ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

’ನನ್ನನ್ನಷ್ಟೆ ಕೇಳುತ್ತಿದ್ದ ಕಿವಿಗಳಿಗೆ ಈಗ ಅದೆಷ್ಟು ಆಯ್ಕೆಗಳು..’ – ಕುಸುಮಬಾಲೆ ಕವನ

(ಅ)ಸಾಮಾನ್ಯರು

ಕುಸುಮಬಾಲೆ

ಈ ರೇಸಿನಲಿ ನಾನು ಓಡಲೇಬೇಕು.
ಕಾಲಿಗೆ ಸಿಕ್ಕವರ ಲೆಕ್ಕಿಸಬೇಕಿಲ್ಲ.
ಒಟ್ಟಿನಲಿ ನಾನು ಗೆಲ್ಲಲೇಬೇಕು.
ಅಸಾಮಾನ್ಯತೆಯ ಬಯಕೆ
ನಾ ಸತ್ತರೂ ನನ್ನ ಹೆಸರು
ಜೀವಿಸಿರಬೇಕೆಂಬ ಹಪಹಪಿಕೆ.
ಎದೆಯ ಮೇಲೆ
ಹೆಸರಿನ ಬೋರ್ಡು
ತಗುಲಿಸಿ ಓಡುತ್ತಿದ್ದಾರೆ.
ಶತಮಾನಗಳ ಇತಿಹಾಸ
ಈ ಓಟಕ್ಕೆ.
ದಿನದಿಂದ ದಿನಕ್ಕೆ,
ವರ್ಷದಿಂದ ವರ್ಷಕ್ಕೆ,
ಸ್ಪರ್ಧಿಗಳೂ ಹೆಚ್ಚುತ್ತಿದ್ದಾರೆ.
ಎಲ್ಲ ಹಾಳು ಟಿವಿ ಚಾನಲ್ಗಳಿಂದ.
ನನ್ನನ್ನಷ್ಟೆ ಕೇಳುತ್ತಿದ್ದ ಕಿವಿಗಳಿಗೆ
ಈಗ ಅದೆಷ್ಟು ಆಯ್ಕೆಗಳು!
ನನ್ನನ್ನಷ್ಟೆ ನೋಡುತ್ತಿದ್ದ ಕಣ್ಣುಗಳಿಗೀಗ
ಅದೆಷ್ಟು ಬಗೆಯ ಬಣ್ಣದ ಚಿತ್ರಗಳು!
ಓದಿಗೂ ಈಗ ಅದೆಷ್ಟೋ ಕೋಟಿ ಪುಟಗಳು.
ಅದೇನೋ ಬ್ಲಾಗಂತೆ.
ಸ್ಪರ್ಧೆಗೆ ಈಗೀಗ
ವಯಸ್ಸಿನ,
ಅನುಭವದ,
ಲೆಕ್ಕವೂ ಇಲ್ಲ.
ಇಲ್ಲಿ ಯಾವುದೂ ಸರಿಯಿಲ್ಲ.
ಹಳಬರ ಆರೋಪ, ಆಕ್ಷೇಪ.
ಈ ಕೂಗೂ ಹಳೆಯದೆ.
ಪ್ರತಿ ಹೊಸಬರಿಗೆ!
ಅಸಾಮಾನ್ಯತೆಯ ರೇಸಿಗೆ ಬಿದ್ದವರ
ಬೆವರು ಹರಿಯುತ್ತಲೇ ಇದೆ.
ಎಲ್ಲ ರಂಗಗಳಲ್ಲೂ ನೂಕುನುಗ್ಗಲು.
ಹೇಗಾದರೂ
ಎಲ್ಲರನು ಹಿಂದಿಕ್ಕಿ,
ಮುಂದೆ ಸಾಗಲೇಬೇಕು.
ಗೆಲ್ಲಲೇಬೇಕು,
ಅಸಾಮಾನ್ಯತೆಯ
ಈ ಓಟದಲ್ಲಿ.
ರೇಸಿಗೆ ಬಿದ್ದವನು
ಮಹತ್ವಾಕಾಂಕ್ಷಿ.
ಇಲ್ಲಿ ಎಲ್ಲರೂ
ಮಹತ್ವಾಕಾಂಕ್ಷಿಗಳೇ!
ಒಮ್ಮೆ ಅವನು,
ಒಮ್ಮೆ ಇವನು,
ಒಮ್ಮೆ ಅವಳು,
ಇನ್ನೊಮ್ಮೆ ಇವಳು.
ಇಷ್ಟಿಷ್ಟೇ ಅಂತರದಲಿ
ಓಡುತ್ತಿದ್ದಾರೆ
ಅಸಾಮಾನ್ಯತೆಯೆಡೆಗೆ.
ಕೆಲವರಿಗಾದರೂ ಗೊತ್ತಿದೆ
ಗೆಲ್ಲುವುದು ಸುಲಭವಲ್ಲ
ಓಟ ನಿಲ್ಲುವುದ(ದಿ)ಲ್ಲ.
ಓಟಾದಾಚೆಯ ತೋಟದಲ್ಲಿ
ಬಡ ರೈತ ಗಿಡ ನೆಡುತ್ತಿದ್ದಾನೆ.
ಪುಟ್ಟ ಹುಡುಗ
ಪೇಪರ್ ಹಂಚುತ್ತಿದ್ದಾನೆ.
ಬಸ್ ಮಿಸ್ಸಾಗಿ
ಆಟೋ ಏರಿದ ಟೈಪಿಸ್ಟ್
ಈ ದುಡ್ಡಿಗೆ ಒಂದು ಕೆಜಿ
ಈರುಳ್ಳಿ ಬರುತ್ತಿತ್ತು
ಗೊಣಗುತ್ತಿದ್ದಾಳೆ.
ಬೊರ್ ಎಂದು ಸದ್ದು ಮಾಡೋ
ಪಂಪ್ ಸ್ಟವ್ ಮುಂದೆ ಕೂತ
ಕಾರ್ಮಿಕನ ಹೆಂಡತಿ
ಈ ಸಲದ ಬೋನಸ್ಗೆ
ಸದ್ದಿಲ್ಲದ ಸ್ಟವ್ ಕೊಟ್ಟಂತೆ
ಕನಸು ಕಾಣುತಿದ್ದಾಳೆ.
30 ವರ್ಷದಿಂದಲೂ
ಅದೇ ಹೋಟೆಲಿನ ಮುಂದೆ ಕೂತು
ಬೀಡಾ ಕಟ್ಟುತ್ತಿದ್ದರೂ
ಆತನಿಗದು
ಏಕತಾನತೆ ಅನಿಸುತ್ತಿಲ್ಲ.
ಸಾಮಾನ್ಯರಿವರು.
ಸಾವಿರ ಸಂಗತಿಗಳಿಂದ
ಓಡುವ ಕಾಲಿಗೆ
ಬಲವಾ(ಬಲಿಯಾ)ದವರು.
ಇತಿಹಾಸದ ಪುಟಗಳಲಿ
ಇಲ್ಲ ಇವರಿಗೆ ಹೆಸರು.
ಇವರು ಕೇವಲ ವೀಕ್ಷಕರು.
ಓಟಗಾರರ ಗೆಲುವಿಗೆ
ಚಪ್ಪಾಳೆಯಾದವರು,
ಜೈಕಾರಕ್ಕೆ
ಧನಿಗೂಡಿಸಿದವರು.
ಇವರ ಸಾಮಾನ್ಯ ಬದುಕಿಗೂ
ಶತಮಾನಗಳ
ಅಸಾಮಾನ್ಯ ಇತಿಹಾಸ!
 

‍ಲೇಖಕರು avadhi

15 August, 2013

1 Comment

  1. sharath hk

    nice

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading