ನನಗೆ ಹುಕಿ ಬಂದಿದೆ ಪ್ರಶ್ನೆ ಕೇಳಿಯೇ ಬಿಡೋಣವೆಂದು..

 neeta s rao

ನೀತಾ ಎಸ್ ರಾವ್ 

ಓಡಿ ಹೋದ ಮಲ್ಯ,  ನಿರಾಳವಾದ ಬ್ಯಾಂಕುಗಳು

ಮಲ್ಯ ಅಂತೂ ತಪ್ಪಿಸಿಕೊಂಡು ಓಡಿದರು, ಈಗ ಹೊರದೇಶಗಳ ಹೆಣ್ಣುಗಳ ಜೊತೆ ಜಾಲಿ ಟ್ರಿಪ್ಪಿನಲ್ಲಿದ್ದರೂ ಆಶ್ಚರ್ಯವಿಲ್ಲ. ಹಾಗೇ ಅವರು ಹೋಗುವ ತನಕ ಕಾದಿದ್ದು ಆಮೇಲೆ “ಊರು ಕೊಳ್ಳೆ ಹೊಡೆದ ಮೇಲೆ ದಡ್ಡಿ ಬಾಗಿಲು ಹಾಕಲು ಪ್ರಯತ್ನಿಸಿದ ನಮ್ಮ ದೇಶದ so called ಬೃಹತ್ ರಾಷ್ಟ್ರೀಕೃತ ಬ್ಯಾಂಕಿನ ನಡೆಯೂ ಯಾವ ರೀತಿಯಲ್ಲೂ ಆಶ್ಚರ್ಯ ತಂದಿಲ್ಲ. ಅದರ ಜೊತೆಜೊತೆಗೆ ಮೀನ ಮೇಷ ಎಣಿಸುತ್ತ ಎರಡು ಮೂರು ವರ್ಷಗಳ ನಂತರ ಮಲ್ಯರನ್ನು “ಉದ್ದೇಶಪೂರಿತ ಸುಸ್ತಿದಾರ” ಎಂದು ಘೋಷಿಸಿದ ಇತರ ಬ್ಯಾಂಕುಗಳ ವರ್ತನೆಯೂ, ಬ್ಯಾಂಕುಗಳ ಬ್ಯಾಂಕರ್ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ನಿರ್ಲಕ್ಶ್ಯ ನೀತಿಯೂ ಯಾವುದೂ ಆಶ್ಚರ್ಯ ತಂದಿಲ್ಲ.

mallya2 by ponnappaಯಾಕೆಂದರೆ ಇದು ಹೀಗೆಯೇ ಆಗುತ್ತದೆ ಎನ್ನುವುದು ಹಲವರಿಗಾದರೂ ಗೊತ್ತೇ ಇತ್ತು. ಬ್ಯಾಂಕಿನವರಿಗಂತೂ ಇವನು ಯಾವತ್ತು ದೇಶ ಬಿಟ್ಟು ತೊಲಗುತ್ತಾನಪ್ಪಾ ಎಂದು ಕಾಯುವುದೇ ಆಗಿತ್ತು ಅನಿಸುತ್ತದೆ. ಮಲ್ಯ ಸಿಕ್ಕಿ ಬಿದ್ದಿದ್ದರೆ ಇವರ ಹೂರಣವೆಲ್ಲ ಹೊರಗೆ ಬರುತ್ತಿತ್ತು, ಒಂದಿಬ್ಬರು ಬ್ಯಾಂಕ್ ಅಧಿಕಾರಿಗಳು ನೇಣಿಗೆ ಶರಣಾಗುತ್ತಿದ್ದರು. ಧೈರ್ಯ ಮಾಡಿ ಉಳಿದವರ ಮೇಲೆ ಕೇಸುಗಳಾಗುತ್ತಿದ್ದವು. ಈಗ ಮಲ್ಯ ಅದನೆಲ್ಲ ತಪ್ಪಿಸಿದ್ದಾರೆನ್ನಲಾಗದಿದ್ದರೂ, “ಬೀಸುವ ದೊಣ್ಣೆ ತಪ್ಪಿದರೆ ಸಾವಿರ ವರ್ಷ ಆಯುಷ್ಯ” ಎಂದು ಬ್ಯಾಂಕಿನವರು ನಿಟ್ಟುಸಿರು ಬಿಟ್ಟು ನಿರಾಳವಾಗಿದ್ದಾರೆ. ಆ ಕಡೆ ಮಲ್ಯ ಮಜಾ ಮಾಡುತ್ತಿದ್ದಾರೆ. ಇಪ್ಪತ್ತು-ಇಪ್ಪತೈದು ಸಾವಿರದ ಸಣ್ಣ ಸಾಲಗಳಿಗೆ ಅಟ್ಟಾಡಿಸಿಕೊಂಡು ಬಂದು ಉಗಿಯುವ ಆಫೀಸರ್ ಗಳ ನೆರಳು ಕಂಡರೇ ಹೆದರಿಕೊಂಡು ರೈತರು ಸಾಯುತ್ತಿದ್ದಾರೆ.

