ಅನುವಾದವೆಂದರೆ ಎಂದೂ ಮುಗಿಯದ ಕೆಲಸ..

ಓ.ಎಲ್.‌ ನಾಗಭೂಷಣಸ್ವಾಮಿ ಕನ್ನಡದ ಖ್ಯಾತ ವಿಮರ್ಶಕರು ಮತ್ತು ಅನುವಾದಕರು. ಇವರು ಇಂಗ್ಲೀಷ್‌ ಅಧ್ಯಾಪಕರಾಗಿದ್ದು ನಿವೃತ್ತರಾಗಿದ್ದಾರೆ. ವಿಮರ್ಶೆ, ಅನುವಾದ, ಸಂಪಾದನೆ ಹೀಗೆ ಹಲವು ಕೃತಿಗಳನ್ನು ಪ್ರಕಟಿಸಿದ್ದಾರೆ, ವಿಮರ್ಶೆಯ ಪರಿಭಾಷೆ, ನನ್ನ ಹಿಮಾಲಯ, ಏಕಾಂತ ಲೋಕಾಂತ, ನುಡಿಯೊಳಗಾಗಿ, ಯುದ್ಧ ಮತ್ತು ಶಾಂತಿ, ನೆರೂಡನ ನೆನಪುಗಳು, ಸಿಂಗರ್‌ ಕತೆಗಳು, ರುಲ್ಫೋನ ಸಮಗ್ರ ಸಾಹಿತ್ಯ, ಕನ್ನಡಕ್ಕೆ ಬಂದ ಕವಿತೆ ಮೊದಲಾದವು ಅವರ ಕೃತಿಗಳು. ಕರ್ನಾಟಕ ಸಾಹಿತ್ಯ ಅಕಾಡಮಿ, ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ ಹೀಗೆ ಹತ್ತು ಹಲವು ಪ್ರಶಸ್ತಿಗಳನ್ನು ಪಡೆದಿದ್ದಾರೆ.

ಪ್ರೊ. .ಎಲ್ ನಾಗಭೂಷಣ ಸ್ವಾಮಿಯವರೊಂದಿಗೆ ವಿಶ್ವ ಅನುವಾದ ದಿನಕ್ಕಾಗಿ ಅವಧಿ ಬಳಗ ನಡೆಸಿದ ಸಂವಾದ ಇಲ್ಲಿದೆ.

ಸಂದರ್ಶನಅವಧಿ ಬಳಗ

1 ಟಾಲ್‍ಸ್ಟಾಯ್‍ನ ಯಾವ ಇಂಗ್ಲಿಷ್ ಅನುವಾದ ನಿಮಗೆ ಬಹಳ ಇಷ್ಟ?

ಟಾಲ್ಸ್ಟಾಯ್‍ನ ಒಂದೊಂದು ಸಾಹಿತ್ಯ ಕೃತಿಯ ಕನಿಷ್ಠ ಎಂಟಾದರೂ ಇಂಗ್ಲಿಶ್ ಅನುವಾದಗಳು ಇವೆ. ದೊಡ್ಡ ಕೃತಿಯನ್ನು ಅನುವಾದಕ್ಕೆ ತೆಗೆದುಕೊಂಡಾಗ ಕನಿಷ್ಠ ನಾಲ್ಕಾದರೂ ಅನುವಾದಗಳನ್ನು ಕಣ್ಣೆದುರು ಇಟ್ಟುಕೊಂಡಿರುತ್ತೇನೆ. ಒಂದು ಅನುವಾದದಲ್ಲಿ ಕಂಡದ್ದು ಇನ್ನೊಂದರಲ್ಲಿ ಬೇರೆ ಥರ ಕಾಣುತ್ತದೆ. ಭಾಷೆ ಸ್ವಲ್ಪ ಹಳತು ಅನಿಸಿದರೂ ಟಾಲ್ಸ್ಟಾಯ್ ಕಾದಂಬರಿಯ ಲಯವನ್ನು  ಇಂಗ್ಲಿಶ್‍ನಲ್ಲಿ ಹಿಡಿಯಲು ಸಾಧ್ಯವಾದದ್ದು ಆಲ್ಮರ್ ಮತ್ತು ಲೂಯಿ ಮಾಡ್ ದಂಪತಿಗೆ. ಟಾಲ್ಸ್ಟಾಯ್ ರಚನೆಗೆ ಸಾಧ್ಯವಾದಷ್ಟೂ ನಿಕಟವಾಗಿ, ನಿಷ್ಠುರ ಬದ್ಧವಾಗಿ ರೂಪುಗೊಂಡ ಅನುವಾದ ರಿಚರ್ಡ್ ಪವಿಯರ್-ಲಾರಿಸ್ಸಾ ವೋಲ್ಖೋನ್ಸ್ಕಿಯವರು ಕೂಡಿ ಮಾಡಿರುವ ಅನುವಾದ. ಕಾನ್ಟನ್ಸ್ ಗಾರ್ನೆಟ್ ಅವರದು ಓದುಗರಿಗೆ ಸಲೀಸು ಅನಿಸುವಂಥ ಇಂಗ್ಲಿಶ್. ಯುದ್ಧ ಮತ್ತು ಶಾಂತಿ ಅನುವಾದಿಸುವಾಗ ಹೆಚ್ಚು ಅನುಕೂಲವಾಗಿ ಒದಗಿದ್ದು ಬ್ರಿಗ್ಸ್ ಅವರ ಅನುವಾದ. 

2 ವಿಮರ್ಶೆಯಿಂದ ಅನುವಾದದ ಕಡೆ ಹೊರಳಿದ ಕ್ಷಣ ಅಥವಾ ಇದು ಒಂದು ರೀತಿಯಲ್ಲಿ ರೂಪಾಂತರವಿರಬಹುದೇ?

ನನಗೆ ಸ್ವಲ್ಪ ಬುದ್ಧಿ ಬೆಳೆದಾಗಿನಿಂದಲೂ ಓದಿದ್ದನ್ನೆಲ್ಲ ಇದನ್ನು ನಾನಾಗಿದ್ದರೆ ಹೇಗೆ ಹೇಳುತ್ತಿದ್ದೆ ಅಂದುಕೊಂಡು ಮನಸಿನೊಳಗೇ ಬೇರೆ ಥರ ಬರೆದುಕೊಳ್ಳುತ್ತಿದ್ದೆ. ಸ್ಟೀನರ್ ಎಂಬ ವಿದ್ವಾಂಸ, ‘ಎಲ್ಲ ಗ್ರಹಿಕೆಯೂ ಅನುವಾದವೇ ಆಗಿರುತ್ತದೆ,’ ಎಂದು ಹೇಳಿದ ಮಾತನ್ನು ಓದಿದಾಗ ಈ ಅಭ್ಯಾಸಕ್ಕೆ ಸಮರ್ಥನೆ ದೊರೆಯಿತು.

3 ನೀವು ಮಾಡಿದ ಮೊದಲ ಅನುವಾದ?  

ಬಿಎ ಓದುತ್ತಿರುವಾಗ ಇಷ್ಟವಾದ ಕೆಲವು ಇಂಗ್ಲಿಶ್ ಕವಿತೆ, ಹಳಗನ್ನಡದ ಪದ್ಯ, ಸಂಸ್ಕೃತದ ಸುಭಾಷಿತಗಳನ್ನು ಬೇರೆ ಬೇರೆ ಥರ ಹೇಳುವುದಕ್ಕೆ ಪ್ರಯತ್ನಪಡುತ್ತಿದ್ದೆ. ಹಾಗೆ ಪೂರ್ತಿ ಮಾಡಿದ ಆದರೆ ಎಂದೂ ಪ್ರಕಟವಾಗದ ಅನುವಾದವೆಂದರೆ ಜೀನ್ ರಾಸೀನ್‍ನ ಫೀದ್ರಾ ಎಂಬ ಫ್ರೆಂಚ್ ನಾಟಕ ಮತ್ತು ಬೆಕೆಟ್‍ನ ವೇಟಿಂಗ್ ಫಾರ್ ಗಾಡೋ. 

4 ಅನಂತಮೂರ್ತಿ ಮತ್ತು ನಿಮ್ಮ ನಡುವೆ ಕವನ ಅನುವಾದದ ಮೂಲಕ ನಡೆದ ಸಂವಾದದ ಕುರಿತು ಇಡಿಯಾಗಿ ತಿಳಿದುಕೊಳ್ಳಬೇಕು, ಹೇಳಿ. 

ಅನಂತಮೂರ್ತಿಯವರ ಪಾಠ ಕೇಳಿ, ಮಾತು ಕೇಳಿ, ಓದಿ ಬೆಳೆದವರಲ್ಲಿ ನಾನೂ ಒಬ್ಬ. ಆದರೂ ಮೇಷ್ಟರು ಹತ್ತಿರವಾದದ್ದು 2011ರ ಸುಮಾರಿನಲ್ಲಿ ಅವರ ಆರೋಗ್ಯ ಕ್ಷೀಣಿಸಲು ಶುರುವಾದಾಗ, ಅಕಸ್ಮಾತ್ತಾಗಿ ಅನುವಾದ ಕುರಿತು ಮಾತು ಶುರುವಾಗಿ ಆಮೇಲೆ ದಿನಕ್ಕೆ ಮೂರು ನಾಲ್ಕು ಬಾರಿಯಾದರೂ ರಿಲ್ಕ್ ಕವಿತೆಯ ಅನುವಾದದ ಚರ್ಚೆ ಫೋನು ಮೂಲಕ ಮಾಡುತ್ತಾ ಮಾಡುತ್ತಾ ಮೇಷ್ಟರು ನನ್ನ ಬೆಳೆಸಿದರು. ಕೊನೆಗೂ ಅವರು ಮಾಡಿದ ಎರಡು  ಮತ್ತರ್ಧ ಸಾಲಿನ ಕವಿತೆ ಪೂರ್ತಿ ತೃಪ್ತಿಯಾಗಿಲ್ಲ ಸರ್ ಅಂದಾಗಲೂ ನಾವು ಮಾತಾಡಿದ್ದೆಲ್ಲ ಬರೆದುಕೊಡು ಎಂದು ಕೇಳಿ ಅವರ ಪುಸ್ತಕದಲ್ಲಿ ಆ ಚರ್ಚೆಯನ್ನು ಅನುಬಂಧವಾಗಿ ಸೇರಿಸಿಕೊಳ್ಳುವ ಔದಾರ್ಯ ತೋರಿದರು. ಅನುವಾದದ ವಿಚಾರದಲ್ಲೂ ಅವರಿಂದ ಬಹಳ ಕಲಿತೆ. 

5 ಕನ್ನಡಕ್ಕೆ ಬಂದ ಕವಿತೆಯ ಬಗ್ಗೆ

ಕನ್ನಡ ವಿಶ್ವವಿದ್ಯಾಲಯದಿಂದ ಮರಳಿದ ನಂತರ, ಎಚ್.ಎಸ್. ರಾಘವೇಂದ್ರರಾವ್ ಅವರಿಂದ ಪಡೆದ ಆಧುನಿಕ ಕಾವ್ಯದ ಸಂಕಲನದ ಮೇಲೆ ಕಣ್ಣಾಡಿಸುತ್ತಾ ಕೆಲವು ಇಷ್ಟವಾದ ಕವಿತೆಗಳನ್ನು ಕನ್ನಡದಲ್ಲಿ ಮರಳಿ ಬರೆದುಕೊಳ್ಳುತ್ತ ಹೋದೆ. ಮೂಲಕ್ಕೆ ನಿಷ್ಠೆ ಅನ್ನುವ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸದೆ ಕವಿತೆ ನನಗೆ ಅರ್ಥವಾದದ್ದನ್ನು ಕನ್ನಡದಲ್ಲಿ ಸಹಜವಾಗಿ ಹೇಳುವುದು ಹೇಗೆ ಅನ್ನುವ ಪ್ರಯೋಗ ಅದರಲ್ಲಿದೆ. ಹಾಗಾಗಿ ಕನ್ನಡ ಕಾವ್ಯದ ನುಡಿ, ವಾಕ್ಯ ಇತ್ಯಾದಿಗಳೆಲ್ಲ ಜಗತ್ತಿನ ಕವಿತೆಗಳ ಕನ್ನಡಿಯಲ್ಲಿ ಪ್ರತಿಫಲಿಸಿವೆ. ಉದಾಹರಣೆಗೆ, ಪುರಂದರ ದಾಸರು ಹೇಳುವ ‘ಮಗುಗಳ ಮಾಣಿಕ್ಯ’ನೂ ಅಲ್ಲಮ ಪ್ರಭು ಪ್ರೀತಿಸಿದ ಹುಡುಗಿಯೂ, ಅಲ್ಲಮ ವಚನದ ಕೋಗಿಲೆಯೂ ಮತ್ತೆ ಯಾವುದೋ ಕವಿತೆಗಳ ಅನುವಾದದ ಹೆಣಿಗೆಯಲ್ಲಿ ಸೇರಿ ಹೋಗಿವೆ. ಹಾಗಾಗಿ ಅದು ಬೇರೆಲ್ಲೋ ಹುಟ್ಟಿ ಕನ್ನಡಕ್ಕೆ ಬಂದ ಕವಿತೆ. 

6 ಟಾಲ್‍ಸ್ಟಾಯ್‍, ಸಿಂಗರ್, ಪಾಮುಕ್… ಯಾರು ಹಿತವರು ಈ ಮೂವರೊಳಗೆ?

ಎಲ್ಲರೂ.  

7 ನತಾಶ, ಕೆಂಪು ಮುಡಿಯ ಹೆಣ್ಣು, ಅನ್ನಾ… ಇವರಲ್ಲಿ ಹೆಚ್ಚು ಕಾಡಿದವರು?

ಮೂವರೂ. ಹುಡುಗಿಯೊಬ್ಬಳು ಪ್ರಬುದ್ಧ ತಾಯಿ ಆಗುವವರೆಗೆ ನತಾಶಾ ಬೆಳೆದ ರೀತಿ, ಗಂಡನಾಗಲೀ ಮಗನಾಗಲೀ ಇಬ್ಬರಿಂದಲೂ ನೋವು ಪಡುವುದು ಹೆಣ್ಣು ಮಾತ್ರವೇ ಎಂಬುದನ್ನು ತೋರಿಸಿಕೊಡುವ ಸ್ವತಃ ಹಲವು ಮುಖಗಳುಳ್ಳ ಕೆಂಪು ಮುಡಿಯಹೆಣ್ಣು, ಸೂಕ್ಷ್ಮ ಮತ್ತು ಪ್ಯಾಶನೇಟ್ ಆಗಿರುವ ಹೆಣ್ಣಿನ ಬದುಕು ಚಿತ್ರಿಸುತ್ತ ಓದುಗರು ತಮ್ಮನ್ನು ತಾವು ನೋಡಿಕೊಳ್ಳುವಂತೆ ಮಾಡುವ ಅನ್ನಾ—ಮನುಷ್ಯ ಮನಸ್ಸು ಭಾಷೆಯಲ್ಲಿ ಸೃಷ್ಟಿಸಿರುವ ಮೂರು ಮಾದರಿಯ ಜೀವಂತ ಹೆಣ್ಣುಗಳು. 

8 ನೀವು ಗದ್ಯ ಅನುವಾದ ಮಾಡುವಾಗ ಉಪಯೋಗಿಸುವ ಭಾಷೆಯಲ್ಲಿ ಅನೇಕ ಪ್ರಯೋಗ ಮಾಡ್ತಾ ಇರ್ತೀರಿ. ಇದು ಸ್ಪಷ್ಟವಾಗಿ ಕಾಣುವುದು ಸಿಂಗರ್ ನ ಕಥೆಗಳಲ್ಲಿ. ಯಾಕೆ ಹೀಗೆ?

ಒಂದೊಂದು ಮನಸ್ಸೂ ಲೋಕವನ್ನು ಕಾಣುವ, ಅರ್ಥ ಮಾಡಿಕೊಳ್ಳುವ, ಅರ್ಥವಾದದ್ದನ್ನು ಹೇಳುವ ರೀತಿ ಬೇರೆ ಬೇರೆ. ಎಲ್ಲ ಲೇಖಕರ ಕೃತಿಗಳನ್ನೂ ನನ್ನ ಕನ್ನಡಕ್ಕೇ ಅನುವಾದ ಮಾಡಿದರೆ ಸರಿಯಾಗದು ಅನ್ನಿಸಿ ಸಾಧ್ಯವಾದಮಟ್ಟಿಗೂ ಮತ್ತೊಂದು ಮನಸು ಹೇಗೆ ಯಾವ ಲಯದಲ್ಲಿ ಭಾಷೆ ಬಳಸಿರಬಹುದು ಅನ್ನುವುದನ್ನ ಊಹಿಸಿ ನನ್ನ ಕನ್ನಡ ಬೇರೆ ಥರ ಆಗುವ ಹಾಗೆ ಪ್ರಯತ್ನ ಮಾಡುವ ಆಸೆ. ಮುಖ್ಯವಾಗಿ ಸಿಂಗರ್ ಕಥೆಗಳು ಪುಸ್ತಕದಲ್ಲಿ ಮೊದಲನೆಯದು, ಸಾಲ್ ಬೆಲೋ ಎಂಬ ನೊಬೆಲ್ ವಿಜೇತ ಯಹೂದಿ ಲೇಖಕ ಅಮೆರಿಕನ್ ಇಂಗ್ಲಿಶ್‍ಗೆ ಮಾಡಿದ್ದನ್ನು ಅನುಸರಿಸಲು ವಿಶೇಷ ಪ್ರಯತ್ನ ಮಾಡಿದೆ. ಹಾಗೇ ಹ್ವಾನ್ ರುಲ್ಫೋನ ಮೆಕ್ಸಿಕನ್ ಕಥೆ ಕಾದಂಬರಿ, ನೆರೂಡನ ಆತ್ಮಕಥೆ ಇವನ್ನೆಲ್ಲ ಕನ್ನಡದಲ್ಲಿ ಓದುವವರಿಗೆ ಅವೆಲ್ಲ ಬೇರೆ ಬೇರೆ ಮನಸು ಮಾಡಿರುವ ಬರವಣಿಗೆ ಅನಿಸಬೇಕು. ಸಾಧ್ಯವಾಗಿದೆಯೇ ನನಗೆ, ಅದನ್ನು ಓದುಗರೇ ಹೇಳಬೇಕು. 

9 ಅನುವಾದಕರಾಗಿ, ಬೇರೆ ಭಾಷೆಯಿಂದ ಕನ್ನಡಕ್ಕೆ ಬಂದ ಯಾವ ಪುಸ್ತಕ ನಿಮಗೆ ಅತ್ಯುತ್ತಮ ಅನುವಾದ ಅಂತ ಅನಿಸಿದ್ದು?

ಇಂಥ ಪ್ರಶ್ನೆ ಅನುವಾದಕರನ್ನು ಕೇಳಬಾರದು. ಯಾಕೆಂದರೆ ಅನುವಾದ ಓದುತ್ತಾ ನಾನಾಗಿದ್ದರೆ ಹೇಗೆ ಮಾಡುತಿದ್ದೆ ಅನ್ನುವ ಯೋಚನೆ, ಎಲ್ಲಿ ಎಡವಿದ್ದಾರೆ, ಎಲ್ಲಿ ತರಚು ಗಾಯ, ಎಲ್ಲಿ ಮೂಳೆ ಮುರಿತ ಇಂಥ ನೆಗೆಟಿವ್ ಹುಡುಕಾಟಗಳೇ ಇರತ್ತೆ ಅನಿಸತ್ತೆ. ಕವಿಗೆ ಕವಿ ಮುನಿವಂ ಅನ್ನುತ್ತಾರಲ್ಲ ಕವಿ ಅಂದರೆ ಅನುವಾದಕರೂ ಬೇರೆಯವರ ಅನುವಾದ ನೋಡಿ ಮುನಿಯದಷ್ಟು ಸಂತರಲ್ಲ. ನಾನು ಮಾಡಬೇಕಾಗಿತ್ತು ಅನ್ನುವುದರಿಂದ ಹಿಡಿದು, ನಾನಾಗಿದ್ದರೆ….ಅನ್ನುವ ಸೀರೀಸ್ ಹೇಳಿಕೆಗಳ ವರೆಗೆ ಏನೇನೋ ಮನಸಿನಲ್ಲಿ ಮೂಡುತ್ತವೆ. ಆದರೂ ಚಿಕ್ಕಂದಿನಲ್ಲಿ ಮುಗ್ಧವಾಗಿ ಓದಿದ ಕಸ್ತೂರಿ ಅವರ ‘ಪಾತಾಳದಲ್ಲಿ ಪಾಪಚ್ಚಿ’ (ಆಲಿಸ್ ಇನ್ ವಂಡರ್-ಲ್ಯಾಂಡ್) ಎಲ್. ಗುಂಡಪ್ಪನವರು ಮಾಡಿದ ಟಾಲ್ಸ್ಟಾಯ್ ಕಥೆಗಳು, ಯಾರು ಮಾಡಿದ್ದೋ ಮರೆತಿರುವ ‘ಗ್ರೀಕ್ ವೀರರು’ ಎಂಬ ಪುಸ್ತಕ, ನೆನಪಿನಲ್ಲಿ ಉಳಿದಿವೆ. 

10 ಕನ್ನಡದಿಂದ ಇಂಗ್ಲಿಷಿಗೆ ಅನುವಾದ ಗೊಂಡಿರುವ ಪುಸ್ತಕಗಳಲ್ಲಿ ನಿಮಗೆ ದಿ ಬೆಸ್ಟ್ ಅನಿಸಿದ ಪುಸ್ತಕ? ಯಾಕೆ?

ತತ್ವ ಹೇಳುವವರು ಏನು ಬೇಕಾದರೂ ಹೇಳಲಿ, ಕನ್ನಡದಿಂದ ಇಂಗ್ಲಿಶಿಗೆ ನಾನೂ ಸೇರೆ ಬಹಳಷ್ಟು ಜನ ಮಾಡಿರುವ ಅನುವಾದಗಳೆಲ್ಲ ಕಲಿತ, ಅಕಡೆಮಿಕ್ ಇಂಗ್ಲಿಶು, ಜೀವಂತ ಮಿಡಿಯುವ ಇಂಗ್ಲಿಶ್ ಅಲ್ಲ; ಕಾಡಿನ ತೊರೆಯ ಹಾಗೆ ಸಹಜವಾದ ಹರಿವು ಇರಲ್ಲ, ಒಂದೊಂದು ಹನಿಯೂ ಕಷ್ಟಪಟ್ಟು ಮುಂದೆ ಸಾಗುವ ಹಾಗೆ ಅನಿಸತ್ತೆ. ಗದ್ಯದ ಮಟ್ಟಿಗೆ ಪದ್ಮಾರಾಮಚಂದ್ರಶರ್ಮ, ಲಕ್ಷ್ಮೀ ಚಂದ್ರಶೇಖರ್ ಇವರು ಸಾಕಷ್ಟು ಒಳ್ಳೆಯ ಅನುವಾದ ಮಾಡಿದ್ದಾರೆ. 

11. ಅನುವಾದವೆಂದರೆ-

ಎಂದೂ ಪೂರಾ ಮುಗಿಯದೆ ಇರುವ ಕೆಲಸ. ಮುಗಿಸಿದ ಮೇಲೆ ಇನ್ನೂ ಬೇರೆ ಥರ ಮಾಡಬಹುದಾಗಿತ್ತು ಅನ್ನುವ ಭಾವನೆ ಬರದೇ ಇರುವುದಕ್ಕೆ ಸಾಧ್ಯವೇ ಇಲ್ಲ. 

ಬೇರೆಯ ಕಣ್ಣು, ಮನಸು, ಭಾಷೆ ಕಟ್ಟಿಕೊಂಡ ಲೋಕವನ್ನು ನನ್ನದು ಮಾಡಿಕೊಂಡು ನನ್ನ ಭಾಷೆಯನ್ನು ಸಾಧ್ಯವಾದಷ್ಟೂ ಅವರ ಭಾಷೆಯ ಥರ ಮಾಡಿಕೊಂಡು ಕನ್ನಡದಲ್ಲಿ ಇನ್ನೊಂದು ಲೋಕ-ಭಾವವನ್ನು ಮೂಡಿಸುವ ಕೆಲಸ. ಮತ್ತೊಂದು ಮೂಲವನ್ನು ಸೃಷ್ಟಿ ಮಾಡುವ  ಪ್ರಯತ್ನ.

ಅರ್ಥ ಪದಗಳಲ್ಲಿ ಇಲ್ಲ, ವಾಕ್ಯದಲ್ಲೂ ಇಲ್ಲ, ಭಾಷೆಯ ಹರಿವಿನ ಲಯದಲ್ಲಿ ಇರುತ್ತದೆ ಅನ್ನುವುದನ್ನು ಕಂಡುಕೊಂಡು ಆ ಲಯವನ್ನು ಕನ್ನಡದಲ್ಲಿ ಸೃಷ್ಟಿಮಾಡುವುದು ಖುಷಿಯ, ಕಷ್ಟದ, ಕೊರಗಿನ, ಅತೃಪ್ತಿಯ, ಹೆಮ್ಮೆಯ ಕೆಲಸ.

ನಾನು ಬೇರೆ ಭಾಷೆಯಲ್ಲಿ, ನನ್ನ ಮಟ್ಟಿಗೆ ಅದು ಇಂಗ್ಲಿಶ್, ಓದಿದ್ದನ್ನು ಕನ್ನಡ ಮಾತ್ರ ಓದಬಲ್ಲವರಿಗಾಗಿ ಒದಗಿಸುವ ಸಾಮಾಜಿಕ ಜವಾಬ್ದಾರಿ ಅಂದುಕೊಳ್ಳುತ್ತ ನನಗೆ ನಾನೇ ಸಮರ್ಥನೆ ಕೊಟ್ಟುಕೊಳ್ಳುವುದಕ್ಕೆ ಒದಗುವ ಕಸುಬು.  

ಚೆನ್ನಾಗಿದ್ದರೆ ಓದುಗರು ‘ಮೂಲ’ ಲೇಖಕರನ್ನು ಹೊಗಳುವ, ಚೆನ್ನಾಗಿ ಆಗದಿದ್ದರೆ ಅನುವಾದಕರನ್ನು ಬೈಯುವ ಕೆಲಸ ಮಾಡುತ್ತಾರೆ. ಅಂದರೆ, ಇರುವ ಅಹಂಕಾರ ತೊಳೆದು ಹೊಗುವ ಹಾಗೆ ಮಾಡುವ ಅನುವಾದದ ಕೆಲಸ ಅತ್ಯಂತ ದೊಡ್ಡ ಆಧ್ಯಾತ್ಮಿಕ ಸಾಧನೆ.

‍ಲೇಖಕರು Admin

September 29, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

  1. ಚನ್ನಪ್ಪ ಕಟ್ಟಿ

    ಅನುವಾದ ಪ್ರಕ್ರಿಯೆಯ ಕರಿತಾದ ಎಲ್ ಎನ್ ಅಅವರ ಸಂದರ್ಶನ ಓದಿದೆ. ಮೂಲ ಪಠ್ಯದಿಂದ target languageಗೆ ಅನುವಾದಗೊಳಿಸಿದ ನಂತರ ಅನುವಾದಕನಲ್ಲಿ ಉಳಿವ ಅಪೂರ್ಣತೆಯ ಭಾವದ ಬಗೆಗಿನ ಅವರ ಮಾತು ಮೆಚ್ಚಿಗೆಯಾಯಿತು. ಮೂಲ ಪಠ್ಯದ ಭಾಷೆಯ ಲಯ ವಿನ್ಯಾಸವನ್ನು ಅನುವಾದದಲ್ಲೂ ತರಬೇಕಾದ ಹೊಣೆಗಾರಿಕೆಯ ಕುರಿತಾದ ಅವರ ಮಾತನ್ನು ಎಲ್ಲ ಅನುವಾದಕರು ಗಂಭೀರವಾಗಿ ಗ್ರಹಿಸಿಕೊಳ್ಳಬೇಕು.

    ಪ್ರತಿಕ್ರಿಯೆ
  2. ಎಸ್. ಜಯಶ್ರೀನಿವಾಸ ರಾವ್

    “ಕವಿಗೆ ಕವಿ ಮುನಿವಂ ಅನ್ನುತ್ತಾರಲ್ಲ ಕವಿ ಅಂದರೆ ಅನುವಾದಕರೂ ಬೇರೆಯವರ ಅನುವಾದ ನೋಡಿ ಮುನಿಯದಷ್ಟು ಸಂತರಲ್ಲ. ನಾನು ಮಾಡಬೇಕಾಗಿತ್ತು ಅನ್ನುವುದರಿಂದ ಹಿಡಿದು, ನಾನಾಗಿದ್ದರೆ….ಅನ್ನುವ ಸೀರೀಸ್ ಹೇಳಿಕೆಗಳ ವರೆಗೆ ಏನೇನೋ ಮನಸಿನಲ್ಲಿ ಮೂಡುತ್ತವೆ” … ನಿಜವಿದು … ಈ ಸಂವಾದ ಓದಿ ಖುಷಿಯಾಯಿತು …

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: