ನನ್ನೊಳಗೆ ತಾನೇ ತನ್ಮಯ..

ಸುಖೇಶ ಕೆ ಬಿ

ನನ್ನಮ್ಮನ ಸ್ಕಿಜೋಫ್ರೇನಿಯ ಹೇಳಿಕೊಳ್ಳುವಂಥದ್ದಲ್ಲ.
ಮನಸ್ಸಿನ ಒಳಗಿನ ತುಮುಲಗಳು ಇನ್ನೂ ಏನೇನೋ..

ಇದರೊಂದಿಗೆ ಬೇಸರ, ಹತ್ತಿರವಿಲ್ಲದ ಸಂಬಂಧಗಳು, ಇದ್ದು ಇಲ್ಲದೇ ಹೋದ ನೆಂಟರುಗಳು, ನಾಲ್ಕರಲ್ಲೇ ಕೇಳದೇ ಹೋದ ಕಿವಿ, ದಿನವೂ ತಲೆ ನೋವು, ರಗಳೆ, ಜಗಳ ಎಂದು ತಲೆ ಹಿಡಿದು ಕೂರುವ ನನ್ನಮ್ಮಳ ಪ್ರಪಂಚಕ್ಕೆ ಒಳ ನುಗ್ಗಲು ನನಗೆ ದ್ವಾರವೇ ಇರಲಿಲ್ಲ. ಸ್ಕಿಜೋಫ್ರೆನಿಯ ಎಂಬ ಮಾನಸಿಕ ರೋಗವಿದೆ ಎಂದು ತಿಳಿದುಕೊಳ್ಳಲು ನನಗೆ ಸುಮಾರು ಎಂಟು ವರ್ಷಗಳೇ ಬೇಕಾಯಿತು.

ಆಕೆಗೆ ತಾನು ಮಾಡಿದ್ದು ಸರಿ ಎಂಬ ಭಾವನೆ ಬೇರೂರಿತ್ತು. ತಾಯಿ ಲಕ್ಷ್ಮೀ ಮಗಳಿಗೆ ಕಿವಿ ಕೇಳದ ಕಾರಣಕ್ಕಾಗಿ ಎಲ್ಲಾ ಕೆಲಸವನ್ನು ತಾನೇ ಎಳೆದುಕೊಂಡು ಮಾಡಿದ ನಿಸ್ವಾರ್ಥ ಜೀವಿಯಾಗಿದ್ದಳು. ನನ್ನಮ್ಮನ ಮದುವೆಯಾಗಿದ್ದು ಹಠ ದಿಂದ ಎಂದು ಎಲ್ಲರೂ ಹೇಳುವಾಗ ನನಗೆ ಅನಿಸಿದ್ದು ಆಕೆ ಒಂದು ಹೆಣ್ಣಾಗಿ ಮದುವೆಯಾಗಬೇಕು ಎನ್ನುವುದರಲ್ಲಿ ಏನು ತಪ್ಪಿದೆ? ಆದರೆ ತನ್ನ ಮಗಳಿಗೆ ಕಿವುಡುತನವಿದೆ ಹುಡುಗನನ್ನು ಯಾರೂ ಕೊಡರು ಎಂದೇ ಮೂವತ್ತೆರಡು ವರ್ಷಗಳು ಉರುಳಿಯೇ ಹೋದವು.

ಕೊನೆಗೆ ಹೆಸರಿಗಾಗಿಯಾದರೂ ನನ್ನಮ್ಮನ ಹಠಕ್ಕಾಗಿ ಮದುವೆ ಮಾಡಿಸಬೇಕು ಎಂದುಕೊಂಡ ನನ್ನಜ್ಜ ಮತ್ತು ಮಾವಂದಿರು ನಲವತ್ತರ ನನ್ನಪ್ಪನಿಗೆ ಮದುವೆ ಮಾಡಿಸಿದರು. ಮದುವೆಯಾದ ಮೊದಲ ವರ್ಷದಲ್ಲಿ ಸ್ಕಿಜೋಫ್ರೆನಿಯದ ಲಕ್ಷಣಗಳು ಮತ್ತು ಆವೇಶ ಭರಿತವಾದ ಭಾವನೆಗಳು ನನ್ನಮ್ಮನಲ್ಲಿ ಬರದ ಕಾರಣ ಎಲ್ಲರೂ ನೆಮ್ಮದಿಯಿಂದ ಇದ್ದರು.

ನನ್ನಪ್ಪನ ಅಕ್ಕ ಮಾಡಿದ ವರ್ತನೆಯಿಂದ ನನ್ನಮ್ಮನ ಮನಸ್ಸಿನಲ್ಲಿ ಸ್ಕಿಜೋಫ್ರೆನಿಯದ ಲಕ್ಷಣಗಳು ಮತ್ತೆ ಉದ್ಭವಿಸಲು ಪ್ರಾರಂಭಿಸಿದ್ದು. ನನ್ನಜ್ಜಿ ಅಮ್ಮನನ್ನು ದೂರವಿಡಲು ಇಚ್ಛಿಸದೇ ಜೊತೆಯಲ್ಲಿಯೇ ಇದ್ದು ಆರೈಕೆ ಮಾಡಲು ಪ್ರಾರಂಭಿಸಿದ್ದರು. ಇದರ ನಡುವೆ ಅಪ್ಪ ಅಜ್ಜ ಅಜ್ಜಿಯರನ್ನು ದೂರ ಮಾಡಲು ನೋಡಿದ ಘಟನೆಗಳು ನಡೆದವು. ಮದುವೆಯಾದ ನಾಲ್ಕು ವರ್ಷಗಳಲ್ಲಿ ನನ್ನಪ್ಪ ತೀರಿಕೊಂಡರು. ಆಗ ನನ್ನಮ್ಮನೊಂದಿಗೆ ಉಳಿದದ್ದು ಎರಡು ಮಕ್ಕಳೊಂದಿಗೆ ತನ್ನ ತಾಯಿ ಮಾತ್ರ.

ಆಗ ಅಮ್ಮನ ಮನಸ್ಸಿನಲ್ಲಿ ಯಾವ ರೀತಿಯ ವಿಚಾರಗಳು ಓಡಲು ಪ್ರಾರಂಭಿಸಿತೋ ತಿಳಿಯದು. ತನ್ನ ತಾಯಿಗೇ ಎಂಜಲು ಉಗಿಯಲು ಪ್ರಾರಂಭಿಸಿದ್ದರು, ಇದರೊಂದಿಗೆ ಹೊಡೆಯಲು ಪ್ರಾರಂಭಿಸಿದ್ದರು. ಆಗ ಏನನ್ನೂ ಅರಿಯದ ನಾನು ನನ್ನ ಅಕ್ಕ ದೊಡ್ಡದೊಂದು ಬೆಡ್ ಶೀಟನ್ನು ಅಜ್ಜಿಯ ಮುಖದ ಅಡ್ಡಕ್ಕೆ ಹಿಡಿದು ನಿಲ್ಲುತ್ತಿದ್ದೆವು. ನನ್ನಜ್ಜಿಗೆ ದಿನವೂ ಡೈರಿ ಬರೆಯುವ ಹವ್ಯಾಸ ಇದ್ದುದರಿಂದ ‘ಮಂಗಳುವಿಗೆ ಇವೊತ್ತು ಜೋರು ಆಗಿದೆ’ ಎಂದೂ ‘ಈವೊತ್ತು ಅಮಾವಾಸ್ಯೆ’ ಎಂದೂ ಬರೆದು ಮಲಗುತ್ತಿದ್ದರು. ಅತ್ತ ನನ್ನಮ್ಮ ಬಾಯಿಗೆ ಬಂದ ಹಾಗೆ ಬಯ್ಯುತ್ತ, ರಾತ್ರಿ ಇಡೀ ಕಾಲ ಕಳೆಯುತ್ತಿದ್ದರು.

ಅಂದು ಒಮ್ಮೆ ನನ್ನ ಅಮ್ಮನ ಅಣ್ಣ ಮನೆಗೆ ಬಂದಾಗ ಕಬ್ಬಿಣದ ರಾಡಿನಿಂದ ಹೊಡೆದ ಘಟನೆಯೂ ನಡೆಯಿತು. ನಾನು ಹತ್ತನೇ ತರಗತಿಯಲ್ಲಿ ಇದ್ದಾಗ ಅಮ್ಮನ ಬೊಬ್ಬೆ, ಅವಾಚ್ಯ ಪದಗಳನ್ನು ತಡೆಯಲಾರದೇ ಕೋಲಿನಿಂದ ಜೋರಾಗಿ ಬಾರಿಸಿ ಕೋಪದಿಂದ ಕೋಣೆ ಸೇರಿಕೊಂಡಿದ್ದೆ. ಅಮ್ಮನ ಈ ಭ್ರಮಾಲೋಕದಿಂದ ಹೊರಕ್ಕೆ ತರಲು ಎಲ್ಲಾ ಆಸ್ಪತ್ರೆಗಳ ಮೊರೆ ಹೋದೆವು. ಮಂಗಳೂರಿನಿಂದ ಬೆಂಗಳೂರಿನವರೆಗೆ ಒಂದು ಸುತ್ತು ಕೇಳಿಯೂ ಆಯಿತು.

ಮಣಿಪಾಲದ ಆಸ್ಪತ್ರೆಯಲ್ಲಿ ಸ್ಕಿಜೋಫ್ರೆನಿಯ ಗೆ ಮದ್ದು ಇಲ್ಲ ಎಂದೂ ತಿಳಿಯಿತು. ಹಾಗಾದರೆ ಕಿವುಡುತನ ದಿಂದ ತಲೆ ಹಾಳಾಗಿರಬಹುದೇ ಎಂಬುದು ನನ್ನಜ್ಜಿಯ ಸಂದೇಹವಾಗಿತ್ತು. ಕಿವಿ ಆಪರೇಷನ್ ಮಾಡಿಸಬೇಕು ಎಂದು ಮಂಗಳೂರಿನ ಆಸ್ಪತ್ರೆಯಲ್ಲಿ ಟೆಸ್ಟು ಸಹ ಮಾಡಿಸಿ ಆಗಿತ್ತು. ಆದರೆ ಕಿವಿಯಲ್ಲಿ ನ ತಂತುಗಳು ಒಣಗಿ ಹೋಗಿದೆ; ಅಲ್ಲದೆ ಆಪರೇಷನ್ ಮಾಡಿದರೆ ಕಣ್ಣು ಕಾಣದೇ ಹೋಗುವ ಸಾಧ್ಯತೆಗಳಿವೆ ಎಂದು ತಿಳಿದ ನನ್ನಜ್ಜಿ ಕಿವಿ ಕೇಳದಿದ್ದರೂ ಪರವಾಗಿಲ್ಲ ಕಣ್ಣು ಕಾಣದೇ ಹೋದರೆ ಏನು ಮಾಡುವುದು ಎಂಬ ಭಯದಿಂದ ಆಪರೇಷನ್ ಮಾಡಿಸದೇ ಹಾಗೆಯೇ ಉಳಿದರು.

ನನ್ನಮ್ಮ ಚಿಕ್ಕ ವಯಸ್ಸಿನಲ್ಲಿ ಅಜ್ಜಿ ಹೇಳಿದ ಪುರಾಣದ ತುಣುಕುಗಳಿಗೆ ಜೀವ ನೀಡುವಲ್ಲಿ ಯಶಸ್ವಿಯಾಗಿದ್ದರು. ಭ್ರಮಾ ಲೋಕದ ಸಾಮ್ರಾಜ್ಯಕ್ಕೆ ಆಕೆ ಒಡತಿಯಾದುದಂತೂ ಸತ್ಯ. ಆದರೆ ಆ ಸಾಮ್ರಾಜ್ಯದ ತಲ್ಲಣಗಳು ಈಕೆಯ ವಾಸ್ತವ ಜಗತ್ತಿನ ಜೀವನದ ಮೇಲೂ ಪ್ರಭಾವವನ್ನು ಬೀರಿದ್ದು ಶೋಚನೀಯ. ನನ್ನಮ್ಮ ಸ್ಕಿಜೋಫ್ರೆನಿಯ ದಿಂದ ಬಳಲುತ್ತಿದ್ದರೂ ಬುದ್ಧಿವಂತೆ ಎಲ್ಲರ ಹೆಸರುಗಳು, ಸಂಬಂಧಿಕರ ಹೆಸರುಗಳನ್ನು ತಿಳಿದು ಹತ್ತು ವರ್ಷಗಳ ನಂತರ ಕೇಳಿದರೂ ಹೇಳುವಷ್ಟು ಚತುರೆ. ಆದರೆ ಕಿವುಡುತನ ಆಕೆಯ ಸಾಮರ್ಥ್ಯವನ್ನು ವಂಚಿಸಿತು. ಆಕೆಗೆ ಇಂಗ್ಲೀಷ್ ಕಲಿಯುವ ಆಸೆ, ಗಣಿತದ ಲೆಕ್ಕಗಳನ್ನು ಬಿಡಿಸಿ ಉತ್ತರ ದೊರೆಯುವಾಗ ಆಕೆಯ ಮೊಗದಲ್ಲಿ ಅದೇನೋ ಮಂದಹಾಸ; ಏನನ್ನೋ ಗೆದ್ದಂತೆ.

ಆಕೆ ಟಿವಿ ನೋಡುವುದಿಲ್ಲ, ರೇಡಿಯೋ ಕೇಳಿಸಿಕೊಳ್ಳುವುದಿಲ್ಲ, ಪುಸ್ತಕಗಳನ್ನು ಓದಲು ಕಣ್ಣು ಮಂಕಾಗಿದೆ. ಆದರೂ ಮೌಲ್ಯಗಳನ್ನು ಹೇಳುವಾಕೆ.
ನಾನೊಮ್ಮೆ ಶಾಲೆಗೆ ಹೋಗದೇ ಮನೆಯಲ್ಲೇ ಅಡಗಿ ಕುಳಿತಿದ್ದೆ. ಅಮ್ಮನಲ್ಲಿ ಹೇಳಿದೆ, ‘ಮಾವ ಬಂದರೆ ನಾನು ಶಾಲೆಗೆ ಹೋಗಿದ್ದೇನೆ ಎಂದು ಹೇಳು’ ಎಂದು. ಆದರೆ ನನ್ನಮ್ಮ ಮಾವನೊಂದಿಗೆ ‘ಅವನು ಒಳಗೆ ಅಡಗಿಕೊಂಡಿದ್ದಾನೆ ಅಣ್ಣಯ್ಯ’ ಎಂದು ಹೇಳಿದಳು. ಅಂದು ನನಗೆ ಕೋಪ ನೆತ್ತಿಗೇರಿತ್ತು. ಆದರೆ ಕೆಲವು ವರ್ಷಗಳ ನಂತರ ತಿಳಿದ ವಿಚಾರವೇನೆಂದರೆ ನನ್ನಮ್ಮ ಸುಳ್ಳು ಹೇಳುವುದಿಲ್ಲ, ಆಕೆಗೆ ಸುಳ್ಳು ಹೇಳಲು ಬರುವುದಿಲ್ಲ ಎಂದು.

ಸ್ಕಿಜೋಫ್ರೆನಿಯ ಅಮ್ಮನನ್ನು ಕಾಡುತ್ತಿದ್ದರೂ ಆಕೆಗೆ ಮಕ್ಕಳ ಮೇಲಿನ ಮಮತೆ ಕಡಿಮೆಯೇನಾಗಿರಲಿಲ್ಲ. ಎಲ್ಲರಿಗಿಂತ ಒಂದು ಪಟ್ಟು ಹೆಚ್ಚಾಗಿಯೇ ಪ್ರೀತಿ ನೀಡಿದಳು. ಆಕೆಯ ಮಾತು ಅಚ್ಚಗನ್ನಡದ ಪದಗಳಾದುದರಿಂದ ನನ್ನಮ್ಮನಲ್ಲಿ ಮಾತನಾಡುವ ಹಲವರಿಗೆ ಅರ್ಥವಾಗುವುದು ಕಡಿಮೆ. ಆದರೆ ನಮ್ಮ ಸುತ್ತಲಿನ ತೋಟದ ಮನೆಯವರು ಅಮ್ಮನ ಶುದ್ಧಗನ್ನಡವನ್ನು ನೋಡಿ ಕಲಿತು ಅರ್ಥೈಸಿಕೊಳ್ಳುತ್ತಾರೆ.

ನನ್ನಮ್ಮನಿಗೆ ಕಿವಿ ಕೇಳದಿದ್ದರೂ ಆಕೆ ತುಟಿಯ ಚಲನವಲನಗಳನ್ನು ನೋಡಿಯೇ ಏನು ಮಾತನಾಡುತ್ತಾರೆ ಎಂಬುವುದನ್ನು ಅರಿಯುವಾಕೆ. ಕೆಲವರ ತುಟಿಯೇ ಅಲುಗಾಡದೇ ಮಾತನಾಡುವವರಿದ್ದರೆ ಅವರು ಕೈಯಲ್ಲಿ ಅಕ್ಷರಗಳನ್ನು ಬರೆದು ತೋರಿಸಬೇಕು (ಗಾಳಿಯಲ್ಲಿ ಬೋರ್ಡ್ ಇದೆ ಎಂಬ ಕಲ್ಪನೆಯನ್ನು ಮಾತನಾಡುವವರು ಮಾಡಿಕೊಂಡು ಬರೆಯಬೇಕು) ಆಗ ಮಾತ್ರ ಅರ್ಥವಾಗುತ್ತದೆ. ಆಕೆಯ ತಲೆಯಲ್ಲಿ ಪುರಾಣದ ವೀರರು, ಇತಿಹಾಸದ ಶೂರರುಗಳು ಇನ್ನೂ ಇದ್ದಾರೆ ಎಂಬ ಭ್ರಮೆಯಲ್ಲಿ ಏನೇನೋ ಕಥೆಗಳನ್ನು ಕಟ್ಟುತ್ತಾ ಹೇಳುವಾಗ ಎದುರಿಗೆ ‘ತಾನೇ ಮಹಾಜ್ಞಾನಿ ಎಂದುಕೊಂಡವನು ಗೊಳ್ಳನೆ ನಕ್ಕು ಬಿಡಬಹುದು. ಆದರೆ ಅಮ್ಮನ ತಲೆಯೊಳಗೆ ಓಡಾಡುವ ಈ ವಿಚಿತ್ರವಾದ ವ್ಯಕ್ತಿ ಮತ್ತು ವ್ಯಕ್ತಿತ್ವಗಳನ್ನು ಅರ್ಥ ಮಾಡಿಕೊಳ್ಳುವವರು ಕಡಿಮೆ.

ಎಲ್ಲರೂ ಅರ್ಥ ಮಾಡಿಸಲು ಹೊರಡುತ್ತಾರೆಯೇ ಹೊರತು ಆಕೆಯನ್ನು ಸಮಾಧಾನಿಸುವವರು ಯಾರೂ ಇಲ್ಲ. ಸಂಬಂಧಿಕರು, ನೆಂಟರು, ಸಾಂತ್ವಾನ ಹೇಳುವವರು ಯಾರೂ ಇಲ್ಲದೇ ಈ ಮನೋವ್ಯಾಧಿ ಉಲ್ಭಣವಾಗುತ್ತದೆ. ಹೀಗೆ ಮತನಾಡುವವರೇ ಇಲ್ಲದೇ ಹೋರಜಗತ್ತನ್ನು ಅರಿಯದೇ ಮಾತನಾಡುವ ನನ್ನಮ್ಮ ಮಮತೆ ಬಾಂಧವ್ಯ ವನ್ನು ಹಂಚುವವಳು. ನೆಂಟರುಗಳಿಗೆ ಅಂತಸ್ತು ಮುಖ್ಯವಾಯಿತೇ ಹೊರತು ಮಾನವಿಯತೆಯಲ್ಲ ಎಂಬುದು ನನಗಂದು ತಿಳಿಯಿತು. ಹೊರಗಿನ ಜಗತ್ತಿಗೆ ನನ್ನಮ್ಮ ಹುಚ್ಚಿಯಂತೆಯೂ, ತಲೆ ಕೆಟ್ಟವಳಂತೆಯೂ ಕಂಡರೆ ,ಆಕೆಗೆ ತನ್ನದೇ ಆದ ಜಗತ್ತಿನಲ್ಲಿ ನಿರ್ಲಿಪ್ತ ವಾಗಿ ನಡೆಯುತ್ತಿದ್ದಾಳೆ ಎನಿಸುತ್ತದೆ.

ನನ್ನಜ್ಜಿ ಅಂದರೆ ಆಕೆಯ ಅಮ್ಮ ಜಾರಿ ಬಿದ್ದು ಸೊಂಟದ ಮೂಳೆ ಮುರಿದು ಮಲಗಿದಲ್ಲೇ ಆದಾಗ ಸ್ವಂತ ಮಗುವಿನಂತೆ ನೋಡಿಕೊಳ್ಳುತ್ತಾಳೆ. ಎಂಜಲಿನಿಂದ ಮಲ ತೆಗೆಯುವ ಕೆಲಸವನ್ನೂ ಮಾಡಿದಳು. ಮತ್ತೊಂದು ಕಡೆ ಉಗಿದು ಹೊಡೆದು ಮಾಡುತ್ತಿದ್ದ ಆಕೆಯ ಭ್ರಮಾ ಲೋಕದ ಪ್ರಖರತೆ ತನ್ನ ತಾಯಿಯನ್ನು ಗುರುತಿಸಲಾರದ ಮಟ್ಟಿಗೆ ಕೊಂಡೊಯ್ದಿತ್ತು. ಹೀಗಿರುವಾಗ ಆಕೆ ವೈದ್ಯರ ಕಣ್ಣಿಗೆ ಸ್ಕಿಜೋಫ್ರೆನಿಯ ಪೀಡಿತೆ , ಜಗತ್ತಿನ ಕಣ್ಣಿಗೆ ತಲೆ ಸರಿ ಇಲ್ಲದ ಹುಚ್ಚಿ.

ಆಕೆಯ ಮನಸ್ಸಿನ ಒಳಗಿನ ಮುಗ್ಧತೆ ಮತ್ತು ಕಲ್ಪನೆಗಳನ್ನು ಅರ್ಥ ಮಾಡಿಕೊಳ್ಳಬೇಕಾದರೆ ‛ಸ್ಕಿಜೋಫ್ರೆನಿಯ’ ಎಂದರೆ ಏನು ಎಂದು ತಿಳಿದುಕೊಳ್ಳಬೇಕು. ಮನೋವಿಜ್ಞಾನಿಗಳು ಹೇಳುವಂತೆ ‘ಹೊರಗಿನ ಅಂದರೆ ವಾಸ್ತವ ಪ್ರಪಂಚದಲ್ಲಿ ಇರುವ ಒಂದು ಸಂಗತಿ ಮತ್ತು ಒಳಗಿನ ಅಂದರೆ ಕಲ್ಪಿತ (ಭ್ರಮಾ) ಲೋಕದ ಪ್ರಪಂಚಗಳ ನಡುವಿನ ಸಂಬಂಧ ಸಾಮರಸ್ಯದಿಂದ ಕೂಡಿರಬೇಕು. ಒಂದು ವೇಳೆ ಎರಡೂ ಪ್ರಪಂಚಗಳು ಬೇರೆ ಬೇರೆಯಾಗಿ ಪ್ರತಿಫಲನ ನೀಡಿದರೆ, ಯಾವುದು ಸತ್ಯ ಎಂಬುದನ್ನು ಮನಸ್ಸು ಅರ್ಥೈಸಿಕೊಳ್ಳಲು ಅಶಕ್ತವಾಗುತ್ತದೆ. ಈ ಗೊಂದಲಗಳು ಮನುಷ್ಯನ ವರ್ತನೆಯಲ್ಲಿ ವ್ಯತ್ಯಾಸವನ್ನು ಉಂಟು ಮಾಡಬಲ್ಲದು’.

ಸ್ಕಿಜೋ ಎಂದರೆ ಛಿದ್ರವಾದ ಅಥವಾ ಒಡೆದ; ಫ್ರೆನಿಯ ಎಂದರೆ ಮನಸ್ಸು. ಈ ಮನೋರೋಗ ಗುಣಪಡಿಸಲು ಸಾಧ್ಯವೇ ಎಂಬ ಪ್ರಶ್ನೆ ಇಡೀ ಪ್ರಪಂಚವನ್ನೇ ಕಾಡಿತ್ತು. ಆದರೆ 2020 ರಲ್ಲಿ ಇದಕ್ಕೆ ಪ್ರೀತಿ ಕೊಡುವುದು ಒಂದೇ ಮದ್ದು ಎಂದು ವೈದ್ಯರು ಕಂಡುಕೊಂಡಿದ್ದಾರೆ.
ಏನೇ ಆಗಲಿ ಆಕೆಯದ್ದು ಮೃದುವಾದ ಸ್ವಭಾವ, ಮಂತ್ರಮುಗ್ಧರನ್ನಾಗಿಸುವ ತಾಳ್ಮೆ.

ನನ್ನಮ್ಮನ ಗೊಂದಲದ ಲೋಕವನ್ನರಿಯಬೇಕಾದರೆ ವೈದೇಹಿಯವರ ಅಕ್ಕು ಸಿನಿಮಾ/ ಪುಸ್ತಕ ಉತ್ತಮ ಉದಾಹರಣೆ. ಅಕ್ಕುವಿನ ಭಾವನೆಗಳು ಮತ್ತು ಅಂತರಂಗದ ಸತ್ಯ ಲೋಕವೇ ಅಚ್ಚರಿ ಪಡುವಂಥದ್ದು. ಹಾಗೆಯೇ ನನ್ನಮ್ಮನೂ. ಆಕೆಯ ಜೀವನ ಆಕೆಯ ಕೈ ತಪ್ಪಿ ಹೋದೂದಂತೂ ಕಹಿ ಸತ್ಯ. ನನ್ನಮ್ಮನ ಕಣ್ಣೀರು ಸ್ಕಿಜೋಫ್ರೆನಿಯದ ಘೋರತೆಯೊಳಗೆ ಅಡಗಿ ಹೋಗಿದೆ.

‍ಲೇಖಕರು Avadhi

April 25, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: