ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

'ನನ್ನೂರಿನ ಲಂಗ ದಾವಣಿಯ ನಾಚುವ ಹುಡುಗಿಯರ ಮಂಪರು ಚಿತ್ರ..'

ರಿಯಾಲಿಟಿ

ಹನುಮಂತ ಹಾಲಿಗೇರಿ

ಸಾಧಿಸುವ ಹುಚ್ಚು ನನ್ನನ್ನು ಊರು ಬಿಡಿಸಿತು.
ಆದರೆ ಈಗ ಎಲ್ಲರಂತೆ ಜೋತ ಬಿದ್ದಿದ್ದೇನೆ ಮೂರು ಗೇಣಿನ ಹೊಟ್ಟೆಯ ಭರ್ತಿ ಬದುಕಿಗೆ
ದಿನವೂ ಹೆಣಗುತ್ತಿದ್ದೇನೆ, ನಾನು ಆರಾಮೆಂದು ಜಗತ್ತಿಗೆ ಸಾದರ ಪಡಿಸಲು
ಆದರೆ ಯಾಕೆ ಬೇಯಿಸುತ್ತಿವೆ ಒಳಗೊಳಗೆ ನನ್ನೂರಿನ ಬಿಡಾಡಿ ಚಿತ್ರಗಳು
 
ದಿಕ್ಕೆಟ್ಟು ಕಾರವಾರದ ಕಡಲ ಕಿನಾರೆಗೆ ಓಡುತ್ತೇನೆ
ಅಲ್ಲಿ ಸ್ಲಿವ್ಲೆಸ್ ಅಮ್ಮಂದಿರ ಜೊತೆಗೆ ಹೆಜ್ಜೆಯನಿಕ್ಕುವ ಮಗುವಿನ ಕೈಯಲ್ಲಿ ಬಣ್ಣದ ಐಸ್ಕ್ರೀಮ್
ಆದರೆ, ನನಗೋ ನಮ್ಮೂರ ಕಾಡಬೀದಿಯಲ್ಲಿ ಇದೆ ಹೊತ್ತಲ್ಲಿ ತಲೆಮೇಲೆ ಕಟ್ಟಿಗೆ ಹೊರೆ,
ಕೈಯಲ್ಲಿ ಆಡುಮರಿ ಹಿಡಿದ ಅವ್ವಳ ಚಿತ್ರ ಪ್ರತ್ಯಕ್ಷವಾಗುತ್ತದೆ.
ಮನೆಗೋಡಿ ಬಂದು ಟವಿ ಹಚ್ಚಿದರೆ
ಚಮಕ್ ಚಮಕ್ ಕುಣಿವ ಕರೀನಾ ದಿಪೀಕೆಯರು
ಕೃತಕ ಬಣ್ಣ ಮೆತ್ತಿಕೊಂಡವರದೆ ರಿಯಾಲಿಟಿ ಶೋಗಳು
ನನಗೋ ನನ್ನೂರಿನ ಲಂಗ ದಾವಣಿಯ ನಾಚುವ ಹುಡುಗಿಯರ ಮಂಪರು ಚಿತ್ರ

ಸಂಜೆಯ ಬಿಡುವಿನಲ್ಲಿ ಪತ್ರಿಕೆ ತಿರುವಿದರೆ ಅಲ್ಲಿ ನುಣ್ಣಗೆ
ಶೇವ್ ಮಾಡಿಕೊಂಡು ಕೋಟು ಪ್ಯಾಂಟಿನವರದೆ ಪೋಕಸ್,
ಟಾರ್ ಬೀದಿಯಲ್ಲಿನ ಕಾಂಕ್ರೀಟ್ ಬಂಗ್ಲೋಗಳೊಳಗೆ ಮಂದಗೆ ಉರಿವ ದೀಪ
ನನಗೋ ದಂದಕ್ಕಿಯೊಳಗೆ ಹೆಂಡಿ ಕಸ ತೆಗೆಯುವ ನನ್ನಪ್ಪನ ಚಿತ್ರದ ಕಿರಿಕಿರಿ
ತಲೆಕೆಟ್ಟು ಇಂಟರ್ನೆಟ್ ಓಪೆನ್ ಮಾಡಿದರೆ ಅಲ್ಲಿನ
ಚಾಟ್ ಕಿಂಡಿಯಲ್ಲಿ ಡೇಟಿಂಗ್ಗೆ ಆಹ್ವಾನಿಸುವ ಜಾಹಿರಾತುಗಳ ಜಾತ್ರೆ
ಫೆಸ್ಬುಕ್ ಟ್ವಿಟರ್ನಲ್ಲೆಲ್ಲ ಸಿಟಿಲೈಪ್ನ ಜಾಲಿ ಮೆರವಣಿಗೆ
ನನ್ನ ಕಣ್ಣೋಳಗೋ ಮನೆಯ ಜಂತಿಗೆ ಜೋತುಬಿದ್ದಿರುವ
ಅಜ್ಜ ಅಜ್ಜಿಯರ ಕಪ್ಪುಬಿಳುಪಿನ ಚಿತ್ರದ ಧೂಳು
ಇಲ್ಲೆಲ್ಲ ಯಾಕೆ ಕಾಣಿಸುತ್ತಿಲ್ಲ ನನ್ನೂರ ಹಸಿರು ಹಸಿ ಚಿತ್ರಗಳು
ಕುರಿಮೊಲೆಗೆ ನಸಿ ಅರಬಿ ಸುತ್ತುವ ಅಣ್ಣ,
ಮಂಡಂಗಿಯ ಕಿಂಡಿಯೊಳಗಿನ ಅಪ್ಪನ ಬೆನ್ನು,
ಕಪ್ಪು ಅವ್ವಳ ಬೆನ್ನುಹುರಿಯಲ್ಲಿ ಕುಡುಗೋಲು
ರೊಟ್ಟಿ ನುಂಗುತ್ತಾ ಕೂಲಿಗೆ ಓಡುವ ಅಕ್ಕ,
ಚಿತ್ತಾರದುಡಿಯಲ್ಲಿ ತಪ್ಪಲದ ಹೂ ಬಿಡಿಸುವ ಹುಡುಗಿ
ಊರ ಬೀದಿಗಳಲ್ಲಿನ ಕಂಬಾರ, ಕುಂಬಾರ ಬಡಿಗೇರ ಜೋಗೇರರ ಬದುಕು
ಇದ್ಯಾವುದು ರಿಯಾಲಿಟಿ ಅಲ್ಲವೇ, ಕನಸಿನ ಚಿತ್ರಗಳೆ
ಹತ್ತರೆಲ್ಲೆಂಟು ಮಂದಿ ನನ್ನೂರಿನಂಥಹದೆ ಬೀದಿಗಳ ಚಿತ್ರಗಳಾಗಿದ್ದಾರೆ.
ಈ ಚಿತ್ರಗಳೇಕೆ ಕ್ಯಾಮರಾದ ಕಣ್ಣಿಗೆ ಸಿಗುತ್ತಿಲ್ಲ
ಕೃತಕ ಬಣ್ಣ ಬಳಿದುಕೊಳ್ಳುವವರ ಬದುಕನ್ನೆ
ರಿಯಾಲಿಟಿ ಶೋ ಎಂದೇಕೆ ತೋರಿಸಲಾಗುತ್ತಿದೆ
ಉತ್ತರ ಹುಡುಕಿಡುಕಿ ಹೈರಾಣಾಗಿದ್ದೇನೆ. ನಿಮಗೇನಾದರೂ ಗೊತ್ತಾ?

‍ಲೇಖಕರು avadhi

13 February, 2014

6 Comments

  1. nagraj.harapanahalli

    ಪದ್ಯದ ವಸ್ತು ಚೆಂದ ಐತಿ ದೋಸ್ತಾ…..ಆದರೆ ವಾಚ್ಯ ಆಯಿತಪಾ….ನೀನು ಗದ್ಯವನ್ನೇ ಬರಿ.ನಿನ್ನ ಒಲುಮೆ ಕತೆಗಳಿಗೆ ಇರಲಿ.ಕವಿತೆಯನ್ನು ಒಲಿಸಿಕೊಳ್ಳಾಕೆ ತಾಳ್ಮೆ ಬೇಕು. ಅದು ನಿನಗಿನ್ನು ಒಲಿದಿಲ್ಲ.

    • Vedantham Shrinivasa

      Mr. Nagraj, Please help the poet improve by giving him constructive feedback. Please don’t discourage him by saying you will never be a good poet. How can you say that this young poet will not produce great works of poetry in the future? He might even win Jnanapeetha award, who knows! Let him practice hard and improve.

  2. ಟಿ.ಎಸ್.ಗೊರವರ

    cholo ide

  3. MANJUNATH.P

    NICE….

  4. kaligananath gudadur

    ರೊಟ್ಟಿ ನುಂಗುತ್ತಾ ಕೂಲಿಗೆ ಓಡುವ ಅಕ್ಕ…
    Heege iddaru halageri, nanna akka, avva. camera kannige sikkilla emba besarada madhye avella ninna kavanadalli adeshtu chalo bandavalla. ashta saaku bidu.
    -Kaligananath Gudadur

  5. gururaj katriguppe

    good poem.
    subject really impressive,

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading