ನಂಜನಗೂಡು ಅನ್ನಪೂರ್ಣ
ಅರಮನೆಯಲ್ಲ ನಮ್ಮದು
ತಿಳಿದಿದೆ ನನಗೆ
ಆದರೂ ನನ್ನ ಹಾಡು
ಪಾಡಿಗೆ ಬೇಕಿದೆ
ನನಗೊಂದು ಕೋಣೆ
ಇದ್ದ ಮನೆ ಚಿಕ್ಕದು ಸರಿ
ಹೊಸದರಲ್ಲಿ ಕೇಳುವೆನು
ನನಗೊಂದು ಕೋಣೆ ಬೇಕು
ನನ್ನೆತ್ತರದ ಕಿಟಕಿ
ಅಗಲವಾದ ಬಾಗಿಲು
ಸುತ್ತೆಲ್ಲ ಬಿಳಿಗೋಡೆ
ಮೇಲೆ ತೂಗಬೇಕು
ಹಸಿರು ಬಳ್ಳಿಯ
ಉಸಿರ ಮಾಡು.,

ಗಾಳಿ ಬೆಳಕು ನಕ್ಷತ್ರ ತೂಗಬೇಕು
ಬೀಗ ಹಾಕಬೇಕು, ಬೇಕೆಂದಾಗ.
ಮೊದಲು ಕೀಲಿ ನನ್ನದಾಗಬೇಕು.
ನನ್ನ ಏಕಾಂತಕ್ಕೆ ಜಗವು ಸರಿಯಬೇಕು
ನನ್ನ ನೂರಾರು ಪ್ರಶ್ನೆಗೆ ಉತ್ತರ ಹುಡುಕಬೇಕು
ಹೊಸ ಕನಸುಗಳ ಮಾಲೆ ಹೆಣೆಯಬೇಕು.,
ನೀನಿದ್ದ ಹೊಗೆ ಗೂಡಿನ ಗುರುತುಳಿಯದಂತೆ
ಮಸಿಯ ಪಾತ್ರೆಗಳ ಸದ್ದೊಂದೂ ಸುಳಿಯದಂತೆ
ನನಗೊಂದು ಕೋಣೆಬೇಕು. ಅಮ್ಮನ ಹಳೆಸೀರೆ
ಜಾಗದಲೆನ್ನ ಹೊತ್ತಿಗೆಯ ಭದ್ರ ಇರಿಸಬೇಕು.
ಕತ್ತಲ ಉತ್ತರವೀಗ
ಬಯಲ ಬೆಳಕಿಗೆ ಬೆನ್ನು
ತಿರುಗಿಸುವ ರೋಗ.
ಹೊಸಮನೆಯಲ್ಲೂ
ನನ್ನ ಕೋಣೆ ಜೀವಂತ
ಕನಸಾದಾಗ., ಆಗೊಮ್ಮೆ-ಈಗೊಮ್ಮೆ
ವ್ಯರ್ಥ ಆವೇಗ.,
ಸಿಗದು ನನ್ನ ಕನಸಿನ ಕೋಣೆ
ಬರಿಯ ಸಮಾದಾನದ ಮಾತುಗಳು
ಮತ್ತಷ್ಟು ಪ್ರಶ್ನೆ.,!
ನಿನ್ನೊಬ್ಬಳಿಗೆ ಕೋಣೆ ಏಕೆ ಬೇಕು?
ಕೋಣೆಕೊಡಲು ಮದುವೆಯಾಗಬೇಕೇ.,?
ಕಾವಲುಗಾರನಿಲ್ಲದೆ ಒಳಗೆ
ಕೋಣೆ ಇಲ್ಲವೇನು ನನಗೆ.,?
ನಾನಡೆವೆ ಮನೆ ಗೋಡೆ
ಹಂದರದ ಹೊರಗೆ.,!






ನಂಗೂ ಬೇಕು