ಇಷ್ಟಕ್ಕೂ ಇವರೊಬ್ಬರೇನಾ ಈ ರೀತಿ ಮೋಸ ಮಾಡಿ ಸಾಲ ತೆಗೆದುಕೊಂಡು ಓಡಿ ಹೋದವರು. ನಮ್ಮ ಬ್ಯಾಂಕಿಂಗ್ ಇತಿಹಾಸದಲ್ಲಿ ನೂರಾರು, ಸಾವಿರಾರು ಉದಾಹರಣೆಗಳು ಸಿಗುತ್ತವೆ ಈ ರೀತಿ ಮೋಸ ಮಾಡಿ ಆರಾಮವಾಗಿ ಏನೂ ಆಗಿಯೇ ಇಲ್ಲ ಎನ್ನುವಂತೆ ಅಡ್ಡಾಡುವವರ ಬಗ್ಗೆ. ಒಂದಿಷ್ಟು ದಿನ ಜನರ ತಲೆಯನ್ನು ಕೆಡಿಸುವ ಇಂಥ ವಿಷಯಗಳು ಆಮೇಲೆ ಮರೆತು ಹೋಗಿಬಿಡುತ್ತವೆ. ಟಿ.ವಿ ಚ್ಯಾನಲ್ಲುಗಳಿಗೆ ಮತ್ತೆ ಹೊಸ ಹಗರಣಗಳು ಸಿಗುತ್ತವೆ, ಪತ್ರಿಕೆಗಳಿಗೆ ಹೊಸ ಹೊಸ ಬಿಸಿ ಸುದ್ದಿಗಳು! ಮತ್ತೆ ಟೈಮಾದರೂ ಯಾರಿಗಿದೆ ಸ್ವಾಮಿ, ಇದನ್ನೆಲ್ಲ ವಿಚಾರ ಮಾಡಿ ದೇಶದ ದುಸ್ಥಿತಿಯ ಬಗ್ಗೆ ಅಳಲಿಕ್ಕೆ! ರಾಜಕಾರಣಿಗಳಿಗೆ ಅವರ ಜಗಳಗಳು, ಹಗರಣಗಳೇ ಹೊದ್ದು ಮಲಗುವಷ್ಟಿವೆ. ಎಲ್ಲದಕ್ಕೂ ಸುಪ್ರೀಮ್ ಕೋರ್ಟಾದರೂ ಏನು ಮಾಡೀತು ಪಾಪ! ಇನ್ನು ರಿಸರ್ವ್ ಬ್ಯಾಂಕಿನವರಿಗೆ ಬೇರೆ ಕೆಲಸವಿಲ್ಲವೇ? ಕೋಟಿ ಎಂದರೆ ಕಣ್ಣು ಮೂಗು  ಅರಳಿಸುತ್ತಾ ಆಶ್ಚರ್ಯ ಪಡುವ ನಮ್ಮಂಥ ಜನಸಾಮಾನ್ಯರೇ ಎಲ್ಲದಕ್ಕೂ ಒಗ್ಗಿಕೊಂಡುಬಿಟ್ಟಿದ್ದೇವೆ. ಮೇಲಾಗಿ ಇದೇನೂ ಸಿಟ್ಟು ಕೆರಳಿಸುವಂಥ ಇಮೋಶನಲ್, ಸೆನ್ಸೇಶನಲ್ ವಿಷಯ ಅಲ್ಲ ನೋಡಿ! ಹಾಗಾಗಿ ನಾವೆಲ್ಲ ನಮ್ಮ ನಮ್ಮ  ಕೆಲಸಗಳಲ್ಲಿ, ಸಮಾರಂಭಗಳಲ್ಲಿ ಬ್ಯೂಸಿಯಾಗಿದ್ದೇವೆ, ಉಳಿದವರೂ ಹಾಗೇ!

ಆದರೂ ಉತ್ತರಿಸದ ನೂರಾರು ಪ್ರಶ್ನೆಗಳಿವೆಯಲ್ಲ, ಅದರಲ್ಲಿ ಒಂದಿಷ್ಟನ್ನಾದರೂ ಕೇಳಿಯೇ ಬಿಡೋಣವೆಂದು ನನಗೆ ಹುಕಿ ಬಂದಿದೆ.

 

ಭಾರತೀಯ ರಿಸರ್ವ್ ಬ್ಯಾಂಕಿಗೆ ಕೆಲವು ಪ್ರಶ್ನೆಗಳು

ಭಾರತೀಯ ರಿಸರ್ವ್ ಬ್ಯಾಂಕಿಗೆ ಪ್ರತಿನಿಧಿಯಾದ ಗವರ್ನರ್ ರಘುರಾಮ ರಾಜನ್ ಅವರೇ, ರಿಸರ್ವ್ ಬ್ಯಾಂಕು, ಎಲ್ಲ ಬ್ಯಾಂಕುಗಳು ಪಾಲಿಸಲೇ ಬೇಕಾದ ಕೆಲವು ಮುಖ್ಯ ನಿಯಮಗಳನ್ನು ಮಾಡಿದೆ. ಅದರಲ್ಲಿ ಪ್ರಮುಖವಾದವುಗಳೆಂದರೆ ಸಾಲಗಳನ್ನು ಕೊಡುವಾಗ ಅನುಸರಿಸಬೇಕಾದ ನಿಯಮಗಳು. ಸಾಲದ ಮೊತ್ತಕ್ಕಿಂತ ಕನಿಷ್ಟ ಪಕ್ಷ ೨೫% ರಿಂದ ೫೦% ಹೆಚ್ಚಿಗೆ ಮಾರ್ಜಿನ್ ಇಟ್ಟುಕೊಂಡು ಸಾಲ ಕೊಡುವುದು ನಿಯಮ, ಅದರಲ್ಲೂ ವಿಮಾನಯಾನದಂಥ ರಿಸ್ಕಿ ಉದ್ದಿಮೆಗೆ ಇನ್ನೂ ಹೆಚ್ಚಿನ ಮಾರ್ಜಿನ್ ಬೇಕಾಗುತ್ತದೆ . ಅಂಥದ್ದರಲ್ಲಿ ತಾವು ಕೊಟ್ಟ ಸುಮಾರು ೭,೦೦೦ ಕೋಟಿ ರೂಪಾಯಿಗಳ ಸಾಲಕ್ಕೆ ಬ್ಯಾಂಕುಗಳು ಇತರ ಸಣ್ಣ ಪುಟ್ಟ ಆಸ್ತಿಗಳೊಂದಿಗೆ, ಕಿಂಗ್ ಫಿಷರ್ ಲೋಗೊವನ್ನು ಆಸ್ತಿಯೆಂದು ಪರಿಗಣಿಸಿ ಅದರ ಆಧಾರದ ಮೇಲೆ ಸಾಲವನ್ನು ಕೊಟ್ಟಿವೆ. ಈಗ ಆ ಲೋಗೊವನ್ನು ಇವರು ಮಾರಲು ಹೋದರೆ ಕೊಳ್ಳುವ ಮೂರ್ಖರು ಯಾರಾದರೂ ಸಿಗುತ್ತಾರಾ? ಅಥವಾ ಎಲ್ಲಾ ಸಾಲ ಕೊಟ್ಟ ಬ್ಯಾಂಕುಗಳು ತಾವೇ ಜಂಟಿಯಾಗಿ ಖರೀದಿಸಿ ಹೊಸ ಬಿಜನೆಸ್ ಏನಾದರು ಶುರು ಮಾಡುತ್ತಾರಾ?

mallya1 by ponnappaನೀವು ಭಾರತೀಯ ಸ್ಟೇಟ್ ಬ್ಯಾಂಕು, ಮತ್ತಿತರ ದೊಡ್ಡ ಬ್ಯಾಂಕುಗಳನ್ನು “Too big to fail Banks” ಅಂತ ಘೋಷಣೆ ಮಾಡಿದ್ದೀರಿ. ಎಷ್ಟೇ ದೊಡ್ಡ ಬ್ಯಾಂಕುಗಳಾದರೂ ಹೋದ ಸಾಲ ನಷ್ಟವೇ ಅಲ್ಲವೇ? ಸ್ಟೇಟ್ ಬ್ಯಾಂಕ್, ಅಥವಾ ಇನ್ನಿತರ ದೊಡ್ಡ ಬ್ಯಾಂಕುಗಳಿಗೆ ರೂ. ೭,೦೦೦ ಕೋಟಿ ಜೊತೆಗೆ ಬಡ್ಡಿ ಸೇರಿ ರೂ ೯,೦೦೦ ಕೋಟಿ   ಎಂದರೆ ಲೆಕ್ಕಕ್ಕಿಲ್ಲದಿರಬಹುದು. ಆದರೆ ಇದೇ ಬ್ಯಾಂಕುಗಳು ಸರಕಾರ ನಿರ್ದೇಶಿತ ಸಾಲಗಳನ್ನು (Directed Loans) ನೀಡಲು ಎಷ್ಟು ನಖರಾ ಮಾಡುತ್ತವೆ, ಆಗ ಇದೇ ಬ್ಯಾಂಕುಗಳು “Too big to fail” ಆಗಿರುವುದಿಲ್ಲವೇ? ಸುಮಾರು ಎರೆಡು-ಮೂರು ವರ್ಷಗಳಿಂದಲೂ ಕಿಂಗಫಿಷರ್ ಕಂಪನಿ ತೊಂದರೆ ಅನುಭವಿಸುತ್ತಿದ್ದರೂ, ಯಾವ ರಾಷ್ಟ್ರೀಕೃತ ಬ್ಯಾಂಕು ಕೂಡಾ ಎಚ್ಚೆತ್ತುಕೊಳ್ಳಲಿಲ್ಲ ಏಕೆ? ಹಾಗೆಂದು ನೀವು ಕೇಳಲಿಲ್ಲವೇ? ನೀವು ಎಲ್ಲ ಬ್ಯಾಂಕುಗಳ ಹಿರಿಯಣ್ಣನಲ್ಲವೇ?

ಇಷ್ಟೆಲ್ಲಾ ಗೊತ್ತಾದ ಮೇಲೂ RBI ಯಾವದಾದರೂ ಬ್ಯಾಂಕಿನ ಸಾಲಪತ್ರಗಳ, ಡಾಕ್ಯುಮೆಂಟಗಳ ತಪಾಸಣೆ (Inspection) ಕೈಕೊಂಡಿದೆಯೇ? ಕೈಕೊಂಡಿದ್ದರೆ ಸಾಲ ನೀಡಿಕೆಯಲ್ಲಿನ ಲೋಪ-ದೋಷಗಳು ಹೊರಬೀಳಲಿಲ್ಲವೇ? ಸಣ್ಣ ಸಣ್ಣ ಸಹಕಾರಿ ಬ್ಯಾಂಕುಗಳನ್ನೆಲ್ಲ ಒಂದೂವರೆ ವರ್ಷಕ್ಕೊಮ್ಮೆ ತಪಾಸಣೆ ಮಾಡುವ ನೀವು ಅಂಥ ಸಣ್ಣ ಸಹಕಾರಿ ಬ್ಯಾಂಕಿನ ಆಡಳಿತ ಮಂಡಳಿಯ ಕಾರ್ಯ ವೈಖರಿಯ ಬಗ್ಗೆ ದಿವ್ಯ ಅಸಡ್ಡೆ ಹೊಂದಿರುವುದು, ಇವರಿಗೆ ಏನೂ ಗೊತ್ತಿರುವುದಿಲ್ಲ, ಲೋಕಲ್ ಜನರಲ್ಲಿ ಇರುವ ಒಂದಿಷ್ಟು ಹೆಸರನ್ನೇ ಬಳಸಿಕೊಂಡು ಬ್ಯಾಂಕು ಪ್ರಾರಂಭಿಸಿಬಿಡುತ್ತಾರೆ ಎನ್ನುವ ಅಭಿಪ್ರಾಯಕ್ಕೆ ಜೋತು ಬಿದ್ದು ಅವರನ್ನು ತರಾಟೆಗೆ ತೆಗೆದುಕೊಳ್ಳುವುದೂ ಸುಳ್ಳೇನಲ್ಲ. ಆದರೆ ದೊಡ್ಡ ಬ್ಯಾಂಕುಗಳಲ್ಲಿನ ಅಧಿಕಾರಿಗಳು  ಮಾತ್ರ ತುಂಬ ಜಾಣರಾಗಿರುತ್ತಾರೆ ಮತ್ತು ಕಲಿತವರಿರುತ್ತಾರೆ ಎನ್ನುವ ಕಲ್ಪನೆಯಲ್ಲಿರುವುದು ಸುಳ್ಳೇ? ಅವರು ಮಹಾ ಜಾಣರಾಗಿದ್ದಾರೆ, ಆದರೆ ಪ್ರಾಮಾಣಿಕರಾಗಿಲ್ಲ, ಹಾಗಾಗಿಯೇ ಇಂಥ ಸಾಲಗಳನ್ನು ಕೊಟ್ಟು ಅದರಲ್ಲಿ ತಾವೂ ಕೋಟ್ಯಾಧೀಶರಾಗಿರುತ್ತಾರೆ.

ಬ್ಯಾಂಕುಗಳು ಎಷ್ಟೇ ದೊಡ್ಡದಾಗಿದ್ದರೂ ಗೆದ್ದಲು ಒಳಗಿನಿಂದಲೇ ಕೊರೆಯುತ್ತಿದ್ದರೆ ಮುರಿದು ಬೀಳಲು ಎಷ್ಟೊತ್ತು ಬೇಕು? ಇತ್ತಿತ್ತಲಾಗಿ RBI, SEBI, Companies Act 2013, ಮುಂತಾದವುಗಳು ವ್ಯವಹಾರದಲ್ಲಿ ಪಾರದರ್ಶಕತೆಯ (Transparency)  ಬಗ್ಗೆ ಬಹಳವೇ ಗುಲ್ಲೆಬ್ಬಿಸಿವೆ. ಆದರೆ ಇನ್ನೂವರೆಗೆ ಒಂದೇ ಒಂದು ಬ್ಯಾಂಕಿನವರಾಗಲಿ, ಅಥವಾ ರಿಸರ್ವ್ ಬ್ಯಾಂಕಾಗಲಿ ಪ್ರಮುಖ ಸುಸ್ತಿದಾರದ ಪಟ್ಟಿಯನ್ನು ಪ್ರಕಟಿಸಿಲ್ಲ. ಅಂಥ ಸಾಲಗಳಿಗೆ ಕೊಡಮಾಡಿದ ಆಸ್ತಿಗಳ ವಿವರ, ಆಸ್ತಿಗಳ ಪ್ರಸ್ತುತ ಮಾರುಕಟ್ಟೆಯ ಬೆಲೆ, ಸಾಲ ಮತ್ತು ಬಡ್ಡಿ ಸುಸ್ತಿ ಲೆಕ್ಕ ಯಾವುದನ್ನೂ ಸಾರ್ವಜನಿಕ ತಾಣಗಳಲ್ಲಿ ಹಂಚಿಕೊಂಡಿರುವುದಿಲ್ಲ. ಮತ್ತಿನ್ನೆಂಥ ಪಾರದರ್ಶಕತೆಯ ಬಗ್ಗೆ ತಾವೆಲ್ಲ ಮಾತನಾಡುತ್ತೀರಿ?

 

ಸಾಲ ಕೊಟ್ಟ ರಾಷ್ಟ್ರೀಕೃತ ಬ್ಯಾಂಕುಗಳಿಗೆ ಒಂದಿಷ್ಟು ಪ್ರಶ್ನೆಗಳು

mallya4 by p mahamudಎಲ್ಲ ಬ್ಯಾಂಕುಗಳಿಗೆ ಮಾದರಿ ಎಂದುಕೊಂಡಿರುವ ಅಗ್ರಪಂಕ್ತಿಯಲ್ಲಿರುವ ಭಾರತೀಯ ಸ್ಟೇಟ್ ಬ್ಯಾಂಕಿನ ಪ್ರತಿನಿಧಿ ಶ್ರೀಮತಿ. ಅರುಂಧತಿ. ಭಟ್ಟಾಚಾರ್ಯ ಅವರೇ, ಸಾಲಗಾರನ ವರ್ತನೆಯಿಂದ ಅವನಿಗೆ ಸಾಲ ಮರುಪಾವತಿ ಮಾಡುವ ಮನಸ್ಸು (Willingness to repay) ಇದೆಯೋ ಇಲ್ಲವೋ ಎನ್ನುವುದು
ಬ್ಯಾಂಕರುಗಳಿಗೆ ಗೊತ್ತಾಗುತ್ತದೆ. ಆದರೆ ಇದು ನಿಮ್ಮಲ್ಲಿ ಯಾರಿಗೂ ಗಮನಕ್ಕೆ ಬರಲಿಲ್ಲವೇ? ಮಲ್ಯರ ವಿಷಯದಲ್ಲಿ ವಿವಾದ ಶುರುವಾಗಿ ಎರೆಡು ಮೂರು ವರ್ಷಗಳಾಗಿವೆ, ನೀವೇನು ಕಣ್ಣು ಮುಚ್ಚಿಕೊಂಡು ಕುಳಿತಿದ್ದಿರಾ? ಇದೇ ನೀತಿಯನ್ನು ಎಲ್ಲ ಸಾಲಗಾರರ ವಿಷಯದಲ್ಲಿ ನೀವು ಅನುಸರಿಸುತ್ತೀರಾ? ಬಾಡಿಗೆಯ ವಿಮಾನಗಳು, ಉಪ್ಪಿನಕಾಯಿ ಹಾಕಿಕೊಂಡು ತಿನ್ನಲೂ ಉಪಯೋಗವಿಲ್ಲದ ಕಿಂಗಫಿಷರ್ ಪಕ್ಷಿಯ ಲೋಗೊ ಎಂಬ ಚಿತ್ರ ಇಂಥವುಗಳ ಆಧಾರದ ಮೇಲೆಲ್ಲಾ ಸಾಲ ಕೊಡಲು ಇಷ್ಟು ಕಲಿತ, ಜಾಣ ಮ್ಯಾನೇಜರುಗಳು ಬೇಕಾಗುತ್ತಾರೆಯೇ?

ಕಣ್ಣತುಂಬ ಕಾಣುವ ಹೊಲ ಮನೆಗಳನ್ನೇ ನಂಬಲು ತಯಾರಿಲ್ಲದ, ರೈತರು, ಬಡವರಿಗೆ ಸಾಲ ನೀಡಲು ತಯಾರಾಗದ ನೀವೆಲ್ಲಾ ಮಲ್ಯರಂಥ ಮೋಸಗಾರರಿಗೆ ಅದೆಷ್ಟು ಸುಲಭವಾಗಿ ಬಲಿ ಬೀಳುತ್ತೀರಿ ಎಂದು ವಿಚಾರ ಮಾಡಿದರೆ ಕಲಿತ ತಜ್ಞರು ಮತ್ತು ಕಲಿಯದ ಸಾಮಾನ್ಯರ ಮಧ್ಯೆ ಅಂಥ ವ್ಯತ್ಯಾಸವೇನೂ ಕಾಣಿಸುವುದಿಲ್ಲ ನನಗೆ. ಆದರೆ ಎಲ್ಲ ಗೊತ್ತಿದ್ದೂ ನೀವೆಲ್ಲ ಇಂಥ ಸಾಲಗಳನ್ನು ಮುಳುಗಿ ಹೋಗಲೆಂದೇ ಕೊಟ್ಟಿದ್ದರೆ, ಕ್ಷಮಿಸಿ, ಕಲಿಯದ ಮೂರ್ಖರು ಇಷ್ಟು ದೊಡ್ಡ ಬಲೆಯನ್ನು ನೇಯಲಾರರು, ಮತ್ತು ದೇಶದ  ಇಡೀ ಬ್ಯಾಂಕಿಂಗ್ ವ್ಯವಸ್ಥೆಯನ್ನೇ ಬುಡಮೇಲು ಮಾಡಲಾರರು. ಅಂಥ ಪ್ರಳಯಾಂತಕ ಐಡಿಯಾಗಳು ಅವರಿಗೆ ಬರುವುದಾದರೂ ಹೇಗೆ?

ನಿಮ್ಮಂಥ ದೊಡ್ಡ ಬ್ಯಾಂಕುಗಳಿಗೆ ರೂ. ೯,೦೦೦ ಕೋಟಿ ಏನೇನೂ ಅಲ್ಲವೆನ್ನುವುದು ನಮಗೂ ಗೊತ್ತಿದೆ. ಹಾಗಾಗಿ ಈ ಮಾರ್ಚ್ ಅಂತ್ಯದ ವೇಳೆಗೆ ನೀವೆಲ್ಲ ಮಲ್ಯರ ಸಾಲವನ್ನು ಹೊಡೆದುಹಾಕುವ (Write off) ಯೋಜನೆಯನ್ನು ಹಾಕಿಕೊಂಡಿರಬಹುದು, cleaning and trimming of Balance Sheet ಎನ್ನುವ ನೆಪದಲ್ಲಿ. ಈಗಾಗಲೇ ನೀವೆಲ್ಲ ಸೇರಿ ಕೇವಲ ಮೂರು ವರ್ಷದ ಅವಧಿಯಲ್ಲಿ ರೂ. ೧.೧೪ ಲಕ್ಷ ಕೋಟಿಗಳಷ್ಟು ಮುದ್ದತ ಮೀರಿದ ಸಾಲವನ್ನು ಹೀಗೆ ಹೊಡೆದುಹಾಕಿದ ಸುದ್ದಿ ಈಗಷ್ಟೇ ಎಲ್ಲ ನಾಗರಿಕರಿಗೆ ಗೊತ್ತಾಗಿದೆ. ಆದರೂ ನೀವೆಲ್ಲ International Standards, Transparency ಮುಂತಾದ ದೊಡ್ಡ ದೊಡ್ಡ ಶಬ್ದಗಳ ಜಾಲವನ್ನು ಹೆಣೆದು ಮರಳು ಮಾಡುವುದನ್ನು ಬಿಟ್ಟಿಲ್ಲ, ಯಾಕೆ?

 

ಕೇಂದ್ರ ಸರಕಾರಕ್ಕೊಂದಿಷ್ಟು ಪ್ರಶ್ನೆಗಳು 

ಇಡೀ ಸರಕಾರವನ್ನು ಇಡಿಇಡಿಯಾಗಿ ನೀವೇ ನೀವಾಗಿ ಆವರಿಸಿಕೊಂಡಿರುವ ಪ್ರಧಾನಿ ಮೋದಿಜಿಯವರೇ, ತಾವು ಸ್ವಿಸ್ ಬ್ಯಾಂಕಿನಲ್ಲಿರುವ ಹಣವನ್ನು ವಾಪಸ್ ತರುವ ಬಗ್ಗೆ ನಮಗೇನೂ ಭಾರಿ ಭರವಸೆ ಇಲ್ಲ. ಆದರೆ ಸಧ್ಯ ಇಲ್ಲಿರುವ ಹಣವಾದರೂ  ಮತ್ತೆ ಮತ್ತೆ ಹೊಸದಾಗಿ ಬೇರೆ ದೇಶಗಳಿಗೆ ಹರಿದುಹೋಗದಂತೆ mallya5 by p mahamudಬಂದೋಬಸ್ತು ಮಾಡಿದ್ದರೂ ಸಾಕಾಗಿತ್ತು. ಆದರೆ ಇದೇನು ನಡೆಯುತ್ತಿದೆ? ರಾತ್ರೋ ರಾತ್ರಿ ದೊಡ್ಡ ಮಟ್ಟದ ಉದ್ಯಮಿಯೊಬ್ಬ ದೇಶವನ್ನೇ ತೊರೆದು ಓಡಿ ಹೋದರೂ ಸರಕಾರಕ್ಕೆ ಎಂಟು ದಿನಗಳಾದರೂ ಸುದ್ದಿ ಮುಟ್ಟಿರುವುದಿಲ್ಲ. ತಮ್ಮ ಸರಕಾರದ ಭದ್ರತಾ ವ್ಯವಸ್ಥೆಯ ಬಗ್ಗೆ ಏನು ಅಭಿಪ್ರಾಯ ತಳೆಯಬೇಕು ನಮ್ಮಂಥ ಸಾಮಾನ್ಯ ನಾಗರಿಕರು? ಸಿ.ಬಿ.ಐ. ಹತ್ತಿರ ಎಂಥೆಂಥ ಗುಟ್ಟುಗಳೆಲ್ಲಾ ಬಯಲಾಗುತ್ತವೆ. ಅಂಥದರಲ್ಲಿ ಮಲ್ಯ ಹೊರಟು ಹೋಗುವ ಸುದ್ದಿ ಅವರಿಗೆ ಗೊತ್ತಾಗಲಿಲ್ಲವೆಂದರೆ ನಾವೆಲ್ಲ ನಂಬಬೇಕೆ?

ಈ ಎಲ್ಲ ವಿದ್ಯಮಾನಗಳಿಂದಾಗಿ ಸಾಮಾನ್ಯರಿಗೆ ಬ್ಯಾಂಕುಗಳ ಮೇಲಿನ ನಂಬಿಕೆ, ರಿಸರ್ವ್ ಬ್ಯಾಂಕಿನ ಮೇಲಿನ ಗೌರವ ಮತ್ತು ಬಿಜೆಪಿ ಸರಕಾರದ ಮೇಲಿನ ಪ್ರೀತಿ ಹಾರಿ ಹೋಗುವುದಂತೂ ದಿಟ. ಇನ್ನೂ ಇಂಥ ಎಷ್ಟು ಮಲ್ಯರು ಈ ದೇಶದ ಸಂಪತ್ತನ್ನು ಲೂಟಿ ಮಾಡಿದ್ದಾರೋ, ಮಾಡುತ್ತಿದ್ದಾರೋ, ಇದರಲ್ಲಿ ಯಾರ್ಯಾರು ಶಾಮೀಲಾಗಿದ್ದಾರೋ ಎನ್ನುವ ಸಂಶಯ ಎಲ್ಲರಿಗೂ ಬಂದಿದೆ. ಅಷ್ಟೇ ಅಲ್ಲ ಸೂಟು ಬೂಟು ಹಾಕಿಕೊಂಡು ಬಂದು ಹಕ್ಕಿನಿಂದ ಸಾಲ ಕೇಳುವವರಿಗೆ ನಗುನಗುತ್ತ ಸಾಲ ಕೊಟ್ಟು ಕಳಿಸಿ, ವಾಪಸು ಕೇಳಲೂ ಹಿಂಜರಿಯುವ ಬ್ಯಾಂಕಿನವರು ಬಡವರನ್ನು, ರೈತರನ್ನು, ನಿಜವಾಗಿಯೂ ಅವಶ್ಯಕತೆ ಇರುವವರನ್ನು ಕಂಡರೆ ಕೆಂಡ ಕಾರುವುದೇಕೆ?

ಅವರ ಹತ್ತು, ಇಪ್ಪತ್ತು, ಐವತ್ತು ಸಾವಿರ ರೂಪಾಯಿ ಸಾಲಗಳಿಗಾಗಿ ಅವರ ಜೀವ ಹಿಂಡುವ, ಇಂಥ ಸಾಲಗಳಿಂದಾಗಿಯೇ ಬ್ಯಾಂಕುಗಳಿಗೆ ಅನುತ್ಪಾದಕ ಆಸ್ತಿಯ ಭಾರ ಹೆಚ್ಚಾಗಿದೆಯೆಂದು ಸುಳ್ಳು ಹೇಳಿ ಎಲ್ಲರನ್ನೂ ನಂಬಿಸುತ್ತ ಬಂದ ನಿಮ್ಮ ಸಾಲದ ಪೋರ್ಟ್ ಫೋಲಿಯೋಗಳಲ್ಲಿ ಇನ್ನೂ ಎಷ್ಟು ದೊಡ್ಡ ದೊಡ್ಡ ಜನ, ದೊಡ್ಡ ದೊಡ್ಡ ಕಂಪನಿಗಳ ಕರ್ಮಕಾಂಡಗಳು ಅಡಗಿ ಕುಳಿತಿವೆಯೋ, ಯಾವತ್ತು ಒಮ್ಮಿಂದೊಂಮ್ಮಿಲೇ ಧುತ್ತೆಂದು ಹೊರಬಂದು ಈ ದೇಶವನ್ನು , ಈ ದೇಶದ ಬ್ಯಾಂಕಿಂಗ್ ವ್ಯವಸ್ಥೆಯನ್ನು ಹಳ್ಳ ಹಿಡಿಸುತ್ತವೆಯೋ, ಕಷ್ಟ ಪಟ್ಟು ದುಡಿದು ಸಂಪಾದಿಸಿ, ಖರ್ಚು ಮಾಡಲು ಚೌಕಾಶಿ ಮಾಡಿ, ಮುಂದೆ ಮುದಿತನಕ್ಕಿರಲೆಂದು ದುಡ್ಡಿಗೆ ದುಡ್ಡು ಕೂಡಿಸಿ, ಉಳಿತಾಯ ಮಾಡಿ ಬ್ಯಾಂಕಿನಲ್ಲಿಟ್ಟ ಹಣ ಯಾವತ್ತು ದಿವಾಳಿಯಾಗಿ ಮಾಯವಾಗುತ್ತದೆಯೋ  ಆ ದೇವರೇ ಉತ್ತರಿಸಬೇಕು. ಅಲ್ಲಿಯವರೆಗೆ ಬಡ ಭಾರತೀಯ ಇಡೀ ವ್ಯವಸ್ಥೆಯ ಮೇಲೆಯೇ ನಂಬಿಕೆ ಕಳೆದುಕೊಳ್ಳಬಾರದು.

‍ಲೇಖಕರು admin

March 18, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. nandinarasimha

    ಸೂಟು ಬೂಟು ಹಾಕಿಕೊಂಡು ಬಂದು ಹಕ್ಕಿನಿಂದ ಸಾಲ ಕೇಳುವವರಿಗೆ ನಗುನಗುತ್ತ ಸಾಲ ಕೊಟ್ಟು ಕಳಿಸಿ, ವಾಪಸು ಕೇಳಲೂ ಹಿಂಜರಿಯುವ ಬ್ಯಾಂಕಿನವರು ಬಡವರನ್ನು, ರೈತರನ್ನು, ನಿಜವಾಗಿಯೂ ಅವಶ್ಯಕತೆ ಇರುವವರನ್ನು ಕಂಡರೆ ಕೆಂಡ ಕಾರುವುದೇಕೆ? right

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: