಿತು.
ಕೋವಿಡ್‌ ದುರಂತ ಕುರಿತಂತೆ ಈಗಾಗಲೇ ಅನೇಕ ಪುಸ್ತಕಗಳು ಕನ್ನಡದಲ್ಲಿ ಬಂದಿವೆ. ಹಂಪಿ ಕನ್ನಡ ವಿ.ವಿ.ಯ ಡಾ. ಎಚ್‌.ಡಿ. ಪ್ರಶಾಂತ್‌ ಅವರ ಸಂಪಾದಕತ್ವದಲ್ಲಿ ʼಕೋವಿಡ್‌ ೧೯- ದುರಂತದ ಒಳ-ಹೊರಗೂʼ ಹೆಸರಿನ 390 ಪುಟಗಳ ಗ್ರಂಥ ಬಂದಿದೆ (ಅದರಲ್ಲಿ ನನ್ನ ಲೇಖನಗಳೂ ಇವೆ); ವೈರಸ್‌ಗಳ ವಿರಾಟ್‌ ಲೋಕದ ಬಗ್ಗೆ ವಿಜ್ಞಾನ ಲೇಖಕ ಡಾ. ಎಮ್‌. ವೆಂಕಟಸ್ವಾಮಿಯವರ ಪುಸ್ತಕ ಬಂದಿದೆ. ಮಿತ್ರ ನರೇಂದ್ರ ರೈ ದೇರ್ಲ ಅವರು 130 ಪುಟಗಳ ʼಕೊರೊನಾ ನಂತರದ ಗ್ರಾಮಭಾರತʼ ಹೆಸರಿನ ಪುಸ್ತಕವನ್ನು ಹೊರತಂದಿದ್ದಾರೆ. ಕೋವಿಡ್‌ಗೆ ಬಲಿಯಾದ ಮಾಧ್ಯಮ ಮಿತ್ರರ ಕುರಿತು ಪುಸ್ತಕ ಬಂದಿದೆ (ಕ್ಷಮಿಸಿ, ಅದರ ಹೆಸರು ಮರೆತೆ. ಗೊತ್ತಿದ್ದವರು ನೆನಪಿಸಿ ಪ್ಲೀಸ್‌). ವೈರಾಣು ಕುರಿತಂತೆ ವೈದ್ಯಲೋಕದಲ್ಲೂ ಪಸರಿಸಿದ ಮೌಢ್ಯಗಳನ ಬಗ್ಗೆ ಸಮಾಜವನ್ನು ನಿರಂತರವಾಗಿ ಎಚ್ಚರಿಸುತ್ತ ಬಂದ ಡಾ. ಶ್ರಿನಿವಾಸ ಕಕ್ಕಿಲಾಯರ ಸರಣಿ ಲೇಖನಗಳೂ ಪುಸ್ತಕವಾಗಿ ʼಕೊರೋನ- ಹೆದರದಿರೋಣʼ ಹೆಸರಿನಲ್ಲಿ ಬಂದಿದೆ. ಬಂದ ಅವೆಲ್ಲವೂ ಮಹತ್ವದ್ದೇ ಹೌದು; ಕನ್ನಡ ಸಾಹಿತ್ಯಲೋಕದ ಜೀವಂತಿಕೆಯನ್ನು, ತ್ವರಿತಮಿಡಿತವನ್ನು ಅವು ಪ್ರತಿನಿಧಿಸುತ್ತವೆ.

ಆದರೆ ʼಕರೀಡಬ್ಬಿʼಯಲ್ಲಿ ತುಂಬಿಟ್ಟ ಈ ಶಿಸ್ತುಬದ್ಧ ದಾಖಲೆಯ ಮಹತ್ವವೇ ಬೇರೆ. ವಿಶ್ವ ಆರೋಗ್ಯ ಸಂಸ್ಥೆಯ ಬ್ಲ್ಯಾಕ್‌ ಮ್ಯಾಜಿಕ್‌ನಿಂದ ಹಿಡಿದು ರೆಮ್‌ಡೆಸಿವಿಯರ್‌ ಬ್ಲ್ಯಾಕ್‌ ಮಾರ್ಕೆಟ್‌, ಗುಜರಾತ್‌ನ ಗ್ರಾಮಮಟ್ಟದ ಬ್ಲ್ಯಾಕ್‌ ಫಂಗಸ್‌ವರೆಗಿನ ವರದಿಗಳಲ್ಲಿ ನಮ್ಮ ದೇಶದ ವಿವಿಧ ರಂಗಗಳ ನಾಯಕತ್ವದ ವೈಫಲ್ಯಗಳ ಕರೀ ಮಸಿ ಇಲ್ಲಿ ಕೈಗೆ ಮೆತ್ತಿಕೊಳ್ಳುವಷ್ಟು ಗಾಢವಾಗಿವೆ.

ವಿಮಾನದ ಬ್ಲ್ಯಾಕ್‌ಬಾಕ್ಸ್‌ನ ವಿಶಿಷ್ಟತೆ ಏನು ಗೊತ್ತೆ? ವಿಮಾನದ ದುರಂತ ಅದೆಷ್ಟೇ ಭೀಕರವಾಗಿರಲಿ, ಅದು ನೆಲಕ್ಕಪ್ಪಳಿಸಿ ಅದೆಷ್ಟೇ ಚಿಂದಿಯಾಗಿ ಪೂರ್ತಿ ಸುಟ್ಟು ಕರಕಲಾದರೂ ಈ ಕರೀಡಬ್ಬಿ ಮಾತ್ರ ಸುರಕ್ಷಿತ ಇರುತ್ತದೆ. ಸಮುದ್ರದಲ್ಲೇ ಬಿದ್ದರೂ, ಜ್ವಾಲಾಮುಖಿಯ ಬಾಯಿಗೇ ಬಿದ್ದರೂ ಅದರ ದಾಖಲೆಗಳು ಭದ್ರವಾಗಿ ಇರುವಂತೆ ಅದರಲ್ಲಿ ಸುರಕ್ಷಾ ವ್ಯವಸ್ಥೆ ಇರುತ್ತದೆ. ಅದರಲ್ಲಿ ಅಡಕವಾದ ಪಾಠಗಳು ಮುಂದೆ ಹೊಸ ದುರಂತಗಳು ಸಂಭವಿಸದಂತೆ ಮುನ್ನೆಚ್ಚರಿಕೆ ನೀಡಬೇಕು ಎಂಬುದು ಅದರ ಉದ್ದೇಶವಾಗಿರುತ್ತದೆ.

ಈ ಪುಸ್ತಕವೂ ನಮ್ಮ ಮಧ್ಯೆ ತುಂಬ ದೀರ್ಘಕಾಲ ಇರುವಂತಾಗಬೇಕು. ಮುಂದೆಂದೂ ಇಂಥ ದುರಂತ ಆಗದಂತೆ ಮುನ್ನೆಚ್ಚರಿಕೆ ಕೊಡಲು ಇಂಥ ಆಕರಗ್ರಂಥ ನಮ್ಮೊಡನೆ ಸದಾ ಇರಬೇಕು. ಎಲ್ಲ ಶಾಲಾ ಕಪಾಟುಗಳಲ್ಲಿ, ಗ್ರಂಥಾಲಯಗಳಲ್ಲಿ ಇರಬೇಕು.

‍ಲೇಖಕರು Admin

April 19, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: