ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನನ್ನ ಎದೆಯ ಮೇಲೆ ನಿನ್ನ ಕೈ

Lost and Found / ಕಳೆದುದು ಸಿಕ್ಕಿದೆ 

Sunday Special

‘ಕವಿತೆಯ ಜೊತೆ … ಬಿಡುವಿನ ಮಾತುಕತೆ’ ಯಿಂದ ಹೆಕ್ಕಿದ್ದು

sahyadri nagaraj

ಸಹ್ಯಾದ್ರಿ ನಾಗರಾಜ್

neruda love lines3

ನನ್ನ ಎದೆಯ ಮೇಲೆ ನಿನ್ನ ಕೈ-ನನ್ನದೇ ಕೈ

ಸಂಜೆಯ ಮೆಲುಗಾಳಿಯ ಪಕಳೆಗಳ ಬಿಡಿಸುತ್ತಾ ಹೊಂಟ ರೈಲು ಇನ್ನೇನು ಸಿಹಿಮೊಗ್ಗೆ (ಶಿವಮೊಗ್ಗ) ತಲುಪಿತು ಎನ್ನುವಾಗ ಪಡುವಣಕ್ಕೆ ವಿಶೇಷ ವಾತಾವರಣವೊಂದು ನಿರ್ಮಾಣವಾಗುತ್ತದೆ. ಇಲ್ಲ, ನಾನಿಲ್ಲಿ ತಪ್ಪಾಗಿ ಅಂದಾಜಿಸಿದ್ದೇನೆ. ಅದು ಪಡುವಣವಲ್ಲ ಮೂಡಣ. ನನ್ನೊಳಗೆ ಆ ಸನ್ನಿವೇಶ ಬರೆದಿರುವ ಬಣ್ಣದ ಕೃತಿಗೆ ಬೆರಗಾಗಿ ಹೀಗೆ ನಾನು ಸರಿಯಾಗಿ ಗ್ರಹಿಸದಿರಬಹುದು. ಇಲ್ಲವೇ ಪಡುವಣದಲ್ಲಿ ಮಾತ್ರಾನೇ ಅಂಥದ್ದೊಂದು ಚಮತ್ಕಾರ ಸಾಧ್ಯ ಅನ್ನೋ ನನ್ನ ಭ್ರಮೇನೂ ಇರಬಹುದು.

*****

ಅದು ಕಣ್ಣಂಚಲ್ಲಿ ಅಷ್ಟಗಲಕ್ಕೆ ಸೆರೆಹೊಡೆದು ನಿಲ್ಲುವ ಭತ್ತದ ಗದ್ದೆಗಳ ನಡುವೆ ಒಂಟಿಯಾಗಿ, ಒಬ್ಬಂಟಿಯಾಗಿ ನಿಂತ ಮರ. ಏನೆಂದರೇನೂ ನಂಟಿರಲಿಕ್ಕಿಲ್ಲ ಅದಕ್ಕೆ, ನೀರಿನದ್ದೂ. ಆದ್ರೆ ಮಸುಕಾಗಿ ಕಪ್ಪು ಹತ್ತಿದ್ದ ಸಂಜೆಯಲ್ಲಿ ಅದರದ್ದು ಮೋಹಕ ಮೌನನಾದ.

flower lipsಸನ್ನಿವೇಶದ ಸ್ವಾರಸ್ಯ ಹೇಳಿಬಿಡ್ತೇನೆ ಕೇಳಿ…ಭತ್ತದ ಗದ್ದೆಗಳು ಹಸುರುಟ್ಟು ಮೈದುಂಬಿಕೊಂಡು ನಿಂತಾಗ ಆ ಮರವೂ ತನ್ನುದ್ದಕ್ಕೆ ಹಸುರನ್ನು ಪಸರಿಸಿಕೊಂಡಂತೆ ಕಾಣುತ್ತದೆ. ಅವೇ ಗದ್ದೆಗಳು ಕುಯ್ಯಲ್ಪಟ್ಟು ಬಣಗುಟ್ಟುವಾಗ ಬರಡಾಗಿ ಒಣ ಬಯಲಲ್ಲಿ ಒಂದಾದ ಪುಟ್ಟ ತೊರೆಯ ಪಳಿಯುಳಿಕೆಗಳಂತೆ ಕಾಣಿಸುತ್ತದೆ.

ನೀವು ಮೂಗಿನ ಮೇಲೆ ಬೆರಳಿಡ್ತೀರೋ ಏನೋ ಗೊತ್ತಿಲ್ಲ. ನಂಗೆ ನೆರೂಡಾ ಅನ್ನೋ ಪ್ರಚಂಡ ಕವಿ ಹೆಚ್ಚು ಹತ್ತಿರಾಗಿದ್ದು ಈ ಚಮತ್ಕಾರಿಕ ಮರ ಕಣ್ಣಿಗೆ ಬಿದ್ದ ಮೇಲೆಯೇ. ಕುವೆಂಪು ಬರೆದ ಮೋಹಕ ಕವಿತೆಯೊಂದು ನನ್ನೊಳಗೆ ಮಳೆಯಂತೆ ಅರಳಿದ್ದು ಕೂಡಾ ಈ ಮರದ ಮಾಯೆಯಿಂದಲೇ.

ಕವಿತೆ ಕೇಳಲು ಶುರುವಿಟ್ಟಿದ್ದೇನೆ. ನೆರೂಡಾ ಕೇಳಿಸುತ್ತಿದ್ದಾನೆ. ನಾನು ತೆಪ್ಪಗೆ ಕಿವಿಯೊಪ್ಪಿಸಿದ್ದೇನೆ, ಜೊತೆಗೆ ಮನಸ್ಸನ್ನೂ.

‘…..ನಾನು ಪ್ರೀತಿಸುತ್ತೇನೆ,
ಅರಳಿಸದಿದ್ದರೂ ತನ್ನ ಹೂಗಳ ಬೆಳಕನ್ನು
ಬಚ್ಚಿಟ್ಟುಕೊಂಡ ಗಿಡದ ಹಾಗೆ….’

ಆಗ್ತಾ ಇರೋ ಪುಳಕಕ್ಕೆ, ಪುಳಕವನ್ನೂ ಮೀರಿದ ಇಬ್ಬನಿಯ ಜಳಕದಂಥ ಮಾಟಕ್ಕೆ ಮನ ಸೋತಿದೆಯೋ ಅಥವಾ ಸೋಲುವುದನ್ನು ಮರೆತು ಕೂತಿದೆಯೋ ಗೊತ್ತಾಗುತ್ತಿಲ್ಲ. ಮತ್ತೆ ಇನ್ನೆಂಥ ಹೇಳಿ…ನೆರೂಡಾನನ್ನು ಬಾಚಿ ತಬ್ಬಿಕೊಳ್ಳುವುದೊಂದು ಬಾಕಿ. ಎಂತಹ ಅದ್ಭುತ ಸಾಲುಗಳಿವು. ಮುಂದೆಂದೋ ಅರಳಲಿರೋ ಹೂವುಗಳ ರೂಪು, ಘಮ, ಬಣ್ಣ, ಸಮಯ ಮುಂತಾದ ಎಲ್ಲ ರಹಸ್ಯಗಳನ್ನೂ ಗಿಡ ತನ್ನೊಳಗೆ ಬಚ್ಚಿಟ್ಟುಕೊಂಡಿರುತ್ತಂತೆ. ಅಂತೆಯೇ ನನ್ನ ಪ್ರೀತೀನೂ ಅಂತಾನೆ ಜಾಣ ನೆರೂಡಾ. ಅವನು ಅವೆಲ್ಲವನ್ನೂ ಸೇರಿಸಿ ಬೆಳಕು ಅಂತ ಕರೀತಾನೆ. ಇಲ್ಲಿನ ಬೆಳಕು ಹೂವಿಗಷ್ಟೇ ಅಲ್ಲ ಪ್ರೀತಿಗೂ ಅನ್ವರ್ಥ. ನನ್ ಪ್ರೀತಿಯನ್ನು ನಿನ್ನೊಟ್ಟಿಗೆ ಹಂಚಿಕೊಳ್ಳಲಾಗ್ತಿಲ್ಲ ಅಂದ ತಕ್ಷಣ ನನ್ನಲ್ಲಿ ನಿನ್ನ ಬಗ್ಗೆ ಪ್ರೀತಿ ಇಲ್ಲಾಂತ ಅರ್ಥ ಅಲ್ಲ ಅಂತ ನೆರೂಡಾ ನೇರವಾಗಿ ಹೇಳಿಬಿಟ್ಟಿದ್ರೆ ಇಂಥದ್ದೊಂದು ಚಮತ್ಕಾರಿಕ ಸಾಲು ಖಂಡಿತಾ ಹುಟ್ತಾ ಇರ್ಲಿಲ್ಲ.

ಕವಿತೆಯ ಈ ಮೂರು ಸಾಲಿಗೇ ನಮ್ಮ ಬೆರಗನ್ನು ಮುಗಿಸಿಬಿಟ್ರೆ ಅಷ್ಟೊಂದು ಚಂದ ಇರೋಲ್ಲ. ಮುಂದೆ ಆತನಿಗೆ ಪ್ರೀತಿ ಹೇಗಾಯ್ತು, ಆತನ ಪ್ರೀತಿ ಹೇಗೆ ಅನ್ನೋದನ್ನು ನೆರೂಡಾನ ಮಾತುಗಳಲ್ಲೇ ಕೇಳಿ…

body flower‘ಹೇಗೆ ಅಥವಾ ಎಲ್ಲಿ ಅಥವಾ ಎಲ್ಲಿಂದ
ಎಂಬುದ ತಿಳಿಯದೇ ನಿನ್ನನ್ನು ಪ್ರೀತಿಸುತ್ತೇನೆ;
ಸಮಸ್ಯೆ, ಗರ್ವಗಳಿಲ್ಲದೆ
ಸುಮ್ಮನೆ ನಿನ್ನನ್ನು ಪ್ರೀತಿಸುತ್ತೇನೆ,
ಏಕೆಂದರೆ ನನಗೆ ಬೇರೆ ರೀತಿ ಗೊತ್ತಿಲ್ಲ’

‘ಕವಿತೆ ಅಂದ್ರೆ ತನ್ನ ಪಾಡಿಗೆ ತಾನು ಅರ್ಥವಾಗೋದು’ ಅನ್ನೋ ಕಿ.ರಂ ಮಾತು ನನಗೆ ನಿಜ ಅನ್ನಿಸಿದ್ದು ನೆರೂಡಾನ ಈ ಸಾಲುಗಳಲ್ಲೇ.

ಇನ್ನು ಕುವೆಂಪು ಕವಿತೆಯೊಂದು ಕಾಡೋಕೆ ಶುರುವಾಗೋದು ನೆರೂಡಾನ ಮುಂದಿನ ಸಾಲುಗಳನ್ನು ಹೊಕ್ಕಾಗ. ನೆರೂಡಾ ಹೇಳುತ್ತಾನೆ…

‘ನಾನು ಅಥವಾ ನೀನು ಇಲ್ಲದ ಇದು
ತುಂಬಾನೇ ಆಪ್ತ;
ನನ್ನ ಎದೆಯ ಮೇಲೆ ನಿನ್ನ ಕೈ-
ನನ್ನದೇ ಕೈ’

ಈ ಪ್ರೀತೀಲಿ ನಾನು ಅಥವಾ ನೀನು ಅನ್ನೋದು ಇರೋದಿಲ್ಲ, ನಾವಿಬ್ರೂ ಒಬ್ರೇ ಅಂತಾನೆ ನೆರೂಡಾ.
ಇದೇ ಸರಿಯಾದ ಹೊತ್ತು. ನಮ್ಮ ಕುವೆಂಪು ಕವಿತೆಯನ್ನೊಮ್ಮೆ ಆವಾಹಿಸಿಕೊಳ್ಳಿ…

‘ನೀನು ಹೊಳೆದರೆ ನಾನು ಹೊಳೆವೆನು
ನೀನು ಬೆಳೆದರೆ ನಾನು ಬೆಳೆವೆನು
ನನ್ನ ಹರಣದ ಹರಣ ನೀನು
ನನ್ನ ಮರಣದ ಮರಣವು’

 *****
ಆ ಮರ ಮತ್ತೆ ಕಣ್ಣಿಗೆ ಕಟ್ತಾ ಇದೆ. ಗದ್ದೆ ಹಸುರಾದಾಗ ಅದೂ ಹಸುರಾಗುತ್ತೆ. ಗದ್ದೆ ಒಣಗಿದ್ದಾಗ ಅದೂ ತನ್ನ ನಗುವನ್ನು ಕಳೆದುಕೊಂಡಿರುತ್ತೆ. ಭೌತಿಕವಾಗಿ ಬೇರೆ-ಬೇರೆಯಾದ ಎರಡು ವಸ್ತು ಅಥವಾ ಜೀವಗಳು ಹೀಗೆ ಒಂದಾಗೋದು ನಂಗೆ ಅಚ್ಚರಿಯಾಗಿ ಕಾಡುತ್ತೆ. ನೆರೂಡಾ ತನ್ನ ಕವಿತೆಯಲ್ಲಿ ಹೇಳಿದ, ಕುವೆಂಪು ತನ್ನ ಪದ್ಯದಲ್ಲಿ ಹಿಡಿದಿಟ್ಟ ಆ ಅದ್ವೈತ ನನ್ನೊಳಗೆ ಹುಟ್ಟುಹಾಕಿದ ಪುಳಕಕ್ಕೆ ಎದೆಯ ತುಂಬಾ ಪ್ರೀತಿ ಉಕ್ಕಿಬಂದಿದೆ. ಆದ್ರೆ ಯಾರ ಮೇಲಪ್ಪಾ ಅಂತ ಈಗಲೇ ಕೇಳ್ಬೇಡಿ. ಅದು ನಂಗೂ ಗೊತ್ತಿಲ್ಲ ಇನ್ನೂ!
ಆ ಕವಿತೆ ಇಲ್ಲಿದೆ 

I do not love you as if you were brine-rose, topaz

Ineruda profile do not love you as if you were salt-rose, or topaz,
or the arrow of carnations the fire shoots off.
I love you as certain dark things are to be loved,
in secret, between the shadow and the soul.

I love you as the plant that never blooms
but carries in itself the light of hidden flowers;
thanks to your love a certain solid fragrance,
risen from the earth, lives darkly in my body.

I love you without knowing how, or when, or from where.
I love you straightforwardly, without complexities or pride;
so I love you because I know no other way

than this: where I does not exist, nor you,
so close that your hand on my chest is my hand,
so close that your eyes close as I fall asleep.

 

‍ಲೇಖಕರು admin

11 October, 2015

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading