ನನ್ನ ಆರು ವರ್ಷದ ಮಗನ ಮುಂದೆ..

ಪ್ರತಿಭಾ ನಂದಕುಮಾರ್‌

ಪ್ರತಿಭಾ ನಂದಕುಮಾರ್‌ ಅವರು ಕನ್ನಡದ ಮಹತ್ವದ ಕವಿಯತ್ರಿ. ಮೂಲತಃ ಬೆಂಗಳೂರಿನವರಾದ ಪ್ರತಿಭಾ ನಂದಕುಮಾರ್ ಮದ್ರಾಸ್‌ ವಿಶ್ವವಿದ್ಯಾಲಯದಿಂದ ಎಂ.ಎ, ಎಂ.ಫಿಲ್‌ ಪದವಿಯನ್ನು ಪಡೆದಿದ್ದಾರೆ.‌ ಎನ್‌ ಜಿ ಎಫ್‌ನಲ್ಲಿ ಭಾಷಾಂತರಕಾರ್ತಿಯಾಗಿ ಕೆಲಸ ಮಾಡಿದ್ದಾರೆ. ನಂತರ ಇಂಡಿಯನ್‌ ಎಕ್ಸ್‌ಪ್ರೆಸ್‌, ಡೆಕ್ಕನ್‌ ಹೆರಾಲ್ಡ್‌, ಅಗ್ನಿ ಪತ್ರಿಕೆಗಳಲ್ಲಿ ಪತ್ರಕರ್ತೆಯಾಗಿ ಕೆಲಸ ಮಾಡಿದ್ದಾರೆ. ಸಿನಿಮಾ ರಂಗದಲ್ಲಿ ಸಹನಿರ್ದೇಶಕಿಯಾಗಿ ಕೂಡ ಕೆಲಸ ಮಾಡಿದ್ದಾರೆ.

ಸದಾ ಪ್ರಯೋಗಶೀಲರಾದ ಪ್ರತಿಭಾ ಅವರು ಕಾವ್ಯದಲ್ಲಿ ಹಲವು ಪ್ರಯೋಗಗಳನ್ನು ಮಾಡುವುದರೊಂದಿಗೆ ಹಲವು ಕವನಸಂಕಲನಗಳನ್ನು ಪ್ರಕಟಿಸಿದ್ದಾರೆ. ನಾವು ಹುಡುಗಿಯರೇ ಹೀಗೆ, ಈ ತನಕ, ರಸ್ತೆಯಂಚಿನ ಗಾಡಿ, ಕವಡೆಯಾಟ, ಅವರು ಪುರಾವೆಗಳನ್ನು ಕೇಳುತ್ತಾರೆ, ಮುನ್ನುಡಿ ಬೆನ್ನುಡಿಗಳ ನಡುವೆ, ಕಾಫಿ ಹೌಸ್‌, ಮುದುಕಿಯರಿಗಿದು ಕಾಲವಲ್ಲ, ಅವನ ಮುಖ ಮರೆತುಹೋಗಿದೆ ಮೊದಲಾದವು ಅವರ ಕವನಸಂಕಲನಗಳು. ಯಾನ ಕಥಾಸಂಕಲನ, ಆಕ್ರಮಣ ಅನುವಾದಿತ ಕಥಾಸಂಕಲನ, ಅನುದಿನದ ಅಂತರಗಂಗೆ ಆತ್ಮಕತೆ ಹೀಗೆ ಹಲವು ಕೃತಿಗಳನ್ನು ಪ್ರಕಟಿಸಿದ್ದಾರೆ.

ಸಾಹಿತ್ಯದ ಕೃಷಿಗಾಗಿ ಮಹಾದೇವಿ ವರ್ಮಾ ಕಾವ್ಯ ಸಮ್ಮಾನ್‌, ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ, ಮುದ್ದಣ ಕಾವ್ಯ ಪ್ರಶಸ್ತಿ, ಡಾ. ಶಿವರಾಮಕಾರಂತ ಪ್ರಶಸ್ತಿ, ಪು.ತಿ.ನ ಕಾವ್ಯ ಪ್ರಶಸ್ತಿ ಸೇರಿದಂತೆ ಹಲವು ಪುರಸ್ಕಾರಗಳು ಲಭಿಸಿವೆ.

ಈ ಸಂಚಿಕೆಯಲ್ಲಿ ಜ್ಯುಲಿಯೆ ಕೋಲ್ಚಿನ್ಸ್ಯಿ ದಷ್ಬಕ್‌ ಅವರ ಕವನವೊಂದನ್ನು ಅನುವಾದಿಸಿದ್ದಾರೆ.

ಜ್ಯುಲಿಯೆ ಕೋಲ್ಚಿನ್ಸ್ಕಿ ದಷ್ಬಕ್ ತನ್ನ ಆರನೇ ವಯಸ್ಸಿನಲ್ಲಿ ಹುಟ್ಟೂರು ಉಕ್ರೇನಿನಿಂದ ಜ್ಯು ನಿರಾಶ್ರಿತೆಯಾಗಿ ಅಮೆರಿಕಕ್ಕೆ ವಲಸೆ ಹೋದಳು. ಈಗ ಸಾಹಿತಿ ಮತ್ತು ಸಂಶೋಧಕಿಯಾಗಿರುವ ಅವಳು ಹೋಲೋಕಾಸ್ಟ್ ಬಗ್ಗೆ ಇರುವ ಅಮೇರಿಕನ್ ಕಾವ್ಯದ ಕುರಿತು ಮತ್ತು ಸೋವಿಯತ್ ಪ್ರದೇಶಗಳಲ್ಲಿ ನಡೆದ ದೌರ್ಜನ್ಯಗಳ ಕುರಿತು ಬರೆಯುತ್ತಿದ್ದಾಳೆ. ಗರ್ಭಿಣಿಯಾಗಿರುವಾಗ ಪೋಲೆಂಡಿನ ಕಾನ್ಸನ್ಟ್ರೇಶನ್ ಕ್ಯಾಂಪ್ಗಳಿಗೆ ಭೇಟಿ ನೀಡಿ ತನ್ನ ಅನುಭವಗಳನ್ನು ದಾಖಲಿಸಿದ್ದಾಳೆ. ಈ ಕವನ Poetry ಪತ್ರಿಕೆಯ ಸೆಪ್ಟೆಂಬರ್ 2022 ಸಂಚಿಕೆಯಲ್ಲಿ ಪ್ರಕಟವಾಗಿದೆ. ಒಂದು ಆಟದ ಮೈದಾನದಲ್ಲಿ ಹುಡುಗನೊಬ್ಬನ ಜೊತೆಗಿನ ಮಾತುಕತೆ ಈ ಕವನದ ರಚನೆಗೆ ಕಾರಣವಾಯಿತು ಎಂದು ಹೇಳಿದ್ದಾಳೆ. ಇದನ್ನು Voices for Ukraine fundraiser and virtual reading series ಗಾಗಿ ಆಕೆ ಇಂಗ್ಲಿಷಿನಲ್ಲಿ ಮತ್ತು ಇದರ ಯೂಕ್ರೇನಿಯನ್ ಅನುವಾದವನ್ನು ಅಮಿಲಿಯ ಗ್ಲೇಸರ್ ಓದಿದ್ದಾರೆ. ಇದರಲ್ಲಿ ಪ್ರಸ್ತಾಪವಾಗಿರುವ ಉಕ್ರೇನಿನ ಮರಿಉಪೋಲ್ ಕಳೆದ ಮಾರ್ಚ್ ನಲ್ಲಿ ರಷ್ಯಾ ಸೇನೆ ಧಾಳಿಯಲ್ಲಿ ನಾಶವಾಯಿತು.

ನನ್ನ ಆರು ವರ್ಷದ ಮಗನ ಮುಂದೆ ಯುದ್ಧದ ಪ್ರಸ್ತಾಪ ಮಾಡುವುದಿಲ್ಲ ನಾನು ಆದರೆ ಹೇಗೋ ಅವನ ದೇಹಕ್ಕೆ ಅದು ಗೊತ್ತಿದೆ

ಮಲಗುವ ಮುನ್ನ ನನ್ನ ಮುಖ
ತನ್ನ ಎರಡೂ ಕೈಗಳಲ್ಲಿ ಹಿಡಿದು ಕೇಳುತ್ತಾನೆ ಅವನು
ನಿನ್ನನ್ನು ನಾನು ಕತ್ತರಿಸಿ ಎರಡು ತುಂಡು ಮಾಡಿದರೆ
ನೀನು ಸಮ ಸಮವಾಗಿರುತ್ತೀಯಾ?

ನಾನು ಮೌನವಾಗಿದ್ದೆ. ಮರಿಉಪೋಲ್ ನಲ್ಲಿ
ಅದೃಶ್ಯ ಕೈಗಳು ತಾಯಂದಿರನ್ನು ಕತ್ತರಿಸಿವೆ ಎಂದುಕೊಳ್ಳುತ್ತಾ.
ಮಕ್ಕಳನ್ನು ನೀರು ಕತ್ತರಿಸಿದೆ.

ಏಕೆಂದರೆ ನಿನಗೆ ಎರಡು ಕಣ್ಣುಗಳು + ಎರಡು ಕಿವಿಗಳು +ಎರಡು ಕೆನ್ನೆಗಳು
+ ಇಷ್ಟು ಕೂದಲು + ನಿನ್ನ ಬಾಯಿ ಇಷ್ಟನ್ನೂ
ಎರಡು ತುಂಡುಗಳನ್ನಾಗಿಸಿದರೆ ಸಮಸಮ ಆಗುತ್ತೀಯಾ, ಅಲ್ಲವೇ?

ಅವನಿಗೆ ಸರಳ ಗಣಿತ ಬೇಕು.
ಕ್ರೌರ್ಯ ಮೀರಿಸುವ ಉಸಿರು ಬೇಕು.
ನೀನು ÷ 2 = 2 ನಿನ್ನ ಸಮ ಪ್ರಮಾಣದ ಎರಡುಗಳು.
ಅದಕ್ಕಿಂತ ಹೆಚ್ಚಿನದೇನನ್ನೂ ಅವನು ಕೇಳುತ್ತಿಲ್ಲ
ಅವನು ನನ್ನನ್ನೊಂದು ಸ್ಮಾರಕವಾಗಿಸುತ್ತಿದ್ದಾನೆ.
ನಿನ್ನನ್ನು ಕತ್ತರಿಸಿದರೂ ನೀನಿನ್ನೂ ಇರುತ್ತೀಯಾ
ಪುಟ್ಟ ಕೈಗಳು ನನ್ನನ್ನು ಭಾಗಿಸಲು ಬೇಡಿಕೆಯಿಟ್ಟಿದೆ
ನೀನು ನನ್ನನ್ನು ಕತ್ತರಿಸಿದರೆ, ನಾನವನಿಗೆ ಹೇಳಿದೆ,
ನಾನು ಸತ್ತುಹೋಗುತ್ತೇನೆ.

ನಾನೇಕೆ ಅನುವಾದಿಸುತ್ತೇನೆ?

ನಾನು ಒಬ್ಬಳು ವೃತ್ತಿಪರ ಅನುವಾದಕಿ. ಸೃಜನಶೀಲ, ಸೃಜನೇತರ, ತಾಂತ್ರಿಕ, ಆಡಳಿತ ಇತ್ಯಾದಿ ಹಲವಾರು ರೀತಿಯ ಭಾಷಾಂತರವನ್ನು ನಾನು  ದಿನ ನಿತ್ಯದಲ್ಲಿ ಮಾಡುತ್ತೇನೆ. ಎನ್ ಜಿ ಈ ಎಫ್ ನಲ್ಲಿ ತಾಂತ್ರಿಕ ಕ್ಷೇತ್ರದಲ್ಲಿ ಕನ್ನಡ ಎನ್ನುವ ಯೋಜನೆಯಲ್ಲೇ ಕೆಲಸ ಮಾಡಿ ತಾಂತ್ರಿಕ ಮತ್ತು ಆಡಳಿತ ವಿಷಯಗಳನ್ನು ಭಾಷಾಂತರ ಮಾಡಬೇಕಾಗಿತ್ತು. ತಾಂತ್ರಿಕ ನಿಘಂಟು ಸದಸ್ಯೆಯಾಗಿಯೂ ಇದ್ದೆ. ನಂತರ  ಇಂಡಿಯನ್ ಎಕ್ಸ್ ಪ್ರೆಸ್ ನಲ್ಲಿ  ಡೆಕ್ಕನ್ ಹೆರಾಲ್ಡ್ ನಲ್ಲಿ, ನ್ಯೂಸಬಲ್ ನಲ್ಲಿ ಕೆಲಸ ಮಾಡುವಾಗ ಒಮ್ಮೊಮ್ಮೆ ಕನ್ನಡ ಸುದ್ದಿಗಳನ್ನು ಇಂಗ್ಲಿಷಿಗೆ ಅನುವಾದಿಸಬೇಕಾಗುತ್ತಿತ್ತು.  ಆನಂತರ ಫ್ರಿಲ್ಯಾನ್ಸ್ ಆಗಿ ಕೆಲಸ ಮಾಡುವಾಗ ಭಾಷಾಂತರವೇ ಮುಖ್ಯ ಕೆಲಸವಾಯಿತು. ಎನ್ ಜಿ ಓಗಳ ವರದಿಗಳು, ಮ್ಯಾನ್ಯುಯಲ್ ಗಳು, ಪಠ್ಯಗಳು, ತರಬೇತಿ ಪಠ್ಯಗಳು…. ಅಸಂಖ್ಯಾತ ಪುಟಗಳಷ್ಟು ಭಾಷಾಂತರ ಮಾಡಿದೆ. ಜೊತೆಗೆ ಚಲನ ಚಿತ್ರಗಳ ಸಬ್ ಟೈಟಲಿಂಗ್ ಕೆಲಸವನ್ನು ನಿಯತವಾಗಿ ಮಾಡುತ್ತಿದ್ದೆ.  ಡಿಜಿಟಲ್ ಮೀಡಿಯಾ ಬಂದ ಮೇಲೆ  ಭಾಷಾಂತರ ಇನ್ನಷ್ಟು ಅಗತ್ಯ ಸೇವೆಯ ಸಾಲಿಗೆ ಸೇರಿಕೊಂಡಿತು. ಈ ನಡುವೆ ತಮಿಳು ಚಿತ್ರದಲ್ಲಿ ಕೆ ವಿ ಆನಂದ್ ಅವರಿಗೆ ಅಸೋಸಿಯೇಟ್ ಡೈರೆಕ್ಟರ್ ಆಗಿ ಕೆಲಸ ಮಾಡುವಾಗಲೂ ಭಾಷಾಂತರ ದಿನನಿತ್ಯದ ಕೆಲಸವಾಗಿತ್ತು. ಹೀಗಾಗಿ ಭಾಷಾಂತರ ಎನ್ನುವುದು ನನ್ನ ತುದಿಬೆರಳಲ್ಲಿ ಕರಗತವಾದ ಸಂಗತಿಯಾಯಿತು. ಕನ್ನಡದಿಂದ ಇಂಗ್ಲಿಷಿಗೆ ಮತ್ತು ಇಂಗ್ಲಿಷಿನಿಂದ ಕನ್ನಡಕ್ಕೆ – ಎರಡೂ ಭಾಷೆಗಳಲ್ಲಿ ಪರಿಣತಿಯಲ್ಲಿ ಹೆಸರಾದೆ.

ಇಷ್ಟು ವೃತ್ತಿಪರ ಭಾಷಾಂತರ ಮಾಡುವಾಗಲೂ ನನಗೆ ಇಷ್ಟವಾದ ಕವನ ಅಥವಾ ಕಥೆಯನ್ನು ಭಾಷಾಂತರ ಮಾಡುವುದು ಖಯಾಲಿಗಾಗಿ. ಕೆಲವು ಕವನ ಕಥೆಗಳನ್ನು ಯಾರೋ ಕೇಳಿದ್ದರಿಂದ ಮಾಡಿದೆ. ಬಾಹುಬಲಿ ಚಿತ್ರ ಬಂದಾಗ ಅದರ ಪೂರ್ವಪೀಠಿಕೆಯ ಕಥೆ “ಶಿವಗಾಮಿ ಕಥೆ”ಯನ್ನು ಆನಂದ್ ನೀಲಕಂಠನ್ ಅವರು ಬರೆದಿದ್ದು ಅದನ್ನು ವೆಸ್ಟ್ ಲ್ಯಾನ್ಡ್ ಪ್ರಕಾಶಕರಿಗೆ ಇಂಗ್ಲಿಷಿನಿಂದ ಕನ್ನಡಕ್ಕೆ ಮಾಡಿದೆ.  ಅಗ್ನಿ ಶ್ರೀಧರ್ ಅವರ “ಎದೆಗಾರಿಕೆ” ಕಾದಂಬರಿಯನ್ನು ದ ಗ್ಯಾಂಗ್ಸ್ಟರ್ಸ್ ಗೀತಾ ಅಂತ ಇಂಗ್ಲಿಷಿಗೆ ಮಾಡಿದೆ. ಸುರೇಂದ್ರನಾಥ್ ಅವರ “ಗಾಳಿಗೆ ಚೆದುರಿದ ಚಂದ್ರನ ತುಂಡುಗಳು” ಕಾದಂಬರಿಯನ್ನು “ಸ್ಲಯ್ಸಸ್ ಆಫ್ ಮೂನ್ ಸ್ವೆಪ್ಟ್ ಬೈ ದ ವಿಂಡ್” ಅಂತ ಮಾಡಿದೆ. ಅನಿತಾ ನಾಯರ್ ಅವರ ಪ್ರಸಿದ್ಧ ಕ್ರೈಮ್ ಥ್ರಿಲ್ಲರ್ ಕಾದಂಬರಿಯನ್ನು ಕನ್ನಡಕ್ಕೆ ಅನುವಾದಿಸಿದೆ. ಪದ್ಮಾ ಸಛ್ ದೇವ್ ಅವರ ಡೋಗ್ರಿ ಕವನಗಳನ್ನು ಕನ್ನಡಕ್ಕೆ ಪರಿಚಯಿಸಿದೆ. ಶಶಿ ದೇಶಪಾಂಡೆ ಅವರ ಕಥೆಗಳನ್ನು, ಮಲಯಾಳದ ಕಥೆಗಳನ್ನು ಇಂಗ್ಲಿಷಿನ ಅನೇಕ ಕಥೆಗಳನ್ನು ಕನ್ನಡಕ್ಕೆ ತಂದೆ.

ನನಗೆ ಇಷ್ಟವಾದ ಜಗತ್ ಕವಿಗಳ ನೂರಾರು ಕವನಗಳನ್ನು ಕನ್ನಡಕ್ಕೆ ಅನುವಾದಿಸಿದೆ. ಕನ್ನಡದ ಉತ್ತಮ ಕವನಗಳನ್ನು ಇಂಗ್ಲಿಷಿಗೆ. ನನ್ನದೇ  ಕವನಗಳನ್ನು ನಾನೇ ಇಂಗ್ಲೀಷಿಗೆ ಅನುವಾದಿಸಿದೆ.  ಸೂಫಿ ಕವನಗಳನ್ನು ಕನ್ನಡಕ್ಕೆ ತಂದೆ. ಬೋದಿಲೇರ್, ರಿಲ್ಕೆ ಇನ್ನೂ ನೂರಾರು ಕವಿಗಳ ಕವನಗಳನ್ನು ಅನುವಾದಿಸಿದೆ. ಎಚ್ ಎಸ್ ವೆಂಕಟೇಶ ಮೂರ್ತಿ, ರಾಜೇಂದ್ರಪ್ರಸಾದ್, ರಾಜಶೇಖರ ಬಂಡೆ ಇನ್ನೂ ಅನೇಕ ಕವಿಗಳ ಕನ್ನಡ ಕವನಗಳನ್ನು ಇಂಗ್ಲಿಷಿಗೆ ಭಾಷಾಂತರಿಸಿದೆ.  ಅರ್ಲಿನ್  ಹಟನ್ ಅವರ ನಾಟಕವನ್ನು ಕನ್ನಡಕ್ಕೆ ತಂದೆ. ಈಚೆಗೆ ಮಣಿ ರಾವ್ ಅವರ ಇಂಗ್ಲಿಷ್ ಕವನಗಳನ್ನು ಕನ್ನಡಕ್ಕೆ ಭಾಷಾಂತರಿಸಿದೆ. ಇನ್ನೂ ಬೇಕಾದಷ್ಟಿದೆ.

ಇದು ನನ್ನ ಭಾಷಾಂತರ ಚಟುವಟಿಕೆಯ ಸಂಕ್ಷಿಪ್ತ ಪರಿಚಯ.

ಇದನ್ನು ಹೇಳಿಕೊಂಡಿದ್ದರ ಕಾರಣ ನನ್ನ ವೃತ್ತಿಯ ಪ್ರಮುಖ ಅಂಗವೇ ಭಾಷಾಂತರವಾದ್ದರಿಂದ ನಾನೇಕೆ ಭಾಷಾಂತರ ಮಾಡುತ್ತೇನೆ ಎನ್ನುವುದಕ್ಕೆ ಯಾವುದೇ ರೀತಿಯ ರಮ್ಯ ಕಾರಣಗಳನ್ನು ಕೊಡಲಾಗುವುದಿಲ್ಲ. ದಿನನಿತ್ಯದ ಅಡಿಗೆ ಮಾಡಲು ಏನು ಕಾರಣ ಎಂದು ಕೇಳಿದಂತೆ ಇದು.

ಆದರೆ ಒಂದು ಮಾತು ಸ್ಪಷ್ಟಪಡಿಸಬೇಕು. ನನ್ನ ಕವನದ ಭಾಷಾಂತರಗಳು ಹಲವಾರು ಪತ್ರಿಕೆಗಳಲ್ಲಿ ಪೋರ್ಟಲ್ ಗಳಲ್ಲಿ ಪ್ರಕಟವಾಗಿದ್ದರೂ ನನ್ನ ಹದಿನಾರು ಕವನ ಸಂಕಲನಗಳಲ್ಲಿ ಭಾಷಾಂತರಗಳನ್ನು ಸೇರಿಸಿಲ್ಲ.  ಭಾಷಾಂತರದ್ದೇ ಪ್ರತ್ಯೇಕ ಸಂಕಲನ ತರಬೇಕು.

ಭಾಷಾಂತರ ಮಾಡುವುದೆಂದರೆ ಒಂದು ಕೃತಿಯನ್ನು ‘ಸರಿಯಾಗಿ’ ಓದುವುದು. ನನ್ನ ಭಾಷಾಂತರ ನೀತಿ ಎಂದರೆ ಮೂಲದಿಂದ ಏನನ್ನೂ ಬಿಡಬಾರದು, ಏನನ್ನೂ ಸೇರಿಸಬಾರದು. ನಾನು ನೋಡಿರುವ ಅನೇಕರ ಭಾಷಾಂತರಗಳಲ್ಲಿ ಮೂಲದ ಎಷ್ಟೋ ಸಂಗತಿಗಳನ್ನು ಬಿಟ್ಟುಬಿಟ್ಟಿರುತ್ತಾರೆ, ಇಲ್ಲಾ ತಿರುಚಿರುತ್ತಾರೆ. ತಪ್ಪುತಪ್ಪಾಗಿ ಗ್ರಹಿಸಿ ಏನೋ ಮಾಡಿರುತ್ತಾರೆ. ಮೂಲದ ಅರ್ಥಕ್ಕೆ ಧಕ್ಕೆ ಬರುವ ಹಾಗೆ ಭಾಷಾಂತರಿಸಿರುತ್ತಾರೆ. ಅಂಥದ್ದನ್ನೆಲ್ಲ ನೋಡಿದಾಗ ಸಿಟ್ಟು ಬರುತ್ತದೆ. ಅದು ಉಡಾಫೆಯ ಕೆಲಸ ಅಂತ ಅಸಹ್ಯ ಬರುತ್ತದೆ. ಭಾಷಾಂತರಕ್ಕೆ ಕೊಡಬೇಕಾದ ಗೌರವ ಕೊಟ್ಟು ಶ್ರದ್ಧೆಯಿಂದ ಮಾಡಬೇಕು. ಒಂದೊಂದು ಸಲ ಒಂದು ಪದದ ಅರ್ಥ ಹುಡುಕಿ ಸರಿಯಾದ ಸಂವಾದಿ ಪದ ಹಾಕಲು ದಿನಗಟ್ಟಲೆ ಹೆಣಗಿದ್ದೇನೆ. ಬೇರೆಯ ನನ್ನ ನೆಚ್ಚಿನ ಭಾಷಾಂತರಕಾರರ ಕೆಲಸವನ್ನು ತುಂಬಾ ಆಸಕ್ತಿ ಮತ್ತು ಶ್ರದ್ಧೆಯಿಂದ ಓದುತ್ತೇನೆ. ಅದರ ಗುಣಾವಗುಣಗಳ ಬಗ್ಗೆ ಆಲೋಚಿಸುತ್ತೇನೆ. ಸೃಜನಶೀಲ ಕೃತಿಗಳ ಭಾಷಾಂತರ ಮಾಡುವಾಗ ಮೂಲ ಕೃತಿಯ ಧ್ವನಿ – ಟೋನ್ – ಹಿಡಿಯುವುದು ನನಗೆ ಬಹಳಾ ಮುಖ್ಯ. ಇಲ್ಲದಿದ್ದರೆ ಭಾಷಾಂತರ ವಿಫಲವಾಗಿದೆ ಎಂದರ್ಥ.

ಭಾಷಾಂತರ ನನಗೆ ಖುಷಿ ಕೊಡುವ ಸಂಗಾತಿಯಾದ್ದರಿಂದ ಭಾಷಾಂತರ ಚೆನ್ನಾಗಿ ಆದಾಗ ಅದು ಒಂಥರಾ ಕಿಕ್ ಕೊಡುತ್ತೆ. ಆ ಕಿಕ್ ಗಾಗಿ ಭಾಷಾಂತರ ಮಾಡುತ್ತೇನೆ.

‍ಲೇಖಕರು Admin

September 30, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: