ನನ್ನೆದೆಯರಮನೆಯಿಂದ ಅಕ್ಕಾ, ನೀ ಹೊರಟುಬಿಟ್ಟೆ
ರೇಖಾ ಗೌಡ
ನಿನ್ನನು ನನ್ನೆದೆಯ ಶಿಖರದಲ್ಲಿರಿಸಿ
ನಿನ್ನಾಣತಿಯ ಶಿರದಿ ಧರಿಸಿ
ಕಣ್ಸನ್ನೆಗೆ ಕರಮುಂದಿರಿಸಿ
ಕಾಲ್ಗೆಜ್ಜೆಯ ಸದ್ದಿಗೆ, ಕರುವಿನಂತೋಡಿ
ಬಂದು, ಹಿಂದು ಮುಂದು ಸುಳಿದಾಡಿ
ಆಲೋಚನೆಗೂ ಆಸ್ಪದವೀಯದೆ
ತಿಮಿಂಗಲ ಗಾತ್ರದೊಲವ
ಒಳಗೂ ಹೊರಗೂ
ತುಂಬಿ ತುಳುಕಿಸಿದರೂ
ನನ್ನ ಮನವ
ಅದರಾಳವ
ನೀ
ಅರಿಯಲೇ ಇಲ್ಲ
ನಿನ್ನ ಮನವ ತೆರೆಯಲಿಲ್ಲ.
ಎಲ್ಲವನೂ
ತರ್ಕದ ತಕ್ಕಡಿಯಲಿ ತೂಗಿ
ಅಂತಃಕರಣವ ಬದಿಗಿರಿಸಿ
ಗೀಜಗವೂ
ಗಾಬರಿಯಾಗುವಂತೆ
ಜತನದಿ ಜಾಣತನದಿ
ಸೂಕ್ಷ, ಸಂಕೀರ್ಣದಿ
ನೀ ನೇಯ್ದು ಬೀಸಿದ್ದು
ಮೀನ ಕೊಳದಲ್ಲೆಲ್ಲಾ
ಅಡಗಿಸಿಟ್ಟ ಜಾಲದಂತೆಯೇ.
ಜಗದೆಲ್ಲಾ ವಿಸ್ಮಯಗಳನೂ
ಮೀರಿದ
ಸಖೇದಾಶ್ಚರ್ಯಕ್ಕೊಳಮಾಡಿ
ನನ್ನೆದೆಯರಮನೆಯಿಂದ
ಅಕ್ಕಾ……
ನೀ ಹೊರಟುಬಿಟ್ಟೆ….





0 Comments